ನಿಲುಮೆ ತಂಡ
ಹೌದು !! ಕನ್ನಡದ ರಂಗಭೂಮಿಯ ಪಾಲಿಗೆ ದಿನಾಂಕ ೮ ನೇ ಫೆಬ್ರವರಿ ೨೦೧೧ ಮರೆಯಲಾಗದ ಮಾಣಿಕ್ಯವೊಂದು ಕಳೆದುಕೊಂಡ ದಿನ. ಗುಡಿಗೇರಿ ಧಾರವಾಡದಲ್ಲಿನ ಚಿಕ್ಕ ಹಳ್ಳಿಯಲ್ಲಿ ಚನ್ನಪ್ಪ ಗೌರಮ್ಮನವರ ಸುಪುತ್ರ. ವಿದ್ಯಾಭ್ಯಾಸ ೪ನೇ ತರಗತಿಯವರೆಗಾದರು, ಬಸವರಾಜರ ಬಾಲ್ಯ ಸುಖಪ್ರದವಾಗಿರಲಿಲ್ಲ. ೨ರೂಪಾಯಿಗೆ ಎಮ್ಮೆ ಕಾಯುವ ಕಾಯಕದಲ್ಲಿದ್ದವರು, ಗರಡಿಮನೆಯ ಅವರ ಆಸಕ್ತಿಗೆ ಗುಡಿಗೆರೆಯ ಭೂಪಾಲ ಬಸ್ತಿಯವರ ಸಹಕಾರದಿಂದ ಕೊಲ್ಲಾಪುರದಲ್ಲಿ ಕುಸ್ತಿ ಕಲಿತರು, ದಾವಣಗೆರೆಯಲ್ಲಿ ಟಿಪ್ಪು ಸುಲ್ತಾನ್ ನಾಟಕದ ಪ್ರೇರಣೆಯಿಂದ ತಮ್ಮ ಹದಿನಾಲ್ಕು ವರ್ಷದಲ್ಲೇ “ನಾರಿ ಸಾಹಸ” ನಾಟಕದಲ್ಲಿ ಮಂತ್ರಿ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದರು, ರಂಗವೇದಿಕೆಯಲ್ಲಿ ಪಾತ್ರ ಹಾಕಿ ನಿಂತರೆ ಅವರ ಪದಪ್ರಾಸಕ್ಕೆ ತಲೆದೂಗದವರೇ ಇಲ್ಲ. ಉತ್ತರ ಕರ್ನಾಟಕದ ಮಂದಿಗೆ ಗುಡಿಗೇರಿ ಬಸವರಾಜರ ನಾಟಕವಿದೆಯೆಂದಾದರೆ ಅದೊಂದು ಹಬ್ಬದ ಸಡಗರ.

ನಾಟಕಕ್ಕೆ ಸೇರಿದ ದಿನದಿಂದಲೂ ತನ್ನದೇ ನಾಟಕ ಕಂಪೆನಿ ಕಟ್ಟಬೇಕೆಂಬ ಹಂಬಲ ಅವರದಾಗಿತ್ತು. ಕಂಪೆನಿಕಟ್ಟಲು ಹಿತಶತ್ರುಗಳ ಕಿರಕುಳದ ಮಧ್ಯದಲ್ಲೂ ಹರಕುಣಿ ಮುಕುಕಪ್ಪನವರ ಸಹಕಾರದಲ್ಲಿ ೧೭ನೇ ನವೆಂಬರ್ ೧೯೬೩ ರಂದು ಶ್ರೀ ಸಂಗಮೇಶ್ವರ ನಾಟ್ಯಸಂಘ ಪ್ರಾರಂಭಿಸಿ ಅಖಂಡ ೪೮ ವರ್ಷಗಳಲ್ಲಿ ರಾಜ್ಯದ ನಾನ ಕಡೆ ಸಂಚರಿಸಿ, ಅವಕಾಶ ಕೇಳಿಬಂದ ಯಾವುದೇ ಕಲಾವಿದನಿಗೂ ನಿರಾಕರಿಸದೆ, ಎಲ್ಲರನ್ನು ಬೆಳೆಸುತ್ತ ಬಂದವರು, ಬಸವರಾಜರ ನಾಟಕ ಕಂಪೆನಿಯಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕರೆ ಅವನೊಬ್ಬ ಅತ್ಯತ್ತಮ ನಟ ಎಂಬ ಮಾತು ಅಂದಿಗೆ ಬಹು ಪ್ರಚಲಿತ. ಇದಕ್ಕೆ ಬಸವಾರಾಜರ ಪರಿಶ್ರಮ ಕಡಿಮೆಯೇನಲ್ಲ. ಇವರ ನಾಟಕ ಕಂಪೆನಿಯಲ್ಲಿ ನಟಿ ಮಂಜುಳಾ, ಕಲ್ಪನಾ, ಉಮಾಶ್ರೀ, ಮತ್ತು ನಟ ಭಯಂಕನೆಂದು ಬಿರಿದು ಪಡೆದ ದಿವಂಗತ ವಜ್ರಮುನಿಯಾದಿಯು ಬಹುಜನರು ಇವರ ಕಂಪೆನಿಯಲ್ಲಿ ಅಂದು ಅವಕಾಶ ಅರಸಿ ಬಂದವರೇ, ತಮಗೆ ನೀಡಿದ ಪಾತ್ರಗಳಲ್ಲಿ ಯಶಸ್ವಿಯಾದವರೇ.
ಕಾಲಾನಂತರ ಚಿತ್ರರಂಗದ ಹಾವಳಿ ಹೆಚ್ಚಾದರೂ, ಕರ್ನಾಟಕದ ಹಲವಾರು ವೃತ್ತಿನಾಟಕ ಕಂಪೆನಿಗಳು ಮುಚ್ಚಿದರೂ, ಬಸವಾರಾಜರ ಸಂಘಮೆಶ್ವರ ನಾಟ್ಯ ಸಂಘಕ್ಕೆ ಅಂತ ಆಪತ್ತು ಬರದಂತೆ ನೋಡಿಕೊಂಡವರು. ತಮ್ಮ ನಾಟಕಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇಂಥ ಕಟೋರ ಸಮಯದಲ್ಲೂ ನಾರಿ ಸಾಹಸ, ನೀನು ಹುಟ್ಟಿದ್ದು ಯಾರಿಗೆ, ರ್ಯೇತನ ಮಕ್ಕಳು, ಅದಲ್ಲದೆ ಸಿನಿಮಾದಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿ ಆದಿ ಮಾನವ, ಸಂಗ್ಯಾ ಬಾಳ್ಯ, ವೀರ ಸಿಂಧೂರ ಲಕ್ಷ್ಮಣ, ಸೂರ್ಯಪುತ್ರದಲ್ಲಿ ನಟಿಸಿದವರು. “ಸೂಳೆ ಮಗ ” ನಾಟಕದಲ್ಲಿನ ಇವರ ಪಾತ್ರ ಇಂದಿಗೂ ಜನಮನದಲ್ಲಿ ಅಚ್ಚೊತ್ತಿದೆ, ಬಸವಾರಜರಿಗೆ ಈ ನಾಟಕವೇ ಹೆಸರು ತಂದುಕೊಟ್ಟದ್ದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಅತ್ಯುತ್ತಮ ನಟ, ಕಲಾವಿದ ಇಂದಿಗೆ ನಮ್ಮಿಂದ ದೂರವಾಗಿರುವುದು ರಂಗಭೂಮಿಗೆ ಹಾಗೂ ಕರ್ನಾಟಕದ ಜನತೆಗೆ ಒಬ್ಬ ಹಿರಿಯಣ್ಣನನ್ನೇ ಕಳೆದುಕೊಂಡ ಅನುಭವ.
ಆ ಮಹಾಚೇತನಕ್ಕೆ ನಿಲುಮೆ ತಂಡದಿಂದ ಅನಂತ ನಮನಗಳು
ಚಿತ್ರ ಕೃಪೆ : ಚಿತ್ರಲೋಕ.ಕಾಮ್
ಮರೆಯಾದ ನಟ ಗುಡಿಗೇರಿ ಬಸವರಾಜರ ನಟನೆಯನ್ನು ಕಣ್ಣಾರೆ ಕಾಣಲಾಗಿಲ್ಲವಾದರೂ, ಅವರ ಬಗ್ಗೆ ಮತ್ತವರ ನಟನೆಯ ಬಗ್ಗೆ ಓದಿ ತಿಳಿದಿದ್ದೆನಷ್ಟೇ.
ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸೋಣ.
:: – ಕಾಲಾನಂತರ ಚಿತ್ರರಂಗದ ಹಾವಳಿ ಹೆಚ್ಚಾದರು ಕರ್ನಾಟಕದ ಹಲವಾರು ವೃತ್ತಿನಾಟಕ ಕಂಪೆನಿಗಳು ಮುಚ್ಚಿದರು, ಬಸವಾರಾಜರ ಸಂಘಮೆಶ್ವರ ನಾಟ್ಯ ಸಂಘಕ್ಕೆ ಅಂತ ಆಪತ್ತು ಬರದಂತೆ ನೋಡಿಕೊಂಡವರು. – ::
ಕಾಲಾನಂತರ ಚಿತ್ರರಂಗದ ಹಾವಳಿ ಹೆಚ್ಚಾದರೂ, ಕರ್ನಾಟಕದ ಹಲವಾರು ವೃತ್ತಿನಾಟಕ ಕಂಪೆನಿಗಳು ಮುಚ್ಚಿದರೂ, ಬಸವಾರಾಜರ ಸಂಘಮೆಶ್ವರ ನಾಟ್ಯ ಸಂಘಕ್ಕೆ ಅಂತ ಆಪತ್ತು ಬರದಂತೆ ನೋಡಿಕೊಂಡವರು.
ಗುಡಿಗೇರಿ ಎನ್. ಬಸವರಾಜ್ ರವರು ನಮ್ಮ ತಾಲೂಕಿನ ಕಲಾವಿದರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ… ಅವರ ನಟನೆಯನ್ನು ಕಣ್ಣಾರೆ ಅವರ ನಾಟಕವೊಂದರಲ್ಲಿ ನೋಡುವ ಭಾಗ್ಯ ನಾನು ಚಿಕ್ಕವನಾಗಿದ್ದಾಗಲೇ ನನ್ನದಾಗಿತ್ತು . ಅದು “ದುಡ್ಡಿನ ದರ್ಪ” ಎಂಬ ನಾಟಕದಲ್ಲಿ. ಅವರು ವೇದಿಕೆಯ ಮೇಲೆ ಬಂದರೆ ಸಿಂಹವೊಂದು ಬಂದ ಅನುಭವವಾಗುತ್ತಿತ್ತು; ಅಂತಹ ಅಜಾನುಬಾಹು ಅವರು… ಅವರ ಶರೀರ ಮತ್ತು ಶಾರೀರ ಅವರ ನಾಟಕವನ್ನು ನೋಡಿದ ಯಾರಿಗೂ ಮರೆಯಲು ಸಾಧ್ಯವಿಲ್ಲ.. ಆಗಲಿದ ಚೇತನಕ್ಕೆ ದಯಾಮಯಿ ಭಗವಂತ ಚಿರಶಾಂತಿ ಕರುಣಿಸಲೆಂದು ಬೇಡಿಕೊಳ್ಳುವೆ..
– ಉಮೇಶ ಬಾಳಿಕಾಯಿ
ಕುಂದಗೋಳ