ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 19:
ಸುಬ್ರಮಣ್ಯ ಭಾರತಿ
– ರಾಮಚಂದ್ರ ಹೆಗಡೆ
ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ ಜನಸಮೂಹವನ್ನು ಸಂಘಟಿಸುವಲ್ಲಿ ಸುಬ್ರಮಣ್ಯ ಭಾರತಿಯವರ ಪಾತ್ರ ಬಲು ದೊಡ್ಡದು. ಆವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ಯ ಆಂದೋಲನದ ಕಾಲದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಜ್ವಾಲೆಯನ್ನು ಪ್ರಖರಗೊಳಿಸುವಲ್ಲಿ ನೆರವಾದವು ಹಾಗೂ ದೇಶಪ್ರೇಮವನ್ನು ಬಡಿದೆಬ್ಬಿಸಿದವು. 1882ರಲ್ಲಿ ತಮಿಳುನಾಡಿನ ಎತ್ತಯಾಪುರಂ ಎಂಬ ಗ್ರಾಮದಲ್ಲಿ ಜನಿಸಿದ ಸುಬ್ರಮಣ್ಯ ಭಾರತಿ ತಿರುನಲ್ವೇಲಿಯಲ್ಲಿ ಆರಂಭಿಕ ಶಿಕ್ಷಣ ನಂತರ ವಾರಣಾಸಿ ಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಅತ್ಯಂತ ಪ್ರತಿಭಾಶಾಲಿ ಕವಿಯಾಗಿದ್ದ ಭಾರತಿ ತಮ್ಮ 11ನೇ ವಯಸ್ಸಿನಲ್ಲೆ ಎತ್ತಯಾಪುರಂನ ಆಸ್ಥಾನ ಕವಿಗಳು ಹಾಗು ಸಂಗೀತಗಾರರ ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದರು. ವಾರಣಾಸಿ ಯಲ್ಲಿ ನೆಲಸಿದ್ದ ಅವಧಿಯಲ್ಲಿ ಭಾರತಿಯವರು ಹಿಂದೂ ಆಧ್ಯಾತ್ಮಿಕತೆ ಹಾಗು ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾದರು. ಜೊತೆಗೆ ಅವರು ಸಂಸ್ಕೃತ, ಹಿಂದಿ ಹಾಗು ಆಂಗ್ಲ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದರು. ಡಿಸೆಂಬರ್ 1905ರಲ್ಲಿ, ಬನಾರಸ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಿ ಪಾಲ್ಗೊಂಡರು. ನಂತರ ಅವರು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾರನ್ನು ಸಂಧಿಸಿದರು. ಮತ್ತಷ್ಟು ಓದು 




