ಕೋರೆ-ಷಡಕ್ಷರಿ-ಮಯ್ಯ ಶುರು ಮಾಡ್ತಾರಂತೆ ಸುವರ್ಣ ಕರ್ನಾಟಕ…ಹೌದಾ?
ಆತ್ರಾಡಿ ಸುರೇಶ ಹೆಗ್ಡೆ
ಹೌದು ಸುದ್ದಿಮನೆಯ ಸುತ್ತುಮುತ್ತಲಿಂದ, ಹೊಸ ಹೊಸ ಗಾಳಿ ಸುದ್ದಿಗಳು, ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳೊಂದಿಗೆ, ಯಾವುದೇ ಲಂಗು ಲಗಾಮಿಲ್ಲದೇ ತೇಲಿಬರುತ್ತಿವೆ.
ನಿನ್ನೆ ಸಂಜೆ ವಿಶೇಷವಾಗಿ ನನ್ನ ಕಿವಿಗಳಿಗೆ ಕೇಳಿಸಿದ ಪಿಸುಮಾತುಗಳ ಪ್ರಕಾರ, ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ನವದೆಹಲಿಯಿಂದ ಬೆಂಗಳೂರಿಗೆ, ಹೊಸ ಸುದ್ದಿಯೊಂದನ್ನು, ಹೊಸ ಯೋಜನೆಯೊಂದರ ರೂಪುರೇಷೆಯನ್ನು ಗುಟ್ಟಾಗಿ ಹಿಡಿದುಕೊಂಡು ಬಂದಿರುತ್ತಾರಂತೆ.
ವಿಜಯ ಸಂಕೇಶ್ವರರ “ಆನಂದ ಕರ್ನಾಟಕ”ದ ಯೋಜನೆಗಳು ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಉದ್ಯಮಿ ಹಾಗೂ ಸಂಸದ ಪ್ರಭಾಕರ ಕೋರೆಯವರು ಮೀನಿಗೆ ಗಾಳ ಬೀಸಿದ್ದಾರೆ ಎನ್ನುವ ಸುದ್ದಿ ಇದೆ.
ಅಣಿಮುತ್ತುಗಳನ್ನು ದಿನವೂ ಉಣಬಡಿಸುವ ಷಡಕ್ಷರಿಯವರು ಮತ್ತು ಹೊಸ ಹೊಸ ಅಡುಗೆಗಳನ್ನು ಉಣಬಡಿಸುವ ಮಯ್ಯರವರನ್ನು ಸೇರಿಸಿಕೊಂಡು, ಕೋರೆಯವರು ಸುಮಾರು ೬೦-೭೦ ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಭಟ್ಟರ ಮುಂದಿಟ್ಟಿದ್ದಾರಂತೆ. ಆ ಯೋಜನೆಯ ಪ್ರಕಾರ “ಸುವರ್ಣ ಕರ್ನಾಟಕ” ಅನ್ನುವ ಹೊಸ ದಿನಪತ್ರಿಕೆ ಈ ನಾಡಿನ ಪತ್ರಿಕಾ ರಂಗದಲ್ಲಿ ಸದ್ಯದಲ್ಲೇ ಸಂಚಲನ ಹೊರಡಿಸಲಿದೆಯಂತೆ.
ಇವೆಲ್ಲಾ ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನುವುದು ನನಗೆ ಅಪ್ರಸ್ತುತ.
ಏಕೆಂದರೆ ವಿಜಯ ಕರ್ನಾಟಕದ ಮಾಜಿ ತಂಡದಿಂದ ಹೊಸದೊಂದು ಪತ್ರಿಕೆಯ ನಿರೀಕ್ಷೆಯಲ್ಲಿರುವ ನಾನು, ಈ ಎಲ್ಲಾ ಗಾಳಿ ಸುದ್ದಿಗಳನ್ನು ನಂಬಲೇಬೇಕಾದ ಅನಿವಾರ್ಯತೆ ಇದೆ.
ಹಾಗಾಗಿ ನಂಬೋಣ… ಕಾದು ನೋಡೋಣ… ಏನಂತೀರಿ?
ಪ್ರಭಾಕರ ಕೋರೆ ವಿಜಯಿಯಾಗ್ತಾರೋ ಅಥವಾ ವಿಜಯ ಸಂಕೇಶ್ವರ ವಿಜಯ ಪತಾಕೆ ಹಾರಿಸ್ತಾರೋ ಅನ್ನುವ ಅನುಮಾನಗಳ ಜೊತೆಗೆ, ಬಳ್ಳಾರಿಯ “ಜನಶ್ರೀ”ಗಳು ಎಷ್ಟು ಕೋಟಿಗಳ ಅಡ್ಡಗೋಡೆ ಕಟ್ಟಿ ಈ ತಂಡವನ್ನು ತಮ್ಮತ್ತ ಸೆಳೆದು ಕೊಳ್ತಾರೋ ಅನ್ನುವ ಭಯವೂ ಇದೆ.
ಕಾಲಾಯ ತಸ್ಮೈ ನಮಃ





ಭಟ್ರು ಮನೇಲಿ ನೆಮ್ಮದಿಲಿ ನಿದ್ದೆ ಮಾಡ್ತಿದ್ದಾರೆ.. ಸುಮ್ಮನೆ ಬಿಡಿ ಸ್ವಲ್ಪ ದಿನ.. ಯಾಕೆ ಊಹಾಪೋಹ ?