ಕ್ರಿಕೆಟ್ ಕ್ರಿಕೆಟ್ ಕ್ರಿಕೆಟ್ – ಕ್ರಿಕೆಟೆಂಬ ಹುಚ್ಚು
ಅಜಕ್ಕಳ ಗಿರೀಶ ಭಟ್
ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ ಕ್ರೀಡಾವಿಶ್ಲೇಷಕರು ಹಾಗೂ ಸಾಮಾನ್ಯ ಕ್ರೀಡಾಭಿಮಾನಿಗಳು ಕ್ರಿಕೆಟಿಗೆ ಈ ದೇಶದಲ್ಲಿ ನೀಡಲಾಗುವ ಮಹತ್ವ ಮತ್ತು ಇತರ ಆಟಗಳ ಬಗ್ಗೆ ಅಲಕ್ಷ್ಯದ ಬಗ್ಗೆ ತುಂಬ ಬರೆದಿದ್ದಾರೆ ಮತ್ತು ಹೇಳಿದ್ದಾರೆ. 
ನನಗೆ ನಿಜವಾಗಿ ಆಸಕ್ತಿಯ ಆಟವೆಂದರೆ ಕ್ರಿಕೆಟ್ಟೇ. ಯಾಕೆಂದರೆ ಕ್ರಿಕೆಟ್ಟು ಆಡಲು ಹೆಚ್ಚು ಖರ್ಚು ಇಲ್ಲ.ಬ್ಯಾಟು ಮಾಡಲು ತೆಂಗಿನ ಕೊತ್ತಳಿಗೆ ಕೂಡ ಆಗುತ್ತಿತ್ತು ನಾವು ಚಿಕ್ಕವರಿದ್ದಾಗ. ಚೆಂಡು ಬಾಳೆ ಚಾಂಬಾರಿನದೂ ಆಗುತ್ತಿತ್ತು. ಹತ್ತು ಇಂಟು ಇಪ್ಪತ್ತು ಅಡಿ ಅಂಗಳದಲ್ಲೂ ಕ್ರಿಕೆಟ್ ಆಡಬಹುದು ನಮ್ಮದೇ ರೂಲ್ಸುಗಳೊಂದಿಗೆ. ಹಾಗೆಯೇ ಕ್ರಿಕೆಟ್ಟು ಆಡಲು ಅಥವಾ ನೋಡಲು ಚೆಸ್ಸಿನ ಹಾಗೆ ಹೆಚ್ಚು ತಲೆಖರ್ಚು ಮಾಡುವ ಅಗತ್ಯವಿಲ್ಲ. ತಲೆಖರ್ಚು ಮಾಡುವುದೆಂದರೆ ನಾನು ಮೊದಲಿಂದಲೂ ಸ್ವಲ್ಪ ಜಿಪುಣನೇ. ಕ್ರಿಕೆಟ್ಟಿನ ಮೇಲೆ ನನಗೆ ವಿಶೇಷ ಮಮತೆ ಇರಲು ಇನ್ನೊಂದು ಕಾರಣವೆಂದರೆ ನಾನು ನನ್ನ ಹತ್ತು- ಹನ್ನೊಂದನೇ ವಯಸ್ಸಿನಲ್ಲಿಯೇ ಭಾರತ ತಂಡವನ್ನು ಫೋಲ್ಲೋ ಮಾಡಲು ಆರಂಭ ಮಾಡಿದ್ದು. ನಾನು ಬಹುಶ ನಾಕನೇ ಅಥವಾ ಐದನೇ ಕ್ಲಾಸಿನಲ್ಲಿ ಇದ್ದಾಗ ಇರಬೇಕು ನಾನು ಮೊದಲು ಕಮೆಂಟ್ರಿ ಕೇಳಿದ್ದು. ನನಗೆ ಕ್ರಿಕೆಟಿನ ಹುಚ್ಚು ಹಿಡಿದದ್ದು ಭಾರತ ಮತ್ತು ಇಂಗ್ಲೆಂಡುಗಳ ನಡುವಿನ ಒಂದು ಸರಣಿಯ ಮಧ್ಯದಲ್ಲಿ. ಹಾಗೆ ನನಗೆ ಸಡನ್ನಾಗಿ ಹುಚ್ಚು ಹಿಡಿದದ್ದು ಹೇಗೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಸಾಮಾನ್ಯವಾಗಿ ಇಂಥ ಹುಚ್ಚುಗಳು ಗ್ರಾಜುಯಲ್ಲಾಗಿ ಹಿಡಿಯುವುದು. ಸಡನ್ನಾಗಿ ಹಿಡಿದದ್ದು ಹುಚ್ಚೇ ಅನ್ನಲು ಕಾರಣವೇನೆಂದರೆ ಆನಂತರದ ಹೆಚ್ಚು ಕಡಿಮೆ ಪ್ರತಿಯೊಂದು ಪಂದ್ಯವನ್ನೂ ನಾನು ಪತ್ರಿಕೆ ಅಥವಾ ರೇಡಿಯೋ ಕಮೆಂಟ್ರಿ ಮೂಲಕ ಫೋಲ್ಲೋ ಮಾಡುತ್ತಿದ್ದೆ. ನನಗೆ ಕ್ರಿಕೆಟ್ ಅಂತ ಒಂದಿದೆ ಎಂದು ಗೊತ್ತಾಗುವಾಗ ಆ ಸರಣಿಯಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಾಗಿತ್ತು ಅನಿಸುತ್ತದೆ. ಅದು ಮೊದಲ ಪಂದ್ಯ ಇರಬೇಕು. ಆ ಗೆದ್ದ ವಿಷಯ ನನಗೆ ಆನಂತರ ಗೊತ್ತಾದದ್ದು. ನನ್ನ ನೆನಪಿನ ಪ್ರಕಾರ ಆ ಸರಣಿಯ ನಂತರದ ಐದು ಟೆಸ್ಟ್ ಗಳೂ ಡ್ರಾ ಆಗಿರಬೇಕು. ಒಟ್ಟಿನಲ್ಲಿ ಆ ಸರಣಿಯನ್ನು ಭಾರತ ಒಂದು-ಸೊನ್ನೆ ಅಂತರದಲ್ಲಿ ಗೆದ್ದಿತ್ತು. ಒಂದು ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ಮತ್ತು ಮದನ್ ಲಾಲ್ ತಲಾ ಐದು ವಿಕೆಟ್ ಗಳನ್ನು ಪಡೆದು ಮಿಂಚಿದ್ದರು. ಆಗ ಇಂಗ್ಲೆಂಡಿನ ನಾಯಕನಾಗಿದ್ದವನು ಕೀತ್ ಫ್ಲೆಚರ್ ಎಂಬ ಅನಾಮಧೇಯ. ಮತ್ತಷ್ಟು ಓದು 




