ನಿರ್ಭೀತಿಯೇ ಮೈವೆತ್ತಿರುವ ಆಸಾಮಿ,ಈ ಸುಬ್ರಮಣಿಯನ್ ಸ್ವಾಮಿ!
– ಸಹನಾ ವಿಜಯ್ ಕುಮಾರ್
ಸುಬ್ರಮಣಿಯನ್ ಸ್ವಾಮಿ! ಹೆಸರನ್ನು ಕೇಳಿದ ತಕ್ಷಣ ಎಂಥವರೂ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಕ್ರಿಯಿಸಲೇ ಬೇಕು. ಸಿಟ್ಟೋ, ಗೊಂದಲವೋ, ಹೆಮ್ಮೆಯೋ, ಪ್ರೀತಿಯೋ ಒಟ್ಟಿನಲ್ಲಿ ಯಾವುದಾದರೊಂದು ಭಾವವಂತೂ ಹೊಮ್ಮಲೇ ಬೇಕು! ಅವರನ್ನು ಉಪೇಕ್ಷೆ ಮಾಡಿ ತಲೆಯನ್ನೊಮ್ಮೆ ಅಡ್ಡಡ್ಡಲಾಗಿ ಕೊಡವಿಕೊಂಡು ಎದ್ದು ಬಿಡುವುದು ಎಂಥವರಿಗೂ ಸಾಧ್ಯವಿಲ್ಲ! ಮೊನ್ನೆ ಜನವರಿ 23ರಂದು ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ದೌಡಾಯಿಸುವಾಗ ಮನಸ್ಸಿನಲ್ಲಿ ಹಲವಾರು ಚಿತ್ರಗಳು. ಟಿವಿ ಚಾನೆಲ್ಗಳಲ್ಲಿ ವಾದಕ್ಕೆ ನಿಂತಾಗಲೆಲ್ಲ ಗುಂಡು ಹೊಡೆದ ಹಾಗೆ ಮಾತನಾಡುವ, ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುಖದ ನೀರಿಳಿಸಿಬಿಡುವ ಅವರನ್ನು ನೇರಾನೇರ ಕಂಡು ಮಾತನಾಡುವ ಕಾತುರ. ಎದುರಿಗೆ ಹೋಗಿ ನಿಂತು ಸುರಿಸಿದ ಪ್ರಶ್ನೆಗಳ ಮಳೆಗೆ ಅವರದ್ದು ಸಿಡಿಲಬ್ಬರದ ಉತ್ತರ. ಸೆಕ್ಯುರಿಟಿಯವರ ಕೈಯಲ್ಲಿದ್ದ ಎಕೆ 47 ಬಂದೂಕನ್ನೂ ನಾಚಿಸುವಂಥ ಮಾತಿನ ವರಸೆ!
‘ಸರ್, ಸೋನಿಯಾ ಪ್ರಧಾನಿಯಾಗುವುದು ಕಾನೂನಿನ್ವಯ ಸಾಧ್ಯವಿಲ್ಲ ಎನ್ನುವ ವಿಷಯ ನೀವು ಹೇಳುವವರೆಗೂ (ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಪತ್ರ ಬರೆದು) ಯಾರಿಗೂ ಗೊತ್ತೇ ಇರಲಿಲ್ಲ, ಯಾವ ಸತ್ಯವನ್ನೇ ಆಗಲಿ ನೀವೇ ಶೋಧಿಸಬೇಕು, ನೀವಲ್ಲದೆ ಬೇರೆ ಯಾರೂ ದಿಕ್ಕಿಲ್ಲ ಎನ್ನುವ ಹಾಗಿಬಿಟ್ಟಿದೆಯಲ್ಲ, ಮುಂದೆ ಹೇಗೆ?’ ಎಂಬ ಕಳಕಳಿಯ ಪ್ರಶ್ನೆಗೆ ಅವರು ನಗುತ್ತಾ ಕೊಟ್ಟ ಉತ್ತರ – ‘ಅಯ್ಯೋ, ನನ್ನ ಕಥೆ ಈಗಲೇ ಮುಗಿದುಹೋಗುತ್ತದೆ ಅಂದುಕೊಂಡುಬಿಟ್ಟಿರೇನು? ಯಾರಿಗೆ ಗೊತ್ತು, ನಾನು ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರೂ ಬದುಕಬಹುದು’ ಎಂದು! ‘ನಾನೊಬ್ಬ ಸಾಧಾರಣ ಹಿನ್ನೆಲೆಯಿಂದ ಬಂದಂಥ ಮನುಷ್ಯ. ಉಳಿದವರಿಗೂ ನನಗೂ ಇರುವ ಒಂದೇ ವ್ಯತ್ಯಾಸವೆಂದರೆ ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಗಾಂಧೀಜಿಯವರು ಇದ್ದುದೂ ಹಾಗೇ ಅಲ್ಲವೇ?’ ಎಂದು ತಿರುಗಿ ಪ್ರಶ್ನಿಸಿದರು ಸ್ವಾಮಿ.





