ಲೈಂಗಿಕ ದೌರ್ಜನ್ಯ,ಬುದ್ಧಿಜೀವಿಗಳು ಮತ್ತು ಐಡಿಯಾಲಜಿ
– ಅಶ್ವಿನಿ ಬಿ ದೇಸಾಯಿ ಮತ್ತು ಚೈತ್ರ ಎಂ.ಎಸ್
ಆರೋಹಿ ಸಂಶೋಧನಾ ಸಂಸ್ಥೆ, ಜಯನಗರ, ಬೆಂಗಳೂರು
ಹಾಲಿವುಡ್‍ನ ನಿರ್ದೇಶಕ ಹಾರ್ವೆ ವೇನ್‍ಸ್ಟೀನ್‍ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಈ ಕಾರಣಕ್ಕಾಗಿ ‘MeToo’ Hasgtag ಅಡಿಯಲ್ಲಿ ಹೊರಬರುತ್ತಿರುವ ದೌರ್ಜನ್ಯಗಳ ಕಥೆಗಳು ಈಗ ಜಾಗತಿಕ ಸುದ್ದಿಯಾಗಿದೆ. ಈ ಪ್ರತಿಕ್ರಿಯೆಗಳು ಒಳ್ಳೆಯ ಬೆಳವಣಿಗೆಯೆಂದು ಭಾರತದ ಸ್ತ್ರೀವಾದಿ ಮತ್ತು ಪ್ರಗತಿಪರರ ಅಭಿಪ್ರಾಯವಾಗಿದೆ. ಈ ನಡುವೆ, ‘MeToo’ ಚಳವಳಿಯ ಭಾಗವಾಗಿ ರಾಯಾ ಸರ್ಕಾರ್ ಎಂಬ ವಿದ್ಯಾರ್ಥಿನಿಯೊಬ್ಬಳು ಕೆಲವು ಭಾರತೀಯ ಪ್ರಾಧ್ಯಾಪಕರನ್ನು ಲೈಂಗಿಕ ಕಿರುಕುಳದಂಥ ಕೃತ್ಯಗಳಲ್ಲಿ ಆರೋಪಿಗಳೆಂದು ಗುರುತಿಸಿದ್ದಾಳೆ. ಈ ಪಟ್ಟಿಯಲ್ಲಿ ಜೆಎನ್‍ಯು, ಜಾಧವಪುರ ವಿಶ್ವವಿದ್ಯಾನಿಲಯಗಳಂಥ ಸಂಸ್ಥೆಗಳಿಂದ ಹಿಡಿದು, ಚಿಂತಕರಾದ ಕೌಶಿಕ್ ಬಸು, ಸದಾನಂದ ಮೆನನ್, ದೀಪೇಶ್ ಚಕ್ರವರ್ತಿಯವರಿಂದ ಪಾರ್ಥ ಚಟರ್ಜಿಯವರೆಗೆ ಅನೇಕರ ಹೆಸರುಗಳಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಆರೋಪಿಗಳು ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು, ಆದ್ದರಿಂದ ಲೈಂಗಿಕ ದೌರ್ಜನ್ಯದ ಸಮಸ್ಯೆಯೇ ಜಾತಿವ್ಯವಸ್ಥೆಯ ಇನ್ನೊಂದು ರೂಪವೆಂದು ವಾದಿಸಿದ್ದಾರೆ. ಮರುಕ್ಷಣ ಮಾಲತಿ ಕುಮಾರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವ ದಲಿತ-ಬಹುಜನ ಅಧ್ಯಾಪಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಕಾಂಚ ಇಳಯ್ಯರಿಂದ ಹಿಡಿದು ಅನೇಕ ದಲಿತ ಚಿಂತಕರ ಹೆಸರು ಸೇರಿಕೊಂಡಿದೆ. ಚಿಂತಕರನೇಕರು ಈ ಪಟ್ಟಿಯನ್ನು ಇದು ಮೇಲ್ಜಾತಿಯ ಹುನ್ನಾರವೆಂದು ಚರ್ಚಿಸಿದ್ದೂ ಆಗಿದೆ.