ವಿಷಯದ ವಿವರಗಳಿಗೆ ದಾಟಿರಿ

Posts tagged ‘Sahitya Academy’

23
ಸೆಪ್ಟೆಂ

ಅಕಾಡೆಮಿ “ಗೌರವ” ಮೂರಾಬಟ್ಟೆ

– ರೋಹಿತ್ ಚಕ್ರತೀರ್ಥ

ಮೊನ್ನೆ ಸೆಪ್ಟೆಂಬರ್ 19ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆ.ಎಸ್.ಭಗವಾನ್ ಸೇರಿದಂತೆ ಒಟ್ಟು ಐವರಿಗೆ ಗೌರವ ಪ್ರಶಸ್ತಿ ಕೊಟ್ಟಿತು. ಜೊತೆಗೆ ಇನ್ನೂ ಹಲವು ಸಾಹಿತಿಗಳಿಗೆ ಅವರ ಪುಸ್ತಕಗಳನ್ನು ಆಯ್ದು ಪ್ರಶಸ್ತಿ ಕೊಟ್ಟಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ

ಕರ್ನಾಟಕ ಸಾಹಿತ್ಯ ಅಕಾಡೆಮಿ

ಈ ಆಯ್ಕೆ ನಾಡಿನಾದ್ಯಂತ ಹಲವು ಜನರ ಹುಬ್ಬೇರುವಂತೆ ಮಾಡಿತು. ಸಿದ್ದರಾಮಯ್ಯ ಆಡಳಿತದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಿನಕ್ಕೊಂದರಂತೆ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವುದಕ್ಕಾಗಿಯೇ ತಾನು ಬದುಕಿದ್ದೇನೆ ಎನ್ನುವುದನ್ನು ಮತ್ತೆಮತ್ತೆ ಹೇಳುತ್ತಿರುವ ಭಗವಾನ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ ಅವರನ್ನು ವಿರೋಧಿಸುವವರು ಮಾತ್ರವಲ್ಲ ಬೆಂಬಲಿಗರ ಮನಸ್ಸಲ್ಲೂ ಒಂದು ಕ್ಷಣ ಹಾದುಹೋದದ್ದು ಸುಳ್ಳಲ್ಲ. ಭಗವಾನ್ ಮತ್ತು ಅವರ ಎಲ್ಲ ಅಪದ್ಧಗಳನ್ನೂ ಬೆಂಬಲಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸುತ್ತಿರುವ ಶಿಷ್ಯರು ಕೂಡ ಈಗ “ಅವರ ಕಿರುಚಾಟಗಳನ್ನು ಪರಿಗಣ ಸಬಾರದು. ಕೇವಲ ಕೃತಿಗಳನ್ನಷ್ಟೇ ಎದುರಿಟ್ಟುಕೊಂಡು ಪ್ರಶಸ್ತಿ ಕೊಡಬೇಕು” ಎಂಬ ರಾಗ ಹಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಸಾಹಿತ್ಯ ಅಕಾಡೆಮಿಯ ಏಕಪಕ್ಷೀಯ ತೀರ್ಮಾನದ ವಿರುದ್ಧ ಜನಮತ ರೂಪಿಸುವ ಕೆಲಸ ಕೈಗೆತ್ತಿಕೊಂಡೆವು. ಈ ಒಟ್ಟು ಹೋರಾಟದ ಒಂದು ಸ್ಥೂಲಸ್ವರೂಪವನ್ನು ಕನ್ನಡಿಗರು ಅರಿಯಬೇಕು ಎಂಬ ಕಾರಣಕ್ಕೆ ಈ ಲೇಖನ ಬರೆಯುತ್ತಿದ್ದೇನೆ.

ನಮ್ಮ ಹೋರಾಟದ ರೂಪುರೇಷೆಗಳು:
ನಮ್ಮದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿರ್ಧಾರದ ವಿರುದ್ಧದ ಹೋರಾಟ. ಅಕಾಡೆಮಿ ಪ್ರಕಟಿಸಿರುವ ಪಟ್ಟಿಯು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದನ್ನು ಸಿದ್ಧಪಡಿಸುವಾಗ ಯಾರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಪಟ್ಟಿಯಲ್ಲಿ ನಕ್ಸಲ್ ಚಳವಳಿಗೆ ಬೆಂಬಲ ಕೊಟ್ಟವರು, ನೇರವಾಗಿ ನಕ್ಸಲ್ ಹೋರಾಟಗಳಲ್ಲಿ ಭಾಗಿಯಾಗಿದ್ದವರು, ಎಡಪಂಥೀಯ ಚಿಂತನೆ ಇರುವವರು, ಸರಕಾರದ ವಿವಿಧ ಸವಲತ್ತುಗಳನ್ನು ಈಗಾಗಲೇ ಅನುಭವಿಸಿರುವವರು ಮತ್ತು ಸರಕಾರಕ್ಕೆ ಸದಾ ಸರ್ವದಾ ಬೆಂಬಲ ಸೂಚಿಸುತ್ತ ಜನರ ದಾರಿ ತಪ್ಪಿಸುತ್ತಿರುವವರು ಪ್ರಮುಖವಾಗಿ ತುಂಬಿಕೊಂಡಿದ್ದಾರೆ. ಕೆಲವರಂತೂ ಏನು ಬರೆದಿದ್ದಾರೆ, ಎಂಥಾ ಸಾಹಿತ್ಯ ಕೊಟ್ಟಿದ್ದಾರೆ, ಅವರು ಬರೆದಿದ್ದನ್ನು ಓದಲು ಸಾಧ್ಯವೇ ಎನ್ನುವುದನ್ನೂ ಅಕಾಡೆಮಿ ಗಣನೆಗೆ ತೆಗೆದುಕೊಂಡಿಲ್ಲ. ಸರಕಾರದ ಹಿಂಬಾಗಿಲಿನಲ್ಲಿ ಸದಾ ಓಡಾಡಿಕೊಂಡಿರುವ ಹಲವುಹತ್ತು “ಗಣ್ಯ”ರಿಗೆ ಈ ಬಾರಿಯ ಪ್ರಶಸ್ತಿಗಳನ್ನು ಪ್ರಸಾದ ಎಂಬಂತೆ ಹಂಚಲಾಗಿದೆ. ಇದು ಮೇಲ್ನೋಟಕ್ಕೇ ಸಿದ್ಧವಾಗುವ ಸಂಗತಿ. ಹಾಗಾಗಿ, ಈ ಸಲದ ಪ್ರಶಸ್ತಿಪಟ್ಟಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸಾಹಿತ್ಯ ಅಕಾಡೆಮಿ ತನ್ನ ಗೌರವವನ್ನೇ ಮಣ್ಣುಗೂಡಿಸಿಕೊಂಡಿದೆ ಎಂದರೆ ತಪ್ಪಲ್ಲ. ಅಕಾಡೆಮಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಸಾಹಿತಿಗಳನ್ನು ಆರಿಸಿದೆ? ಆಯ್ಕೆ ಸಮಿತಿಯನ್ನು ಆರಿಸಿದವರು ಯಾರು? ಈ ಆಯ್ಕೆ ಸಮಿತಿಯನ್ನು ಆರಿಸಲಿಕ್ಕೆ ಏನು ಮಾನದಂಡಗಳನ್ನು ಇಟ್ಟುಕೊಂಡಿದ್ದರು? ನಕ್ಸಲ್ ಚಳವಳಿ, ಸಾಮಾಜಿಕ ಅಶಾಂತಿ ಉಂಟುಮಾಡುವುದು, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು – ಇವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿ ಕೊಟ್ಟರೆ, ಮುಂದೆ ಇದೇ ದಾರಿ ಹಿಡಿದು ಪ್ರಶಸ್ತಿಗಾಗಿ ಹಂಬಲಿಸುವವರ ಸಂಖ್ಯೆ ಬೆಳೆಯುವುದಿಲ್ಲವೆ? ಸಾಹಿತ್ಯ ಅಕಾಡೆಮಿ ಯಾವ ಪರಂಪರೆಗೆ ನಾಂದಿ ಹಾಡುತ್ತಿದೆ? – ಇವು ನಮ್ಮ ಪ್ರಶ್ನೆಗಳು. ಇವನ್ನೇ ಮುಂದಿಟ್ಟುಕೊಂಡು ನಾವು ಪೆಟಿಶನ್ (ಸಹಿಸಂಗ್ರಹ ಅಭಿಯಾನ) ಪ್ರಾರಂಭಿಸಿದೆವು.

ಸಹಿ ಸಂಗ್ರಹ ಅಭಿಯಾನ:
ಚೇಂಜ್.ಆರ್ಗ್ ಎಂಬ ವೆಬ್‍ಸೈಟ್ ಮೂಲಕ ನಾವು “ಸಾಹಿತ್ಯ ಅಕಾಡೆಮಿ ತನ್ನ ಪಟ್ಟಿಯನ್ನು ಪರಿಷ್ಕರಿಸಬೇಕು” ಎಂಬ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆವು. ಅದು ಪ್ರಾರಂಭವಾಗಿ 24 ತಾಸುಗಳು ಕಳೆಯುವುದರೊಳಗೇ ಸುಮಾರು ಐದು ಸಾವಿರ ಜನ ಬೆಂಬಲ ಸೂಚಿಸಿ ಸಹಿ ಮಾಡಿದರು. ಹೀಗೆ ಸಹಿ ಮಾಡಿರುವ ಪ್ರತಿಯೊಬ್ಬರ ಹೆಸರಲ್ಲೂ ಒಂದೊಂದು ಪತ್ರ ಕರ್ನಾks-bhagwan_650x400_51441853310ಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕರ್ನಾಟಕ ರಾಜ್ಯಪಾಲರಿಗೆ ಹೋಗುತ್ತಿದೆ. ಸೆಪ್ಟೆಂಬರ್ 22ರ ಮುಂಜಾನೆ, ಈ ಅಭಿಯಾನ ಸುಮಾರು 8000 ಸಹಿಗಳನ್ನು ಸಂಗ್ರಹಿಸಿದೆ. ಅಂದರೆ ಇಷ್ಟೂ ಜನರ ಪತ್ರಗಳು ಈ ಮೇಲೆ ಹೇಳಿದ ಮೂರು ಜನಕ್ಕೆ ತಲುಪಿವೆ. ಆದರೆ, ನಮ್ಮ ಅಭಿಯಾನವನ್ನು ಲೇವಡಿ ಮಾಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು “ಇದು ಪೂರ್ಣಯೋಚನೆ ಮಾಡದ, ಅರೆಬೆಂದ ಮನಸ್ಥಿತಿಯ ಯುವಕರ ಪ್ರಲಾಪ” ಎಂದಿದ್ದಾರೆ. ಮುಂದುವರೆದು “ಭಗವಾನರಿಗೆ ಪ್ರಶಸ್ತಿ ಕೊಟ್ಟಿರುವುದನ್ನು ಸಹಿಸದ ಕೆಲವರು ಇದ
ಕ್ಕೆ ರಾಜಕೀಯ ಬಣ್ಣ ಲೇಪಿಸುತ್ತಿದ್ದಾರೆ” ಎಂದೂ ಗಂಭೀರವಾದ ಆರೋಪ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯಿಂದ ನಾವು ಇಂಥ ಕೀಳುಮಟ್ಟದ ಭಾಷಾಪ್ರಯೋಗವನ್ನೂ ನಿಂದನೆಯನ್ನೂ ನಿರೀಕ್ಷಿಸಿರಲಿಲ್ಲ. ಆದರೆ, ಅವರ ಬಗ್ಗೆ ನಾವು ಯಾವ ಬಗೆಯ ಪ್ರತಿನಿಂದನೆಯನ್ನೂ ಮಾಡುವವರಲ್ಲ. ಮನುಷ್ಯರು ತಮ್ಮ ಸಂಸ್ಕøತಿಗೆ ತಕ್ಕಂತೆ ತಮ್ಮ ನಾಲಗೆಯನ್ನು ಬಳಸುವುದು ಸ್ವಾಭಾವಿಕ. ಎರಡೇ ದಿನಗಳಲ್ಲಿ ಸಹಿಸಂಗ್ರಹ ಅಭಿಯಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದೆ. ರಾಷ್ಟ್ರೀಯ ವೃತ್ತಪತ್ರಿಕೆಗಳು ಈ ಅಭಿಯಾನದ ಬಗ್ಗೆ ಸ್ವಯಂಪ್ರೇರಿತರಾಗಿ ಸುದ್ದಿ ಪಡೆದು ಪ್ರಕಟಿಸಲಾರಂಭಿಸಿವೆ. ದೆಹಲಿಯಲ್ಲಿರುವ ಕನ್ನಡಿಗರು ತಮ್ಮ ವಾಟ್ಸಾಪ್ ಗ್ರೂಪ್‍ಗಳಲ್ಲಿ ಅಭಿಯಾನದ ಲಿಂಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೂರದ ಅಮೆರಿಕದಲ್ಲಿರುವ ಕನ್ನಡಿಗರು ಇದನ್ನೊಂದು ಸ್ವಂತ ಜವಾಬ್ದಾರಿ ಎಂಬಂತೆ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ತಾವು ಸಹಿ ಮಾಡುವುದಲ್ಲದೆ ತಮ್ಮ ಎಲ್ಲ ಗೆಳೆಯರಿಗೂ ಮಾಹಿತಿ ನೀಡಿ ಅವರನ್ನೂ ಸಹಿ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸರಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದ ಮೇಲೂ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರಾ? ಹಾಗಾದರೆ ಜನಾಭಿಪ್ರಾಯಕ್ಕೆ ಏನು ಬೆಲೆ? ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಪ್ರಶ್ನೆಗಳನ್ನು ಕೇಳಿದರೂ ಅವಾವುದಕ್ಕೂ ಉತ್ತರಿಸದೆ ತನ್ನ ಮೂಗಿನ ನೇರಕ್ಕೆ ನಡೆದರೆ ಸಾಹಿತ್ಯ ಅಕಾಡೆಮಿ ತನ್ನ ವಿಶ್ವಾಸಾರ್ಹತೆಯನ್ನು ನೆಲಕ್ಕೆ ಕೊಡವಿದ ಹಾಗೆ ಅಲ್ಲವೆ? ಪ್ರಜಾಪ್ರಭುತ್ವ ಎನ್ನುವುದಕ್ಕೆ ಅರ್ಥ ಏನು? ಇದು ನಮ್ಮ ಪ್ರಶ್ನೆ. ಸಹಿ ಸಂಗ್ರಹ ಅಭಿಯಾನದಲ್ಲಿ ಇನ್ನಷ್ಟು ಮತ್ತಷ್ಟು ಸಾವಿರಗಳು ಜಮೆಯಾಗುತ್ತಾ ಹೋದಂತೆಲ್ಲ ನಮ್ಮ ಪ್ರಶ್ನೆಗಳಿಗೂ ಹೆಚ್ಚುಹೆಚ್ಚಿನ ಬಲ ಬರುತ್ತಾ ಹೋಗುತ್ತದೆ.

ಇದು ಪ್ರಾರಂಭ:
ಕೆಲವರು ನಾವೇಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೇವೆ ಎನ್ನುವುದರ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ! “ಅಯ್ಯೋ ಬಿಡಿ ಸಾರ್, ನೀವು ಸುದ್ದಿ ಮಾಡದೇ ಹೋಗಿದ್ದರೆ ಈ ಪ್ರಶಸ್ತಿಪಟ್ಟಿ ಬಂದುಹೋದದ್ದೂ ನಮಗೆ ತಿಳಿಯುತ್ತಿರಲಿಲ್ಲ. ನೀವ್ಯಾಕೆ ಇದರ ಬಗ್ಗೆ ಚಿಂತೆ ಮಾಡುತ್ತೀರಿ. ಯಾರೋ ಒಂದಷ್ಟು ಜನ ಪಡೆಯುತ್ತಾರೆ, ಜನ ಮರೆಯುತ್ತಾರೆ. ಬಿಟ್ಟುಬಿಡಿ” ಎಂದು ಕೆಲವರು ಸಲಹೆ ಕೊಟ್ಟರು. ಆದಾಗ್ಯೂ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಲು ಯೋಚಿಸಿದ್ದೇವೆ. ಯಾಕೆಂದರೆ, ಈ ಪ್ರಶಸ್ತಿ, ಪದವಿ ಇತ್ಯಾದಿಗಳೆಲ್ಲವೂ ಒಂದು ದೊಡ್ಡ ಆಟದ ಸಣ್ಣಸಣ್ಣ ಭಾಗಗಳಷ್ಟೆ.

ಗಮನಿಸಿ:
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕ ಸರಕಾರ ಆರಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೇರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೈಕೆಳಗೆ ಬರುವ ಸಂಸ್ಥೆ. ಅಂದರೆ, ಇಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ನಮ್ಮ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೆ ನಿಮಗೆ, ಅಕಾಡೆಮಿ ವ್ಯವಹಾರದಲ್ಲಿ ಸರಕಾರ ಹೇಗೆ ಮೂಗು ತೂರಿಸಿರಬಹುದು ಎಂಬ ಅಂದಾಜು ಸಿಕ್ಕಿರಬಹುದು. ತಾನು ಅಧಿಕಾರದಲ್ಲಿರುವಾಗ ತನ್ನ ಹಿಂಬಾಲಕರಿಗೆ, ಹೊಗಳುಭಟರಿಗೆ ಪ್ರಶಸ್ತಿ-ಪುರಸ್ಕಾರ ಕೊಟ್ಟು ಸಂಪ್ರೀತಗೊಳಿಸಬೇಕೆನ್ನುವುದು ಈ ಸರಕಾರದ ಧೋರಣೆ. ಸಾಹಿತ್ಯ ಅಕಾಡೆಮಿಯನ್ನು ಅದಕ್ಕಾಗಿ ವೇದಿಕೆಯಾಗಿ ಬಳಸಿಕೊಳ್ಳುವ; ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಸಾಹಿತಿಗಳಿಗೆ ಅಕಾಡೆಮಿ ಪ್ರಶಸ್ತಿಗಳನ್ನು ಕೃತಜ್ಞತಾರೂಪದಲ್ಲಿ ಹಂಚುವ ಕೆಲಸವನ್ನು ಈ ಸರಕಾರ ಮಾಡುವುದು ನಿಚ್ಚಳ. ಭಗವಾನ್ ಮತ್ತಿತರಿಗೆ ಪ್ರಶಸ್ತಿ ಸಿಕ್ಕಿರುವುದು ಈ ಆಧಾರದ ಮೇಲೆ ಎನ್ನುವುದೇ ಬಹುಜನರ ಊಹೆ.
ಕಳೆದ ಎರಡು-ಮೂರು ವರ್ಷಗಳಿಂದಲೂ ಭಗವಾನ್ ನೀಡಿರುವ ಹೇಳಿಕೆಗಳೆಲ್ಲವೂ ರಾಮಾಯಣ, ಭಗವದ್ಗೀತೆ, ಮಹಾಭಾರತ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಪಟ್ಟವು. ಒಂದು ಎಲೆಕ್ಟ್ರಾನಿಕ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದರೂ ಈ ವ್ಯಕ್ತಿ “ರಾಮಾಯಣ ಸುಳ್ಳು, ರಾಮನಿಗೆ ಅಪ್ಪ ಇಲ್ಲ, ಆತ ಹೆಂಗಸರೊಂದಿಗೆ ಮದ್ಯ ಸೇವಿಸುತ್ತಿದ್ದ, ಮಹಾಭಾರತ ವ್ಯಭಿಚಾರದ ಕೃತಿ, ಕೃಷ್ಣ ನಮ್ಮನ್ನು ಯುದ್ಧಕ್ಕೆ ಪ್ರೇರೇಪಿಸುತ್ತಾನೆ” ಇತ್ಯಾದಿ ವಿಷಯಗಳನ್ನೇ ಹೇಳುತ್ತಾರೆಂದು ಜನ ಊಹಿಸುವ ಮಟ್ಟಿಗೆ ಅವರು ಸಮಾಜದಲ್ಲಿ ಕುಖ್ಯಾತರಾಗಿದ್ದಾರೆ. ಅಂದರೆ, ಯಾವುದೋ ಒಂದು ನಿರ್ಧಿಷ್ಟ ಪಂಗಡ ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬಹುಸಂಖ್ಯಾತರ ಭಾವನೆಗಳ ಜೊತೆ ಆಟವಾಡುವುದನ್ನು ಉದ್ಯೋಗ ಮಾಡಿಕೊಂಡಿದೆ ಎಂದು ಹೇಳಬೇಕಾಗಿದೆ. ಪ್ರೊ. ನಾರಾಯಣಾಚಾರ್ಯರು ಬರೆದ “ವಾಲ್ಮೀಕಿ ಯಾರು?” ಪುಸ್ತಕವನ್ನು ನಿಷೇಧಿಸಬೇಕೇ ಬೇಡವೇ ಎಂದು ನಿರ್ಧರಿಸುವ ಸಮಿತಿಯಲ್ಲೂ ವಾಲ್ಮೀಕಿ ರಾಮಾಯಣ ಓದದ, ಸಂಸ್ಕøತ ಗೊತ್ತಿಲ್ಲದ ಮತ್ತು ರಾಮಾಯಣದ ಬಗ್ಗೆ ನಿತ್ಯನಿರಂತರ ದ್ವೇಷ ಕಾರುತ್ತಿರುವ ಭಗವಾನ್ ಸ್ಥಾನ ಪಡೆದಿದ್ದಾರೆ ಎಂದರೆ ನಮ್ಮ ಸರಕಾರ ಒಬ್ಬ ವಿಕೃತ ಚಿಂತನೆಯ ವ್ಯಕ್ತಿಯನ್ನು ಯಾವ ಪರಿಯಲ್ಲಿ ಬೆಂಬಲಿಸುತ್ತಿದೆ, ಜನಸಾಮಾನ್ಯರು ಗಮನಿಸಬಹುದು.

ಸರಕಾರದ ಜೊತೆ ಸೇರಿಕೊಂಡಿರುವ ಕೆಲವು ದುಷ್ಟಶಕ್ತಿಗಳು ಮಾಧ್ಯಮರಂಗವನ್ನು ತಮ್ಮ ಆಡುಂಬೊಲವಾಗಿ ಬಳಸಿಕೊಳ್ಳುತ್ತಿವೆ. ಜನ ಪೋಲೀಸ್ ಶಕ್ತಿಗೆ ಹೆದರುತ್ತಾರೆ ಎಂದು ನಂಬಿರುವ ಸರಕಾರ ಎಂದು ತನ್ನ ಮಾತಿನಲ್ಲಿ ಶಕ್ತಿ ಇಲ್ಲವೆಂದು ಮನವರಿಕೆ ಮಾಡಿಕೊಳ್ಳುತ್ತದೋ ಅಂದಿನಿಂದ ಪೋಲೀಸ್ ಭಾಷೆಯಲ್ಲಿ ಮಾತಾಡತೊಡಗುತ್ತದೆ. ಸಾರ್ವಜನಿಕ ವೇದಿಕೆಯಲ್ಲಿ ಅಸಹ್ಯ ಹುಟ್ಟಿಸುವ ಶಬ್ದಗಳನ್ನು ಬಳಸಿದ್ದ ಸರಕಾರದ ಒಬ್ಬ ಮುಖ್ಯ ಅಧಿಕಾರಿ, ನಿಲುಮೆ ಫೇಸ್‍ಬುಕ್ ಪೇಜಿನಲ್ಲಿ ನಡೆದ ಚರ್ಚೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಜನರ ಮೇಲೆ ಕೇಸ್ ಹಾಕಿ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಬಗ್ಗುಬಡಿಯಲು ನೋಡಿದ್ದು ಇನ್ನೂ ಹಸಿರಾಗಿದೆ. ಈಗಲೂ ಅಷ್ಟೆ, ಭಗವಾನ್ ಆಯ್ಕೆಯನ್ನು ಪ್ರಶ್ನಿಸಿ ಸಾತ್ವಿಕ ಹೋರಾಟ ಮಾಡುತ್ತಿರುವವರ ಧೈರ್ಯ ಕುಂದಿಸಲು ಇವರು ಪತ್ರಿಕೆಗಳನ್ನು ಬಳಸಿಕೊಳ್ಳತೊಡಗಿದ್ದಾರೆ. ಇಲ್ಲಿ ಸರಕಾರವನ್ನು ಪ್ರಶ್ನಿಸಿದವನು ಖಳನಾಗುತ್ತಾನೆ; ದುಷ್ಕರ್ಮಿಯಾಗುತ್ತಾನೆ! ಭಗವಾನ್ ಮೇಲೆ ಕೇಸು ದಾಖಲಾದ ಮೇಲೆ, ಸರಕಾರ ಅವರಿಗೆ ಗನ್‍ಮ್ಯಾನ್ ಸೌಲಭ್ಯ ಒದಗಿಸುತ್ತದೆ! ಭಗವಾನ್, ಕರ್ನಾಟಕದಿಂದ ಪಾರಾಗಿ ಕೇರಳ ರಾಜ್ಯಕ್ಕೆ ಹೋಗಲು ಸರಕಾರವೇ ಮುಂದೆ ನಿಂತು ಸಹಕರಿಸುತ್ತದೆ. ಇದು ಇಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕಿಂತ ಜಂಗಲ್ ರಾಜ್ ಎಷ್ಟೋ ಪರವಾಯಿಲ್ಲ ಎನ್ನಬಹುದು!

ಬಹುಶಃ ನಮ್ಮ ರಾಜ್ಯ ಸರಕಾರಕ್ಕೆ ಕೋಮುಸೌಹಾರ್ದ ಬೇಕಾಗಿಲ್ಲ. ರಾಜ್ಯದಲ್ಲಿ ಹೇಗಾದರೂ ಮಾಡಿ ಒಂದು ಕೋಮುಗಲಭೆ ಎಬ್ಬಿಸಬೇಕು ಮತ್ತು ಅದಕ್ಕೆ ಹಿಂದೂಗಳನ್ನೂ ಬಿಜೆಪಿಯನ್ನೂ ಕೇಂದ್ರ ಸರಕಾರವನ್ನೂ ಗುರಿಯಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರ ಭಾವಿಸಿದಂತಿದೆ. ಜಾತಿದ್ವೇಷ, ಧರ್ಮದ್ವೇಷದ ಹೇಳಿಕೆಗಳನ್ನು ನಿರಂತರ ಹೇಳುವ ಭಗವಾನ್‍ರಿಗೆ ಸರಕಾರವೇ ಮುಂದೆ ನಿಂತು ಪೋಲೀಸ್ ರಕ್ಷಣೆ ಒದಗಿಸುತ್ತಿದೆ. ಭಗವಾನ್ ಮೇಲೆ ದಾಖಲಾಗಿರುವ ಹಲವು ಪೋಲೀಸ್ ಕೇಸುಗಳನ್ನು ತಣ್ಣಗಾಗಿಸಲಾಗಿದೆ. ಇದು ಸರ್ವಾಧಿಕಾರವಲ್ಲದೆ ಬೇರೇನೂ ಅಲ್ಲ. ಕಲ್ಬುರ್ಗಿ ಕೊಲೆ ನಡೆದಾಗ ಒಬ್ಬ ತರುಣ ಟ್ವೀಟ್ಟರ್‍ನಲ್ಲಿ 140 ಅಕ್ಷರ ಬರೆದುಕೊಂಡ ಎಂಬ ವಿಷಯಕ್ಕೇ ಅವನನ್ನು ಬಂಧಿಸಿ ಪೋಲೀಸ್ ಟ್ರೀಟ್‍ಮೆಂಟ್ ಕೊಡುವ ಸರಕಾರ, ವರ್ಷಗಳಿಂದ ನೂರಾರು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟರೂ ಭಗವಾನ್ ಯಾವುದೇ ವಿಚಾರಣೆಗೆ ಗುರಿಯಾಗದಂತೆ ನೋಡಿಕೊಳ್ಳುತ್ತಿದೆ. ಇದು ಕುಂಭಕರ್ಣನನ್ನು ಸಾಕಿದ ರಾವಣರಾಜ್ಯದ ಕತೆಗಿಂತ ಬೇರೆಯಾಗಿದೆಯೇ? ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ಸಮಾನತೆಗಳ ಬಗ್ಗೆ ಭಾಷಣ ಬಿಗಿಯುವ ಸರಕಾರದ ನಾಯಕರು ಭಗವಾನ್‍ಗೆ ನೀಡಿರುವ ಸವಲತ್ತುಗಳ ಬಗ್ಗೆ ಯಾವ ಸ್ಪಷ್ಟೀಕರಣ ಕೊಡುತ್ತಾರೆ?

ಸರಕಾರೀ ಕಚೇರಿಗಳು, ಇಲಾಖೆಗಳು, ಶಿಕ್ಷಣಸಂಸ್ಥೆ, ನಿಗಮ, ಪ್ರಾಧಿಕಾರ ಮತ್ತು ಮಾಧ್ಯಮ ರಂಗಗಳಲ್ಲಿ ಹಿಂದೂ ಭಾವನೆಗಳನ್ನು ತುಳಿಯುವ ಮನಸ್ಥಿತಿ ಇರುವ ವ್ಯಕ್ತಿಗಳನ್ನೇ ಚಾಣಾಕ್ಷತನದಿಂದ ತುಂಬಿಸುತ್ತಿರುವ ಸರಕಾರ, ತನ್ನನ್ನು ಹೊಗಳುವ, ಬೆಂಬಲಿಸುವ, ಬಹುಪರಾಕ್ ಎನ್ನುವವರ ಬಳಗವನ್ನು ಬೆಳೆಸುತ್ತಿದೆ. ಇದು ಏಕಚಕ್ರಾಧಿಪತ್ಯದ ಲಕ್ಷಣ. ಸರಕಾರೀ ಕಚೇರಿಗಳೂ ಇಲಾಖೆಗಳೂ ಸದ್ಯಕ್ಕೆ ಬುದ್ಧಿಜೀವಿಗಳ ಒಡ್ಡೋಲಗಗಳಾಗಿವೆ. ಇವರು ಮಾಡುತ್ತಿರುವ ರಾಜಕೀಯವಂತೂ ಅತ್ಯಂತ ಹೊಲಸು. ಸ್ವಜಾತಿಗೇ ಮೊದಲ ಮಣೆ. ದಲಿತ, ಅಹಿಂದ ಇತ್ಯಾದಿ ಪದಗಳನ್ನು ಉದುರಿಸಿದರೆ ಸಾಕು ಮಾನ-ಸನ್ಮಾನ. ತಾನು ಪ್ರಗತಿಪರ, ತಳಸ್ಪರ್ಶಿ ಹೋರಾಟಗಾರ ಎಂದು ಬಿಂಬಿಸಿಕೊಂಡರೆ ಸಾಕು, ಅವರಿಗೆ ಹಾರತುರಾಯಿ. ಕನ್ನಡಪ್ರಭದಂಥ ಪತ್ರಿಕೆಯಲ್ಲಿ ಬಲಪಂಥೀಯ ಚಿಂತನೆಗಳಿಗೂ ಜಾಗ ಕೊಡುತ್ತಿದ್ದ ವಿಶ್ವೇಶ್ವರ ಭಟ್ಟರಂಥ ಸಂಪಾದಕರು ಅನಿವಾರ್ಯವಾಗಿ ಕೆಲಸ ಬಿಡಬೇಕಾದಾಗ ಕರ್ನಾಟಕದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು “ಈಗ ಕನ್ನಡಪ್ರಭ ಓದುವಂತಾಗಿದೆ” ಎಂದು ನಿಟ್ಟುಸಿರುಬಿಡುತ್ತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಂದರೆ, ಇವರಿಗೆ ತಮ್ಮದಲ್ಲದ ಯಾವುದೇ ವಿಚಾರಧಾರೆಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ.ಇಂಥ ಒಂದು ಸರ್ವಾಧಿಕಾರಿ ಸರಕಾರದ ವಿವಿಧ ಯೋಜನೆಗಳಲ್ಲಿ ಇಂಥ ಅಕಾಡೆಮಿ ಪ್ರಶಸ್ತಿಗಳೂ ಬರುತ್ತವೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ, ನಾವು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಪಟ್ಟಿಯನ್ನು ಹೇಗೆ ವಿರೋಧಿಸುತ್ತೇವೋ ಹಾಗೆಯೇ ಅದಕ್ಕೆ ಬೆಂಗಾವಲಾಗಿ ನಿಂತಿರುವ ಸರಕಾರದ ಡಿಕ್ಟೇಟರ್‍ಶಿಪ್ ಅನ್ನೂ ವಿರೋಧಿಸುತ್ತೇವೆ. ನಮ್ಮ ಹೋರಾಟ ಯಾವುದೇ ಒಂದು ವ್ಯಕ್ತಿಗೆ ಸೀಮಿತವಾದದ್ದಲ್ಲ.

ಹೋರಾಟ ಯಾರಿಂದ?
ನಾವು ಹುಟ್ಟುಹಾಕಿರುವ ಹೋರಾಟ ಸಂಪೂರ್ಣವಾಗಿ ಜನಪರ. ಜನರಿಂದಲೇ ಹುಟ್ಟಿರುವ ಆಂದೋಲನ ಇದು. ನಾವು ಯಾರನ್ನೂ ಈ ಆಂದೋಲನದಲ್ಲಿ ಕೈಜೋಡಿಸಲು ಬಲವಂತಪಡಿಸಿಲ್ಲ. ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಜೊತೆ ಕೈ ಜೋಡಿಸಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ಪತ್ರಿಕೆಗಳು, ಟಿವಿ ಚಾನೆಲ್‍ಗಳು ಇದು ತಮ್ಮ ಜವಾಬ್ದಾರಿಯೂ ಹೌದು ಎಂದು ಅರಿತು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟರೆ ಅದನ್ನು ಸ್ವಾಗತಿಸುತ್ತೇವೆ. ಆದರೆ, ಇದರಲ್ಲಿ ಪಾಲ್ಗೊಂಡಿರುವ ಯಾರಿಗೂ ರಾಜಕೀಯ ಹಿತಾಸಕ್ತಿಗಳು ಇಲ್ಲ. ಪ್ರಗತಿಪರರು, ಬುದ್ಧಿಜೀವಿಗಳು ಸಂಶಯಪಡುವಂತೆ ಹಿಡನ್ ಅಜೆಂಡಗಳು ಇಲ್ಲ. ಸಾಹಿತ್ಯ ಅಕಾಡೆಮಿ ಅಪಾತ್ರರಿಗೆ ಪ್ರಶಸ್ತಿಗಳನ್ನು ದಾನ ಮಾಡಿದೆ; ಅದನ್ನು ತಡೆಹಿಡಿಯಬೇಕು ಮತ್ತು ಇಡೀ ಪಟ್ಟಿಯನ್ನು ಪರಿಷ್ಕರಿಸಬೇಕು – ಇದಷ್ಟೇ ನಮ್ಮ ಬೇಡಿಕೆ.ಅತ್ಯಂತ ಧನಾತ್ಮಕ ತಿರುವು ಏನೆಂದರೆ, ಕನ್ನಡದ ಪ್ರಸಿದ್ಧ ಲೇಖಕರೂ ಗಣ್ಯವ್ಯಕ್ತಿಗಳೂ ಇದೀಗ ತಮ್ಮ ಮೌನ ಮುರಿದು “ನೀವು ಮಾಡುತ್ತಿರುವ ಹೋರಾಟ ಸರಿದಾರಿಯಲ್ಲಿ ನಡೆಯುತ್ತಿದೆ” ಎಂಬ ಪ್ರೋತ್ಸಾಹದ ಮಾತುಗಳನ್ನು ಆಡತೊಡಗಿದ್ದಾರೆ. ಅದು ನಮಗೂ ಉತ್ಸಾಹ, ಪ್ರೇರಣೆ ಕೊಟ್ಟಿದೆ. ಹೋರಾಟದ ದಾರಿಯಲ್ಲಿ ಇಂತಹ ತಣ ್ಣೀರ ಚಿಲುಮೆಗಳಿರುವುದು ಚೇತೋಹಾರಿ.

ಮುಂದೇನು?
ನಾವು ನಮ್ಮ ಹೋರಾಟವನ್ನು ತಾತ್ವಿಕ ಅಂತ್ಯ ಕಾಣುವವರೆಗೂ ನಿಲ್ಲಿಸುವುದಿಲ್ಲ. ಭಗವಾನ್ ಮತ್ತು ಉಳಿದ ಅಪಾತ್ರರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಹೋದ ಸರಕಾರದ ಶಿಶುವಾಗಿರುವ ಸಾಹಿತ್ಯ ಅಕಾಡೆಮಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವುದೇ ಇಲ್ಲವೆಂದು ಪಟ್ಟು ಹಿಡಿದರೆ ಅದನ್ನು ರಾಜ್ಯಪಾಲರು ಮತ್ತು ಕೇಂದ್ರದ ಗಮನಕ್ಕೂ ತರುವುದು ನಮ್ಮ ಮುಂದಿನ ಹೆಜ್ಜೆ. ಏನೇ ಇರಲಿ, ಸರ್ವಾಧಿಕಾರವನ್ನು ಅಂತ್ಯಗೊಳಿಸಬೇಕು; ಈ ಸರಕಾರಕ್ಕೆ ತಾನು ಜನರಿಂದ ಆಯ್ಕೆಗೊಂಡು ಹೋಗಿರುವ ಸಂಸ್ಥೆ ಎನ್ನುವುದರ ನೆನಪು ಮಾಡಿಸಬೇಕು. ಅದಾಗುವವರೆಗೆ ವಿರಮಿಸೆವು.

ರೋಹಿತ್ ಚಕ್ರತೀರ್ಥ

ಚಿತ್ರ ಸೌಜನ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಜಾಲತಾಣ ಹಾಗೂ ಮುಕ್ತ ಅಂತರ್ಜಾಲ