ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 8, 2011

1

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ…!

‍Jagannath Shirlal ಮೂಲಕ

– ಪವನ್ ಎಂ ಟಿ

ಸಾಮೂಹಿಕ ಆತ್ಮಹತ್ಯೆ: ಮಲೆಕುಡಿಯರ ಬೆದರಿಕೆ, ನಿಲ್ಲದ ಮಲೆಕುಡಿಯರ ಮೇಲಿನ ದೌರ್ಜನ್ಯ,

ಬಲಾತ್ಕಾರದಿಂದ ಎಬ್ಬಿಸಿದರೆ ಪ್ರಾಣತ್ಯಾಗ, ಸತ್ತರೂ-ಬದುಕಿದರೂ ಇಲ್ಲಿಯೇ: ಮಲೆಕುಡಿಯರ ಶಪಥ

ಪ್ರಜಾವಾಣಿ ಪತ್ರಿಕೆಯಲ್ಲಿ ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಬಂದ ಪ್ರಮುಖ ಸುದ್ದಿಗಳು. ಇವೆಲ್ಲಾ ‘ಕಾನೂನು ಪ್ರಕಾರವಾಗಿ ಎತ್ತಂಗಡಿ ಮಾಡಿಸಿದ್ದೇವೆ’ ಎಂದು ಹೇಳುತ್ತಿರುವ ಅಧಿಕಾರಿಗಳ ವಿರುದ್ಧವಾಗಿ ಮನೆ ಕಳೆದುಕೊಂಡ ಸುಲ್ಕೇರಿಯ ಮಲೆಕುಡಿಯರು ದು:ಖಭರಿತ ಅಸಹಾಯಕತೆಯ ದನಿ. ಇಷ್ಟಾದರೂ ಅಲ್ಲಿನ ಕಾಂಗ್ರೆಸ್ ಶಾಸಕರು ‘ಸುಲ್ಕೇರಿ ನಾಯ್ದಿಗುರಿಯಲ್ಲಿ ಒಕ್ಕಲೆಬ್ಬಿಸಿರುವ ಪ್ರಕರಣ ಕಾನೂನು ಪ್ರಕಾರವೇ ನಡೆದಿದೆ. ಸಂಸದರು, ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಿಂದ ನಾನು ಪಾಠ ಕಲಿಯಬೇಕಾಗಿಲ್ಲ. ನಾನು ಘಟನಾ ಸ್ಥಳಕ್ಕೆ ಕಾಲಿಡುವುದಿಲ್ಲ. ತಾಕತ್ತಿದ್ದರೆ ಅವರು ನನ್ನನ್ನು ಅಲ್ಲಿಗೆ ಬರುವಂತೆ ಮಾಡಲಿ’ಎಂದು ಘೋಷಿಸಿದ್ದಾರೆ. (ಪ್ರ.ವಾ)

ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ ಮಲೆಕುಡಿಯರ ಮನೆಗಳನ್ನು ಕೆಡವಿ ಅವರ ಬದುಕು ಇಂದು ಬೀದಿಗೆ ಬಂದಿದೆ. ಕಾಡನ್ನೇ ನಂಬಿಕೊಂಡು ಅನೇಕ ವರ್ಷದಿಂದ ಬದುಕುತಿದ್ದ ಮಲೆಕುಡಿಯರನ್ನು ಯಾವುದೇ ನೋಟಿಸ್ ಜಾರಿ ಮಾಡದೆ ಬೇಕಾಬಿಟ್ಟಿಯಾಗಿ ಒಕ್ಕಲೆಬ್ಬಿಸಿರುವುದು ಎಷ್ಟರ ಮಟ್ಟಿಗೆ ನ್ಯಾಯವೆಂದು ನೀವೇ ಯೋಚಿಸಿ. ಅದು ಅರಣ್ಯ ಇಲಾಖೆಯ ಜಾಗವೆಂದ ಮೇಲೆ ಅಕ್ರಮ-ಸಕ್ರಮ ಮಾಡಲು ಸಾಧ್ಯವಿಲ್ಲ ಸರಿ. ಹಾಗೆಂದು ಅನೇಕ ವರ್ಷದಿಂದ ಒಂದೇ ಸ್ಥಳದಲ್ಲಿ ಬದುಕಿ ಕೊಂಡುಬಂದಿರುವ ಸುಲ್ಕೇರಿಯ ಮಲೆಕುಡಿಯರನ್ನು ಇಂದು ಸ್ಥಳೀಯ ಜನರ ಮುಂದೆಯೇ ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸಿ, ಮಾನವಿಯತೆಗೆ ಬೆಲೆಕೊಡದೆ ಎತ್ತಂಗಡಿ ಮಾಡುವುದು ಸರಿಯೇ? ನೀವೇ ಯೋಚಿಸಿ.

ಸರಿ, ಅಧಿಕಾರಿಗಳು ಕಾನೂನಿನನ್ವಯ ಈ ರೀತಿ ಒಕ್ಕಲೆಬ್ಬಿಸುವುದಾದರೆ ಸುಲ್ಕೇರಿಯ ಸುತ್ತಮುತ್ತ ಅತಿಕ್ರಮಣದ ಭೂಮಿಯನ್ನೂ ಮುಟ್ಟುಗೋಲು ಹಾಕಬಹುದಲ್ಲ? ಅಧಿಕಾರಿಗಳು ಮಲೆಕುಡಿಯರನ್ನು ಒಕ್ಕಲೆಬ್ಬಿಸಿದ ಪ್ರಸಂಗ ಯಾವ ರೀತಿಯಿತ್ತೆಂದರೆ ಕಂದಾಂii ಇಲಾಖೆಯ ಅಧಿಕಾರಿಗಳು ಪೋಲಿಸರ ಸಹಾಯದಿಂದ ಮಲೆಕುಡಿಯ ಕುಟುಂಬಗಳನ್ನು ಮನೆಯಿಂದ ಬಲಾತ್ಕಾರವಾಗಿ ಹೊರಹಾಕಿದ್ದಾರೆ. ಇದರಿಂದ ೨೫ ಮಂದಿ ಬೀದಿಪಾಲಾಗಿದ್ದಾರೆ. ಇವರು ಮಲೆಕುಡಿಯರನ್ನು ಹೊರಹಾಕುವಾಗ ಮನೆಯಲ್ಲಿದ್ದ ಪಾತ್ರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಯ ಶೀಟುಗಳನ್ನು ಕಿತ್ತೆಸೆದು, ಗೋಡೆಗಳನ್ನು ಕೆಡವಿ ಹಾಕಿದ್ದಾರೆ.

ಮನೆಯಿಂದ ಹೊರಬರಲು ನಿರಾಕರಿಸಿದ ಒಬ್ಬ ಮಹಿಳೆಯ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದು ಆಕೆ ಗಂಭೀರ ಗಾಯಗಳಿಂದ ಆ ಮಹಿಳೆ ನಾರಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ (ಪ್ರ.ವಾ). ಈ ರೀತಿಯ ಕೃತ್ಯವನ್ನು ನಮ್ಮ ಅಧಿಕಾರಿಗಳು ಮಾಡುವುದು ಸರಿಯೇ?

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ, ನೂತನ ರಸ್ತೆಗಳಿಗೆ, ರೈತರ ಭೂಮಿಯನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳಲಾಗುತ್ತಿದೆ, ಕೃಷಿ ಭೂಮಿಯ ನಾಶದ ಪರಿಣಾಮ  ಮುಂದೊಂದು ದಿನ ನಮ್ಮನೆಲ್ಲಾ ಕಾಡದೆ ಬಿಡದು. ಅದಲ್ಲದೆ ಯಾವುದೇ ತೊಂದರೆಯನ್ನು ನೀಡದೆ ತಮ್ಮ ಪಾಡಿಗಿದ್ದ ಮಲೆಕುಡಿಯರ ಮೇಲೆಯು ಇಂದು ಸರಕಾರದ ಕಣ್ಣು ಬಿದ್ದಿರುವುದು ವಿಪರ್ಯಾಸ.

ಅರಣ್ಯ ಹಕ್ಕು ಕಾಯ್ದೆ ೨೦೦೬ ರ ಪ್ರಕಾರ ೨೦೦೫ರ ಒಳಗೆ ಅರಣ್ಯ ಪ್ರದೇಶದಲ್ಲಿ ವಾಸವಿರುವ ಗಿರಿಜನರಿಗೆ ಅರಣ್ಯ ಭೂಮಿಯಲ್ಲಿ ಹಕ್ಕು ನೀಡಲು ಆವಕಾಶ ಮಾಡಿಕೊಟ್ಟಿದೆ. ಆದರೂ ೧೯೯೯ ರಿಂದ ವಾಸಮಾಡುತ್ತಿರುವ ಮಲೆಕುಡಿಯರನ್ನು ಒಕ್ಕಲೆಬ್ಬಿಸಿರುವುದು ಎಷ್ಟರಮಟ್ಟಿಗೆ ನ್ಯಾಯವೆಂಬುದು ಅರ್ಥವಾಗುತ್ತಿಲ್ಲ. ಹಾಗಾದರೆ  ಸರಕಾರದ ಕಾನೂನು ಕೇವಲ ಹೇಳಿಕೆಗೆ, ಪುಸ್ತಕದ ಬರವಣಿಗೆಗೆ ಮಾತ್ರ ಸೀಮಿತವೇ? ಅದಲ್ಲದೆ ಇಂದು ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ನೊಂದ ಮನಸ್ಸುಗಳನ್ನು ಸಂತೈಸದೇ ಕಾನೂನು ಪ್ರಕಾರವಾಗಿ ಎಲ್ಲಾ ಕೆಲಸ ಮಾಡಿದ್ದೇವೆ, ಇದೆಲ್ಲ ನಮ್ಮ ಪಕ್ಷದ ವಿರೋಧಿಗಳ ಕುತಂತ್ರವೆಂದು ಹೇಳಿಕೊಂಡು ಅಮಾಯಕರ ಮೇಲೆ ಹಠ ಸಾಧಿಸುತ್ತಿರುವುದು ಎಷ್ಟುಸರಿ?

ಮನೆಮಠವನ್ನು ಕಳೆದುಕೊಂಡಿರುವವರು ಇಂದು ಬೀದಿಯಲ್ಲ್ಲಿದ್ದಾರೆ. ಅವರಿಗೆ ಆಶ್ರಯ ಇಲ್ಲದಾಗಿದೆ. ಅವರಿಗೆ ಬೇರೆಕಡೆ ವಾಸ್ತವ್ಯಕ್ಕೆ ಅವಕಾಶ ಮಾಡಲಾಗಿದ್ದರೂ ಇದ್ದಕ್ಕಿದ್ದ ಹಾಗೆ ಅವರು ಸ್ಥಳೀಯ ಪ್ರದೇಶದೊಂದಿಗೆ ಇದುವರೆಗೆ ಉಳಿಸಿಕೊಂಡ ಅನ್ಯೋನ್ಯ ಸಂಬಂಧದ ಗತಿ ಏನು? ನಮಗಾದರೂ ಒಂದೇ ನಿಂತ ನಿಲುವಿಗೆ ನಿರ್ಧಾರಕ್ಕೆ ಬರಲಾಗುತ್ತದೆಯೇ? ಸರಕಾರ ಪುನರ್ವಸತಿ ಮಾಡಿ ಕೊಟ್ಟರೂ ಸಹ ಅದು ಮಲೆಕುಡಿಯರಂತಹ ಬುಡಕಟ್ಟು ಜನರ ಬೇಕು ಬೇಡಗಳನ್ನು ಪೂರೈಸಬಲ್ಲದೇ? ಎಂಬುದು ಗಂಭೀರ ಪ್ರಶ್ನೆ.

ಇಂದು ನಿರಾಶ್ರಿತ ಮಲೆಕುಡಿಯರ ಬದುಕು ಮೂರಾಬಟ್ಟೆಯಾಗಿದೆ. ಇವರಿಗೆ ಕಾನೂನಿನನ್ವಯ ಸಿಗಬಹುದಾದ ನ್ಯಾಯವನ್ನು ದೊರಕಿಸಿಕೊಡಲು ಸ್ಥಳೀಯರು, ಸಂಘಟನೆಯವರು, ಸರಕಾರ ಪ್ರಯತ್ನಿಸಬೇಕಾಗಿದೆ. ಇಂದು ನಾವು ಕಣ್ಣುಮುಚ್ಚಿ ಕುಳಿತಿರುವ ನ್ಯಾಯ ದೇವತೆಯನ್ನು ಎಚ್ಚರಿಸದಿದಲ್ಲಿ ನಾಳೆ ನಮಗೆಲ್ಲರಿಗೂ ಇದೇ ಗತಿ ಬರಬಹುದು.

ಚಿತ್ರ ಕೃಪೆ : thecanaratimes.com

1 ಟಿಪ್ಪಣಿ Post a comment
  1. ಜಗನ್ನಾಥ್ ಶಿರ್ಲಾಲ್'s avatar
    ಜಗನ್ನಾಥ್ ಶಿರ್ಲಾಲ್
    ಫೆಬ್ರ 8 2011

    ಈ ಲೇಖನ ಸಮಯೋಚಿತವಾದುದು. ಸರ್ಕಾರಿ ಅಧಿಕಾರಿಗಳ ಅಮಾನವೀಯತೆ ಮತ್ತು ಜನಪ್ರತಿನಿಧಿಗಳ ದರ್ಪದ ಮಾತು ಕೇಳಿ ನಾವು ಪ್ರಜಾಪ್ರಭುತ್ವ ದೇಶದಲ್ಲಿದೇವೆಯೆ ಎಂಬ ಅನುಮಾನ ಮೂದುತ್ತಿದೆ. ಕಾನೂನು, ಸಂವಿಧಾನ ಎನ್ನುವುದು ಬಡವರಿಗೆ ಮರಿಚಿಕೆಯಾಗಿದೆ.ರಾಜಕಾರಣಿಗಳ ಹಗ್ಗ ಜಗ್ಗಾಟದಿಂದ ಸುಲ್ಕೆರಿಯ ಮಲೆಕುಡಿಯ ಕುಟುಂಬ ಬೀದಿಗೆ ಬಿದ್ದಿದೆ. ಆದ್ದರಿಂದ ಜಿಲ್ಲಾಡಳಿತ ತತ್ಕ್ಶಣಕ್ಕೆ ಸ್ಪಂದಿಸಿ ಆ ಆರು ಕುಟುಂಬಗಳಿಗೆ ಪರಿಹಾರ ನೀಡಬಏಕು.

    ಉತ್ತರ

Leave a reply to ಜಗನ್ನಾಥ್ ಶಿರ್ಲಾಲ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments