ಗುರುತ್ವದ ಅಲೆಗಳಲ್ಲಿ ಕೇಳುವ ಬ್ರಹ್ಮಾಂಡದ ಸಂಗೀತ
– ವಿನಾಯಕ ಹಂಪಿಹೊಳಿ
ನೀವು ಅಂತರಿಕ್ಷದ ಆಕಾಶನೌಕೆಯೊಂದರಲ್ಲಿದ್ದೀರಿ ಎಂದು ಭಾವಿಸಿ. ಆ ನೌಕೆಯು ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಚಲಿಸಲಾರಂಭಿಸಿತು ಎಂದಿಟ್ಟುಕೊಳ್ಳಿ. ಆ ನೌಕೆಯ ಕಿಟಕಿ ಬಾಗಿಲುಗಳೆಲ್ಲವೂ ಮುಚ್ಚಿವೆ ಎಂದು ಊಹಿಸಿ. ಆಗ ಅದು ವೇಗೋತ್ಕರ್ಷದಿಂದ ಚಲಿಸುತ್ತಿರುವ ಅನುಭವ ನಿಮಗೆ ನೇರವಾಗಿ ಆಗುವದಿಲ್ಲ. ಅದನ್ನು ಹೇಗೆ ತಿಳಿಯುತ್ತೀರಿ? ಸುಲಭ. ಆಗ ನಿಮ್ಮ ಕೈಯಲ್ಲಿನ ಚೆಂಡನ್ನು ಬಿಟ್ಟು ಬಿಡಿ. ಒಂದು ವೇಳೆ ನೌಕೆಯು ಏಕವೇಗದಿಂದ ಹೋಗುತ್ತಿದ್ದರೆ ಆ ಚೆಂಡು ಅಲ್ಲೇ ಇರುತ್ತದೆ. ನೌಕೆ ವೇಗೋತ್ಕರ್ಷವನ್ನು ಹೊಂದುತ್ತಿದ್ದರೆ ಚೆಂಡು ಮತ್ತು ನೌಕೆಯ ತಳದ ಅಂತರ ಕಡಿಮೆಯಾಗುತ್ತ ಸಾಗಿ ಕೊನೆಗೆ ನಿಮ್ಮ ಕಾಲ ಬಳಿ ಬಂದು ನೌಕೆಯ ತಳ ಭಾಗಕ್ಕೆ ಬಡಿಯುತ್ತದೆ. ಆಗ ನಿಮಗೆ ಚೆಂಡು ಕೆಳಗೆ ಬಿದ್ದಂತೆ ಕಾಣುತ್ತದೆ.
ಸರಿ. ಈ ಕಾಲ್ಪನಿಕ ಪ್ರಯೋಗದ ಲಾಭವೇನು? ತುಂಬಾ ಇದೆ. ಹೊರಗಡೆಯ ಸಂಪರ್ಕವೇ ಇಲ್ಲದ ಅಂಥ ನೌಕೆ ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಮುನ್ನುಗ್ಗುತ್ತಿದ್ದರೆ, ನಿಮಗೆ ಭೂಮಿಯ ಮೇಲೆ ಇದ್ದ ಅನುಭವವೇ ಆಗುತ್ತಿರುತ್ತದೆ. ಎಲ್ಲಿಯವರೆಗೆ ನೀವು ಕಿಟಕಿ ತೆರೆದು ಹೊರಜಗತ್ತನ್ನು ನೋಡುವದಿಲ್ಲವೋ ಅಲ್ಲಿಯವರೆಗೂ ನಿಮಗೆ ಆಕಾಶದಲ್ಲಿದ್ದೇವೆ ಎಂದೇ ಅನಿಸುವದಿಲ್ಲ. ಹಾಗೆ ಅನ್ನಿಸಬೇಕಾದರೆ ನೀವು ಮುಚ್ಚಿರುವ ನೌಕೆಯಿಂದ ಆಚೆಗಿನ ಜಗತ್ತಿನೆಡೆ ಕಣ್ಣು ಹಾಯಿಸಬೇಕು. ಆಗಲೇ “ಒಹೋ! ಭೂಮಿಯ ಮೇಲಿಲ್ಲ!!” ಎಂಬ ಅನುಭವ ಬರುತ್ತದೆ. ಕನಸನ್ನು ಕಾಣುತ್ತಿರುವಾಗ ಈ ಕನಸು ಸುಳ್ಳು ಎಂದು ಎಂದಾದರೂ ಅನಿಸಿದೆಯೇ? “ಒಹೋ! ಕನಸಾ!!” ಎಂಬ ಸುಳ್ಳಿನ ಅರಿವು ಉಂಟಾಗುವದು ಎಚ್ಚರವಾದ ಮೇಲೇ ಅಲ್ಲವೇ? ಹಾಗೇ ಇದು.