ಇರ್ಷಾದ್ ವೇಣೂರು
ಫಿಟ್ಟಿಂಗ್ ನಲ್ಲಿದೆ ಬದುಕು…

ಎಲ್ಲಿಗೋ ಹೊರಟಿದ್ದಾಗ ವಾಹನ ಇದ್ದಕ್ಕಿದ್ದಂತೆ ಕೈಕೊಡುತ್ತದೆ. ಅದುವರೆಗೂ ಲೀಟರಿಗೆ ಸರಿಯಾಗಿ 55-60 ಮೈಲೇಜ್ ಕೊಡುತ್ತಿದ್ದ ಬೈಕ್ ಅಂದು ಮಾತ್ರ 35 ಮೈಲೇಜ್ ಕೊಟ್ಟು ಅರ್ಧ ದಾರಿಯಲ್ಲಿ ಇಂಗು ತಿಂದ ಮಂಗನ ಸ್ಥಿತಿ ತರಿಸುತ್ತದೆ. ನಿನ್ನೆಯಷ್ಟೇ ಗಾಳಿ ಎಷ್ಟಿದೆ ಎಂದು ಚೆಕ್ ಮಾಡಿ ಮನೆಗೆ ಬಂದು ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಆಫೀಸಿಗೆ ಹೋಗಬೇಕು ಎಂದು ನೋಡಿದರೆ ಟಯರ್ ಠುಸ್ಸಾಗಿರುತ್ತದೆ. ಯಾವತ್ತೂ ಒಂದೇ ನಿಮಿಷದಲ್ಲಿ ಸ್ಟಾರ್ಟ್ ಆಗುತ್ತಿದ್ದ ಸ್ಕೂಟರ್ ಇಂದು ಜಪ್ಪಯ್ಯಾ ಎಂದರೂ ಸ್ಟಾರ್ಟ್ ಆಗುತ್ತಿಲ್ಲ. ಇಂತಹ ಸಮಸ್ಯೆಗಳು ಎದುರಾದಾಗ ನೆನಪಾಗುವುದೇ ನಮ್ಮೂರಿನ ಫಿಟ್ಟರ್.
ಅದುವರೆಗೂ ಇದ್ದದ್ದೆಲ್ಲಾ ಮಾಡಿ, ದಾರಿ ಹೋಕರಿಗೆ ದಮ್ಮಯ್ಯಾ ಹಾಕಿ ದೂಡಲು ಸಹಾಯ ಮಾಡುವಂತೆ ವಿನಂತಿಸಿ ಏನೆಲ್ಲಾ ಸರ್ಕಸ್ ಮಾಡಿದ್ದರೂ ಸ್ಟಾರ್ಟ್ ಆಗದ ಕಾರು ಫಿಟ್ಟರ್ ಕೈ ಸೋಂಕಿದ ಕೂಡಲೇ ಗುಯ್ ಗುಯ್ ಎನ್ನುತ್ತದೆ. ಒಂದರ್ಥದಲ್ಲಿ ಇವರೆಲ್ಲಾ ಪಲ್ಸ್ ಹಿಡಿದು ಪರೀಕ್ಷಿಸುವ ಡಾಕ್ಟರ್ ತರಹದವರು. ಮುಟ್ಟಿದ ಕೂಡಲೇ ನಾಚಿಕೆ ಮುಳ್ಳು ಮುನಿಯುವಂತೆ ಇವರ ಕೈ ತಾಗಿದ ಕೂಡಲೆ ಸಮಸ್ಯೆ ಸರಿಯಾಗುತ್ತದೆ. ಅಷ್ಟು ಚೆನ್ನಾಗಿ ಯಂತ್ರದ ಭಾಷೆಯನ್ನು ಅರ್ಥೈಸಿಕೊಂಡಿರುವ ಫಿಟ್ಟರ್ ಗಳಿದ್ದಾರೆ.
ಫಿಟ್ಟರ್ ಆಗಬೇಕೆಂದು ಬಯಸುವವರಿಗೆ ಐಟಿಐಗಳು ಶಿಕ್ಷಣ ಕೊಡುತ್ತವೆ. ದುರಂತವೋ ಅಥವಾ ಒಳ್ಳೆಯ ಬೆಳವಣಿಗೆಯೆಂಬಂತೆ ಇವರಲ್ಲಿ ಶೇ.99ರಷ್ಟು ಮಂದಿ ವಿದೇಶದಲ್ಲೋ, ಮಹಾನಗರದಲ್ಲೋ ದೊಡ್ಡ ಕಂಪೆನಿಗಳಲ್ಲಿ ಭವಿಷ್ಯ ಕಂಡುಕೊಳ್ಳುತ್ತಾರೆ. ಉಳಿದವರು ಮೈ – ಕೈಗೆ ಗ್ರೀಸ್ ತಾಗುವ ಕೆಲಸ ಕಷ್ಟ ಎಂದು ಫೀಲ್ಡ್ ನಿಂದ ದೂರವಾಗುತ್ತಾರೆ. ಕಂಪೆನಿ ಶೋರೂಮ್ ಹೊರತು ಪಡಿಸಿ ಹೆಚ್ಚಿನ ಫಿಟ್ಟರ್ ಗಳೆಲ್ಲಾ 7ರಿಂದ 10ನೇ ಕ್ಲಾಸ್ ನಂತರ ಶಾಲೆ – ಕಾಲೇಜು ಮುಖ ನೋಡಿದವರಲ್ಲಾ. ಆರ್ಥಿಕ ಕಾರಣದಿಂದ ಅರ್ಧದಷ್ಟು ಜನ ಈ ಕ್ಷೇತ್ರಕ್ಕೆ ಬಂದರೆ ಉಳಿದವರು ಓದಿ ಏನು ಮಣ್ಣು ಹೊರುವುದು ಎಂದು ಫಿಟ್ಟಿಂಗ್ ಕೆಲಸಕ್ಕಿಳಿಯುತ್ತಾರೆ.
ಪ್ರಾರಂಭದಲ್ಲಿ ಯಾರಾದರೊಬ್ಬ ಎಕ್ಸಪರ್ಟ್ ಫಿಟ್ಟರ್ ಬಳಿ ಕೆಲಸ ಮಾಡುತ್ತಾರೆ. ಅಲ್ಲಿ ಸಮಯದ ಮಿತಿ ಇರುವುದಿಲ್ಲ. ಬೆಳಿಗ್ಗೆ 8ಕ್ಕೆ ಕೆಲಸಕ್ಕೆ ಹಾಜರಾದರೆ ಮತ್ತೆ ಮನೆ ಮುಖ ನೋಡುವಾಗ ರಾತ್ರಿ 11 ಆದರೂ ಆಯ್ತು. ಪ್ರಾರಂಭದಲ್ಲಿ ಸಂಬಳ ಕೇಳೋ ಹಾಗಿಲ್ಲ. ಊಟ ಹಾಕಿದರೇನೆ ದೊಡ್ಡದು. ಹೆಚ್ಚಿನವರೆಲ್ಲಾ ಕೆಲಸ ಕಲಿಯುವವರಿಗೆ ವಾರಕ್ಕಿಷ್ಟು ಎಂದು ಪ್ರೋತ್ಸಾಹ ಧನ ಕೊಡುತ್ತಾರೆ. ಜೊತೆಗೆ ಒಮ್ಮೊಮ್ಮೆ ಗುರುವಿನಿಂದ ಲಿವರ್, ಸ್ಪಾನರ್ ಏಟು ತಿನ್ನಬೇಕಾಗುತ್ತದೆ! ಫಿಟ್ಟಿಂಗ್ ಕೆಲಸದ ಪಾಠಗಳನ್ನು ಇಲ್ಲೇ ಕಲಿಯುವ ಇವರ ಬದುಕು ಯಾವತ್ತಿದ್ದರೂ ಬೆಂಕಿಯ ಜೊತೆ ಸರಸವಾಡಿದಂತೆ. ಗಾಯಗಳೆಲ್ಲಾ ಆಗುವುದು ಜುಜುಬಿ ಎಂಬಂತೆ. ಆದರೂ ಬೆಂಕಿಯಲ್ಲಿ ಅರಳಿದ ಹೂವು ಎಂಬಂತೆ ಮುಂದೆ ತಮ್ಮ ಕ್ಷೇತ್ರದಲ್ಲೇ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವ ಹಲವಾರು ಯುವ ಚೇತನಗಳನ್ನು ಇಲ್ಲಿ ಕಾಣಬಹುದು.
ಇವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸ್ಟೈಲ್. ಕೆಲವರು ಮೈಲೇಜ್ ಎಡ್ಜೆಸ್ಟ್ ಮಾಡುವುದರಲ್ಲಿ ಎತ್ತಿದ ಕೈ. ಇನ್ನು ಕೆಲವರು ಹಳೇ ವಾಹನಗಳಿಗೆ ಆಧುನಿಕ ಸ್ಪರ್ಶ ಕೊಡುವುದರಲ್ಲಿ ಎಕ್ಸ್ ಪರ್ಟ್. ಇನ್ನು ಕೆಲವರು ರೇಸ್ ಗೆ ವಾಹನಗಳನ್ನು ತಯಾರು ಮಾಡುವುದರಲ್ಲಿ ಏಳು ಸಮುದ್ರದ ನೀರು ಕುಡಿದವರು. ಇನ್ನು ಕೆಲವರು ಶಾರ್ಟ್ ಆಂಡ್ ಸ್ವೀಟ್ ಆಗಿ ವಾಹನ ರೆಡಿ ಮಾಡುವುದರಲ್ಲಿ ಎಲ್ಲರ ಮನ ಗೆದ್ದವರು. ಬಹುಮುಖ ಪ್ರತಿಭೆಗಳಿರುವ ಈ ಕ್ಷೇತ್ರದಲ್ಲಿ ಸರ್ವಿಸ್ ಚಾರ್ಜ್ ನಲ್ಲೂ ಕೂಡ ವಿವಿಧತೆ. ಪಂಕ್ಚರ್ ಹಾಕಿದರೆ 25 ರಿಂದ 40ರೂ. ಮೈಲೇಜ್ ಎಡ್ಜೆಸ್ಟ್ ಮಾಡಿದರೆ 10 ರೂ. ಹೀಗೆ ಪಟ್ಟಿ ಬೆಳೆಯುತ್ತದೆ. ಎಲ್ಲಾದರೂ ವಾಹನ ಬಾಕಿಯಾಗಿದೆ ಎಂದರೆ ಒಂದು ಫೋನಾಯಿಸಿದರೆ ಸಾಕು. ತಮ್ಮ ಟೂಲ್ಸ್ ಎಲ್ಲಾ ಕಟ್ಟಿಕೊಂಡು ‘ಲೈನ್’ಗೆ ಬಂದು ಬಿಡುತ್ತಾರೆ. ಅಲ್ಲೇ ವರ್ಕ್ ಶಾಪ್ ಮಾಡಿಕೊಂಡು ವಾಹನ ರೆಡಿ ಮಾಡುತ್ತಾರೆ. ಹೊಸ ವಾಹನ ತೆಗೆದುಕೊಂಡವರು ಆಯಿಲಿಂಗ್ ಮಾಡಿಸಲಿಕ್ಕೆ ಬಿಟ್ಟರೆ ಫಿಟ್ಟರ್ ಗಳ ಕಡೆಗೆ ಹೋಗುವುದು ಕಡಿಮೆ. ಆದರೂ ಒಂದು ವರ್ಷ ಕಳೆದ ಬಳಿಕ ಚಿಲ್ಲರೆ ಕೆಲಸಕ್ಕಾದರೂ ಹೋಗಬೇಕು. ಹಳೇ ವಾಹನ ಇಟ್ಟುಕೊಂಡವರಿಗೆ ಇವರು ಧನ್ವಂತರಿ ವೈದ್ಯರುಗಳು. ಅದರ ಎಲ್ಲಾ ಬಯೋಡೆಟಾ ಇವರಲ್ಲೇ ಇರುವುದರಿಂದ ರಿಪೇರಿ ಕೆಲಸವೆಲ್ಲಾ ಇವರದ್ದೇ. ಫಿಟ್ಟರ್ ಗಳಳಿಗೆ ಸೀಸನ್ ಎಂಬ ಪ್ರಶ್ನೆಯೇ ಇಲ್ಲ. ವರ್ಷದ 365 ದಿನಗಳೂ ಫಿಟ್ಟಿಂಗ್ ಕೆಲಸ ಇದ್ದೇ ಇರುತ್ತದೆ.
ವಾಹನಗಳನ್ನು ಧೀರ್ಘಕಾಲ ಬಳಸಬೇಕು ಎಂಬ ಮನಸಿದ್ದವರೆಲ್ಲಾ ಕುಟುಂಬಕ್ಕೆಲ್ಲಾ ಫ್ಯಾಮಿಲಿ ಡಾಕ್ಟರ್ ಇರುವಂತೆ ಫ್ಯಾಮಿಲಿ ಫಿಟ್ಟರ್ ಗಳನ್ನೇ ಆಯ್ಕೆ ಮಾಡಿರುತ್ತಾರೆ. ಅವರ ಯಾವುದೇ ವಾಹನವಿದ್ದರೂ ಅದು ಹೋಗುವುದೇ ಅವರ ಬಳಿಗೆ. ಅಗತ್ಯ ಬಿದ್ದಾಗ ಬೇರೆಡೆ ರಿಪೇರಿ ಮಾಡಿಸಿದ್ದರೂ ಹೆಚ್ಚಿನವರು ಮತ್ತೆ ತಮ್ಮ ಫಿಟ್ಟರ್ ಬಳಿ ತಂದು ಪರೀಕ್ಷಿಸುತ್ತಾರೆ. ಆಗ ಏನೋ ಒಂದು ರೀತಿಯ ಸಮಾಧಾನದ ನಿಟ್ಟುಸಿರು. ಹೆಚ್ಚಿನ ಫಿಟ್ಟರ್ಗಳಿಗೆ ವಾಹನಗಳ ಮಾಲಿಕರ ಹೆಸರು ಗೊತ್ತಿರುವುದಿಲ್ಲ. ಫೋನಾಯಿಸಿ ವಾಹನದ ಮಾಲಿಕ ತನ್ನ ಹೆಸರು ಹೇಳಿದರೆ ಗುರುತು ಮಾಡಿಕೊಳ್ಳಲು ತಡವರಿಸುತ್ತಾರೆ. ಅದು ಬಿಟ್ಟು ‘ಬ್ಲಾಕ್ ಅಪಾಚಿ, ಮೆರೂನ್ ಆಲ್ಟೋ…’ ಎಂದರೇನೆ ‘ಹಾ…. ಹೇಳಿ ಏನಾಯಿತು?’ ಎಂದು ವಾಸ್ತವಕ್ಕೆ ಬರುತ್ತಾರೆ. ಇವರು ಪರಸ್ಪರ ಗ್ರಾಹಕರನ್ನು ಗುರುತಿಸುವುದೇ ಅವರ ವಾಹನದ ಹೆಸರಿನ ಮೂಲಕ! ದಿನದ 24 ಗಂಟೆಯೂ ಸೇವೆ ನೀಡುವ ಫಿಟ್ಟರ್ ಗಳಿದ್ದಾರೆ. ಯಾವುದೇ ಸಮಯದಲ್ಲಿ ವಾಹನ ಎಲ್ಲಾದರೂ ಬಾಕಿಯಾದರೆ ಫೋನಾಯಿಸಿದರೆ ಸಾಕು ಅಲ್ಲಿಗೆ ಬಂದು ಹಾಜರಾಗುತ್ತಾರೆ. ಕೂಡಲೇ ಕೆಲಸ ಮುಗಿಸಿ ಮುಂದಿನ ಹಾದಿ ಸುಗಮ ಮಾಡುತ್ತಾರೆ. ‘ನಮಗೆ ಸಮಯ ಅನ್ನುವುದೇ ಇಲ್ಲ. ಒಂದು ದಿನ ರಜೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಮಾತ್ರ ಆ ದಿನ ಆರಾಮವಾಗಿರಬಹುದು. ಇಲ್ಲದಿದ್ದರೆ ಕಷ್ಟ. ಬೆಳಿಗ್ಗೆ 8 ಗಂಟೆಗೆ ಬರುವಾಗ ಒಮ್ಮೊಮ್ಮೆ ವಾಹನಗಳ ಕ್ಯೂ ಕೂಡ ಇರುತ್ತದೆ. ನಮ್ಮದೇ ಆದ ಕೆಲವು ಗ್ರಾಹಕರು ಇರುತ್ತಾರೆ’ ಎನ್ನುತ್ತಾರೆ ಫಿಟ್ಟರ್ ರವಿ.
‘ಈ ಕ್ಷೇತ್ರದಲ್ಲಿ ಮನಸ್ಸಿದ್ದರೆ ಮಾರ್ಗವಿದೆ. ಬೇಕಾದ ಹಾಗೆ ಸಂಪಾದಿಸುವ ಅವಕಾಶವೂ ಇದೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಬೆಕು. ನೀಯ್ಯತ್ತಿದ್ದರೆ ಇದು ಉತ್ತಮ ಸ್ವ ಉದ್ಯೋಗ ಕೂಡ ಹೌದು’ ಎನ್ನುತ್ತಾರೆ ಫಿಟ್ಟರ್ ಚಂದ್ರಶೇಖರ್.
ಗ್ರಾಹಕ ವಲಯದಲ್ಲೂ ಫಿಟ್ಟರ್ ಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಸ್ವಲ್ಪ ತೊಂದರೆಯಾದರೆ ಶೋರೂಮ್ ಗೆ ಸರಿಪಡಿಸಲು ಹೋದರೆ ತಲೆ ಬೋಳಿಸಿ ಕಳುಹಿಸುವ ಕಂಪೆನಿಗಳಿವೆ. ಒಂದು ಬಿಡಿ ಭಾಗ ಹೋಗಿದ್ದರೆ ಇದ್ದ ಒಳ್ಳೆಯದ್ದನ್ನೂ ತೆಗದು ಹೊಸ ಜೋಡಿಗಳನ್ನು ಹಾಕುವ ಪ್ರವೃತ್ತಿ ಹಲವೆಡೆ ಇದೆ. ಅದೇ ನಮ್ಮ ವಾಹನದ ಬಗ್ಗೇನೆ ತಿಳಿದಿರುವ ಫಿಟ್ಟರ್ ನಲ್ಲಿ ತೋರಿಸಿದರೆ ಆತ ಕಡಿಮೆ ಬೆಲೆಗೆ ಅದನ್ನು ಹಾಕಿಕೊಡುತ್ತಾನೆ. ವಾಹನ ಎಲ್ಲಾದರೂ ಬಾಕಿಯಾದರೆ ಕೂಡಲೇ ಸ್ಪಂದಿಸುವ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎನ್ನುತ್ತಾರೆ ಪ್ರವೀಣ್ ಎನ್.
Dear sir,
I will agree with ur openion. Once again thanks for Fitters.
Mahesha CS
hi,
ee samajadalli yellaru ondilla ondu karanakke obbarige obbaru bekage bekagtare..
fittergala seve amulyavadudu.. lekana chennagide.. thank you.