ಮಾಜಿ ಸೈನಿಕರ ಅಳಲು : ಸ್ವಲ್ಪ ಕನ್ಸರ್ನ್ ತೋರಿಸಿಯಪ್ಪಾ..
– ಹರ್ಷ ಕುಗ್ವೆ
ನಾವು ಭಯೋತ್ಪಾದಕ ದಾಳಿಯಾದಾಗ ಸೈನ್ಯವನ್ನು, ಸೈನಿಕರನ್ನು ಹಾಡಿ ಹೊಗಳುತ್ತೇವೆ, ಕಾರ್ಗಿಲ್ ನಂತ ಯುದ್ಧವಾದಾಗ ಸಿಯಾಚಿನ್ ಹಿಮದಲ್ಲಿ ಕುಳಿತ ಸೈನಿಕರು ನಮಗೆ ನೆನಪಾಗುತ್ತಾರೆ. ಆದರೆ ಉಳಿದ ಸಮಯದಲ್ಲಿ?. ಒಬ್ಬ ಸೈನಿಕನ ಸೇವೆಯನ್ನು ಸ್ಮರಿಸಲು ನಮಗೆ ಆತನ ಶವವೇ ಸಿಗಬೇಕೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳೋಣ. ಒಂದಷ್ಟು ವರ್ಷ ಯಾವುದೂ ಯುದ್ಧವೇ ನಡೆಯದಿದ್ದಲ್ಲಿ ಅವರನ್ನು ನೆನೆಸಿಕೊಳ್ಳುವ ಮಾತು ದೂರವೇ ಸರಿ. ನಮ್ಮನ್ನು ಇಲ್ಲಿ ನಮ್ಮ ನಮ್ಮ ಬಂಗಲೆ, ಮನೆಗಳಲ್ಲಿ ಬೆಚ್ಚಗಿಡಲು ಸೈನಿಕರು ಗಡಿಗಳಲ್ಲಿ, ಪರ್ವತಗಳ ಹಿಮದಲ್ಲ್ಲಿ, ಸಮುದ್ರಗಳ ಅಲೆಗಳಲ್ಲಿ ದಿನನಿತ್ಯ ಪಡುತ್ತಿರುವ ಶ್ರಮ ನಮಗೆಂದೂ ಅರಿವಾಗುದೇ ಇಲ್ಲ.
‘ಸಮಾನ ಶ್ರೇಣಿಗೆ ಸಮಾನ ಪೆನ್ಶನ್’ ನೀತಿಯನ್ನು ನಿವೃತ್ತ ಸೈನಿಕರಿಗೆ ಅಳವಡಿಸಿ ಎಂಬ ಬೇಡಿಕೆಯನ್ನಿಟ್ಟು ಸಾವಿರಾರು ಸೈನಿಕರು ಬೀದಿಗಿಳಿಯುವವರೆಗೂ ನಮ್ಮ ಸರ್ಕಾರಗಳು ಒಪ್ಪಿಕೊಂಡಿರಲೇ ಇಲ್ಲ. ಬದಲಿಗೆ ಹಾಗೆ ಮಾಡಲು ಸಕರ್ಾರಕ್ಕೆ ಹಣದ ಕೊರತೆಯಾಗುತ್ತದೆ ಎಂಬ ಸಬೂಬು ಹೇಳುತ್ತಾ ಬಂದಿದ್ದರು. ಆದರೆ ಸಂಸತ್ತಿನ, ಅಥವಾ ವಿಧಾನಸೌಧದ ಅಧಿವೇಶನಗಳಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ತಮ್ಮ ವೇತನಗಳನ್ನು ಬರೋಬ್ಬರಿ ಏರಿಸಿಕೊಂಡು ಬಿಟ್ಟಿದ್ದರು. ಅದು ಸರ್ಕಾರಕ್ಕೆ ಯಾವ ಹೊರೆಯನ್ನೂ ಉಂಟು ಮಾಡಲಿಲ್ಲ.
ಮಾಜಿ ಸೈನಿಕರ ಬವಣೆ ಇಲ್ಲಿಗೇ ಮುಗಿಯುವುದಿಲ್ಲ. ತಮ್ಮ ಸೇವೆಯನ್ನು ಮುಗಿಸಿ ಹೊರಬಂದು ಇಲ್ಲಿ ಅವರು ಮತ್ತೊಂದು ಬದುಕು ಹೊಂದಿಸಿಕೊಳ್ಳುವಷ್ಟರಲ್ಲಿ ಸಾಕು ಸಾಕಾಗಿ ಹೋಗಿರುತ್ತಾರೆ. ಸಾಮಾನ್ಯವಾಗಿ 17-18 ವಯಸ್ಸಿಗೇ ಸೈನ್ಯಕ್ಕೆ ಸೇರಿಬಿಡುವ ಯುವಕರು ನಂತರದ ಹದಿನೈದು ಇಪ್ಪತ್ತು ವರ್ಷಗಳವರೆಗಿನ ತಮ್ಮ ಪ್ರೈಮ್ ಟೈಂನ್ನು ಪೂರಾ ಮಿಲಿಟರಿ ಲೈಫ್ಗೆ ಸಮಪರ್ಿಸಿರುತ್ತಾರೆ. ನಿವೃತ್ತಿ ಪಡೆದ ಮೇಲೆ ಅವರು ನಡೆಸುವ ಜೀವನ ಶೈಲಿಗೂ ಈ ಮೊದಲು ನಡೆಸಿದ್ದ ಜೀವನ ಶೈಲಿಗೂ ಅಜಗಜಾಂತರ. ಸೈನ್ಯ ಸೇರುವಾಗ ಹೊಟ್ಟೆಪಾಡಿನ ದಾರಿಯಾಗೇ ಸೇನೆಯನ್ನು ಆಯ್ಕೆ ಮಾಡಿಕೊಂಡಿದ್ದರೂ ಕ್ರಮೇಣ ಸೇನಾ ಜೀವನವೇ ಅವರಲ್ಲಿ ದೇಶಸೇವೆಯ ಭಾವನೆಯನ್ನು ಬಿತ್ತಿರುತ್ತದೆ. ನಂತರದ ಜೀವನದಲ್ಲಿ ಕೆಲವರಾದರೂ ಅದೇ ದೇಶನಿಷ್ಠೆಯನ್ನು ಸಾರ್ವಜನಿಕ ಬದುಕಿನಲ್ಲಿ ಉಳಿಸಿಕೊಂಡು ಹೋಗುವ ತವಕದಲ್ಲಿರುತ್ತಾರೆ.
ಅದಕ್ಕೆ ನಮ್ಮ ಸಮಾಜ ಅವಕಾಶ ಕೊಡುವುದೇ ಇಲ್ಲ. ಇದು ನಮ್ಮ ಮುಂದಿನ ದುರಂತ.ಮಾಜಿ ಸೈನಿಕರ ವಿಷಯದಲ್ಲಿ `ಅವರೇನು ಬಿಡಿ. ನಮ್ಮಲ್ಲಿರುವುದು ಅವರಿಗೆ ಸರ್ಕಾರ ಪೆನ್ಶನ್ ಕೊಡುತ್ತೆ. ಎಷ್ಟೋ ಫೆಸಿಲಿಟಿಗಳಿವೆಯಲ್ಲಾ, ಇನ್ನೇನು ಬೇಕು ಎಂಬ ಒಂದು ಬಗೆಯ ಉದಾಸೀನ ಮಾತ್ರ. ಒಂದೊಮ್ಮೆ ಸಾರ್ವಜನಿಕ ಸೇವೆ ಮಾಡಲು ಯಾವುದಾದರೂ ಜಾಬ್ ಮಾಡಬೇಕಂದರೂ ಅವರು ತೀವ್ರವಾಗಿ ನಮ್ಮ ಅಧಿಕಾರಶಾಹಿಯೊಂದಿಗೆ ಹೆಣಗಬೇಕಾಗುತ್ತದೆ. ಸರ್ಕಾರಿ ಕಛೇರಿಗಳಲ್ಲಿ ಅಡಿಗಡಿಗೂ ತಾಂಡವವಾಡುವ ಕರಪ್ಷನ್ಗೆ ದೇಶದ ಎಕ್ಸ್ ಸವರ್ಿಸ್ ಮನ್ ಅಥವಾ ಇತರೆ ವ್ಯಕ್ತಿ ಎಂಬ ಭೇದವಿಲ್ಲ. ಅವರು ತಮ್ಮ ಸೇವಾವಧಿಯಲ್ಲೇ ಹೇಗೋ ಮಾಡಿ ಕರೆಸ್ಪಾಂಡೆನ್ಸ್ ನಲ್ಲಿ ಹೈಯರ್ ಎಜುಕೇಶನ್ ಮಾಡಿಕೊಂಡಿದ್ದರೋ ಸರಿ. ಇಲ್ಲವೆಂದಾದರೆ ಅವರ ಸ್ಥಿತಿ ಇನ್ನೂ ಚಿಂತಾಜನಕ. ಬರುವ ಪೆನ್ಶನ್ ಉತ್ತಮ ಜೀವನ ಮಟ್ಟಕ್ಕೆ ಸಾಲುವುದಿಲ್ಲ. ಹೊಸ ಕೆಲಸವೂ ಸಿಗುವುದಿಲ್ಲ. ಖಾಸಗಿ ಕಂಪನಿಗಳು ಅಂತಹವರನ್ನು ಕನ್ಸಿಡರ್ ಮಾಡುವುದು ಕೇವಲ ಸೆಕ್ಯೂರಿಟಿ ಕೆಲಸಕ್ಕೆ ಮಾತ್ರ.
ಅದೆ ಬೇರೆ ದೇಶಗಳಲ್ಲಿ ಸೈನಿಕರಿಗೆ ಸಮಾಜದಲ್ಲಿ ಸಿಗುವ ಮಾನ ಸಮ್ಮಾನಗಳೇ ಬೇರೆ.`ಸೇವೆಯಿಂದ ಹೊರ ಬಂದಮೇಲೆ ಇಲ್ಲಿ ಬರೀ ಹಣ ಮಾತಾಡುತ್ತೆ, ಹಾಕಿಕೊಂಡ ಬಟ್ಟೆ ಮಾತಾಡುತ್ತೆ. ಸಾಲದ್ದಕ್ಕೆ ಹೋದಲ್ಲೆಲ್ಲಾ ಜಾತಿಯತೆಯ ದರ್ಬಾರು` ಎನ್ನುತ್ತಾರೆ ಹೆಸರು ಹೇಳಿಕೊಳ್ಳಲಿಚ್ಚಿಸದ ವಾಯುಪಡೆಯ ಮಾಜಿ ಸೈನಿಕ.`ಮಾಜಿ ಸೈನಿಕರ ಬಗ್ಗೆ ಜನರ ಆಟಿಟ್ಯೂಡ್ ತುಂಬಾನೇ ಬದಲಾಗಬೇಕಿದೆ. ಅದರಲ್ಲೂ ಆರ್ಮಿಯಲ್ಲಿ ಕೆಲಸ ಮಾಡುವವರ ಜೀವನ ಬಹಳ ಕಷ್ಟಕರದ್ದು. ಒಮ್ಮೊಮ್ಮೆ frustrationಗೆ ಒಳಗಾಗಿರುತ್ತಾರೆ. ಅಂತವರು ಹೊಸ ಬದುಕಿಗೆ ಪ್ರವೇಶ ಮಾಡುವಾಗ ನಮ್ಮ ಜನರು ಒಂದಷ್ಟಾದರೂ ಕನ್ಸರ್ನ್ ತೋರಿಸಬೇಕು’ ಎನ್ನುವುದು ಮತ್ತೊಬ್ಬ ಎಕ್ಸ್ ಸರ್ವೀಸ್ಮನ್ ಪ್ರಭಾಕರ್ ಇಂಗಿತ.
ಪ್ರಭಾಕರ್ 1992ರ ಹೊತ್ತಿಗೆ ಭಾರತವು ಎಲ್ಟಿಟಿಯನ್ನು ಸದೆಬಡಿಯಲು ಕಳುಹಿಸಿದ್ದ ಶಾಂತಿಪಾಲನಾ ಪಡೆಯ ವಾಯುಪಡೆಯಲ್ಲಿ ಭಾಗವಹಿಸಿದ್ದವರು. ಇವರಿದ್ದ ಹೆಲಿಕಾಪಪ್ಟರು ಲಂಕಾ ಸೇನೆಯ ನೌಕೆಯೊಂದರೆ ಮೇಲೆ ಹಾರುವಾಗ ಅದರಲ್ಲಿದ್ದ ಸೈನಿರು ಇವರತ್ತ ಮಿಸೈಲ್ ಗುರಿ ಮಾಡಿ ಹಿಡಿದಾಗ ಅವರಿಗೆ ಆಕ್ಷಣದಲ್ಲಿ `ಇನ್ನು ಕತೆ ಮುಗಿಯಿತು’ ಎಂದು ಅನ್ನಿಸಿತ್ತು.
ಭಾರತೀಯ ನೌಕಾಪಡೆಯಲ್ಲಿ ತಮ್ಮ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿರುವ ಸುರೇಶ್ `ಸಾರ್ವಜನಿಕರು ಸೈನಿಕರನ್ನು, ಮಾಜಿ ಸೈನಿಕರನ್ನು ಹಗುರವಾಗಿ ನೋಡುವ ಮೊದಲು ಅವರು ಯಾವ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದರೆ ಒಳಿತು. ಹಾಗೆಯೇ ಸೈನ್ಯಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಬೇಕು’ ಎನ್ನುತ್ತಾರೆ. ಸುರೇಶ್ ಕೂಡಾ ತಮ್ಮ ಸೇವೆಯ ಸಮಯದಲ್ಲಿ ಕೆಲವೊಮ್ಮೆ ತಿಂಗಳಾನುಗಟ್ಟಲೆ ಸಾಗರದಾಳದಲ್ಲಿ ಚಲಿಸುವ ಸಬ್ ಮರೀನ್ ನಲ್ಲಿ ಕಾಲ ಕಳೆದವರು. ಸರಿಯಾದ ಗಾಳಿಯಾಗಲೀ, ಬೇಕಾದಷ್ಟು ನೀರಾಗಲೀ ಇಲ್ಲದ ಅಂತಹ ವಾತಾವರಣದಲ್ಲಿ ಕೆಲಸಮಾಡುವವರ ಜೀವಿತಾವಧಿಯೇ ಕಡಿಮೆಯಾಗಿಬಿಡುತ್ತದೆ ಎಂಬ ಬಗ್ಗೆ ಯಾರು ಯೋಚಿಸಿರುತ್ತೇವೆ ಹೇಳಿ.
ಹೀಗೆ ಅದು ಆರ್ಮಿ ಇರಲಿ, ಏರ್ ಫೋರ್ಸ್ ಇರಲಿ ಅಥವಾ ನೇವಿ ಇರಲಿ ಎಲ್ಲೆಡೆಯೂ ಸೈನಿಕ ಸೈನಿಕನೇ. ಒಂದೊಂದು ಕಡೆ ಒಂದೊಂದು ಬಗೆಯ ರಿಸ್ಕ್ ಎದುರಿಸಿಯೇ ಇರುತ್ತಾನೆ. ಅಂತಹ ಒಬ್ಬ ಸೈನಿಕ ಕೊನೆಗೊಂದು ದಿನ ಸೇವೆ ಮುಗಿಸಿ ಹೊರ ಜಗತ್ತಿಗೆ ಎದುರುಗೊಂಡಾಗ ಅವನನ್ನು ಕಂಡು ನಾವು ಬೆನ್ನು ತಟ್ಟದಿದ್ದರೂ ಸರಿ ಅವನ ಬದುಕು ಹಾಳಾಗಿ ಹೋಗದಂತೆ ತಡೆವ ಎಚ್ಚರಿಕೆಯಂತೂ ನಮಗಿರಬೇಕು. ಅಲ್ಲವೇ?
(ಚಿತ್ರ ಕೃಪೆ : guardian.com)





ನಿಮ್ಮ ಕಳಕಳಿಗಳಿಗೆ ನನ್ನ ಬೆಂಬಲವೂ ಇದೆ. ಏನು ಮಾಡುವುದು.. ಇವನ್ನೆಲ್ಲ ಓದಿ ದುಖ: ಪಡುವ ದುರ್ಗತಿ ಬಂತಲ್ಲ.