ವಾಘಾ ಮತ್ತು ದೇಶಭಕ್ತಿಯ ಮಧ್ಯೆ ಅರ್ಧ ಘಂಟೆ
ಸಂತೋಷ್ ಎನ್. ಆಚಾರ್ಯ
ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್ ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ. ಪರಾಟಗಳು, ಚಪಾತಿಗಳು, ಘೀ ರೈಸ್, ಡ್ರೈ ಫ್ರುಟ್ಸ್ ಮತ್ತು ಪ್ರತಿ ಪಲ್ಯದಲ್ಲೂ ಮೆರೆದ ದೇಸಿ ಘೀ ಪ್ರಭಾವದಿಂದ ಆಹಾರದ ಟ್ಯಾಂಕ್ ಆಗಿದ್ದ ಹೊಟ್ಟೆ ಮೆಲ್ಲಗೆ ನರಳುತ್ತಿತ್ತು. ಅಚೆ ಈಚೆ ತಡಕಾಡಿದಾಗ ಸಿಕ್ಕ ಮೊಬೈಲು ಘಂಟೆ ಒಂಭತ್ತು ತೋರಿಸುತ್ತಿತ್ತು. ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿರುವಾಗ ಒಳಗಿನಿನಿಂದ ರವಿಂದರನ ಅಮ್ಮನ ಕರೆ ಬಂತು. ಅಪ್ಪ ಅಮ್ಮನ ಆಜ್ಞೆಗಳ ಕಟ್ಟಾ ಪಾಲಕನಾದ ರವಿಂದರ್ ಪಟ್ಟನೆ ಎದ್ದ. ನನಗೂ ಮಲಗಿದ್ದು ಸಾಕು ಎಂದು ಅನಿಸಿದ್ದರಿಂದ ಎದ್ದು ಬ್ರಶ್ ಮಾಡತೊಡಗಿದೆ.
ಅಮೃತ್ ಸರ್ ನಮ್ಮ ಉತ್ತರ ಭಾರತದ ಪಯಣದ ಪ್ರಮುಖ ಗುರಿಯಾಗಿತ್ತು. ಪಂಜಾಬಿನ ಸಾಂಸ್ಕೃತಿಕ ರಾಜಧಾನಿಯನ್ನು ಅದಕ್ಕೂ ನನಗೆ ಟಿವಿಯಲ್ಲಿ ನೋಡಿದ್ದ ಚಿನ್ನದ ಗುರುದ್ವಾರವನ್ನು ನೋಡಲೇ ಬೇಕೆಂಬುದು ಮಹಾದಾಸೆಯಾಗಿತ್ತು. ಕಳೆದ ೩ ದಿನಗಳಂತೆ ಪರಾಟದ ನಿರೀಕ್ಷೆಯಿದ್ದವರಿಗೆ ಬಂದದ್ದು ಪೂರಿ. ‘ದಿನ ಈ ರೀತಿ ಆರಂಭವಾಗಬೇಕೆ?’ ಎಂದು ಅತುಲ್ ಬಳಿ ಅತ್ತು ಕಷ್ಟ ಪಟ್ಟು ತಿಂದೆ. ಪರಾಟ, ತಿಂದ ನಂತರ ಹೊಟ್ಟೆ ಭಾರ ಮಾಡಿಸಿದರೆ ಪೂರಿ, ಮನಸ್ಸು ನೋಡಿದ ಕೂಡಲೇ ಬೇಡ ಅನ್ನುವುದು ಆಫೀಸಿನ ಕ್ಯಾಂಟಿನ್ ನಲ್ಲಿ ಒಮ್ಮೆ ತಿಂದ ಕಚಡಾ ಪೂರಿ ಕಾರಣವೋ ಅಥವಾ ನಾವು ಒಮ್ಮೆ ಮನೆಯಲ್ಲಿ ಮಾಡಿದ ಪ್ರಯೋಗ ಕಾರಣವೋ ಗೊತ್ತಿಲ್ಲ. ಆದರೆ ಅದರ ನಂತರ ಮಾತ್ರ ಪೂರಿ ಮತ್ತು ನಾನು ತುಂಬಾ ದೂರ!! ಬೇಗ ಬೇಗ ಸ್ನಾನ ಮಾಡಿ ನಾನು ಮತ್ತು ಅತುಲ್ ತಯಾರಾದರೆ ರವಿಂದರ್ ಇನ್ನೂ ತಯಾರಾಗಿರಲಿಲ್ಲ. ಎಲ್ಲಾ ಗಡಿಬಿಡಿಯಲ್ಲಿ ಹೊರಟಾಗ ಅವನ ತಂಗಿ ಕೂಡ ಬಂದಿದ್ದು ಮನಸ್ಸಿಗೆ ಸರಿಯೆನಿಸಲಿಲ್ಲ. ಹುಡುಗಿಯೊಂದಿಗೆ ಸುತ್ತಾಡಲು ನನಗೇನು ಅಭ್ಯಂತರವಿಲ್ಲ ಆದರೆ ನಾವು ಹುಡುಗರು ಗುಂಪಿನಲ್ಲಿರುವಾಗ ಯಾರಾದರೂ ಹುಡುಗಿಯರು ನಮ್ಮೊಂದಿಗಿರುವುದು ಸ್ವಲ್ಪ ನನಗೂ ಮತ್ತು ನನ್ನ ಗೆಳೆಯರಿಗೂ ಕಸಿವಿಸಿ. ಎಲ್ಲಾ ಮುಗಿಸಿ ಅಮೃತ್ ಸರ್ ಬಸ್ ಹಿಡಿದೆವು. ಬಸ್ಸಿನಲ್ಲಿ ಇನ್ನೊಂದು ರೌಂಡು ನಿದ್ದೆ ಮುಗಿಸಿ ಅಮೃತ್ ಸರ್ ನಲ್ಲಿ ಇಳಿಯುವಾಗ ತಲೆಯ ಮೇಲೆ ಬೆಂಕಿ ಇಟ್ಟಂತಾಯಿತು. ಲಗುಬಗನೆ ಜೇಬಿನಿಂದ ಕರವಸ್ತ್ರ ತೆಗೆದುಕೊಂಡು ತಲೆಗೆ ಕಟ್ಟಿಕೊಂಡೆವು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜಲಿಯನ್ ವಾಲ ಬಾಗ್ ಮತ್ತು ಗೋಲ್ದನ್ ಟೆಂಪಲ್ ನ ದರ್ಶನ ಮಾಡಿ ಲಂಗರಿನಲ್ಲಿ ಗಡದ್ದಾಗಿ ಊಟ ಮಾಡುವಾಗ ಘಂಟೆ ೪. ಎಲ್ಲಾ ಬೇಗ ಮುಗಿದಿದ್ದು ಅತುಲ್ ಮತ್ತು ರವಿಂದರ್ ನ ವಾಘಾ ಬಾರ್ಡರ್ ನೋಡುವ ಅಸೆಯನ್ನು ಇನ್ನೂ ಜೀವಂತವಾಗಿ ಉಳಿಸಿತ್ತು. ನಿಜವಾಗಿ ಹೇಳುವುದಾದರೆ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಬಾಡಿಗೆಗೆ ಸಿಕ್ಕ ಓಮ್ನಿಯಲ್ಲಿ ಕೂತು ಹೊರಟೆವು.
ಜೀವನವೆಂದರೆ ಅಲ್ಪವಿರಾಮಗಳ ಸಂತೆ,ಕೊನೆಗೊಂದು ಪೂರ್ಣವಿರಾಮ – ೧
– ಚೇತನ್ ಕೋಡುವಳ್ಳಿ
ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ!
ಕರ್ನಾಟಕ ಸರ್ಕಾರ ಯಾಕೆ ‘ಥಿಂಕ್’ ಮಾಡಲ್ಲ ?
ರಶ್ಮಿ ಕಾಸರಗೋಡು
ಕರ್ನಾಟಕದಲ್ಲಿ ‘ಪವರ್’ ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ ಆಯ್ತು. ಅದೂ ಬುರುಡೆ ಬಿಟ್ಟದ್ದೋ ಅಂತಾ ಗೊತ್ತಿಲ್ಲ 🙂
ಅಲ್ಲಾ ಮಾರಾಯ್ರೆ … ಏನೇ ಹೇಳಿ ಬುರುಡೆ ಅಥವಾ ಇನ್ಯಾವುದೇ ಬಲ್ಬ್ ಉರಿಯಲು ವಿದ್ಯುತ್ ಬೇಕಲ್ವಾ? ವಿದ್ಯುತ್ ಇಲ್ಲದಿದ್ದರೆ ಬಲ್ಬ್ ವಿಷ್ಯ ಯಾಕೆ ಬೇಕು?
ಕರ್ನಾಟಕದಲ್ಲಿ ವಿದ್ಯುತ್್ನ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾಕೆ ವಿಫಲವಾಗುತ್ತಿದೆ? (ರಾಜ್ಯದ ರಾಜಕೀಯ ಡೊಂಬರಾಟ ವಿದ್ಯುತ್ತಿಗೇ ‘ಶಾಕ್ ನೀಡಿದೆಯೇ ಎಂಬುದು ನನ್ನ ಅನುಮಾನ)
ಸದ್ಯ ಈ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೌರಶಕ್ತಿಯ ಮೊರೆ ಯಾಕೆ ಹೋಗಬಾರದು? ಇಲ್ಲಿ ಲಭ್ಯವಾಗುವಂತಹ ಸೌರಶಕ್ತಿಯನ್ನು ಸದುಪಯೋಗಿಸಿಕೊಂಡರೆ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ತನ್ನು ಪಡೆಯಬಹುದು ಎಂಬ ಯೋಚನೆ ಸರ್ಕಾರಕ್ಕೆ ಹೊಳೆದಿಲ್ಲವೇ? ಇಲ್ಲಿರುವ ಕಟ್ಟಡಗಳ ಮೇಲೆ ಸೋಲಾರ್ ಪೇನಲ್ ಹಾಕಿಸಿದ್ರೆ ಕನಿಷ್ಠ ನಿತ್ಯೋಪಯೋಗಿ ವಿದ್ಯುತ್ ಪಡೆಯಬಹುದು ಎಂಬುದರ ಬಗ್ಗೆ ಜನರು ಯಾಕೆ ಯೋಚನೆ ಮಾಡಲ್ಲ? ಇವತ್ತೇನೊ ಶೋಭ ಕರಂದ್ಲಾಂಜೆಯವ್ರು ಇನ್ಮೇಲೆ ಮನೆ ಕಟ್ಟೊವ್ರಿಗೆ ಸೋಲಾರ್ ಕಡ್ಡಾಯ ಮಾರಯ ಅಂದಿದ್ದಾರೆ.ಏನ್ ಆಗುತ್ತೋ ನೋಡೋಣ
ಮತ್ತಷ್ಟು ಓದು 
ಪ್ರೀತಿಸಿದರೆ………!
ಮೊನ್ನೆ ಆಫೀಸಿಗೆ ಹೋದಾಗ ನಂಗೆ ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು ಒಪ್ಪಲಿಲ್ವಂತೆ ..ತಂದೆ ತಾಯಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು ..!ಎತ್ತ ಸಾಗುತ್ತಿದೆ ಇಂತಹ ಕುರುಡು ಪ್ರೀತಿ.. ಇವಳಿಗೆ ನಾವು ಏನು ಕಮ್ಮಿ ಮಾಡಿದ್ದೇವೋ ಅನ್ನೋ ಅವಳ ಅಪ್ಪನ ಅಳು ಇನ್ನೂ ಕಿವಿಯಲ್ಲಿದೆ.. ಬಹುಶಃ ಅವರಿಗೆ ಗೊತ್ತಿರಲ್ಲಿಕ್ಕಿಲ್ಲ, ಏನೂ ಕಮ್ಮಿ ಮಾಡಿಲ್ಲ ಆದ್ದರಿಂದಲೇ ಹೀಗಾಗಿದ್ದು ಅಂತ ..ಮುದ್ದು ಸ್ವಲ್ಪ ಕಮ್ಮಿ ಮಾಡಿದ್ದಿದ್ದರೆ ಹೊರಗಿನ ಪ್ರೀತಿಯನ್ನು ಹೀಗೆ ಸತ್ತು ಹೋಗುವಷ್ಟು ಹಚ್ಚಿಕೊಂಡಿರುತ್ತಿರಲಿಲ್ಲವೇನೋ .. ಸಾಮನ್ಯವಾಗಿ ಯಾವ ಪ್ರೀತಿ ಸಿಗೊದಿಲ್ಲವೋ ಅದನ್ನೇ ಹುಡುಕಿಕೊಂಡು ಹೋಗುತ್ತದೆ ಮನಸ್ಸು..ಹೆತ್ತವರ ಪ್ರೀತಿ ಸ್ವಲ್ಪ ಕಡಿಮೆಯಾಗಿದ್ದರೆ ಮನಸ್ಸು ಅದಕ್ಕೆ ಹಾತೊರೆಯುತಿತ್ತೇನೋ..!ಮೊದಲೆಲ್ಲ ಪ್ರೀತಿ ಪ್ರೇಮಕ್ಕೆ ಅದರದೇ ಆದ ಅರ್ಥ, ವ್ಯಾಖ್ಯಾನ ಇದ್ದಿತ್ತು …ಪವಿತ್ರ ಪ್ರೇಮದ ಹಿನ್ನಲೆಯಲ್ಲಿ ಅದೆಷ್ಟೋ ದಂತ ಕಥೆಗಳಿವೆ ,ಗ್ರಂಥಗಳಿವೆ .ಮರೆಯಲಾಗದ ಹಾಡುಗಳಿವೆ ,ಶ್ರೇಷ್ಠ ಚಿತ್ರ ಗಳಿವೆ, ಅದ್ಭುತ ಸ್ಮಾರಕಗಳಿವೆ … ಪ್ರೀತಿಸಿ ಅವರನ್ನು ಪಡೆಯುವ ಅಥವಾ ಅದರ ಅಡೆ ತಡೆಗಳನ್ನು ಎದುರಿಸುವ ಅಥವಾ ಅಳಿದು ಅಮರರಾದ ಹಿನ್ನಲೆಗಳವು..ಈಗಿನ ಪ್ರೀತಿಯೋ ಅದರ ಸ್ಥಿತಿಯೋ ಅವರಿಗೆ ಪ್ರೀತಿಯಾಗಬೇಕು.. ಪ್ರೀತಿ ಅಂದರೆ ದಿನಕ್ಕೊಂದು ಕಡೆ ಪಾರ್ಕು ,ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್ಸ್ /ಗರ್ಲ್ ಫ್ರೆಂಡ್ಸ್ ಗಳೊಂದಿಗೆ ಸುತ್ತಾಡಿ ,ರಾತ್ರಿ ಇಡೀ ಚಾಟ್ ಮಾಡಿ ಇನ್ ಬಾಕ್ಸ್ ಗೆ ಮಿಸ್ ಯು ಗಳನ್ನು ಕಳಿಸೋದಾ?,ಕಾಲೇಜಲ್ಲೋ ಅಥವಾ ಆಫಿಸಲ್ಲೋ ಹಿಂದಿನ ಸಲದ ಮಾತು ,ನೋಟ,ಸ್ಪರ್ಶ, ಚಿಕ್ಕ ಜಗಳ ಗಳ ನೆನಪಿಸಿಕೊಳ್ಳುತ್ತಾ ಮೊಬೈಲಿನ ಸ್ಕ್ರೀನ್ ಸೇವೆರ್ ನಲ್ಲಿನ ಅವರ ಫೋಟೋವನ್ನೇ ನೋಡೋದಾ? ಅಥವಾ ಊಟ ನಿದ್ದೆಯ ಪರಿವೆ ಇರದೇ ಅವರನ್ನೇ ಧ್ಯಾನಿಸುತ್ತ ಕೂರೋದಾ ? ಮತ್ತಷ್ಟು ಓದು 
‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !
ಪಾಕಿಸ್ತಾನದ ಬಳಿ ಭಾರತಕ್ಕಿಂತ ೧೦೦ಕ್ಕೊ ಹೆಚ್ಚು ಅಣ್ವಸ್ತ್ರಗಳಿವೆ ಅನ್ನೋ ಸುದ್ದಿ ಮೊನ್ನೆ ಪತ್ರಿಕೆಗಳಲ್ಲಿ ಬಂದಿದೆ.ಆದರೆ ಭಾರತೀಯರು ಈ ಸುದ್ದಿಗೆ ಗಲಿಬಿಲಿಯಾಗಬೇಕಿಲ್ರಿ! ಯಾಕೆ ಅಂತಿರಾ? ಯಾಕಂದ್ರೆ ‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !
ಇದೇನಿದು ಯಾವ್ದೋ ಬಟ್ಟೆ ತೊಳ್ಯೋ ಸೋಪ್ ಜಾಹಿರಾತಿನ ಡೈಲಾಗ್ ತರ ಇದ್ಯಲ್ಲಪ್ಪ ಅಂತಿರಾ?ರೀ,ಇದು ಆ ತರ ನಿಂಬೆ ಅಲ್ಲ.ನಾನ್ ಹೇಳೋಕ್ ಹೊರಟಿದ್ದು,ಕಳೆದ ಬಾರಿ ಒಂದಿಷ್ಟು ಜನ ಎಂ.ಎಲ್.ಎಗಳು ಹೋಗಿ ಗೋವಾದಲ್ಲಿ ಕೂತು,ಅಲ್ಲಿಗೆ ಕುಮ್ಮಿನು ಹೋದ್ಮೇಲೆ,ಈ ಕಡೆ ಯಡ್ಡಿ ಕುರ್ಚಿ ಗಡ-ಗಡ ನಡುಗಲು ಶುರು ಮಾಡಿದಾಗ.ವಿಧಾನ ಸೌಧದ ಎದುರು ಕಾಣಿಸಿತ್ತಿಲ್ಲ ಹರಿಶಿನ ಕುಂಕುಮ ಹಚ್ಚಿದ ನಿಂಬೆಹಣ್ಣು ಅದರ ಬಗ್ಗೆ. ಮತ್ತೀಗ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಕಾಣಿಸಿಕೊಂಡ ಪವರ್ಫುಲ್ ನಿಂಬೆಯ ಬಗ್ಗೆ! (ಆ ಪರಿ ಕಾಡ್ತಾ ಇರೋ ರಾಜಭವನದ ಬಳಿ ಯಾಕೆ ಇನ್ನ ನಿಂಬೆ ಬಿದ್ದಿಲ್ಲ ಅಂತ ನಾನ್ ಕೇಳೋಲಪ್ಪ 😉 ).ಇದೇ,ಈ ಮಂತ್ರಿಸಿದ ನಿಂಬೆಹಣ್ಣು ಕಣ್ರೀ ಭಾರತದ ಶಕ್ತಿಯಾಗಬೇಕು.ಅದ್ಹೆಂಗೆ ಸಿವಾ ಅಂತಿರ? ಹೇಳ್ತೀನಿ ಕೇಳಿ…
ಈಗಾಗ್ಲೇ ಚೀನಾ ಅನ್ನೋ ನಂಬಿಕೆಗೆ ಅರ್ಹವಲ್ಲದ ದೇಶ ಭಾರತವನ್ನ ಇರೋ ಬರೋ ದಿಕ್ಕುಗಳಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಡೆಯಿಂದ ಸುತ್ತಿ ಕುಳಿತಿದೆ.ಹೀಗೆ ಪಾಕಿಸ್ತಾನ,ಶ್ರೀಲಂಕ,ಬಾಂಗ್ಲ,ನೇಪಾಳ,ಬರ್ಮಾ ಕಡೆ ಹರಡಿಕೊಂಡಿರೋ ಚೀನಿಗಳು ವಾಪಸ್ ಚೈನಗೆ ಹೋಗೋ ಹಾಗೆ ಮಾಡ್ಬೇಕು.ಹೇಗ್ ಮಾಡೋದು?
ಹೆಗಂದ್ರೆ,ಹೇಗಿದ್ರು ಅಲ್ಲಿ ಪ್ರಜಾಪ್ರಭುತ್ವಕ್ಕಾಗಿ ಚಿಕ್ಕದಾಗಿ ಕೂಗೆದ್ದಿದೆ.ಅಲ್ಲಿನ ಜನರಿಗೆ ದೈತ್ಯ ಶಕ್ತಿ ಆವಹನೆಯಾಗುವಂತೆ ಭಾರತ ನಿಂಬೆ ಶಕ್ತಿಯನ್ನ ಪ್ರಯೋಗಿಸ್ಬೇಕು ರೀ,ಆಗ ಅಲ್ಲಿ ರೊಚ್ಚಿಗೆಳೋ ಚೀನೀ ಜನರನ್ನ ಕಂಟ್ರೋಲ್ ಮಾಡೋಕೆ ಅಂತ ಚೀನಿಗಳೆಲ್ಲ ವಾಪಸ್ ಅವ್ರ ದೇಶಕ್ಕೆ ಹೋಗ್ತಾರೆ.ಅವರೆಲ್ಲ ಕಾಲ್ಕಿತ್ತ ಮೇಲೆ ಭಾರತ ಸೋಯ್ಯಿ-ಟಪಕ್ ಅಂತ ಮತ್ತಿನ್ನೊಂದು ಕೆಲ್ಸ ಮಾಡ್ಬೇಕಪ್ಪ.ಗಡಿಯುದ್ದಕ್ಕೂ ನಿಂಬೆ ಬೆಳೆಯೋದು ಕಡ್ಡಾಯ ಮಾಡಿ, ಗಡಿ ಬೇಲಿ ತರ ಮಂತ್ರಿಸಿದ ನಿಂಬೆ ಬೇಲಿ ಮಾಡಿಬಿಡ್ಬೇಕು.ಅಲ್ಲಿಗೆ ದೇಶ ಫುಲ್ ಸೆಕ್ಯೂರ್ ಆಗಿಬಿಡುತ್ತೆ! (ಹಿಂಗ್ ಮಾಡೋಕೆ ನಮ್ ದೇಸದ ಸಿಕ್ಯುಲರ್ಗಳು ಬಿಡೋಲ್ಲ ಅಂತಿರ, ಅವ್ರು ಯಾವ್ ಒಳ್ಳೆ ಕೆಲ್ಸ ತಾನೇ ಮಾಡೋಕ್ ಬಿಡ್ತಾರೆ ನೀವೇ ಹೇಳಿಪ್ಪ ;))
ಇಷ್ಟು ಮಾಡಿದ್ರೆ ಪಾಕಿಸ್ತಾನದ ಸದ್ದು ಸಹ ಅಡಗಿಬಿಡುತ್ತೆ,ಇಲ್ಲ ಅಂದ್ರೆ ಭಾರತದಲ್ಲಿಡಿ ಕಡ್ಡಾಯ ನಿಂಬೆ ಬೆಳೆಯುವಂತೆ ಮಾಡಿ ಅದೇ ನಿಂಬೆ ಹಣ್ಣು ಪಾಕಿಸ್ತಾನಕ್ಕೆ ಎಸೆಯುವಂತೆ ಮಾಡಿದ್ರೂ ಆ ದೇಶ ನಿಂಬೆಯಲ್ಲಿ ಮುಚ್ಚಿ ಹೋಗುತ್ತೆ! ಹೇಗಿದೆ ‘ನಿಂಬೆಯ ಶಕ್ತಿ’, ಸಕ್ಕತ್ತ್ ಅಲ್ವಾ? ಮತ್ತಷ್ಟು ಓದು 
ಹಾರೋ ಬೂದಿಯ ನೋಡಿದಿರಾ?
ಪವನ್ ಎಂ ಟಿ
ಒಂದು ದಿನ ಮನೆಯಲ್ಲಿ ಬಿದ್ದಿರುವ ಧೂಳನ್ನು ಗುಡಿಸದೇ ಇದ್ದರೇನೆ ಕಿರಿಕಿರಿ ಆಗ್ತಾ ಇರುತ್ತೆ. ಹಾಗಿರುವಾಗ ಹೇಗೆ ಇದ್ರೂ ಧೂಳಿನ ಒಳಗೆ ಇರಬೇಕಂದ್ರೆ ಹೇಗಾಗಬಹುದು?
ದಿನನಿತ್ಯದ ಸಣ್ಣ ಸಂಗತಿಯೇ ಹೀಗಾದರೆ ಉಡುಪಿ ಜಿಲ್ಲೆಯ ಪಡುಬಿದ್ರೆಯ ನಂದಿಕೂರು ಗ್ರಾಮದ ಸುತ್ತಮುತ್ತಲಿನ ಜನರ ಸ್ಥಿತಿ ನೆನಪಿಸಿಕೊಂಡರೇ ಮೈ ಜುಮ್ ಎನ್ನುತ್ತದೆ. ಕಾರಣವಿಷ್ಟೆ. ಪಡುಬಿದ್ರಿ ಸಮೀಪದಲ್ಲಿ ಇತ್ತೀಚೆಗೆ ಬೃಹತ್ ಕಂಪೆನಿಯೊಂದು ತನ್ನ ಕಾರ್ಯಾರಂಭ ಮಾಡಿದೆ. ಅದರ ಆರಂಭದ ಸಂದರ್ಭದಲ್ಲೇ ತೀವ್ರ ಪ್ರತಿರೋಧ ಇತ್ತಾದರೂ ಹಣವಂತರ ಮುಂದೆ ಈ ಚಳುವಳಿ ಸೋತು ಸುಣ್ಣವಾಯಿತು. ಸಮಾಜ ಸೇವೆ ಮಾಡುತ್ತೇವೆಂದು ಹೇಳಿ ಮತ ಪಡೆದ ಜನಪ್ರತಿನಿಧಿಗಳು ಈ ಕಂಪೆನಿಯ ರಕ್ಷಣೆಗೆ ನಿಂತರು. ಇದೀಗ ಕಂಪೆನಿಯು ತನ್ನ ಹತ್ತು ಶೇಕಡಾ ಕೆಲಸ ಆರಂಭ ಮಾಡಿದೆ ಅಷ್ಟೇ. ಆದರೆ ಅದು ಕೊಟ್ಟ ಹೊಡತಕ್ಕೆ ಇಲ್ಲಿನ ಸ್ಥಳೀಯ ಜನತೆ ತತ್ತರಿಸುತ್ತಿದೆ. ಇಲ್ಲಿನ ಕಾರ್ಖಾನೆಯು ಉಗುಳುತ್ತಿರುವ ತ್ಯಾಜ್ಯದ ಧೂಳಿನಿಂದ ಅನೇಕ ರೀತಿಯ ಶಾರೀರಿಕ ತೊಂದರೆಗಳನ್ನು ಇಲ್ಲಿನ ಪ್ರಜೆಗಳು ಅನುಭವಿಸುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಮಕ್ಕಳು ಮಹಿಳೆಯರು ಸೇರಿದಂತೆ ಚರ್ಮ, ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ. ಮತ್ತಷ್ಟು ಓದು 
ಒಲವೆಂಬ ವಿಸ್ಮಯ!
ಈ ಪ್ರೀತಿ ಅಂದರೆ ಏನು?
ಹಾಗಂತ ಕೇಳಿ ನೋಡಿ ಪ್ರೀತಿಯಲ್ಲಿ ಬಿದ್ದವರಿಗೆ ಮಾತನಾಡಲು ಪದಗಳೇ ಸಿಕ್ಕುವುದಿಲ್ಲ. ಎಂದೂ ಪ್ರೀತಿಸಿರದವರಿಗೆ ಮಾತನಾಡಲಿಕ್ಕೆ, ವಾದಿಸುವುದಕ್ಕೆ ಸಾವಿರ ಸಾವಿರ ಸಂಗತಿಗಳು ಸಿಕ್ಕುತ್ತವೆ. ನೂರಾರು ಥಿಯರಿಗಳು ಕೈಗೆ ಎಟುಕುತ್ತವೆ. ಹತ್ತಾರು ಶ್ರೇಷ್ಠ ಚಿಂತಕರು ಹೇಳಿದ ಸಿದ್ಧಾಂತಗಳು ನೆರವಿಗೆ ಬರುತ್ತವೆ. ಆದರೆ ಪ್ರೀತಿಯಲ್ಲಿ ಮುಳುಗಿದವರನ್ನು ಕೇಳಿ, ಅವರಿಗೆ ಮಾತೇ ಬರದು, ಅವರು ಪ್ರೀತಿ ಕೊಡಮಾಡುವ ಮಧುರ ಅನುಭೂತಿಯನ್ನು ಸವಿಯುವುದರಲ್ಲಿ ಮಗ್ನರಾಗಿರುತ್ತಾರೆ, ಮಾತು ಮರೆತಿರುತ್ತಾರೆ.
ಧರ್ಮವೆಂದರೆ ಏನು, ದೇವರು ಇದ್ದಾನಾ? ಅಂತೆಲ್ಲಾ ಕೇಳಿದಾಗ ದೈವತ್ವದ ಅನುಭವವನ್ನು, ತನ್ನನ್ನೇ ತಾನು ಕಳೆದುಕೊಳ್ಳುವ ಮಗ್ನತೆಯನ್ನು ಎಂದೂ ಕಂಡಿರದವ ಮಾತ್ರ ಉಗ್ರವಾಗಿ ವಾದ ಮಾಡಬಲ್ಲ. ದೇವರಿದ್ದಾನೆ, ಅವನನ್ನು ನಂಬದವರು ದುರುಳರು ಎಂದು ಅಬ್ಬರಿಸಬಲ್ಲ. ದೇವರು ಎಂಬುದು ನಮ್ಮ ದೌರ್ಬಲ್ಯ, ನಮಗೆ ನಾವು ಮಾಡಿಕೊಳ್ಳುವ ವಂಚನೆ ಎಂದು ಉಪದೇಶಿಸಬಲ್ಲ. ಆದರೆ ದೇವರನ್ನು ಅನುಭವಿಸಿದವ ಮಾತ್ರ ಯಾವ ಮಾತನ್ನೂ ಆಡದೆ ಮೌನವಾಗಿ ಹಿಮಾಲಯದ ನಿಶ್ಯಬ್ಧ, ನಿರ್ಮಾನುಶ ಗುಹೆಗಳಲ್ಲಿ ಧ್ಯಾನಿಸುತ್ತಿರುತ್ತಾನೆ. ಖಾಲಿಯಾದ ಡಬ್ಬಗಳು ಜೋರಾಗಿ ಸದ್ದು ಮಾಡುತ್ತಾ ಬಡಿದುಕೊಳ್ಳುತ್ತಿರುತ್ತವೆ! ಎಂದಿನಂತೆ!
ಎರಡು ವಿಪರೀತಗಳು
ಪ್ರೀತಿಯ ಅನುಭವವನ್ನು ಹಂಚಿಕೊಳ್ಳುವಾಗ, ಪ್ರೀತಿಯನ್ನು ವ್ಯಾಖ್ಯಾನಿಸಲು ಕೂರುವಾಗ ನಾವು ಎರಡು ವಿಪರೀತಗಳಿಗೆ ಹೋಗುವ ಅಪಾಯವಿರುತ್ತದೆ. ಪ್ರೀತಿಯನ್ನು ತೀರಾ ಭಾವುಕವಾಗಿ ವರ್ಣಿಸುತ್ತಾ, ಪ್ರೀತಿ ಈ ಜಗತ್ತಿನದ್ದೇ ಅಲ್ಲ. ಅದು ಇಂದ್ರಿಯಗಳಿಗೆ ನಿಲುಕದ್ದು, ಅದು ಎಂಥಾ ವಿರೋಧವನ್ನಾದರೂ ಎದುರಿಸಬಲ್ಲದು. ಇಡೀ ಪ್ರಪಂಚವನ್ನೇ ಬೇಕಾದರೂ ಎದುರು ಹಾಕಿಕೊಂಡು ಪ್ರೀತಿ ಬದುಕಬಲ್ಲದು. ಪ್ರೀತಿಗೆ ಹಣ, ಅಂತಸ್ತಿನ ಹಂಗು ಇಲ್ಲ. ಅದು ಮುಖ ನೋಡಿ, ಭವಿಷ್ಯವನ್ನು ಆಲೋಚಿಸಿ ಪ್ರೀತಿಗೆ ಬೀಳಿಸುವುದಿಲ್ಲ. ಪ್ರೀತಿಯೆಂಬುದು ಒಂದು ಪವಾಡ. ನಮ್ಮ ನಿಯಂತ್ರಣವೇ ಇಲ್ಲದ ಆದರೆ ನಮ್ಮೆಲ್ಲರನ್ನೂ ನಿಯಂತ್ರಿಸುವ ಅಗೋಚರವಾದ ಶಕ್ತಿ ಪ್ರೀತಿ. ಪ್ರೀತಿಸಿದವರಿಗೆ ಪ್ರೀತಿಯೇ ದೇವರು. ಪ್ರೀತಿಗಿಂತ ದೊಡ್ಡದು ಅವರಿಗೆ ಬೇರೇನೂ ಕಾಣುವುದಿಲ್ಲ. ನಮ್ಮ ಜೀವನದ ಏಕೈಕ ಗುರಿಯೇ ಪ್ರೀತಿ. ಅಂತೆಲ್ಲಾ ಭಾವುಕವಾಗಿ ಪ್ರೀತಿಯ ಅಗಾಧತೆಯನ್ನು ಮೆರೆಸುವ ಭರದಲ್ಲಿ ವಾಸ್ತವದಿಂದ ದೂರಾಗುವ, ತೀರಾ ಎಮೋಶನಲ್ ಆಗುವ ಅಪಾಯವಿದೆ. ಮತ್ತಷ್ಟು ಓದು 
ನಾನೆಂಬ ಪರಕೀಯ…
ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ ಎಂಬುದೂ ತಿಳಿಯಿತು. ಕರ್ನಾಟಕವೆಂಬ ಹಸುವಿನಿಂದ ಕಾಸರಗೋಡು ಎಂಬ ಕರುವನ್ನು ಬೇರ್ಪಡಿಸಿ ಕೇರಳ ರಾಜ್ಯಕ್ಕೆ ಸೇರಿಸಲಾಗಿತ್ತು. ಅದೂ ಕನ್ನಡಿಗರ ಉಗ್ರ ಪ್ರತಿಭಟನೆಯ ನಡುವೆ.
ನಾನು ಮಂಗಳೂರು ವಿವಿಗೆ ಎಂ.ಎ ಮಾಡಲು ಸೇರಿದಾಗ ಕಾಸರಗೋಡಿಗೊಮ್ಮೆ ಭೇಟಿ ಕೊಡಬೇಕೆಂಬ ಒತ್ತಾಸೆಗೆ ಪೂರಕವಾಗಿ ಮಂಜೇಶ್ವರದ ಗೋವಿಂದ ಪೈಗಳ ಮನೆಯನ್ನು ನೋಡುವ ಅವಕಾಶ ಸಿಕ್ಕಿತು. ಅಂದು ಭೇಟಿಯಾದ ಹಲವು ಹಿರಿಯರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಇಂಚಿಂಚು ಮನಮುಟ್ಟುವಂತೆ ವಿವರಿಸಿದ್ದರು. ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಳ್ಳಲು ನಡೆಸಿದ ಕುತಂತ್ರ, ಕರ್ನಾಟಕ ಸರ್ಕಾರ ವಾಪಾಸು ಪಡೆಯಲು ತೋರಿಸುತ್ತಿರುವ ಅನಾದಾರ, ಇವುಗಳು ಕನ್ನಡ ಹೋರಾಟಗಾರರಿಗೆ ಹುಟ್ಟಿಸಿದ ನಿರಾಶೆಯನ್ನು ಸಾದೋಹರಣವಾಗಿ ವಿವರಿಸಿದ್ದರು. ಇಂಥ ಕಾಸರಗೋಡು ಜಿಲ್ಲೆಯ ಗಡಿಯಾದ ಕರ್ನಾಟಕದ ತಲಪಾಡಿ ಗ್ರಾಮವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ನಾವು ಆಗಾಗ ವಿವಿ ಗ್ರಂಥಾಲಯದ ಮೊದಲ ಮಹಡಿಯಲ್ಲಿ ನಿಂತು ಮೊಬೈಲ್ ನೆಟ್ವರ್ಕ್ ನೋಡುವುದಿತ್ತು. ಅಲ್ಲಿ ಕೇರಳದ ಹಲವು ನೆಟ್ವರ್ಕ್ ಗಳು ಸಿಗುತ್ತವೆ. ಅಷ್ಟು ಹತ್ತಿರ ಕಾಸರಗೋಡು. ಕನ್ನಡಿಗರ ಮನಸ್ಸಿಗೂ ಕೂಡ. ಮತ್ತಷ್ಟು ಓದು 
ಕನ್ನಡ ಎಲ್ಲಿಂದ ಉಳಿಯಬೇಕು? ನಾವೇಕೆ ಕಲಿಯಬೇಕು?
– ಮಹೇಂದ್ರ ಸಿ.ಕೆ
ಮೊನ್ನೆ ಮೊನ್ನೆ ಸೂರ್ಯ ತನ್ನೆಲ್ಲಾ ಹೊಳಪನ್ನು ಕಳೆದುಕೊಳ್ಳುವ ಹೊತ್ತಿಗೆ ಕನ್ನಡ ಉಳಿಯಬೇಕು,ಇದಕ್ಕಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂಬ ನಿರ್ಣಯದೊದಿಗೆ 77 ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಮುಕ್ತಾಯಕಂಡಿದೆ.ಕನ್ನಡದ ಈ ಚೆಂದದ ಹಬ್ಬದಲ್ಲಿ ಬೆಂಗಳೂರು ಮಿಂದಿದೆ. ರಾಜಧಾನಿಯಲ್ಲಿ ಕನ್ನಡಗಿರಷ್ಟೇ ಇರುವ ಪರಭಾಷಿಕರು ಕೂಡ ಹಬ್ಬ ಕಂಡು ಹುಬ್ಬೇರಿದ್ದಾರೆ;ಸಂತಸ ಪಟ್ಟಿರಬಹುದು.
ಒಂದಿಷ್ಟು ಐಟಿ ಮಂದಿ ಕನ್ನಡ ಹಬ್ಬದಲ್ಲಿ ಪಾಲ್ಗೊಂಡಿದ್ದು ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.ಕನ್ನಡವನ್ನು ಕಂಪ್ಯೂಟರ್ ಯುಗದಲ್ಲಿ ಉಳಿಸುವ,ಬೆಳೆಸುವ ಕೆಲಸದಲ್ಲಿ ಐಟಿ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ.ಆದರೆ ಅದಕ್ಕಿಂತಲೂ ಹೆಚ್ಚು ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿರುವವರು ನಮ್ಮ ನಾಡಿನ ಗ್ರಾಮಾಂತರ ಪ್ರದೇಶದ ಕೂಲಿ ಕಾರ್ಮಿಕರು,ರೈತರು.ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಈ ವರ್ಗದ ಜನರ ಹಿತಾಸಕ್ತಿಗಳ ಕುರಿತು ಯಾವೊತ್ತು ಸೊಲ್ಲೆತ್ತಿಲ್ಲ. ಅತ್ತ ಗುಲ್ಬರ್ಗದಲ್ಲಿ ತೊಗರಿಗೆ ಬೆಲೆ ಸಿಕ್ಕಿಲ್ಲ ಎಂದು ರೈತರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಯ ಯತ್ನ ನಡೆಸಿದ್ದರು.ಸಮ್ಮೇಳನದ ಅದ್ದೂರಿಯಲ್ಲಿ ಕನ್ನಡ ಉಳಿಸುವ ಗಣ್ಯರು ರೈತರನ್ನು ಮರೆತರು.
ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಕನ್ನಡ-ಇಂಗ್ಲೀಷ್ ಅನಸಂಧಾನದ ಮಾತುಗಳನ್ನಾಡಿದರು. ಅಲ್ಲದೇ ಈಚೆಗೆ ಅವರು ಏಕರೂಪಿ ಶಿಕ್ಷಣ ಕುರಿತು ಜೋರು ದನಿಯಲ್ಲಿ ಮಾತನಾಡುತ್ತಿದ್ದಾರೆ. ಈ ದಿನ ಕನ್ನಡ ಮಾತ್ರವಲ್ಲ,ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಬಿಸಿ ತಟ್ಟಿಸಿರುವ ಜಾಗತೀಕರಣದ ಭಾಷೆ ಇಂಗ್ಲೀಷ್ಗೆ ಸವಾಲು ಹೊಡ್ಡಬೇಕಾದರೆ ಅನಂತಮೂರ್ತಿ ಸಲಹೆ ಜಾರಿಗೆ ಬರಬೇಕಾಗಿದೆ.
ಕನ್ನಡ ಉಳಿಸಿ ಎಂದು ಬೆಂಗಳೂರಿನಲ್ಲಿ ಘೋಷಣೆ ಕೂಗಿದರೆ ಕನ್ನಡ ಉಳಿಯದು.ಕೇವಲ ಕನ್ನಡ ಉಳಿಸಿ..ಉಳಿಸಿ ಎಂದು ಹೇಳುತ್ತಾ ಹಳ್ಳಿ ಮಕ್ಕಳನ್ನು,ರೈತಾಪಿ ವರ್ಗದ ಮಕ್ಕಳನ್ನು ಅತ್ಯುತ್ತಮ ಅವಕಾಶಗಳಿಂದ ವಂಚಿತರಾಗಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಕಲಿಯುವುದರಿಂದ ಊಟ,ಉದ್ಯೋಗ ಸಿಗುವುದಿಲ್ಲ ಎಂದಾದರೆ ಅದನ್ನು ಕಲಿತು ಏನು ಉಪಯೋಗ ಎಂಬುದನ್ನು ಕನ್ನಡ ಉಳಿಸುವ ಮಹಾತ್ಮರು ಹೇಳಬೇಕಾಗಿದೆ. ಮತ್ತಷ್ಟು ಓದು 
ಬದುಕು ಬದಲಿಸಬಹುದು!
– ಸವಿತ ಎಸ್.ಆರ್
ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ “ಬೆಳಕಿನೊಂದು ಕಿರಣ ಮೇಡಂ ಕ್ಯೂರಿ“. ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರೇರೇಪಿಸಿದ ಬರವಣಿಗೆಯದು. ಬರೆದವರು ನೇಮಿ ಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ…
“ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ“
ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು… ನೇಮಿ ಚಂದ್ರ…ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ….ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಆಯ್ಕೆ ಕೂಡಾ ಅದೇ ಆಯ್ತು 🙂
ಅಂದಿನಿಂದ ಇಂದಿನವರೆಗೆ ಯಾವಾಗ ಲೈಫು ಡಲ್ ಅನಿಸಿದಾಗಲೆಲ್ಲಾ “ಬೆಳಕಿನೊಂದು ಕಿರಣ” ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.
ಮೊನ್ನೆ ಸಪ್ನ ಬುಕ್ ಸ್ಟಾಲಿಗೆ ಹೋದಾಗ ಹಾಗೇ ಕಣ್ಣಾಡಿಸುತ್ತಿರುವಾಗ ಕಂಡದ್ದು “ಬದುಕು ಬದಲಿಸಬಹುದು” – ನೇಮಿಚಂದ್ರ.. ಅರೆ ವಾವ್ ನನ್ನ ನೆಚ್ಚಿನ ಪುಸ್ತಕದ ಲೇಖಕರು…ಕೊನೆಯ ಪುಟದಲ್ಲಿ..ಮೊದಲ ಬಾರಿಗೆ..ಅವರ ಪೋಟೋ ನೋಡಿ ಸಕತ್ ಖುಷಿಯಾಯ್ತು. ಮನೆಗೆ ತಂದ ಪುಸ್ತಕ ಒಂದೆರಡು ದಿನ ಮನಃ ಪೂರ್ತಿಯಾಗಿ ಓದಿದೆ. : )
ಪ್ರತಿ ಪುಟಗಳಲ್ಲಿ ಅದೆಷ್ಟೊಂದು ಕಾನ್ಫಿಡೆನ್ಸ್ ತುಂಬಿದ ಬರಹಗಳು, ಕೆಲವು ಲೇಖನಗಳ ಶೀರ್ಷಿಕೆಗಳು ಹೀಗಿವೆ…
ಸಮಯವಿಲ್ಲವೆ ಹೇಳಿ
ಕನಸು ಕಾಣುವ ಬನ್ನಿ
ಸ್ನೇಹಕ್ಕೆ ಯಾವ ಸರಹದ್ದು
ಸೋಲಿಲ್ಲದ ಮನೆಯ ಸಾಸಿವೆ
ಜಗತ್ತು ಬದಲಾಗಬಹುದು
ಆಯ್ಕೆಯಿದೆ ನಮ್ಮ ಕೈಯಲ್ಲಿದೆ
ಬರೆದಿಡಿ….ಬರೆದಿಡಿ
ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
ಮುಗಿಲು ಕೂಡ ಮಿತಿಯಿಲ್ಲ
ಬದುಕು…ನಿನ್ನಲ್ಲೆಂಥಾ ಮುನಿಸು
ಆದದ್ದೆಲ್ಲಾ ಒಳಿತು ಆಯಿತು
ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು
ಕಾಸಿಲ್ಲದೆ ಕಲಿಸಿದ್ದು
ದುಡಿಯಬಲ್ಲೆವು ನಾವು
ಚಿಗುರಿಸಿ ಕನಸುಗಳನ್ನು
ಬದುಕು ಬರಿದಾಗದಿರಲಿ
.
.
.
.
.
ಇಷ್ಟು ಚೆಂದದ ಶೀರ್ಷಿಕೆಯ ಲೇಖನಗಳೊಂದಿಗೆ ಲೇಖಕಿಯವರು ನಮ್ಮ ದಿನ ನಿತ್ಯದ ಜೀವನವನ್ನ ಬೇರೆ ಪರಿಮಾಣದಲ್ಲೂ ನೋಡಬಹುದೆಂಬುದನ್ನ…ಕಲಿಸುವಿಕೆ ಪರಿ ಮಾತ್ರ… ತುಂಬಾ ತುಂಬಾ ಇಷ್ಟವಾಯ್ತು.
ನೀವೂ ಕೂಡ ಓದಿ, ಮೆಚ್ಚಿನ ಪುಸ್ತಕಗಳ ಸಾಲಿಗೆ ಈ ಪುಸ್ತಕದ ಹೆಸರು ಸೇರುವುದು ಖಂಡಿತ 🙂






