ಅನುಭವಕ್ಕೆ ಮುಖಾಮುಖಿಯಾಗಿಸುವ ವಿಶೇಷ ಪುಸ್ತಕ
– ಡಂಕಿನ್ ಝಳಕಿ, ಸಂಶೋಧಕರು.
ಶಿವಕುಮಾರ, ಸಂಶೋಧನಾ ವಿದ್ಯಾರ್ಥಿ.
‘ಗ್ರಾಮೀಣ ಭಾರತದ ಸಾಮಾನ್ಯ ಜಗತ್ತಿನಲ್ಲಿ ಅನುಭವದೊಂದಿಗೆ ರೂಪತಾಳಿದ ಅಪರೂಪದ ಕೃತಿ’ : ನಮಗೆ ನಾವೇ ಪರಕೀಯರು
ಇತ್ತೀಚೆಗೆ ಕರ್ನಾಟಕದಲ್ಲಿ ಎಸ್.ಎನ್. ಬಾಲಗಂಗಾಧರರ (ಬಾಲುರವರ) ವಿಚಾರಧಾರೆಯು ಒಂದು ಸಂಶೋಧನಾ ಸಂಪ್ರದಾಯವಾಗಿ, ಒಂದು ಚಳುವಳಿಯಾಗಿ ಬೆಳೆಯುತ್ತಿರುವುದು ನಮಗೆ ತಿಳಿಯದ ಹೊಸ ವಿಚಾರವೇನಲ್ಲ. 2002ರಲ್ಲಿ ವಚನಗಳ ಕುರಿತ ಒಂದು ಕಾರ್ಯಾಗಾರವಾಗಿ ಕರ್ನಾಟಕಕ್ಕೆ ಕಾಲಿಟ್ಟ ಈ ವಿಚಾರಧಾರೆ ಕೇವಲ ಹತ್ತು ವರ್ಷಗಳಲ್ಲಿ ಎರಡು ಸಂಶೋಧನಾ ಸಂಸ್ಥೆಗಳಾಗಿ, ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಾಗಿ ಬೆಳೆದು ನಿಂತಿದೆ. ಈ ವಿಚಾರಧಾರೆಯನ್ನು ಕನ್ನಡಕ್ಕೆ ಪರಿಚಯಿಸುವ ಹಲವು ಕೃತಿಗಳೂ ಈಗಾಗಲೇ ಪ್ರಕಟವಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿರುವ ರಮಾನಂದ ಐನಕೈಯವರÀ ನಮಗೆ ನಾವೇ ಪರಕೀಯರು (2012) ಈ ಸಾಲಿಗೆ ಸೇರುವ ಒಂದು ವಿಶೇಷ ಕೃತಿ.
ಈ ಕೃತಿಯನ್ನು ಎರಡು ಪ್ರಮುಖ ಕಾರಣಗಳಿಗಾಗಿ ವಿಶೇಷ ಕೃತಿಯೆನ್ನಬಹುದು. ಇದುವರೆಗೂ ಬಾಲುರವರ ವಿಚಾರಧಾರೆಯ ಕುರಿತು ಪುಸ್ತಕರೂಪದಲ್ಲಿ ಬಂದ ಕೃತಿಗಳೆಲ್ಲಾ ಬಾಲಗಂಗಾಧರರ ಆಂಗ್ಲ ಕೃತಿಗಳ ಕನ್ನಡ ಅವತರಣಿಕೆಗಳೇ. ಈ ಕೃತಿ ಅವರ ವಿಚಾರಗಳನ್ನಿಟ್ಟುಕೊಂಡು ಕನ್ನಡದಲ್ಲಿ ಬಂದ ಮೊದಲ ಸ್ವತಂತ್ರ ಕೃತಿ. ಇದು ಈ ಕೃತಿಯ ಮೊದಲನೆಯ ವಿಶೇಷತೆ. ಇದರ ಎರಡನೆಯ ವಿಶೇಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಪ್ರದಾಯ ಮತ್ತು ಚಳುವಳಿಗಳ ಕುರಿತು ಒಂದು ವಿಚಾರವನ್ನು ನಾವು ಮನಗಾಣಬೇಕು. ಸಂಪ್ರದಾಯ ಮತ್ತು ಚಳುವಳಿಗಳ ಯಶಸ್ಸು ಅದು ಹುಟ್ಟುಹಾಕುವ ಅನುಯಾಯಿಗಳ ಸಂಖ್ಯೆ ಮತ್ತು ಪ್ರಕಟಿಸುವ ಕೃತಿಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ. ಉದಾಹರಣೆಗೆ ವಚನ ಸಂಪ್ರದಾಯದ ಮತ್ತು ಚಳುವಳಿಯ ಯಶಸ್ಸು ಅದು ಹುಟ್ಟುಹಾಕಿದ (ಇಂದು ನಮಗೆ ತಿಳಿದಿರುವ ಅಂಕಿಸಂಖೆಗಳ ಆಧಾರದ ಮೇಲೆ ಹೇಳುವುದಾದರೆ) ಸುಮಾರು 200 ವಚನಕಾರರ ಮತ್ತು 21500 ವಚನಗಳ ಆಧಾರದ ಮೇಲೆ ನಾವು ಅಳೆಯುವುದಿಲ್ಲ್ಲ. ಒಂದು ಸಂಪ್ರದಾಯ, ಅನುಭವಗಳ ಕುರಿತು ಚಿಂತಿಸುವ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕಬೇಕು. ಆದರೆ ಎರಡು ವಸಾಹತುಶಾಹಿಗಳ ಬಳಿಕ, 21ನೇ ಶತಮಾನದಲ್ಲಿ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕುವ ಮೊದಲು, ಒಂದು ಸಂಸ್ಕøತಿಯಾಗಿ ನಾವು (ಭಾರತೀಯರು) ಮರೆತಿರುವ ನಮ್ಮ ಅನುಭವಗಳನ್ನು ಕುರಿತು ಚಿಂತಿಸುವ ಪ್ರಕ್ರಿಯೆಯನ್ನೇ ಮತ್ತೊಮ್ಮೆ ಪುನರುಜ್ಜೀವನಗೊಳಿಸಬೇಕಾಗುತ್ತದೆ. ಇದು ಬಾಲುರವರ ಸಂಶೋಧನೆಯ ಪ್ರಮುಖ ಉದ್ದೇಶ. ಈ ಪ್ರಕ್ರಿಯೆಯನ್ನು ಅವರು ಪ್ರತ್ಯಭಿಜ್ಞಾನ ಎಂದು ಕರೆಯುತ್ತಾರೆ. ಒಂದು ಸಂಸ್ಕøತಿಯಾಗಿ ನಾವು ಕಲಿತು ಮರೆತಿರುವ ‘ಅನುಭವಗಳನ್ನು ಕುರಿತು ಚಿಂತಿಸುವ’ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವ ಈ ಪ್ರಕ್ರಿಯೆ ಒಂದು ಅಕಾಡೆಮಿಕ್ ಯೋಜನೆಯಷ್ಟೇ ಅಲ್ಲ, ಇದೊಂದು ಸಾಂಸ್ಕøತಿಕ ಚಳುವಳಿ ಕೂಡ. ಅಂದರೆ ಇದು ಎಲ್ಲಿ ಮತ್ತು ಹೇಗೆ ಆರಂಭವಾದರೂ ಸರಿ, ಅಂತಿಮವಾಗಿ ತನ್ನ ನಿತ್ಯದ ಸಾಮಾಜಿಕ ಜೀವನವನ್ನು ಇನ್ನಷ್ಟು ಅರ್ಥವತ್ತಾಗಿ ಬಾಳಲು ಇದರಿಂದ ಪ್ರತಿಯೋರ್ವನಿಗೂ ಸಹಾಯವಾಗಬೇಕು. ಪ್ರಸ್ತುತ ಕೃತಿ ಅಂತಹ ಪ್ರಕ್ರಿಯೆಗೆ ಒಂದು ಅತ್ಯುತ್ತಮ ಉದಾಹರಣೆ. ಅಷ್ಟೇ ಅಲ್ಲ ಅಂತಹ ಪ್ರಕ್ರಿಯೆಗೆ ಪ್ರೇರಣೆಯನ್ನೂ ನೀಡುತ್ತದೆ ಎನ್ನುವುದು ಈ ಕೃತಿಯ ಎರಡನೇ ಮತ್ತು ಅತ್ಯಂತ ಪ್ರಮುಖವಾದ ವಿಶೇಷತೆ.
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.
, ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)
೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)
೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)





