ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 20, 2010

3

ಕರಾವಳಿಯ ಸಿತಾರ್ ಲೋಕದ ಯುವ ಕಲಾವಿದ ಅಂಕುಶ್

‍ನಿಲುಮೆ ಮೂಲಕ

ಕರುಣಾಕರ ಬಳ್ಕೂರು


ಕರಾವಳಿಯ ಜಿಲ್ಲೆಯಲ್ಲಿ ಏನುಂಟು ಏನಿಲ್ಲ ಹೇಳಿ, ಎಲ್ಲವುಂಟು. ಕಲೆ ಸಂಸ್ಕೃತಿಗಳ ತುಳುನಾಡು. ವಿಶಿಷ್ಟ ಪ್ರತಿಭೆಗಳನ್ನು ನೀಡುತ್ತಿರುವ ಬೀಡು. ಅದೆಷ್ಟೋ ಪ್ರತಿಭೆಗಳು ಎಲೆ ಮರೆಯಲ್ಲಿದ್ದಾವೆ. ಬುದ್ದಿವಂತರ ಜಿಲ್ಲೆಯೆಂದೆ ಮನೆ ಮಾತಾಗಿರುವ ದಕ್ಷಿಣ ಕನ್ನಡ ಜಿಲ್ಲೆ, ನೂರಾರು ಪ್ರತಿಭೆಗಳನ್ನು ಸೃಷ್ಟಿಸುತ್ತಿರುವ ತಾಣವಿದು. ಕಲೆ, ಸಾಹಿತ್ಯ, ವಾಣಿಜ್ಯ, ರಾಜಕೀಯ, ಶಿಕ್ಷಣ, ವಿಜ್ಞಾನ, ಸಮಾಜಸೇವೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕರಾವಳಿಯವರು ತಮ್ಮ ಸಾಧನೆಯ ಮುದ್ರೆಯನ್ನು ಒತ್ತಿದ್ದಾರೆ. ಇದಕ್ಕೆ ಸಂಗೀತ ಕ್ಷೇತ್ರವು ಹೊರತಲ್ಲ. ಹೀಗೆ ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಕಲಾವಿದರ ಗೂಡು. ಯುವ ಸಮುದಾಯದಿಂದ ಆರಂಭವಾಗಿ ಪ್ರೌಢ ಪ್ರತಿಭೆಗಳ ಸರಮಾಲೆ ನಮ್ಮಲಿವೆ.
ಬನ್ನಿ ಕರಾವಳಿಯ ಹುಡುಗ ಮಾಡಿರುವ ಸಾಧನೆಯ ಹಾದಿಯನ್ನು ನೋಡಿ ಬರೋಣ..
ಹೆಸರು: ಅಂಕುಶ್ ಎನ್.ನಾಯಕ್
ತಂದೆ: ನರೇಂದ್ರ ಎಲ್.ನಾಯಕ್
ತಾಯಿ: ಉಷಾಪ್ರಭಾ ಎನ್.ನಾಯಕ್
ಸಾಧನೆ ಮಾಡಿರುವ ಕ್ಷೇತ್ರ: ಸಿತಾರ್
ಗುರು: ಉಸ್ತಾದ್ ರಫೀಕ್ ಖಾನ್
ವಿದ್ಯಾಭ್ಯಾಸ: ಎಕ್ಸ್‌ಪರ್ಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸ್ತುತ ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿ.
ಹವ್ಯಾಸ: ಸಂಗೀತ ಆಲಿಸುವುದು
ಇದು ಇವನ ಸರಳ ಬೈಯುವ ಡಾಟ್ ಅಲ್ಲ, ಬೈಯೋಡಾಟ.. ಬಾಲ್ಯದಲ್ಲಿ ಪಂ.ರಫೀಕ್ ಖಾನ್ ಅವರ  ಸಿತಾರ್ ವಾದನವನ್ನು ಕೇಳಿ ಮೂಕವಿಸ್ಮಿತನಾಗಿ, ಅಂದೆ ದೃಢ ನಿರ್ಧಾರ ಮಾಡಿ ನಾನೇಕೆ ಇವರಂತೆ ಸಿತಾರ್ ವಾದಕನಾಗಬಾರದು?.  ಸಿತಾರ್ ವಾದನದ ಧ್ವನಿಯನ್ನು ಕೇಳಿ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನನ್ನನ್ನು..’ ಎನ್ನುವ ಹಾಗೆ ಇವನ್ನನ್ನು ಸಂಗೀತ ಕ್ಷೇತ್ರಕ್ಕೆ ಸೆಳೆದೆ ಬಿಟ್ಟಿತು. ಅಂದಿನಿಂದಲೇ ಇವನಲ್ಲಿ ಸುಪ್ತ ಪ್ರತಿಭೆಯೊಂದು ಚಿಗುರೊಡೆಯಲು ಆರಂಭಿಸಿತು. ನಾನು ಕೂಡ ಸಂಗೀತ ಕ್ಷೇತ್ರದಲ್ಲಿ ಒಬ್ಬ ಮಹಾನ್ ಕಲಾವಿದನಾಗಬೇಕು ಎನ್ನುವ ಬಯಕೆ ಹೆಚ್ಚಿತು. ಅದಕ್ಕೆ ತನ್ನ ತಂದೆ-ತಾಯಿಯಲ್ಲಿ ಮನದಾಳದ ಆಸೆಯನ್ನು ತೊಡಿಕೊಂಡ. ತಕ್ಷಣವೇ ಹೆತ್ತವರಿಂದ ಅದಕ್ಕೆ ಪುರಸ್ಕಾರ. ಕನಸಿನ ಕ್ಷಣವಾಗಿರುವ ಸಿತಾರ್ ಲೋಕಕ್ಕೆ ೯ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ ಮಾಡುತ್ತಾನೆ. ಅಂದಿನಿಂದ ಸಿತಾರ್ ವಿದ್ಯಾರ್ಥಿ, ಕಠಿಣ ಪರಿಶ್ರಮದ ಮೂಲಕ ಸಿತಾರ್ ಮೇಲೆ ತನ್ನ ಬೆರಳುಗಳ ಕೈಚಳಕವನ್ನಾಡಿಸುತ್ತಾ, ಆಡಿಸುತ್ತಾ ಸಿತಾರ್‌ನ ಎಲ್ಲಾ ಸ್ವರಗಳನ್ನು ಮನದುಂಬಿಕೊಳ್ಳುತ್ತಾನೆ. ಅಲ್ಲಿಂದ ಮತ್ತೆ ಹಿಂದುರುಗಿ ನೋಡುಲೇ ಇಲ್ಲ. ಅಂದೇ ತನ್ನ ಸಾಧನೆಯ ಹಾದಿಗೆ ಮುನ್ನುಡಿ ಬರೆಯುತ್ತಾನೆ. ಸಿತಾರ್=ಅಂಕುಶ್, ಅಂಕುಶ್=ಸಿತಾರ್ ಎನ್ನುವ ಹಾಗೆ ಸಿತಾರ್ ಲೋಕದಲ್ಲಿ ಮಿಂಚಿನಂತೆ ತೇಲಾಡಿ ಪ್ರಶಸ್ತಿಗಳ ಸರಮಾಲೆಯನ್ನು ತೊಡುತ್ತಾನೆ.
ಇದೀಗ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ದ್ವಿತೀಯ ವರ್ಷದ ಬಿಟೆಕ್ ವಿದ್ಯಾರ್ಥಿ ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ?! ಬೆಟ್ಟದ ನೆಲ್ಲಿಯ  ಕಾಯಿ, ಸಮುದ್ರದೊಳಗಣ ಉಪ್ಪಿ ಎತ್ತಣಿಂದೆತ್ತ ಸಂಬಂಧವಯ್ಯ?! ‘ಸಂಗೀತ ಕ್ಷೇತ್ರಕ್ಕೂ, ವಿಜ್ಞಾನಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ’, ಎನ್ನುವ ಪ್ರಶ್ನೆ ಇಲ್ಲಿ ಭಾಸವಾಗುತ್ತದೆ. ಮೆಟಲರ್ಜಿ ಏಂಡ್ ಮೆಟೇರಿಯಲ್ಸ್ ಎಂಬುದು ಇದೀಗ ಇವನ ಓದಿನ ವಿಷಯ. ‘ಲೋಹಶಾಸ್ತ್ರ ಮತ್ತು ಸಂಗೀತ ಶಾಸ್ತ್ರ’ ಎನ್ನುವುದು ಇವನ ಬದುಕಿನ ಜುಗಲ್ ಬಂಧಿಯಾಗಿದೆ. ಬಾಲ್ಯದಿಂದಲೂ ಕಲಿಕೆಯಲ್ಲೂ ಮುಂದೆ. ಕಲಿಕೆ ಮತ್ತು ಸಿತಾರ್‌ನ ನಡುವೆ ಸಮಯದ ಹೊಂದಾಣಿಕೆ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಪಯಣ ಬೆಳೆಸುತ್ತಿದ್ದಾನೆ. ಸಿತಾರ್‌ನ ಜೊತೆ ವೇದಿಕೆಯನ್ನೆರಿದರೆ ಮೊಗದಲ್ಲಿ ಮಂದಸ್ಮಿತ ನಗುವನ್ನು ಚೆಲ್ಲುತ್ತಾ ಸಂಗೀತದ ಲೋಕದಲ್ಲಿ ವಿಹರಿಸುತ್ತಾ, ಸಂಗೀತ ಪ್ರಿಯರಿಗೆ ತೃಪ್ತಿ ಸಿಗುವಷ್ಟು ಸಿತಾರ್‌ನ ನಾದವನ್ನು ಹೊಮ್ಮಿಸುತ್ತಾನೆ.
ಆಧುನಿಕತೆಯ ಜೀವನ ಶೈಲಿಗೆ ಮನಸೋಲದೆ ಸಂಗೀತ ಕ್ಷೇತ್ರವೇ ಇವನನ್ನು ಗಮನಸೆಳೆದಿದೆ. ಇವನ ಸಾಧನೆಯ ಸಾರ್ಥಕತೆಗೆ ಪಂಡಿತ್ ರಫೀಕ್ ಖಾನ್‌ರಂಥ ಒಬ್ಬ ಶ್ರೇಷ್ಠ ಗುರು ದೊರಕಿರುವುದು ಪುಣ್ಯವೇ ಸರಿ. ‘ರೊಗಿ ಬಯಸಿದ್ದು ಹಾಲು, ವೈದ್ಯ ನೀಡಿದ್ದು ಹಾಲು’ ಎಂಬಂತೆ ಗುರು ಪರಂಪರೆಗೆ ಗುರುವಾಗಿರುವ ಖಾನ್ ಅವರು ತನ್ನ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆದು, ಇಂದು ಶಿಷ್ಯನ ಸಾಧನೆಯನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ. ಅಂಕುಶ್‌ನ ಸಾಧನೆಗೆ ಹೆತ್ತವರಾಗಿರುವ  ಮಂಗಳೂರಿನ ಎಕ್ಸ್‌ಪರ್ಟ್ ಶಿಕ್ಷನ ಸಂಸ್ಥೆಯ ಅಧ್ಯಕ್ಷರಾಗಿರುವ ನರೇಂದ್ರ ಎಲ್.ನಾಯಕ್ ಮತ್ತು ಉಷಾಪ್ರಭಾ ನಾಯಕ್ ಅವರು ಕಾರಣಿಕರ್ತರು.
ಗೌರವ ಪುರಸ್ಕಾರ: ೧೦ನೇ ವಯಸಿನಲ್ಲೇ ಅಂತರಾಷ್ಟ್ರೀಯ ಚಿಲ್ಡ್ರನ್ಸ್ ಬ್ರಾಡ್ ಕಾಸ್ಟಿಂಗ್ ಕಾರ್ಯಕ್ರಮದಲ್ಲಿ ಸಿತಾರ್ ನುಡಿಸಿದ ಹೆಗ್ಗಳಿಕೆ, ದೂರದರ್ಶನದಲಿ ಈಗಾಗಲೇ ಹಲವಾರು ಕಾರ್ಯಕ್ರಮ ಪ್ರಸಾರ, ದೇಶ-ವಿದೇಶಗಳಲ್ಲಿ ಕಚೇರಿಗಳನ್ನು ನೀಡಿ ಸಂಗೀತ ಪ್ರಿಯರಿಗೆ ಹೊಟ್ಟೆ ತುಂಬವಷ್ಟು ಸಿತಾರ್ ವಾದನದ ರಸದೌತಣವನ್ನು ನೀಡಿ ಮನತಣಿಸಿದ್ದಾನೆ.
ಇನ್ನೊಂದು ವಿಶೇಷ ಸಾಧನೆಯನ್ನು ಹೇಳದಿದ್ದರೆ ತಪ್ಪಾದೀತು. ೨೦೦೯ರ ಕೊನೆಯ ಸುತ್ತು. ಲಾಸ್ ಏಂಜಲೀಸ್‌ನಲ್ಲಿ ಸಿತಾರ್ ವಾದನ ಕಚೇರಿ ನಡೆಸಿಕೊಟ್ಟು ಅಮೇರಿಕಾಕ್ಕೆ ಹಾಗೆ ಒಂದು ಪಯಣ. ಬರುವಾಗ ಹೊಸ ವರ್ಷದ ಪಾದಾರ್ಪಣೆಯಲ್ಲಿ, ಹೊಸವರ್ಷದ ಮುನ್ನುಡಿಗೆ  ತವರು ಜಿಲ್ಲೆಗೆ ಬಂದಾಗ ಸಂತಸದ ಸಿಹಿ ಸುದ್ದಿ. ಅದು ಇಂಡಿಯನ್ ಟೊಬೆಕೋ ಕಾರ್ಪೊರೇಷನ್ ಹಾಗೂ ಸಂಗೀತ ರಿಸರ್ಚ್ ಅಕಾಡೆಮಿ ನ್ಯಾಷನಲ್ ಸೆಂಟರ್ ಫರ್ ಫೋರ್ಮಿಂಗ್ ಆರ್ಟ್ಸ್ ಜತೆಯಾಗಿ ಕೊಡುವ ‘ರವಿ ಕೊಪ್ಟಿಕರ್ ಅವಾರ್ಡ್’ ಸಂದ ಸಂತಸದ ಕ್ಷಣ. ಅದು ಅಂಕುಶ್‌ನ ಪಾಲಿಗೆ, ಆ ದಿನ ಅವನಿಗೆ ಅವೀಸ್ಮರಣೀಯವಾದ ಸುದಿನ. ಆಕಾಶವಾಣಿಯಿಂದ ಶ್ರೇಷ್ಠ ಯುತವಾದ ಪ್ರಶಸ್ತಿ ಇನ್ನೊಂದಿಲ್ಲ. ಈ ಪ್ರಶಸ್ತಿಯನ್ನು ಪಡೆದ ಕಲಾವಿದರಿಗೆ ಸ್ಥಳೀಯ ಆಕಾಶವಾಣಿಯಲ್ಲಿ ‘ಬಿ’ ಗ್ರೇಡ್ ಕಲಾವಿದ ಸ್ಥಾನ ನೀಡಿ ಗೌರವಿಸುತ್ತದೆ. ಆ ಗೌರವಕ್ಕೆ ಅಂಕುಶ್ ಭಾಜನನಾಗಿದ್ದಾನೆ.  ೧೬ ರಿಂದ ೨೪ ವರ್ಷದ ವಯೊಮಿತಿಯೊಳಗೆ ನಡೆಯುವ ಸ್ವರ್ಧೆಯಿದು. ಈ ಪ್ರಶಸ್ತಿ ಹೆಚ್ಚಾಗಿ ಕೊಲ್ಕೊತ್ತಾ, ಪೂನಾ, ಮುಂಬಯಿ ಪಾಲಾಗುತ್ತಿತ್ತು. ಆದರೆ ಇವನ ಪ್ರತಿಭೆಗೆ ರಾಜ್ಯದ ಇತಿಹಾಸದಲ್ಲಿ ಹಿಂದೂಸ್ತಾನಿ ಸಂಗೀತ ನುಡಿಸಿ ಮೊದಲ ಬಹುಮಾನ, ಪ್ರಶಸ್ತಿಯನ್ನು ಹೆಗ್ಗಲಿಗೇರಿಸಿಕೊಂಡು ದಾಖಲೆ ಮಾಡಿದ್ದಾನೆ.
ಪಂಡಿತ್.ಉಸ್ತಾದ್ ರಫೀಕ್ ಖಾನ್ ತಮ್ಮ ಶಿಷ್ಯನ ಬಗ್ಗೆ ಮನತುಂಬಿ ಮಾತನಾಡಿದ್ದು ಹೀಗೆ- ಮಂಗಳೂರಿನಲ್ಲಿ ಸಿತಾರ್‌ನ ಮೂಲಕ ವಿನೂತನವಾಗಿ ಮೂಡಿ ಬಂದಿರುವ ಪ್ರತಿಭೆ ಇವನು. ಅತಿ ಚಿಕ್ಕ ವಯಸ್ಸಿನಲ್ಲೇ ನಿರಂತರ ಅಭ್ಯಾಸದಿಂದ, ಕಠಿಣ ಪರಿಶ್ರಮದ ಮೂಲಕ, ಸಿತಾರ್ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿದ್ದಾನೆ. ಇವನ ಸಾಧನೆಯಲ್ಲಿ ಹೆತ್ತವರ ಪರಿಶ್ರಮವು ಇದೆ.
ಅಂಕುಶ್‌ನಂತೆ ಯುವ ಕಲಾವಿದರೂ ಇನ್ನಷ್ಟು ಮೂಡಿಬರಲಿ, ಇವನನ್ನೆ ಮಾದರಿಯಾಗಿಟ್ಟುಕೊಂಡು ಯುವ ಸಮುದಾಯ ಬೆಳೆಯಲಿ. ಕೊನೆಯ ಹನಿಯಲ್ಲಿ ಅಂಕುಶ್, ಮುಂದಿನ ದಿನಗಳಲ್ಲಿ ಸಿತಾರ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ, ಕರಾವಳಿಯ ಕೀರ್ತಿ ಪತಾಕೆಯನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲಿ ಎಂದು ಹಾರೈಸೋಣ..!

ಆಲ್ ದಿ ಬೆಸ್ಟ್ ಅಂಕುಶ್…

(ಅಂಕುಶ್ ಗೆ ನಿಲುಮೆ ತಂಡದ ಪರವಾಗಿಯೂ ಶುಭಾಶಯಗಳು)

Read more from ಲೇಖನಗಳು
3 ಟಿಪ್ಪಣಿಗಳು Post a comment
  1. Dr Prem Kumar's avatar
    ಆಕ್ಟೋ 20 2010

    Our dearest Ankush,
    You have made us all proud. You are a child Prodigy. You are the chosen one by the Lord to bring happiness not only to your parents, Guru , your relatives and friends but the whole society. Pl consider your work as your worship to Goddess Saraswathy/Goddess Sharade. A day is going to come when you will be spending several years/decades going round the whole world entertaining the whole mankind, and spreading the Glory of Goddess Saraswathy.
    Please keep the ring given to you by Bhagavan Sri Satya Sai Baba safely and wear it on important occasions concerning your academic and cultural programmes. Love Prem Ajja and Geetha Mammamma

    ಉತ್ತರ
  2. Mamatha's avatar
    Mamatha
    ಆಕ್ಟೋ 21 2010

    Karun gud job, All the best Ankush….!

    ಉತ್ತರ
  3. Sulatha Mangalore's avatar
    Sulatha Mangalore
    ಆಕ್ಟೋ 21 2010

    very nice atical and gud luck ankush. Abhinadanegalu…!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments