ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 25, 2011

8

ಜೋತಿಷ್ಯ ಎಂಬ ಹಗಲು ದರೋಡೆ!

‍uniquesupri ಮೂಲಕ

– ಸುಪ್ರೀತ್ ಕೆ.ಎಸ್

ಒಂದಕ್ಕೆ ಎರಡು ಪಟ್ಟು ಹಣ ಕೊಡುತ್ತೇವೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿ ಓಡಿ ಹೋಗುವ ವಂಚಕರನೇಕರ ಬಗೆಗೆ ಜನರು ಮಾಧ್ಯಮಗಳಲ್ಲಿ ದಿನವೂ ನೋಡುತ್ತಾರೆ. ಕಣ್ಣೆದುರೇ ಹಣ ಕಳೆದುಕೊಂಡು ಬೆಪ್ಪರಾಗಿ, ಅಸಹಾಯಕರಾಗಿ ನಿಂತ ಗ್ರಾಹಕರನ್ನೂ ಕಂಡಿರುತ್ತಾರೆ. ಹಣ ದ್ವಿಗುಣ, ಲಾಟರಿಯಂತಹ ಪ್ರಲೋಭನೆಗಳಿಗೆ ಒಳಗಾಗದೆ, ವಂಚನೆಯಿಂದ ದೂರ ಉಳಿದವರು ಕೆಲವು ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಂಡಿರುತ್ತಾರೆ. ಅವೆಂದರೆ: ನ್ಯಾಯಯುತವಾಗಿ ಈ ಮನುಷ್ಯ ಅತೀ ಕಡಿಮೆ ಸಮಯದಲ್ಲಿ ಹಣವನ್ನು ದ್ವಿಗುಣಗೊಳಿಸುವುದಕ್ಕೆ ಹೇಗೆ ಸಾಧ್ಯ? ಹಾಗೆ ಹಣ ದ್ವಿಗುಣಗೊಳಿಸುವ ಯಾವ ವ್ಯಾಪಾರ, ತಂತ್ರಗಾರಿಕೆ ಈತನಿಗೆ ಗೊತ್ತು? ನಮಗೆ ಎರಡು ಪಟ್ಟು ಹಣ ಹಿಂದಿರುಗಿಸುವುದಕ್ಕೆ ಈತನಿಗೆ ಅಥವಾ ಈತನ ಸಂಸ್ಥೆಗೆ ಎಲ್ಲಿಂದ ಸಂಪತ್ತಿನ ಮೂಲವಿದೆ? ನಾನು ಬೆವರು ಸುರಿಸಿ ದುಡಿಯದೆ, ನನ್ನ ಪರಿಶ್ರಮ ಇಲ್ಲದೆ, ನನ್ನ ಪ್ರತಿಭೆಯ ವಿನಿಯೋಗವಿಲ್ಲದೆ ಸುಲಭವಾಗಿ ಹಣವನ್ನು ಪಡೆಯುವುದು ನೈತಿಕವಾಗಿ ನನಗೆ ಸಮ್ಮತವೇ? ಪ್ರತಿಯೊಬ್ಬರೂ ಹೀಗೇ ಹಣ ಮಾಡುವ ವಿಧಾನ ಕಂಡುಕೊಂಡರೆ ನಿಜವಾದ ಪರಿಶ್ರಮ, ಪ್ರತಿಭೆ, ಬದ್ಧತೆ, ತಾಂತ್ರಿಕ ಕೌಶಲ್ಯ ಬೇಡುವ ಕೆಲಸಗಳನ್ನು ಮಾಡುವವರು ಯಾರು?

ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮನುಷ್ಯನಿಗೆ ಸಹಜವಾಗಿ ತನ್ನ ಮೇಲೆ ಆತ್ಮವಿಶ್ವಾಸವಿರುತ್ತದೆ. ತನ್ನ ದುಡಿಮೆಯ ಮೇಲೆ ನಂಬಿಕೆಯಿರುತ್ತದೆ. ನೈತಿಕವಾಗಿ ಈತ ಸದೃಢನಾಗಿರುತ್ತಾನೆ. ಯಾವನಾದರೂ ವಂಚಕ, “ಈ ನಮ್ಮ ಯೋಜನೆಯಲ್ಲಿ ಹಣ ತೊಡಗಿಸಿ ನಿಮಗೆ ಒಂದೇ ತಿಂಗಳಲ್ಲಿ ಹಣ ದ್ವಿಗುಣಗೊಳಿಸಿ ಕೊಡುತ್ತೇವೆ.”, “ನಿಮ್ಮ ಹಣವನ್ನು ನಾವು ಟೀಕ್ ಮರ ಮೊದಲಾದ ಬೆಲೆಬಾಳುವ ಸಂಪತ್ತಿನಲ್ಲಿ ಹೂಡುತ್ತೇವೆ, ಐದು ವರ್ಷದಲ್ಲಿ ಕೋಟ್ಯಾಧಿಪತಿಯಾಗುವಿರಿ” ಎಂಬ ಪ್ರಲೋಭನೆಗಳನ್ನು ಒಡ್ಡಿದರೆ, ಆತನಿಗೆ ಎಂಥದ್ದೇ ಆರ್ಥಿಕ ಮುಗ್ಗಟ್ಟಿದ್ದರೂ, ಸ್ಪಷ್ಟವಾದ ಪ್ರಶ್ನೆಗಳು ಹಾಗೂ ಸಂಶಯಿಸಿ ಪರೀಕ್ಷಿಸುವ ಬುದ್ಧಿಯಿರುವ ಆತ ಮೋಸ ಹೋಗುವುದಿಲ್ಲ. ಇಂತಹ ವಂಚಕರಿಂದ ಪ್ರಾರಂಭದ ಮಟ್ಟಿಗೆ ಒಂದಷ್ಟು ಮಂದಿ ನಿಜವಾಗಿ ಹಣ ದ್ವಿಗುಣಗೊಳಿಸಿಕೊಂಡರೂ, ಹಡಗು ಸುಭದ್ರವಾಗಿ ತೇಲುತ್ತಿರುವಂತೆ ಕಂಡರೂ ಆತ ಸಂಯಮದಿಂದ ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ. ಇವೆಲ್ಲ ಹುಲಿಯನ್ನು ಬೇಟೆಯಾಡಲಿಕ್ಕೆ ಬೇಟೆಗಾರ ಒಡ್ಡುವ ಕುರಿ, ಮೇಕೆ, ಆಕಳು ಮೊದಲಾದ ಪ್ರಲೋಭನೆಗಳಿದ್ದ ಹಾಗೆ ಎಂಬುದು ಆತನಿಗೆ ಸ್ಪಷ್ಟವಾಗುತ್ತದೆ. ತನ್ನಲ್ಲಿರುವ ಹಣದಲ್ಲಿ ಇಂತಹ ವಂಚಕ ಏಜೆನ್ಸಿಗಳಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೊರೆ ಆಗಲಾರದು ಅನ್ನಿಸಿದರೂ, ಹೋದರೆ ಹೋದರೆ ಅಡಿಕೆ, ಬಂದರೆ ಆನೆ ಎಂಬಂತೆ ಕಣ್ಣು ಮುಚ್ಚಿ ಆತ ಮೋಸ ಹೋಗುವುದಕ್ಕೆ ಸಿದ್ಧನಾಗುವುದಿಲ್ಲ.

ಇಂತಹ ವಂಚಕರ ಜಾಲಕ್ಕೆ ಸಿಲುಕಿದ ಜನರ ಕುರಿತು ಅದೆಷ್ಟೇ ಅನುಕಂಪ, ಸಹಾನುಭೂತಿ ತೋರಿದರೂ ಯಾರೂ ಅವರ ಹೆಡ್ಡತನವನ್ನು, ಪ್ರಲೋಭನೆಗಳಿಗೆ ಬಲಿಯಾಗುವ ಪೆದ್ದುತನವನ್ನು ಸಮರ್ಥಿಸಿ ಅದು ಅವರ ದುಡ್ಡು ಅವರು ಹೇಗೆ ಬೇಕಾದರೂ ವಿನಿಯೋಗಿಸುತ್ತಾರೆ ಕೇಳುವುದಕ್ಕೆ ನಮಗೇನು ಹಕ್ಕಿದೆ ಎಂದು ಸಮರ್ಥಿಸುವುದಿಲ್ಲ. ಹೀಗೆ ಹಣವನ್ನು ಹೂಡಿ ರಿಟರ್ನ್ಸ್‌ಗಾಗಿ ಕಾಯುವುದರಿಂದ ಅವರ ಮನಸ್ಸಿಗೆ ಎಂಥದ್ದೋ ನೆಮ್ಮದಿ ಸಿಕ್ಕಬಹುದು, ನಾಳಿನ ಬದುಕಿನ ಕುರಿತು ಆತ ಆಶಾವಾದಿಯಾಗಬಹುದು ಎಂದು ತಿಪ್ಪೆ ಸಾರಿಸುವುದಿಲ್ಲ. ನಾವು ನೀವು ಈ ಪ್ರಕ್ರಿಯೆಯನ್ನು ಕುರಿತು ಮಾತಾಡಿದರೆ ಅದೆಲ್ಲ ಬರಿಯ ಬಾಯಿಚಪಲವಾಗುತ್ತದೆ, ಸಮಾಜ ವಿಜ್ಞಾನಿಗಳು, ಮನಃಶಾಸ್ತ್ರಜ್ಞರು ಇದರ ಕುರಿತು ಅಧ್ಯಯನ ನಡೆಸಿ ಇದರಿಂದ ಜನರಿಗೆ ಏನು ಅಪಾಯವಿದೆ ಎನ್ನುವುದನ್ನು ಹೇಳಬೇಕು ಎಂದು ತಮ್ಮ ಅಜ್ಞಾನ, ನಿರ್ದಿಷ್ಟ ವಿವೇಕದ ಅಭಾವವನ್ನು ಮರೆಮಾಚಲು ‘ಚಿಂತಕ’ರು ಟೊಂಕ ಕಟ್ಟಿ ನಿಲ್ಲುವುದಿಲ್ಲ.

ಈಗ ಮೇಲಿನ ವಿಚಾರವನ್ನೇ ಬೇರೊಂದು ಬಗೆಯ ವಂಚನೆಗೆ ತುಸು ಒಗ್ಗಿಸೋಣ. ಇವತ್ತು ನೂರು ರುಪಾಯಿ ಕೊಟ್ಟರೆ ನಾಳೆ ಇನ್ನೂರು ರೂಪಾಯಿ ಕೊಡುತ್ತೇವೆ ಎನ್ನುವ ಪ್ರಲೋಭನೆ ಮೋಸ ಹೋಗುವವನಲ್ಲಿ ಎಂಥದ್ದೋ ಉತ್ಸಾಹವನ್ನು ಮೂಡಿಸುತ್ತದೆ, ವಂಚಕರು ನೀಡುವ ಭರವಸೆಗಳು ಹುಸಿಯೇ ಆದರೂ ಅದನ್ನು ಕೇಳುವಾಗ, ಕಲ್ಪಿಸಿಕೊಳ್ಳುವಾಗ ಕಣ್ಣುಗಳು ಮಿನುಗುತ್ತಿರುತ್ತವೆ. ಹಾಗೆ ನೋಡಿದರೆ ಹಣ ದ್ವಿಗುಣಗೊಳಿಸಿಕೊಡುವ ಪ್ರಲೋಭನೆ ತುಂಬ ದೊಡ್ಡ ಭರವಸೆಯೇನಲ್ಲ. ಏಕೆಂದರೆ ನೂರು ರುಪಾಯಿಗೆ ಪ್ರತಿಯಾಗಿ ದೊರೆಯುವ ಇನ್ನೂರು ರುಪಾಯಿ ಖರ್ಚಾಗಿ ಹೋಗುತ್ತದೆ. ಅಲ್ಲದೆ ಹಣ ಎಂಬುದು ಕೈಗೆಟಕುವ, ಇಂದ್ರಿಯ ಗ್ರಹ್ಯವಾದ ವಸ್ತು. ಇದನ್ನು ದ್ವಿಗುಣ ಗೊಳಿಸಿಕೊಡುತ್ತೇವೆ ಎಂದು ನಂಬಿಸಿ ವಂಚಿಸುವವರು ಪಿಕ್ ಪಾಕೆಟರ್ ದರ್ಜೆಯ ವಂಚಕರು ಎನ್ನಬಹುದು. ಹಾಗಿದ್ದರೆ ಹಗಲು ದರೋಡೆ ಕೋರರ ದರ್ಜೆ ಯಾವುದು ಎಂದಿರಾ? ಅವರೇ ನಮ್ಮ ಜೋತಿಷಿಗಳು!

ನಮ್ಮ ಸುತ್ತ ಮುತ್ತಲ ಜಗತ್ತು ಕಾರ್ಯ ಕಾರಣ ಸಂಬಂಧವನ್ನು ಹೊಂದಿದೆ. ಇಲ್ಲಿ ಜರುಗುವ ಎಲ್ಲಾ ಕ್ರಿಯೆಗಳಿಗೆ ತಾರ್ಕಿಕವಾದ ವಿವರಣೆ ಸಾಧ್ಯವಿದೆ. ಯಾರು ಬೇಕಾದರೂ ಪರೀಕ್ಷಿಸಿ ನೋಡಬಹುದಾದ, ಪರೀಕ್ಷಕನ ನಂಬಿಕೆ, ಅಪನಂಬಿಕೆಗಳಿಂದ ಬಾಧಿತವಾಗದ ನಿಯಮಗಳಿಗೆ ಅನುಸಾರವಾಗಿ ಭೌತಿಕ ಜಗತ್ತು ವರ್ತಿಸುತ್ತಿದೆ ಎನ್ನುವುದು ಇದುವರೆಗಿನ ವಿಜ್ಞಾನ ನಮಗೆ ತಿಳಿಸಿಕೊಟ್ಟಿರುವ ಜಗತ್ತಿನ ಪಾಠ. ವಿಜ್ಞಾನ ಎಂದೊಡನೆ ಪಾಶ್ಚಾತ್ಯರ ಆಧುನಿಕ ವಿಜ್ಞಾನ ಎಂದು ಗ್ರಹಿಸಬೇಕಿಲ್ಲ. ಮನುಷ್ಯನ ವಿವೇಕ ಕಣ್ತೆರದ ಯಾವುದೇ ಸಮುದಾಯ, ನಾಗರೀಕತೆ ಬೆಳೆಸಿದ ವಿಜ್ಞಾನವೂ ಸಹ ಇದೇ ತಳಹದಿಯ ತಿಳುವಳಿಕೆಯನ್ನು ಒದಗಿಸಿದೆ. ಹಾಗಾಗಿಯೇ ಭಾರತದ ಪುರಾತನ ಗ್ರಂಥ ಶತಪಥ ಬ್ರಾಹ್ಮಣದಲ್ಲಿ ಅಂದಾಜಿಸಲಾದ ಗಣಿತದ constant `pi’ ಬೆಲೆಯನ್ನು ಇಂದು ನಾವು ಪರೀಕ್ಷಿಸುವುದು ಒಪ್ಪುವುದು. ಇಂತಹ ವಿಜ್ಞಾನದ ಆಧಾರವಿದೆ ಎಂದು ಹೇಳಿಕೊಂಡೇ ಜೋತಿಷಿಗಳು ಬುರುಡೆ ಬಿಡುವುದು.

ಗಮನಿಸಿ ನೋಡಿ, ಈ ಜೋತಿಷಿಗಳ ವಂಚನೆಯ ಸೂಕ್ಷ್ಮತೆ ಹಾಗೂ ಹರವು ಎಂಥದ್ದು ಎಂದು. ಮೇಲಿನ ವಂಚನೆಯ ಪ್ರಕರಣವಾದರೋ ಒಂದು ಬಗೆಯ ತಾರ್ಕಿಕ ವ್ಯವಹಾರವನ್ನು ಅವಲಂಬಿಸಿರುತ್ತದೆ. ಇವತ್ತು ನೂರು ರುಪಾಯಿ ಪಡೆದವನು ಒಂದಲ್ಲ ಒಂದು ದಿನ ಇನ್ನೂರು ರೂ ಕೊಡಲೇ ಬೇಕು. ಇಲ್ಲವಾದರೆ ಆತ ವಂಚಕ ಎನ್ನುವುದು ಬಯಲಾಗುತ್ತದೆ. ಆದರೆ ಜೋತಿಷಿಯ ವಂಚನೆಯ ಮರ್ಮವೇ ಬೇರೆ. ಆತ ಈ ಕ್ಷುಲ್ಲಕ, ನಶ್ವರ, ಭೌತಿಕ ಜಗತ್ತಿನದೇನನ್ನೂ ಕೊಡುವೆನೆಂದು ಪ್ರಲೋಭನೆ ಒಡ್ಡುವುದಿಲ್ಲ. ಆತನದೆಲ್ಲಾ ದೈವಿಕ, ಅತಿಭೌತಿಕ, ಇಂದ್ರಿಯಾತೀತ ಸರಕೇ. ಆತ ನಿಮ್ಮ ಗ್ರಹಗತಿಯ ಬಗ್ಗೆ ಮಾತನಾಡುತ್ತಾನೆ, ಜಾತಕ ದೋಷದ, ಶನಿಯ ವಕ್ರ ದೃಷ್ಟಿಯ ಬಗ್ಗೆ ಮಾತನಾಡುತ್ತಾನೆ, ರಾಹುಕಾಲದ ಕೆಡುಕಿನ ಬಗ್ಗೆ ಎಚ್ಚರಿಸುತ್ತಾನೆ. ಇಂತಿಂತಹ ಪೂಜೆ, ವೃತ, ನೇಮ ನಿಷ್ಠೆ ಮಾಡಿದರೆ ಮಕ್ಕಳಾಗುವುದು, ಕೆಲಸದಲ್ಲಿ ಯಶಸ್ಸು ಲಭಿಸುವುದು, ವ್ಯವಹಾರದಲ್ಲಿ ಲಾಭವಾಗುವುದು, ಕಾನೂನು ಸಮರದಲ್ಲಿ ವಿಜಯಿಯಾಗುವುದು, ಶತ್ರು ನಿವಾರಣೆಯಿಂದ ಹಿಡಿದು ಪ್ರಳಯದಿಂದ ಜಗತ್ತನ್ನು ರಕ್ಷಿಸುವ ಭರವಸೆಯನ್ನೂ ನೀಡುತ್ತಾರೆ. ಯಾವುದನ್ನೂ ಪರೀಕ್ಷಿಸಲಾಗುವುದಿಲ್ಲ. ಹೀಗಾಗಿ ಈ ವಂಚಕರು ಭೌತಿಕ ಸಂಗತಿಗಳಾದ ಹಣ, ಹೆಣ್ಣಿನ ವ್ಯವಹಾರಕ್ಕೆ ಬರದಿದ್ದರೆ ವಂಚನೆ ಬೆಳಕಿಗೆ ಬರುವುದೇ ವಿರಳ. ಮೇಲ್ನೋಟಕ್ಕೆ ವಂಚನೆ ಕಾಣಬರದೆ ಇರುವುದರಿಂದಲೇ ಇವುಗಳ ಕುರಿತು ನಿರ್ದಿಷ್ಟವಾದ ಖಂಡನೆ ವ್ಯಕ್ತವಾಗುವ ಬದಲಿಗೆ ಎಲ್ಲರೂ ತಿಪ್ಪೆ ಸಾರಿಸುವ ಕೆಲಸ ಮಾಡುತ್ತ, ಚಿಂತಕರೆನಿಸಿಕೊಂಡವರು ಅಡ್ಡಗೋಡೆಯ ಮೇಲೆ ದೀಪವಿಡುವ ಮಾತುಗಳನ್ನಾಡುವುದು.

ಆದರೆ ಮೇಲಿನ ಪ್ರಕರಣದಲ್ಲಿನ ವಿವೇಕಯುತ ವ್ಯಕ್ತಿ ಕೇಳಿಕೊಳ್ಳುವ ಪ್ರಶ್ನೆಗಳ ಮಾದರಿಯಲ್ಲಿ ಜೋತಿಷಿಗಳ ಬಳಿಗೆ ತೆರಳುವವರು ಪ್ರಶ್ನಿಸಿಕೊಂಡರೆ, ಜೋತಿಷಿಯ ಹಿನ್ನೆಲೆ, ಆತನ ತಿಳುವಳಿಕೆ, ತಮಗೆ ತಿಳಿಯದ ಸಂಗತಿ, ಸಾಧ್ಯವಾಗದ ಸಾಧನೆ ಯಾವ ಮೂಲದಿಂದ ಆತನಿಗೆ ತಿಳಿದಿದೆ, ಸಿದ್ಧವಾಗಿದೆ ಎನ್ನುವುದನ್ನು ಪರೀಕ್ಷಿಸಿದರೆ ಎಂತಹದೇ ಕಷ್ಟಗಳು ಬದುಕಿನಲ್ಲಿದ್ದರೂ ಮೋಸ ಹೋಗುವ ಪ್ರಲೋಭನೆಗಳಿಗೆ ಈಡಾಗುವುದಿಲ್ಲ. ಆದರೆ ಈ ಪ್ರಶ್ನಿಸುವ ಮನೋಭಾವವೇ ಜನರಲ್ಲಿ ಕಾಣುವುದಿಲ್ಲ. ಕುರುಡು ನಂಬಿಕೆ, ಕುರುಡು ಆರಾಧನೆ ನಮ್ಮ ಸಮಾಜವನ್ನು ವ್ಯಾಪಕವಾಗಿ ಆವರಿಸಿದೆ. ಓದಿಕೊಂಡವರು, ವಿದ್ಯಾವಂತರೇನು ಇದರಿಂದ ಹೊರತಲ್ಲ. ಪ್ರಶ್ನಿಸುವ ಮನೋಭಾವವಿಲ್ಲದ ವಿದ್ಯಾವಂತನೇ ಅತಿ ಹೆಚ್ಚಿನ ಮೌಢ್ಯಗಳಿಗೆ ಬಲಿಯಾಗಿರುತ್ತಾನೆ. ನಮ್ಮ ಮುಂದಿರುವ ಬಾಬಾಗಳು, ವಿವಿಧ ‘ಆನಂದ’ ಸ್ವಾಮಿಗಳು, ಅಮ್ಮ, ಅಪ್ಪಗಳು, ಶ್ರೀಶ್ರೀಗಳು ಮೊದಲಾದವರ ಸುತ್ತಮುತ್ತಲು ಇರುವವರು, ಅವರ ಪಿ.ಆರ್ ನೋಡಿಕೊಳ್ಳುತ್ತಿರುವವರು ಇಂತಹ ವಿದ್ಯಾವಂತರೇ. ಓದು, ಡಿಗ್ರಿ ಪಕ್ಕಕ್ಕಿರಲಿ ಸ್ವತಃ ವಿಜ್ಞಾನಿಯೇ ಆಗಿ ಕೆಲಸ ಮಾಡಿದರೂ ಬದುಕನ್ನು ಕಾಣುವ ದೃಷ್ಟಿಕೋನದಲ್ಲಿ ವೈಜ್ಞಾನಿಕತೆ , ಪ್ರಶ್ನಿಸುವ ಸ್ವಭಾವ, ಆತ್ಮವಿಶ್ವಾಸ, ಮನುಷ್ಯ ಪ್ರಯತ್ನದಲ್ಲಿನ ನಂಬಿಕೆ, ಅತಿ ಭೌತಿಕ ಪ್ರಲೋಭನೆಗಳಿಂದ ದೂರ ಉಳಿಯುವ ವಿವೇಕ ಇರುತ್ತದೆ ಎಂದು ಭಾವಿಸುವಂತಿಲ್ಲ. ಡಾ||ಭಗವಂತಂರಂತಹ ವಿಜ್ಞಾನಿ ಸಾಯಿಬಾಬಾನ ಪಾದ ಸೇರಿಕೊಂಡದ್ದು ಆಶ್ಚರ್ಯದ ವಿಷಯವೇನಲ್ಲ.

ಗಣಿತ, ವಿಜ್ಞಾನದ ಸಿದ್ಧಾಂತಗಳು, ಇಕ್ವೇಶನ್ನುಗಳು, ತತ್ವಗಳು, ನಿಯಮಗಳು ಮೊದಲಾದವುಗಳು ತಾವಾಗಿ ಏನನ್ನೂ ಮನುಷ್ಯನಲ್ಲಿ ರೂಪಿಸುವುದಿಲ್ಲ. ಇವುಗಳ ಅಧ್ಯಯನದಿಂದ, ಇವುಗಳ ಆಧಾರದಲ್ಲಿ ಜೀವನ ದೃಷ್ಟಿ ರೂಪಿಸಿಕೊಳ್ಳುವುದರಿಂದ ವೈಜ್ಞಾನಿಕ ಮನೋಭಾವ ಸಿದ್ಧಿತವಾಗುತ್ತದೆ. ಇಂತಹ ವೈಜ್ಞಾನಿಕ ಮನೋಭಾವ ನಿರಕ್ಷರ ಕುಕ್ಷಿಯಲ್ಲಿಯೂ ಇರಬಹುದು.

ಅತಿ ಭೌತಿಕ ಸಿದ್ಧಿಗಳನ್ನು, ದೈವ ಕೃಪೆಯನ್ನು, ಇಂದ್ರಿಯಾತೀತ ಅನುಭವವನ್ನು ಕೊಡುತ್ತೇವೆ ಎನ್ನುವ ಯಾವುದೇ ಭರವಸೆ ಕೊಡುವ ವ್ಯಕ್ತಿಯನ್ನು ವಂಚಕ ಎಂದೇ ಕಾಣಬೇಕು. ನಮ್ಮ ಕಣ್ಣ ಮುಂದೆ ಇರುವ ಇಂತಹ ‘ಸೆಲೆಬ್ರಿಟಿ ದೈವ ಪುರುಷರು, ಮಹಿಳೆಯರು’ ನಡೆಸುವ ವಂಚನೆ ಹಗಲು ದರೋಡೆಗಿಂತ ಘೋರವಾದದ್ದು. ಇವರಿಗೆ ಹೋಲಿಸಿದರೆ ಕುಟುಂಬ ಸಹಿತ ದೀಪ ಬೆಳಗಿದರೆ ಪ್ರಳಯ ತಪ್ಪಿಸಬಹುದೆನ್ನುವ ಬೃಹತ್ ಬ್ರಹ್ಮಾಂಡದ ಅವಿವೇಕಿ ಜೋತಿಷಿ ವಂಚನೆ ಯಕಶ್ಚಿತ ಎನ್ನಿಸುವಂಥದ್ದು!

ಅತಿಭೌತಿಕ, ಇಂದ್ರಿಯಾತೀಯ ಪ್ರಲೋಭನೆಗಳು ಪುರೋಹಿತಶಾಹಿಯ ಆಯುಧಗಳಾಗಿದ್ದವು. ಇಂದಿನ ಆಧುನಿಕೋತ್ತರ ಯುಗದಲ್ಲಿ ಅವುಗಳು ನಾನಾ ಹೆಸರುಗಳಲ್ಲಿ, ನಾನಾ ಸ್ವಾದಗಳಲ್ಲಿ ಎಲ್ಲರ ಕೈಗೆ ದಕ್ಕುತ್ತಿವೆ. ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳಾದ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಫೋನು, ಟಿವಿ, ಸ್ಯಾಟಲೈಟ್ ಡಿಶ್‌ಗಳು ಪಸರಿಸುತ್ತಿರುವಂತೆಯೇ ಅವುಗಳನ್ನಾಶ್ರಯಿಸಿ ಉಸಿರಾಡುವ ಪರಾವಲಂಬಿ ಜೀವಿಗಳಂತಹ ಇಂತಹ ವಂಚನೆಯ ಜಾಲವೂ ಪಸರಿಸುತ್ತಿದೆ. ದುರಂತವೆಂದರೆ ಇಂತಹ ವಿಜ್ಞಾನದ ಕೊಡುಗೆಗಳ ಫಲಾನುಭವಿಗಳಾದ ಯುವ ಜನತೆ, ಉದ್ಯೋಗಸ್ಥ ಮಹಿಳೆಯರು, ವಿದ್ಯಾವಂತರೇ ಈ ಪರಾವಲಂಬಿ ಜೀವಿಯ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ವೈಜ್ಞಾನಿಕ ಚಿಂತಕ ಡಾ. ಅಬ್ರಹಾಂ.ಟಿ.ಕೋವೂರ್ ಮಾತೊಂದನ್ನು ನೆನಪಿಸಿಕೊಳ್ಳುವೆ: “ಯಾವ ವ್ಯಕ್ತಿ ಪವಾಡವನ್ನು ಪರೀಕ್ಷೆಗ ಒಳಪಡಿಸಲು ಒಪ್ಪುವುದಿಲ್ಲವೋ ಅವನು ವಂಚಕ. ಯಾರು ಪವಾಡವನ್ನು ಪರೀಕ್ಷೆಗೆ ಒಳಪಡಿಸಲು ಹೆದರುತ್ತಾನೋ ಅವನೊಬ್ಬ ಯಕಶ್ಚಿತ್ತ. ಯಾರು ತನಿಖೆ ಮಾಡದೆ ಪವಾಡಗಳನ್ನು ನಂಬುತ್ತಾನೆಯೋ ಅವನು ಶತಮೂರ್ಖ” ಪವಾಡ ಎಂದರೆ ಭೌತಿಕ ನಿಯಮ ಮೀರಿದ ಕ್ರಿಯೆಗಳನ್ನು ನಡೆಸುತ್ತೇವೆಂದು ಹೇಳುವವರು, ಅಂತಹ ಜ್ಞಾನ ಇದೆಯೆಂದು ನಂಬಿಸುವವರು. ಇಂತಹ ವಂಚಕರ ಬಗ್ಗೆ ಎಚ್ಚರ ಬೇಕು, ಯಕಶ್ಚಿತರ ಕುರಿತು ಅನುಕಂಪ ಬೇಕಿಲ್ಲ, ಶತಮೂರ್ಖರು ಲೇವಡಿಗಷ್ಟೇ ಅರ್ಹರು.

(ಚಿತ್ರ ಕೃಪೆ : http://forastrologyzone.com)
8 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಫೆಬ್ರ 25 2011

    {ಓದು, ಡಿಗ್ರಿ ಪಕ್ಕಕ್ಕಿರಲಿ ಸ್ವತಃ ವಿಜ್ಞಾನಿಯೇ ಆಗಿ ಕೆಲಸ ಮಾಡಿದರೂ ಬದುಕನ್ನು ಕಾಣುವ ದೃಷ್ಟಿಕೋನದಲ್ಲಿ ವೈಜ್ಞಾನಿಕತೆ , ಪ್ರಶ್ನಿಸುವ ಸ್ವಭಾವ, ಆತ್ಮವಿಶ್ವಾಸ, ಮನುಷ್ಯ ಪ್ರಯತ್ನದಲ್ಲಿನ ನಂಬಿಕೆ, ಅತಿ ಭೌತಿಕ ಪ್ರಲೋಭನೆಗಳಿಂದ ದೂರ ಉಳಿಯುವ ವಿವೇಕ ಇರುತ್ತದೆ ಎಂದು ಭಾವಿಸುವಂತಿಲ್ಲ. ಡಾ||ಭಗವಂತಂರಂತಹ ವಿಜ್ಞಾನಿ ಸಾಯಿಬಾಬಾನ ಪಾದ ಸೇರಿಕೊಂಡದ್ದು ಆಶ್ಚರ್ಯದ ವಿಷಯವೇನಲ್ಲ}

    ವಿವೇಕ ಯಾರೊಬ್ಬನ ಸೊತ್ತಲ್ಲ. ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಟೀಕಿಸುವ ಲೇಖನವನ್ನು ಓದಲು ಕಷ್ಟ.

    ಉತ್ತರ
    • ರವಿ ಕುಮಾರ್ ಜಿ ಬಿ's avatar
      ರವಿ ಕುಮಾರ್ ಜಿ ಬಿ
      ಫೆಬ್ರ 25 2011

      ಸರಿಯಾಗಿ ಹೇಳಿದಿರಿ ಮಹೇಶರವರೆ , ರೈಲಿನಲ್ಲಿ ಕಳ್ಳತನ ವಾಗುತ್ತದೆಯೆಂದು ( ತಾನು ದರೋಡೆಗೆ ಒಳಗಾದೆ ಎಂದು??) ಪೂರ್ತಿ ರೈಲಿನಲ್ಲಿ ಪ್ರಯಣಿಸೋರು ಎಲ್ಲಾ ಕಳ್ಳರೇ ಅಥವಾ ರೈಲು ಇರೋದೇ ಕಳ್ಳರಿಗೊಸ್ಕರ ಅಂದ ಹಾಗಾಯ್ತು ಕಥೆ!!!! ವಂಚಕರು ಎಲ್ಲ ಕಡೆ ಇರುತ್ತಾರೆ ಸ್ವಾಮಿ …..ಯಾಕೆ ವಿಜ್ಞಾನದ ಹೆಸರು ಹೇಳಿಕೊಂಡು ವಂಚಿಸೋದಿಲ್ಲವೇ? ಹಾಗಂತ ವಿಜ್ಞಾನವೇ ಸುಳ್ಳು ಅಥವಾ ಪೊಳ್ಳು ಎನ್ನಲಾದೀತೆ? ಅದರಲ್ಲಿರುವ ಒಳ್ಳೆಯದನ್ನು ನಾವು ಹೇಗೆ ಉಪಯೋಗಿಸಿಕೊಂಡಿದ್ದೇವೆ ಅಥವಾ ಹೇಗೆ ಅರ್ಥೈಸಿಕೊಂಡಿದ್ದೇವೆ ಅನ್ನುವುದರಲ್ಲಿ ಒಳಿತು / ಕೆಡುಕು ಅಡಗಿದೆ.

      ಇತರರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪು ಎಂದು ನನ್ನ ಭಾವನೆ……ಹಾಗೆಯೇ ವಯಕ್ತಿಕ ಟೀಕೆ ಕೂಡ …….
      “” ಎಲ್ಲಿವರೆಗೆ ವಂಚನೆಗೊಳಗಾಗುವವರು ಇರುತ್ತಾರೋ ಅಲ್ಲಿವರೆಗೆ ವಂಚಿಸುವವರು ಇರುತ್ತಾರೆ. “”

      ಉತ್ತರ
      • ಮಹೇಶ ಪ್ರಸಾದ ನೀರ್ಕಜೆ's avatar
        ಮಹೇಶ ಪ್ರಸಾದ ನೀರ್ಕಜೆ
        ಮಾರ್ಚ್ 2 2011
  2. pavankannada@gmail.com's avatar
    ಮಾರ್ಚ್ 1 2011

    ಕೈಗೆ ಬಂದ ತುತ್ತನ್ನು ಕಸಿದು ಕೊಳ್ಳುವ ಕೆಲಸವನ್ನು ಮಾಡುತ್ತಿರುವ ಇವತ್ತಿನ ಕೆಲವು ಜೋತಿಷಿಗಳು, ಜನಸಾಮಾನ್ಯರ ಜೀವನದಲ್ಲಿ ಆಟವಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಲೇಖನ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ.

    ಉತ್ತರ
  3. Narendra Kumar.S.S's avatar
    Narendra Kumar.S.S
    ಮಾರ್ಚ್ 2 2011

    > ಡಾ||ಭಗವಂತಂರಂತಹ ವಿಜ್ಞಾನಿ ಸಾಯಿಬಾಬಾನ ಪಾದ ಸೇರಿಕೊಂಡದ್ದು ಆಶ್ಚರ್ಯದ ವಿಷಯವೇನಲ್ಲ
    ನಿಮಗೆ ಸಾಯಿಬಾಬಾರ ಕುರಿತಾಗಿ ನಂಬಿಕೆ ಇಲ್ಲದಿರಬಹುದು.
    ಆದರೆ, ಅವರ ವಯಸ್ಸಿಗಾದರೂ ಬೆಲೆಕೊಡುವುದು ಬೇಡವೇ?
    ನೀವು ಬರೆದಿರುವ ಪ್ರಸ್ತುತ ಲೇಖನಕ್ಕೂ ಸಾಯಿಬಾಬಾರಿಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಅವರ ಹೆಸರನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದನ್ನು ನಾನು ಖಂಡಿಸುತ್ತೇನೆ.

    ಜ್ಯೋತಿಷ್ಯದ ಹೆಸರಿನಲ್ಲಿ ಈ ದೇಶದಲ್ಲಿ ವಂಚನೆಗಳು ನಡೆದಿರುವುದು ನಿಜ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರದೇಶಗಳಲ್ಲೂ ವಂಚನೆಗೊಳಗಾದ ಜನರಿದ್ದಾರೆ.
    ಆದರೆ, 2Gಯಂತಹ ಮಹಾವಂಚನೆಗಳ ಮುಂದೆ ಇದು ಯಾವ ಮಹಾ!?
    ಜಗತ್ತಿನಲ್ಲಿ ಲಕ್ಷಾಂತರ, ಕೋಟ್ಯಾಂತರ ಹಣವುಳ್ಳ ಸಾಕಷ್ಟು ಜನರಿದ್ದಾರೆ.
    ಆದರೆ, ಅವರಲ್ಲಿ ಆ ಹಣವನ್ನು ಸದ್ವಿನಿಯೋಗ ಮಾಡುತ್ತಿರುವವರು ಬಹಳ ವಿರಳ.
    ಸಾಯಿಬಾಬಾರವರ ಪವಾಡಗಳ ಕುರಿತಾಗಿ ನೀವು ಏನೇ ಹೇಳಿದರೂ, ಅವರು ಮಾಡುತ್ತಿರುವ ಮಟ್ಟಿನ ಸೇವಾಕಾರ್ಯಗಳನ್ನು ಜಗತ್ತಿನಲ್ಲೇ ಯಾರೂ ಮಾಡುತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

    ಹೀಗಾಗಿ ನೀವು ಸಾಯಿಬಾಬಾರವರ ಕುರಿತಾಗಿ ಏಕವಚನದಲ್ಲಿ ಪ್ರಸ್ತಾಪಿಸಿ ಅಕ್ಷಮ್ಯ ಅಪರಾಧವನ್ನೇ ಮಾಡಿದ್ದೀರಿ.
    ನಿಮ್ಮ ಈ ಲೇಖನವನ್ನು ತಿದ್ದುಪಡಿ ಮಾಡಿ, ಸಾಯಿಬಾಬಾರವರ ಪ್ರಸ್ತಾಪನೆಯನ್ನು ತೆಗೆದು ಹಾಕುವಂತೆ “ನಿಲುಮೆ” ತಂಡಕ್ಕೆ ನಾನು ವಿನಮ್ರನಾಗಿ ಪ್ರಾರ್ಥಿಸುತ್ತಿರುವೆ.

    ಉತ್ತರ
  4. Alfred's avatar
    ಸೆಪ್ಟೆಂ 14 2011

    I’d like to thanks for the attempts you get in writing this posting. It has been an encouragement for me. I have transferred this to a friend. thankyou

    ಉತ್ತರ
  5. maaysa's avatar
    maaysa
    ಸೆಪ್ಟೆಂ 16 2011

    ಈ ಲೇಖನ ಒಂದು ಕೆಸರಿನಲ್ಲಿನ ತಾವರೆ. 🙂

    ಅಷ್ವೆಮೇಧ ಯಾಗದಿಂದ – ಅರಳಿ ಕತ್ತೆ ಸುತ್ತಿ ಬಸಿರಾಗುವ ತನಕ ಸುಜ್ಞಾನದ ಲೇಖನಗಳನ್ನು ಪ್ರಕಟಿಸುವ ‘ಪುಂಗವ’ 🙂

    ಉತ್ತರ
  6. murali's avatar
    murali
    ಆಗಸ್ಟ್ 23 2012

    ಸರಿಯಾಗಿ ಹೇಳಿದಿರಿ ಮಹೇಶರವರೆ , ರೈಲಿನಲ್ಲಿ ಕಳ್ಳತನ ವಾಗುತ್ತದೆಯೆಂದು ( ತಾನು ದರೋಡೆಗೆ ಒಳಗಾದೆ ಎಂದು??) ಪೂರ್ತಿ ರೈಲಿನಲ್ಲಿ ಪ್ರಯಣಿಸೋರು ಎಲ್ಲಾ ಕಳ್ಳರೇ ಅಥವಾ ರೈಲು ಇರೋದೇ ಕಳ್ಳರಿಗೊಸ್ಕರ ಅಂದ ಹಾಗಾಯ್ತು ಕಥೆ!!!! ವಂಚಕರು ಎಲ್ಲ ಕಡೆ ಇರುತ್ತಾರೆ ಸ್ವಾಮಿ …..ಯಾಕೆ ವಿಜ್ಞಾನದ ಹೆಸರು ಹೇಳಿಕೊಂಡು ವಂಚಿಸೋದಿಲ್ಲವೇ? ಹಾಗಂತ ವಿಜ್ಞಾನವೇ ಸುಳ್ಳು ಅಥವಾ ಪೊಳ್ಳು ಎನ್ನಲಾದೀತೆ? ಅದರಲ್ಲಿರುವ ಒಳ್ಳೆಯದನ್ನು ನಾವು ಹೇಗೆ ಉಪಯೋಗಿಸಿಕೊಂಡಿದ್ದೇವೆ ಅಥವಾ ಹೇಗೆ ಅರ್ಥೈಸಿಕೊಂಡಿದ್ದೇವೆ ಅನ್ನುವುದರಲ್ಲಿ ಒಳಿತು / ಕೆಡುಕು ಅಡಗಿದೆ.
    ಇತರರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪು ಎಂದು ನನ್ನ ಭಾವನೆ……ಹಾಗೆಯೇ ವಯಕ್ತಿಕ ಟೀಕೆ ಕೂಡ …….
    “” ಎಲ್ಲಿವರೆಗೆ ವಂಚನೆಗೊಳಗಾಗುವವರು ಇರುತ್ತಾರೋ ಅಲ್ಲಿವರೆಗೆ ವಂಚಿಸುವವರು ಇರುತ್ತಾರೆ. “”

    ಉತ್ತರ

Leave a reply to murali ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments