ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…
– ಮಹೇಶ್ ಪ್ರಸಾದ್ ನೀರ್ಕಜೆ
ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.
ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.





