ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2011

8

ನಾಸ್ತಿಕನಾಗೋದು ಅಂದ್ರೆ….

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ 

ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
ನಮ್ಮ ‘ಅವಸ್ಥೆಯ’ ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ.   
ದೇವರು ನಮ್ಮ ಸಹಾಯಕ್ಕೆ ಬಾರದಿರುವುದು ಒಂದು ಸಂದರ್ಭದಲ್ಲಿ ಮಾತ್ರ. ನಾಸ್ತಿಕರೆಂದು ತಿಳಿದ ತಕ್ಷಣ ಜನರು ಅ ವ್ಯಕ್ತಿಯನ್ನು ನೋಡುವ, ‘ಪ್ರತಿಕ್ರಿಯಿಸುವ’ ಸಂದರ್ಭದಲ್ಲಿ. ಆಸ್ತಿಕರು, ನಾಸ್ತಿಕರಿಗೂ ದೈವ ಸಂಬಂಧವನ್ನು ಕಲ್ಪಿಸಿರುತ್ತಾರೆ(?). ದೇವರ ಅಸ್ತಿತ್ವವನ್ನು ವಿರೋಧಿಸಿಯೂ ಯಾರಾದರೂ ಆರಾಮದಲ್ಲಿ ಬದುಕುತ್ತಿದ್ದರೆ, ಆಸ್ತಿಕರು ಆತನನ್ನು ರಾಕ್ಷಸ ಗಣದವನು ಎಂದು ಹೇಳಿ ತಮ್ಮ ಸೋಲನ್ನು ಮತ್ತೊಮ್ಮೆ ಪುರಾಣಕ್ಕೆ ಕೊಂಡೊಯ್ಯುತ್ತಾರೆ. ಯಾಕಂದರೆ ಸಾಮಾನ್ಯವ್ಯಕ್ತಿ ದೇವರ ಅಸ್ತಿತ್ವವನ್ನು ವಿರೋಧಿಸಿ ಬದುಕಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಆಸ್ತಿಕರದ್ದು. ರಾಕ್ಷಸರು ಅಸಾಮಾನ್ಯರಾದ್ದರಿಂದಲೇ ಬದುಕ್ಕಿದ್ದು ಎಂಬ ನಂಬಿಕೆ. ಆದರೆ ರಾಕ್ಷಸಗಣದ ವ್ಯಕ್ತಿಯ ಜನ್ಮಕ್ಕೆ ಮುಕ್ತಿ ದೊರಕುವುದು ದೈವ ಸ್ಪರ್ಷದ ನಂತರವೇ.
ಗಮನಿಸಿ, ದೇವರ ಬಗೆಗೆ ಅಪಾರ ನಂಬಿಕೆ ಇರುವುದು ಧರ್ಮವನ್ನು ಅರ್ಥೈಸುವ ಮೇಲ್ವರ್ಗದಲ್ಲೂ ಅಲ್ಲ, ಹಾಗೇಯೇ ತೀರಾ ಕೆಳವರ್ಗದಲ್ಲಿಯೂ ಅಲ್ಲ. ಹಿಂದುಳಿದ ವರ್ಗಗಳಲ್ಲಿ ಹೆಚ್ಚು (ವಿಶಾಲಾರ್ಥದಲ್ಲಿ ಮಧ್ಯಮವರ್ಗ ಎಂದುಕೊಳ್ಳುವ). ಬದುಕಿನ ಜಂಜಾಟಗಳಿಗೆ ನೇರವಾಗಿ ಸಿಕ್ಕಿಬೀಳುವ ಈ ವರ್ಗ ಅಪಾರವಾದ ಮಾನಸಿಕ ಗೊಂದಲಗಳನ್ನು ಹೊಂದಿರುತ್ತದೆ. ಯಾವ ವಿಷಯದಲ್ಲೂ ಸಂಪೂರ್ಣ ಮಾನಸಿಕ ಭದ್ರತೆ ಈ ವರ್ಗಕ್ಕಿರುವುದಿಲ್ಲ. ಈ ವಿದ್ಯಮಾನವನ್ನು ನೋಡಿದಾಗ ಬಹುಶ: ಮನೋ ಆಧಾರಕ್ಕಾಗಿ ಹಾತೊರೆಯುವ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಹೆಚ್ಚು ಓದಿದರೆ ನಾಸ್ತಿಕರಾಗುತ್ತಾರೆ ಅಂತ ಒಂದು ನಂಬಿಕೆ ಇತ್ತು. ಆದ್ರೆ ಇವತ್ತು ಅದು ಸುಳ್ಳಾಗಿ ಆಸ್ತಿಕತೆ ಹೆಚ್ಚಾಗುತ್ತಿದೆ. ಬಹುಶ: ಮನುಷ್ಯನ ಜಂಜಾಟದ ಬದುಕು ಇದಕ್ಕೆ ಕಾರಣವಿರಬಹುದು. ಹರೇಕೃಷ್ಣ ಭಕ್ತರಲ್ಲಿ ಅಪಾರ ಕಲಿತವರೂ ಇದ್ದಾರೆ.
ದೇವರನ್ನು ನಂಬುವುದು ಬಿಡುವುದು ವ್ಯಕ್ತಿಯೊಬ್ಬನ/ಳ ವೈಯಕ್ತಿಕ ವಿಚಾರ. ಆದರೆ ಅದನ್ನು ಅವಲಂಬಿಸಿ ಬರುವ ಅನೇಕ ವಿಷಯಗಳ ಸಂದರ್ಭದಲ್ಲಿ ಜಾಗರೂಕತೆ ಅಗತ್ಯ. ದೇವರನ್ನು ತೋರಿಸಿ ಲಾಭಮಾಡಿಕೊಳ್ಳುವ ಅನೇಕ ಸಂಗತಿಗಳು ಸಮಾಜದಲ್ಲಿರುತ್ತವೆ. ಇನ್ನೊಂದು ವಿಶೇಷ ಅಂದರೆ ಕೆಲ ನಾಸ್ತಿಕರಲ್ಲೂ ಜಾತಿವಾದವಿರುತ್ತದೆ. ಅವರು ದೇವರನ್ನಷ್ಟೇ ನಂಬುವುದಿಲ್ಲ. ಆದರೆ ಉಳಿದಂತೆ ಇತರರಲ್ಲಿ ಇರಬಹುದಾದ ಎಲ್ಲ ಜಾತಿವಾದದ ಲಕ್ಷಣಗಳು ಇರುತ್ತವೆ. ಹೀಗಾದರೆ ಇದರಿಂದ ಸಮಾಜಕ್ಕೆ ಇನ್ನಷ್ಟು ಅಪಾಯವೇ ಜಾಸ್ತಿ. ಆತ ಎರಡಲಗಿನ ಖಡ್ಗದಂತೆ. ಇತ್ತ ನಾಸ್ತಿಕನಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡು ಒಂದು ಐಡೆಂಟಿಟಿ ಸೃಷ್ಟಿಸಿಕೊಳ್ಳುತ್ತಾನೆ. ಇನ್ನೊಂದೆಡೆ ಜಾತಿ ಐಡೆಂಟಿಟಿಯಿಂದಲೂ ಅನೇಕ ಲಾಭಪಡೆಯುತ್ತಾನೆ. ಇದಕ್ಕಿಂತ ಉತ್ತಮ ಮನಸ್ಸಿರುವ ಆಸ್ತಿಕನೇ ಮೇಲು. ಇವತ್ತು ನಾಸ್ತಿಕತೆಯೆನ್ನುವುದು ಒಂದು ಫ್ಯಾಷನ್ ಆಗಿದೆ. ಎಲ್ಲ ಐಡೆಂಟಿಟಿಗಳ ಹಾಗೇ ತೋರ್ಪಡಿಕೆಯ ಸಾಧನವೂ ಆಗಿದೆ. ಇವೆಲ್ಲ ನೋಡುವಾಗ ‘ನಿಜವಾದ ಅರ್ಥದಲ್ಲಿ ನಾಸ್ತಿಕನಾಗಿರೋದು’ ಬಹಳ ಕಷ್ಟ ಅಲ್ಲವೇ?

ಚಿತ್ರಕೃಪೆ: sciscoop.com

8 ಟಿಪ್ಪಣಿಗಳು Post a comment
  1. ಅರವಿಂದ್'s avatar
    ಫೆಬ್ರ 10 2011

    ಸಾತ್ವಿಕ್

    ನೀವು ನೋಡಿರುವ ಜಾತಿವಾದದ ನಾಸ್ತಿಕರ ಬಗ್ಗೆ ನನಗೆ ಗೊತ್ತಿಲ್ಲ. ಜಾತಿವಾದಕ್ಕು ನಾಸ್ತಿಕತೆಗು ಸಂಬಂಧ ಕಲ್ಪಿಸುತ್ತಿರುವುದು ಅರ್ಥವಾಗುತ್ತಿಲ್ಲ. ಬಿಡಿಸಿ ಹೇಳಿ .

    ಅರವಿಂದ್

    ಉತ್ತರ
  2. ಸಾತ್ವಿಕ್'s avatar
    ಫೆಬ್ರ 10 2011

    ಅರವಿಂದ್,
    ನಾಸ್ತಿಕ ಅಂದ್ರೆ ದೇವರರಲ್ಲಿ ಧರ್ಮದಲ್ಲಿ ನಂಬಿಕೆ ಇಲ್ಲದವನು ಅಂತ. ಆದರೆ ಜಾತಿವಾದಕ್ಕೆ ದೇವರು ಧರ್ಮದ ಬಗೆಗಿನ ನಂಬಿಕೆ ಬೇಡ. ಹಾಗಾಗಿ ಕೆಲವರು ಅದನ್ನು ತಮ್ಮ ಐಡೆಂಟಿಟಿಯಾಗಿ ಬಳಸುತ್ತಾರೆ. ರಎಅರದು ಕಡೆಯಿಂದ ಲಾಭ ಪಡೆಯುತ್ತಾರೆ.
    ಸಾತ್ವಿಕ್

    ಉತ್ತರ
  3. Pramod's avatar
    ಫೆಬ್ರ 10 2011

    ನಾಸ್ತಿಕತೆ, ದೇವರ ಬಗ್ಗೆ ಕಾರ೦ತರು ಬರೆದ ‘ದೇವ’ ಪುಸ್ತಕ ಚೆನ್ನಾಗಿದೆ. ಒ೦ದಾನೊ೦ದು ಕಾಲದಲ್ಲಿ ಓದಿದ ನೆನಪು

    ಉತ್ತರ
  4. ಮೋಹನ's avatar
    ಮೋಹನ
    ಫೆಬ್ರ 10 2011

    ಧರ್ಮಕ್ಕೂ ದೇವರಿಗೂ ಯಾಕೆ ಗಂಟು ಹಾಕ್ತಿದ್ದೀರಿ? ನಾಸ್ತಿಕನಿಗೆ ಧರ್ಮದಿಂದ ಇರಬಾರದು ಎಂದೇನಾದರೂ ಇದೆಯೆ? ನಾನು ದೇವರ ಇಲ್ಲ ಎನ್ನುವುದು ನನ್ನ ಪ್ರತಿಪಾದನೆ ಆದರೆ ನಾನು ಧರ್ಮ ಮಾರ್ಗದಲ್ಲಿ ನಡೆಯುತ್ತೇನೆ.

    ಉತ್ತರ
  5. pravin's avatar
    ಫೆಬ್ರ 12 2011

    ನಿಜ ನಾಸ್ತಿಕನಾಗಿ ಬದುಕುವುದು ಚಾಲೆಂಜ್. ಅದಕ್ಕೆ ಹೆಚ್ಚಿನ ಬುದ್ಧಿ ಜೀವಿಗಳು ನಾಸ್ತಿಕತೆಯ ಮುಖವಾಡ ಧರಿಸಿರುತ್ತಾರೆ. ಬುದ್ಧಿ ಇಲ್ಲದ ಬುದ್ಧಿಜೀವಿಗಳು. ಗುರ್ ರ್ ರ್ ರ್ ರ್ ……..

    ಉತ್ತರ
  6. ಪ್ರಕವಿ's avatar
    ಫೆಬ್ರ 13 2011

    ನಾಸ್ತಿಕರಿಗೂ, ಜಾತಿವಾದಕ್ಕೂ ಎಲ್ಲಿಯ ನಂಟು? ನಿಮ್ಮ ಕಳವಳ ಉಚಿತವಾದುದಲ್ಲ. ಜಾತಿವಾದಿಯಾದವನು ಜಾತಿವಾದಿಯೇ ಹೊರತು ನಾಸ್ತಿಕನಾಗೊಲ್ಲ. ಅಂದ ಹಾಗೆ, ನಾಸ್ತಿಕನಾಗಿರುವುದೇನು ದೊಡ್ಡ ಚಾಲೆಂಜ್ ಅಲ್ಲ. ಅದು ವ್ಯಕ್ತಿಯ ಮನೋಸ್ತಿತಿಯನ್ನು ಅವಲಂಬಿಸುವುದು. ಮೋಹನ್ ಅವರು ಹೇಳಿದ್ದೂ ಸರಿ. ನಾಸ್ತಿಕನಾದವನು ಅಧರ್ಮಿಯಾಗಿರಬೇಕೆಂದೇನೂ ಇಲ್ಲ. ಪಾಪ ಮಾಡಿ, ದೇವಸ್ಠಾನಕ್ಕೆ ಹೋಗಿ ಪೂಜೆ ಮಾಡಿ ಹಿಂದಿರುಗಿ ಮತ್ತದೇ ಅಧರ್ಮೀಯ ಕಾರ್ಯ ಸಂಪನ್ನಗೊಳಿಸುವವರನ್ನು ದಿನಾ ದಿನಪತ್ರಿಕೆಯಲ್ಲಿ ತಾವೇ ನೋಡುತ್ತಿರುತ್ತೀರ. ಯಾವ ವಿಷಯವನ್ನೂ ಸಾಮಾನ್ಯಗೊಳಿಸಿ(generalize) ಹೇಳುವುದು ಸರಿಯಲ್ಲ.

    ಉತ್ತರ
  7. ಪೂಜೆ ಪುನಸ್ಕಾರ, ಆಚರಣೆ ಇವನ್ನೆಲ್ಲಾ ಮಾಡುತ್ತಾ, ದೇವರಿಗೇ ನೈವೇದ್ಯ ಅಥವಾ ಲಂಚ ನೀಡುತ್ತಾ, ಬೇದಿಕೆಗಳ ಪಟ್ಟಿ ಸಲ್ಲಿಸುತ್ತಾ ಬಾಳುವವನು ಆಸ್ತಿಕನೇ?

    ಧರ್ಮ ಶ್ರದ್ಧೆಯಿಂದ, ಕರ್ತವ್ಯ ಪ್ರಜ್ಞೆಯಿಂದ, ಸದಾ ಶ್ರಮಪಟ್ಟು ದುಡಿಯುತ್ತಾ, ಪ್ರತಿಫಲವನ್ನು ದೇವರಿಚ್ಛೆಗೆ ಬಿಟ್ಟು ಬಾಳುವವನು ಆಸ್ತಿಕನೇ?

    ಪರೀಕ್ಷೆಯ ಫಲಿತಾಂಶದಂದು ದೇವಸ್ಥಾನಕ್ಕೆ ಭೇಟಿ ನೀಡಿ ಶಾಲೆಗೆ ಹೋಗಿ ಫಲಿತಾಂಶ ನೋಡುವವನು, ಅನುತೀರ್ಣನಾದಾಗ ಅಳುವವನು ಆಸ್ತಿಕನೇ?

    ಪರೀಕ್ಷೆಯ ಫಲಿತಾಂಶ ಹೇಗಿದೆ ಎಂದು ನೋಡಿ, ಹೇಗಿದ್ದರೂ ಅದು ದೈವೇಚ್ಛೆ ಎಂದು ಸಮಚಿತ್ತನಾಗಿ ಇದ್ದುಬಿಡುವವನು ಆಸ್ತಿಕನೇ?

    ಉತ್ತರ
  8. Kanthi's avatar
    ಏಪ್ರಿಲ್ 21 2011

    ಇಲ್ಲಿ ಲೇಖಕ ಧರ್ಮ ಎಂಬ ಶಬ್ಧ ಬಳಸುತ್ತಿರುವುದು relegion ಎಂಬರ್ಥದಲ್ಲಿ.ಧರ್ಮದ ಹೆಸರಿನಲ್ಲಾಗುವ ನಾನಾ ಅನಾಹುತಗಳನ್ನು ನೋಡಿಯೇ ಇದ್ದೇವೆ.ಧರ್ಮ(relegion)or ಧರ್ಮ ನಿರಪೇಕ್ಷತೆ (secularism)ಎಂಬ ನಾನಾ ಮುಖವಾಡಗಳನ್ನು ತೊಟ್ಟು ತಮ್ಮ ಬೇಳೆ ಬೇಯಿಸಿಕೊಂಡು ಸಮಾಜವನ್ನು ಹಾದಿ ತಪ್ಪಿಸುವ ವರ್ಗದವರ ಬಗ್ಗೆ ಜಾಗರೂಕತೆ ಅವಶ್ಯಕ.ನನ್ನ ಪ್ರಕಾರ ದೇವರನ್ನು ನಂಬುವುದೂ ಬಿಡುವುದು ಅವರವರ ವೈಯುಕ್ತಿಕ ವಿಚಾರ.ಆದರೆ ನಾಸ್ತಿಕರಾಗಿ ಬದುಕುವುದು ಕಷ್ಟದ ಕೆಲ್ಸ ಎಂಬುದು ನನ್ನ ಅನುಭವ ಕೂಡ.

    ಉತ್ತರ

Leave a reply to ಸಾತ್ವಿಕ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments