ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 22, 2011

1

ಮಂಗಳಮುಖಿಯರಿಗೂ ದಕ್ಕಿದ ಹಕ್ಕುಗಳು

‍ನಿಲುಮೆ ಮೂಲಕ

ನಾಗರಾಜ್ ಜಿ

ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗಿರುವ ಜನಗಣತಿಯಲ್ಲಿ ಸ್ತ್ರೀ ಪುರುಷರ ಜೊತೆಗೆ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನೂ ಸೇರಿಸಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವುದಾಗಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಹೇಳಿದೆ.

ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಸರಕಾರಕ್ಕೆ ತಾವು ಸಲ್ಲಿಸುತ್ತಿರುವ ಬೇಡಿಕೆಗಳ ಬಗ್ಗೆ ವಿವರ ನೀಡಿದರು.

ಭಾರತದಲ್ಲಿ 1872ರಿಂದ ಜನಗಣತಿ ಪ್ರಾರಂಭವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಸರಣಿಯಲ್ಲಿ 15ನೆಯ ಹಾಗೂ ಸ್ವಾತಂತ್ರ್ಯ ಬಳಿಕದ 7ನೇ ಜನಗಣತಿ ಇದಾಗಿದೆ. ಈಗಾಗಲೇ ಜನಗಣತಿಗೆ ಸಕಲ ಸಿದ್ದತೆಗಳಾಗಿದ್ದು ಸ್ತ್ರೀ ಪುರುಷರ ಜೊತೆಗೆ ಭಾರತ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ದಾಖಲಿಸಲು ಮುಂದಾಗಿದೆ. ಇದನ್ನು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿತು.

ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ : ಈ ವೇದಿಕೆಯು ಕರ್ನಾಟದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ರಾಜ್ಯಮಟ್ಟದ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಅವರ ಪರವಾಗಿ ಸರ್ಕಾರ, ಮಾದ್ಯಮ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ವಕಾಲತ್ತು ನಡೆಸುತ್ತಿದೆ. ವೇದಿಕೆಯು ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸಾಮಾಜಿಕ ಚಳವಳಿಗಳೊಂದಿಗೆ ಕೈ ಜೋಡಿಸಿ ಸಾರ್ವಜನಿಕ ಕಾರ್ಯಕ್ರಮಗಳ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಮಾಜ ಬದಲಾವಣೆ ಕೆಲಸ ಮಾಡುತ್ತಿದೆ.

ಸರ್ಕಾರಕ್ಕೆ ವೇದಿಕೆಯ ಬೇಡಿಕೆಗಳು:
1. ಕನ್ನಡದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೆಂದು (ಜೆಂಡರ್ ಮೈನಾರ್ಟಿಸ್) ಹಾಗೂ ಇಂಗ್ಲಿಷ್‌ನಲ್ಲಿ ಟ್ರಾನ್ಸ್ ಜೆಂಡರ್ ಎಂದು ಬಳಸಬೇಕು.
2. ಮುಂಬರುವ ಅಧಿವೇಶನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 20 ಕೋಟಿ ರುಪಾಯಿಗಳನ್ನು ಮೀಸಲಿಡಬೇಕು.ಲೈಂಗಿಕ ಅಲ್ಪಸಂಖ್ಯಾತರೆಂದರೆ ಹಿಜ್ರಾ, ಕೋಥಿಗಳು, ಡಬಲ್ ಡೇಕರ್‌ಗಳು, ಜೋಗಪ್ಪಂದಿರು, ಲೆಸ್ಬಿಯನ್‌ಗಳು, ಸಲಿಂಗಕಾಮಿ/ದ್ವಿಲಿಂಗಕಾಮಿ ಗಂಡಸರು ಮತ್ತು ಹೆಂಗಸರು, ಗೇಗಳು, ಹೆಣ್ಣಾಗಿ ಹುಟ್ಟಿ ಗಂಡಾಗಿ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಲಿಂಗ ಬದಲಾಸಿಕೊಳ್ಳುವವರು, ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಂತೆ ಇರುವವರು. ಆದರೆ ಇಷ್ಟಕ್ಕೆ ಸೀಮಿತವಲ್ಲದ ಇನ್ನೂ ಅನೇಕ ಲೈಂಗಿಕತೆಯ ಗುರುತುಗಳುಳ್ಳ ಸಮುದಾಯದವರು ಸೇರಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರೆಂದರೆ ಯಾರು?

1. ಕೋಥಿಗಳು : ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆಯುಳ್ಳ ಸಲಿಂಗಕಾಮಿ/ದ್ವಿಲಿಂಗಕಾಮಿ ಪುರುಷರು. ಕೋಥಿ ಎಂದು ಗುರುತಿಸಿಕೊಳ್ಳುವವರು ಬಹುತೇಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಂದ ಬಂದಂತವರು. ಇವರು ಹುಟ್ಟುತ್ತಾ ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ. ಹೆಣ್ಣು ಮಕ್ಕಳು ಮಾಡುವ ಕೆಲಸಗಳನ್ನು ಮಾಡಲು ಹೆಚ್ಚು ಇಷ್ಟ ಪಾಡುತ್ತಾರೆ, ಅಲ್ಲದೆ ತಾಯಿಗೆ ಸಹಾಯಕರಾಗಿ ಆಡಿಗೆ, ಮನೆ ಸ್ವಚ್ಚಗೊಳಿಸುವ ಕೆಲಸ ಮುಂತಾದ ಕೆಲಸಗಳನ್ನು ಮಾಡಲು ಇಚ್ಚಿಸುತ್ತಾರೆ. ತಾರತಮ್ಯವಿರುವುದರಿಂದ ಕದ್ದು ಮುಚ್ಚಿ ಲಿಫ್‌ಸ್ಟಿಕ್, ಮುಖಕ್ಕೆ ಪೌಡರ್, ಬಳೆತೊಟ್ಟುಕೊಳ್ಳುವುದು ಮೇಕಪ್ ಮುಂತಾದವುಗಳನ್ನು ಮಾಡಿಕೊಳ್ಳುತ್ತಾರೆ. ಸದಾ ಗಂಡಿನ ಆಕರ್ಷಣೆಯೆಡೆಗೆ ತುಡುಯುತ್ತಾರೆ, ಹೆಣ್ಣು ಮಕ್ಕಳ ಜೊತೆ ಆಟವಾಡಲು ಇಷ್ಟಪಡುತ್ತಾರೆ. ಅನೇಕ ಕೋಥಿಗಳಿಗೆ ತಮ್ಮೊಳಗೆ ಹೆಣ್ಣಿನ ಭಾವನೆ ಇರುವುದನ್ನು ಚಿಕ್ಕ ವಯಸ್ಸಿಗೆ ಗುರ್ತಿಸಿಕೊಳ್ಳುತ್ತಾರೆ. ತಮ್ಮ ಹೆಣ್ಣಿನ ಭಾವನೆ, ನಡೆ ನುಡಿಗಳಿಂದಾಗಿ ಕುಟುಂಬದಿಂದ, ಶಾಲೆಯಲ್ಲಿ ಉಪಾಧ್ಯಾಯರುಗಳಿಂದ, ಇತರೆ ಸಹಪಾಠಿಗಳಿಂದ ಅವಕೃಪಗೆ, ಹಿಯಾಳಿಕೆಗೆ ಒಳಗಾಗುತ್ತಾರೆ. ಅನೇಕ ಜನ ಕುಟುಂಬದ ಅವಕೃಪೆಗೆ ಮತ್ತು ದೌರ್ಜನ್ಯಕ್ಕೆ ಒಳಗಾಗಿ ಮನೆ ಬಿಟ್ಟು ಹೊರಗೆ ಹೋಗುತ್ತಾರೆ, ಶಾಲೆಯಲ್ಲಿನ ತಾರತಮ್ಯದಿಂದ ಬಹುತೇಕ ಕೋಥಿಗಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಾರೆ. ಹೀಗೆ ಶಾಲೆ ಬಿಟ್ಟವರ ಸಂಖ್ಯೆ ಹೆಚ್ಚಾಗಿದ್ದು ಅವರಿಗೆ ಆರ್ಥಿಕ ಮತ್ತು ಉದ್ಯೋಗಾವಕಾಶಗಳೂ ಕಡಿಮೆ.

2. ಡಬಲ್ ಡೇಕರ್‌ಗಳು : ಇವರು ಸಲಿಂಗಕಾಮಿ/ದ್ವಿಲಿಂಗಕಾಮಿ ಪುರುಷರು. ಕೆಲವು ಬಾರಿ ಹೆಣ್ಣಿನ ರೀತಿ, ಕೆಲವು ಬಾರಿ ಗಂಡಿನ ರೀತಿ ವರ್ತಿಸುತ್ತಾರೆ. ಲೈಂಗಿಕತೆಯಲ್ಲಿ ತಮ್ಮಗಿಂತ ಕೆಳಗೆ ಇರುವ, ಹೆಣ್ಣಿನ ಭಾವನೆ ಇರುವ ಕೋಥಿಗಳ ಜೊತೆ ಇವರು ಲೈಂಗಿಕವಾಗಿ ಮತ್ತು ಸಾಮಾಜಿಕವಾಗಿ ಗಂಡಿನ ಪಾತ್ರ ವಹಿಸುತ್ತಾರೆ. ಲೈಂಗಿಕತೆಯಲ್ಲಿ ತಮಗಿಂತ ಗಡಸಾಗಿ, ಪಂತಿಗಳ ರೀತಿ ವರ್ತಿಸುವವರ ಜೊತೆ ಇವರು ಹೆಣ್ಣಿನ ಪಾತ್ರ ವಹಿಸುತ್ತಾರೆ. ಇವರು ಸಲಿಂಗಕಾಮಿ/ದ್ವಿಲಿಂಗಕಾಮಿ ಜನರಾಗಿದ್ದರೂ ಅನೇಕ ಸಂಧರ್ಭಗಳಲ್ಲಿ ಮನೆಯವರ ಒತ್ತಾಯಕ್ಕೆ ಮಣಿದು ಬಲವಂತದ ಮದುವೆ ಮಾಡಿಕೊಂಡು ಮಾನಸಿಕವಾಗಿ ಅಸಾಹಯಕವಾಗಿರುತ್ತಾರೆ. ಅನೇಕ ಜನ ಬಲವಂತದ ಮದುಮೆಂದ ತೊಳಲಾಟಕ್ಕೆ ಸಿಕ್ಕಿ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಉದಾಹರಣೆಗಳಿವೆ.

3. ಜೋಗಪ್ಪಂದಿರು : ನಮ್ಮ ಭಾರತೀಯ ಧಾರ್ಮಿಕ ಸಾಂಪ್ರದಾಯಗಳಲ್ಲಿ ದೇವರಿಗೆ ಸೇವೆಯಾಗಿ ದಾಸ ದಾಸಿಯರನ್ನು ಕುಟುಂಬದವರು ಮಕ್ಕಳನ್ನು ಬಿಡುವುದು ಪದ್ಧತಿ. ಇವರು ದೇವರ ಜೊತೆ ಮದುವೆಯಾಗಿ ಬದುಕುವವರು. ಗಂಡಸರನ್ನೂ ಈ ರೀತಿ ದೇವರಿಗೆ ಮದುವೆ ಮಾಡಿ ಬಿಡುತ್ತಾರೆ. ಇದು ಬಹುತೇಕ ಬಲವಂತದ್ದು ಎಂದು ಹೇಳಲಾಗುವುದಿಲ್ಲ. ಇಂತಹ ಸಂಪ್ರದಾಯಗಳಲ್ಲಿ ಜೋಗಪ್ಪಂದಿರು ಬರುತ್ತಾರೆ. ಕರ್ನಾಟಕದಲ್ಲಿ ಯೆಲ್ಲಮ್ಮ ದೇವರಿಗೆ ಗಂಡಸರನ್ನು ಬಿಟ್ಟವರಾಗಿ ಜೋಗಪ್ಪಂದಿರು ಆಗುತ್ತಾರೆ. ಇವರು ಹೆಣ್ಣಿನ ಭಾವನೆಯುಳ್ಳವರು ಮತ್ತು ಹೆಂಗಸರ ಉಡುಪನ್ನು ಧರಿಸಿ ದೇವರ ಪೂಜೆಯನ್ನೂ ಮಾಡುತ್ತಾರೆ.

4. ಲೆಸ್ಬಿಯನ್‌ಗಳು : ಹೆಣ್ಣಾಗಿ ಹುಟ್ಟಿ ಮತ್ತೊಬ್ಬ ಹೆಣ್ಣಿನ ಜೊತೆ ಲೈಂಗಿಕ ಆಕರ್ಷಣೆಗೆ ಒಳಗಾಗುವವರು. ಇವರಲ್ಲಿ ಫೆಮ್ ಮತ್ತು ಬುಚ್ ಎಂಬ ಎರಡು ವರ್ಗಗಳುಂಟು.

ಫೆಮ್ : ಇವರು ಮುಖ್ಯವಾಗಿ ಹೆಣ್ಣಾಗಿ ಹುಟ್ಟಿ ಹೆಣ್ಣಿನ ರೀತಿಯಲ್ಲಿಯೇ ಭಾವನೆಯನ್ನು ವ್ಯಕ್ತಪಡಿಸುತ್ತಾ ಮತ್ತೊಂದು ಹೆಣ್ಣನ್ನು ಲೈಂಗಿಕವಾಗಿ ಇಷ್ಟಪಡುತ್ತಾರೆ. ಇವರನ್ನು ಗುರುತಿಸುವುದು ಕಷ್ಟ, ಇವರೂ ಕೂಡ ತಮ್ಮ ಲೈಂಗಿಕತೆಯನ್ನು ಅಷ್ಟು ಸುಲಭವಾಗಿ ಹೊರಗೆ ಹಾಕಲು ಸಾಧ್ಯವಿಲ್ಲ, ಇವರ ಭಾವನೆ ಗೊತ್ತಾದ ಕೂಡಲೇ ಕುಟುಂಬದಿಂದ ಗೃಹ ಬಂಧನಕ್ಕೆ ಒಳಗಾಗುತ್ತಾರೆ. ಬಹುತೇಕವಾಗಿ ತಮ್ಮ ಸಂಗಾತಿಂದ ಬೇರ್ಪಡಿಸಿ ಬಲವಂತದ ಮದುವೆಗೆ ದೂಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಫೆಮ್‌ಗಳು ಆತ್ಮಹತ್ಯೆಗೆ ಶರಣಾಗುತ್ತಾರೆ.

ಬುಚ್ : ಇವರು ಮುಖ್ಯವಾಗಿ ಹೆಣ್ಣಾಗಿ ಹುಟ್ಟಿ ಗಂಡಿನ ರೀತಿ ಬದುಕಲು ಇಷ್ಟಪಡುತ್ತಾರೆ. ಗಂಡಿನ ರೀತಿ ಪ್ಯಾಂಟ್, ಶರ್ಟ್, ಹೇರ್ ಕ್ರಾಪ್‌ಕಟ್, ತಮ್ಮ ನಡೆ ನುಡಿಯಲ್ಲಿಯೂ ಗಂಡಿನ ರೀತಿ ವರ್ತಿಸುತ್ತಾರೆ. ಹೆಣ್ಣನ್ನು ಪ್ರಧಿನಿಧಿಸುವ ತಮ್ಮ ದೇಹದ ವಿವಿಧ ಅಂಗಗಳನ್ನು ತೆಗೆದು, ಗಂಡಿನ ರೀತಿಯಲ್ಲಿ ಇರಲು ಇಷ್ಟಪಡುತ್ತಾರೆ.

5. ಸಲಿಂಗಕಾಮಿ ಗಂಡಸರು : ಗಂಡಾಗಿ ಹುಟ್ಟಿ ಗಂಡಿನ ಜೊತೆ ಲೈಂಗಿಕ ಆಕರ್ಷಣೆಗೆ ಒಳಗಾಗುವವರು. ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಇರುವ ಎಲ್ಲಾ ಕೋತಿಗಳು, ಡಬ್ಬಲ್ ಡೆಕರ್‌ಗಳು ಸಲಿಂಗ ಕಾಮಿ ಗಂಡಸರು.

6. ದ್ವಿಲಿಂಗಕಾಮಿ ಹೆಂಗಸರು : ಹೆಣ್ಣಾಗಿ ಹುಟ್ಟಿ ಹೆಣ್ಣಿನ ಜೊತೆಲ್ಲಿಯೂ ಹಾಗೂ ಗಂಡಸಿನ ಜೊತೆಯಲ್ಲಿಯೂ ಲೈಂಗಿಕ ಆಕರ್ಷಣೆಗೆ ಒಳಗಾಗುವವರು.

7. ದ್ವಿಲಿಂಗಕಾಮಿ ಗಂಡಸರು : ಗಂಡಾಗಿ ಹುಟ್ಟಿ ಹೆಣ್ಣಿನ ಜೊತೆಲ್ಲಿಯೂ ಹಾಗೂ ಗಂಡಸಿನ ಜೊತೆಯಲ್ಲಿಯೂ ಲೈಂಗಿಕ ಆಕರ್ಷಣೆಗೆ ಒಳಗಾಗುವವರು.

8. ಗೇಗಳು : ಇಂಗ್ಲೀಷ್ ಬಲ್ಲ ಮೇಲ್ವರ್ಗದ ದ್ವಿಲಿಂಗಕಾಮಿ/ಸಲಿಂಗಕಾಮಿ ಪುರುಷರು.

9. ಹೆಣ್ಣಾಗಿ ಹುಟ್ಟಿ ಗಂಡಾಗಿ ಲಿಂಗ ಬದಲಾಸಿಕೊಂಡವರು : ಹೆಣ್ಣಾಗಿ ಹುಟ್ಟಿ ಗಂಡಿನ ಭಾವನೆಯನ್ನು ಹೊಂದಿ ಗಂಡಸಿನ ತರಹ ಜೀನನ ನಡೆಸುವವರು.

10. ಟ್ರಾನ್ಸ್ ಸೆಕ್ಸುಯಲ್‌ಗಳು : ಶಸ್ತ್ರ ಚಿಕಿತ್ಸೆಯ ಮುಖಾಂತರ ಲಿಂಗಬದಲಾವಣೆ ಮಾಡಿಸಿಕೊಂಡವರು.(ಗಂಡಾಗಿ ಹುಟ್ಟಿ ಹೆಣ್ಣಾಗಿ, ಹೆಣ್ಣಾಗಿ ಹುಟ್ಟಿ ಗಂಡಾಗಿ) ಗಂಡಾಗಿ ಹುಟ್ಟಿ ತಮ್ಮ ದೇಹದ ಬೇಡವಲ್ಲದ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿ ತಮ್ಮ ಭಾವನೆಗೆ ಪೂರಕವಾದ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಜೋಡಿಸಿಕೊಳ್ಳುವ ಮೂಲಕ ಹೆಣ್ಣಾಗುವ, ಹೆಣ್ಣಾಗಿ ಹುಟ್ಟಿ ತಮ್ಮ ದೇಹದ ಬೇಡವಲ್ಲದ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿ ತಮ್ಮ ಭಾವನೆಗೆ ಪೂರಕವಾದ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಜೋಡಿಸಿಕೊಳ್ಳುವ ಮೂಲಕ ಗಂಡಾಗುವವರನ್ನು ಟ್ರಾನ್ಸ್ ಸೆಕ್ಸುಯಲ್ ಗಳೆಂದು ಕರೆಯಲಾಗುತ್ತದೆ.

11. ಟ್ರಾನ್ಸ್‌ಜೆಂಡರ್‌ಗಳು : ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಗಂಡಾಗಿ ಹುಟ್ಟಿ ಹೆಣ್ಣಾಗಿ ಜೀವನ ಮಾಡುವವರು, ಹೆಣ್ಣಾಗಿ ಹುಟ್ಟಿ ಗಂಡಾಗಿ ಜೀವನ ಮಾಡುವವರು)

ಚಿತ್ರಕೃಪೆ: newstatesman.com

1 ಟಿಪ್ಪಣಿ Post a comment
  1. Lakshmi's avatar
    Lakshmi
    ಫೆಬ್ರ 24 2011

    Good Article and Good information

    ಉತ್ತರ

Leave a reply to Lakshmi ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments