ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2011

8

ನೆನಪುಗಳ ಮಾತೆ ಮಧುರ.. ನಿಮಗೂ ಹಾಗೇನಾ?

‍ನಿಲುಮೆ ಮೂಲಕ

ಚೇತನ್ ಕೋಡುವಳ್ಳಿ

ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.

ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.

ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ.

 ಆಗ

 ಮಲೆನಾಡು, ಬೆಳಗ್ಗೆ ೭ ಗಂಟೆ  ಭಯಂಕರ ಚಳಿ, ಮೈ ಮೇಲೆ ಹೊದ್ದುಕೊಂಡ ೨ ರಗ್ಗನ್ನು ಮತ್ತೆ ಮತ್ತೆ ಎಳೆದುಕೊಂಡು ಮೈ ಮುದುಡಿಕೊಂಡು ಮಲಗಿಬಿಟ್ರೆ ಸ್ವರ್ಗ ಸುಖ. ಆದರೆ ಅದೇ ಹೊತ್ತಿಗೆ ಅಪ್ಪ ಎದ್ದು ಬಾಗಿಲಿನ ಚಿಲಕ ತೆಗೆದ ತಕ್ಷಣ ರೊಟ್ಟಿ ತಟ್ಟುತ್ತಿದ್ದ ಅಮ್ಮ ನನ್ನ ಹತ್ತಿರ ಬಂದು ‘ಎದ್ದೇಳೋ, ಅಪ್ಪ ಎದ್ರು’ (ಇಲ್ಲಾಂದ್ರೆ ಮಕ್ಕಳಿಗೆ ಒಂದೋ ಬೈಗುಳ ಅಥವಾ ಒದೆ ಬೀಳತ್ತಲ್ಲ ಅಂತ) ಅಂದ ತಕ್ಷಣ ಆ ಚಳಿಯನ್ನೂ ಲೆಕ್ಕಿಸದೆ ಹಾಕಿದ್ದ ಎರಡು ರಗ್ಗನ್ನು ಕಿತ್ತೆಸೆದು ಪಕ್ಕದಲ್ಲಿರುವ ಟೇಬಲ್ಲಿಂದ ಯಾವುದೋ ಒಂದು ಪುಸ್ತಕ ತೆಗೆದುಕೊಂಡು ಕೈನಲ್ಲಿ ಹಿಡಿದುಕೊಂಡು ಕೂತು, ಅಪ್ಪ ನಾನು ಮಲಗುವ ನಡುಮನೆ ಪ್ರವೇಶಿಸಿ ಬಾತ್ರೂಮಿಗೆ ಹೋಗುವಷ್ಟರಲ್ಲಿ ಪುಸ್ತಕವನ್ನು ಆಚೆ ಇಟ್ಟು ಎಸೆದ ರಗ್ಗನ್ನು ಮತ್ತೆ ಮೈ ಮೇಲೆ ಎಳೆದುಕೊಂಡು ಮತ್ತೆ ಅದೇ ಪೊಸಿಷನ್ನಲ್ಲಿ ನಿದ್ರಾದೇವಿಗೆ ಶರಣಾಗುತ್ತಿದ್ದೆ. ಅವರು ಸ್ನಾನ ಮುಗಿಸಿ ವಾಪಸ್ ಬರೋ ಹೊತ್ತಿಗೆ ಊಟದ ಹಾಲ್ನಲ್ಲಿದ್ದ ರೇಡಿಯೋದಲ್ಲಿ ಬರುತ್ತಿದ್ದ ನ್ಯೂಸ್ (ಧಾರವಾಡ ಕೇಂದ್ರ) ಮುಗಿದು ಚಿತ್ರಗೀತೆ ಶುರುವಾಗುವ ಹೊತ್ತಿಗೆ ಮತ್ತೆ ಎಚ್ಚರವಾಗುತ್ತಿತ್ತು (ಈ ಬಾರೀ ಅಮ್ಮನ ಸಹಾಯ ಬೇಕಾಗುತ್ತಿರಲಿಲ್ಲ). ಇದು ನಿತ್ಯದ ದಿನಚರಿ.

 ಆಮೇಲೆ ಎದ್ದು ಸ್ನ್ನಾನ ಮಾಡೋದು ಅಂದ್ರೆ ಅದರಂಥ ನರಕ ಹಿಂಸೆ ಯಾವುದೂ ಇರುತ್ತಿರಲಿಲ್ಲ. ಸ್ಕೂಲಿಗೆ ಬೇಗ ಹೋಗಿ ಗೋಲಿಯೋ ಬುಗುರಿಯೋ ಆಡುವಾಸೆ ಆದರೆ ಅಮ್ಮ ಸ್ನಾನ ಮಾಡಿ ಕಳಿಸದೇ ಬಿಡುತ್ತಿರಲಿಲ್ಲ. ಅಂತೂ ಹಂಡೆಯ ನೀರು ನಮ್ಮನ್ನು ಅಣಕಿಸದೆ ಇರುತ್ತಿರಲಿಲ್ಲ.

ರೊಟ್ಟಿ ತಿಂದು, ಸ್ಕೂಲ್ ಯುನಿಫಾರ್ಮ್ ಹಾಕಿಕೊಂಡು ಚಾವಡಿಯಿಂದ ೪ ಮೆಟ್ಟಿಲು ಹಾರಿ ಕಣಕ್ಕೆ ಜಿಗಿದರೆ ನನ್ನನ್ನು ಹಿಡಿಯುವವರಾರಿರಲಿಲ್ಲ, ಅಕಸ್ಮಾತ್ ಮಳೆ ಬಂದು ಕಣದಲ್ಲಿ ಪಾಚಿ ಕಟ್ಟಿದ್ದರೆ ಅಲ್ಲೇ ಜಾರಿ ಬಿದ್ದು ಹಸಿರಾಗಿದ್ದ ಶರ್ಟ್ ಮತ್ತು ಚಡ್ಡಿಯನ್ನು ಅಮ್ಮನಿಗೆ ತೋರಿಸಿ ಇವತ್ತು ಸ್ಕೂಲಿಗೆ ಹೋಗುವುದಿಲ್ಲ ಅಂದರೆ ಕಣದಲ್ಲೇ ನಿಲ್ಲಿಸಿ ಪಕ್ಕದಲ್ಲಿದ್ದ ಬ್ಯಾರಲ್ಲಿಂದ ನೀರು ತೆಗೆದುಕೊಂಡು ಅಲ್ಲೇ ಕೊಳೆಯನ್ನು ತೆಗೆದು ಈಗ ನಡಿ ಅಂದಾಗ ವಿಧಿಯಿಲ್ಲದೇ ಸ್ಕೂಲಿಗೆ ಹೆಜ್ಜೆ ಹಾಕಬೇಕಿತ್ತು.

ಮನೆಯಿಂದ ಸ್ಕೂಲಿಗೆ ೧೦ ನಿಮಿಷ ದಾರಿ ಆದರೂ ಬೆಲ್ ಹೊಡೆದ ಮೇಲೆ ಓಡುತ್ತಿದ್ದ ನಾನು, ಸ್ಕೂಲ್ ಹತ್ತಿರ ಬಂದಾಗ ಬಗ್ಗಿಕೊಂಡು ಹೋಗಿ ನಾನು ನಿಲ್ಲಬೇಕಾದ ಸಾಲಿನಲ್ಲಿ ನಿಲ್ಲುತ್ತಿದ್ದೆ. ಸ್ವಾಮಿ ದೇವನೇ, ಜೈ ಭಾರತ ಜನನಿಯ ತನುಜಾತೆ ಮುಗಿದ ತಕ್ಷಣ, ಪೇಪರ್ ಓದಿ, ಅಂದಿನ ಸುಭಾಷಿತ ಬರೆದು ಶಾಲೆ ಒಳಗೆ ಓಡಿ ಮಣೆಯ ಮೇಲೆ ಕೂತುಬಿಡುತ್ತಿದ್ದೆವು.

ಮಾಮೂಲಿಯಂತೆ ಪಾಠಗಳು ನಡೆಯುತ್ತಿರುತ್ತಿದ್ದವು, ಅಕಸ್ಮಾತ್ ಹೋಂ ವರ್ಕ್ ಮಾಡಿರಲಿಲ್ಲವೆಂದರೆ ಕೆಳಗೆ ಕುಳಿತು ಕಾಲುಸಂಧಿಯಲ್ಲಿ ಬಲ ಕೈಯನ್ನು ಎಡ ಕಿವಿಗೂ ಎಡ ಕೈಯನ್ನು ಬಲ ಕಿವಿಗೂ ಹಿಡಿದು ಕೂರಬೇಕಾಗುತ್ತಿತ್ತು, ಅಕಸ್ಮಾತ್ ಹಾಗೆ ಕೂತವನನ್ನು ಬೇರೆ ಯಾರಾದರೂ ನೋಡಿ ಕಿಸಕ್ಕನೆ ನಕ್ಕರ ಅವರಿಗೂ ಅದೇ ಗತಿಯಾಗುತ್ತಿತ್ತು.

ಇನ್ನೊಂದು ತರದ ಶಿಕ್ಷೆಯೆಂದರೆ ಸೀಮೆಸುಣ್ಣವನ್ನು ಎರಡು ಬೆರಳಿಗೆ ಸಿಕ್ಕಿಸಿ ಬೆರಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ಮಾಮೂಲಿಯಂತೆ ಬೆಟ್ಟದ ರುಚಿ ಇದ್ದೆ ಇರುತ್ತಿತ್ತು.

 ಆಗೆಲ್ಲ ವಿಮಾನದ ಶಬ್ದ ಬಂದರೆ ಸ್ಕೂಲ್ ಒಳಗಿದ್ದರೂ ಎಲ್ಲ ಹುಡುಗರೂ ಹೊರಗಡೆ ಓಡಿ ಬಂದು ಅದನ್ನು ನೋಡುತ್ತಿದರು, ನಮ್ಮ ಜೊತೆಗೆ ಶಿಕ್ಷಕರು ಸಹ ನೋಡುವುದಕ್ಕೆ ಬರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದ ತಕ್ಷಣ ಬ್ಯಾಗ್ ಎತ್ತಿಕೊಂಡು ಓಡಲು ಶುರು ಮಾಡಿದೆವೆಂದರೆ ಮನೆಗೆ ಹೋಗಿಯೇ ನಿಲ್ಲುತ್ತಿದ್ದದ್ದು. ಅಮ್ಮನ ಕೈ ತುತ್ತು ತಿಂದು ೧ ಗಂಟೆ ಮನೆಯಲ್ಲಿದ್ದು ಮತ್ತೆ ಬೆಲ್ ಹೊಡೆದ ತಕ್ಷಣ ಓಟ

  ೩ ಗಂಟೆಯವರೆಗೆ ಪಾಠ, ಆಮೇಲೆ ೧.೩೦ ಗಂಟೆ ಆಟ. ಲಗೋರಿ, ಗೋಲಿ, ಕೋ ಕೋ, ವಾಲಿಬಾಲ್ ಆಡಿ  ೪.೩೦ಕ್ಕೆ ಸ್ಕೂಲ್ ಬಿಟ್ರೆ ಮತ್ತೆ ಯಾರದೋ ತೋಟದಲ್ಲಿ (ಕೆಲವೊಂದು ನಮ್ಮ ತೋಟದಲ್ಲಿದ್ದರೂ)  ಹಲಸಿನಹಣ್ಣು , ಕಿತ್ತಲೆಹಣ್ಣು, ಸೀಬೆಹಣ್ಣು, ನೇರಳೆ ಹಣ್ಣು, ಮೂಸಂಬಿ ಹೋಗಿ ಕದ್ದು ತಿಂದು ಮನೆಗೆ ಬರೋ ಹೊತ್ತಿಗೆ ಸಂಜೆ ೭ ಗಂಟೆ. ಮುಂದುಗಡೆಯಿಂದ ಮನೆಗೆ ಹೋದರೆ ಅಪ್ಪ ಅಲ್ಲೇ ಪೇಪರ್ ಓದುತ್ತ ಕೂರುವುದರಿಂದ ನನ್ನನ್ನು ನೋಡಿದ ತಕ್ಷಣ ಒದೆ ಎಂಬುದು ಕಟ್ಟಿಟ್ಟ ಬುತ್ತಿ. ಅಪ್ಪನ ಕಣ್ತಪ್ಪಿಸಿ ಮನೆ ಹಿಂದುಗಡೆ ಹೋಗಿ ಒಳಗೆ ಸೇರಿ ಬಟ್ಟೆ ಎಲ್ಲ ಬದಲಾಯಿಸಿ ಪುಸ್ತಕ ಹಿಡಿದುಕೊಂಡರೆ ಆಗಲೇ ಸಮಾಧಾನ.

 ………………………………………………

 ಬರ್ತಿರೋ ಮಳೆ ನೋಡ್ತಾ (ಹೋಗಿ ನೆನೆಯೋಣ ಅಂದ್ರೂ ಅದಕ್ಕೆ ಆಸ್ಪದವಿಲ್ಲ)  ,ಆಫೀಸಿನ ಗಾಜಿನ ಬಾಗಿಲ ಪಕ್ಕದಲ್ಲಿರೋ ಕುರ್ಚಿಯಲ್ಲಿ ಕಾಫಿ ಕುಡೀತಾ, ಎದುರುಗಡೆ ಕಾಣೋ ಮೈದಾನದಲ್ಲಿ ಆ ಮಳೆಯಲ್ಲೂ ಸಣ್ಣ ಮಕ್ಕಳ ಆಟ ನೋಡ್ತಿದ್ರೆ ನಮ್ಮ ಚೆಲ್ಲಾಟಗಳು, ಬಾಲ್ಯದ ನೆನಪುಗಳು ಹಾಗೆಯೇ ಬಿಸಿ ಕಾಫಿಯ ಹಬೆ ತೇಲಿ ಹೋದ ಹಾಗೆ ಅನುಭವ.

 ನೆನಪುಗಳ ಮಳೆಯಲ್ಲಿ

ತೋಯ್ದು ಹೋಗಿದ್ದೇನೆ ನಾನಿಲ್ಲಿ

 ಬಾಲ್ಯದ ಹೂದೋಟದಲ್ಲಿ

ಕಳೆದುಹೋಗಿದ್ದೇನೆ ಇಂದಿಲ್ಲಿ

8 ಟಿಪ್ಪಣಿಗಳು Post a comment
  1. ನೆನಪುಗಳ ಮಾತು ಮಧುರ ಅಂತ ಸುಮ್ ಸುಮ್ನೇ ಅಂದಿಲ್ಲ ಚೇತನ್!
    ನೆನಪುಗಳು ಯಾರದ್ದೇ ಆಗಿರಲಿ, ಅವುಗಳ ಓದು ಮುದ ನೀಡುಡುತ್ತದೆ.

    ಉತ್ತರ
  2. ಚೇತನ್ ಕೋಡುವಳ್ಳಿ's avatar
    ಚೇತನ್ ಕೋಡುವಳ್ಳಿ
    ಜನ 12 2011

    ನಿಜ ಹೆಗಡೆಯವರೇ
    ಧನ್ಯವಾದ

    ಉತ್ತರ
  3. chukkichandira's avatar
    ಜನ 12 2011

    ಕಾಂಕ್ರಿಟ್‌ ಕಾಡಿನಲ್ಲಿ ಕಾಡುವ ನೆನಪುಗಳು ಚೆನ್ನಾಗಿದೆ

    ಉತ್ತರ
  4. (ಚೇತನ್ ಕೋಡುವಳ್ಳಿ's avatar
    (ಚೇತನ್ ಕೋಡುವಳ್ಳಿ
    ಜನ 12 2011

    ಧನ್ಯವಾದ ನಿಮಗೆ

    ಉತ್ತರ
  5. pavan's avatar
    pavan
    ಜನ 12 2011

    sariyagi helidira chetan avare:) tumba ishta aytu nimma baravanige:)

    ಉತ್ತರ
  6. sandeep kumar's avatar
    sandeep kumar
    ಜನ 13 2011

    ನಿಜವಾಗಲು ನೆನಪುಗಳ ಮಾತು ಮಧುರನೇ…
    ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕಿದಾಗೆ ಇತ್ತು….

    ಉತ್ತರ
  7. ಹೀಗೇ ಸುಮ್ಮನೆ ಬಾಲ್ಯಕ್ಕೆ ಹೋಗಿ ಬ೦ದತಾಯ್ತು
    ಹರಿ

    ಉತ್ತರ
  8. Sneha's avatar
    Sneha
    ಡಿಸೆ 29 2015

    Nenapugale sumadhura, avugalinda siguva nemmadi amara 🙂

    ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments