ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 26, 2011

3

ಆಧುನಿಕ ವಿಕ್ರಮನೂ ಬೇತಾಳನೂ

‍ನಿಲುಮೆ ಮೂಲಕ

ಸಾತ್ವಿಕ್  ಎನ್. ವಿ

ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ನಿಲುಮೆವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ನಿಲುಮೆವನ್ನು ಓದಲು ಹವಣಿಸುವಂತೆ ವಿಕ್ರಮನ ಈ ಕಾರ್ಯವು ಬೇತಾಳನಿಗೆ ಸೋಜಿಗವನ್ನುಂಟು ಮಾಡಿತು. ಹಿಡಿದ ಕೆಲಸ ಮಾಡೇ ತೀರುವ ವ್ಯಕ್ತಿಯನ್ನು ನೋಡಿ ಬೇತಾಳವು ರಾಜನಿಗೆ ‘ಅಯ್ಯ ವಿಕ್ರಮ ರಾಜ ನೀನು ಸಾಹಸಿಯೆಂದು ನಾನು ಬಲ್ಲೆ. ಆದರೆ ನಾನು ಮಾತಾಡದಿದ್ದರೆ ಆಗಾಗ ಗುಟ್ಕಾ ಅಗಿಯುವವರಂತೆ ನನ್ನ ಬಾಯಿಯು ನವನವ ಎನ್ನುತ್ತದೆ. ಆದುದರಿಂದ ನನ್ನಷ್ಟಕ್ಕೆ ನಾನು ಕಥೆ ಹೇಳುತ್ತಾ ಹೋಗುತ್ತೇನೆ. ಬೇಕಿದ್ದರೆ ಕೇಳು, ಇಲ್ಲದಿದ್ದರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಿರುವ ಕನ್ನಡ ಪಠ್ಯದಂತೆ ಬಿಟ್ಟುಬಿಡು. ನಾನು ಆ ಕನ್ನಡ ಉಪನ್ಯಾಸಕನಂತೆ ನನ್ನ ಕೆಲಸ ಮಾಡುತ್ತೇನೆ’ ಎಂದು ಹೇಳಿ ಅವನ ಒಪ್ಪಿಗೆಯನ್ನು ಕೇಳದೇ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಕಂಡೆಯಾ ಎಂಬ ದೇಶದಲ್ಲಿ ಅಲ್ಲಿನ ರಾಣಿಯು ತನ್ನ ಮಂತ್ರಿಯೊಡಗೂಡಿ ರಾಜ್ಯವಾಳುತ್ತಿದ್ದಳು. ಅಲ್ಲಿನ ರಾಜನ ಬಗೆಗಿನ ಅನುಕಂಪೆ ಮತ್ತು ತನ್ನ ದೇಶಕ್ಕೆ ಸೊಸೆಯಾಗಿ ಬಂದ ವ್ಯಕ್ತಿಯ ಕುರಿತು ಪ್ರೀತಿ ವಿಶ್ವಾಸಗಳಿದ್ದವು. ಆದರೆ ಕೆಲವು ಪ್ರಜೆಗಳಿಗೆ ಆಕೆಯು ತಮ್ಮ ರಾಜ್ಯವಾಳುವುದು ಇಷ್ಟವಿರಲಿಲ್ಲ. ಇಂಥ ರಾಣಿಗೆ ರೇಣುಕಾಂಬೆ ಎಂಬ ಸ್ನೇಹಿತೆಯಿದ್ದಳು. ರಾಣಿಯ ಅತ್ಮೀಯಳಾದ ಕಾರಣ ಅರಮನೆಯ ರಾಜಕೀಯದಲ್ಲಿ ರೇಣುಕಾಂಬೆಯ ಮಾತಿಗೆ ಬೆಲೆಯಿತ್ತು.

ಹೀಗೆ ಕಾಲ ಕಳೆಯುತ್ತಿರುವಾಗ ರೇಣುಕಾಂಬೆಗೆ ಅನ್ಯದೇಶದಲ್ಲಿರುವ ಪ್ರಗತಿಯುಳ್ಳ ಸ್ತ್ರೀಯರನ್ನು ನೋಡಿ ತನ್ನ ದೇಶದಲ್ಲಿಯು ಇಂಥ ವ್ಯವಸ್ಥೆ ಜಾರಿಗೆ ತಂದರೆ ಹೇಗೆ ಎಂಬ ಯೋಚನೆ ಬಂದದ್ದೇ ತಡ ಈ ಕಾರ್ಯಕ್ರಮದ ಮೊದಲ ಭಾಗವಾಗಿ ಯಾವ ಯೋಜನೆಯನ್ನು ತರವುದು ಎಂದು ಬಾಲ ಸುಟ್ಟ ಬೆಕ್ಕಿನ ಹಾಗೇ ಅತ್ತಂದಿತ್ತ ತಿರುಗಹತ್ತಿದಳು. ಹಿಂದೆ ತನ್ನ ಪಕ್ಕದ ಮನೆಯ ಹೆಂಗಸು ಬಟ್ಟಿ ಸೇಂದಿ ಕುಡಿದು ತನ್ನ ನಿರ್ಲಜ್ಜ ಮತ್ತು ಅವಿವೇಕಿ ಗಂಡನಿಗೆ ತದುಕುತ್ತಿದ್ದುದು ನೆನಪು ಬಂತು. ಹೆಣ್ಣಿಗೆ ಧೈರ್ಯ ಕೊಡುವ ಮದ್ದು ಇದುವೇ ಎಂದು ಬಗೆದಳು. ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಎಂಬುದು ಆ ಯೋಜನೆಯ ಧ್ಯೇಯ ವಾಕ್ಯವಾಗಿತ್ತು. ಯೋಜನೆ ಬಂದದ್ದೇ ವೇಗದಲ್ಲಿ ಅದಕ್ಕೆ ವಿರೋಧವು ಕಂಡು ಬಂತು. ಕಂಡಿಯಾ ದೇಶದಲ್ಲಿ ಏನೇ ಬಂದರೂ ಅದಕ್ಕೆ ವಿರೋಧ ಮಾಮೂಲಾದರೂ ಈ ಪ್ರತಿಭಟನೆಯು ಮಾಮೂಲಾಗಿರಲ್ಲಿಲ್ಲ. ಈ ಪ್ರತಿಭಟನೆಯು ನಾಯಕತ್ವವನ್ನು ಆಮೋದ ಮುತ್ತಪ್ಪನೆಂಬ ಅವಿವಾಹಿತನು ವಹಿಸಿದ್ದನು. ತದುಕುವುದೇ ತನ್ನ ಸಂಸಾರ ಮತ್ತು ದೇಶಕ್ಕೆ ಮಾಡುವ ಉಪಕಾರವೆಂದು ಭಾವಿಸಿದ್ದನು.

ಹೀಗೆ ಪರವಿರೋಧಗಳು ಕಂಡು ಬರುತ್ತಿರುವ ವೇಳೆಗೆ ತೀವ್ರ ರಾಜಕೀಯ ಜಟಾಪಟಿಗಳು ಆರಂಭವಾದುವು. ಅಶ್ಚರ್ಯವೆಂಬಂತೆ ರಾಜಕೀಯ ಹಾವು ಮುಂಗುಸಿಗಳಂತಿದ್ದ ಇವರು ಫೆಬ್ರವರಿ ೧೪ನೇ ತಾರೀಖು ಮಾಯವಾಗಿಬಿಟ್ಟರು. ರಾಣಿಯು ಸೇರಿದಂತೆ ಎಲ್ಲರಿಗೂ ಇದು ಬಿಡಿಸಲಾರದ ಕಗ್ಗಂಟಾಯಿತು. ಎಷ್ಟೋ ದಿನಗಳ ನಂತರ ದಂಪತಿಗಳಾಗಿ ರಾಜ್ಯದಲ್ಲಿ ಕಾಣಿಸಿಕೊಂಡರು. ಯಥಾ ಸ್ಥಿತಿ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಸರಣಿ ಕಾರ್ಯಕ್ರಮ ಶುರುವಾಯಿತು. ಕೆಲವೇ ದಿನಗಳಲ್ಲಿ ಏನೂ ಅಗಲೇ ಇಲ್ಲವೇನೋ ಎಂಬಂತೆ ದೇಶವು ಮಾಮೂಲು ಸ್ಥಿತಿಗೆ ಬಂದಿತು.

ಇಷ್ಟು ಹೇಳಿದ ಬೇತಾಳವು ‘ಅಯ್ಯ ದೊರೆಯೇ ಏನಿದು ವಿಪರ್ಯಾಸ ಹಾವು ಮುಂಗುಸಿಯಂತೆ ಇದ್ದವರು ದಂಪತಿಗಳಾಗುವುದೆಂದರೇನು? ಇಂಥ ಒಗಟನ್ನು ನೀನು ಬಿಡಿಸಬೇಕು. ಇಲ್ಲವಾದಲ್ಲಿ ಓದುವುದನ್ನು ಬಿಟ್ಟು ಹೇಗೆ ಕಾಪಿ ಮಾಡುವದು ಎಂದು ಯೋಚಿಸುವ ಪರೀಕ್ಷಾರ್ಥಿಯಂತೆ ನಿನ್ನ ಬುದ್ಧಿಯು ವ್ಯರ್ಥವಾಗುವುದು. ಅದ್ದರಿಂದ ನೀನು ಉತ್ತರ ಹೇಳು ಎಂದಿತು. ಇದರಿಂದ ಉತ್ತೇಜಿತನಾದ ವಿಕ್ರಮನು ತನ್ನ ಶರತ್ತನ್ನು ಮರೆತು ಉತ್ತರ ಪ್ರಾರಂಭಿಸಿದನು. ‘ಎಲವೋ ಬೇತಾಳವೇ ರೇಣುಕಾಂಬೆಯು ಮತ್ತು ಅಮೋದ ಮುತ್ತಪ್ಪನು ಕಾಲೇಜಿನಲ್ಲಿ ಸಹಪಾಠಿಗಳು. ರೇಣುಕಾಂಬೆಯು ಕಲಿಯುವುದರಲ್ಲಿ ಬುದ್ಧಿವಂತೆ. ಮುತ್ತಪ್ಪನಿಗೋ ಈಕೆಯ ಹಿಂದೆ ತಿರುವುದೇ ತನ್ನ ಜೀವನದ ಬಹುದೊಡ್ದ ಭಾಗವೆಂದು ಭಾವಿಸಿದ್ದನು. ಪರೀಕ್ಷೆಯಲ್ಲೇ ಪಾಸಾಗದ ಈತನು ಆಕೆಯ ಪ್ರೇಮ ಪರೀಕ್ಷೆಯಲ್ಲೂ ಸೋತನು. ಪೋಕರಿಗಳ ಕೊನೆಯ ಸ್ಥಳವಾದ ರಾಜಕೀಯಕ್ಕೆ ಇಳಿಯುವ ವೇಳೆಗೆ ರೇಣುಕಾಂಬೆಯೇ ಇತನಿಗೆ ಎದುರಾಳಿಯಾಗಿದ್ದಳು. ತನ್ನ ಹಳೆಯ ಭಗ್ನಪ್ರೇಮವು ಮತ್ತೊಮ್ಮೆ ನೆನಪಿಗೆ ಬಂದು ಕೋಪದಿಂದ ಆಕೆಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದನು. ಆದರೆ ರಾಜಕೀಯ ಪ್ರವೀಣೆಯಾದ ಆಕೆಯು ಸಂದರ್ಭಕ್ಕೆ ತಕ್ಕಂತೆ ಆತನನ್ನೇ ತನ್ನ ಪತಿಯಾಗಿ ಸ್ವೀಕರಿಸಿ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟಳು. ಫೆಬ್ರವರಿ ೧೪ ರ ‘ದಾರಿಯಲ್ಲಿ ಜೊತೆಯಾಗಿ ನಡೆಯಿರಿ, ಮಾಂಗಲ್ಯ ಭಾಗ್ಯ ಪಡೆಯಿರಿ’ ಎಂಬ ಮುತ್ತಪ್ಪನ ಯೋಜನೆಯಲ್ಲೇ ವಿವಾಹವಾದರು. ಅಲ್ಲಿಗೆ ಇಬ್ಬರ ವೈಯುಕ್ತಿಕ ಮತ್ತು ರಾಜಕೀಯ ಆಕಾಂಕ್ಷೆಗಳು ಈಡೇರಿದಂತಾಯಿತು. ಇದು ಕಂಡೆಯಾ ದೇಶದಲ್ಲಿ ಜನರಿಗೆ ಗಾಳಿ ಸೇವಿಸಿದಷ್ಟೇ ಸಹಜ. ಅದುದರಿಂದ ಅಲ್ಲಿನ ಪ್ರಜೆಗಳಿಗೆ ಏನೂ ಅನಿಸಲಿಲ್ಲ. ಆದರೆ ಬೇರೆಯವರ ದು:ಖದಲ್ಲಿಯೇ ಟಿ.ಅರ್.ಪಿ ಏರಿಸಿಕೊಳ್ಳುವ ಮಾಧ್ಯಮಗಳು ಮಾತ್ರ ತನ್ನ ದೇಶದ ಮಾರ್ಯಾದೆಯನ್ನು ಬೇರೆ ದೇಶಗಳ ಮುಂದಿಟ್ಟು ದುಡ್ಡು ಮಾಡಿದವು. ಹಾಗಾಗಿ ನೀನು ಚಿಂತೆ ಮಾಡಬೇಡ’ ಎಂದನು.

ಇದನ್ನೇ ಕಾಯುತ್ತಿದ್ದ ಬೇತಾಳವು ಪ್ರತಿಭಾವಂತನಿಂದ ಉದ್ಯೋಗವು ಕೈ ತಪ್ಪುವಷ್ಟೇ ವೇಗವಾಗಿ ಹಾರಿ ಮರದಲ್ಲಿ ಜೋತಾಡತೊಡಗಿತು.

ಚಿತ್ರ ಕೃಪೆ : ಚಂದಮಾಮ

Read more from ಲೇಖನಗಳು
3 ಟಿಪ್ಪಣಿಗಳು Post a comment
  1. chukkichandira's avatar
    ಫೆಬ್ರ 26 2011

    ನೆನಪಿನಲ್ಲಿಡಬೇಕಾದ ವಾಕ್ಯಗಳು 🙂
    * ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿ
    * ನಿಲುಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ನಿಲುಮೆವನ್ನು ಓದಲು ಹವಣಿಸುವಂತೆ
    * ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಿರುವ ಕನ್ನಡ ಪಠ್ಯದಂತೆ
    * ಓದುವುದನ್ನು ಬಿಟ್ಟು ಹೇಗೆ ಕಾಪಿ ಮಾಡುವದು ಎಂದು ಯೋಚಿಸುವ ಪರೀಕ್ಷಾರ್ಥಿಯಂತೆ
    * ಪ್ರತಿಭಾವಂತನಿಂದ ಉದ್ಯೋಗವು ಕೈ ತಪ್ಪುವಷ್ಟೇ ವೇಗವಾಗಿ

    ಹ್ಹ ಹ್ಹ ಸಾತ್ವಿಕ್ ಸಾರ್, ಶೈಲಿ, ಕುಟುಕು ಎಲ್ಲ ಸೂಪರ್

    ಉತ್ತರ
  2. pavan's avatar
    ಫೆಬ್ರ 26 2011

    supar sir

    ಉತ್ತರ
  3. ರವಿ's avatar
    Ravi
    ಫೆಬ್ರ 26 2011

    Sathwik, Real good concept! Expecting more on this Vikram-Betala series on current and past issues.

    ಉತ್ತರ

Leave a reply to chukkichandira ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments