ಈ ಯೋಧರು ತಮ್ಮ ಆಳುಗಳಿಗೆ ಕೊಟ್ಟ ಕೂಲಿ ಮುಖ್ಯಮಂತ್ರಿಯೂ ಕೊಡಲಾರ !
– ಸಂತೋಷ್ ತಮ್ಮಯ್ಯ
೧೯೯೯ರ ಜುಲೈ ತಿಂಗಳು. ದೇಶಾದ್ಯಂತ ಕಾರ್ಗಿಲ್ ಯುದ್ಧದ ಬಿಸಿ ವ್ಯಾಪಿಸುತ್ತಿತ್ತು. ಎಲ್ಲೆಲ್ಲೂ ಆಕ್ರೋಶ, ಯೋಧರ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೇಶದ ಮೂಲೆ ಮೂಲೆಗಳಿಂದ ನಿಧಿಸಂಗ್ರಹ, ಪಾಕ್ ಖಂಡನೆ, ಪ್ರತಿಭಟನೆ, ಬಲಿದಾನಿಗಳಿಗೆ ನಮನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂಥ ಒಂದು ದಿನ ಕೊಡಗಿನ ಗೋಣಿಕೊಪ್ಪದಲ್ಲಿ ಕಾರ್ಗಿಲ್ ನಮನದ ಮೆರವಣಿಗೆ ನಡೆಯುತ್ತಿತ್ತು, ಜನ ಕಿಕ್ಕಿರಿದು ಸೇರಿದ್ದರು. ನಾಗರಿಕರು, ಮಾಜಿ ಯೋಧರು, ವರ್ತಕರು, ಸಂತೆಗೆ ಬಂದವರು, ವಿದ್ಯಾರ್ಥಿಗಳು ಸೇರಿದ್ದರು. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಪಾಕ್ ವಿರುದ್ಧ ಕೆಂಡಾಮಂಡಲವಾಗಿ ಮಾತಾಡಿದರು. ಜಯಘೋಷಗಳೊಂದಿಗೆ ಮೆರವಣಿಗೆ ಹೊರಟಿತು. ಮುಶ್ರಫನ ಪ್ರತಿಕೃತಿ ದಹಿಸುವುದರೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ ಎಂದು ಘೋಷಿಸಲಾಯಿತು. ಹೀಗೆ ಮೆರವಣಿಗೆ ಸಾಗಿ ಬಸ್ ಸ್ಟಾಂಡಿಗೆ ಮುಟ್ಟಿ ಮುಶ್ರಫನ ಪ್ರತಿಕೃತಿಗೆ ಇನ್ನೇನು ಬೆಂಕಿ ಹಚ್ಚಬೇಕು, ಅಷ್ಟರಲ್ಲಿ ಪೊನ್ನಂಪೇಟೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರೊಂದು ಮೆರವಣಿಗೆಯ ಮುಂದೆ ಬಂದು ಜಕ್ಕೆಂದು ನಿಂತಿತು. ಜನರು ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕಾರನ್ನು ನೋಡತೊಡಗಿದರು. ನೋಡುತ್ತಿದ್ದಂತೆ ಆ ಕಾರಿಂದ ಬಿಳಿಯಾದ ಸುರುಳಿ ಮೀಸೆಯ ಮುದುಕರೊಬ್ಬರು ಇಳಿದರು. ಅವರ ಕೈ ನಡುಗುತ್ತಿತ್ತು. ಡಬಲ್ ಬ್ಯಾರಲ್ ಬಂದೂಕನ್ನು ಬೇರೆ ಹಿಡಿದಿದ್ದರು. ಒಂದು ಕ್ಷಣ ಆ ಸಾವಿರಾರು ಜನರು ಸ್ತಬ್ದರಾದರು. ಈ ಅಜ್ಜ ನೋಡನೋಡುತ್ತಲೇ ಕೋವಿಗೆ ಕಾಡತೂಸುಗಳನ್ನು ತುಂಬಿಸಿದರು. ಜೈ ಮಾಕಾಳಿ ಎನ್ನುತ್ತಲೇ ಮುಶರಫನ ಪ್ರತಿಕೃತಿಗೆ ಎರಡು ಗುಂಡುಗಳನ್ನು ಹಾರಿಸಿಯೇಬಿಟ್ಟರು! ಸಾವಿರಾರು ಜನ ಸೇರಿದ್ದ ಮೆರವಣಿಗೆ ಸನ್ನಿ ಹಿಡಿದವರಂತೆ ಜಯಘೋಷ ಮೊಳಗಿಸಿತು. ನಂತರ ಆ ಅಜ್ಜನನ್ನು ಪತ್ರಿಕೆಗಳು ಮಾತಾಡಿಸಿದವು. ಆ ಅಜ್ಜ ಹವಾಲ್ದಾರ್ ಮುದ್ದಪ್ಪ. ಬ್ರಿಟೀಷ್ ಕಾಲದಲ್ಲೇ ಆರ್ಮಿ ಸೇರಿ ಎರಡನೆ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ. ಅರವತ್ತೆರಡರ ಯುದ್ದದಲ್ಲಿ ಪಾಲ್ಗೊಂಡು ಚೀನಾದಲ್ಲಿ ಸೆರೆಯಾಳಗಿದ್ದ ವ್ಯಕ್ತಿ. ತಮ್ಮ ೮೫ನೇ ವಯಸ್ಸಿನಲ್ಲೂ ಅವರು “ನಾನು ಈಗಲೂ ಕಾರ್ಗಿಲ್ ಗೆ ಹೋಗಲು ಸಿದ್ಧ” ಎಂದು ಮೀಸೆ ತಿರುವಿ ವರದಿಗಾರರಿಗೆ ಹೇಳಿದ್ದರು. ಮತ್ತಷ್ಟು ಕೆದಕಿ ನೋಡಿದರೆ ಆ ಅಜ್ಜ ದಕ್ಷಿಣ ಕೊಡಗಿನಲ್ಲಿ ಅತಿ ದೊಡ್ಡ ಕಾಫಿ ತೋಟವನ್ನು ಹೊಂದಿದ್ದ ಟಾಪ್ ಹತ್ತು ಜನರಲ್ಲಿ ಒಬ್ಬರು. ಆ ಕಾಲದಲ್ಲೇ ಅವರ ಮಕ್ಕಳು ಹೆಲಿಕಾಫ್ಟರನ್ನು ಖರೀದಿಸಲು ಓಡಾಡುತ್ತಿದ್ದರು.