ನಾವು, ನಮ್ಮ ಹರಕೆ, ನಮ್ಮ ಸೇವೆ!
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ದಿನಾಂಕ 19-04-2015 ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಮಾದಪ್ಪನ ಸನ್ನಿಧಿಯಲ್ಲಿ ಸಣ್ಣ ಸ್ವಚ್ಛಭಾರತ್” ಲೇಖನ ಪ್ರಕಟವಾಯಿತು. ಇದರಲ್ಲಿ ಜಾಗದ ಮಿತಿಯಿಂದಲೋ ಸೈದ್ಧಾಂತಿಕ ಮಿತಿಯಿಂದಲೋ ಲೇಖನದ ಬಹುತೇಕ ಭಾಗಗಳಿಗೆ ಕತ್ತರಿ ಪ್ರಯೋಗವಾಗಿತ್ತು. ಅದರ ಪೂರ್ಣಪಾಠ ಇಲ್ಲಿದೆ.
ಮಲೆ ಮಹದೇಶ್ವರ ಬೆಟ್ಟ. ಬೆಳಿಗ್ಗೆ ಆರು ಗಂಟೆಯ ಸಮಯ. ದೇವಾಲಯದ ಮುಂಭಾಗ ರಾತ್ರಿ ಬಂದ ಯಾತ್ರಿಗಳು ಅನುದ್ದೇಶಪೂರ್ವಕ ಚೆಲ್ಲಿದ ಕಸಕಡ್ಡಿಗಳು ಅಲ್ಲಲ್ಲಿ ಹರಡಿದ್ದವು. ಹರಕೆ ತೀರಿಸಲು ಬಂದ ಭಕ್ತಾದಿಗಳಿಂದ ಬಗೆಬಗೆಯ ಆಚರಣೆಗಳು ಸುತ್ತಲೂ ನಡೆಯುತ್ತಿದ್ದವು. ಮುಖ್ಯ ದೇಗುಲದ ಮುಂಭಾಗದಲ್ಲಿರುವ ಕಲ್ಯಾಣಿ ಪಕ್ಕದ ಜಡೆ ಮಾದೇಶ್ವರ ಗುಡಿಯ ಮುಂದೆ ಹತ್ತಾರು ಹೆಂಗಸರು ಮಕ್ಕಳು ಸೇರಿಕೊಂಡಿದ್ದರು. ಒಬ್ಬ ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದಂತೆ ಸುತ್ತ ನೆರೆದಿದ್ದವರು ಒಕ್ಕೊರಲಲ್ಲಿ “ಉಘೇ ಉಘೇ” ಅನ್ನುತ್ತಿದ್ದರು. ಗುಡಿಯ ಮುಂದೆ ಕತ್ತೆಯೊಂದು ತರಬೇತಿ ನೀಡಿದ್ದಾರೇನೋ ಎಂಬಂತೆ ಸ್ತಬ್ದವಾಗಿ ನಿಂತಿತ್ತು. ಕೆಲವು ಹೆಂಗಸರು ಅದರ ಕಾಲು ತೊಳೆದರು. ಮತ್ತೆ ಕೆಲವರು ಅದಕ್ಕೆ ಮಲ್ಲಿಗೆ ಹಾರ ತೊಡಿಸಿದರು. ಮತ್ತೆ ಹಲವರು ಅರಿಶಿಣ ಕುಂಕುಮ ಹಾಕಿ ಅದರ ಕಾಲಿಗೆ ಅಡ್ಡ ಬಿದ್ದರು. ಇನ್ನು ಕೆಲವರು ಆರತಿ ಬೆಳಗಿದರು.
ಕತ್ತೆಯ ಪಕ್ಕದಲ್ಲಿ ಹೊಚ್ಚ ಹೊಸ ತೆಂಗಿನ ಗರಿಯಿಂದ ತಯಾರಿಸಿದ ಒಂದಿಷ್ಟು ಪೊರಕೆಗಳನ್ನು ಸಾಲಾಗಿ ಜೋಡಿಸಿದ್ದರು. ಈ ಪೊರಕೆಗಳಿಗೆ ಅರಿಶಿನ ಕುಂಕುಮ ಹಾಕಿ, ಹೂವು ಏರಿಸಿ ಎಲ್ಲರೂ ಕೈ ಮುಗಿದರು. ಒಬ್ಬೊಬ್ಬರೂ ಒಂದೊಂದು ಪೊರಕೆಯನ್ನು ಕೈಗೆತ್ತಿಕೊಂಡರು. ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದ. ಉಳಿದವರು “ಉಘೇ ಉಘೇ” ಅನ್ನುತ್ತ ಸುತ್ತಲ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛಮಾಡತೊಡಗಿದರು. ಅರ್ಧಗಂಟೆಯಲ್ಲಿ ಸುತ್ತಲ ಪರಿಸರ ತೊಳೆದಿಟ್ಟಂತೆ ಕಂಗೊಳಿಸತೊಡಗಿತು.
ಪ್ರತ್ಯೇಕ ಪಂಕ್ತಿ ಭೋಜನ : “ಸಂಪ್ರದಾಯ”ದ ಮುಸುಕಿನ “ಅನಾಗರೀಕ” ವರ್ತನೆಯ ಸುತ್ತ
– ರಾಕೇಶ್ ಶೆಟ್ಟಿ
ಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು ‘ಪ್ರತ್ಯೇಕ ಪಂಕ್ತಿ ಭೋಜನ’ದ ಕಾರಣಕ್ಕೆ.
ಏನಿದು ಮತ್ತೆ ಈ ವಿವಾದ ಅಂತ ನೋಡಲಿಕ್ಕೆ ಹೋದರೆ : ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.
“ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ “
ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ “ಅನಾಗರೀಕ”ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.
ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ / ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ,ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ.
–*–*–*–
ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು
-ಮು.ಅ ಶ್ರೀರಂಗ,ಬೆಂಗಳೂರು
ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ ಯಜಮಾನನ ತಂದೆಯದೋ ತಾಯಿಯದೋ ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು. ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು 




