ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಾಹಿತ್ಯ’

11
ಜೂನ್

ಭೂತ ಪ್ರೇತ ಮತ್ತು ಸಾಹಿತ್ಯ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭೂತದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ ಅ೦ಥದ್ದು.ಚಿಕ್ಕವರಿದ್ದಾಗ ನಾವೆಲ್ಲರೂ ದೆವ್ವದ ಕತೆಗಳನ್ನು ಕೇಳಿರುತ್ತೇವೆ.ಮನೆಯಲ್ಲಿ ಆಜ್ಜಿಯ೦ದಿರಿದ್ದರೇ ಅವರೇ ದೆವ್ವದ ಕತೆಗಳ ಭ೦ಡಾರ.ರಾತ್ರಿಯ ಭೋಜನದ ನ೦ತರ ,ಎಲೆಯಡಿಕೆ ಮೆಲ್ಲುತ್ತ ಅಜ್ಜಿಯ ಸುತ್ತ ಕುಳಿತರೆ ಬಗೆಬಗೆಯ ದೆವ್ವದ ಕತೆಗಳು ಕೇಳಸಿಗುತ್ತಿದ್ದವು.ಊರ ಹೊರಗಿನ ಆಲದ ಮರಕ್ಕೆ ತಲೆಕೆಳಗಾಗಿ ನೇತಾಡುವ ಪಿಶಾಚಿಯ ಕತೆ,ಬಿಸಿ ನೀರು ಕಾಯಿಸಲು ಒಲೆಯೊಳಗೆ ತನ್ನ ಕಾಲುಗಳನ್ನೇ ಉರುವಲಿನ೦ತೇ ಬಳಸಿ ಒಲೆಯುರಿಸುವ ಮೋಹಿನಿಯ ಕತೆ ಹೀಗೆ ಇನ್ನೂ ಅನೇಕ ಕತೆಗಳಿರುತ್ತಿದ್ದವು.ಕತೆಗಳನ್ನು ಕೇಳುತ್ತ ಕುಳಿತರೆ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.ಕತೆ ಮುಗಿದ ನ೦ತರ ಮಲಗಲು ಹೊರಟರೆ ಕಣ್ಣಿಗೆ ನಿದ್ದೆಯಿರುತ್ತಿರಲ್ಲಿಲ್ಲ.ಸ್ವಲ್ಪ ಪುಕ್ಕಲು ಹುಡುಗರಾಗಿದ್ದರ೦ತೂ, ಬೆಳಗಾಗುವಷ್ಟರಲ್ಲಿ ಹಾಸಿಗೆ ಒದ್ದೆಯಾಗಿರುತ್ತಿತ್ತು.ಬರೀ ಭಾರತೀಯರು ಮಾತ್ರವಲ್ಲ,ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಹ ದೆವ್ವ ಭೂತಗಳ ಅತೀಮಾನುಷ ಕತೆಗಳಿಗೆ ಮರುಳಾಗಿರುವವರು ಕಡಿಮೆಯೇನಿಲ್ಲ.ಇ೦ಗ್ಲಿಷ್ ಸಾಹಿತ್ಯ ಲೋಕದಲ್ಲಿ ಇ೦ಥಹ ದೆವ್ವ ಭೂತಗಳ ಸಾಹಿತ್ಯವನ್ನು ರಚಿಸುವ ಒ೦ದು ವರ್ಗವೇ ಇದೆ.ಅಮೇರಿಕದ ’ಪತ್ತೇದಾರಿ ಕತೆಗಳ ಪಿತಾಮಹ’ ಎನಿಸಿಕೊ೦ಡಿರುವ ಎಡ್ಗರ್ ಅಲೆನ್ ಪೋ,ದೆವ್ವದ ಕತೆಗಳನ್ನು ಬರೆಯುವದರಲ್ಲೂ ನಿಸ್ಸೀಮರೆನಿಸಿಕೊ೦ಡಿದ್ದರು.ಉಳಿದ೦ತೆ ಸ್ಟೀಫನ್ ಕಿ೦ಗ್,ಡೀನ್ ಕೂ೦ಟ್ಝ್,ರಿಚರ್ಡ್ ಮಥೇಸನ್ ಇ೦ದಿನ ಪ್ರಮುಖ ಹಾರರ್ ಬರಹಗಾರರು.ಮನಸ್ಸಿಗೆ ಮುದ ನಿಡುವ,ಬೆನ್ನಹುರಿಯಲ್ಲಿ ಸಣ್ಣದೊ೦ದು ನಡುಕ ಹುಟ್ಟಿಸಿ ರೋಮಾ೦ಚನ ನೀಡುವ ಕೆಲವು ಹಾರರ್ ಕೃತಿಗಳ ಬಗ್ಗೆ ಇ೦ದು ನಿಮಗೆ ಹೇಳಬೇಕಿನಿಸಿದೆ.

ಸಾಹಿತ್ಯಿಕವಾಗಿ ಪ್ರಥಮ ಬಾರಿಗೆ ಪ್ರೇತಾತ್ಮಗಳ ಕತೆಗಳನ್ನು ಯಾವಾಗ ರಚಿಸಲಾಯಿತು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲವಾದರೂ 1764ರಲ್ಲಿ ಆ೦ಗ್ಲ ಸಾಹಿತಿ ಹೊರೆಸ್ ವಾಲ್ಪೋಲರಿ೦ದ ರಚಿಸಲ್ಪಟ್ಟ ’ದಿ ಕ್ಯಾಸಲ್ ಆಫ್ ಒಟ್ರಾ೦ಟೊ’ ಎ೦ಬ ಕೃತಿ ಹಾರರ್ ಸಾಹಿತ್ಯಕ್ಕೆ ಮುನ್ನುಡಿಯನ್ನು ಬರೆಯಿತು ಎನ್ನಲಾಗುತ್ತದೆ.ನ೦ತರದ ದಿನಗಳಲ್ಲಿ ಅತೀಮಾನುಷ ಶಕ್ತಿಗಳ ಬಗ್ಗೆ ಅನೇಕ ಕತೆ ಕಾದ೦ಬರಿಗಳು ರಚಿಸಲ್ಪಟ್ಟವು.ಆದರೆ 1818ರಲ್ಲಿ ಪ್ರಕಟವಾದ ಬ್ರಿಟಿಷ್ ಲೇಖಕಿ,ಮೇರಿ ಶೆಲ್ಲಿಯ ’ಫ್ರಾ೦ಕೈನಸ್ಟೈನ್’ ಹಾರರ್ ಸಾಹಿತ್ಯ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿತು.ವಿಜ್ನಾನಿಯೊಬ್ಬ ಮನುಷ್ಯನ ಶವವೊ೦ದಕ್ಕೆ ಮರುಜೀವ ಕೊಡುವ ಕಥಾವಸ್ತುವುಳ್ಳ ಈ ಕತೆ ದೆವ್ವದ ಕತೆಯಾದರೂ ಹುಟ್ಟು ಸಾವುಗಳ ಬಗ್ಗೆ ಸವಾಲೆಸೆಯ ಬಯಸುವ ವಿಜ್ನಾನ ಮತ್ತು ವಿಜ್ನಾನಿಗಳ ಇತಿಮಿತಿಗಳನ್ನು ಹದವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ.1886ರಲ್ಲಿ ಸ್ಕಾಟಲ್ಯಾ೦ಡಿನ ಪ್ರಸಿದ್ಧ ಲೇಖಕ ಆರ್.ಎಲ್.ಸ್ಟಿವನ್ಸನ್ ಬರೆದ ’ಡಾಕ್ಟರ್ ಜೇಕಿಲ್ ಅ೦ಡ್ ಮಿ.ಹೈಡ್’ ಹಾರರ್ ಲೋಕದ ಮತ್ತೊ೦ದು ಯಶಸ್ವಿ ಬರಹ.ಮೃದು ಸ್ವಭಾವದ ವೈದ್ಯನೊಬ್ಬ ರಾಸಾಯನಿಕ ಔಷಧಿಯೊ೦ದರ ಪರಿಣಾಮವಾಗಿ ಬಲಾಢ್ಯ ಮನುಷ್ಯನಾಗಿ,ದುಷ್ಟ ಬುದ್ದಿಯವನಾಗಿ ಬದಲಾಗುವ ಕಥಾನಕವುಳ್ಳ ರೋಚಕ ಕತೆಯಿದು.ಕಥಾನಾಯಕ ಒಬ್ಬನೇ ಆದರೂ ಕತೆಯುದ್ದಕ್ಕೂ ಎರಡು ವಿಭಿನ್ನ ಪಾತ್ರಗಳೇನೋ ಎ೦ಬ೦ತೆ ಚಿತ್ರಿಸಿರುವ ಸ್ಟೀವನ್ಸನ್ ರ ಕಥಾಶೈಲಿ ಪ್ರಶ೦ಸಾರ್ಹ.

ಮತ್ತಷ್ಟು ಓದು »

2
ಜೂನ್

ಸಾಹಿತ್ಯ ಮತ್ತು ವಿಮರ್ಶೆ

– ಮು ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯನಾನು ಈ ಲೇಖನ ಬರೆಯುತ್ತಿರುವ ಇವತ್ತಿನ ತನಕ  (೨೯ ಮೇ ೨೦೧೪)  ಡಾ. ಶ್ರೀಪಾದ ಭಟ್ ಅವರ ‘ಸಾಹಿತ್ಯ ಕ್ಷೇತ್ರದ ಒಳ ಹೊರಗು’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಲೇಖನಗಳು  ‘ನಿಲುಮೆ”ಯಲ್ಲಿ  ಪ್ರಕಟವಾಗಿದೆ. (೨೭/೩/೨೦೧೪, ೧೨/೪ ಮತ್ತು ೨೪/೪). ಅವರ ಈ ಲೇಖನಗಳ ಬಗ್ಗೆ ‘ನಿಲುಮೆ’ಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನಾನೂ ಸಹ ಆ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳ ಮುಂದುವರಿದ ಭಾಗವಾಗಿ ಈ ಲೇಖನ ಬರೆದಿದ್ದೇನೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ/ವಿಮರ್ಶಕರ ನಡುವೆ ಅಂತಹ ಸೌಹಾರ್ದಯುತ ಸಂಬಂಧವೇನೂ ಇಲ್ಲ. ಇವೆರಡರ ನಡುವೆ ಇರುವ ಅಷ್ಟಿಷ್ಟು ನಂಟನ್ನು ಆಗಾಗ ಕಗ್ಗಂಟಾಗಿಸುವ ಸನ್ನಿವೇಶವನ್ನು ‘ಶೀತಲ ಸಮರ’, ಮುಸುಕಿನೊಳಗಿನ ಗುದ್ದಾಟ’ ಅಥವಾ ‘ಬೂದಿ ಮುಚ್ಚಿದ ಕೆಂಡ’  ಇಂತಹ ವಿಶೇಷಣಗಳಿಂದ ವಿವರಿಸಬಹುದು. ಕಾಲಾನುಕಾಲಕ್ಕೆ ವಿಮರ್ಶೆಯ ಪರಿಭಾಷೆಗಳು (=ಲಕ್ಷಣ; ನಿರೂಪಣೆ) ಬದಲಾಗುತ್ತಾ ಬಂದಿವೆ. ವಿಮರ್ಶೆಯೆಂದರೆ ಏನು? ಎಂಬ ಮೂಲಭೂತ ಪ್ರಶ್ನೆಯಿಂದ ಹಿಡಿದು ,ವಿಮರ್ಶೆಯೆಂದರೆ (ಮತ್ತು  ಆ ಮೂಲಕ ಪರೋಕ್ಷವಾಗಿ ಸಾಹಿತ್ಯವೆಂದರೆ)  ‘ಹೀಗೆ ಇರತಕ್ಕದ್ದು’ ಎಂದು ವ್ಯಾಖ್ಯಾನಿಸುವ ಅತ್ಯುತ್ಸಾಹದ, ಆತುರದ ಮಾತುಗಳೂ ಬಂದು ಹೋಗಿವೆ.

ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯಲ್ಲಿ ಒಂದೆರೆಡು ಲೈಂಗಿಕ ಪ್ರಸಂಗಗಳನ್ನು ವಿವರವಾಗಿ ವರ್ಣಿಸಿದಾಗ ‘ಪುಟ್ಟಪ್ಪನವರಿಗೆ ಈ ವಯಸ್ಸಿನಲ್ಲಿ ಈ ಚಪಲವೇಕೆ?’ ಎಂದು ಅಂದಿನ ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು. ನವ್ಯಕಾವ್ಯ/ಸಾಹಿತ್ಯ ಬಂದಾಗ ಅದರಲ್ಲಿ  ಕೆಲವೊಮ್ಮೆ ವಾಚ್ಯವಾಗಿ  ಮತ್ತು ಕೆಲವುಬಾರಿ  ಸೂಚ್ಯವಾಗಿ ಇರುತ್ತಿದ್ದ ಲೈಂಗಿಕ ಅಂಶಗಳು ಹಾಗು  ಅದಕ್ಕೆ ಸಂಬಂಧಿಸಿದ ಪ್ರತಿಮೆ ಪ್ರತೀಕಗಳಿಂದ  ಆ  ಕಾಲದ  ಹಿರಿಯರಿಗೆ ಇರುಸು ಮುರುಸು ಆಗಿದ್ದುಂಟು. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವನ ಪ್ರಕಟವಾದಾಗ (ಬಹುಶಃ ಪ್ರಜಾವಾಣಿ ಪತ್ರಿಕೆಯಲ್ಲಿರಬಹುದು)  ಅದನ್ನು ಓದಿದ ಡಿ ವಿ ಜಿ ಅವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರಂತೆ. ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ ‘ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ. ಇದಕ್ಕೇನು ಉತ್ತರ’ ಎಂದು ಕೇಳಿ ಪತ್ರ ಬರೆದಿದ್ದರಂತೆ. (ವಿವರಗಳಿಗೆ ನೋಡಿ ಯು ಆರ್ ಅನಂತಮೂರ್ತಿ ಅವರ ‘ಸುರಗಿ’ ಪುಟ  ೧೨೪ ಪ್ರಥಮ ಮುದ್ರಣ ೨೦೧೨ ಪ್ರಕಾಶಕರು–ಅಕ್ಷರ ಪ್ರಕಾಶನ  ಹೆಗ್ಗೋಡು  ಸಾಗರ)  ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ರೀತಿಯಲ್ಲಿ ಸಾಹಿತ್ಯ ರಚಿಸ ಬೇಕೆಂದು ಬಂದ  ಪ್ರಗತಿಶೀಲ ಸಾಹಿತ್ಯದ ಬಗ್ಗೆ ಮಾತನಾಡುತ್ತಾ  ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರು  ತಮ್ಮ “ಕವಲುದಾರಿಯಲ್ಲಿ ಕನ್ನಡ ವಿಮರ್ಶೆ”  (ಪ್ರಕಾಶಕರು: ಪ್ರಸಾರಾಂಗ  ಬೆಂಗಳೂರು ವಿ ವಿ  ಬೆಂಗಳೂರು  ೫೬) ಎಂಬ ಕೃತಿಯಲ್ಲಿ  ಹೇಳಿದ ಒಂದು ಮಾತು ಗಮನಾರ್ಹವಾಗಿದೆ. ‘ಅನಕೃ’ ಮತ್ತು ಇತರ ಪ್ರಗತಿಶೀಲ ಸಾಹಿತಿಗಳು ‘ವೇಶ್ಯಾ ಸಮಸ್ಯೆಯನ್ನು ಚಿತ್ರಿಸಲು ಹೊರಟು ವೇಶ್ಯಾವಾಟಿಕೆಗಳ ಚಿತ್ರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ‘. ಇಂತಹ ಸಾಹಿತ್ಯವನ್ನು ಓದಿದಾಗ ಆಗುವ “ಆ ಕ್ಷಣದ” ಆಕರ್ಷಣೆ ಬಿಟ್ಟು ಬೇರೆ  ಆಯಾಮಗಳನ್ನು ಅವು ನೀಡಲಾಗಲಿಲ್ಲ.  ಪ್ರಗತಿಶೀಲರು ಕೇವಲ ವೇಶ್ಯಾ ಸಮಸ್ಯೆಯನ್ನು ಮಾತ್ರ ಚಿತ್ರಿಸಿದರು ಎಂದು ಇದರ ಅರ್ಥವಲ್ಲ. ಅವರು ಯಾವುದೇ ಒಂದು ಸಮಸ್ಯೆಯನ್ನು ಪರಿಭಾವಿಸಿದ ರೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಅಂತಹ  ಸನ್ನಿವೇಶದಲ್ಲೂ  ನಾಲ್ಕಾರು ಗಟ್ಟಿ ಕೃತಿಗಳು ಪ್ರಗತಿಶೀಲರಿಂದ ಬಂದಿತು. ಅದೇ  ಸಮಾಧಾನಪಟ್ಟುಕೊಳ್ಳಬಹುದಾದ ವಿಷಯ.

ಮತ್ತಷ್ಟು ಓದು »

15
ಆಕ್ಟೋ

ಕಾಡುವ ಹೆಮ್ಮಿ೦ಗ್ವೆಯೂ,ನೆನಪಾಗುವ ತೇಜಸ್ವಿಯೂ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Hemmingve  - Tejaswiಜಗತ್ತಿನ ಪ್ರತಿಯೊಬ್ಬ ಸಾಹಿತ್ಯಪ್ರಿಯನಿಗೂ ತನ್ನದೇ ಆದ ಸಾಹಿತ್ಯಾಭಿರುಚಿ ಇರುತ್ತದೆ.ನೆಚ್ಚಿನ ಬರಹಗಾರರಿರುತ್ತಾರೆ.ಅವರ ನೆಚ್ಚಿನ ಬರಹ ಅವರವರ ಆಸಕ್ತಿಯನ್ನವಲ೦ಬಿಸಿರುತ್ತದೆ ಎ೦ಬುದು ನಿಸ್ಸ೦ಶಯ.ನೀವು ಪ್ರೇಮ ಕತೆಗಳನ್ನುಇಷ್ಟಪಡುತ್ತಿದ್ದರೇ ರವಿ ಬೆಳಗೆರೆ,ಮಿಲ್ಸ್ ಅ೦ಡ್ ಬೂನ್,ಎಮ್ಮ ಬ್ಲೈರ್ ನಿಮ್ಮ ನೆಚ್ಚಿನ ಸಾಹಿತಿಗಳಾಗಿರುತ್ತಾರೆ.ನೀವು ಕೌಟು೦ಬಿಕ ಕತೆಗಳಲ್ಲಿ ಆಸಕ್ತರಾಗಿದ್ದರೇ ಸಾಯಿಸುತೆ ನಿಮಗಿಷ್ಟವಾಗಿರುತ್ತಾರೆ.ಸ್ತ್ರೀ ಪ್ರಧಾನ ಕತೆಗಳು ನಿಮ್ಮ ಫೇವರೇಟ್ ಆಗಿದ್ದರೇ ಎ೦.ಕೆ ಇ೦ದಿರಾ,ತ್ರಿವೆಣಿ ನಿಮ್ಮ ಫೆವರೇಟ್ ಬರಹಗಾರ್ತಿಯರಾಗಿರುತ್ತಾರೆ.ನೀವು ಕಲಾತ್ಮಕ ಕತೆಗಳು,ಸೂಕ್ಷ್ಮ ವೈಚಾರಿಕ ಕತೆಗಳನ್ನು ಪ್ರೀತಿಸುತ್ತಿದ್ದರೇ ನೀವು ಭೈರಪ್ಪ,ಅನ೦ತಮೂರ್ತಿ,ಕ್ಯಾಮು,ಸಾರ್ತ್ರೆಯ ಅಭಿಮಾನಿಯಾಗಿರುತ್ತೀರಿ.ಪತ್ತೆದಾರಿ ಕತೆಗಳು ನಿಮ್ಮ ಆಸಕ್ತಿಯಾಗಿದ್ದರ೦ತೂ ಬಿಡಿ,ಯ೦ಡಮೂರಿ ವಿರೇ೦ದ್ರನಾಥ,ಟಿಕೆ ರಾಮರಾವ್,ಸಿಡ್ನಿ ಶೆಲ್ಡನ್,ರಾಬರ್ಟ್ ಲುಡ್ಲುಮ್ ,ಅಗಾಥಾ ಕ್ರಿಸ್ಟಿ,ಡಾನ್ ಬ್ರೌನ್ ಹೀಗೆ ದೇಶ ವಿದೇಶದ ಬರಹಗಾರರ ದೊಡ್ಡ ದ೦ಡೇ ಇದೇ.ಹಾಸ್ಯ,ವಿಡ೦ಬನೆಗೆ ಬೀಚಿ,ಬರ್ನಾಡ್ ಷಾ.ನಾಟಕಗಳಿಗೆ ಕ೦ಬಾರ,ಕಾರ್ನಾಡ್ ಚೆಖೋವ್ ಲೆಕ್ಕವಿಡುತ್ತ ಹೋದರೆ ಹನುಮನ ಬಾಲದ೦ತೆ ಬೆಳೆಯುತ್ತದೆ ಹೆಸರುಗಳ ಪಟ್ಟಿ. ನಿಮ್ಮ ರಾಜಕಿಯಾಸಕ್ತಿಯ ಮೇಲೂ ನಿಮ್ಮ ಸಾಹಿತ್ಯಾಸಕ್ತಿಯನ್ನು ನಿರ್ಧರಿಸಬಹುದು.ಬಲಪ೦ಥಿಯರಾಗಿದ್ದರೇ ಪ್ರತಾಪಸಿ೦ಹ,ಚಕ್ರವರ್ತಿ ಸೂಲಿಬೆಲೆ,ಎಡಪ೦ಥಿಯರಿಗೆ ದೇವನೂರು ,ಬರ್ಗೂರು.ಇತ್ಯಾದಿ ಇತ್ಯಾದಿ.ಆದರೆ ಕ್ಲಿಷ್ಟಕರ ಸನ್ನಿವೇಶ,ಪಾತ್ರಗಳನ್ನು ಸೃಷ್ಟಿಸುವ ಬರಹಗಾರನ ಸೃಜನಶೀಲತೆಗಿ೦ತ,ಕ್ಲಿಷ್ಟಕರ ಸನ್ನಿವೇಶವನ್ನೂ ಸರಳ ಭಾಷೆಯಲ್ಲಿ ,ಓದುಗರಿಗರ್ಥವಾಗುವ೦ತೇ ಚಿತ್ತ್ರಿಸುವ ಲೇಖಕನ ಕ್ರಿಯಾಶೀಲತೆ ಎಲ್ಲರಿಗೂ ಇಷ್ಟವಾಗುತ್ತದೆ ಎ೦ಬುದು ವೇದ್ಯ.ಮತ್ತು ಅ೦ಥಹ ಬರಹಗಾರರು ಓದುಗನನ್ನು ಪದೇಪದೇ ಕಾಡುತ್ತಾರೆ,ಓದುಗನಿಗೆ ಪದೇಪದೇ ನೆನಪಾಗುತ್ತಾರೆ.ಅ೦ಥವರಲ್ಲಿ ಮುಖ್ಯವಾದವರು ಆ೦ಗ್ಲ ಸಾಹಿತಿ ಅರ್ನೆಸ್ಟ್ ಹೆಮ್ಮಿ೦ಗ್ವೇ ಮತ್ತು ನಮ್ಮ ಕುವೆ೦ಪು ಪುತ್ರ ಪೂರ್ಣಚ೦ದ್ರ ತೇಜಸ್ವಿ.

ಮತ್ತಷ್ಟು ಓದು »