ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2010

5

ಬೆಂಗಳೂರು-ಮಂಗಳೂರು ಬಸ್ಸಲ್ಲಿ…!

‍ನಿಲುಮೆ ಮೂಲಕ

ವೇಣುವಿನೋದ್, ಪತ್ರಕರ್ತರು, ಮಂಗಳೂರು

ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…

ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ.
ಏನೇ ಇರಲಿ ಬೆಂಗಳೂರು ತಲಪಿದ್ದಾಯ್ತು. ಗೆಳೆಯ ಸದಾಶಿವನೊಂದಿಗೆ ಮಧ್ಯಾಹ್ನ ವರೆಗೂ ಕ್ಯಾಮೆರಾ ಸರ್ವಿಸ್, ಮತ್ತಿತರ ಕೆಲಸ. ಬಂಧುವೊಬ್ಬರ ಮನೆಗೆ ಭೇಟಿ, ಪುಸ್ತಕಕ್ಕಾಗಿ ಸಪ್ನ ಬುಕ್ ಹೌಸ್ ಭೇಟಿ…ಹೀಗೆ ನನ್ನ ಪಟ್ಟಿಯಲ್ಲಿದ್ದ ಕೆಲಸಗಳೆಲ್ಲ ಮುಗಿದವು. ಸಂಜೆ ೭-೩೦ರ ವೇಳೆಗೆ ಎಲ್ಲ ಕೆಲಸವೂ ಆಗಿತ್ತು,
ಮೆಜೆಸ್ಟಿಕ್‌ನ ಕಾಮತ್‌ದಲ್ಲಿ ಲೈಟಾಗಿ ರವಾ ದೋಸೆ ಸವಿದು, ಇನ್ನು ರಾಜಹಂಸದಲ್ಲೇ ಪ್ರಯಾಣಿಸೋಣ ಎಂದು ಲೆಕ್ಕ ಹಾಕಿ ಕೆಎಸ್‌ಆರ‍್ಟಿಸಿ ಬಸ್ ನಿಲ್ದಾಣದತ್ತ ಪಾದ ಬೆಳೆಸಿದೆ. ಶನಿವಾರವಾದ್ದರಿಂದ ಎಂದಿಗಿಂತ ಹೆಚ್ಚು ಜನರಿದ್ದರು.
‘ಸಾರ‍್ ನೀವು ಕನ್ನಡ, ಹಿಂದಿ ಅಥವಾ ಮಲಯಾಳಂ’ ಎನ್ನುತ್ತಾ ಸುಮಾರು ೧೭-೧೮ರ ಹುಡುಗನೊಬ್ಬ ದೂರದ ಬಂಧುವಿನಂತೆ ಓಡೋಡಿ ಬಂದ. ಖಾಸಗಿ ಬಸ್ ಏಜೆಂಟ್ ಅನ್ನೋದು ಮೇಲ್ನೋಟಕ್ಕೇ ಗೊತ್ತಾಯ್ತು.
ಕನ್ನಡ…ಯಾಕೆ?
ಎಲ್ಲಿಗೆ ಹೋಗ್ಬೇಕ್ ಸಾ….?
ಮಂಗಳೂರಿಗೆ…ಕೆಎಸ್ಸಾರ್ಟಿಸಿಯಲ್ಲೇ ಹೋಗ್ತೇನೆ…
ನಮ್ಮದು  ಬಸ್ಸಿದೆ. ಬರೀ ೩೨೦ ರು ಚಾರ್ಜಷ್ಟೇ…೯ ಗಂಟೆಗೆ ಬಿಡುತ್ತೇವೆ, ೫.೩೦, ೬ಕ್ಕೆಲ್ಲಾ ಮಂಗಳೂರು ತಲಪುತ್ತೆ.
ಯಾವ ಬಸ್ಸೆಂದು ನಾನೂ ನಿರ್ಧರಿಸಿರಲಿಲ್ಲ, ಹಾಗಾಗಿ ಖಾಸಗಿ ಬಸ್ ಸೇವೆ ಹೇಗಿದೆ ಎಂದು ನೋಡೋಣ ಎಂಬ ಕುತೂಹಲವೂ ಇತ್ತು.  ಇದ್ದುದರಲ್ಲೇ ಒಳ್ಳೆ ಬಸ್ ಎಂಬ ಹೆಸರೂ ಇದ್ದ ಕಾರಣ ಅವನೊಂದಿಗೆ ಏಜೆನ್ಸಿಗೆ ಹೆಜ್ಜೆ ಹಾಕಿದೆ.
ನನ್ನನ್ನು ಬರಹೇಳಿದ ಆತ ಸರಕ್ಕನೆ ರಸ್ತೆ ದಾಟಿ ಮೀಡಿಯನ್‌ನಲ್ಲಿದ್ದ ಬೇಲಿಯನ್ನೂ ಹೈಜಂಪ್ ಮಾಡಿದ. ನಾನೂ ಹಿಂಬಾಲಿಸಿದೆ.

ಕೆಎಫ್‌ಸಿ ರೆಸ್ಟುರಾ ಪಕ್ಕದ  ಟ್ರಾವೆಲ್ ಏಜೆನ್ಸಿವೊಂದರ ಬೋರ್ಡ್ ನೋಡುತ್ತಾ ಒಳ ನಡೆದೆ. ಅಲ್ಲಿ ಕುಳಿತಿದ್ದ ಮಹಾನುಭಾವ ಸೈಡ್ ಸೀಟಲ್ವಾ ಎಂದು, ವಿಚಾರಿಸಿ ೧೯ ಸೀಟ್ ನಂಬರ‍್ ಬರೆದು ರಶೀದಿ ಕೊಟ್ಟ. ಹಣಕೊಟ್ಟೆ.

ಊಟ-ಗೀಟ ಮಾಡಿ ಬನ್ನಿ ಸಾ….೯.೩೦ಕ್ಕೆ ಇಲ್ಲೇ ಮುಂದೆ ಬಸ್ ಪಿಕಪ್‌ಗೆ ಬರುತ್ತೆ ಎಂದ.
ಮತ್ತೆ ೯ಕ್ಕೆ ಬಸ್ ಬಿಡುತ್ತೆ ಅಂದಿದ್ದಲಾ? ಕೇಳಿದೆ.
ಬಸ್ ಇಲ್ಲೇ ಹಿಂದೆ ಇದೆ. ಅದು ೯ಕ್ಕೇ ಹೊರಟು, ಕಲಾಸಿಪಾಳ್ಯ ಹೋಗಿ ಇಲ್ಲಿಗೆ ೯.೩೦ಕ್ಕೆ ಬರುತ್ತೆ ಎಂದು ಹೇಳಿದ ಆಸಾಮಿ.
ಇರಲಿ ಅರ್ಧಗಂಟೆಯಲ್ವೇ ಎಂದು ವಾಚ್ ನೋಡಿದರೆ ಇನ್ನೂ ೮.೧೫. ಸಾಕಷ್ಟು ಸಮಯವಿತ್ತು. ಸುಮ್ಮನೇ ಕೆಎಸ್‌ಆರ‍್ಟಿಸಿ ಬಸ್ ನಿಲ್ದಾಣಕ್ಕೊಂದು ಸುತ್ತು ಹಾಕಿ ಒಂದು ಕೋಲ್ಡ್ ಬಾದಾಮಿ ಹಾಲು ಕುಡಿದು ಬಸ್ಸು ಏಜೆನ್ಸಿಯಲ್ಲಿ ಕುಳಿತು ಇದ್ದ ಪುಸ್ತಕ ಓದುತ್ತಲಿದ್ದೆ. ಅಲ್ಲೊಬ್ಬ ಹಿಂದಿ ಮಾತಾಡುವ ಸ್ವಾಮೀಜಿ ಕೂಡಾ ಕುಳಿತಿದ್ದರು.
೯.೩೦ಕ್ಕೆ ಏಜೆನ್ಸಿಯ ಆಸಾಮಿ ನಮ್ಮನ್ನು ಹೊರಗೆ ಕರೆದು. ಅಲ್ಲಿಂದ ಸುಮಾರು ೧೦೦ ಮೀಟರ‍್ ದೂರ ಸುರಂಗ ಮಾರ್ಗದ ಹತ್ತಿರ ಸಾಲು ಸಾಲಾಗಿ ಖಾಸಗಿ ಬಸ್ ನಿಂತಿದ್ದವು.
ಅಲ್ನೋಡಿ ಸಾ…ಹಿಂದಿನಿಂದ ಎರಡನೇ ಬಸ್…ನಿಮ್ಮದೇ..ಅನ್ನಪೂರ್ಣದಿಂದ ಬಂದಿದ್ದು ಅಂತ ರಶೀದಿ ತೋರಿಸಿ…ಎಂದ.
ನಾನೂ ಮತ್ತು ಹಿಂದಿ ಸ್ವಾಮೀಜಿ ಅಲ್ಲಿಗೆ ಹೋದೆವು.

ನೋಡಿದರೆ ಅದು ಯಾವುದೋ ರೋಡ್‌ಲೈನ್ಸ್ ಎಂಬ  ಹೆಸರು ಬೇರೆ!
ಅಲ್ಲಿದ್ದ ಮತ್ತೊಂದು ಅಸಾಮಿಗೆ ರಶೀದಿ ಕೊಟ್ಟೆ, ಅದನ್ನು ಕಿಸೆಗಿಳಿಸಿ, ಇನ್ನೊಂದು ಬೋರ್ಡಿಂಗ್ ಪಾಸ್ ಕೊಟ್ಟ. ವಿಂಡೋ ಸೀಟಲ್ವೇ ಇನ್ನೊಮ್ಮೆ ವಿಚಾರಿಸಿಕೊಂಡೆ.
ಹೋಗಿ ಹೋಗಿ ಕುತ್ಕಳ್ಳಿ ಎಂದು ದಬಾಯಿಸಿದ !
ನೇರ ೧೯ ಸೀಟಲ್ಲಿ ಹೋಗಿ ಕುಳಿತೆ. ಇನ್ನೊಂದು ಸಾಲಿನ ವಿಂಡೋ ಸೀಟಲ್ಲಿ ಹಿಂದಿ ಸ್ವಾಮೀಜಿ.
ಕುಳಿತು ಬಸ್ ಅವಲೋಕಿಸಿದರೆ ಯಾವುದೋ ೧೫ ವರ್ಷ ಹಿಂದಿನ ಲಡಖಾಸು ಗಾಡಿಯದು. ಸೀಟಿನ ತಲೆಭಾಗದಲ್ಲಂತೂ ಕಪ್ಪುಕಪ್ಪು ಗ್ರೀಸ್ ಬಳಿದಂತೆ ಕಾಣುತ್ತಿತ್ತು. ಬಾಟಲ್, ಪೇಪರ‍್ ಹೋಲ್ಡರುಗಳೆಲ್ಲಾ ಹರಿದು ನೇತಾಡುತ್ತಿದ್ದವು. ಪ್ರಯಾಣಿಕರೊಬ್ಬರ ಕೈ ಆಕಸ್ಮಿಕವಾಗಿ ತಗಲಿ ಲೈಟೊಂದರ ಮುಚ್ಚಳ ಬಿದ್ದೇ ಹೋಯ್ತು. ಇತಿಹಾಸ ಕಾಲದಲ್ಲಿ ವಿಡಿಯೋ ಕೋಚ್ ಬಸ್ಸಾಗಿತ್ತು ಎಂದು ಸಾರುವಂತೆ ವಿಡಿಯೋ ಇದ್ದ ಜಾಗದಲ್ಲಿ ಬೋರ್ಡೊಂದನ್ನು ಅಂಟಿಸಿದ್ದರು.
ನನ್ನದೇ ಆಲೋಚನೆ ಬಹುಷ ಸ್ವಾಮೀಜಿಗೂ ಕಾಡಿತ್ತು. ಯೇ ಬೋಲ್ತೇ ಕುಚ್, ಓರ‍್ ಕರ‍್ತೇ ಕುಚ್ ಔರ‍್ ಹೇಂ, ಯೇ ತೋ ಥರ್ಡ್ ಕ್ಲಾಸ್ ಬಸ್ ಹೇ ಎಂದು ನನ್ನಲ್ಲಿ ಅಸಮಾಧಾನ ತೋಡಿಕೊಂಡರು.

ಆಗ ಬಸ್‌ ಒಳಗೆ ಆಸಾಮಿ ನಂಬರ‍್-೩ ಪ್ರವೇಶ.
ಪಾಸ್ ನೋಡುತ್ತಾ ನನ್ನ ಬಳಿ ಬಂದ. ನಿಮ್ಮದು ವಿಂಡೋ ಸೀಟಲ್ಲ, ಈಚೆ ಕುಳಿತ್ಕಳ್ಳಿ ಎಂದ.
ನಾನು ಪ್ರತಿಭಟಿಸಿದೆ, ಏಜೆನ್ಸಿ ಬಳಿ ನಾನು ಕೇಳಿದ್ದು ವಿಂಡೋಸೀಟೇ ಎಂದೆ.
ನಾನು ಏಳುವುದಿಲ್ಲ ಎಂದು ಗೊತ್ತಾದಾಗ ಸ್ವಾಮೀಜಿಯನ್ನು ಸಾಗಹಾಕಲು ಹೋದ. ಸ್ವಾಮೀಜಿ ಸಿಟ್ಟೇರಿ, ಯು ಗಿವ್ ಬ್ಯಾಕ್ ಮೈ ಮನಿ, ಐ ವಿಲ್ ಗೆಟ್ ಡೌನ್ ಎಂದು ಅಬ್ಬರಿಸಿದರು.

ಮತ್ತೆ ನನ್ನ ಬಳಿ ಬಂದು ಇಬ್ಬರಿಗೂ ವಿಂಡೋ ಸೀಟ್ ಕೊಡಲ್ಲ. ಒಬ್ಬರು ಈಚೆ ಬರಲೇ ಬೇಕು ಅಂದ.
ನನಗೆ ಹಿಂದಿನ ದಿನದ ನಿದ್ದೆ, ಇಡೀ ಹಗಲು ಸುತ್ತಾಡಿದ ಸುಸ್ತು ಎರಡೂ ಇದ್ದರಿಂದ ಸಿಟ್ಟು ಬಂತು, ಸೀದಾ ಇಳಿದು  ಏಜೆನ್ಸಿಗೇ ನಡೆದೆ. ಆಸಾಮಿ ಅಲ್ಲೇ ಕುಳಿತು ಹಲ್ಲು ಗಿಂಜಿದ. ಏನ್ ಈ ಥರಾ ಮೋಸ ಮಾಡ್ತೀರಾ…ಪುನಃ ಬರಲ್ಲ ಎಂದು ತಿಳಿದಿದ್ದೀರಾ ಎಂದೇನೋ ಬಾಯಿಗೆ ಬಂದ ಹಾಗೆ ಒದರಿದೆ. ನನಗೆ  ಸೀಟ್ ಕೊಡಿ, ಇಲ್ಲ ಹಣ ವಾಪಾಸ್ ಮಾಡು ಎಂದೆ.
ಛೇಛೇ ಅಷ್ಟು ಬೇಜಾರ‍್ ಯಾಕೆ ಮಾಡ್ತೀರಿ ಸಾರ‍್ ಬೇರೆ ಬಸ್ ಕೊಡೋಣ ಎಂದು ಸಮಾಧಾನ ಹೇಳಿದ. ಎಲ್ಲೆಲ್ಲೋ ಫೋನ್ ಮಾಡಿದ ಎಲ್ಲೂ ಸೀಟ್ ಇದ್ದ ಹಾಗೆ ಕಾಣಲಿಲ್ಲ,
ನನ್ ಜತೆ ಬನ್ನಿ ಸಾರ‍್, ನಾನ್‌ ಅದೇ ಬಸ್ಸಲ್ಲಿ ವಿಂಡೋ ಸೀಟ್ ಮಾಡಿಕೊಡುತ್ತೇನೆ ಎಂದ.
ನನಗೂ ಇನ್ನಷ್ಟು ಸುತ್ತಾಡುವ ಜೋಷ್ ಇರಲಿಲ್ಲ. ಮತ್ತೆ ಖಾಸಗಿ ಬಸ್ ಗೆ ಬಂದೆವು. ಅಲ್ಲಿ ಈ ಮೂವರೂ ಆಸಾಮಿಗಳಿಗೂ ಅದೇನೇನೋ ಜಗಳ. ನಾನೂ ನನ್ನ ಸಿಟ್ಟನ್ನೂ ಮೂವರ ಮೇಲೂ ಪ್ರದರ್ಶಿಸಿದೆ. ಆಗಲೇ ಗಂಟೆ ೧೦.೩೦ !
ಬಸ್‌ನಲ್ಲಿದ್ದ ಉಳಿದವರು ತಮಾಷೆ ನೋಡುತ್ತಿದ್ದರು. ೯.೩೦ರ ಬಸ್ ಇನ್ನೂ ಯಾಕೆ ಬಿಟ್ಟಿಲ್ಲ ಎಂದು ಕೇಳುವ ಧೈರ್ಯ ಅವರಲ್ಲಾರಲ್ಲೂ ಇಲ್ಲ. ಅಂತೂ ಅಷ್ಟು ಕಷ್ಟಪಟ್ಟದ್ದಕ್ಕೆ ನನಗೊಂದು ವಿಂಡೋ ಸೀಟ್ ದಯಪಾಲಿಸಿದರು ಬಸ್ಸು ದೂತರು!
ಕಣ್ಮುಚ್ಚಿ ನಿದ್ದೆಗೆ ಪ್ರಯತ್ನಿಸಿದೆ. ಗಂಟೆ ಸುಮಾರು ೧೧.೧೫ ಆದರೂ ಬಸ್ ಹೊರಡಲಿಲ್ಲ. ನನಗೂ ಜಗಳ ಮುಂದುವರಿಸಲು ಮನಸ್ಸಿರಲಿಲ್ಲ. ಅದಾಗಲೇ ಸಾಕಷ್ಟು ಕೆಟ್ಟ ಆನುಭವ ಆಗಿತ್ತು. ನನ್ನ ಜಗಳದ ತಮಾಷೆ ಸವಿದ ಇತರರೂ ಈಗ ಕಿರಿಕಿರಿ ಶುರುಮಾಡಿದರು. ಅಂತೂ  ದೇವರ ಕೃಪೆಯಿಂದ   ಬಸ್ ಕರ್ಕಶ ಇಂಜಿನ್ ಸ್ವರ ಹೊರಡಿಸುತ್ತಾ ಹೊರಟಿತು.
ಅದೆಷ್ಟೋ ಹೊತ್ತಿಗೆ ನಿದ್ದೆ ಬಂತು. ಎಚ್ಚರವಾದಾಗ ಈ ಸಿನಿಮಾದ ಇಂಟರ್‌ವಲ್! ಎಲ್ಲೋ ಟೀ ಕುಡಿಯಲು ನಿಲ್ಲಿಸಿದ್ದರು. ಮೈಯಲ್ಲೇನೋ ಕಚ್ಚಿದಂತೆ ತುರಿಸಿದಂತೆ ಅನುಭವ. ನೋಡಿದರೆ ತಿಗಣೆಗಳು! ನನಗಷ್ಟೇ ಅಲ್ಲ ಎಲ್ಲರೂ ಮೈ ತುರಿಸುತ್ತಾ ಸೀಟನ್ನು ಕೆಕ್ಕರಿಸುತ್ತಾ ಕುಳಿತಿದ್ದರು!
ಅಂತೂ ಇದೇ ರೀತಿಯ ಮಿಡ್‌ನೈಟ್ ಮಸಾಲಾ ಮುಂದುವರಿದು, ಚಾರ್ಮಾಡಿ ಘಾಟಿಯ ರಸ್ತೆ ಬ್ಲಾಕ್‌ನಲ್ಲೂ ಕೆಲ ಗಂಟೆ ಕಳೆದು ಮಂಗಳೂರು ತಲಪುವಾಗ ಬೆಳಗ್ಗೆ ೧೦.೩೦ .
ಪಿವಿಎಸ್‌ನಲ್ಲೇ ಇರುವ ಬಸ್ಸು  ಕಚೇರಿಗೆ ಹೋಗಿ ಅಲ್ಲಿದ್ದ ಯಜಮಾನನೊಬ್ಬನಿಗೆ ಎಲ್ಲ ಹೇಳಿದೆ.
ತಾಳ್ಮೆಯಿಂದ ಕೇಳಿಸಿಕೊಂಡ ಆತ, ಆ ಬಸ್‌ನ್ನು ನಾವು ಬೇರೆಯವರಿಗೆ ಕಾಂಟ್ರಾಕ್ಟ್‌ಗೆ ಕೊಟ್ಟಿದ್ದೇವೆ, ಏನ್‌ ಮಾಡೋದು ಸಾರ‍್ ಎಂದು ಸಹಾನುಭೂತಿ ಪ್ರದರ್ಶೀಸಿದ.
ನನಗೆ ಕೆಲಸಕ್ಕೆ ಹೋಗಬೇಕಿದ್ದರಿಂದ ನನ್ನೆಲ್ಲ ಮೂರ್ಖತನಕ್ಕೆ ಮರುಗುತ್ತಾ ಬೇಗನೆ ಮನೆ ಕಡೆ ಹೆಜ್ಜೆ ಹಾಕಿದೆ.

ಸೂಚನೆ: ಹೆಡ್‌ಲೈನಲ್ಲಿರುವ ರೋಚಕತೆ ಈ ಅನುಭವದಲ್ಲಿ ಇಲ್ಲದ್ದಕ್ಕೆ ಕ್ಷಮೆ ಇರಲಿ

ಚಿತ್ರಕೃಪೆ: ಗೂಗಲ್ ಇಮೇಜ್

5 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಡಿಸೆ 24 2010

    ಲೇಖಕರ ವೈಯಕ್ತಿಕ ಬ್ಲಾಗಿನಲ್ಲಿ ೧೫ ತಿಂಗಳ ಹಿಂದೆ ಪ್ರಕಟವಾಗಿದ್ದ ಈ ಬರಹವನ್ನು ಇಲ್ಲಿ (“ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…” – ಈ ಸಾಲಿನೊಂದಿಗೆ) ಯಥಾವತ್ತಾಗಿ ಪ್ರಕಟಿಸಿರುವುದು ಎಷ್ಟೊಂದು ಉಚಿತ?

    ನಿಲುಮೆಗೊಂದು ನಿಲುಮೆ ಇರಲಿ ಎಂಬುದೇ ನನ್ನ ಆಶಯ!

    ಉತ್ತರ
    • ನಿಲುಮೆ's avatar
      ಡಿಸೆ 24 2010

      ಹೆಗ್ದೆಯವರೆ,
      ನಿಮ್ಮ ಸಲಹೆಗೆ ಧನ್ಯವಾದ.
      ಬೆಂಗಳೂರಿನಿಂದ ಕರಾವಳಿಯ ಕಡೆಗೆ ಖಾಸಗಿ ಬಸ್ಸಿನಲ್ಲಿ ಹೊರಟರೆ ಈ ಅನುಭವ ಈಗಲೂ ಆಗುತ್ತದೆ.ವಿಷಯ ಇಂದಿಗೂ ಪ್ರಸ್ತುತ ಅನ್ನಿಸಿದ್ದರಿಂದ ಪ್ರಕಟಿಸಿದ್ದೇವೆ.

      ನಿಮ್ಮೊಲುಮೆಯ,
      ನಿಲುಮೆ

      ಉತ್ತರ
  2. chukkichandira's avatar
    ಡಿಸೆ 25 2010

    ಖಾಸಗಿ ಬಸ್‌ ಹೊರಗಡೆ ಮಾತ್ರ ನೋಡಲು ಅಂದವಾಗಿರುತ್ತವೆ. ಒಮ್ಮೆ ಪ್ರೈವೆಟ್‌ ಬಸ್‌ನಲ್ಲಿ ಬಂದ ತಪ್ಪಿಗೆ ನಮ್ಮ ರೂಂನಲ್ಲಿ ಹಲವು ತಿಂಗಳ ಕಾಲ ತಿಗಣೆಗಳು ತುಂಬಿದ್ದವು. ಮಳೆಗಾಲದಂತೂ ಕೆಲವು ಖಾಸಗಿ ಬಸ್‌ನಲ್ಲಿ ಪೂರ್ತಿ ಒದ್ದೆಯಾಗಿ ಬರಬೇಕಾಗುತ್ತದೆ.

    ಉತ್ತರ
  3. suresh's avatar
    suresh
    ಡಿಸೆ 27 2010

    ನಮಗೂ ಇಂತಹ ಅನುಭವಗಳು ಆಗಿದೆ. ಹಾಗಾಗಿ ಖಾಸಗಿ ಬಸ್್ನವರು ಕಡಿಮೆ ದರಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದರೆ ಇದೀಗ ಬಿಲ್ ಕುಲ್ ಒಪ್ಪುವುದೇ ಇಲ್ಲ. ಅನುಭವನ ಲೇಖನ ಚೆನ್ನಾಗಿದೆ.
    ಸುರೇಶ್ ನಾಡಿಗ್

    ಉತ್ತರ
  4. Punchline's avatar
    ಡಿಸೆ 28 2010

    Horrible experience.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments