ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 15, 2016

4

ಮೂಕಜ್ಜಿಯ ಕನಸುಗಳು (ಪುಸ್ತಕ ಪರಿಚಯ)

‍ನಿಲುಮೆ ಮೂಲಕ

– ನಾಗೇಶ ಮೈಸೂರು

image1‘ … ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ಸಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ…. ‘

‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…’

ಬಹುಶ ಮುನ್ನುಡಿಯಲ್ಲಿ ಶಿವರಾಮಕಾರಂತರು ಕಾಣಿಸಿರುವ ಇವೆರಡು ಸಾಲುಗಳು ಸಾಕೇನೋ – ಈ ಅದ್ಭುತ ಪುಸ್ತಕದ ಸಾರಾಂಶವನ್ನು ಎರಡೇ ಮಾತಲ್ಲಿ ಹಿಡಿದಿಡಲು. ಪರಂಪರಾನುಗತವಾಗಿ ಹರಿದುಬಂದ ನಂಬಿಕೆ, ಸಂಪ್ರದಾಯಗಳಲ್ಲಿ ನಿಮಿತ್ತವೆಂಬಂತೆ ಬದುಕು ಸಾಗಿಸಿದ ಜನಮಾನಸದ ಕೆಲವಾದರೂ ಚಿತ್ತಗಳನ್ನು ಕೆದಕಿ ಕದಡಿರಬಹುದಾದ ‘ಏನೀ ಜಗ ? ನಾನೇಕಿಲ್ಲಿದ್ದೇನೆ ?’ ಎಂಬ ಗಹನ ಪ್ರಶ್ನೆಗಳಿಗೆ ತನ್ನರಿವಿನ ಪರಿಧಿಯನುಸಾರ ಉತ್ತರ ಕಂಡುಕೊಳ್ಳುವ ಸೂಕ್ಷ್ಮಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ ಎಂದರೆ ತಪ್ಪಾಗಲಾರದು.

ನಾಲ್ಕೈದು ಸಾವಿರ ವರ್ಷಗಳಿಂದ ಹರಿದುಬಂದಿರುವ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಲು ಯತ್ನಿಸುವ ಅವಾಸ್ತವಿಕತೆಯ ಪ್ರತೀಕವೆನಿಸುವ ಅಜ್ಜಿ ಮತ್ತು ವಾಸ್ತವದ ಪ್ರತಿನಿಧಿಯಾಗುವ ಮೊಮ್ಮಗ ಇಲ್ಲಿನ ಕೇಂದ್ರಬಿಂದು. ಜತೆಗೆ ಪಾತ್ರಧಾರಿಗಾಗಿ ಬರುವ ನಾಗಿ, ರಾಮಣ್ಣ, ಜನ್ನನಂತವರು ತಮ್ಮದೇ ಆದ ಮನೋಧರ್ಮದ ಮೂಲಕ ಆ ಮಥನದ ಸಂವಾದಿಗಳೊ, ಪ್ರತಿವಾದಿಗಳೊ, ಅವಹೇಳನಗಳೋ ಆಗುತ್ತಾ ತಮ್ಮದೇ ಆದ ವ್ಯಾಖ್ಯೆ ಸೇರಿಸುತ್ತಾರೆ. ಹೀಗೆ ಎಲ್ಲಾ ದನಿಗಳ ಅನಾವರಣದೊಡನೆ ಸಾಗುವ ಮಥನ ನಮಗರಿವಿಲ್ಲದಂತೆ ಕಟ್ಟಿಕೊಡುವ ಅನುಭವ ಮಾತ್ರ ಅನನ್ಯ.

ಇಲ್ಲೊಂದು ಮಾತು ಸೇರಿಸಿಬಿಡುತ್ತೇನೆ – ನಮ್ಮ ಪುರಾಣ ಶಾಸ್ತ್ರ ವೇದಾಂತಗಳಲ್ಲಿ ಅಡಕವಾಗಿರಬಹುದಾದ ಅದೆಷ್ಟೋ ಜ್ಞಾನ , ಸಿದ್ದಾಂತಗಳು ನಮಗೇ ಅರಿವಿರುವುದಿಲ್ಲ. ನಮ್ಮ ವಿದ್ಯಾಭ್ಯಾಸದ ರೂಪುರೇಷೆಯಲ್ಲಿ ಯಾವ ಹಂತದಲ್ಲೂ ಇವು ನಿಖರ ಪಠ್ಯಕ್ರಮವಾಗಿ ಗೋಚರವಾಗದಿರುವ ಕಾರಣ ನಮಗೆ ಆಸ್ಕರ್ ವೈಲ್ಡ್, ಶೇಕ್ಸಪಿಯರ್, ರಾಬರ್ಟ್ ಫ್ರಾಸ್ಟರ ಅರಿವಿದ್ದರೂ ನಮ್ಮದೇ ಪರಂಪರೆಯ ಮೂಲ ಬೇರುಗಳ ಜ್ಞಾನವಿರುವುದು ಸೀಮಿತ ಮಟ್ಟದಲ್ಲಿ ಮಾತ್ರವೇ. ಅರಿಯಬೇಕೆನಿಸಿದರೂ ಒಂದು ಹಂತಕ್ಕೆ ಬಂದ ಮೇಲೆ ಅವೆಲ್ಲವನ್ನು ಸಮೂಲಾಗ್ರವಾಗಿ ಕಲಿಯುವ ಹೊತ್ತು ದಾಟಿಯಾಗಿರುತ್ತದೆ.

ಸೋಜಿಗವೆಂದರೆ ಮೂಕಜ್ಜಿಯ ಕನಸಿನಂತಹ ಅದೆಷ್ಟೋ ಕನ್ನಡ ಪುಸ್ತಕಗಳು ಇಂತಹ ಜ್ಞಾನದ ‘ಅರೆದು ಕುಡಿದು’ ಸಂಗ್ರಹಿಸಿದ ಸಾರವನ್ನು ಕಥೆಯ ಹೂರಣದಲ್ಲೊ, ಪಾತ್ರಗಳಲ್ಲೊ, ಸನ್ನಿವೇಶ, ಮನೋಧರ್ಮಗಳಲ್ಲೊ ಸರಳರೂಪದಲ್ಲಿ ಸೇರಿಸಿ ಅದೆಲ್ಲಾ ಜ್ಞಾನವನ್ನು ನಮಗರಿವಿಲ್ಲದಂತೆಯೆ ಅನಾಯಾಸವಾಗಿ ದಕ್ಕಿಸಿಬಿಡುತ್ತದೆ – ಬರಿ ಅಂಥವನ್ನು ಹುಡುಕಿ ಓದುವ ಶ್ರದ್ಧೆ, ಸಹನೆ ನಮಗಿದ್ದರೆ ಸಾಕು..! ಮೂಕಜ್ಜಿಯ ಅನುಭವದ ಮಾತು, ಕನವರಿಕೆಗಳ ಹಿಂದೆ ಅಂತದ್ದೊಂದು ಅಂತಃಸತ್ವ, ಪ್ರಜ್ಞೆಯಾಳಗಳು ಸಾಮಾನ್ಯ ಓದುಗರ ನಿಲುಕಿಗೂ ತಲುಪುವ ವಿಸ್ಮಯ ಮಾತ್ರ ಕಾರಂತರ ಜೀವನದರ್ಶನ ಮತ್ತು ಬರಹದ ಶಕ್ತಿಯ ಪ್ರತೀಕ.

ಕನ್ನಡ ಸಾರಸ್ವತ ಲೋಕದಲ್ಲಿ ಈಗಾಗಲೇ ಬೇಕಾದಷ್ಟು ವಿಮರ್ಶೆ-ಚರ್ಚೆ ಭಾಗ್ಯ ಪಡೆದು, ಜತೆಗೆ ಜ್ಞಾನಪೀಠದಂತಹ ಪ್ರಶಸ್ತಿಗೆ ಪಾತ್ರವಾಗಿಯೂ ಪ್ರಸಿದ್ಧವಾದ ಈ ಪುಸ್ತಕದ ಪರಿಚಯ ಮಾಡಿಸಹೊರಟಿದ್ದು ಈ ಕಾರಣದಿಂದಲೇ. ಅಲ್ಲದೆ ಸೋಶಿಯಲ್ ಮೀಡಿಯಾ ಬಲದಿಂದ ಕುದುರಿಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಈ ಮಾಹಿತಿ ಕ್ರಾಂತಿ ಯುಗದಲ್ಲಿ, ಕನ್ನಡದ ಇಂಥಹ ಮಹಾನ್ ಕೃತಿಗಳ ಪೂರ್ಣ ಅರಿವಿರದ ಯುವ ಮನಸುಗಳ ಪ್ರಜ್ಞೆಗೆ ಅದನ್ನೆಟುಕಿಸುವ ಹವಣಿಕೆ. ಅಗಾಧ ಯುವ ಜನಾಂಗಕ್ಕೆ ತಲುಪಿಸುವ ಪುಟ್ಟ ಉದ್ದೇಶ.

ಇನ್ನು ಕಾದಂಬರಿಯ ವಿಷಯಕ್ಕೆ ಬಂದರೆ ಅದು ತೆರೆದುಕೊಳ್ಳುವ ಲೋಕ ನಮ್ಮ ‘ಮಾಡ್ರನ್ ಲೈಫಿನ’ ಪರಿಧಿಯಾಚೆಯ ಯಾವುದೋ ಪುಟ್ಟದಾದ ಪುರಾತನ ಪ್ರಪಂಚವೊಂದಕ್ಕೆ ಕರೆದೊಯ್ದುಬಿಡುತ್ತದೆ… ಅಲ್ಲಿನ ಪಾತ್ರಗಳ ಮೂಲಕವೇ ತೆರೆದುಕೊಳ್ಳುತ್ತಾ ಹೋಗುವ ಕಥೆ ಆ ದಿನಗಳ ಸಾಮಾಜಿಕ ಬದುಕಿನ ನೆಲೆಗಟ್ಟಿನಲ್ಲಿಯೇ ಕಂಡ-ಕಾಣದ ಸತ್ಯಗಳನ್ನೆಲ್ಲಾ ತಣ್ಣಗೆ ಹೇಳುತ್ತಾ ಹೋಗುತ್ತದೆ. ಎಲ್ಲರೂ ಅವರವರ ಮನೋಧರ್ಮ ಮನೋಭಾವಕ್ಕನುಗುಣವಾಗಿಯೇ ವರ್ತಿಸುತ್ತಾ ನಡೆಯುವುದರಿಂದ ಅವರ ಅರಿವು, ಗೊಂದಲ, ಅನುಮಾನ, ಪ್ರಜ್ಞೆಗಳು ಓದುಗನದೂ ಆಗುತ್ತಾ ಅದರಲ್ಲೇ ತಲ್ಲೀನವಾಗಿಸಿಬಿಡುವುದು.

ಆ ತಲ್ಲೀನತೆಯ ನಡುವಲ್ಲೇ ಹುಟ್ಟಿಕೊಳ್ಳುವ ನಿಗೂಢ ಸೋಜಿಗ ಮೂಕಜ್ಜಿಯ ವಿಶೇಷ ಶಕ್ತಿಯ ರೂಪದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ – ‘ಅದೇನು ಅದ್ಭುತಶಕ್ತಿಯೂ ಅಥವಾ ಹುಚ್ಚು ಬಡಬಡಿಕೆಯೊ ?’ ಎನ್ನುವ ಅನುಮಾನ ದ್ವಂದ್ವಗಳನ್ನು ಜತೆಜತೆಗೆ ಸಾಗಿಸುತ್ತ. ಹೊರಗಿನ ಜನಕ್ಕೆ ಮುಪ್ಪಿನ ಮರುಳಾಗಿ ಕಾಣಿಸುವ ಅವಳ ಬಡಬಡಿಕೆ, ಮೊಮ್ಮಗನಲ್ಲಿ ಅವಳೇ ಹೇಳಿಕೊಂಡಂತೆ – ‘ನನಗೆ ಏನೇನೋ ಕಾಣಿಸುತ್ತದೆ’ ಎನ್ನುತ್ತಾ ಮನದ ಭಾವನೆಯನ್ನು ಯಥಾವತ್ತಾಗಿ ಓದುವ ಅತೀಂದ್ರಿಯ ಶಕ್ತಿಯಾಗುತ್ತದೆ. ಯಾವ ವಸ್ತು ಮುಟ್ಟಿದರೂ ಮೈ ‘ಜುಂ’ ಎನಿಸಿ ಅದರ ಹಿನ್ನಲೆಯೆಲ್ಲಾ ಕನಸಿನಂತೆ ಕಾಣಿಸಿಕೊಳ್ಳತೊಡಗಿ, ಅದರ ವಿವರಗಳೆಲ್ಲಾ ಕನವರಿಕೆ, ಬಡಬಡಿಕೆಯ ತರದಲ್ಲಿ ಅವಳ ಬಾಯಿಂದ ಹೊರಬಿದ್ದಾಗ ಅದನ್ನು ಅದ್ಭುತಾತಿಶಯ ಶಕ್ತಿಯೆಂದು ಗ್ರಹಿಸಿದವನು ಕೇವಲ ಮೊಮ್ಮಗ ಸುಬ್ರಾಯ ಮಾತ್ರ. ಮಿಕ್ಕೆಲ್ಲರಿಗೂ ಅದು ಮುಪ್ಪಿನ ಮರುಳು.

ಇಡೀ ಕಥಾನಕದ ಹಂದರದಲ್ಲಿ ಬರುವ ಪಾತ್ರಗಳು, ಘಟನೆಗಳು, ಸನ್ನಿವೇಶಗಳು ಮೇಲ್ನೋಟಕ್ಕೆ ಪರಸ್ಪರ ಸಂಬಂಧಿಸದ, ಸಡಿಲವಾಗಿ ಜೋಡಿಸಿದ ಅನುಬಂಧದಂತೆ ಅನಿಸಿದರೂ, ಆ ಪ್ರತಿಯೊಂದೂ ಕತೆಯ ಮೂಲತತ್ವವಾದ ಸೃಷ್ಟಿಮಥನದ ಆವರಣಕ್ಕೆ ಜೋಡಿಸಿದ ನೂರಾರು ಎಳೆಗಳಂತೆ ಕಂಡುಬರುವುದು ಸಮಷ್ಟಿತ ದೃಷ್ಟಿಯಲ್ಲಿ ವೀಕ್ಷಿಸಿದಾಗಲೇ. ಒಂದು ವೇಳೆ ಅದಾಗದಿದ್ದರೂ ಕೊನೆಗದೆಲ್ಲಿಂದಲೋ ಬರುವ ಮೂಕಜ್ಜಿಯ ಕೊಂಡಿ ಅದನ್ನು ನಿರ್ವಹಿಸಿಬಿಡುವುದರಿಂದ ಅದು ಕಳುವಾಗೇನೂ ಹೋಗುವುದಿಲ್ಲ.

ಇಲ್ಲಿನ ಮಾತುಗಳಲ್ಲಿ ಆಗಾಗ್ಗೆ ಇಣುಕುವ ನಿಗೂಢ ಮಥನದಲ್ಲಿ ಈ ಬದುಕಿನಾಳದಲ್ಲಿ ಬಿಟ್ಟುಕೊಡದೆ ಮುಚ್ಚಿಟ್ಟ ಗುಟ್ಟುಗಳೆಲ್ಲ ಅರೆಬರೆಯಾಗಿಯೇ ತೆರೆದುಕೊಳ್ಳುತ್ತ, ಬಿಡಿಸಿದ ಗುಟ್ಟು ಮತ್ತೊಂದು ಗುಟ್ಟಿಗೆ ಕದ ತೆರೆದುಕೊಳ್ಳುವ ರೀತಿಯಲ್ಲಿ ಸಾಗುತ್ತದೆ ಒಂದು ನಿರಂತರ ನಿಲ್ಲದ ಕೊನೆಯಿರದ ಯಾತ್ರೆಯಂತೆ. ಕಥೆಯೊಳಗಿನ ಕಥೆಗಳು ಹುತ್ತದಂತೆ ಕಟ್ಟಿಕೊಳ್ಳುತ್ತಾ ಹೋಗಿ ತಮ್ಮದೇ ಆದ ವಿಸ್ಮಯ ಲೋಕದಲ್ಲಿ ಕೂರಿಸಿಬಿಡುತ್ತವೆ ಆ ಪಾತ್ರಗಳೊಂದಿಗಿನ ಪಾತವೊಂದನ್ನಾಗಿಸುತ್ತ. ಪುಸ್ತಕ ಓದಿ ಮುಗಿಸಿದಾಗ ಆರಂಭದಲ್ಲಿ ಕಿರುಬೀಜವಾಗಿ ಪ್ರಕ್ಷೇಪಗೊಳ್ಳುತ್ತಿದ್ದ ಮೂಕಜ್ಜಿಯ ಚಿತ್ರ , ಅಂತಿಮವಾಗಿ ಬೃಹದಾಕಾರದ ವೃಕ್ಷವಾಗಿ ಅಂತಃಸತ್ವವನ್ನೆಲ್ಲ ಆವರಿಸಿ ವ್ಯಾಪಿಸಿಕೊಂಡುಬಿಟ್ಟಿರುವುದೂ ಕೂಡ ಗಮನಕ್ಕೆ ಬರದಷ್ಟು ತಾದಾತ್ಮ್ಯಕತೆಯಲ್ಲಿ ಮುಳುಗಿಹೋಗಿರುತ್ತದೆ ಓದುಗ ಮನ.

ಅದೆಲ್ಲಕ್ಕಿಂತಲೂ ಹೆಚ್ಚಿನದೆಂದರೆ – ಒಬ್ಬ ಸಾಧಾರಣ ಮನಸ್ಥಿತಿಯಲ್ಲಿರುವ ಓದುಗನನ್ನು , ಓದಿ ಮುಗಿಸುತ್ತಿದ್ದಂತೆಯೆ ತಾನೊಬ್ಬ ಪ್ರಜ್ಞಾವಂತ, ಸಂವೇದನಾಶೀಲ ಮತ್ತು ಜ್ಞಾನ ವೃದ್ಧಿಸಲ್ಪಟ್ಟ ಓದುಗನಾಗಿಬಿಟ್ಟೆನೆಂಬ ಸಂತೃಪ್ತಿ, ಆನಂದದ ಅನುಭೂತಿಯನ್ನೊದಗಿಸಿ ಪ್ರಸನ್ನ, ಪ್ರಶಾಂತ ಚಿತ್ತನನ್ನಾಗಿಸಿಬಿಡುತ್ತದೆ. ಅದು ಎಲ್ಲಾ ಪುಸ್ತಕವನ್ನೂ ಓದಿದಾಗ ಬರುವ ಅನುಭವವಲ್ಲ…! ಇನ್ನು ಕಥೆಯನ್ನು ಓದಿಯೇ ನೀವದರ ಅನುಭೂತಿ ಪಡೆಯುವುದೊಳಿತು. ಅದರ ಕೆಲವು ಸಂವಾದದ ತುಣುಕುಗಳನ್ನು ಮಾತ್ರ ಈ ಕೆಳಗೆ ಕಾಣಿಸಿದ್ದೇನೆ – ಅದರ ಕಿರು ಅನುಭವ ನಿಮಗಾಗಲೆಂದು !

೦೧. ವಾಸ್ತವಿಕವೆನಿಸದ ಎಷ್ಟೊ ಕತೆಗಳು ನಮ್ಮ ಮನಸಿಗೆ ತುಂಬಾ ತೃಪ್ತಿಯನ್ನು ತಂದುಕೊಡುತ್ತವೆ ಎನ್ನುವುದರ ಉದಾಹರಣೆಯಾಗಿ :

‘… ರಾವಣನನ್ನು ಕೊಂದ, ಸೀತೆ ಸಿಕ್ಕಿದಳು – ಎಂಬ ಹೊತ್ತಿನಲ್ಲಿ ಆ ರಾಮ ಏನು ಮಾಡಿದ ? ಅವಳ ಗೋಳನ್ನು ಹನುಮಂತನಿಂದ ತಿಳಿದೂ, ತಿಳಿದೂ, ಆತ ಮಾಡಿದ ಕೆಲಸವೇನು ?……… ಅಗ್ನಿಪರೀಕ್ಷೆಗೆ ಹೊರಟ. ಕತೆ ಆ ಹಂತಕ್ಕೆ ಬಂದಾಗ ಯಾರಿಗೂ ಸಂಕಟವಾಗುತ್ತದೆ. ಅಸಹ್ಯ ಹುಟ್ಟೀತು ರಾಮನ ವಿಚಾರದಲ್ಲಿ. ‘ಅಗ್ನಿಪರೀಕ್ಷೆ ನಡೆಯಿತು, ಸೀತೆ ಪಾರಾಗಿ ಬಂದಳು ‘ ಎಂದೊಡನೆಯೇ ನಮಗೆಲ್ಲ ಮರೆತುಹೋಗುತ್ತದೆ. ರಾಮನ ಮೂರ್ಖತನ ಮರವೆಯಾಗುತ್ತದೆ’ …….. ‘ನಿತ್ಯ ಜೀವನದಲ್ಲಿ ಇರುವುದು ಕೂಡ ಹೀಗೆಯೇ. ವಿಪತ್ತಿನಿಂದ ಪಾರುಮಾಡುವವರು ಇಲ್ಲದೆ ಹೋದರೂ, ಉಂಟುಮಾಡಬೇಕು. ಆಗ ರಾಮನ ಸಂಶಯಗ್ರಸ್ತ ಮನಸ್ಸು ನಮಗೆ ಸಹನೆಯಾಗುತ್ತದೆ..’

೦೨. ಪುಣ್ಯಕೋಟಿ ಕತೆ ಹೇಳುವ ಹೊತ್ತಿನೊಂದು ಸಂಭಾಷಣೆ :

“ಹಾಗಿದ್ದ ಮೇಲೆ! ಒಂದನ್ನು ಒಂದು ತಿಂದೇ ಬದುಕಬೇಕು ಈ ಜಗತ್ತಿನಲ್ಲಿ. ಹುಲಿಯಿದ್ದರೆ ದನವಿಲ್ಲ; ದನವಿದ್ದರೆ ಹುಲಿಯಲ್ಲ.”

“ಎರಡೂ ಬದುಕಲಿ” ಎಂದೆ ನಾನು.

“ಮತ್ತೆ ? ಹುಲಿ ಏನು ತಿನ್ನಬೇಕು, ಹುಲ್ಲನ್ನೇ ? ಹುಲ್ಲಿಗೂ ಜೀವ ಇದೆಯಲ್ಲ. ಹಾಗೆ ಕತೆ ತಿರುಗಿಸಿದರೆ ಹುಲ್ಲನ್ನು ತಿನ್ನಲು ಬಂದ ದನವನ್ನು ಕಂಡು, ಹುಲ್ಲು ಹೆದರಿ ತನ್ನ ಮರಿಯ ಹತ್ತಿರ ಹೋಗಿಬರುತ್ತೇನೆ ಎನ್ನಬೇಕಾದೀತು.”

೦೩. ಊರಿನ ಬಗ್ಗೆ ಮಾತನಾಡುತ್ತ ಮೂಕಜ್ಜಿಯ ಉವಾಚ (ಜೀವನದ ಹುಟ್ಟು ಸಾವು ಬದುಕುಗಳನ್ನು ಕುರಿತು ಆಡಿದ ವಿನೋದ): ” ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ ? ಮೂರೂರು ಅಂದರೆ ಅದೇ. ಈ ಜಗತ್ತೆಲ್ಲ ಮೂರೂರೆ”

೦೪. ಮತ್ತೊಂದು ಅಜ್ಜಿ-ಮೊಮ್ಮಗನ ಸಂಭಾಷಣೆ: (ಮೂಕಜ್ಜಿಗೆ ದೇವರ ನಂಬಿಕೆ ಇದೆಯಾ ಎನ್ನುವ ಜಿಜ್ಞಾಸೆಯಲ್ಲಿ )

“ದೇವರಿಗೆ ಸುತ್ತು ಬರುವುದು ಬೇಡಾ ಅನ್ನುತ್ತೀರಾ ?”
“ಬರುವವರು ಬರಲಿ.”
“ಅಂದರೆ?”
“ದೇವರು ಅಷ್ಟು ಸಣ್ಣವನು ಅಂದುಕೊಂಡರೆ ಸುತ್ತು ಬರಲಿ.”

೦೫. “..ಕನಸು, ಭ್ರಮೆ ಅನ್ನುತ್ತಾರಲ್ಲ . ಮಗು ಅದೇ ಇದು . ತಾವೇ ಮೋಹ ಪಾಶ ಕಡಿದುಕೊಳ್ಳಲಾಗದ ದೇವರು, ಇವರ ಮೋಹ ಪಾಶ ಕಡಿದು ಉದ್ದಾರ ಮಾಡುತ್ತಾನೆ – ಎಂಬುದು”

ಇನ್ನು ಮಿಕ್ಕ ಅನುಭವಕ್ಕೆ ಪುಸ್ತಕದೊಳಗೆ ಕಾಲಿರಿಸುವುದೇ ಒಳಿತು. ಅಚ್ಚರಿಯೆಂಬಂತೆ ೨೭೨ ಪುಟಗಳ ಹಾರ್ಡ್ಬೌಂಡ್ ಪುಸ್ತಕ ನನಗೆ ೧೩೦ ರೂಪಾಯಿಗೆ ಸಿಕ್ಕಿತು. ಅದು ಜ್ಞಾನಪೀಠ ಪ್ರಶಸ್ತಿ ಪಡೆದ ಈ ಪುಸ್ತಕಕ್ಕೆ ನೀಡಬಹುದಾದ ಕವಡೆ ಕಾಸಿನ ಬೆಲೆ..!

4 ಟಿಪ್ಪಣಿಗಳು Post a comment
 1. ಮಾರ್ಚ್ 15 2016

  ಓದಬೇಕು.. ಧನ್ಯವಾದಗಳು

  ಉತ್ತರ
 2. ಮಾರ್ಚ್ 15 2016

  ಆ ಪುಸ್ತಕವನ್ನು ಓದುವ ಮೊದಲು ಆ ಅಜ್ಜಿ ಮೂಕಿ ಅಂತ ತಿಳ್ಕೊಂಡಿದ್ದೆ. ಆಮೇಲೆ ತಿಳೀತು ಅದು ಅವಳ ಹೆಸರು ಮೂಕಾಂಬಿಕ ಅಂತ.

  ಉತ್ತರ
 3. ಮಾರ್ಚ್ 16 2016

  ಪ್ರತಿಕ್ರಿಯೆಗೆ ಧನ್ಯವಾದಗಳು ಮುರಳಿಯವರೆ 🙏🙏
  ಹೆಸರು ಮೂಕಾಂಬಿಕೆ ಅನ್ನೋದು ಒಂದು ಕಾರಣವಾದರೆ, ಕಥೆಯ ನಡುವಿನ ಕೆಲವು ಕಾಲ ಅಜ್ಜಿ ಏನೂ ಮಾತಾಡದೆ ಮೂಕಿಯಂತೆ ಇದ್ದುಬಿಡುತ್ತಾಳೆ ಸಹ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments