ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 17, 2011

3

ವಾಘಾ ಮತ್ತು ದೇಶಭಕ್ತಿಯ ಮಧ್ಯೆ ಅರ್ಧ ಘಂಟೆ

‍ನಿಲುಮೆ ಮೂಲಕ

ಸಂತೋಷ್ ಎನ್. ಆಚಾರ್ಯ

ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್  ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ. ಪರಾಟಗಳು, ಚಪಾತಿಗಳು, ಘೀ ರೈಸ್, ಡ್ರೈ ಫ್ರುಟ್ಸ್ ಮತ್ತು ಪ್ರತಿ ಪಲ್ಯದಲ್ಲೂ ಮೆರೆದ ದೇಸಿ ಘೀ ಪ್ರಭಾವದಿಂದ ಆಹಾರದ ಟ್ಯಾಂಕ್ ಆಗಿದ್ದ ಹೊಟ್ಟೆ ಮೆಲ್ಲಗೆ ನರಳುತ್ತಿತ್ತು. ಅಚೆ ಈಚೆ ತಡಕಾಡಿದಾಗ ಸಿಕ್ಕ ಮೊಬೈಲು ಘಂಟೆ ಒಂಭತ್ತು ತೋರಿಸುತ್ತಿತ್ತು. ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿರುವಾಗ ಒಳಗಿನಿನಿಂದ ರವಿಂದರನ ಅಮ್ಮನ ಕರೆ ಬಂತು. ಅಪ್ಪ ಅಮ್ಮನ ಆಜ್ಞೆಗಳ ಕಟ್ಟಾ ಪಾಲಕನಾದ ರವಿಂದರ್ ಪಟ್ಟನೆ ಎದ್ದ. ನನಗೂ ಮಲಗಿದ್ದು ಸಾಕು ಎಂದು ಅನಿಸಿದ್ದರಿಂದ ಎದ್ದು ಬ್ರಶ್ ಮಾಡತೊಡಗಿದೆ.
ಅಮೃತ್ ಸರ್ ನಮ್ಮ ಉತ್ತರ ಭಾರತದ ಪಯಣದ ಪ್ರಮುಖ ಗುರಿಯಾಗಿತ್ತು. ಪಂಜಾಬಿನ ಸಾಂಸ್ಕೃತಿಕ ರಾಜಧಾನಿಯನ್ನು ಅದಕ್ಕೂ ನನಗೆ ಟಿವಿಯಲ್ಲಿ ನೋಡಿದ್ದ ಚಿನ್ನದ ಗುರುದ್ವಾರವನ್ನು ನೋಡಲೇ ಬೇಕೆಂಬುದು ಮಹಾದಾಸೆಯಾಗಿತ್ತು. ಕಳೆದ ೩ ದಿನಗಳಂತೆ ಪರಾಟದ ನಿರೀಕ್ಷೆಯಿದ್ದವರಿಗೆ ಬಂದದ್ದು ಪೂರಿ. ‘ದಿನ ಈ ರೀತಿ ಆರಂಭವಾಗಬೇಕೆ?’ ಎಂದು ಅತುಲ್ ಬಳಿ ಅತ್ತು ಕಷ್ಟ ಪಟ್ಟು ತಿಂದೆ. ಪರಾಟ, ತಿಂದ ನಂತರ ಹೊಟ್ಟೆ ಭಾರ ಮಾಡಿಸಿದರೆ ಪೂರಿ, ಮನಸ್ಸು ನೋಡಿದ ಕೂಡಲೇ ಬೇಡ ಅನ್ನುವುದು ಆಫೀಸಿನ ಕ್ಯಾಂಟಿನ್ ನಲ್ಲಿ ಒಮ್ಮೆ ತಿಂದ ಕಚಡಾ ಪೂರಿ ಕಾರಣವೋ ಅಥವಾ ನಾವು ಒಮ್ಮೆ ಮನೆಯಲ್ಲಿ ಮಾಡಿದ ಪ್ರಯೋಗ ಕಾರಣವೋ ಗೊತ್ತಿಲ್ಲ. ಆದರೆ ಅದರ ನಂತರ ಮಾತ್ರ ಪೂರಿ ಮತ್ತು ನಾನು ತುಂಬಾ ದೂರ!! ಬೇಗ ಬೇಗ ಸ್ನಾನ ಮಾಡಿ ನಾನು ಮತ್ತು ಅತುಲ್ ತಯಾರಾದರೆ ರವಿಂದರ್ ಇನ್ನೂ ತಯಾರಾಗಿರಲಿಲ್ಲ. ಎಲ್ಲಾ ಗಡಿಬಿಡಿಯಲ್ಲಿ ಹೊರಟಾಗ ಅವನ ತಂಗಿ ಕೂಡ ಬಂದಿದ್ದು ಮನಸ್ಸಿಗೆ ಸರಿಯೆನಿಸಲಿಲ್ಲ. ಹುಡುಗಿಯೊಂದಿಗೆ ಸುತ್ತಾಡಲು ನನಗೇನು ಅಭ್ಯಂತರವಿಲ್ಲ ಆದರೆ ನಾವು ಹುಡುಗರು ಗುಂಪಿನಲ್ಲಿರುವಾಗ ಯಾರಾದರೂ ಹುಡುಗಿಯರು ನಮ್ಮೊಂದಿಗಿರುವುದು ಸ್ವಲ್ಪ ನನಗೂ ಮತ್ತು ನನ್ನ ಗೆಳೆಯರಿಗೂ ಕಸಿವಿಸಿ. ಎಲ್ಲಾ ಮುಗಿಸಿ ಅಮೃತ್ ಸರ್ ಬಸ್ ಹಿಡಿದೆವು. ಬಸ್ಸಿನಲ್ಲಿ ಇನ್ನೊಂದು ರೌಂಡು ನಿದ್ದೆ ಮುಗಿಸಿ ಅಮೃತ್ ಸರ್ ನಲ್ಲಿ ಇಳಿಯುವಾಗ ತಲೆಯ ಮೇಲೆ ಬೆಂಕಿ ಇಟ್ಟಂತಾಯಿತು. ಲಗುಬಗನೆ ಜೇಬಿನಿಂದ ಕರವಸ್ತ್ರ ತೆಗೆದುಕೊಂಡು ತಲೆಗೆ ಕಟ್ಟಿಕೊಂಡೆವು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜಲಿಯನ್ ವಾಲ ಬಾಗ್ ಮತ್ತು ಗೋಲ್ದನ್ ಟೆಂಪಲ್ ನ ದರ್ಶನ ಮಾಡಿ ಲಂಗರಿನಲ್ಲಿ ಗಡದ್ದಾಗಿ ಊಟ ಮಾಡುವಾಗ ಘಂಟೆ ೪. ಎಲ್ಲಾ ಬೇಗ ಮುಗಿದಿದ್ದು ಅತುಲ್ ಮತ್ತು ರವಿಂದರ್ ನ ವಾಘಾ ಬಾರ್ಡರ್ ನೋಡುವ ಅಸೆಯನ್ನು ಇನ್ನೂ ಜೀವಂತವಾಗಿ ಉಳಿಸಿತ್ತು. ನಿಜವಾಗಿ ಹೇಳುವುದಾದರೆ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಬಾಡಿಗೆಗೆ ಸಿಕ್ಕ ಓಮ್ನಿಯಲ್ಲಿ ಕೂತು ಹೊರಟೆವು.

೧೯೯೯ರವರೆಗೆ ವಾಘಾ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇರುವ ಏಕೈಕ ಗಡಿ ರಸ್ತೆಯಾಗಿತ್ತು. ಇದನ್ನು ಏಶ್ಯಾದ ‘ಬರ್ಲಿನ್ ಗೋಡೆ’ ಎಂದೂ ಕರೆಯಲಾಗುತ್ತದೆ. ಮೂಲತಃ ನಮ್ಮ ದೇಶದ ವಿಭಜನೆ ಎನ್ನುವುದು ವಾಘಾದ ವಿಭಜನೆ ಕೂಡ ಆಗಿದೆ. ಏಕೆಂದರೆ ವಾಘಾದ ಅರ್ಧಪಾಲು ಭಾರತದಲ್ಲಿದ್ದರೆ ಉಳಿದರ್ಧ ಪಾಕಿಸ್ತಾನದಲ್ಲಿದೆ. ಸುಮಾರು ಒಂದು ಘಂಟೆಯಲ್ಲಿ ಡ್ರೈವರ್ ನಮ್ಮನ್ನು ಗಡಿ ತಲುಪಿಸಿದ. ನನ್ನ ಊಹೆಗೂ ನಿಲುಕದ ಸ್ಥಳವಾದ್ದರಿಂದ ಹೇಗಿರಬಹುದು ಎಂದು ಯೋಚನೆ ಮಾಡಲು ನಾನೂ ಹೋಗಿರಲಿಲ್ಲ. ರಸ್ತೆ ಬದಿಯಲ್ಲಿ ಮಾರುತ್ತಿದ್ದ ಪಾಪ್ ಕಾರ್ನ್, ಲಿಂಬೆ ಶರಬತ್ತು, ಚಾಟ್ಸ್ ಎಲ್ಲವನ್ನೂ ನೋಡುತ್ತಾ ಇರುವಾಗ ಎದುರಿಗೊಂದು ಹೋಟೆಲ್ ಕಂಡಿತು. ದೋಸೆ, ಇಡ್ಲಿ ಎಲ್ಲಾ ಇತ್ತಾದರೂ ವೈಷ್ಣೋದೇವಿಯಲ್ಲಿ ತಿಂದ ಇಡ್ಲಿಯ ಪ್ರಭಾವ ಇನ್ನೂ ಇದ್ದರಿಂದ ಸೀದಾ ‘ರಿಟ್ರೀಟ್ ಸೆರೆಮನಿ’ ನೋಡಲು ಹೋಗುವುದೇ ಸೂಕ್ತ ಎಂದೆಸಿತು. ನಮ್ಮೊಂದಿಗೆ ಇದ್ದ ನೀರಿನ ಬಾಟಲಿಯನ್ನು ಕೂಡ ಒಳಗೆ ತೆಗೆದುಕೊಂಡು ಹೋಗಲು ಬಿಡದಿದ್ದರಿಂದ ಖಾಲಿ ಕೈ ಹೋಗಬೇಕಾಯಿತು.  ‘ಅಲ್ಲಿ ತುಂಬಾ ಬೋರ್ ಅಗುತ್ತೆ, ತಿನ್ನಲು ಏನಾದ್ರು ತಗೊಳ್ಳಿ’ ಎಂದು ಹೇಳುತ್ತಿದ್ದ ಪಾಪ್ ಕಾರ್ನ್, ಅಲೂ ಟಿಕ್ಕಿ ಮತ್ತು ಚಾಟ್ಸ್ ಅಂಗಡಿಯವರ ಮೇಲೆ ಸಿಟ್ಟು ಮಾಡುತ್ತಲೇ ಒಳಗೆ ಹೋದರೆ ಎರಡು ಕಡೆ ಚೆಕ್ಕಿಂಗ್! ಸ್ವಲ್ಪ ಎದುರು ಹೋಗುತ್ತಿದ್ದಂತೆ ಸಣ್ಣದಾಗಿ ‘ದೇಸ್ ರಂಗೀಲಾ’ ಹಾಡು ಕೇಳತೊಡಗಿತು. ಮತ್ತೆ ಕಂಡಿತು ಸ್ವರ್ಣ ಜಯಂತಿ ದ್ವಾರ! ಆರಕ್ಕೆ ಆಗಲೂ ಹತ್ತು ನಿಮಿಷವಿತ್ತು. ಜನರು ಕುಳಿತುಕೊಳ್ಳಲು ಮಾಡಿದ ಸೀಟುಗಳು ಆಗಲೇ ತುಂಬಿದ್ದವು. ಎಲ್ಲೆಲ್ಲೂ ಜನರು ಕಾಣುತ್ತಿದ್ದರು. ಹೇಗೋ ಮೇಲೆ ಬಂದು ನಿಂತಾಗ ಕೆಲವು ಹುಡುಗಿಯರು ಕುಣಿಯುತ್ತಿದ್ದುದು ಕಾಣಿತು. ಆಗ ‘ಚಕ್ಕ್ ದೇ’ ಸಿನೆಮಾದ ಹಾಡು ಸ್ಪೀಕರಿನಲ್ಲಿ ಕೇಳುತ್ತಿದ್ದರೆ ಅದಕ್ಕೆ ಕುಣಿಯುವ ಮತ್ತು ಸಭಿಕರು ಹಾರಾಡಿಸುತ್ತಿದ್ದ  ಭಾರತದ ಧ್ವಜವನ್ನು ನೋಡಿ ಮುಂದಿನ ಅರ್ಧ ಘಂಟೆಯ ಅನುಭವದ ಮೊದಲೇ ರೋಮಗಳು ನೆಟ್ಟಗಾದವು.

‘ರಿಟ್ರೀಟ್ ಸೆರೆಮನಿ’ ಎನ್ನುವುದು ಧ್ವಜವನ್ನು ಕೆಳಗಿಳಿಸುವ ಕಾರ್ಯಕ್ರಮ. ಸೂರ್ಯಾಸ್ತವಾಗುತ್ತಿದ್ದಂತೆ ಅರ್ಧ ಘಂಟೆಯ ಅವಧಿಯಲ್ಲಿ ನಡೆಯುವ ಈ ಕಾರ್ಯಕ್ರಮ ಒಂದು ಮುಖ್ಯ ಆಕರ್ಷಣೆ. ನಾವು ಹೋದದ್ದು  ಬುಧವಾರ ಆಗಿತ್ತು, ಅವತ್ತೇ ಅಷ್ಟು ರಶ್ ಇದ್ದರೆ ವಾರಾಂತ್ಯದಲ್ಲಿ ಇನ್ನೆಷ್ಟು ಜನಸಂತೆ ಇರಬಹುದು ಎಂದೆನಿಸಿತು. ನನ್ನ ಮೊಬೈಲ್ ಕ್ಯಾಮೆರಾವನ್ನು  ಸರಿಯಾದ ಕೋನದಲ್ಲಿ ಇರಿಸಲು ಜನ ತೊಂದರೆ ಕೊಡುತ್ತಿದ್ದರೆ ಸೂರ್ಯ ಅದಕ್ಕಿಂತ ಹೆಚ್ಚು ಕಿರಿಕಿರಿ ಮಾಡುತ್ತಿದ್ದ. ಡಾನ್ಸ್ ಇನ್ನೂ ಮುಂದುವರಿದಿತ್ತು. ಆರು ಘಂಟೆಗೆ ಸರಿಯಾಗಿ ಒಬ್ಬ BSF ಆಫೀಸರ್ ಎಲ್ಲರನ್ನು ಸ್ವಾಗತಿಸಿ ಇನ್ನೇನು ಕಾರ್ಯಕ್ರಮ ಶುರುವಾಗಲಿದೆ ಎಂದು ಹೇಳಿ ಎಲ್ಲರನ್ನೂ ಕುಳಿತುಕೊಳ್ಳುವಂತೆ ವಿನಂತಿಸಿದ. ನಾನೆಲ್ಲೋ ಮಧ್ಯದಲ್ಲಿ ಸಿಕ್ಕಿ ಬಿದ್ದದ್ದರಿಂದ ಕುಳಿತುಕೊಳ್ಳಲು ನನಗೆ ಸ್ಥಳವಿರಲಿಲ್ಲ. ಇವರೆಲ್ಲಾ ಎಲ್ಲಿಗೆ ಹೋದರು ಎಂದು ಹುಡುಕುವುದರಲ್ಲಿ ಪ್ರಯೋಜನವಿರಲಿಲ್ಲ. ಅಲ್ಲೇ ಹೇಗೋ ಅಡ್ಜಸ್ಟ್ ಮಾಡಿಕೊಂಡೆ. ೫೦ ಮೀಟರ್ ದೂರದಲ್ಲಿ ಕಾಣುತ್ತಿತ್ತು ಪಾಕಿಸ್ತಾನ. ಅಲ್ಲೂ ಸೇರಿದ ಜನರು. ನಮ್ಮಷ್ಟು ಸಂದಣಿ ಇರದಿದ್ದರೂ ಕಡಿಮೆ ಏನು ಇರಲಿಲ್ಲ. ಯಾವ ದೇಶವನ್ನು ಚಿಕ್ಕಂದಿನಿಂದಲೂ ದ್ವೆಷಿಸುವುದನ್ನೇ ಕಲಿತಿದ್ದೇನೋ   ಆ ದೇಶವನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವಾಗ ಮನಸ್ಸಿನಲ್ಲಿ ಗೊಂದಲ ಕಾಡುತ್ತಿತ್ತು. ಈಗ ಆ ದೇಶದ ಬಗ್ಗೆ ದ್ವೇಷ ನನ್ನಲ್ಲಿ ಮೊದಲಿನಷ್ಟೇ ಇಲ್ಲದಿದ್ದುದು ನನ್ನ ದೇಶ, ನನ್ನ ಜನರನ್ನು ಹತ್ತಿರದಿಂದ ನೋಡಿದ ಕಾರಣದಿಂದಲೋ ಏನೋ ಅರ್ಥವಾಗಲಿಲ್ಲ. ತುಂಬಾ ವಿಚಾರವಾದಿ ಆಗುವುದು ಬೇಡ ಎಂದು ನನ್ನಷ್ಟಕ್ಕೆ ನಾನು ಹೇಳಿಕೊಳ್ಳುವಾಗ ಅ ಆಫೀಸರ್ ಯಾವುದೇ ಕಾರಣಕ್ಕೆ ‘ವಂದೇ ಮಾತರಂ’, ‘ಭಾರತ ಮಾತಾ ಕಿ ಜೈ’ ಮತ್ತು ‘ಹಿಂದುಸ್ತಾನ್ ಜಿಂದಾಬಾದ್’ ಈ ಮೂರು ಘೋಶಗಳಿಗೆ ಹೊರತಾಗಿ ಬೇರೆ ಯಾವುದೇ ರೀತಿಯ ಶಬ್ದಗಳನ್ನು ಪ್ರಯೋಗಿಸಬಾರದು ಎಂದು ಹೇಳಿದ. ಇನ್ನೊಬ್ಬ BSF ಆಫೀಸರ್ ಜೋರಾಗಿ ಮೈಕಿನಲ್ಲಿ ಬಾಂಗ್ ಕೊಟ್ಟ. ಅದಕ್ಕೆ ನಾವೂ ಜೋರಾಗಿ ಬೊಬ್ಬಿಟ್ಟೆವು. ಜನ ಸಂದಣಿಯಲ್ಲಿ ಜೋರಾಗಿ ಬೊಬ್ಬಿಡುವುದರಲ್ಲಿ ನಾನು ಮಾಸ್ಟರ್.

ನಂತರ ನಡೆದ ಕಾರ್ಯಕ್ರಮ ಮಾತ್ರ ನಾನು ತುಂಬಾ ಸಮಯದವರೆಗೆ ಮರೆಯಲಾರದ ಅನುಭವ. ಶರವೇಗದಿಂದ BSF ಜವಾನರು ವಾಘಾ ಗೇಟಿನ ಬಳಿ ಓಡುತ್ತಾರೆ, ಅದಕ್ಕೆ ಅವರದೇ ಅದ ಶೈಲಿಯಿದೆ. ಗೇಟನ್ನು ತೆರೆಯಲಾಗುತ್ತದೆ. ಅಲ್ಲಿಂದ ಪಾಕಿಸ್ತಾನಿ ಜವಾನರು ಮತ್ತು ಭಾರತದ ಜವಾನರ ಮಧ್ಯೆ ಮುಖಾಮುಖಿ, ತಲೆಯವರೆಗೆ ಕಾಲನ್ನು ಮೇಲೆತ್ತುವ ಶೈಲಿ ನಿಜಕ್ಕೂ ನನ್ನ ಮನಸ್ಸಿನಲ್ಲಿ ನಾನೂ ಸೇನೆಯಲ್ಲಿರಬೇಕಾಗಿತ್ತು ಎಂದೆನಿಸುವಂತೆ ಮಾಡಿತು. ಈ ಮಧ್ಯೆ ನನ್ನ ಫೋಟೋಗ್ರಫಿಯೊಂದಿಗೆ ನಮ್ಮ ಜಯಘೋಷ ನಡೆಯುತ್ತಾ ಇತ್ತು, ಕೆಲವರು ‘ಪಾಕಿಸ್ತಾನ್ ಮುರ್ದಾಬಾದ್’ ಮತ್ತಿತರ ಅಕ್ಕನ, ಅಮ್ಮನ ಬೈಗುಳಗಳನ್ನು ಹೇಳಿದರೂ ಅವು ಹೆಚ್ಚು ಪ್ರತಿಧ್ವನಿಸಲಿಲ್ಲ. ಎಷ್ಟೇ ಶಾಂತಿ ಶಾಂತಿ ಎಂದರೂ ಎರಡು ದೇಶಗಳ ಜನರ ನಡುವಿನ ದ್ವೇಷಕ್ಕೆ ಶಾಂತಿ ಬರಲು ಸಾಧ್ಯವಿಲ್ಲ ಎಂದೆನಿಸಿತು. ಇದರೊಂದಿಗೆ ನಡೆದ ಬೇಸರದ ಸಂಗತಿ ಏನೆಂದರೆ ಪಂಜಾಬಿಗೆ ಬರುವ ಮೊದಲೇ ಥೆರಪಿ ಕೊಡಿಸಿ ಬಂದಿದ್ದ ನನ್ನ ರೀಬಾಕ್ ಶೂ ಶೋಚನೀಯ ಅವಶ್ಥೆಯಲ್ಲಿರುವುದು ನನ್ನ ಕಣ್ಣಿಗೆ ಬಿದ್ದದ್ದು. ಜನರ ನೂಕು ನುಗ್ಗಲಿನಲ್ಲಿ ಅದರ ಅತ್ಯಾಚಾರವಾದದ್ದು ಗೊತ್ತೇ ಆಗಲಿಲ್ಲ. ಧ್ವಜವನ್ನು ಕೆಳಗೆ ಇಳಿಸಲಾಗುತ್ತದೆ, ನಾವೆಲ್ಲಾ ಸೆಲ್ಯೂಟ್ ಹೊಡೆದೆವು.  ಬೊಬ್ಬೆ ಹಾಕಿ ಹಾಕಿ ಧ್ವನಿ ಪೆಟ್ಟಿಗೆ ಎಂಬ ನನ್ನ ದೇಹದ ಭಾಗ ಇನ್ನು ಯಾವತ್ತು ತೆರೆಯುತ್ತೋ ಇಲ್ಲವೋ ಎಂಬ ಅನುಮಾನ ಒಮ್ಮೆ ಬಂದರೂ ಕೇರೇ ಎನ್ನದೆ ಮತ್ತೂ ಕೂಗಿದೆ, ಇನ್ನೊಮ್ಮೆ ಇಂಥ ಅನುಭವಕ್ಕೆ ಎಷ್ಟು ದಿನ ಕಾಯಬೇಕೋ! ತೆರೆಯಲಾಗಿದ್ದ ಗೇಟನ್ನು ಮುಚ್ಚಲಾಗುತ್ತದೆ. ಜವಾನರು ಧ್ವಜವನ್ನು ತೆಗೆದುಕೊಂಡು ಬರುತ್ತಾರೆ. ಅಲ್ಲಿಗೆ ಕಾರ್ಯಕ್ರಮದ ಸಮಾಪ್ತಿ.

ಹೊರಗೆ ಬರುವಾಗ ಸೆಖೆಯಿಂದ ದೇಹವಿಡಿ ಒದ್ದೆಯಾಗಿತ್ತು. ಭಾರತಕ್ಕೆ ಮರಳಿ ಬರುವ ಭಾವನೆ ಬಂತು, ಏಕೆಂದರೆ ಅಲ್ಲಿ ‘ India Welcomes You ‘ ಎಂಬ ಬೋರ್ಡು ಕಾಣುತ್ತಿತ್ತು. ಅಲ್ಲೇ ಲಿಂಬೆ ಸೋಡಾ ಕುಡಿದು ‘Best Lime Soda so far in Punjab’ ಎಂದು ಕಾಂಪ್ಲಿಮೆಂಟು ಕೊಟ್ಟು ಅಲ್ಲಿಂದ ಹೊರಟೆವು. ಒಮ್ನಿ ನಮ್ಮನ್ನು ಮರಳಿ ಅಮೃತ್ ಸರಗೆ ಒಯ್ಯಲಾರಂಭಿಸಿತು. ರವಿಂದರ್ ನನ್ನ ಶೂ ನೋಡಿ ನಗುತ್ತಾ ಹೇಳಿದ ‘ಫಿರ್ ಸೆ ಗಯಾ ಕ್ಯಾ?’ ನಾನು ಪುನಃ ಒಮ್ಮೆ ಅದರ ಅವಸ್ಥೆ ನೋಡಿ ದುಃಖಿತನಾಗಿ ಸೀಟಿಗೆ ತಲೆ ಒರಗಿಸಿದೆ. ಅತುಲ್ ನನ್ನ ಮೊಬೈಲಿನಲ್ಲಿ ತೆಗೆದ ಚಿತ್ರಗಳನ್ನು ನೋಡುತ್ತಿದ್ದ.  ಮನಸ್ಸು ಪುನಃ ರಿಟ್ರೀಟ್ ಸೆರೆಮನಿ ನೆನಪಿಸಲಾರಂಭಿಸಿತು, ಇನ್ನೂ ಕಿವಿಗೆ ‘ಭಾರತ ಮಾತಾ ಕಿ ಜೈ’ ‘ವಂದೇ ಮಾತರಂ’ ಕೇಳುತ್ತಿತ್ತು. ಒಂದು ಅದ್ಭುತ ಅನುಭವವನ್ನು ನೋಡಿದ ಸಾರ್ಥಕ್ಯ ನನ್ನ ಮನಸ್ಸಿಗಾದರೆ ವೈಷ್ಣೋ ದೇವಿಯಿಂದ ಬಂದು ಎರಡು ದಿನವಾದರೂ ಕಾಲಿನ ಮಾಂಸ ಖಂಡಗಳು ಇನ್ನೂ ನೋಯುತ್ತಿದ್ದವು.

ಚಿತ್ರ ಕೃಪೆ: ನನ್ನ ಮೊಬೈಲಿನ ಕ್ಯಾಮರ 🙂

Read more from ಲೇಖನಗಳು
3 ಟಿಪ್ಪಣಿಗಳು Post a comment
  1. ಹರೀಶ್ ಅತ್ರೇಯ's avatar
    ಫೆಬ್ರ 17 2011

    ಆತ್ಮೀಯ.
    ನಾವು ಹೋದಾಗಲೂ ಇದೇ ರೀತಿ. ಬೈದದ್ದನ್ನು ಕೇಳಿಸಿಕೊ೦ಡ ನಮ್ಮ ಊರಿನ ಸೈನಿಕನೊಬ್ಬ ನಮ್ಮನ್ನು ಸುಮ್ಮನಿರಲು ಸೂಚಿಸಿದ “ಹಾಗೆಲ್ಲಾ ಹೇಳ್ಬಾರ್ದೂ ಸರ್” ಅ೦ತ. ಒಬ್ಬ ಸೈನಿಕ , ಶತೃ ಸೈನಿಕನಿಗೆ ಕೊಡುವ ಗೌರವವನ್ನು ಕ೦ಡೆ. ಅದ್ಭುತ. ನಿಮ್ಮ ನಿರೂಪಣಾ ಶೈಲಿ ಚೆನ್ನಾಗಿದೆ. ಗೊತ್ತಿಲ್ಲದ೦ತೆ ಪಾಕೀಸ್ತಾನದ ಕಡೆ ಸೈನಿಕನೆಡೆಗೆ ಅಸಹ್ಯ ಕ್ರೋಧ ಹುಟ್ಟಿಬಿಡುತ್ತೆ. ಆ ದೇಶವೇ ಹಾಗೆ. ಅಥವಾ ಅದಕ್ಕೆ ಕಾರಣರಾದವರೇ ಹಾಗೇನೋ?
    ಹರಿ

    ಉತ್ತರ
  2. mpneerkaje's avatar
    ಫೆಬ್ರ 17 2011

    ಸೂಪರಾಗಿದೆ ಕಣ್ರೀ..

    ಉತ್ತರ
  3. shivaprasadtr's avatar
    shivaprasadtr
    ಫೆಬ್ರ 18 2011

    Yaaa. When I visited wagha two years ago, it was a great experience. My wife felt crying when she saw pakistan and the parade.

    ಉತ್ತರ

Leave a reply to mpneerkaje ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments