ಕನ್ನಡ ಎಲ್ಲಿಂದ ಉಳಿಯಬೇಕು? ನಾವೇಕೆ ಕಲಿಯಬೇಕು?
– ಮಹೇಂದ್ರ ಸಿ.ಕೆ
ಮೊನ್ನೆ ಮೊನ್ನೆ ಸೂರ್ಯ ತನ್ನೆಲ್ಲಾ ಹೊಳಪನ್ನು ಕಳೆದುಕೊಳ್ಳುವ ಹೊತ್ತಿಗೆ ಕನ್ನಡ ಉಳಿಯಬೇಕು,ಇದಕ್ಕಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂಬ ನಿರ್ಣಯದೊದಿಗೆ 77 ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಮುಕ್ತಾಯಕಂಡಿದೆ.ಕನ್ನಡದ ಈ ಚೆಂದದ ಹಬ್ಬದಲ್ಲಿ ಬೆಂಗಳೂರು ಮಿಂದಿದೆ. ರಾಜಧಾನಿಯಲ್ಲಿ ಕನ್ನಡಗಿರಷ್ಟೇ ಇರುವ ಪರಭಾಷಿಕರು ಕೂಡ ಹಬ್ಬ ಕಂಡು ಹುಬ್ಬೇರಿದ್ದಾರೆ;ಸಂತಸ ಪಟ್ಟಿರಬಹುದು.
ಒಂದಿಷ್ಟು ಐಟಿ ಮಂದಿ ಕನ್ನಡ ಹಬ್ಬದಲ್ಲಿ ಪಾಲ್ಗೊಂಡಿದ್ದು ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.ಕನ್ನಡವನ್ನು ಕಂಪ್ಯೂಟರ್ ಯುಗದಲ್ಲಿ ಉಳಿಸುವ,ಬೆಳೆಸುವ ಕೆಲಸದಲ್ಲಿ ಐಟಿ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ.ಆದರೆ ಅದಕ್ಕಿಂತಲೂ ಹೆಚ್ಚು ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿರುವವರು ನಮ್ಮ ನಾಡಿನ ಗ್ರಾಮಾಂತರ ಪ್ರದೇಶದ ಕೂಲಿ ಕಾರ್ಮಿಕರು,ರೈತರು.ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಈ ವರ್ಗದ ಜನರ ಹಿತಾಸಕ್ತಿಗಳ ಕುರಿತು ಯಾವೊತ್ತು ಸೊಲ್ಲೆತ್ತಿಲ್ಲ. ಅತ್ತ ಗುಲ್ಬರ್ಗದಲ್ಲಿ ತೊಗರಿಗೆ ಬೆಲೆ ಸಿಕ್ಕಿಲ್ಲ ಎಂದು ರೈತರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಯ ಯತ್ನ ನಡೆಸಿದ್ದರು.ಸಮ್ಮೇಳನದ ಅದ್ದೂರಿಯಲ್ಲಿ ಕನ್ನಡ ಉಳಿಸುವ ಗಣ್ಯರು ರೈತರನ್ನು ಮರೆತರು.
ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಕನ್ನಡ-ಇಂಗ್ಲೀಷ್ ಅನಸಂಧಾನದ ಮಾತುಗಳನ್ನಾಡಿದರು. ಅಲ್ಲದೇ ಈಚೆಗೆ ಅವರು ಏಕರೂಪಿ ಶಿಕ್ಷಣ ಕುರಿತು ಜೋರು ದನಿಯಲ್ಲಿ ಮಾತನಾಡುತ್ತಿದ್ದಾರೆ. ಈ ದಿನ ಕನ್ನಡ ಮಾತ್ರವಲ್ಲ,ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಬಿಸಿ ತಟ್ಟಿಸಿರುವ ಜಾಗತೀಕರಣದ ಭಾಷೆ ಇಂಗ್ಲೀಷ್ಗೆ ಸವಾಲು ಹೊಡ್ಡಬೇಕಾದರೆ ಅನಂತಮೂರ್ತಿ ಸಲಹೆ ಜಾರಿಗೆ ಬರಬೇಕಾಗಿದೆ.
ಕನ್ನಡ ಉಳಿಸಿ ಎಂದು ಬೆಂಗಳೂರಿನಲ್ಲಿ ಘೋಷಣೆ ಕೂಗಿದರೆ ಕನ್ನಡ ಉಳಿಯದು.ಕೇವಲ ಕನ್ನಡ ಉಳಿಸಿ..ಉಳಿಸಿ ಎಂದು ಹೇಳುತ್ತಾ ಹಳ್ಳಿ ಮಕ್ಕಳನ್ನು,ರೈತಾಪಿ ವರ್ಗದ ಮಕ್ಕಳನ್ನು ಅತ್ಯುತ್ತಮ ಅವಕಾಶಗಳಿಂದ ವಂಚಿತರಾಗಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಕಲಿಯುವುದರಿಂದ ಊಟ,ಉದ್ಯೋಗ ಸಿಗುವುದಿಲ್ಲ ಎಂದಾದರೆ ಅದನ್ನು ಕಲಿತು ಏನು ಉಪಯೋಗ ಎಂಬುದನ್ನು ಕನ್ನಡ ಉಳಿಸುವ ಮಹಾತ್ಮರು ಹೇಳಬೇಕಾಗಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್ ಹೇಳಿಕೊಡುವ ಮೇಷ್ಟ್ರುಗಳು ಎಷ್ಟು ಜನ ಇದ್ದಾರೆ ಎಂಬ ಕಡೆ ಸಣ್ಣದೊಂದು ನೋಟ ಹರಿಸಿದರೆ ಒಳಿತು.ಇವೊತ್ತು ಕನ್ನಡಕ್ಕೆ ಕುತ್ತು ಬಂದಿರುವುದು ಬೆಂಗಳೂರು,ಮಂಗಳೂರು,ಹುಬ್ಬಳಿಯಂತ ನಗರ ಪ್ರದೇಶಗಳಲ್ಲಿ.ಬೆಂಗಳೂರು-ಮಂಗಳೂರಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ.ಸರ್ಕಾರಕ್ಕೆ,ಕಸಾಪ ಹಾಗೂ ಸಾಹಿತ್ಯ ಸಮ್ಮೇಳನದ ಅದ್ದೂರಿತನದ ರೂವಾರಿಗಳಿಗೆ ಕನ್ನಡ ಉಳಿಯಬೇಕು ಎಂದು ಅನ್ನಿಸಿದರೆ ಬೆಂಗಳೂರಿನಂತ ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯಲಿ.ಅಲ್ಲಿನ ಪ್ರತಿಷ್ಠಿತ ಖಾಸಗಿ ಇಂಗ್ಲೀಷ್ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಲಿಸುವಂತ ವಾತಾವರಣವನ್ನು ಮೂಡಿಸುವ ಕೆಲಸವನ್ನು ತಾಕತ್ತಿದ್ದರೆ ಮಾಡಲಿ.ಇಲ್ಲದಿದ್ದರೆ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಎನ್ನುವ ಸರ್ಕಾರ ಕಾಯ್ದೆಯನ್ನು ಜಾರಿಗೆ ತರಲಿ.ಈ ಸಂಬಂಧ ನ್ಯಾಯಾಲಯದಲ್ಲಿ ಇರುವ ದಾವೆಯನ್ನು ಬೇಗ ಇತ್ಯರ್ಥ ಪಡಿಸಲಿ.ಇದೆಲ್ಲವನ್ನು ಬಿಟ್ಟು ಕೇವಲ ಕನ್ನಡದ ಘೋಷಣೆಯಲ್ಲಿ ಹೊಟ್ಟೆ ತುಂಬಿಸುವ ಕೆಲಸ ಮಾಡುವುದನ್ನು ಬಿಡಲಿ.
ಹಳ್ಳಿಗಳಲ್ಲಿ ಜನರು ವಲಸೆ ಹೋಗಲಾರಂಭಿಸಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವೇ ಇಲ್ಲವಾಗಿದೆ.ಇಲ್ಲಿವರೆಗೂ ಕನ್ನಡದಲ್ಲಿ ಕಲಿತು,ಇಂಗ್ಲೀಷ್ ಕಲಿಯಾಲಾಗದ ಲಕ್ಷಾಂತರ ಗ್ರಾಮೀಣ ಯುವಕರು ಹೋಟೆಲ್, ಬಾರ್ಗಳಲ್ಲಿ ಮುಸುರೆ ತಿಕ್ಕುತ್ತಿದ್ದಾರೆ.ಸಣ್ಣ-ಪುಟ್ಟ ಕೆಲಸಗಳ ಮೂಲಕ ಹೊಟ್ಟೆ ಹೊರೆಯುತ್ತಿದ್ದಾರೆ.ಇಂಥ ಸೂಕ್ಷ್ಮಗಳನ್ನು ಅರಿತುಕೊಳ್ಳುವ ಕೆಲಸ ಮೊದಲು ಆಗಬೇಕಾಗಿದೆ.ಆನಂತರ ಕನ್ನಡ ಬಗ್ಗೆ ಮಾತನಾಡಬೇಕಿದೆ.
ಕನ್ನಡ ಉಳಿಯಬೇಕೆಂದರೆ ಮತ್ತೂ ಮಾಡಬಹುದು. ಕನ್ನಡ ಶಾಲೆಯಲ್ಲಿ ಕಲಿತರೂ ನನ್ನ ಮಗ,ಮಗಳು ಆರು-ಏಳನೇ ತರಗತಿ ಓದುವ ವೇಳೆಗೆ ಇಂಗ್ಲೀಷ್ನಲ್ಲೂ ಮಾತನಾಡಬಲ್ಲ/ಳು ಎಂಬ ವಾತಾವರಣ ಕನ್ನಡ ಶಾಲೆಗಳಲ್ಲಿದ್ದರೆ ಅಟ್ಲೀಸ್ಟ್ ಹಳ್ಳಿಗಳಲ್ಲಾದರೂ ಪೋಷಕರು ಕಾನ್ವೆಂಟ್ಗಳನ್ನು ಬಿಟ್ಟು ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಲಿಸುತ್ತಾರೆ. ಆ ಇಂಗ್ಲೀಷ್ ಕಲಿಯುವ ಜೊತಗೆ ಕನ್ನಡವು ಉಳಿಯುತ್ತದೆ. ಇಲ್ಲದಿದ್ದರೆ ಹಳ್ಳಿ ಮಕ್ಕಳನ್ನು ಸಾಹಿತ್ಯ ಸಮ್ಮೇಳನ/ಕಸಾಪ ಹಾಗೂ ಸಾಹಿತಿಗಳು ರಾತ್ರಿ ಕಂಡ ಬಾವಿಗೆ ಹಗಲು ನೂಕಿದಂತೆ ಆಗುತ್ತದೆ ಅಷ್ಟೆ. ಮಕ್ಕಳೆಂದರೆ ಎಲ್ಲರೂ ಒಂದೇ. ಶ್ರೀಮಂತರ ಮಕ್ಕಳಿಗೆ ಕೇಂದ್ರೀಯ ಪಠ್ಯ ಕ್ರಮ,ಇಂಗ್ಲೀಷ್ ಭಾಷೆಯ ಅತ್ಯುತ್ತಮ ಗುಣ್ಣಮಟ್ಟದ ಶಿಕ್ಷಣ ಸಿಗಬೇಕಾದ ಈ ಕಾಲಘಟ್ಟದಲ್ಲಿ ನಮ್ಮ ಹಳ್ಳಿ ಮಕ್ಕಳಿಗೆ ಕಳಪೆ ಮಟ್ಟದ ಇಂಗ್ಲೀಶ್ ಶಿಕ್ಷಣವಾದರೂ ಸಿಗಲಿ ಬಿಡಿ! ಉನ್ನತ ಶಿಕ್ಷಣಕ್ಕೆ ಓದಂತೆಲ್ಲ ಅವರು ಇಂಗ್ಲೀಷ್ ಅನ್ನು ಚೆನ್ನಾಗಿ ಕಲಿಯುತ್ತಾರೆ. ದೇಶ-ವಿದೇಶಗಳ ಜೊತೆ ಸಂಪರ್ಕ ಸಾಧಿಸಿ ಹಿರಿಮೆ-ಗರಿಮೆಯಿಂದ ಬೆಳೆಯಲಿ,ಬೆಳಗಲಿ.ಈ ಕಾಲಘಟ್ಟದಲ್ಲಿ ಇಂಗ್ಲೀಷ್ ಶಿಕ್ಷಣ ಕಲಿತರೆ,ಇಂಗ್ಲೀಷ್ ಮಾತನಾಡಲು ಬಂದರೆ ಸಿಗುವಷ್ಟು ಆತ್ಮವಿಶ್ವಾಸ, ಗೌರವ ಕನ್ನಡದಿಂದ ಬರುತ್ತದೆಯೇ?ಇವೆಲ್ಲವಕ್ಕೂ ಹೆಚ್ಚಿನದಾಗಿ ಹಳ್ಳಿ ಮಕ್ಕಳ ಮನೆ ಭಾಷೆ ಇಂಗ್ಲೀಷ್ ಕಲಿತರೂ ಕನ್ನಡವಾಗಿ ಉಳಿದೇ ಇರುತ್ತದೆ ಅನ್ನೋದಷ್ಟೆ ಖುಷಿಯ ವಿಚಾರ.
(ಚಿತ್ರಕೃಪೆ : connect.in.com)





ನೂರಕ್ಕೆ ನೂರು ಸತ್ಯ
ಕನ್ನಡ ಉಳಿಸಬೇಕೆಂದು ಬೊಬ್ಬಿರಿಯುವವರ ಮಕ್ಕಳು ಕಾನ್ವೆಂಟ್ಗಳಲ್ಲಿ ಓದುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ.
ಶಾಲೆಗಳಲ್ಲಿ, ಭಾಷೇತರ ವಿಷಯಗಳಿಗೆ (ಗಣಿತ ಶಾಸ್ತ್ರ, ವಿಜ್ಞಾನ ಶಾಸ್ತ್ರ ಮತ್ತು ಸಮಾಜ ಶಾಸ್ತ್ರ) ನೀಡುವ ಪ್ರಾಮುಖ್ಯ, ಭಾಷೆಗಳ ಬೋಧನೆ ಮತ್ತು ಕಲಿಕೆಗೂ ನೀಡಬೇಕು.
ಪರೀಕ್ಷೆಯ ದೃಷ್ಟಿಯಲ್ಲಿ ಬೋಧಿಸುವ ಕ್ರಮದಿಂದಾಗಿ, ಪರೀಕ್ಷೆಯ ನಂತರ ಭಾಷೇತರ ವಿಷಯಗಳನ್ನು ಮರೆಯುವಂತೆ, ಭಾಷೆಯ ಬಗ್ಗೆ ಕಲಿತುದನ್ನೂ ಮರೆಯುತ್ತಾರೆ ವಿದ್ಯಾರ್ಥಿಗಳು.
ಶಾಲೆಗಳಲ್ಲಿ ಪರೀಕ್ಷೆಯ ದೃಷ್ಟಿಯ ಬದಲಾಗಿ ಜ್ಞಾನಾರ್ಜನೆಯ ದೃಷ್ಟಿಕೋನವನ್ನು ಇಟ್ಟುಕೊಂಡು ಬೋಧಿಸುವ ಅಗತ್ಯ ಇದೆ.