ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ
– ಶಿವಕುಮಾರ ಪಿ.ವಿ., ಸಿ.ಎಸ್.ಎಲ್.ಸಿ
ವಚನ ಸಾಹಿತ್ಯದ ಕುರಿತ ಸಂಶೋಧನಾ ಲೇಖನದ ವಾದದ ಕುರಿತು ಚರ್ಚಿಸಬೇಕಾದುದೇನು? ಮತ್ತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪವೇನು? ಒಂದೆಡೆ, ಇವೆರೆಡರ ನಡುವೆ ದೊಡ್ಡ ಕಂದರವಿದೆ. ಮತ್ತೊಂದೆಡೆ, ಅವು ತೀರ ಹತ್ತಿರವಾಗಿಯೂ ಇವೆ. ಈ ವಿಚಾರವು ವಿದ್ವಾಂಸರ ಪ್ರತಿಕ್ರಿಯೆಗಳಲ್ಲಿ ತಾನಾಗಿಯೇ ಸ್ಪಷ್ಟವಾಗುತ್ತದೆ. ಈ ಮೂಲಕ ಒಟ್ಟಾರೆ ಚರ್ಚೆಯ ಸ್ವರೂಪವನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.
‘ಜಾತಿವ್ಯವಸ್ಥೆ’ಯೆಂಬ ಪೂರ್ವನಂಬಿಕೆ ಇಟ್ಟುಕೊಂಡು ವಚನಸಾಹಿತ್ಯವನ್ನು ನೋಡಿದಾಗ ಅವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಂತೆ ಕಾಣುತ್ತವೆ. ಆ ಪೂರ್ವನಂಬಿಕೆಯ ಚೌಕಟ್ಟಿನಿಂದ ಹೊರತಾಗಿ ವಚನ ಸಾಹಿತ್ಯವನ್ನು ಅಧ್ಯಯನ ನಡೆಸಿದರೆ ಅದು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸೈದ್ಧಾಂತಿಕವಾಗಿ ನಿದರ್ಶಿಸಲು ಸಾಧ್ಯವಿಲ್ಲ. ಹಾಗೂ ಈವರೆಗೂ ವಚನ ಸಾಹಿತ್ಯವನ್ನು ಆ ಒಂದು ಪೂರ್ವನಂಬಿಕೆಯಿಂದಲೇ ವಿಶ್ಲೇಷಿಸಲಾಗಿದೆ. ಇದು ಡಂಕಿನ್‍ರವರ ಸಂಶೋಧನಾ ಲೇಖನದ ಮುಖ್ಯ ವಾದ. ಇದನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿಡುವ ಅನಿವಾರ್ಯತೆಯನ್ನು ಪ್ರಸ್ತುತ ವಾದಕ್ಕೆ ಶಿವಪ್ರಕಾಶರವರ ಪ್ರತಿಕ್ರಿಯೆ ಹಾಗೂ ಅದನ್ನೇ ಆಧರಿಸಿ ಬಂದಂತಹ ಉಳಿದ ಪ್ರತಿಕ್ರಿಯೆಗಳು ಉಂಟುಮಾಡಿವೆ.
ಈ ಮೇಲಿನ ವಾದಕ್ಕೆ ‘ಸಂಬಂಧಿಸಿ’ದಂತೆ ಬರುತ್ತಿರುವ ಬೌದ್ಧಿಕ ವಲಯದ ಟೀಕೆ ಅಥವಾ ‘ಪ್ರತಿಕ್ರಿಯೆ’ಗಳು ಹಾಗು ಅವುಗಳ ಮಿತಿಗಳನ್ನು ಈ ಮುಂದಿನಂತೆ ನೋಡಬಹುದು.
1. ಮೊದಲನೆಯದಾಗಿ, ಹೆಚ್.ಎಲ್. ಪುಷ್ಪರವರು “ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾದದ್ದು” ಹಾಗೂ ವಚನಕಾರರಲ್ಲಿ ಎಲ್ಲಿಯೂ “ಜಾತಿ ಪರವಾದ ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡು ಬರುವುದಿಲ್ಲ” ಎನ್ನುತ್ತಾರೆ. ಎರಡನೆಯದಾಗಿ ಟಿ.ಆರ್. ಚಂದ್ರಶೇಖರ್‍ರವರು ಡಂಕಿನ್ ಮತ್ತು ಬಾಲುರವರು “ಭಾರತದಲ್ಲಿ ಜಾತಿಯೇ ಇಲ್ಲ” ಎನ್ನುವ ಪೂರ್ವಾಗ್ರಹ ಹೊಂದಿದ್ದಾರೆ ಎಂದು ಗ್ರಹಿಸುತ್ತಾರೆ. ಮೊದಲನೆಯದಕ್ಕೆ, ಉದಾಹರಣೆಯ ಮೂಲಕ ಹೇಳುವುದಾದರೆ, ಯಾರೋ ಒಬ್ಬ ವ್ಯಕ್ತಿಯು ಕಲಾತ್ಮಕ ಸಿನಿಮಾದ ಕುರಿತು ಮೃದು ಧೋರಣೆಯನ್ನು ಹೊಂದಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದಾಕ್ಷಣ, ಆತ ಕಲಾತ್ಮಕ ಸಿನಿಮಾ ಹಾಗೂ ಸಿನಿ ಪ್ರಪಂಚದ ವಿರೋಧಿಯಾಗಿದ್ದಾನೆ ಮಾತ್ರವಲ್ಲ ಅವುಗಳನ್ನು ನಾಶಮಾಡಲು ಹೋರಾಡಿದ್ದಾನೆ ಎನ್ನಲು ಹೇಗೆ ಸಾಧ್ಯ? ಎರಡನೆಯ ಅಂಶದಲ್ಲಿ, ವಾದದಲ್ಲಿನ ತರ್ಕರಹಿತತೆ ಹಾಗೂ ಪೂರ್ವಾಗ್ರಹ ಯಾವುದು? ಅದು ಎಲ್ಲಿದೆ? ಎಂಬುದನ್ನು ಸುಸಂಬದ್ಧವಾಗಿ ತೋರ್ಪಡಿಸದೇ, ಆ ಹೊಣೆಯನ್ನು ಓದುಗರ ಮೇಲೆಯೇ ಹಾಕಿಬಿಡುತ್ತಾರೆ. ಆದರೆ, ಡಂಕಿನ್ ಹಾಗೂ ಬಾಲುರವರು, ಅವರ ಒಟ್ಟಾರೆ ಸಂಶೋಧನೆಯಲ್ಲಿ, ಎಲ್ಲಿಯೂ ಕೂಡ ವಚನಕಾರರು ಜಾತಿಯ ಪರವಾಗಿದ್ದರು; ಭಾರತದಲ್ಲಿ ಜಾತಿಯೇ ಇಲ್ಲ ಎಂದು ಹೇಳಿರುವುದು ಕಂಡುಬರುವುದಿಲ್ಲ. ಇದನ್ನು ಸ್ವತಃ ಆರೋಪಿಸುವವರೇ ಸಾಭೀತು ಪಡಿಸಬೇಕಾಗುತ್ತದೆ. ಇಲ್ಲವಾದರೆ, ವಿದ್ವಾಂಸರುಗಳು ತಮ್ಮ ಈ ಆರೋಪಗಳೆಲ್ಲವೂ ನಿರಾಧಾರವಾದವುಗಳು ಎಂಬ ಬೆಲೆ ತೆರಬೇಕಾಗುತ್ತದೆ.
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ
– ಡಾ. ಸಂತೋಷ್ ಕುಮಾರ್ ಪಿ.ಕೆ, ಶಿವಮೊಗ್ಗ.
ಪ್ರಜಾವಾಣಿ ೧೯/೦೩/೨೦೧೩ ರಲ್ಲಿ ಪ್ರಕಟವಾದ ಕಲಬುರ್ಗಿಯವ ಲೇಖನಕ್ಕೆ ಪ್ರತಿಕ್ರಿಯೆ
ವಚನಗಳ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಒಂದು ರೀತಿಯ ಕಂದರವಿದೆ. ಒಂದೆಡೆ ಸಂಶೋಧನೆ ವಾಸ್ತವದ ಕುರಿತು ವಾದಿಸುತ್ತಿದ್ದರೆ ಮತ್ತೊಂದೆಡೆ ಐಡಿಯಾಲಜಿಗಳು ಕಟ್ಟುಕತೆಯನ್ನೇ ಮರುಪ್ರಸಾರ ಮಾಡುತ್ತಿವೆ. ಇಲ್ಲಿ ಕಂದರವಿರುವುದು ಸಂಶೋಧನೆ ಮತ್ತು ಐಡಿಯಾಲಜಿಯ ನಡುವೆ. ಸಂಶೋಧನೆ ನಡೆಸಿ ಸುಮಾರು ೨೨೦೦೦ ವಚನಗಳನ್ನು ಪರಿಶೀಲನೆಗೆ ಒಡ್ಡಿ, ಡಂಕಿನ್ ಮತ್ತು ಬಾಲುರವರು ಒಂದು ಹೊಸ ಹೈಪೋಥೀಸಿಸ್ ನ್ನು ನೀಡುತ್ತಿದ್ದಾರೆ. ಆದರೆ ಅದು ಸಂಶೋಧನಾ ಹೈಪೋಥೀಸಿಸ್ ಎಂಬುದು ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪೂರ್ವಪಕ್ಷದವರಿಗೆ ಅರ್ಥವಾಗದೆ ಇರುವುದು ಖೇದದ ಸಂಗತಿ.
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ಪೂರ್ವಪಕ್ಷದವರು ಅದು ಹೇಗೆ ಜಾತಿವ್ಯವಸ್ಥೆಯ ವಿರುದ್ಧವೇ ನಡೆದಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಅರಚಾಟ, ಕಿರುಚಾಟ, ವಯಕ್ತಿಕ ಟೀಕೆಗಳನ್ನು ಮಾಡಿದರೆ ಯಾವುದೇ ಹೈಪೋಥೀಸಿಸ್ ನ್ನು ರೆಫ್ಯೂಟ್ ಮಾಡಿದಂತೆ ಆಗುವುದಿಲ್ಲ. ವಚನಗಳು ಸಾವಿರಾರು ವಿಷಯಗಳ ಕುರಿತು ಮಾತನಾಡಿವೆ, ಅವುಗಳಲ್ಲಿ ಜಾತಿಯ ಕುರಿತು ಮಾತನಾಡಿರುವುದು ಒಂದಾಗಿದೆ. ವಚನಗಳ ಮೂಲ ಸಿದ್ಧಾಂತ (ಕಲಬುರ್ಗಿಯವರು ಹೇಳುವಂತೆ) ಜಾತಿವ್ಯವಸ್ಥೆಯನ್ನು ಹೋಗಲಾಡಿಸುವುದೇ ಆಗಿದ್ದರೆ ಅವರು ರಚಿಸಿರುವ ಬಹುತೇಕ ವಚನಗಳು ಆ ವಿಷಯದ ಸುತ್ತವೇ ಇರಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ಈ ವಾದವನ್ನು ವಿರೋಧಿಸಬೇಕಾದರೆ ವಚನಗಳು ಬಹುಸಂಖ್ಯೆಯಲ್ಲಿ ಜಾತಿಯನ್ನು ವಿರೋಧಿಸುತ್ತವೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇಷ್ಟು ಕನಿಷ್ಟ ಜ್ಞಾನವಿರದಿದ್ದರೆ ಐಡಿಯಾಲಜಿ, ಅಂದರೆ ವಾಸ್ತವಕ್ಕಿಂತ ತಾನು ನಂಬಿರುವುದೇ ಸತ್ಯ ಎಂಬ ಧೋರಣೆ ಮುಸುಕಾಗಿ ನಿಲ್ಲುತ್ತದೆ. ಐಡಿಯಾಲಜಿಯು ಸಿದ್ಧಾಂತಕ್ಕೆ ತೀರಾ ವ್ಯತಿರಿಕ್ತವಾದುದಾಗಿದೆ. ಸಾಮಾನ್ಯವಾಗಿ ಸಿದ್ಧಾಂತಗಳು ಇರುವ ಜ್ಞಾನವನ್ನು ಒರೆಗೆ ಹಚ್ಚುವ ಮೂಲಕ ಹೆಚ್ಚೆಚ್ಚು ಸ್ಪಷ್ಟತೆಯನ್ನು ಒದಗಿಸುತ್ತಾ ಹೋಗುತ್ತವೆ.
ಜಾತಿ-ವಿರೋಧಿ ನಿಲುವು : ಸರಿಯಾದ ವೈಧಾನಿಕತೆ!
– ಡಂಕಿನ್ ಝಳಕಿ
ಇಂದಿನ ಪ್ರಜಾವಾಣಿಯಲ್ಲಿ (೦೪/೦೪/೨೦೧೩) ಎಂ.ಎಸ್. ಆಶಾದೇವಿಯವರು ಬರೆದ ವಚನ ಕುರಿತ ಚರ್ಚೆಯ ಬರಹಕ್ಕೆ ಇದು ನನ್ನ ಉತ್ತರ.
ನಮ್ಮ ಸಂಶೋಧನೆಯ ಕುರಿತು ಇವರು ಮಾಡುವ ಗುರುತರ ಆಪಾದನೆಯೆಂದರೆ, ಇದಕ್ಕೆ ವಚನಗಳ “ಜೀವಪರ ನಿಲುವು” ಕಾಣಿಸುವುದಿಲ್ಲ. ಏಕೆಂದರೆ ಈ ಸಂಶೋಧನೆಗೆ ಒಂದು “ವೈಧಾನಿಕತೆಯ ಕಣ್ಕಟ್ಟು” ಇದೆ. ಯಾವುದಿದು ವೈಧಾನಿಕತೆಯ ಕಣ್ಕಟ್ಟು? ಆಧ್ಯಾತ್ಮಿಕ ವಿಚಾರವನ್ನು ಅಕಾಡೆಮಿಕ್ ಅಧ್ಯಯನದಲ್ಲಿ ತರುವ ಪ್ರಯತ್ನವೇ ಈ ಕಣ್ಕಟ್ಟು ಅಥವಾ ಮಾಯೆ. ಮುಂದುವರೆಸಿ ಇವರು ಹೇಳುತ್ತಾರೆ, ಈ ಕುರುಡು ವೈಧಾನಿಕತೆಯು ಈ ಮುಂದಿನ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ: “ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು?”
ಇವರ ಈ ಹೇಳಿಕೆಗಳನ್ನು ನಾನು ‘ಆಪಾದನೆ’ ಎಂದು ಯಾಕೆ ಹೇಳಿದೆನೆಂದರೆ ಇವರು ತಮ್ಮ ಈ ಹೇಳಿಕೆಗಳನ್ನು ಮುಂದೆ ಎಲ್ಲೂ ವಿವರಿಸುವುದೂ ಇಲ್ಲ, ಸಮರ್ಥನೆ ಮಾಡಿಕೊಳ್ಳುವುದೂ ಇಲ್ಲ. ಈ ಆಪಾದನೆಯ ನಂತರ ಇವರ ಲೇಖನ ಬೇರೆಡೆ ಹೊರಳುತ್ತದೆ. ತಮ್ಮ ಹೇಳಿಕೆಗಳನ್ನು ಇವರು ತಾವೇ ವಿವರಿಸದೆ ಹೋಗುವುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ಓದುಗನಿಗೆ ಬಿಟ್ಟ ಕೆಲಸ. ನನಗೆ ಇವರ ಕಷ್ಟದ ಭಾಷೆ ಅರ್ಥವಾದ ಮಟ್ಟಿಗೆ ಹೇಳುವುದಾದರೆ, ಯಾವುದೇ ಸಂಶೋಧನೆ ಮಾಡದೆ, ನೂರು ವರ್ಷಗಳಿಂದ ಹೇಳುತ್ತಾ ಬಂದಿರುವ ‘ವಚನಗಳು ಜಾತಿವಿರೋಧಿ’ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದೇ ವಚನಗಳ ಜೀವಪರ ನಿಲುವನ್ನು ಗುರುತಿಸುವ ವೈಧಾನಿಕತೆ ಎಂದಾಯಿತು ಅಲ್ಲವೇ?
ಮೀನಾಕ್ಷಿ ಬಾಳಿಯವರ ಅಸೈದ್ಧಾಂತಿಕ ವಿಮರ್ಶೆಗೊಂದು ಸೈದ್ಧಾಂತಿಕ ಉತ್ತರ
– ಡಂಕಿನ್ ಝಳಕಿ
ನಮ್ಮ ವಚನ ಸಂಶೋಧನೆ ಕುರಿತು ಡಾ.ಮೀನಾಕ್ಷಿ ಬಾಳಿಯವರು ಪ್ರಜಾವಾಣಿಯ ೧೮/ಮಾರ್ಚ್/೨೦೧೩ರ ಸಂಚಿಕೆಯಲ್ಲಿ ಬರೆದ “ಆಧುನಿಕೋತ್ತರ ವಾದದ ಅಪಸವ್ಯ” ಎಂಬ ಬರಿಯ ಬೈಗುಳಗಳಿಂದಲೇ ತುಂಬಿರುವ ಇವರ ಬರಹಕ್ಕೆ ಇದು ನನ್ನ ಪ್ರತಿಕ್ರಿಯೆ.
(೧) ಅವರ ಟೀಕಾ ಪ್ರಹಾರ ಆರಂಭವಾಗುವುದೇ ನಮ್ಮ ವಾದದಲ್ಲಿ “ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ” ಎಂದು ಸಾರುತ್ತಾ, ನಮ್ಮ ಸಂಶೋಧನೆಯು ಪೂರ್ವಗ್ರಹ ಪೀಡಿತವಾಗಿದೆ ಮತ್ತು “ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ” ಎನ್ನುವ ಮೂಲಕ. ನಮ್ಮ ವಾದದಲ್ಲಿ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲದ ಮೇಲೆ ಬಾಳಿಯವರು ಈ ಲೇಖನವನ್ನು ಬರೆದದ್ದಾದರೂ ಹೇಗೆ, ಪ್ರಜಾವಾಣಿ ನಮ್ಮ ವಿರುದ್ಧ ಅಷ್ಟೊಂದು ಲೇಖನಗಳನ್ನು ಪ್ರಕಟಿಸಿದ್ದು ಹೇಗೆ? ಈ ಪ್ರಶ್ನೆಗಳು ಹಾಗಿರಲಿ, ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ ಎಂದು ಇವರು ಹೇಳುವುದು ನಾವು ಕೇವಲ ವಚನಗಳಲ್ಲಿನ ಶಬ್ದ ಬಳಕೆಯ ಲೆಕ್ಕ ಮಾತ್ರ ಮಾಡುತ್ತೇವೆ, ಒಟ್ಟು ವಚನಗಳ ಜೀವಧ್ವನಿ, ಅವರ ಬದುಕಿನ ಸಂಘರ್ಷ ಮುಂತಾದವುಗಳನ್ನು, ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಇತ್ಯಾದಿಗಳನ್ನು ನಾವು ಗುರುತಿಸುವುದಿಲ್ಲವಂತೆ. ಇಂತಹ ಹೇಳಿಕೆಗಳನ್ನು ಮಾಡುವ ಮೊದಲು ನಾವು ಬರೆದ ಲೇಖನ, ಪುಸ್ತಕಗಳನ್ನು ಇವರು ಓದಬೇಕಿತ್ತು. ಅವರು ಉಲ್ಲೇಖಿಸುವುದು ನಮ್ಮೆಲ್ಲ ವಚನ ಸಂಶೋಧನೆಯ ಸಾರಾಂಶವನ್ನು ಕೊಟ್ಟಿರುವ, ನಾನು ಸಂಪಾದಿಸಿದ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ? ಕೃತಿಯಲ್ಲಿನ ಎರಡು ಪುಟಗಳ ಲೇಖನವನ್ನಷ್ಟೇ. ಇದನ್ನು ಏನೆಂದು ಕರೆಯೋಣ: ಬಾಳಿಯವರ ವಿದ್ವತ್ತಿನಲ್ಲಿನ ಕೊರತೆ ಎಂದೋ ಅಥವಾ ಸೋಮಾರಿತಂವೆಂದೋ?
ವಚನ ಸಾಹಿತ್ಯದ ಬಗೆಗಿನ ಚರ್ಚೆಯ ಕುರಿತು…
– ಜೆ.ಎಸ್.ಸದಾನಂದ
ಸ್ಥಳೀಯ ಸಂಸ್ಕಂತಿಗಳ ಅಧ್ಯಯನ ಕೇಂದ್ರ,
ಕುವೆಂಪು ವಿಶ್ವ ವಿದ್ಯಾನಿಲಯ.
‘ಪ್ರಜಾವಾಣಿ’ಯಲ್ಲಿ ನಡೆಯುತ್ತಿರುವ ಢಂಕಿನ್‍ರವರ ವಚನ ಸಾಹಿತ್ಯ ಹಾಗು ಜಾತಿ ವ್ಯವಸ್ಥೆಯ ಕುರಿತಾದ ಸಂಶೋಧನೆಯ ಮೇಲಿನ ಚರ್ಚೆ ಹೆಚ್.ಎಸ್.ಶಿವಪ್ರಕಾಶ್ ಹಾಕಿಕೊಟ್ಟ ಅಕಾಡಮಿಕ್ ಅಡಿಪಾಯವನ್ನು ಬಿಟ್ಟು ಅತ್ತಿತ್ತ ಓಲಾಡತೊಡಗಿದೆ ಎಂದು ನನಗನಿಸುತ್ತಿದೆ. ಕೆಲವು ನಿರ್ಧಿಷ್ಟ ಲಕ್ಷಣಗಳನ್ನೊಳಗೊಂಡ ಬ್ರಾಹ್ಮಣ ಪುರೋಹಿತಶಾಹಿ ಪ್ರಚೋದಿತ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವ ಪೂರ್ವನಂಬಿಕೆಯಿಂದ ವಚನ ಸಾಹಿತ್ಯವನ್ನು ನೋಡಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿಗಳಂತೆ ನಮಗೆ ಕಾಣಿಸುತ್ತದೆ. ಅಂತಹ ಭೌದ್ಧಿಕ ಚೌಕಟ್ಟಿನಿಂದ ಹೊರಬಂದು ವಚನಗಳನ್ನು ಓದಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಢಂಕಿನ್‍ರವರ ವಾದದ ಸಾರಾಂಶ ಎಂದು ನಾನು ತಿಳಿದುಕೊಂಡಿದ್ದೇನೆ. ಮತ್ತು ಇದಕ್ಕೆ ಪೂರಕವಾಗಿ ಜಾತಿಯ ಉಲ್ಲೇಖವಿರುವ ವಚನಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಅವರು ಕೊಡುವ ಪುರಾವೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಕೇವಲ ಒಂದು ಅಂಶವಷ್ಟೇ ಎನ್ನುವುದು ನನ್ನ ತಿಳುವಳಿಕೆಯಾಗಿದೆ. ಕೇವಲ ಅದೊಂದರಿಂದಲೇ ತಮ್ಮ ವಾದವನ್ನು ಅವರು ಸಮರ್ಥಿಸಿಕೊಂಡಿರಲು ಸಾಧ್ಯವಿಲ್ಲ. ಹೆಚ್.ಎಸ್.ಶಿವಪ್ರಕಾಶ್‍ರವರು ಈ ಒಂದು ಅಂಶವನ್ನು ಉಲ್ಲೇಖಿಸಿರುವುದರಿಂದ ಅದೇ ಚರ್ಚೆಯ ಪ್ರಮುಖ ಗುರಿಯಾಗಿ ಚರ್ಚೆಗೆತ್ತಿಕೊಳ್ಳಬುದಾಗಿದ್ದ ಇನ್ನಿತರ ಮಹತ್ತರ ಅಂಶಗಳು ಕಣ್ಮರೆಯಾಗಿರುವ ಸಾಧ್ಯತೆ ಇದೆ.
ನನಗನಿಸುವಂತೆ ಇಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚೆಗೊಳಬೇಕಾದ ಸಂಗತಿಗಳು ಎಂದರೆ: ಢಂಕಿನ್‍ರವರ ಸಂಶೋಧನೆಯು ಅದರ ಅಧ್ಯಯನದ ಕೇಂದ್ರವಾದ ವಿಧ್ಯಮಾನದ ಮೇಲೆ ಎಷ್ಟರ ಮಟ್ಟಿಗೆ ಬೆಳಕು ಚೆಲ್ಲುತ್ತದೆ; ಅವರ ಸಂಶೋಧನೆಯ ಪ್ರಾಕ್‍ಕಲ್ಪನೆಗೆ (ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಚನಗಳನ್ನು ಗ್ರಹಿಸಿದಾಗ ಮಾತ್ರ ಅವು ಜಾತಿ ವಿರೋಧಿ ಚಳುವಳಿಗಳಂತೆ ಕಾಣುತ್ತವೆ ಎನ್ನುವ ಪ್ರಾಕ್‍ಕಲ್ಪನೆ) ಇರುವ ಸಮರ್ಥನೆ ಯಾವುದು; ಸಂಶೋಧನೆಯಲ್ಲಿ ಮಂಡಿಸಲಾಗಿರುವ ವಾದ ಎಷ್ಟು ತರ್ಕಬದ್ಧವಾಗಿದೆ ಇತ್ಯಾದಿ. ಚರ್ಚೆ ಈ ನಿಟ್ಟಿನಲ್ಲಿ ಮುಂದುವರೆದಿದ್ದರೆ ಇದೊಂದು ಅರ್ಥಪೂರ್ಣ ಚರ್ಚೆಯಾಗಿರುತ್ತಿತ್ತು ಹಾಗು ಓದುಗರಿಗೂ ಉಪಯುಕ್ತವಾಗುತ್ತಿತ್ತು.
ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?
(ಪ್ರಜಾವಾಣಿಯಲ್ಲಿ CSLC ಯ ಡಂಕಿನ್ ಝಳಕಿ ಮತ್ತು ಎಸ್.ಎನ್. ಬಾಲಗಂಗಾಧರ ’ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?’ ಅನ್ನುವ ಲೇಖನದ ಬಗ್ಗೆ ಚರ್ಚೆ ಹುಟ್ಟುಹಾಕಿದವರು ಎಚ್.ಎಸ್. ಶಿವಪ್ರಕಾಶ್.ಆದರೆ ಸುಮಾರು ೧೫ ದಿನಗಳ ಈ ಇಡಿ ಚರ್ಚೆಯಲ್ಲಿ ಮೂಲ ಲೇಖನದ ವಿರುದ್ಧವಾದ ದನಿಗಳಿಗೆ ಮಾತ್ರ ಇದುವರೆಗೆ ವೇದಿಕೆ ಕಲ್ಪಿಸಿ, ಲೇಖಕರ ಅಭಿಪ್ರಾಯ ಮಂಡನೆಗೆ ಅವಕಾಶವನ್ನೇ ನೀಡಲಾಗಿಲ್ಲ ..!
ಡಂಕಿನ್ ಝಳಕಿ ಯವರ ಮೂಲ ಲೇಖನ ಇಲ್ಲಿದೆ. ಈ ಚರ್ಚೆಯ ಎಲ್ಲಾ ರೀತಿಯ ಅಭಿಪ್ರಾಯಗಳಿಗೂ “ನಿಲುಮೆ” ಮುಕ್ತ ವೇದಿಕೆಯಾಗಲಿದೆ – ನಿಲುಮೆ)
– ಡಂಕಿನ್ ಝಳಕಿ, ಎಸ್.ಎನ್. ಬಾಲಗಂಗಾಧರ
[ಇದು ಚಿಂತನ ಬಯಲು ಸಂಪುಟ ೧, ಸಂಚಿಕೆ ೩ರಲ್ಲಿ ಪ್ರಕಟಗೊಂಡ ಮೂಲ ಲೇಖನದ ಸಂಕ್ಷಿಪ್ತ ಪಾಠ. ಲೇಖನದ ಪೂರ್ಣ ಪಾಠ, ಆಕರ ಗ್ರಂಥಗಳ ಪಟ್ಟಿ ಮತ್ತು ಅಡಿಟಿಪ್ಪಣಿಗಳಿಗಾಗಿ ಮೂಲ ಲೇಖನವನ್ನು ನೋಡಿ ಅಥವಾ ಇವರನ್ನು ಸಂಪರ್ಕಿಸಿ: dunkinjalkiAToutlookDOTcom]
ವಚನಗಳ ಆಧುನಿಕ ಅಧ್ಯಯನಗಳ ಒಂದು ಮರು ಪರಿಶೀಲನೆ
ಕನ್ನಡ ಸಾಹಿತ್ಯದ ಬಹು ಮುಖ್ಯ ಭಾಗವಾಗಿರುವ ವಚನಗಳನ್ನು ‘ಲಿಂಗಾಯತ/ವೀರಶೈವ ಚಳುವಳಿ’ ಅಥವಾ ‘ವಚನ ಚಳುವಳಿ’ ಎಂಬ ಹನ್ನೆರಡನೇ ಶತಮಾನದ ಒಂದು ಆಂದೋಲನದ ಭಾಗವೆಂದು ನೋಡುವುದು ಇಂದು ಒಂದು ವಾಡಿಕೆಯಾಗಿ ಬಿಟ್ಟಿದೆ. ಹನ್ನೆರಡನೇ ಶತಮಾನದ ಈ ಆಂದೋಲನವನ್ನು, ಬುದ್ಧಿಸಂನ ಬಳಿಕ ಭಾರತ ಕಂಡ ಅತ್ಯಂತ ಪ್ರಮುಖ ಜಾತಿ ವಿರೋಧೀ ಚಳುವಳಿ ಎಂಬಂತೆ ಬಿಂಬಿಸಲಾಗಿದೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಈ ವಚನಗಳನ್ನು ಭಾರತ ಕಂಡ ಜಾತಿಯ ವಿರುದ್ಧ ಹೋರಾಡಿದ ಮೊಟ್ಟಮೊದಲ ಚಳುವಳಿಯ ಭಾಗವೆಂದು ಗುರುತಿಸಲಾಯಿತು. ಪ್ರಸ್ತುತ ಬಹುಮತಾಭಿಪ್ರಾಯದ ಪ್ರಕಾರ ಜಾತಿ ವಿರೋಧಿ ವಿಚಾರವು ವಚನ ಚಳುವಳಿಯ ಮತ್ತು ವಚನಗಳ ಮೂಲ ಆಶಯ. ಈ ಪ್ರಸಿದ್ಧ ವಾದಕ್ಕೆ ತರ್ಕದ ಅಥವಾ ನಿಜಾಂಶಗಳ ಯಾವುದೇ ಆಧಾರವಿಲ್ಲ ಎಂಬುದನ್ನು ತೋರಿಸುವುದೇ ಈ ಲೇಖನದ ಉದ್ದೇಶ.
ಈ ವಾದವನ್ನು ನಾವು ಬೆಳೆಸಿಕೊಂಡು ಹೋಗಲು ಹೀಗೊಂದು ಊಹಾಸಿದ್ಧಾಂತವನ್ನು ಮಾಡೋಣ: ವಚನಗಳು ಜಾತಿಯ ವಿರುದ್ಧದ ಚಳುವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು. ಏಕೆಂದರೆ ಜಾತಿ ವಿರುದ್ಧದ ಚಳುವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಊಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. ಈ ಊಹಾಸಿದ್ಧಾಂತದ ಪ್ರಕಾರ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ.
ವಸಾಹತು ಪ್ರಜ್ಞೆಯ ವಿಶ್ವರೂಪ ೨ : ಏನೀ ಮೂಢನಂಬಿಕೆ?
ಕನ್ನಡ ನಿರೂಪಣೆ: ರಾಜಾರಾಮ ಹೆಗಡೆ
ವಿದ್ಯಾವಂತರಿಗೆ ಈ ಶಬ್ದ ಸುಪರಿಚಿತ. ‘ಭಾರತೀಯ ಸಮಾಜದಲ್ಲಿ ಮೂಢನಂಬಿಕೆ ಆಳವಾಗಿ ಬೇರುಬಿಟ್ಟಿದೆ’, ಅಥವಾ ‘ಭಾರತೀಯರು ಯಾವ್ಯಾವುದೋ ಮೂಢನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ’,‘ಈ ಮೂಢನಂಬಿಕೆಗಳನ್ನು ತೊಡೆದು ಹಾಕದ ಹೊರತೂ ನಮ್ಮ ಸಮಾಜ ಉದ್ಧಾರವಾಗುವುದಿಲ್ಲ, ಇತ್ಯಾದಿ ಹೇಳಿಕೆಗಳನ್ನು ಪ್ರತಿಯೊಬ್ಬನೂ ಭಾಷಣ-ಲೇಖನಗಳಲ್ಲಿ, ತರಗತಿಯ ಪಾಠಗಳಲ್ಲಿ ಸಾಕಷ್ಟು ಕೇಳಿರುತ್ತಾನೆ. ಈ ಶಬ್ದದ ಜೊತೆಗೆ ಸಮಾನಾರ್ಥಕವಾಗಿ ‘ಕುರುಡು ನಂಬಿಕೆ’, ‘ಅಂಧ ಶ್ರದ್ಧೆ’, ‘ಗೊಡ್ಡು ಸಂಪ್ರದಾಯಗಳು’ ಇತ್ಯಾದಿ ಶಬ್ದಗಳೂ ಬಳಕೆಯಲ್ಲಿವೆ. ಈ ಶಬ್ದಗಳೆಲ್ಲ ನಮಗೆ ಅರ್ಥವಾಗುತ್ತಿವೆ ಎಂಬುದಾಗಿ ಭಾವಿಸಿಕೊಂಡೇ ನಾವು ಅವನ್ನು ಉಪಯೋಗಿಸುತ್ತಿರುತ್ತೇವೆ. ಇವುಗಳ ಅರ್ಥವನ್ನು ಕೇಳಿದರೆ ‘ಅವು ಅವೈಜ್ಞಾನಿಕ, ಅಜ್ಞಾನದಿಂದ ಮಾಡುವಂಥವು, ಹಾಗಾಗಿ ಅವು ಮೌಢ್ಯ’ ಎಂಬ ಉತ್ತರ ಬರುತ್ತದೆ.
ಹೀಗೊಂದು ಪ್ರಶ್ನೆ ಕೇಳಿಕೊಳ್ಳುವಾ.ಒಂದು ಸಮಾಜದಲ್ಲಿ ಜನರು ಮಾಡುವ ಕೆಲಸಕ್ಕೆಲ್ಲವೂ ವೈಜ್ಞಾನಿಕ ಕಾರಣಗಳಿರಲು ಸಾಧ್ಯವೆ? ಅಂಥವೆಲ್ಲವೂ ಮೂಢನಂಬಿಕೆಯಾಗುತ್ತದೆಯೆ? ಗುರು
ಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸುತ್ತೇವೆ, ಮನಸ್ಸಿಗೆ, ಸಂಬಂಧಕ್ಕೆ ಎಲ್ಲ ಹಿತವೇ, ಆದರೆ ವೈಜ್ಞಾನಿಕ ಕಾರಣ ಗೊತ್ತಿಲ್ಲ. ನಮ್ಮ ವಿದ್ಯಾವಂತರ ಆಧುನಿಕ ಸಮಾಜವನ್ನೇ ತೆಗೆದುಕೊಳ್ಳಿ: ಬೇಸಿಗೆಯಲ್ಲಿ ಸೆಕೆಯಾಗಿ ಬೆವರು ಕಿತ್ತುಕೊಂಡು ಹಿಂಸೆಯಾಗುತ್ತಿರುತ್ತದೆ. ಆದರೂ ಕೋಟು, ಟೈಗಳನ್ನು ಕಟ್ಟಿಕೊಂಡು ಆಫೀಸಿಗೆ ಬರುವುದು ಶಿಷ್ಟಾಚಾರ ಅಥವಾ ಡ್ರೆಸ್ ಕೋಡು. ಕೆಲವರಿಗೆ ಕಡ್ಡಾಯ. ಇದರಲ್ಲಿ ಏನು ವೈಜ್ಞಾನಿಕತೆಯಿದೆ? ಹೀಗೆ ಯಾವುದೇ ಸಮಾಜವನ್ನು ನೋಡಿದರೂ ಕೂಡ ವೈಜ್ಞಾನಿಕ ಕಾರಣಗಳ ಯಾವುದೇ ಹಂಗಿಲ್ಲದೇ ಇಂಥ ಪದ್ಧತಿಗಳು ಅಥವಾ ರೂಢಿಗಳು ಸಮುದಾಯಗಳನ್ನು ಒಟ್ಟಿಗೇ ಹಿಡಿದಿರುತ್ತವೆ, ಸಂಬಂಧಗಳನ್ನು ಬೆಸೆಯುತ್ತಿರುತ್ತವೆ.‘ಅವೈಜ್ಞಾನಿಕ’ ಎಂಬ ಕಾರಣವನ್ನು ಇಟ್ಟುಕೊಂಡು ಇಂಥ ಆಚರಣೆಗಳನ್ನೆಲ್ಲ ತೊಡೆದುಹಾಕಿದರೆ ಯಾವುದಾದರೂ ಮನುಷ್ಯ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವೆ? ಹಾಗಿದ್ದ ಪಕ್ಷದಲ್ಲಿ ಇಂಥ ರೂಢಿಗಳು ಭಾರತೀಯ ಸಮಾಜದಲ್ಲಿ ಮಾತ್ರವೇ ಉಚ್ಛಾಟಿಸಬೇಕಾದ ಪೆಡಂಭೂತವಾಗಿದ್ದು ಹೇಗೆ ಮತ್ತು ಯಾವಾಗ? ಮೂಢ ನಂಬಿಕೆ ಏಕೆ ತೊಡೆಯಬೇಕಾದ ಅನಿಷ್ಠವೆಂಬುದಾಗಿ ನಾವೆಲ್ಲ ನಂಬಿದ್ದೇವೆ?
ಈ ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿ ಪದಗಳೆಲ್ಲ ಕನ್ನಡದಲ್ಲಿ ಅರ್ಥವಿಲ್ಲದ ಶಬ್ದಗಳು.ಅವು ಇಂಗ್ಲೀಷಿನ Superstition ಎಂಬ ಶಬ್ದದ ಕನ್ನಡಾನುವಾದಗಳು. ಭಾರತೀಯ ಭಾಷೆಗಳಲ್ಲಿ ಮೌಢ್ಯ ಎಂದರೆ ಅಜ್ಞಾನ ಎಂಬ ಅರ್ಥವಿದೆ. ಮೂಢ ಎಂದರೆ ಅಜ್ಞಾನಿ. ಆದರೆ ಮೂಢ ನಂಬಿಕೆ ಎನ್ನುವ ಪದಗುಚ್ಛವಿಲ್ಲ. ಅದೇ ಥರ ಅಂಧ ಶ್ರದ್ಧೆ. ಶ್ರದ್ಧೆ ಕುರುಡಾಗಿರುವುದು ಅಂದರೇನು? ಕಣ್ಣಿರುವ ಶ್ರದ್ಧೆ ಅಂತ ಒಂದಿದೆಯೆ? ಭಾರತೀಯ ಭಾಷೆಯಲ್ಲಿ ಈ ಪದವನ್ನು ಅರ್ಥೈಸಲು ಹೋದರೆ ನಗೆಪಾಟಲಾಗುತ್ತದೆ. ಸೂಪರ್‍ಸ್ಟಿಶನ್ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದು ಪರಿಕಲ್ಪನೆಯನ್ನು ಸೂಚಿಸುವ ಪರಿಭಾಷೆ. ಆ ಹಿನ್ನೆಲೆಯಲ್ಲಿ ಮಾತ್ರವೇ ಅರ್ಥವಾಗುವ ಶಬ್ದ.ಈ ಶಬ್ದವು ಮೂಲತಃ ರೋಮನ್ನರಲ್ಲಿ ಬಳಕೆಯಲ್ಲಿದ್ದು, ಅದರರ್ಥ ‘ದೇವರುಗಳ ಕುರಿತು ಅತಿಯಾದ ಹೆದರಿಕೆ’ ಎಂಬುದಾಗಿದೆ. ಇದನ್ನೊಂದು ಒಳ್ಳಯೆ ಲಕ್ಷಣ ಎಂಬುದಾಗಿ ರೋಮನ್ನರೇನೂ ಭಾವಿಸಿರಲಿಲ್ಲ. ಆದರೆ ರೋಮನ್ ಸಂಸ್ಕೃತಿಯನ್ನು ನಾಶಮಾಡಿ ಅದರ ಮೇಲೆ ಪ್ರತಿಷ್ಠಾಪಿತವಾದ ಕ್ರಿಶ್ಚಿಯಾನಿಟಿಯು ರೋಮನ್ನರ ದೇವತೆಗಳನ್ನು ಸುಳ್ಳು ದೇವತೆಗಳೆಂದು ನಿರೂಪಿಸಿತು. ಈ ಸುಳ್ಳು ದೇವತೆಗಳು ಕ್ರೈಸ್ತರ ಗಾಡ್‍ನ ವಿರೋಧಿಯಾದ ಡೆವಿಲ್ಲನ ಮೋಸಗಳು. ಈ ದೇವತೆಗಳ ಮೂಲಕ ಡೆವಿಲ್ಲನು ಜನರನ್ನು ದಾರಿತಪ್ಪಿಸುತ್ತಿದ್ದಾನೆ ಏಕೆಂದರೆ ಅವು ಗಾಡ್‍ನ ವೈರಿಗಳು ಎಂಬುದಾಗಿ ಶಾಸ್ತ್ರವನ್ನು ಬರೆದುಕೊಂಡರು. ಆಗ ಸೂಪರ್‍ಸ್ಟಿಶನ್ ಶಬ್ದಕ್ಕೆ ತನ್ನದೇ ಆದ ಹೊಸ ಅರ್ಥವೊಂದು ಪ್ರಾಪ್ತವಯಿತು. ಅದೆಂದರೆ ‘ ಸುಳ್ಳು ದೇವರುಗಳನ್ನು ಕುರಿತ ಭಯ ಅಥವಾ ಅವನ್ನು ಪೂಜಿಸುವುದು’ ಅಂತ.
ಮತ್ತಷ್ಟು ಓದು 






