ವಿಷಯದ ವಿವರಗಳಿಗೆ ದಾಟಿರಿ

Posts tagged ‘ಲೇಖನಗಳು’

18
ಜೂನ್

ಬರಹಗಾರನ ತಲ್ಲಣಗಳು

gururaj kodkani

ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ – ದಿನಕರ ದೇಸಾಯಿ

ತೀರ ಬೇಸರ, ಅವಮಾನದ ಸಂದರ್ಭ, ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ. ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಮತ್ತಷ್ಟು ಓದು »

10
ಜನ

ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!

-ಬಿ.ಆರ್. ಸತ್ಯನಾರಾಯಣ್

“ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!”

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಮತ್ತಷ್ಟು ಓದು »

20
ಆಗಸ್ಟ್

ಸಂಸ್ಕೃತಿ ಸಂಕಥನ – ೫

– ರಮಾನಂದ ಐನಕೈ

ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.

ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.

ಮತ್ತಷ್ಟು ಓದು »