ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು…!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೇ. ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು. ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದ ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ. ರೈಲು ಬಿಡುವವರೆಗೂ ಅವಳಿಗೆ ನಿಮಿಷಕ್ಕೊಂದು ಎಚ್ಚರಿಕೆ ಕೊಡುತ್ತ ನಿಂತಿದ್ದ ಆಕೆಯ ಪೋಷಕರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಬ್ಯಾಗುಗಳನ್ನು ಕಾಲ ಬಳಿಯೇ ಇರಿಸಿಕೋ, ಕಿಟಕಿಯಿಂದ ಕೈ ಹೊರಗೆಹಾಕಬೇಡ, ಹುಶಾರು, ಅಪರಿಚಿತರೊಡನೆ ಮಾತನಾಡಬೇಡ” ಹೀಗೆ ಕೆಲವು ಸಲಹೆಗಳನ್ನು ಆಕೆಯ ಹೆತ್ತವರು ನೀಡುತ್ತಿರುವಂತೆಯೇ ರೈಲು ಹೊರಟಿತು. ಮೊದಲೇ ನಾನು ಕುರುಡ. ಬೆಳಕು ಮತ್ತು ಕತ್ತಲುಗಳನ್ನು ಹೊರತುಪಡಿಸಿ ಇನ್ನೇನನ್ನೂ ಗುರುತಿಸಲು ನನ್ನಿಂದಾಗುತ್ತಿರಲಿಲ್ಲ. ಹಾಗಾಗಿ ಆ ಹುಡುಗಿ ನೋಡಲು ಹೇಗಿರಬಹುದೆಂದು ಊಹಿಸುವುದು ನನ್ನಿಂದ ಶಕ್ಯವಾಗಲಿಲ್ಲ. ಆಕೆಯ ಚಪ್ಪಲಿಯಿಂದ ಬರುತ್ತಿದ್ದ ಸಪ್ಪಳದಿಂದಾಗಿ ಆಕೆ ಹವಾಯಿ ಚಪ್ಪಲಿಗಳನ್ನು ಧರಿಸಿರಬೇಕೆನ್ನುವುದನ್ನು ಅರಿತೆ. ಆಕೆಯದ್ದೋ ಕೋಗಿಲೆಯಂತಹ ಮಧುರ ಧ್ವನಿ. ಹೇಗಾದರೂ ಸರಿ, ಆಕೆಯ ರೂಪವನ್ನು ಗ್ರಹಿಸಬೇಕೆಂದುಕೊಂಡೆನಾದರೂ ನನ್ನ ಸಹಾಯಕ್ಕೆ ಅಲ್ಲಿ ಯಾರೂ ಇರದಿದ್ದದ್ದು ನನಗೆ ಕೊಂಚ ಬೇಸರವನ್ನುಂಟು ಮಾಡಿತ್ತು. ಮತ್ತಷ್ಟು ಓದು