ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 18, 2010

ಸಾವನ್ನು ನಾಚಿಸಿದ ರ್ಯಾಂಡಿ!

‍ನಿಲುಮೆ ಮೂಲಕ

– ಸುಪ್ರೀತ್.ಕೆ.ಎಸ್

‘ದಿ ಲಾಸ್ಟ್ ಲೆಕ್ಚರ್’ ಎಂಬ ಹೆಸರಿನಲ್ಲಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯ ಉಪನ್ಯಾಸ ಸರಣಿಯನ್ನು ಏರ್ಪಡಿಸುತ್ತದೆ. ವರ್ಷಕ್ಕೊಬ್ಬರ ಹಾಗೆ ತನ್ನ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ‘ಇದೇ ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ’ ಎಂದು ಕಲ್ಪಿಸಿಕೊಂಡು ವಿದ್ಯಾರ್ಥಿಗಳಿಗೆ ಲೆಕ್ಚರ್ ಕೊಡಬೇಕು. ತಾವು ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ನಿಂತಾಗ ತಮಗೆ ತಮ್ಮಿಡೀ ಬದುಕಿನಲ್ಲಿ ಬಹುಮುಖ್ಯವಾಗಿ ಕಾಣುವ ಸಂಗತಿಗಳ್ಯಾವುವು ಎಂಬ ವಿವೇಚನೆ ನಡೆಸಲು ಅಧ್ಯಾಕಪರಿಗೆ ಇದು ಅವಕಾಶ ಮಾಡಿಕೊಟ್ಟರೆ, ಅಕಾಡೆಮಿಕ್ ಮುಖವಾಡದಾಚೆಗಿನ ತಮ್ಮ ಲೆಕ್ಚರರ ವ್ಯಕ್ತಿತ್ವದ ಪರಿಚಯ ವಿದ್ಯಾರ್ಥಿಗಳಿಕ್ಕೆ ಸಿಕ್ಕುತ್ತದೆ ಎಂಬ ಉದ್ದೇಶ ವಿಶ್ವವಿದ್ಯಾಲಯದ್ದು .

ಸೆಪ್ಟೆಂಬರ್ ಹದಿನೆಂಟು ೨೦೦೭ರಂದು ‘ದಿ ಲಾಸ್ಟ್ ಲೆಕ್ಚರ್’ ಸರಣಿಯಲ್ಲಿ ಉಪನ್ಯಾಸ ನೀಡಿದವರು ಮೆಲಾನ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಬೋಧಿಸುತ್ತಿದ್ದ ರಾಂಡಾಲ್ಫ್ ಫೆಡ್ರರಿಕ್ ಪೌಚ್. ಅವರ ಉಪನ್ಯಾಸ ಸಾಮಾನ್ಯವಾದುದಾಗಿರಲಿಲ್ಲ. ಉಳಿದೆಲ್ಲಾ ಅಧ್ಯಾಪಕರು ಅದು ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ ಎಂದು ‘ಕಲ್ಪಿಸಿ’ಕೊಂಡು ಮಾತಾಡಿದ್ದರೆ ರ್‍ಯಾಂಡಿಗೆ ಅದು ನಿಜಕ್ಕೂ ಕಟ್ಟ ಕಡೆಯ ಉಪನ್ಯಾಸವಾಗಿತ್ತು. ಭಾಷಣ ನೀಡುವ ಹೊತ್ತಿಗೆ ಆತ ದೇಹದಲ್ಲಿ ಮನೆ ಮಾಡಿಕೊಂಡಿದ್ದ ಯಕೃತ್ತಿನ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿತ್ತು. ಆತನಿಗೆ ಹೆಚ್ಚೆಂದರೆ ಆರು ತಿಂಗಳು ಬದುಕುವ ಅವಕಾಶವನ್ನು ನೀಡಿತ್ತು ಕ್ಯಾನ್ಸರ್. ಸಾವಿನ ಸಮ್ಮುಖದಲ್ಲಿ ನಿಂತಂತೆ ಕಲ್ಪಿಸಿಕೊಂಡು ಉಪನ್ಯಾಸ ಕೊಡುವುದು ಬೇರೆ. ಆದರೆ ಸಾವು ಡೇಟು ಕೊಟ್ಟು ಹೋದ ನಂತರ ತನ್ನ ಬದುಕಿನ ಬಗ್ಗೆ ಮಾತನಾಡುವುದು ಬೇರೆ.ಹಾಗೆ ಮಾತಾಡುವ ಮನುಷ್ಯನಲ್ಲಿ ಅದಮ್ಯ ಜೀವನೋತ್ಸಾಹ, ಆತ್ಮವಿಶ್ವಾಸ ಇರಬೇಕಾಗುತ್ತದೆ. ಅವೆಲ್ಲವೂ ರ್‍ಯಾಂಡಿಯಲ್ಲಿದ್ದವು.

ರ್‍ಯಂಡಿ ಅಂದು ತನ್ನ ‘ಲಾಸ್ಟ್ ಲೆಕ್ಚರಿನಲ್ಲಿ’ ತನ್ನ ಬಾಲ್ಯದ ಕನಸುಗಳ ಬಗ್ಗೆ ಮಾತನಾಡಿದ. ತಾನು ಅವುಗಳನ್ನು ಹೇಗೆ ಸಾಕಾರ ಗೊಳಿಸಿಕೊಂಡೆ ಎಂಬ ಬಗ್ಗೆ ನೆನಪಿಸಿಕೊಂಡ. ನನಸಾಗದ ಕನಸುಗಳ ಮೈಯನ್ನು ತಡವಿದ. ಅತನ ಸಹೋದ್ಯೋಗಿ ರ್‍ಯಾಂಡಿಯನ್ನು ಪರಿಚಯಿಸಿದ ನಂತರ ವೇದಿಕೆಯನ್ನು ಹತ್ತಿದ ರ್‍ಯಾಂಡಿಯನ್ನು ಸ್ವಾಗತಿಸಿದ್ದು ಇಡೀ ಸಭಾಗಂಣದಲ್ಲಿ ಮಾರ್ದನಿಸುತ್ತಿದ್ದ ಚಪ್ಪಾಳೆಯ ಸದ್ದು. ‘ಅದನ್ನು ಗಳಿಸಿಕೊಳ್ಳಲು ಅವಕಾಶ ಕೊಡಿ’ (make me earn it) ಎಂದ ರ್‍ಯಾಂಡಿ. ಕೇಳುಗರು ಒಕ್ಕೊರಲಿನಿಂದ ಕೂಗಿದರು, ‘ನೀವದನ್ನು ಗಳಿಸಿಕೊಂಡಿದ್ದೀರಿ’ (you did). ಅನಂತರ ತನ್ನ ಉಪನ್ಯಾಸ ಪ್ರಾರಂಭಿಸಿದ ಪೌಚ್. ತಾನು ಬದುಕಿನ ಬಗ್ಗೆ ತಳೆದಿರುವ ನಿಲುವನ್ನು ಪ್ರಕಟಿಸಿದ. ಸಾವಿನ ಸಮ್ಮುಖದಲ್ಲಿ ಆಧ್ಯಾತ್ಮವನ್ನು ಅಪ್ಪಿಕೊಂಡು ‘ಜಗತ್ತು ಶೂನ್ಯ, ದೇಹ ನಶ್ವರ, ದೇವನನ್ನು ಒಪ್ಪಿಕೊಳ್ಳಿ’ ಎಂದು ಬಡಬಡಿಸುವುದಿಲ್ಲ ಎಂದು ಹೇಳಿದ. ಸಾವಿನ ಏಜೆಂಟರು ತನ್ನ ದೇಹವಿಡೀ ವ್ಯಾಪಿಸಿದರೂ ತಾನೆಷ್ಟು ಆರೋಗ್ಯವಾಗಿದ್ದೇನೆ ಎಂಬುದನ್ನು ತೋರಿಸಲಿಕ್ಕೆ ವೇದಿಕೆಯ ಮೇಲೆ ಸಾಮು ತೆಗೆದ. ಅರಳು ಹುರಿದ ಹಾಗೆ ಮಾತನಾಡುತ್ತಾ ಹೋದ. ಕೇಳುಗರ ಸಾಲಿನಲ್ಲಿದ್ದ ಆತನ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ನಗು ನಗುತ್ತಾ, ಆತನ ಜೀವನ ಪ್ರೀತಿಯಲ್ಲಿ ಪಾಲ್ಗೊಳ್ಳುತ್ತಾ, ಮಂತ್ರ ಮುಗ್ಧರಾಗಿ ಕುಳಿತಿದ್ದರು.
ಬಾಲ್ಯದಲ್ಲಿ ತಾನು ಕಂಡಂತಹ ಸಣ್ಣ ಸಣ್ಣ ಕನಸುಗಳು ಹಾಗೂ ಅವುಗಳಲ್ಲಿ ಸಾಕಾರಗೊಂಡ ಕೆಲವನ್ನು ನೆನಪಿಸಿಕೊಳ್ಳುತ್ತಾ ರ್ಯಾಂಡಿ ಬದುಕಿನ ವಿವಿಧ ಹಂತಗಳಲ್ಲಿ ತನ್ನನ್ನು ಪ್ರಭಾವಿಸಿದ ಸಂಗತಿಗಳ ಬಗ್ಗೆ, ತನ್ನಲ್ಲಿ ಸ್ಪೂರ್ತಿಯನ್ನು ತುಂಬಿದ ಆಲೋಚನೆಗಳ ಬಗ್ಗೆ ಮಾತನಾಡುತ್ತಾ ಹೋದ. ಪ್ರತಿಯೊಂದು ಕನಸನ್ನು ಸಾಕಾರಗೊಳಿಸಿಕೊಳ್ಳುವ ಹಾದಿಯಲ್ಲೂ ಒಂದು ಬಲಿಷ್ಠವಾದ ಗೋಡೆ ಅಡ್ಡ ನಿಂತಿರುತ್ತದೆ. ಅದು ನಾವು ಮುಂದಕ್ಕೆ ಹೋಗಲು ತಡೆಯಲ್ಲ. ನಾವು ಮುಂದಕ್ಕೆ ಹೋಗಬೇಕು ಎನ್ನುವುದರ ಬಗ್ಗೆ ಎಷ್ಟು ಸೀರಿಯಸ್ ಆಗಿದ್ದೇವೆ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ನಿಂತಿರುತ್ತದೆ. ನಮ್ಮ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ನುಗ್ಗಿದಾಗ ಗೋಡೆಯನ್ನು ಕೆಡವಿ ಮುನ್ನಡೆಯಬಹುದು. ಗೋಡೆ ಅಚಲವಾಗಿದ್ದರೆ, ನಮ್ಮಲ್ಲಿ ಇನ್ನೂ ಅಷ್ಟು ಗಾಢವಾದ ಕಾಂಕ್ಷೆ ಇಲ್ಲ ಎಂದುಕೊಳ್ಳಬೇಕು. ನಮ್ಮ ಪ್ರಯತ್ನದಿಂದ ಸಾಕಷ್ಟು ಪಾಠ ಕಲಿತುಕೊಳ್ಳಬೇಕು. ಈ ಸ್ಪೂರ್ತಿ ಆತನಿಗೆ ಬದುಕಿನ ಅಂತಿಮ ಘಟ್ಟದಲ್ಲಿ ಪ್ರಾಮುಖ್ಯ ಪಡೆದ ಸಂಗತಿಯಾಗುತ್ತದೆ.

ತನ್ನ ಒಂದು ಘಂಟೆ ಹದಿನೈದು ನಿಮಿಷಗಳ ಭಾಷಣದ ತುಂಬಾ ರ್‍ಯಾಂಡಿ ಬದುಕನ್ನು ಹೇಗೆ ಸಂಭ್ರಮಿಸುವುದು ಎಂಬ ಬಗ್ಗೆಯೇ ಮಾತನಾಡಿದ್ದಾನೆ. ತನ್ನೆಲ್ಲಾ ಕನಸುಗಳನ್ನು ಹಂಚಿಕೊಂಡಿದ್ದಾನೆ. ವಿದ್ಯಾರ್ಥಿಗಳಲ್ಲಿ ಕನಸು ಕಾಣುವ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಹುಮ್ಮಸ್ಸನ್ನು ತುಂಬಿದ್ದಾನೆ. ಆತನ ಲಾಸ್ಟ್ ಲೆಕ್ಚರ್ ಇಂಟರ್ನೆಟ್ಟಿನ್ನು ಪ್ರವೇಶಿಸಿ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ಯು ಟ್ಯೂಬ್, ಗೂಗಲ್ ವಿಡಿಯೋಗಳಲ್ಲಿನ ಆತನ ಉಪನ್ಯಾಸವನ್ನು ಜಗತ್ತಿನಾದ್ಯಂತ ಸುಮಾರ ಆರು ಮಿಲಿಯನ್ ಜನರು ವೀಕ್ಷಿಸಿದರು. ಆತನ ಉಪನ್ಯಾಸದ ಪ್ರಾಮುಖ್ಯತೆ ಹಾಗೂ ಜನಪ್ರಿಯತೆಯನ್ನು ಕಂಡು ವಾಲ್ ಸ್ಟ್ರೀಟ್ ಜರ್ನಲ್ಲಿನ ಅಂಕಣಕಾರ ಜೆಫ್ರಿ ಜಾಸ್ಲೋವ್ ಎಂಬುವವರು ಆತನ ಉಪನ್ಯಾಸದಲ್ಲಿ ಪ್ರಸ್ತಾಪವಾಗಿರುವ ಚಿಂತನೆಗಳನ್ನು ಒಟ್ಟುಗೂಡಿಸಿ ‘ದಿ ಲಾಸ್ಟ್ ಲೆಕ್ಚರ್’ ಎನ್ನುವ ಪುಸ್ತಕವನ್ನು ಬರೆದಿದ್ದಾರೆ.

‘ನಿಮ್ಮ ಬಳಿಯಿರುವ ಒಂದೇ ಒಂದು ವಸ್ತುವೆಂದರೆ ಸಮಯ. ಆದರೆ ಒಮ್ಮೆ ನಿಮಗೆ ನಿಮ್ಮ ಬಳಿ ನೀವಂದುಕೊಂಡಷ್ಟು ಸಮಯ ಇಲ್ಲ ಎಂಬುದು ತಿಳಿಯುತ್ತದೆ’ ಎನ್ನುತ್ತಿದ್ದ ಪೌಚ್, ಸಾವು ತನಗೆ ನೀಡಿ ಹೋಗಿದ್ದ ಆರು ತಿಂಗಳ ಸಮಯವನ್ನು ಇಡಿಯಾಗಿ ತನ್ನ ಕುಟುಂಬದ ಜೊತೆ ಕಳೆಯಲು ತೀರ್ಮಾನಿಸುತ್ತಾರೆ. ಮಡದಿ ಜೈ ಹಾಗೂ ಮೂರು ಮಕ್ಕಳೊಂದಿಗೆ ತಮ್ಮ ದಿನದ ಬಹಳಷ್ಟು ಸಮಯವನ್ನು ಕಳೆಯುತ್ತಾರೆ. ಪುಸ್ತಕವನ್ನು ಬರೆಯಬೇಕಾದ ಸಂದರ್ಭದಲ್ಲಿಯೂ ತಮ್ಮ ಮೊಟರ್ ಬೈಕಿನಲ್ಲಿ ಪ್ರಯಾಣಿಸುವ ಸಮಯದಲ್ಲಿ ಜೆಫ್ರಿಗೆ ಟಿಪ್ಪಣಿಗಳನ್ನು ಕಳುಹಿಸುತ್ತಿರುತ್ತಾರೆ. ತಮ್ಮ ಬದುಕಿನ ಕಡೆಯ ಘಳಿಗೆಯನ್ನೂ ಮಕ್ಕಳ ಜೊತೆಗೆ ಕಳೆಯಬೇಕು ಎನ್ನುವ ಆಸೆ ಅವರದಾಗಿತ್ತು.

ಬದುಕಿನ ಕಡೆಯ ಕ್ಷಣದವರೆಗೆ ಜೀವನೋಲ್ಲಾಸದ ಕಾರಂಜಿಯಂತೆ ಪುಟಿಯುತ್ತಿದ್ದ ರ್‍ಯಾಂಡಿ ಮನುಷ್ಯನ ಸಾವು ಬದುಕನ್ನು ನಿರ್ಣಯಿಸುವ ಶಕ್ತಿಯೊಂದಿದ್ದರೆ ಅದಕ್ಕೆ ನಾಚಿಕೆಯಾಗುವಷ್ಟು ತೀವ್ರತೆಯಲ್ಲಿ ಬದುಕಿದವ. ಬದುಕಿನ ಪ್ರತಿಕ್ಷಣವನ್ನು ಸಂಭ್ರಮಿಸಿದವ. ಸಾವಿನೊಂದಿಗಿನ ಹೋರಾಟದಲ್ಲಿ ಘನತೆಯ ಸೋಲನ್ನು ಅಪ್ಪಿದವ. ಇದೇ ಜುಲೈ ೨೫ ರಂದು ತನ್ನ ನಲವತ್ತೇಳನ ವಯಸ್ಸಿನಲ್ಲಿ ಪ್ರಾಣ ಬಿಟ್ಟ ಪೌಚ್ ಸಾವಿನೆದುರು ಮನುಷ್ಯ ಮೆರೆದ ಔದಾರ್ಯದ ಪ್ರತೀಕ. ಆತ ನಮ್ಮೊಂದಿಗಿಲ್ಲದಿದ್ದರೂ ಆತನ ಉಪನ್ಯಾಸವಿದೆ, ಆತನ ಬದುಕಿನ ಸ್ಪೂರ್ತಿಯಿದೆ. ಒಬ್ಬ ವ್ಯಕ್ತಿ ತನ್ನ ಮಕ್ಕಳಿಗೆ, ಸಮಾಜಕ್ಕೆ ಇನ್ನು ಹೆಚ್ಚಿನದೇನನ್ನು ಕೊಡಬಲ್ಲ?

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments