ಕಳ್ಳಹೊಳೆ ಮತ್ತು ಹೇಮಾವತಿ
– ಹಂಸಾನಂದಿ
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.
ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು – ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು.





