ವಿಷಯದ ವಿವರಗಳಿಗೆ ದಾಟಿರಿ

ಜುಲೈ 20, 2017

1

ನಮ್ಮೂರ ಹಬ್ಬ:- ನಮ್ಮೂರ ತೇರು

‍ನಿಲುಮೆ ಮೂಲಕ

– ಸುರೇಖಾ ಭೀಮಗುಳಿ

ಪ್ರತಿ ವರ್ಷ ಮೇ ತಿಂಗಳಲ್ಲಿ ಬೊಮ್ಮಲಾಪುರದಲ್ಲಿ ತ್ರಿಪುರಾಂತಕಿ ಅಮ್ಮನವರ ರಥೋತ್ಸವ! ಅದೊಂದು ಮಧುರ ನೆನಪು… ನೆನಪು ಮಾತ್ರದಿಂದಲೇ ಮನಸ್ಸು ತೇರುಪೇಟೆಯಲ್ಲಿ ಕಳೆದು ಹೋಗುತ್ತದೆ… ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಕಮ್ಮಕ್ಕಿ ನನ್ನ ತವರೂರು. ಸುತ್ತಮುತ್ತಲ ಊರಿಗೆಲ್ಲ ಬೊಮ್ಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಎಂದರೆ ಸಾಮೂಹಿಕ ಹಬ್ಬ. ಊರಿಂದ ಹೊರಬಂದು ಬೆಂಗಳೂರಲ್ಲಿ ನೆಲೆಗೊಂಡ ನಾವು ಮಕ್ಕಳ ಹುಟ್ಟುಹಬ್ಬ ದಿನ ಪೂಜೆಗೆ ಕಿರುಕಾಣಿಕೆ ಸಲ್ಲಿಸಿದ್ದೇವೆ. ನಾವು ಮರೆತರೂ ಆ ದೇವಸ್ಥಾನದಿಂದ ಪ್ರಸಾದ ಬರುತ್ತದೆ. ವರ್ಷದ ರಥೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬರುತ್ತದೆ…

ರಥೋತ್ಸವಕ್ಕೆ ನಾವು ಬಾಲ್ಯದಲ್ಲಿ ‘ತೇರು’ ಎನ್ನುತ್ತಿದ್ದದ್ದು… ಬಾಲ್ಯಕಾಲದಲ್ಲಿ ಕಮ್ಮಕ್ಕಿ ಮನೆಯ ಹೆಣ್ಣು ಮಕ್ಕಳೆಲ್ಲ ಮಧ್ಯಾಹ್ನ ತೇರಿಗೆ ಹೋಗುತ್ತಿದ್ದೆವು. ಅದೂ ಹೊಸ ಬಟ್ಟೆಯಲ್ಲಿ ಎನ್ನುವುದೇ ನಮ್ಮ ದೊಡ್ಡ ಸಂಭ್ರಮಕ್ಕೆ ಕಾರಣ…! ಆ ಹೊಸ ಬಟ್ಟೆ ಒಂದು ವರ್ಷ ಟ್ರಂಕ್ ನಲ್ಲಿ ಪರಿಮಳದ ಗುಳಿಗೆಗಳೊಂದಿಗೆ ಬೆಚ್ಚಗೆ ಕುಳಿತಿರುತ್ತಿತ್ತು… ಹಬ್ಬದ ದಿನ ಮಾತ್ರ ಅದನ್ನು ತೊಡುವ ಅವಕಾಶ… ಮುಂದಿನ ವರ್ಷದ ಹೊಸ ಬಟ್ಟೆ ಸಿಕ್ಕ ಕೂಡಲೇ ಕಳೆದ ವರ್ಷದ ಬಟ್ಟೆಗೆ ಶಾಲೆಯ ದರ್ಶನ ಭಾಗ್ಯ! ವರ್ಷಕ್ಕೆ ಅಷ್ಟು ಸಿಕ್ಕಿದರೆ ನಾವೇ ಅದೃಷ್ಟವಂತರು. ನನ್ನ ಸಹಪಾಠಿಗಳಿಗೆ ಅಷ್ಟೂ ಸಿಕ್ಕುತ್ತಿರಲಿಲ್ಲ… ಮತ್ತೆ ಆ ಹೊಸ ಬಟ್ಟೆಯ ಕಥೆ ಇನ್ನೂ ಗಮತ್ತು. ಭಂಡಿಗಡಿ ಸೊಸೈಟಿಯಿಂದ ಒಂದು ’ತಾನು’ ಬಟ್ಟೆ ತಂದರೆ ಎಲ್ಲ ಮಕ್ಕಳಿಗೂ ಅದರದ್ದೇ ಫ್ರಾಕ್, ಲಂಗ, ರವಿಕೆ. ಆ ಬಟ್ಟೆಯ ಮಾತ್ರದಿಂದಲೇ ಇವು ಯಾವ ಮನೆಯ ಮಕ್ಕಳು ಅಂತ ಕಂಡು ಹಿಡಿಯಬಹುದಿತ್ತು… ಪ್ರತಿವರ್ಷ ಬೊಮ್ಮಲಾಪುರ ತೇರಿಗೆ ಟ್ರಂಕಿನೊಳಗೆ ಬೆಚ್ಚಗೆ ಕುಳಿತ.. ನ್ಯಾಪ್ಥಾಲಿನ್ ಗುಳಿಗೆಗಳ ಸುಗಂಧಭರಿತ.. ಆ ವರ್ಷದ ಹೊಸ ಬಟ್ಟೆಯಲ್ಲಿ ಊರು ತುಂಬಾ ನಮ್ಮ ಮೆರವಣಿಗೆ !

ತೇರಿಗೆ ಹೊರಡುವಾಗ ಅಪ್ಪ ನಮಗೆ ತಲಾ ಒಂದು ರೂಪಾಯಿಯಂತೆ ಖರ್ಚುಮಾಡುವುದಕ್ಕೆ ಅವಕಾಶ ಕೊಡುತ್ತಿದ್ದ. ಆ ಒಂದು ರೂಪಾಯಿ ಅಡಿಕೆ ಸುಲಿದದ್ದಕ್ಕೆ ನಾವು ಗಳಿಸಿಕೊಂಡದ್ದು ಎಂಬ ಹಮ್ಮು ಬೇರೆ ನಮಗೆ..! ಅದೇ ಪ್ರಕಾರ ಅಮ್ಮ ನಮಗೆ ಆ ಒಂದು ರೂಪಾಯಿಯಲ್ಲಿ ಒಂದೊಂದು ಜೊತೆ ಟೇಪು, ಬಳೆ ಕೊಡಿಸುತ್ತಿದ್ದಳು. ಗಂಡಸರು ರಾತ್ರಿ ಹೊತ್ತು ಹೋಗಿ ರಥ ಎಳೆದು ಬರುತ್ತಿದ್ದದ್ದು ಕಮ್ಮಕ್ಕಿ ಮನೆಯವರ ರೂಢಿ. ರಾತ್ರಿ ಅಪ್ಪ-ಅಣ್ಣ ತೇರು ಮುಗಿಸಿ ಹಿಂತಿರುಗಿ ಬರುವಾಗ ತರುತ್ತಿದ್ದ ಬೆಂಡು- ಬತ್ತಾಸು- ಮಂಡಕ್ಕಿಗಾಗಿ ಕಾಯುತ್ತಿದ್ದ ದಿನದ ನೆನಪು. ಪ್ರತಿವರ್ಷ ಇದೇ ಪುನರಾವರ್ತನೆ…

ಬೆಳಿಗಿನ ತಿಂಡಿ ಕಾರ್ಯಕ್ರಮ ಮುಗಿಸಿ, ಸ್ನಾನಾದಿಗಳನ್ನು ಮಾಡಿಕೊಂಡು ಏರು ಬಿಸಿಲಿನಲಿ ಏರು ದಾರಿಯ ಹತ್ತಿ ಮೇಲುಕೊಪ್ಪ -ಬೊಮ್ಮಕ್ಕನ ಓಣಿ – ಹೊಕ್ಕಳಿಕೆ ಮಾರ್ಗವಾಗಿ ಬೊಮ್ಮಲಾಪುರ ಸೇರಿಕೊಳ್ಳುತ್ತಿದ್ದೆವು. ನಾವು ಅಲ್ಲಿಗೆ ತಲಪುವ ವೇಳೆಗೆ ದೇವಸ್ಥಾನದ ಒಳಾಂಗಣದಲ್ಲಿ ಉತ್ಸವ ಮೂರ್ತಿ ಹೊತ್ತು ಪ್ರದಕ್ಷಿಣೆ, ಬಲಿ, ಏನೇನೋ ಕಾರ್ಯಕ್ರಮಗಳು ಆಗುತ್ತಿರುತ್ತಿತ್ತು. ವರ್ಷಕ್ಕೆ ಊರಿನ ಎಲ್ಲಾ ಹೆಣ್ಮಕ್ಕಳು ಸೇರುವ ಸಂದರ್ಭವಾದ್ದರಿಂದ ಹೆಂಗಸರೆಲ್ಲರೂ ಉಭಯ ಕುಶಲೋಪರಿಯಲ್ಲಿ ಕಳೆದು ಹೋಗಿರುತ್ತಿದ್ದರು! ಹಲವು ರೀತಿಯ ಪೂಜಾ ಕಾರ್ಯಕ್ರಮಗಳಾಗುತ್ತಿದ್ದಂತೆ ರಥ ಎಳೆಯುವ ಸಂಭ್ರಮ! ತೇರು ಹೊರಡುವಾಗ ಕೈಮುಗಿದು ನಾವೇ ಮನೆಯಿಂದ ತೆಗೆದುಕೊಂಡು ಹೋದ ಅಡಿಕೆ-ಚಿಲ್ಲರೆ- ಅಕ್ಕಿ ತೇರಿನತ್ತ ಎಸೆದು, ಬೇರೆಯವರು ಎಸೆದ – ಕೆಳಗೆ ಬಿದ್ದ ಅದೇ ವಸ್ತುಗಳನ್ನು ಪ್ರಸಾದವೆಂದು ಎತ್ತಿಕೊಳ್ಳುತ್ತಿದ್ದೆವು.

ಮತ್ತೆ ಸಾರ್ವಜನಿಕ ಊಟ… ದೊಡ್ಡ ಸೋಗೆ ಚಪ್ಪರದ ಅಡಿಯಲ್ಲಿ ಉದ್ದುದ್ದ ಸಾಲಿನಲ್ಲಿ ಕುಳಿತ ಸಾರ್ವಜನಿಕರಿಗೆ ಸಾರು-ಸಾಂಬಾರು-ಅಕ್ಕಿ ಕಡಲೆಬೇಳೆ ಪಾಯಸ- ಮಜ್ಜಿಗೆ ನೀರಿನ ಹೊಟ್ಟೆ ತುಂಬಾ ಊಟ! ಭಕ್ತವೃಂದದ ಸಕಲ ಪುರುಷವರ್ಗ ಊಟ ಬಡಿಸಲು ಉತ್ಸಾಹದಲ್ಲಿ ಸಹಕರಿಸುತ್ತಿದ್ದರು ! ಹಿರಿಯರು- ಹೆಂಗಸರು- ಮಕ್ಕಳು ಮೊದಲ ಪಂಕ್ತಿಯಲ್ಲಿ ಉಂಡೆದ್ದು ತೃಪ್ತರಾಗುತ್ತಿದ್ದರು ! ಮತ್ತೆ ನಮ್ಮ ಸವಾರಿ ದೇವಸ್ಥಾನದ ಹಿಂದಿದ್ದ ಗುಡ್ಡಕ್ಕೆ..! ಅಲ್ಲಿ ಮರ-ಮೊಟ್ಟಿಯ ನೆರಳಲ್ಲಿ ಸ್ವಲ್ಪ ವಿಶ್ರಮಿಸಿ ಕೆಳಗಿಳಿಯುತ್ತಿದ್ದೆವು. ಯಾಕೆ ಹಾಗೆ ಹೋಗುತ್ತಿದ್ದೆವು ? ಎಂಬ ಪ್ರಶ್ನೆಗೆಲ್ಲ ಉತ್ತರವಿಲ್ಲ. ಕಮ್ಮಕ್ಕಿ ಮನೆಯ ಹೆಣ್ಮಕ್ಕಳ ಪದ್ಧತಿ ಹಾಗೆ ಅಷ್ಟೇ… ಊಟ ಮಾಡಿ ಆ ಗುಡ್ಡ ಹತ್ತಿಳಿದರೇ ನಮಗೊಂದು ಖುಷಿ. ನಂತರ ನಮ್ಮ ಸವಾರಿ ತೇರು ಪೇಟೆಯ ದಾರಿಯಲ್ಲಿ… ಬಹುಶಃ ಊಟವಾದ ನಂತರ ತೇರುಪೇಟೆಗೆ ನುಗ್ಗುವ ಜನಸಂದಣಿ ಸ್ವಲ್ಪ ಕರಗಲಿ ಎಂಬ ಉದ್ದೇಶದಿಂದ ಗುಡ್ಡದಲ್ಲಿ ನಾವು ಸ್ವಲ್ಪ ಹೊತ್ತು ಕಳೆಯುತ್ತಿದ್ದೆವೇನೋ…

ತೇರುಪೇಟೆಯ ಆ ಬಣ್ಣದ ಟೇಪುಗಳ ಆಕರ್ಷಣೆ.. ರಸ್ತೆಯ ಇಕ್ಕೆಲಗಳಲ್ಲಿಯೂ ಸಾಲು ಸಾಲು ಅಂಗಡಿಗಳು… ಬಳೆ, ಸರ, ಟೇಪು, ಬೆಂಡು ಬತ್ತಾಸು, ಮಂಡಕ್ಕಿ… ಪ್ಲಾಸ್ಟಿಕ್ ಆಟದ ಸಾಮಾನು, ಪೀಪಿಗಳು, ಗೊಂಬೆಗಳು… ಒಂದೆರಡೆ…! ನೋಡುವ ನಮ್ಮ ಪುಟ್ಟ ಕಣ್ಣುಗಳಿಗೆ ಬಣ್ಣಬಣ್ಣದ ಹಬ್ಬ! ಕೇವಲ ಒಂದು ರೂಪಾಯಿಗೆ ಎರಡು ಪ್ಲಾಸ್ಟಿಕ್ ಬಳೆ – ಎರಡು ಟೇಪು ಸಿಕ್ಕುತ್ತಿತ್ತು! ಹಸಿರು, ನೀಲಿ, ಕೆಂಪು, ಗುಲಾಬಿ, ಬಿಳಿ, ಕಪ್ಪು, ಕೇಸರಿ ಎಷ್ಟೋಂದು ಬಣ್ಣದ ಟೇಪುಗಳು ಗಾಳಿಯಲ್ಲಿ ಹಾರಾಡಿ ನಮ್ಮನ್ನು ಆಕರ್ಷಿಸುತ್ತಿತ್ತು… ಯಾವ ಬಣ್ಣದ್ದನ್ನು ತೆಗೆದುಕೊಳ್ಳುವುದೆಂದು ದ್ವಂದ್ವ! ಆದರೂ ನಮ್ಮಮ್ಮ ಸ್ವಲ್ಪ ಧಾರಾಳಿಯೇ… ಒಬ್ಬೊಬ್ಬರಿಗೂ ಅರ್ಧ ಮೀಟರಿನ ಎರಡು ಟೇಪ್ ತುಂಡುಗಳು ಸಾಕಾಗುತ್ತಿದ್ದರೂ ಒಂದೊಂದು ಮೀಟರಿನ ಎರಡು ತುಂಡು ಟೇಪು ಕೊಡಿಸುತ್ತಿದ್ದಳು. ನಾವು ಅದನ್ನು ಆರು ದಳ ಬರುವಂತೆ ಹೂ ಸೃಷ್ಟಿಸಿ ಜಡೆ ತಿರುಗಿಸಿ ಕಟ್ಟಲು ಉಪಯೋಗಿಸುತ್ತಿದೆವು. ಮನೆಗೆ ತಂದು ಅದರ ಎರಡು ತುದಿಯನ್ನು ಬುಡ್ಡಿ ದೀಪದ ಜ್ವಾಲೆಗೆ ಜಾಗ್ರತೆಯಲ್ಲಿ ಬಿಸಿ ತಾಗಿಸಿ ’ಸೀಲ್’ ಮಾಡಿಕೊಳ್ಳುತ್ತಿದ್ದೆವು! ಕೆಲವು ಸಲ ಅಮ್ಮ ಮಣಿಸರ ಕೊಡಿಸಿದರೆ ಅದು ಬೋನಸ್…

ಹಾಗೆ ವರ್ಷಕ್ಕೊಂದು ಹೊಸ ರೀತಿಯ ವಸ್ತುಗಳೂ ಗಮನ ಸೆಳೆಯುತ್ತಿದ್ದವು! ಒಂದು ವರ್ಷ ಸ್ಪ್ರಿಂಗ್ ಬಳೆ, ಇನ್ನೊಂದು ವರ್ಷ ಟಕಟಕ ಟಕಟಕ ಎನ್ನುವ ’ಕಪ್ಪೆ’… ಇನ್ನೂ ಏನೇನೋ… ಆ ಸ್ಪ್ರಿಂಗ್ ಬಳೆಯನ್ನು ಕೊಂಡು ತೊಟ್ಟುಕೊಂಡಿದ್ದಕ್ಕಿಂತ ಎಳೆ ಎಳೆಯಾಗಿ ಅಲ್ಲಲ್ಲ ಬಳೆಬಳೆಯಾಗಿ ಬಿಟ್ಟು ಆಟ ಆಡಿದ್ದೇ ಹೆಚ್ಚು…. ಆ ಕಪ್ಪೆಯನ್ನೋ ವಟವಟ ಗುಟ್ಟಿಸಿ ಬೈಸಿಕೊಂಡದ್ದೆಷ್ಟೋ…

ಅಷ್ಟಾದರೆ ನಮ್ಮ ತೇರು ಪೇಟೆ ತಿರುಗಾಟ ಮುಕ್ತಾಯ… ಮತ್ತೆ ಗದ್ದೆ ಬಯಲು ದಾಟಿ… ಗೋಳಿ ಮರದ ನೆರಳಲ್ಲಿ ಕ್ಷಣ ಕಾಲ ನಿಂತು ವಿಶ್ರಮಿಸಿ, ಹೊಕ್ಕಳಿಕೆಯ ಯಾವುದೋ ಮನೆಯಲ್ಲಿ ತಂಬಿಗೆಗಟ್ಟಲೆ ತಣ್ಣೀರು ಕುಡಿದು… ಬೊಮ್ಮಕ್ಕನ ಓಣಿಯ ಮುಖಾಂತರ ಮೇಲುಕೊಪ್ಪಕ್ಕೆ ಬಂದು ಕಮ್ಮಕ್ಕಿ ಸೇರಿಕೊಳ್ಳುತ್ತಿದ್ದೆವು. ದೇವಸ್ಥಾನದಲ್ಲಿ ಐದು ದಿನದ ಕಾರ್ಯಕ್ರಮವಿರುತ್ತಿದ್ದರೂ ನಾವು ಮಧ್ಯದ “ಶ್ರೀಮನ್ಮಹಾರಥರೋಹಣ” ದ ದಿನ ಮಾತ್ರ ಜಾತ್ರೆಗೆ ಹೋಗುತ್ತಿದ್ದದ್ದು. 1974 ರಿಂದ 1984 ರ ಒಳಗಿನ ಕತೆ ನನ್ನದು… ಮತ್ತೆ ನಿಧಾನಕ್ಕೆ ತೇರಿನ ಆಕರ್ಷಣೆ ಕಡಿಮೆಯಾಯಿತು… ದೊಡ್ಡ ಅಕ್ಕಂದಿರಿಗೆ ಮದುವೆಯಾಯಿತು… ಕಮ್ಮಕ್ಕಿ ಮನೆಯ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆಂದೋ ಉದ್ಯೋಗಕ್ಕೆಂದೋ ಊರು ಬಿಟ್ಟೆವು …. ಎಂಟು ವರ್ಷದ ಹಿಂದೆ ಮಕ್ಕಳಿಗೆ ನಮ್ಮೂರ ಜಾತ್ರೆ ತೋರಿಸಲೆಂದು ಕರೆದೊಯ್ದಿದ್ದೆ… ಆಗ ನಾವು ತೆಗೆದ ಫೋಟೋ ಇದು. ತೇರಿನ ಸಂಭ್ರಮ ಮಕ್ಕಳಿಗೆ ಹೆಚ್ಚು ಆಕರ್ಷಕವೆನ್ನಿಸಲಿಲ್ಲ…. ಕಾಲಾಯ ತಸ್ಮೈ ನಮಃ.

ಚಿತ್ರ : ಬೊಮ್ಮಲಾಪುರ ತ್ರಿಪುರಾಂತಕಿ ಅಮ್ಮನವರ ತೇರು.

1 ಟಿಪ್ಪಣಿ Post a comment
  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments