ಪೇಜಾವರ ಶ್ರೀಗಳಿಗೆ ದಲಿತರ ಮನೆ(ನ) ಇನ್ನೂ ಹತ್ತಿರವಿಲ್ಲವೇ?
ಸಾತ್ವಿಕ್ ಎನ್.ವಿ
ಉಡುಪಿಯಲ್ಲೊಂದು ಪ್ರಸಿದ್ಧ ಕಾಲೇಜು. ಪ್ರತಿವರ್ಷವೂ ಹೊಸದಾಗಿ ಬರುವ ವಿದ್ಯಾರ್ಥಿಗಳ ಜೊತೆ ಆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸ್ವಾಮೀಜಿಯವರೊಂದಿಗೆ ಸಂವಾದ ಕಾರ್ಯಕ್ರಮ. ಒಂದು ವರ್ಷವೂ ತಪ್ಪದೇ ಯತಿಗಳಿಗೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆ ‘ಸ್ವಾಮೀಜಿ ಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ ಯಾಕಿಲ್ಲ’ ಅಂತ. ‘ಅದು ನಮ್ಮ ಮಠದ ಸಂಪ್ರದಾಯ ಕ್ರಮ. ಅಲ್ಲದೇ ಯಾವುದೇ ಬ್ರಾಹ್ಮಣರು ‘ಅನ್ಯ’ರೊಂದಿಗಿನ ಸಹಪಂಕ್ತಿ ಭೋಜನ ಅಷ್ಟಾಗಿ ಇಷ್ಟಪಡುವುದಿಲ್ಲ’ ಎಂಬ ರೆಡಿಮೇಡ್ ಉತ್ತರ ಸ್ವಾಮೀಜಿಗಳಿಂದ. ಮರುಪ್ರಶ್ನೆ ಕೇಳಲು ಹೊರಟ ವಿದ್ಯಾರ್ಥಿಗೆ ಪಕ್ಕದಲ್ಲಿರುವ ಮೇಷ್ಟ್ರುಗಳ ಬಿರುಸುನೋಟ ರೆಡ್ ಸಿಗ್ನಲ್ ಆಗಿರುತ್ತದೆ. ಅಲ್ಲಿಗೆ ಸಂವಾದ ಕಾರ್ಯಕ್ರಮ ಮುಗಿಯುತ್ತದೆ.
ಈ ಪ್ರಸಂಗ ನೆನಪಾದದ್ದು ಪೇಜಾವರ ಶ್ರೀಗಳ ದಲಿತ ಕಾಲೋನಿಗಳ ಭೇಟಿಯನ್ನು ಪತ್ರಿಕೆಯಲ್ಲಿ ನೋಡಿದ ಸಂದರ್ಭದಲ್ಲಿ. ಸ್ವಾಮೀಜಿಯವರು ಅಲ್ಲಿನ ದಲಿತರಿಗೆ ವೈಷ್ಣವ ದೀಕ್ಷೆಯನ್ನು ನೀಡುವ ಮೂಲಕ ಜನರನ್ನು ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಪ್ರಕ್ರಿಯೆ ನಮ್ಮಲ್ಲಿ ಸಾಮಾನ್ಯವಾದ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವು- ಈವರಗೆ ದಲಿತರು ಉತ್ತಮ ವ್ಯಕ್ತಿಗಳಾಗಿರಲಿಲ್ಲವೇ? ಸಹಪಂಕ್ತಿ ಭೋಜನಕ್ಕೆ ಒಪ್ಪದ ಮನಸ್ಸುಗಳು ಮುಂದೆ ದಲಿತರನ್ನು ಅಥವಾ ಇತರೆ ವೈಷ್ಣವ ದೀಕ್ಷೆ ಪಡೆದ ವ್ಯಕ್ತಿಗಳನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ?
ಸ್ವಾಮೀಜಿಯವರ ಇನ್ನೊಂದು ಪ್ರಮುಖ ವಿಚಾರ- ತಾನು ವೈಷ್ಣವ ದೀಕ್ಷೆಯನ್ನು ಕೊಡುತ್ತಿದ್ದೇನೇಯೇ ವಿನಾ ಬ್ರಾಹ್ಮಣ ದೀಕ್ಷೆಯನ್ನಲ್ಲ ಎಂಬುದು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಸ್ವಾಮೀಜಿಯವರಿಗೂ ಕೂಡ ಒಂದು ಹಂತದವರಗೆ ತಮ್ಮ ಸ್ನೇಹದ ಹಸ್ತವನ್ನು ಚಾಚಬಲ್ಲರು. ನಂತರ ಅವರಿಗೂ ಕೂಡ ವೈದಿಕ ಸಂಪ್ರದಾಯಗಳು ಸಮ್ಮತಿಸುವುದಿಲ್ಲ. ಒಂದು ಕಾಲಕ್ಕೆ ಸಮುದ್ರಯಾನ ಯತಿಗಳಿಗೆ ನಿಷಿದ್ಧ ಎಂದಿದ್ದ ಕಾಲಕ್ಕೆ ಸಮುದ್ರೋಲ್ಲಂಘನ ಮಾಡಿ ಕ್ರಾಂತಿ ಮಾಡಿದ್ದರು. ಆದರೆ ಯಾಕೆ ಈಗ ಕಂದಾಚಾರಗಳನ್ನು ಮುರಿದು ಹಿಂದು ಸಮಾಜವನ್ನು ಒಂದಾಗಿಸಲು ಸಾಧ್ಯವಾಗುತ್ತಿಲ್ಲ?
ವೈಷ್ಣವರು ಅನ್ಯ ಹಿಂದುಗಳ ಜೊತೆ ಕುಳಿತು ಊಟ ಮಾಡದೇ ಇರುವುದಕ್ಕೆ ನೂರಾರು ಕಾರಣ ಕೊಡಲು ಸಾಧ್ಯವಿದೆ. ಆದರೆ ಐಕ್ಯತಾ ಹಿಂದು ಸಮಾಜ ನಿರ್ಮಾಣವಾಗಲು ಇದು ತೀರ ಅಗತ್ಯ. ಇನ್ನೊಂದು ಅಂಶ ಬ್ರಾಹ್ಮಣೇತರರು ಬ್ರಾಹ್ಮಣರ ಜೊತೆ ಕುಳಿತು ಉಣ್ಣುವುದರಿಂದ ಸಕಲ ಸೌಭಾಗ್ಯಗಳೇನು ಲಭಿಸುವುದಿಲ್ಲ. ಆದರೆ ಸಾಂಕೇತಿಕವಾಗಿ ಇದು ನಾವೆಲ್ಲ ಒಂದು ಎಂಬ ಭಾವವನ್ನು ಬಿತ್ತುತ್ತದೆ.
ಪೇಜಾವರ ಶ್ರೀಗಳು ಪ್ರಾಮಾಣಿಕವಾಗಿ ಜನತೆಯನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿರುವ ಸಂಗತಿ ಮತ್ತು ಅದನ್ನು ಪ್ರಗತಿಪರರು ವಿರೋಧಿಸುತ್ತಿರುವುದನ್ನು ಈ ಮಾಧ್ಯಮಗಳು ಯಾಕಿಷ್ಟು ಫೋಕಸ್ ಮಾಡುತ್ತಿವೆಯೇ ತಿಳಿಯದು. ಬಹಳ ಹಿಂದಿನಿಂದಲೂ ಬಸವಧರ್ಮ ಪ್ರಿಯರು ಈ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ ಅವರಿಗೆ ಯಾವತ್ತೂ ಇಂಥ ಪ್ರಚಾರ ಸಿಕ್ಕಿಲ್ಲ. ಮಾಧ್ಯಮಗಳು ಹೀಗೇಕೆ ಮಾಡುತ್ತವೆ?
ಇನ್ನೊಂದು ಸಂಗತಿಯೆಂದರೆ ತಾವು ಹೇಳಿದ ಹಾಗೆ ಸ್ವಾಮೀಜಿಯವರು ಮಾಡಲಿ ಎಂಬ ಕೆಲವರ ಹಠ. ಸ್ವಾಮೀಜಿಯವರಲ್ಲಿ ಮಾಂಸಾಹಾರ ಸೇವನೆ ಮಾಡಿ ಅನ್ನುವುದು ಕೂಡ ಅವರ ಆಹಾರದ ಮೇಲೆ ಇನ್ನೊಬ್ಬರು ಹಕ್ಕು ಸಾಧಿಸಿದಂತೆ. ಇದು ಸಂಪ್ರದಾಯವಾದಿಗಳಷ್ಟೇ ಮೂಲಭೂತವಾದುದು. ಯತಿ ಸ್ಥಾನಕ್ಕೆ ತನ್ನದೇ ಆದ ನಿಯಮಗಳಿರುತ್ತವೆ. ಅದನ್ನು ಮುರಿದರೆ ಅವರನ್ನು ಯಾರು ಸಹ ಸ್ವಾಮಿ ಎಂದು ಕರೆಯುವುದಿಲ್ಲ. ಆದರೆ ಆ ನಿಯಮಗಳು ಇತರರಿಗೆ ತೊಂದರೆಯುಂಟು ಮಾಡಿದರೆ ಮಾತ್ರ ಅವುಗಳನ್ನು ಬದಲಿಸಿಕೊಳ್ಳಬಹುದು. ಹೀಗೆ ಮಾಡಿ ಸುದ್ದಿ ಮಾಡುವುದೇ ಅವರ ಅಗತ್ಯವಾಗಿದ್ದಲ್ಲಿ ಅವರನ್ನು ಅವರಷ್ಟಕ್ಕೆ ಬಿಡುವುದು ಒಳಿತು.
ಶ್ರೀಗಳ ದೀಕ್ಷೆಯಿಂದ ದಲಿತರ ಮನಸ್ಸು ಬದಲಾಗುವುದೋ ಇಲ್ಲವೋ ಬೇರೆ ವಿಷಯ, ಆದರೆ ತನ್ನಂಥ ಮತ್ತೊಬ್ಬ ‘ಮನುಷ್ಯ’ನೊಂದಿಗೆ ಕುಳಿತು ಉಣ್ಣಲು ಮುಖ ತಿರುಗಿಸುವವರಿಗೆ ‘ಉತ್ತಮ ಮನುಷ್ಯರಾಗಲು’ ಯಾರು ದೀಕ್ಷೆ ಕೊಡಬಹುದು ಎಂಬುದೇ ಈಗಿನ ಪ್ರಶ್ನೆ.
ಚಿತ್ರಕೃಪೆ: justkannada.in





ಸ್ವಾಮಿಜೀಯವರು..ದಲಿತರಿಗೆ ವೈಷ್ಣವ ದೀಕ್ಷೆಯನ್ನು ನೀಡುವುದಕ್ಕೆ ಬದಲಾಗಿ
ವೈಷ್ಣವರಲ್ಲಿರುವ ದಲಿತತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕಾಗಿರುವು ಬಹು ಮುಖ್ಯವಾದ ಕಾರ್ಯ.
ಪರಮಾತ್ಮ ಉಡುಪಿಯ ಶ್ರೀ ಕೃಷ್ಣ..ಭಕ್ತ ಕನಕದಾಸರಿಗೆ ಕೊಟ್ಟ ದರುಶನದ ಪರಿಯಿಂದಲಾದರೂ ಅಲ್ಲಿಯ ನಿಮ್ಮವರು ಇನ್ನೂ ಬದಲ್ಲಾಗಿಲ್ಲ..
ಮೊದಲು ಅವರ ಅಂದತ್ವವನ್ನು ಹೋಗಲಾಡಿಸಿ..
ಕುಲ ಕುಲವೆಂದು ಹೊಡೆದಾಡದಿರಿ..ನಿಮ್ಮ ಕುಲದ ನೆಲೆ ಯಾವುದು ಬಲ್ಲಿರಾ..?
ಶ್ರೀಗಳ ದೀಕ್ಷೆಯಿಂದ ದಲಿತರ ಮನಸ್ಸು ಬದಲಾಗುವುದೋ ಇಲ್ಲವೋ ಬೇರೆ ವಿಷಯ, ಆದರೆ ತನ್ನಂಥ ಮತ್ತೊಬ್ಬ ‘ಮನುಷ್ಯ’ನೊಂದಿಗೆ ಕುಳಿತು ಉಣ್ಣಲು ಮುಖ ತಿರುಗಿಸುವವರಿಗೆ ‘ಉತ್ತಮ ಮನುಷ್ಯರಾಗಲು’ ಯಾರು ದೀಕ್ಷೆ ಕೊಡಬಹುದು ಎಂಬುದೇ ಈಗಿನ ಪ್ರಶ್ನೆ.
ಇದು ಚಿಂತಿಸಲೇಬೇಕಾದ ವಿಷಯ.
ಮನುಷ್ಯತ್ವ ಹೊಂದಿರುವ ಮನುಷ್ಯರೆಲ್ಲರನ್ನೂ ಪ್ರೀತಿಸುತ್ತಾ, ಅವರ ಜೊತೆಗೆ ಸಹಭೋಜನ ಮಾಡಿ, ಸಹಬಾಳ್ವೆ ನಡೆಸಲಾಗದವರು, ಅದೆಷ್ಟೇ ಎತ್ತರದ ಪೀಠವನ್ನೇರಿದರೂ ಅಷ್ಟೇ!
“ಇನ್ನೊಂದು ಸಂಗತಿಯೆಂದರೆ ತಾವು ಹೇಳಿದ ಹಾಗೆ ಸ್ವಾಮೀಜಿಯವರು ಮಾಡಲಿ ಎಂಬ ಕೆಲವರ ಹಠ. ಸ್ವಾಮೀಜಿಯವರಲ್ಲಿ ಮಾಂಸಾಹಾರ ಸೇವನೆ ಮಾಡಿ ಅನ್ನುವುದು ಕೂಡ ಅವರ ಆಹಾರದ ಮೇಲೆ ಇನ್ನೊಬ್ಬರು ಹಕ್ಕು ಸಾಧಿಸಿದಂತೆ. ಇದು ಸಂಪ್ರದಾಯವಾದಿಗಳಷ್ಟೇ ಮೂಲಭೂತವಾದುದು. ಯತಿ ಸ್ಥಾನಕ್ಕೆ ತನ್ನದೇ ಆದ ನಿಯಮಗಳಿರುತ್ತವೆ. ಅದನ್ನು ಮುರಿದರೆ ಅವರನ್ನು ಯಾರು ಸಹ ಸ್ವಾಮಿ ಎಂದು ಕರೆಯುವುದಿಲ್ಲ. ಆದರೆ ಆ ನಿಯಮಗಳು ಇತರರಿಗೆ ತೊಂದರೆಯುಂಟು ಮಾಡಿದರೆ ಮಾತ್ರ ಅವುಗಳನ್ನು ಬದಲಿಸಿಕೊಳ್ಳಬಹುದು”.
>>>> ಸರಿಯಾಗಿಯೇ ಹೇಳಿದ್ದೀರಿ .
ನನಗನಿಸೋದು, ಒಂದೊಂದು ವಿಷಯಗಳ ಬಗ್ಗೆ ,ಅದರ ಪರಿಹಾರದ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ವಿಧಾನಗಳು (ಹೊಸದು) ಹೊಳೆಯುತ್ತವೆ,ಅದು ಅಲ್ಲಗಳೆಯುವನ್ತಹುದಲ್ಲ ,ಯಾಕೆಂದರೆ ಅದು ಯಶಸ್ವಿಯಾದಾಗ ಮಾತ್ರ ಎಲ್ಲರೂ ಹೌದು ಹೌದು ಎಂದು ತಲೆ ದೂಗುತ್ತಾರೆ . ಅದೇ ಎಲ್ಲಾದರು ವಿಫಲವಾದರೆ ದೂರುತ್ತಾರೆ ಕೂಡ. ಆದರೆ ಯಶಸ್ವಿಯಾದಾಗ ಅದರ ಹಿಂದೆ ಇದ್ದಂತಹ ಶ್ರಮ ವನ್ನ ಯಾರೂ ಗುರುತಿಸೋದಿಲ್ಲ.
ಹಾಗಾಗಿ ಪೇಜಾವರರು ,ಒಂದು ಪ್ರಯತ್ನ ಮಾಡುತ್ತಿದ್ದಾರೆ ,ಆದ್ದರಿಂದ ಅವರೊಂದಿಗೆ ಕೈ ಜೋಡಿಸಿ ಕೈ ಬಲಪಡಿಸೋಣ ಯಾಕೆಂದರೆ ಇದರಿಂದಾಗುವ ತೊಂದರೆ (ಸಮಾಜಕ್ಕೆ)ಏನಿಲ್ಲ ಅಲ್ಲವೇ?
ಅಸ್ಪ್ರುಶ್ಯತೆ ತೊಲಗ ಬೇಕು ಸತ್ಯ (ಈಗ ಬಹಳಷ್ಟು ಕಡಿಮೆಯಾಗಿದೆ, ಹಿಂದೆಗೆ ಹೋಲಿಸಿದಾಗ), ಆದರೆ ಅದಕ್ಕೆ ಇನ್ನೂ ಬಹಳಷ್ಟು ಪ್ರಯತ್ನಗಳು ಎಲ್ಲರಿಂದಲೂ ಆಗಬೇಕಿದೆ. ಆದ್ದರಿಂದ ಎಲ್ಲರೂ ಪೇಜಾವರರೊಂದಿಗೆ ಕೈಜೋಡಿಸೋಣ ,ಯಾಕೆಂದರೆ ಅವರು ಈಗ ಮಾಡುತ್ತಿರುವುದರಲ್ಲಿ ತಪ್ಪೇನು ಇಲ್ಲ, ಯಶಸ್ವಿಯಾದರೆ ಸಮಾಜಕ್ಕೆ ಒಳ್ಳೆಯದು (ಆಗಲಿ ಎಂದು ಹಾರೈಸುವೆ), ಅಕಸ್ಮಾತ್ ಆಗದಿದ್ದರೆ ಅವರ ಈ ಪ್ರಯತ್ನ ದಿಂದ ಹಾನಿಯೇನು (ಸಮಾಜಕ್ಕೆ) ಆಗಲಾರದು ಅಲ್ಲವೇ?
ಒಳ್ಳೆಯ ಪ್ರಶ್ನೆ ಸಾತ್ವಿಕ್.ಮಠದ ಕ್ರಮವನ್ನ ಮುರಿಯಾಲಾಗದವ್ರು,ಜಾತಿ ಪದ್ದತಿಯನ್ನ ಮುರಿಯಲು ಸಾಧ್ಯವೆ ಅಂತಲು ಯೋಚಿಸಬೇಕಲ್ಲವೇ?,ಪೇಜಾವರರು ಅಂತದ್ದೊಂದು ಹೆಜ್ಜೆಯಿಟ್ಟಲ್ಲಿ ಅವರಿಗೆ ಬಹುಶಃ ಹೆಚ್ಚಿನ ಬೆಂಬಲ ಸಿಗಬಹುದೇನೋ.
ನೀವು ಹೇಳಿದ ಹಾಗೆ ಸನ್ಯಾಸಿಗಳಿಗೆ ಅವರದ್ದೆ ಆದ ನೀತಿ ನಿಯಮಗಳಿರುತ್ತವೆ,ಅದನ್ನ ಮೀರಿ ಬಂದು ಮಾಂಸಹಾರಿ ಸೇವಿಸಿ ಅನ್ನುವುದೆಲ್ಲ ಒಗ್ಗೂಡಲು ಬಯಸದ ಮನಸುಗಳು ಅಷ್ಟೆ
ನೀವು ಎತ್ತಿರುವ “ಸಹ ಭೋಜನ”ದ ವಿಷಯ ಸಮರ್ಪಕವಾದದ್ದೇ.
“ಮಡಿ-ಮೈಲಿಗೆ”ಗಳನ್ನು ದೂರವಿಟ್ಟು ದಲಿತ ಕೇರಿಗಳ ಪಾದಯಾತ್ರೆ ಮಾಡುತ್ತಿರುವುದು ಸುಧಾರಣೆಯ ಮೊದಲ ಹೆಜ್ಜೆ.
ಹಿಂದುಗಳೆಲ್ಲಾ ಇದನ್ನು ಸ್ವಾಗತಿಸಿ ಪ್ರೋತ್ಸಾಹಿಸಿದರೆ, ಮುಂದಿನ ಹೆಜ್ಜೆಗಳಾದ “ಸಹ ಭೋಜನ”, “ಅಂತರ್ಜಾತೀಯ ವಿವಾಹ” ಇತ್ಯಾದಿಗಳೂ ಸಾಧ್ಯವಾಗುವುದರಲ್ಲಿ ಸಂದೇಹವಿಲ್ಲ.
ಮೊದಲ ಹೆಜ್ಜೆ ಇಡುವಾಗಲೇ ಉತ್ಸಾಹಕ್ಕೆ ತಣ್ಣೀರೆರಚುವ, ನಿಂದಿಸುವ ಕೆಲಸ ಮಾಡಿದರೆ, ಮುಂದಿನ ಹೆಜ್ಜೆಗಳನ್ನು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ!?
ಪೇಜಾವರ ಶ್ರೀಗಳು ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ; ಮುಂದೆ ಸಹ ಭೋಜನಕ್ಕೂ ಸಮ್ಮತಿಸಬಹುದು.
ಅದಾಗಿಬಿಟ್ಟರೆ ಸಮಾಜ ಸುಧಾರಣೆ ಆಗಿಬಿಡುತ್ತದೆಯೇ?
ಇಡೀ ಹಿಂದು ಸಮಾಜ ಈ ರೀತಿಯ ಸುಧಾರಣೆಗಳನ್ನು ಅಪ್ಪಿಕೊಳ್ಳದೆ ಸುಧಾರಣೆ ಸಾಧ್ಯವಿಲ್ಲ.
ಹೀಗಾಗಿ ಪೇಜಾವರ ಶ್ರೀಗಳ ಹೆಜ್ಜೆಗಳನ್ನು ಟೀಕಿಸುವ ಬದಲು ಸ್ವಾಗತಿಸಬೇಕು.
ಅವರು ಮುಂದೆ ಮಾಡಬೇಕೆಂದು ನಾವು ಬಯಸುವುದನ್ನು, ನಾವೇ ಏಕೆ ಮಾಡಿ ಉದಾಹರಣೆಯಾಗಬಾರದು ಎಂದು ಯೋಚಿಸಬೇಕು, ಪ್ರಯತ್ನಿಸಬೇಕು.
ನೀವು ಹೇಳುತ್ತಿರುವ “ಸಹ ಭೋಜನ”ದ ಪ್ರಯತ್ನಗಳು ಈಗಾಗಲೇ ನಡೆದಿವೆ.
ಯಾವ ಸಂಘಟನೆಗಳು ಮಾದ್ಯಮಗಳ ವಕ್ರನೋಟಕ್ಕೆ ಸದಾ ಪಾತ್ರವಾಗುತ್ತಿವೆಯೋ, ಆ ಸಂಘಟನೆಗಳು “ಸಹ ಭೋಜನ” ಕಾರ್ಯಕ್ರಮಗಳನ್ನು ಕಳೆದ ಹಲವು ದಶಕಗಳಿಂದ ಸದ್ದಿಲ್ಲದೇ ನಡೆಸುತ್ತಿವೆ.
ಆ ಸಂಘಟನೆಗಳ ’ಸಾಮರಸ್ಯ’ದ ಕಾರ್ಯಕ್ರಮಗಳಿಂದ ಎಷ್ಟೊಂದು ಪರಿವರ್ತನೆಯಾಗಿದೆ ಗೊತ್ತೇ?
ಡಾ|| ಅಂಬೇಡ್ಕರ್ ಅವರು ನಾಸಿಕದ ಕಾಳಾರಾಮ ಮಂದಿರಕ್ಕೆ ಪ್ರವೇಶ ಮಾಡಲು ಯತ್ನಿಸಿ ಸೋತಿದ್ದರು.
ಅವರನ್ನು ಅಂದು ತಡೆದ ಪುರೋಹಿತನ ಮಗನೇ ಇಂದು ಮುಂದೆ ನಿಂತು, ಅದೇ ಕಾಳಾರಾಂ ಮಂದಿರಕ್ಕೆ ದಲಿತರಿಗೆ ಮುಕ್ಪಪ್ರವೇಶ ನೀಡಿ, ದಲಿತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಈ ರೀತಿಯಲ್ಲಿ ತನ್ನ ತಂದೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರುವೆನೆಂದು ತಿಳಿಸಿದ್ದಾನೆ.
ಈ ಪರಿವರ್ತನೆ ಸಾಧ್ಯವಾಗಿದ್ದು, ಆ ಸಂಘಟನೆಗಳ “ಸಾಮರಸ್ಯ”ದ ಕಾರ್ಯಕ್ರಮಗಳಿಂದ.
ನಮ್ಮ ಮಾದ್ಯಮಗಳಿಗೆ ಈ ರೀತಿಯ ರಚನಾತ್ಮಕ ಕಾರ್ಯಗಳು ಕಾಣಿಸುವುದಿಲ್ಲ, ಬೇಕೂ ಇಲ್ಲ.
ಇದನ್ನು ತಿಳಿಸಿದ ಉದ್ದೇಶವೆಂದರೆ, ಕೇವಲ ಪೇಜಾವರಶ್ರೀಗಳಿಗೆ ಹಾಗೆ ಮಾಡಿ, ಹೀಗೆ ಮಾಡಿ, ಎಂದು ಸಲಹೆ ನೀಡುವುದರ ಬದಲು, ನಾವೇ ಆ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟರೆ ಹೆಚ್ಚಿನ ಸಾಧನೆಗಳಾಗುತ್ತದೆ.
ನರೇಂದ್ರ,
ಸಹ ಭೋಜನವನ್ನ ಈಗಲು ಕೆಲ ಸಂಘಟನೆಗಳು,ಜನರು ಮಾಡುತ್ತಿರುವುದು ಹಾಗೆ ಮೊದಲಿನಿಂದಲು ನಡೆದು ಬಂದಿದೆ ಅದನ್ನು ಒಪ್ಪೋಣ.ಲೇಖನವನ್ನ ನೀವು ಇನ್ನೊಮ್ಮೆ ಸರಿಯಾಗಿ ಓದಿ ನೋಡಿ.ಸಾತ್ವಿಕರ ಪ್ರಶ್ನೆಯಿರುವುದು ಉಡುಪಿಯ ಮಠದಲ್ಲಿ ಸಹ ಭೋಜನ ಯಾಕಿಲ್ಲ ಅಂತ?,ಹಿಂದೂ ಸಮಾಜವನ್ನ ಕೂಡಿಸ ಹೊರಟ ಕೆಲಸ ಪುಣ್ಯದ್ದೆ,ಆಗಂತ ಪ್ರಶ್ನೆ ಕೇಳಲೆಬಾರದು ಅನ್ನುವುದು ತಪ್ಪಾಗುತ್ತದೆ. ಹಾಗೆ ನನ್ನ ಮೇಲಿನ ಪ್ರತಿಕ್ರಿಯೆಯನ್ನೊಮ್ಮೆ ಓದಿ ನೋಡಿ.
“ಒಳ್ಳೆಯ ಪ್ರಶ್ನೆ ಸಾತ್ವಿಕ್.ಮಠದ ಕ್ರಮವನ್ನ ಮುರಿಯಾಲಾಗದವ್ರು,ಜಾತಿ ಪದ್ದತಿಯನ್ನ ಮುರಿಯಲು ಸಾಧ್ಯವೆ ಅಂತಲು ಯೋಚಿಸಬೇಕಲ್ಲವೇ?,ಪೇಜಾವರರು ಅಂತದ್ದೊಂದು ಹೆಜ್ಜೆಯಿಟ್ಟಲ್ಲಿ ಅವರಿಗೆ ಬಹುಶಃ ಹೆಚ್ಚಿನ ಬೆಂಬಲ ಸಿಗಬಹುದೇನೋ”
ಸಹಭೋಜನ ಸನ್ಯಾಸಿಗಳ ಆಚರಣೆಗೆ ವಿರುದ್ದ. ಸನ್ಯಾಸಿಗಳ ಆಹಾರಕ್ರಮದ ಬಗ್ಗೆ ತಿಳಿದವರು ಯಾರೂ ಪ್ರಶ್ನಿಸುವುದಿಲ್ಲ. ಸನ್ಯ್ಶಿಗಳು ಬ್ರಾಹ್ಮಣರೊಡನೆಯೂ ಸಹ ಭೋಜನ ಮಾಡುವುದಿಲ್ಲ ಅದು ಸನ್ಯಾಸ ಧರ್ಮಕ್ಕೆ ವಿರುದ್ದ. ಅವರು ಊಟ ಮಾಡುವುದು ೩ ಹಿಡಿ ಮಾತ್ರ ಒಂದು ಇರುವೆಯಂತಹ ಸಣ್ಣ ಕ್ರಿಮಿಗಳಿಗೆ ಮತ್ತೊಂದು ಪ್ರಾಣಿಗಳಿಗೆ ಉಳಿದದ್ದು ಅವರ ಪಾಲು ಅದೂ ಕೂಡ ಭಿಕ್ಷಾನ್ನ ಮಾತ್ರ. ತಿಳಿಯದೆ ಗಹಗಹಿಸಿದಾಕ್ಷಣ ಸತ್ಯವು ಬದಲಾಗುವುದಿಲ್ಲ.
@ ಮೋಹನ್,
ಅದು ಎಲ್ಲರಿಗೂ ಗೊತ್ತಿರೋದೆ ಗೊತ್ತಿಲ್ಲದ್ದೇನಲ್ಲ ಆದರೆ ಇಲ್ಲಿ, ಆಗುತ್ತಿರೋದು ಮತ್ತು ಮಾಡು ತ್ತಿರೋದು ಕೇವಲ ವಿರೋಧಿಸುವ ಕೆಲಸ ಅಸ್ಟೇ ( ವಿರೋಧಿಸುವವರು ಒಳ್ಳೆದನ್ನು ಮತ್ತು ಕೆಟ್ಟದ್ದನ್ನು ಎರಡನ್ನು ವಿರೋಧಿಸುತ್ತಾರೆ. ಅರ್ಥಾತ್ ವಿರೋಧಪಕ್ಷ ಅಂದರೆ ವಿರೋಧಿಸುವುದಕ್ಕಾಗೆ ಇರೋದು ಅಂದುಕೊಂಡಂತೆ ಅಸ್ಟೇ ).
ಹೇಳೋದು ಸುಲಭ ನೋಡಿ ” ಧೈರ್ಯವಿದ್ದರೆ ಹೀಗೆ ಮಾಡಿ ಎಂದು ಅಥವಾ ಅವರು ಹೀಗೆ ಮಾಡಬೇಕಿತ್ತು ಎಂದು. ಅಲ್ಲವೇ?.
ನೀವು ಕೃಷ್ಣ ಮಠದಲ್ಲಿ ಬ್ರಾಹ್ಮಣೇತರರೊಂದಿಗೆ ಮಾತ್ರ ಸಹಭೋಜನ ಇಲ್ಲವೆಂದು ತಿಳಿಸಿದ್ದಿರಿ. ಇತರ ಜಾತಿಯವರನ್ನು ಬಿಡಿ, ಅಲ್ಲಿನ ಬ್ರಾಹ್ಮಣರು ಇತರ ಬ್ರಾಹ್ಮಣ ಒಳ ಪಂಗಡದೊಂದಿಗೆ ಭೋಜನ ಮಾಡುವುದಿಲ್ಲ!
ರಾಕೇಶ್ ಶೆಟ್ಟಿ> ಸಾತ್ವಿಕರ ಪ್ರಶ್ನೆಯಿರುವುದು ಉಡುಪಿಯ ಮಠದಲ್ಲಿ ಸಹ ಭೋಜನ ಯಾಕಿಲ್ಲ ಅಂತ?
ಆ ಪ್ರಶ್ನೆಗೇ ನಾನು ಉತ್ತರ ನೀಡಿರುವುದು.
ಪೇಜಾವರ ಶ್ರೀಗಳೇ ಎಲ್ಲವನ್ನೂ ಮಾಡಬೇಕೆಂದು ಬಯಸಿದರೆ ಅದರಿಂದ ಹೆಚ್ಚೇನೂ ಸಾಧಿಸಲಾಗದು.
ಅವರು ಉಡುಪಿಯ ಕೃಷ್ಣ ಮಠದಲ್ಲಿ ಸಹಭೋಜನ ನಡೆಸಲು ಸಾಧ್ಯವಾಗಿಬಿಟ್ಟರೆ ಅದರಿಂದ ಸುಧಾರಣೆ ಸಂಪೂರ್ಣವಾಗುತ್ತದೆಯೇ?
ಇಡೀ ಸಮಾಜ ಸುಧಾರಣೆಯಾಗಲು, ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಅದು ಅನ್ನಿಸಲಾರಂಭಿಸಬೇಕು.
ಮತ್ತು ಉಡುಪಿಯ ಮಠ ಎಂದರೆ ಅದು ಕೇವಲ ಪೇಜಾವರ ಮಠಾಧೀಶರ ಆದೇಶದಂತೆಯೇ ನಡೆಯುತ್ತದೆ ಎಂಬ ಭ್ರಮೆಯನ್ನು ತೊಡೆದು ಹಾಕಬೇಕು. ಮಠದಲ್ಲಿ ಬದಲಾವಣೆಗಳಾಗಲು ಭಕ್ತರಲ್ಲೂ ಬದಲಾವಣೆಗಳಾಗಬೇಕು. ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ.
ನಮ್ಮಲ್ಲಿ ಆಗಿರುವ ಪ್ರತಿಯೊಂದು ಸುಧಾರಣೆಯೂ ಇದೇ ದಾರಿ ಹಿಡಿದು ಬಂದಿರುವುದು.
ಉದಾಹರಣೆಗೆ, ವಿಧವೆಯು ಕೇಶ ಮುಂಡನ ಮಾಡಿಕೊಳ್ಳುವ ಕಟ್ಟಳೆ ಅಥವಾ ಪದ್ಧತಿ ಇದ್ದಿತು.
ಇಂದು ಅದು ಹೋಗಿದೆ.ವಿಧವಾ ವಿವಾಹವೂ ಜಾರಿಗೆ ಬಂದಿದೆ.
ವಿಧವಾ ವಿವಾಹವನ್ನು ರಾಜಾ ರಾಮ ಮೋಹನ ರಾಯ್ ಪ್ರತಿಪಾದಿಸಿದರು.
ಹಾಗೆಂದು, ನೀವೇ ವಿಧವಾ ವಿವಾಹ ಮಾಡಿಕೊಳ್ಳಿ, ನಿಮ್ಮ ಮಕ್ಕಳೆಲ್ಲರಿಗೂ ವಿಧವಾ ವಿವಾಹ ಮಾಡಿಸಿ, ಇತ್ಯಾದಿ ಹೇಳಿದ್ದರೆ…..ಅವರು ಅಂದು ಪ್ರಾರಂಭಿಸಿದ ಸುಧಾರಣೆಗೆ ಜಾರಿಗೆ ಬರಲು ಇಷ್ಟು ಸಮಯ ಹಿಡಿಯಿತು.
ಹಾಗೆಯೇ ಪೇಜಾವರ ಶ್ರೀ ಗಳು ಪ್ರಾರಂಭಿಸಿರುವ ಸುಧಾರಣೆ ಮಠದ ಒಳಗೂ ಬದಲಾವಣೆ ತರುತ್ತದೆ, ಸಮಾಜದಲ್ಲೂ ಸುಧಾರಣೆ ತರುತ್ತದೆ. ಆದರೆ, ಅದೇನೂ ಮ್ಯಾಜಿಕ್ ಅಲ್ಲ – ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ, ಕಾಯಬೇಕಾಗುತ್ತದೆ.
ರಾಕೇಶ್ ಶೆಟ್ಟಿ> ಆಗಂತ ಪ್ರಶ್ನೆ ಕೇಳಲೆಬಾರದು ಅನ್ನುವುದು ತಪ್ಪಾಗುತ್ತದೆ.
ನಾನು ಪ್ರಶ್ನಿಸಬಾರದು ಎಂದೇನೂ ಹೇಳಿಲ್ಲ.
ಮೂಲ ಲೇಖನವನ್ನು ಮತ್ತೊಮ್ಮೆ ಓದಿಕೊಳ್ಳಿ. ಪೇಜಾವರ ಶ್ರೀಗಳ ಈ ಕಾರ್ಯಕ್ರಮದ ಕುರಿತಾಗಿ ಪ್ರೋತ್ಸಾಹ ನೀಡುವ ಅಂಶಗಳೇನಿದೆ ಹೇಳಿ? ಮಾಡಿರುವ ಉತ್ತಮ ಕೆಲಸವನ್ನು ಮೆಚ್ಚಿ, ಬೆನ್ನು ತಟ್ಟಿ, ತಾವೂ ಅವರೊಡನೆ ಹೆಜ್ಜೆ ಹಾಕಿ, ನಂತರ ಮುಂದಿನ ಸಲಹೆಗಳನ್ನು ನೀಡಿದರೆ ಅದರಿಂದ ಪರಿಣಾಮ ಉತ್ತಮ.
ಮಾಡಿರುವ ಕೆಲಸವನ್ನು ಮೆಚ್ಚುವ ಬದಲು, ಕೇವಲ ಟೀಕೆಗಳಲ್ಲೇ ಕಾಲ ಕಳೆದರೆ, ಮಾಡಿಲ್ಲದಿರುವುದನ್ನೇ ಚರ್ಚಿಸುತ್ತಿದ್ದರೆ, ಅದರಿಂದ ಏನು ತಾನೇ ಲಾಭ?
ನನ್ನ ಉತ್ತರದಲ್ಲಿ ಇದನ್ನೇ ನಾನು ಹೇಳಿರುವುದು. ನಾನೆಲ್ಲೂ ಪ್ರಶ್ನಿಸಬಾರದೆಂದು ಹೇಳಿಲ್ಲ.
> ಸಹಪಂಕ್ತಿ ಭೋಜನಕ್ಕೆ ಒಪ್ಪದ ಮನಸ್ಸುಗಳು ಮುಂದೆ ದಲಿತರನ್ನು ಅಥವಾ ಇತರೆ ವೈಷ್ಣವ ದೀಕ್ಷೆ ಪಡೆದ ವ್ಯಕ್ತಿಗಳನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ?
ಈ ರೀತಿಯ ಋಣಾತ್ಮಕ ಚಿಂತೆ ಏತಕ್ಕೆ?
ಅವರು ಸಹಪಂಕ್ತಿ ಭೋಜನಕ್ಕೆ ಒಪ್ಪುತ್ತಿಲ್ಲ ಎನ್ನುವುದು ನಿಮ್ಮ ಊಹೆ ಅಷ್ಟೇ!
ಪೇಜಾವರ ಶ್ರೀಗಳಿಗೆ ಅದರ ಕುರಿತಾಗಿ ಒಪ್ಪಿಗೆ ಇದ್ದರೂ, ಮಠವು ಅದನ್ನು ಒಪ್ಪಿಕೊಳ್ಲದೆ ಅದು ಸಾಧ್ಯವಾಗಲಾರದು.
ಇಂದು ಸಾಧ್ಯವಾಗದ್ದು ನಾಳೆ ಸಾಧ್ಯವಿಲ್ಲ ಎಂದು ನಿಶ್ಚಯಿಸಿಬಿಟ್ಟರೆ, ಜಗತ್ತಿನಲ್ಲಿ ಯಾವ ಉತ್ತಮ ಕೆಲಸಗಳೂ, ಸುಧಾರಣೆಗಳೂ ಸಾಧ್ಯವಾಗಲಾರದು.
“ಏತಕ್ಕೆ ಸಾಧ್ಯವಿಲ್ಲ; ನಾವು ಅದನ್ನು ಸಾಧಿಸುತ್ತೇವೆ” ಎಂದು ಪಂಥ ತೊಟ್ಟೂ ಹೊರಟರೆ ಸಾಧಿಸಬಹುದು.
ನೀವು ಇಲ್ಲಿ ಎತ್ತಿರುವ ಪ್ರಶ್ನೆಗಳನ್ನು ಪೇಜಾವರ ಶ್ರೀಗಳ ಹತ್ತಿರವೇ ಕೇಳಬಹುದಲ್ಲವೇ?
ಅವರನ್ನು ಪ್ರಶ್ನಿಸಬಹುದೆಂಬ ಯೋಚನೆಯಾದರೂ ನಿಮಗೆ ಬಂದಿದೆಯೇ?
ಪ್ರಯತ್ನಿಸಿ ನೋಡಿ, ನಂತರ ನಿಮ್ಮ ಅನುಭವವನ್ನಿಲ್ಲಿ ಹಂಚಿಕೊಳ್ಳಿ.
ನರೇಂದ್ರ ಅವರೇ,
ನನ್ನ ಆಶಯ ಕೂಡ ನೀವು ಹೇಳಿದ ಹಾಗೆಯೇ ಇದೆ. ಸ್ವಾಮೀಜಿಗಳು ಸ್ವತಂತ್ರರಲ್ಲ ಎಂಬುದು ನನಗೂ ಗೊತ್ತು. ಆದರೆ ಅವರನ್ನು ಸಂಪ್ರದಾಯವೆಂಬ ಸಂಕೋಲೆಯಲ್ಲಿ ಬಂಧಿಸಿರುವ ಶಕ್ತಿಗಳ ಕುರಿತು ನಾನು ಹೇಳಿದ್ದು. ವ್ಯಕ್ತಿಯ ವೈಯಕ್ತಿಕ ಸಾಧನೆಗಳನ್ನು ಯಾವುದೇ ಬಣ್ಣಗಳ ಹಿನ್ನೆಲೆಯಲ್ಲಿ ನೋಡಬಾರದು ಎಂಬುವರಲ್ಲಿ ನಾನು ಒಬ್ಬ. ನೀವು ನನ್ನನ್ನು ‘ತಪ್ಪಾಗಿ’ ಓದಿಕೊಳ್ಳುತ್ತಿದ್ದೀರಿ ಅನ್ನಿಸುತ್ತೆ.
ಸಾತ್ವಿಕ್
@ ಮೊಹನ್,
ಹೌದೌದು ಅಬ್ಬರಿಸಿ ಬೊಬ್ಬಿರಿದರು ಇಲ್ಯಾರಿಗು ಭಯವಾಗುವುದು ಇಲ್ಲ.
ಅಸಲಿಗೆ ನಾನು ಸ್ವಾಮೀಜಿಯನ್ನ ಸಹ ಭೋಜನಕ್ಕೆ ಕರೆಯಲಿಲ್ಲ.ನನ್ನ ಪ್ರಶ್ನೆ ಸರಳವಾದದ್ದು “ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ ಯಾಕಿಲ್ಲ? ” ಅಂತ ಅಷ್ಟೇ! ನಾನೇನು ಕೆಲ ಅತಿರೇಖದವರು ಕೇಳುವಂತೆ ’ಮಾಂಸಹಾರ ತಿನ್ನಿ’ ಅಂತೆಲ್ಲಾ ಕೇಳಿಲ್ಲ
@ ನರೇಂದ್ರ,
ಇದು ಪೇಜಾವರರೋಬ್ಬರಿಂದ ಸಾಧ್ಯವಾಗದ ಕೆಲಸ ಅನ್ನುವುದು ಗೊತ್ತಿದೆ,ಆದರೆ ಎಲ್ಲವು ’ನಿಯಮ’ ಅನ್ನುವುದನ್ನ ಬಿಟ್ಟು ಅನಗತ್ಯವಾದ ನಿಯಮಗಳನ್ನ ಮುರಿಯಲು ಅವರ ಶಿಷ್ಯ ವೃಂದಕ್ಕೆ ಕರೆ ಕೊಡಬಹುದಲ್ಲವೇ? (ಪಾಲಿಸುತ್ತಾರೋ ಬಿಡುತ್ತಾರೋ ಅದು ಬದಿಗಿರಲಿ). ಹಾಂ! ಹಾಗೆ
>>ನೀವು ಇಲ್ಲಿ ಎತ್ತಿರುವ ಪ್ರಶ್ನೆಗಳನ್ನು ಪೇಜಾವರ ಶ್ರೀಗಳ ಹತ್ತಿರವೇ ಕೇಳಬಹುದಲ್ಲವೇ?
ಅವರನ್ನು ಪ್ರಶ್ನಿಸಬಹುದೆಂಬ ಯೋಚನೆಯಾದರೂ ನಿಮಗೆ ಬಂದಿದೆಯೇ?
ಅವರನ್ನು ಮುಖಾ ಮುಖಿ ಭೇಟಿ ಮಾಡಿದರೆ ಖಂಡಿತ ಈ ಪ್ರಶ್ನೆಯನ್ನ ಕೇಳೆಕೇಳುತ್ತೇನೆ.
ಕಾಯುವ ವ್ಯವಧಾನ ಎಲ್ಲಿದೆ? ಯಾರಿಗಿದೆ? ಹುಟ್ಟಿದಾಕ್ಷಣ ನಡೆಯಬೇಕು, ಮಾತಾಡಬೇಕು…ತಂದೆ ತಾಯಿಯ ಕಪಿ ಮುಷ್ಟಿಯಿಂದ ಹೊರಬರಬೇಕು ಎಂದು ಬಯಸುತ್ತಾರೆ ಮತ್ತು ಆಗಲಿಲ್ಲ ಎಂದು ದೂರುತ್ತಾರೆ .(ಅಂದರೆ ಹಾಳಾಗಿರೊದನ್ನು ಸರಿ ಪಡಿಸಲು ಸಮಯ ಬೇಕು.ಅನ್ನೋದು ನಿಜ ಆದರೂ ಯಾರು ತಿಳ್ಕೊಳಲ್ಲ ).
ಸಾತ್ವಿಕ್,
ಮಾತುಗಳಿಗೆ ಹೊರ ಮುಖ ಮಾತ್ರ ಉಂಟೇ ಹೊರತು, ಒಳ ಮುಖ ಇರುವುದಿಲ್ಲ.
ನಮ್ಮ ಮಾತುಗಳನ್ನು ಕೇಳಿಸಿಕೊಂಡವರು ಯಾವ ರೀತಿಯಲ್ಲಿ ಅರ್ಥೈಸುತ್ತಾರೋ, ಅದೇ ಅದರ ನಿಜವಾದ ಅರ್ಥ.
ನಾವು ಮಾತನಾಡುವಾಗ, ಮನಸ್ಸಿನ ಒಳಗೆ ಏನೇ ಅಂದುಕೊಂಡಿದ್ದರೂ, ಅದು ಕೇಳುಗರಿಗೆ ತಿಳಿಯುವುದಿಲ್ಲ. ನಾವು ಅದನ್ನು ಸ್ಪಷ್ಟ ಪಡಿಸಿ ಹೇಳಿದಾಗ ಮಾತ್ರ ಅದು ತಿಳಿಯುವುದು.
ನೀವು ಈಗ ನೀಡಿದ ಸ್ಪಷ್ಟೀಕರಣ ನನಗೆ ಒಪ್ಪಿಗೆಯಾಗಿದೆ.
ಆದರೆ, ನೀವು ಈಗ ತಿಳಿಸುತ್ತಿರುವ ನಿಮ್ಮ ಮನಸ್ಸಿನಾಳದ ಮಾತುಗಳು, ನಿಮ್ಮ ಮೂಲ ಬರಹದಲ್ಲಿ ಎಲ್ಲಿಯೂ ಹೊರಬಂದಿರುವುದಿಲ್ಲ.
ಮತ್ತು ನಾನು ಹೇಳುತ್ತಿರುವ ಮುಖ್ಯ ಅಂಶ ನಿಮಗೆ ತಿಳಿಯಿತೋ ಇಲ್ಲವೋ ನಾ ಕಾಣೆ.
ಮುಖ್ಯವಾಗಿ ನಾನು ಒತ್ತಿ ಹೇಳುತ್ತಿರುವ ಅಂಶವೆಂದರೆ, ಸಾಮಾಜಿಕ ಸುಧಾರಣೆ ಸಮಾಜದ ಪ್ರತಿಯೊಬ್ಬರ ಕರ್ತ್ಯವ್ಯ.
ಅದು ಒಂದೆರಡು ದಿನಗಳಲ್ಲಿ ಆಗಿ ಮುಗಿಯುವುದಲ್ಲ.
ಹೀಗಾಗಿ, ಯಾರು ಎಷ್ಟೇ ಸುಧಾರಣೆಗೆ ಪ್ರಯತ್ನಿಸಿದರೂ ಅದನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು, ಬೆನ್ನು ತಟ್ಟಿ ಹುರಿದುಂಬಿಸಬೇಕು. ಎಷ್ಟು ಸುಧಾರಣೆ ಈ ಒಂದು ಪ್ರಯತ್ನದಿಂದ ಆಯಿತು ಎನ್ನುವುದಕ್ಕಿಂದ, ಪ್ರಯತ್ನ ಪ್ರಾರಂಭವಾಯಿತಲ್ಲ, ಪ್ರಯತ್ನ ಮುಂದುವರೆಯುತ್ತಿದೆಯಲ್ಲಾ ಎನ್ನುವುದೇ ಮುಖ್ಯ.
ಆಗಿರುವ ಪ್ರಯತ್ನಗಳನ್ನು ಶ್ಲಾಘಿಸದೆ, ಆಗದಿರುವ ಅಥವಾ ಆಗಬೇಕಾದದ್ದನ್ನೇ ಚಿಂತಿಸುತ್ತಾ, ಆಗಿರುವುದನ್ನು ಟೀಕಿಸುವುದು ಅಥವಾ ಪ್ರಯತ್ನಿಸುತ್ತಿರುವವರನ್ನೇ ಟೀಕಿಸುತ್ತಿರುವುದು ಸ್ತುತ್ಯಾರ್ಹವಲ್ಲ.
ಸಮಾಜ ಸುಧಾರಣೆಗೆ ಹೊರಟಾಗ, ಆಗದಿರುವ ಕಾರ್ಯದ ಕುರಿತು ಚಿಂತೆ ಏಕೆ – ಅದು ಸಮುದ್ರದಂತೆ ವಿಶಾಲ.
ಈಗ ಆಗಿರುವುದೇನು, ನಾವು ತಕ್ಷಣಕ್ಕೆ ಮಾಡಲು ಸಾಧ್ಯವಾಗುವುದೇನು, ಇವಿಷ್ಟೇ ಇಲ್ಲಿ ಮುಖ್ಯ.
ಈ ನಿಟ್ಟಿನಲ್ಲಿ, ಪೇಜಾವರ ಶ್ರೀಗಳು ಮಾಡಲು ಸಾಧ್ಯವಾಗಿರುವುದನ್ನು ಪ್ರಶಂಸಿಸೋಣ ಮತ್ತು ಆಗದಿರುವ ಕಾರ್ಯಕ್ಕೆ ಅವರನ್ನು ನಿಂದಿಸುವುದು ಅಥವಾ ಟೀಕಿಸುವುದು ಬೇಡ – ಅದಕ್ಕೆ ಅವರು ಹೊಣೆಗಾರರಲ್ಲ.
ಇತಿ,
ನರೇಂದ್ರ
>>ಒಂದು ಕಾಲಕ್ಕೆ ಸಮುದ್ರಯಾನ ಯತಿಗಳಿಗೆ ನಿಷಿದ್ಧ ಎಂದಿದ್ದ ಕಾಲಕ್ಕೆ ಸಮುದ್ರೋಲ್ಲಂಘನ ಮಾಡಿ ಕ್ರಾಂತಿ ಮಾಡಿದ್ದರು<<
ಹಾಗೆ ಸಮುದ್ರೋಲ್ಲಂಘನ ಮಾಡಿದ ಶಿರೂರು ಮಠದ ಸ್ವಾಮಿಜಿಗೆ ಪರ್ಯಾಯದಲ್ಲಿ ಕುಳಿತರು, ಕೃಷ್ಣನ ಮೂಲ ವಿಗ್ರಹವನ್ನು ಮುಟ್ಟುವುದು ನಿಷೇಧಿಸಿರುವುದು ಬಹಳ ಜನರಿಗೆ ಗೊತ್ತಿಲ್ಲ.
—
ಅರವಿಂದ್
ಅಷ್ಟಕ್ಕೋ ಅಂತ ಅವಸರ ಯಾಕೆ ಅಂತ? ಸಮಾಜ ಒಂದುಗೂಡಿಸೋ ಪ್ರಯತ್ನ?! ಜಾತಿ ಆಧಾರಿತ ಮೀಸಲಾತಿ ಅನ್ನೋ ತೀರಾ ಇತ್ತೀಚಿನ ಪೀಡೆ ಮುಂದಿನ ಕೆಲವು ದಶಕಗಳವರೆಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಥೂ ..ಅಷ್ಟಕ್ಕೋ ಸಮಾಜದಲ್ಲಿ ಬ್ರಾಹ್ಮಣರ ಜನ ಸಂಖ್ಯೆ ಎಷ್ಟು? ೫ ರಿಂದ ೧೦ ಪ್ರತಿಶತ ಅಬ್ಬಾಬ್ಬ ಅಂದ್ರೆ?? ಅದೂ ಕೆಲವೆಡೆ ಮಾತ್ರ. ಸಮಾಜದಲ್ಲಿ ಇನ್ನೊ ಇವೆಯಲ್ಲ ನೂರಾರು ಜಾತಿಗಳು. ಎಲ್ಲ ಒಂದಾಗಿದರ? ಇಲ್ಲಲ್ಲ? so this intercaste marriage, sahabhojana is all irrelevant especially when every caste is caste-ist. The fact is all of them somehow want to end up beating brahmins!
having said all this I must say whatever this Swamiji is doing is more of a public gimmick (which is unnecessary).
ಸ್ವಾಮೀಜಿಗಳಿಗೆ ಕೆಲವೊಂದು ನೀತಿ ನಿಯಮಗಳು ಇರಬಹುದು. ಅವರು ಸಹಭೋಜನಕ್ಕೆ ಬರಬೇಕು ಎಂದು ಬಯಸುವುದು ತಪ್ಪಾಗಬಹುದು. ಆದರೆ ಉಳಿದ ಬ್ರಾಹ್ಮಣರು ಸಹಭೋಜನವನ್ನು ನಿರಾಕರಿಸುವ ಔಚಿತ್ಯ ಏನು? ಮಠ, ದೇವಸ್ಥಾನಗಳಲ್ಲಿ ಮಾತ್ರ ಪ್ರತ್ಯೇಕ ಭೋಜನವನ್ನು ಬಯಸಿ, ಉಳಿದ ಸಮಯದಲ್ಲಿ ಹಸಿವಾದಾಗ ಯಾವುದಾದರೂ ಹೊಟೇಲು ನುಗ್ಗುವುದಿಲ್ಲವೇ?
ನನಗೂ ಇದೇ ಪ್ರಶ್ನೆ ಇದೆ. ಇನ್ನೊಂದು ವಿಷಯ, ಜನಿವಾರ ಇದೆ ಮತ್ತು ಮಾಂಸಾಹಾರ, ಮದ್ಯ ಸೇವಿಸುವುದಿಲ್ಲ ಎಂಬೆರಡು ವ್ಯತ್ಯಾಸ ಹೊರತಾಗಿ ಈಗಿನ ಬ್ರಾಹ್ಮಣರ ಮಧ್ಯೆ ಮತ್ತು ಇತರರ ಮಧ್ಯೆ ಬೇರೆ ಯಾವ ವ್ಯತ್ಯಾಸಗಳೂ ಇಲ್ಲ. ಸಹಪಂಕ್ತಿ ಭೋಜನ ಮಾಡಿದರೆ ಇವೆರಡಕ್ಕೂ ಚ್ಯುತಿ ಬರದು. ಹಾಗಿದ್ದ ಮೇಲೆ ವಿರೋಧ ಯಾಕೆ? ಎಲ್ಲ ಮನಸ್ಸಿನಲ್ಲಿರುವ ಅಹಂಭಾವದ ಮಹಿಮೆ ಅಷ್ಟೆ.
@ರಾಕೇಶೆಟ್ಟಿ
ಅಬ್ಬರಿಸಿದವರ್ಯಾರು ಬೊಬ್ಬಿರಿದವರ್ಯಾರು? ಭಯದ ಪ್ರಶ್ನೆಯೇಕೆ ನಿಮ್ಮದೆ ಬ್ಲಾಗ್ ಭಯವಿನ್ನೇಕೊ?
@ಮಹೇಶ್
ಜನಿವಾರ ಇಲ್ಲ, ಮಾಂಸಾಹಾರ ಇದೆ ಎಷ್ಟೋ ಜನರ ಬ್ರಾಹ್ಮಣರಲ್ಲಿ. ಆದರೆ ಸಾಧಾರಣ ಬ್ರಾಹ್ಮಣರಲ್ಲಿ ಕಂಡು ಬರುವ ಸಾತ್ವಿಕತೆ??
{ಆದರೆ ಸಾಧಾರಣ ಬ್ರಾಹ್ಮಣರಲ್ಲಿ ಕಂಡು ಬರುವ ಸಾತ್ವಿಕತೆ?}
ಇದನ್ನೇ ನಾನು ಅಹಂ ಭಾವ ಅಂದಿದ್ದು. ಸಾತ್ವಿಕತೆ ಬ್ರಾಹ್ಮಣರಲ್ಲಿ ಮಾತ್ರ ಇಲ್ಲ. ಎಷ್ಟೋ ಜನ ಬ್ರಾಹ್ಮಣರು ರಾಜಸಿಕ, ಕೆಲವರು ತಾಮಸಿಕ ಗುಣಗಳನ್ನು ಹೊಂದಿದ್ದಾರೆ. ಬ್ರಾಹ್ಮಣರಲ್ಲದವರು ಸಾತ್ವಿಕ ಗುಣ ಹೊಂದಿದವರೂ ಇದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಈ ಮೂರು ಗುಣಗಳು ವ್ಯಕ್ತಿ ವ್ಯಕ್ತಿಗೂ ಭಿನ್ನ. ಗುಣಗಳಿಗೂ ಜಾತಿಗಳಿಗೂ ಸಂಬಂಧವಿಲ್ಲ.
ತ್ರಿಗುಣಗಳಿಗೂ ಜಾತಿಗಳಿಗೂ ಸಂಬಂಧವಿಲ್ಲ.
ಒಂದೇ ತಾಯಿಯ ಮಕ್ಕಳಲ್ಲಿ ಭಿನ್ನ ಗುಣಗಳನ್ನು ಕಾಣಬಹುದು – ಅಣ್ಣನಲ್ಲಿ ಸಾತ್ವಿಕ ಗುಣವಿದ್ದರೆ, ತಮ್ಮನಲ್ಲಿ ರಾಜಸಿಕ ಗುಣವಿರಬಹುದು, ತಂಗಿಯಲ್ಲಿ ತಾಮಸಿಕ ಗುಣವಿರಬಹುದು.
ಒಬ್ಬನೇ ವ್ಯಕ್ತಿಯಲ್ಲಿ ಮೂರೂ ಗುಣಗಳು ಕಂಡುಬರಬಹುದು – ಬೆಳಿಗ್ಗೆ ಸಾತ್ವಿಕ ಗುಣವಿದ್ದರೆ, ಸಂಜೆಗೆ ರಾಜಸಿಕವೋ ಅಥವಾ ತಾಮಸಿಕ ಗುಣವೋ ಕಂಡು ಬರಬಹುದು.
ರಾವಣನಲ್ಲಿ ತಾಮಸಿಕ ಗುಣವೇ ಹೆಚ್ಚಾಗಿತ್ತೆಂಬುದು ಮತ್ತು ಅವನು ಬ್ರಾಹ್ಮಣನೂ ಆಗಿದ್ದನೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಕ್ಷತ್ರಿಯ ಕುಲದವನೂ, ದಾಸೀ ಪುತ್ರನೆನಿಸಿಕೊಂಡವನೂ ಆದ ವಿದುರನಲ್ಲಿ ಸಾತ್ವಿಕ ಗುಣವೇ ಪ್ರಧಾನವಾಗಿತ್ತಂತೆ.
ದ್ರೋಣಾಚಾರ್ಯನ ಮಗನಾದ ಅಶ್ವತ್ಥಾಮನಲ್ಲಿ ಬ್ರಾಹ್ಮಣ ಕುಲದವನಾದರೂ ರಾಜಸಿಕ ಮತ್ತು ತಾಮಸಿಕ ಗುಣಗಳೇ ಎದ್ದು ಕಾಣುತ್ತಿತ್ತಂತೆ.
ಬೇಡನಾದ ವಾಲ್ಮೀಕಿಯು ಋಷಿಯಾಗುವ ಮೊದಲು ತಾಮಸಿಕ ಪ್ರವೃತ್ತಿಯವನಾಗಿ ಜನರನ್ನು ಕೊಲ್ಲಲೂ ಹೇಸುತ್ತಿರಲಿಲ್ಲ.
ಆದರೆ, ಆತನು ಋಷಿಯಾಗಿ ಪರಿವರ್ತನೆಯಾದ ನಂತರ ಪೂರ್ಣ ಸಾತ್ವಿಕನಾಗಿ ರಾಮಾಯಣವನ್ನು ನೀಡಿದ್ದು ತಿಳಿದಿರುವ ವಿಚಾರವೇ.
ರಾಜಸಿಕ ಗುಣ ಹೊಂದಿದ್ದ ವಿಶ್ವಮಿತ್ರನು, ತಾಮಸಿಕ ಪ್ರವೃತ್ತಿಯವನಾಗಿ, ಮುಂದೆ ಸಾತ್ವಿಕನಾಗಿದ್ದು ಗೊತ್ತಿರುವುದೇ.
ಈ ರೀತಿಯ ಇನ್ನೂ ಅನೇಕ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು.
ಒಟ್ಟಿನಲ್ಲಿ, ತ್ರಿಗುಣಗಳಿಗೂ ಜಾತಿಗಳಿಗೂ ಸಂಬಂಧವಿಲ್ಲ.
ಹಾಗೆ ನೋಡಿದರೆ, ತ್ರಿಗುಣಗಳಿಗೂ ಆಹಾರಕ್ಕೂ ನೇರ ಸಂಬಂಧವಿದೆ.
ಆಹಾರವನ್ನು ವ್ಯತ್ಯಾಸ ಮಾಡಿಕೊಳ್ಳುವುದರ ಮೂಲಕ ಗುಣಗಳನ್ನೂ ವ್ಯತ್ಯಾಸಗೊಳಿಸಬಹುದು.
ಅವರವರ ಕರ್ಮಕ್ಕನುಗುಣವಾಗಿ ಆಹಾರ ಮತ್ತು ಗುಣಗಳಿರುತ್ತವೆ.
ಯಾವುದೇ ಒಂದು ಗುಣ ಮತ್ತೊಂದಕ್ಕಿಂತ ಶ್ರೇಷ್ಠವಾದದ್ದು ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.
“ಸ್ವಾಮೀಜಿಯವರಲ್ಲಿ ಮಾಂಸಾಹಾರ ಸೇವನೆ ಮಾಡಿ ಅನ್ನುವುದು ಕೂಡ ಅವರ ಆಹಾರದ ಮೇಲೆ ಇನ್ನೊಬ್ಬರು ಹಕ್ಕು ಸಾಧಿಸಿದಂತೆ. ಇದು ಸಂಪ್ರದಾಯವಾದಿಗಳಷ್ಟೇ ಮೂಲಭೂತವಾದುದು……….”
ಒಂದು ನಿರ್ದಿಷ್ಠ ಧರ್ಮಾನುಯಾಯಿಗಳಿಗೆ ನೀನು ಅದನ್ನು ತಿನ್ನಬೇಡ, ಇದನ್ನೇ ತಿನ್ನು ಎಂದು ಅವರ ಆಹಾರ ಪದ್ಧತಿಯ ಮೇಲೆ ಸವಾರಿ ಮಾಡಲು ಹೊರಟವರಿಗೂ ತಾವು ಮೇಲೆ ನೀಡಿದ ಸಮಜಾಯಿಷಿ ಅನ್ವಯವಾಗಬಹುದೇ, ಸಾತ್ವಿಕ್?
“
> ನೀನು ಅದನ್ನು ತಿನ್ನಬೇಡ, ಇದನ್ನೇ ತಿನ್ನು ಎಂದು ಅವರ ಆಹಾರ ಪದ್ಧತಿಯ ಮೇಲೆ ಸವಾರಿ ಮಾಡಲು ಹೊರಟವರಿಗೂ ತಾವು ಮೇಲೆ
> ನೀಡಿದ ಸಮಜಾಯಿಷಿ ಅನ್ವಯವಾಗಬಹುದೇ
ಎಲ್ಲಿಯವರೆಗೆ ನಾವು ತಿನ್ನುವ ಆಹಾರ ಮತ್ತೊಬ್ಬರ ಭಾವನೆಗಳಿಗೆ ತೊಂದರೆಯುಂಟು ಮಾಡುವುದಿಲ್ಲವೋ, ಅಲ್ಲಿಯವರೆಗೆ ತೊಂದರೆಯಿಲ್ಲ.
ಕೆಲವರು ನರಮಾಂಸ ಭಕ್ಷಣೆಯನ್ನೇ ಇಷ್ಟ ಪಡುತ್ತಾರೆ.
ಅವರಿಗೆ ಅದನ್ನು ಭಕ್ಷಣೆ ಮಾಡುವ ಹಕ್ಕು ನೀಡಲು ಸಾಧ್ಯವಿಲ್ಲ ಅಲ್ಲವೇ?
ಅದೇ ರೀತಿ, ನಾವಿರುವ ಸಮಾಜಗುಣಕ್ಕನುಗುಣವಾಗಿ ನಮ್ಮ ಆಹಾರ ಕ್ರಮವನ್ನು ಇಟ್ಟುಕೊಳ್ಳುವುದು ಒಳ್ಳೆಯದು.
ನರೇಂದ್ರ, ನರಭಕ್ಷಣೆ ಎಲ್ಲಿ ವ್ಯಾಪಕ ಅಂತ ಸ್ವಲ್ಪ ಹೇಳಬಹುದೇ? ಕೋಟಿಯಲ್ಲಿ ಒಂದರ ಉದಾಹರಣೆ ಕೊಟ್ಟು ಕೈ ತೊಳೆದು ಕೊಳ್ಳಬೇಡಿ. ಒಬ್ಬೊಬ್ಬನ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಬದುಕನ್ನು ರೂಪಿಸಲು ಹೊರಟರೆ ಕಾನನವೇ ತಕ್ಕ ಮನೆ, ಜೀವಿಸಲು. ಹಾಗೆಯೇ ಸಮಯ ಸಿಕ್ಕಾಗ ದ್ವಿಜೇಂದ್ರ ನಾರಾಯಣ್ ಝಾ ಅವರ “ದಿ ಮಿಥ್ ಆಫ್ ಹೋಲಿ ಕೌ” ಓದಿ. ಎಲ್ಲವೂ ತಿಳಿಯಾಗಬಹುದು. ಹಳೆ ಸೇತುವೆ ಕಡೆ ಕಾಣಲಿಲ್ಲ, ತಾವು. ನಮಸ್ಕಾರ.
> ನರೇಂದ್ರ, ನರಭಕ್ಷಣೆ ಎಲ್ಲಿ ವ್ಯಾಪಕ ಅಂತ ಸ್ವಲ್ಪ ಹೇಳಬಹುದೇ?
ನಾನು ತಿಳಿಸಿರುವ ವಿಷಯಕ್ಕೂ ನಿಮ್ಮ ಪ್ರಶ್ನೆಗೂ ಸಂಬಂಧವೇ ಇಲ್ಲ.
ಎಲ್ಲರಿಗೂ ಅವರಿಗಿಷ್ಟ ಬಂದ ಆಹಾರವನ್ನು ತೆಗೆದುಕೊಳ್ಳಲು ಸಮಾಜದಲ್ಲಿ ಸಾಧ್ಯವಿಲ್ಲ ಎಂಬುದಷ್ಟೇ ನಾನು ಗಮನ ಸೆಳೆಯಲು ಯತ್ನಿಸಿದ್ದು.
ನರಭಕ್ಷಣೆ ವ್ಯಾಪಕವಾಗಿಲ್ಲ ಎಂದ ಕೂಡಲೇ, ಅದನ್ನು ಸಮಾಜದಲ್ಲಿ ನಡೆಸಬಹುದು ಎಂದು ನಿಮ್ಮ ಅಭಿಪ್ರಾಯವೇ?
ಎಲ್ಲರಿಗೂ ಅವರಿಗಿಷ್ಟ ಬಂದ ಆಹಾರಕ್ಕೆ ಸ್ವಾತಂತ್ರ್ಯ ನೀಡುವುದಾದರೆ ನರಭಕ್ಷಣೆಗೂ ಸ್ವಾತಂತ್ರ್ಯವಿದೆಯೇ?
ಹಾಗೇನಾದರೂ ಇದ್ದರೆ, ಯಾವ ಪ್ರದೇಶದಲ್ಲಿ ಈ ಸ್ವಾತಂತ್ರ್ಯವಿದೆ ಎಂದು ಹೇಳಬಹುದೇ?
> ಹಾಗೆಯೇ ಸಮಯ ಸಿಕ್ಕಾಗ ದ್ವಿಜೇಂದ್ರ ನಾರಾಯಣ್ ಝಾ ಅವರ “ದಿ ಮಿಥ್ ಆಫ್ ಹೋಲಿ ಕೌ” ಓದಿ. ಎಲ್ಲವೂ
> ತಿಳಿಯಾಗಬಹುದು.
ನಾವಿಲ್ಲಿ ಚರ್ಚಿಸುತ್ತಿರುವ ವಿಷಯಕ್ಕೂ “ಗೋಮಾತೆ” ವಿಷಯಕ್ಕೂ ಸಂಬಂಧವಿದೆಯೇ? ಅಥವಾ ಆ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡೇ ನೀವು ಪ್ರಶ್ನೆ ಎತ್ತಿದ್ದರೇ!?
ಗೋವನ್ನು ಪೂಜಿಸುವ ಸಮಾಜದ ನಡುವೆ ಗೋಹತ್ಯೆ ಸಮಂಜಸವಲ್ಲ ಎನ್ನುವುದಕ್ಕೆ ನಿಮ್ಮ ವಿರೋಧವಿದೆಯೇ?
ಮತ್ತೊಂದು ಸಮಾಜದ ಭಾವನೆಗಳನ್ನು ಘಾಸಿಗೊಳಿಸುತ್ತಾ, ಅವರನ್ನು ಕೆಣಕುತ್ತಾ, ಕೋಮು ಭಾವನೆಗಳನ್ನು ಪ್ರಚೋದಿಸುತ್ತಾ ಮತ್ತು ಅವರಿಗೇ ಕೋಮು ಸೌಹಾರ್ಧದ ಪಾಠ ಹೆಳೂತ್ತಾ ಹೋಗುವುದರಿಂದ ಸೌಹಾರ್ಧದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನಿಮ್ಮ ಅಭಿಪ್ರಾಯವೇ!?
ಗೋಮಾಂಸ ಮತ್ತು ಹಂದಿ ಮಾಂಸದ ವಿಷಯ ಇಂದು ನೆನ್ನೆಯದಲ್ಲ.
೧೮೫೭ರ ಸ್ವಾತಂತ್ರ್ಯ ಸಮರಕ್ಕೂ ಅದೇ ಮುಖ್ಯ ಕಾರಣ ಎನ್ನುವುದು ನಿಮಗೂ ತಿಳಿದೇ ಇರುತ್ತದೆ.
ಇಂತಹ ಸೂಕ್ಶ್ಹ್ಮಸಂಗತಿಗಳ ಕಡೆ ಗಮನ ಕೊಡದೆ ಹೋದರೆ, ಇತಿಹಾಸ ಮರುಕಳಿಸುತ್ತದೆ ಎನ್ನುವುದೂ ನಿಮ್ಮಂತಹ ಪ್ರಾಜ್ಞರಿಗೆ ತಿಳಿದಿರುವ ಸಂಗತಿಯೇ ಎಂದು ನಂಬಿದ್ದೇನೆ.
> ಹಳೆ ಸೇತುವೆ ಕಡೆ ಕಾಣಲಿಲ್ಲ, ತಾವು.
ನಿತ್ಯವೂ ಅಲ್ಲಿ ಬರುತ್ತಿರುತ್ತೇನೆ. ಹೊಸ ವಿಷಯಗಳನ್ನು ತಿಳಿಯುತ್ತಿರುತ್ತೇನೆ. ಸ್ವಿಸ್ ದೇಶದ ಕುರಿತಾದ ಲೇಖನ ಬಹಳಷ್ಟು ಮಾಹಿತಿಗಳನ್ನು ಹೊಂದಿತ್ತು. ಆದರೆ, ಅಲ್ಲಿ ಇರಾನಿನ ಉದಾಹರಣೆ ಆವಶ್ಯಕತೆಯಿರಲಿಲ್ಲ ಎನಿಸಿತು.
ಮಧುಮೇಹದಿಂದಾಗಿರುವ ಕಜ್ಜಿಗೆ ಎಲ್ಲರೂ ಸಾಧಾರಣ ಗಾಯದ ಮುಲಾಮು ಹಚ್ಚಲು ಹೊರಟಿದ್ದಾರೆ…..! ದೇಹದಲ್ಲಿ ಅತಿಯಾಗಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟರೆ ಗಾಯ ತನ್ನಿಂತಾನೆ ಗುಣವಾಗಬಹುದು….
Ejaz, nimma comment tumba arthapoornavagide.