ವಿಷಯದ ವಿವರಗಳಿಗೆ ದಾಟಿರಿ

Archive for

10
ಫೆಬ್ರ

ನಾಸ್ತಿಕನಾಗೋದು ಅಂದ್ರೆ….

ಸಾತ್ವಿಕ್ ಎನ್ ವಿ 

ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
ನಮ್ಮ ‘ಅವಸ್ಥೆಯ’ ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ.    ಮತ್ತಷ್ಟು ಓದು »

10
ಫೆಬ್ರ

ಮೀನುಗಳು—ಅಬ್ಬಾ..ಎಂಥ ಮೀನುಗಳು…!!

– ಆಜಾದ್

ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ…ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.

ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು…ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.

ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ…ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.

ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.

ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು.

ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕ

ಎಲೆಯಾಕಾರದ ಸಮುದ್ರ ದೈತ್ಯ : ಕಡಲ್ಗುದುರೆಗಳ ಜಾತಿಯ ಮೀನುಗಳಿವು, ತನ್ನ ಪರಿಸರದೊಡನೆ (ಸಮುದ್ರ ಸಸ್ಯಗಳ ಮತ್ತಷ್ಟು ಓದು »

9
ಫೆಬ್ರ

ಆಧುನಿಕತೆಯಲ್ಲಿ ಮರೆಯಾಯ್ತೆ ಮಾನವೀಯತೆ ?

ಚಿತ್ರ

೨ನೇ ಫೆಬ್ರವರಿ ೨೦೧೧ರಂದು ಎಂದಿನಂತೆ ಕಚೇರಿಯಿಂದ ಸರಿಯಾಗಿ ಸಂಜೆ ೬ ಗಂಟೆಗೆ ಮನೆಗೆ ಹೊರಟೆ. ಮೆಟ್ಟಿಲಿಳಿದು, ನನ್ನ ನಾಲ್ಕುಚಕ್ರ ವಾಹನದ ಕಡೆ ಬಂದು ಕಾರ್ ಗ್ಲಾಸ್ಗೆ ನೀರು ಹಾಕ್ತಿದ್ದೆ, ಅಷ್ಟೊತ್ತಿಗೆ ಅಲ್ಲೆ ನಿಂತಿದ್ದ ಒಬ್ಬ ಸೆಕ್ಯುರಿಟಿ, ಮೇಡಂ ಚಕ್ರದ ಏರ್ ಇಳ್ದಿದೆ, ನೋಡಿ ಅಂದ. ನೋಡ್ತೀನಿ, ಏರ್ ಇಳ್ದಿದೆ, ಪಂಚರ್ ಆಗಿರೋಹಾಗಿದೆ, ಏನಪ್ಪ ಮಾಡೋದು ಅಂತ ಯೋಚಿಸ್ತಾ, ನನ್ನ ಸಹುದ್ಯೋಗಿಯೊಬ್ಬರನ್ನ ಕರೆದು, ತೋರಿಸ್ದೆ. ಅವರು ಮೇಡಂ ಇಲ್ಲಿ ಸದ್ಯಕ್ಕೆ ಯಾರು ಸಿಕ್ಕಲ್ಲ, ಸೆಕ್ಯುರಿಟಿಯವರಿಗೆ ತಿಳಿಸಿ ಇಲ್ಲೇ ಪಾರ್ಕ್ ಮಾಡಿಹೋಗಿ, ಬೆಳಿಗ್ಗೆ ಬಂದು ಸರಿ ಮಾಡ್ಸಿ ಅಂದ್ರು. ಸರಿ ಅಂತ ಮನೆಗೆ ಬಸ್ನಲ್ಲೇ ಹೋಗೋಣ (ಆಟೋಗೆ ಯಾಕೆ ಅಷ್ಟೊಂದು ಹಣ ಕೊಡೋದು) ಅಂತ ಶೇಷಾದ್ರಿಪುರಂ ಬಸ್ ನಿಲ್ದಾಣದ ಹತ್ತಿರ ಬಂದು ಶೇಷಾದ್ರಿಪುರಂ ನಿಂದ ಸೆಂಟ್ರಲ್ ಮಾರ್ಗವಾಗಿ ಮಲ್ಲೇಶ್ವರ, ಮತ್ತೀಕೆರೆ, ಬಿಇಎಲ್ ವೃತ್ತಕ್ಕೆ ಹೋಗೋ ಬಸ್ ಹತ್ತಿದೆ (೨೭೩ಸಿ). 
9
ಫೆಬ್ರ

ರಂಗಭೂಮಿಯ ಹಿರಿಯಣ್ಣ ಕುಸ್ತಿಯ ಕಲಿ ಗುಡಿಗೇರಿ ಬಸವರಾಜರಿಗೊಂದು ನಮನ

ನಿಲುಮೆ ತಂಡ
ಹೌದು !! ಕನ್ನಡದ ರಂಗಭೂಮಿಯ ಪಾಲಿಗೆ ದಿನಾಂಕ ೮ ನೇ ಫೆಬ್ರವರಿ ೨೦೧೧ ಮರೆಯಲಾಗದ ಮಾಣಿಕ್ಯವೊಂದು ಕಳೆದುಕೊಂಡ ದಿನ. ಗುಡಿಗೇರಿ ಧಾರವಾಡದಲ್ಲಿನ  ಚಿಕ್ಕ ಹಳ್ಳಿಯಲ್ಲಿ ಚನ್ನಪ್ಪ ಗೌರಮ್ಮನವರ ಸುಪುತ್ರ. ವಿದ್ಯಾಭ್ಯಾಸ ೪ನೇ ತರಗತಿಯವರೆಗಾದರು, ಬಸವರಾಜರ ಬಾಲ್ಯ ಸುಖಪ್ರದವಾಗಿರಲಿಲ್ಲ. ೨ರೂಪಾಯಿಗೆ ಎಮ್ಮೆ ಕಾಯುವ ಕಾಯಕದಲ್ಲಿದ್ದವರು, ಗರಡಿಮನೆಯ ಅವರ ಆಸಕ್ತಿಗೆ ಗುಡಿಗೆರೆಯ ಭೂಪಾಲ ಬಸ್ತಿಯವರ ಸಹಕಾರದಿಂದ ಕೊಲ್ಲಾಪುರದಲ್ಲಿ ಕುಸ್ತಿ ಕಲಿತರು, ದಾವಣಗೆರೆಯಲ್ಲಿ ಟಿಪ್ಪು ಸುಲ್ತಾನ್ ನಾಟಕದ ಪ್ರೇರಣೆಯಿಂದ ತಮ್ಮ ಹದಿನಾಲ್ಕು ವರ್ಷದಲ್ಲೇ “ನಾರಿ ಸಾಹಸ” ನಾಟಕದಲ್ಲಿ ಮಂತ್ರಿ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದರು, ರಂಗವೇದಿಕೆಯಲ್ಲಿ ಪಾತ್ರ ಹಾಕಿ ನಿಂತರೆ ಅವರ ಪದಪ್ರಾಸಕ್ಕೆ ತಲೆದೂಗದವರೇ ಇಲ್ಲ. ಉತ್ತರ ಕರ್ನಾಟಕದ ಮಂದಿಗೆ ಗುಡಿಗೇರಿ ಬಸವರಾಜರ ನಾಟಕವಿದೆಯೆಂದಾದರೆ ಅದೊಂದು ಹಬ್ಬದ ಸಡಗರ.
9
ಫೆಬ್ರ

ಮದರ್ ತೆರೇಸಾ ಸೋಗುಗಾತಿ ಎಂದವನು ಓಶೋ!!!

ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ಮತ್ತಷ್ಟು ಓದು »

8
ಫೆಬ್ರ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ…!

– ಪವನ್ ಎಂ ಟಿ

ಸಾಮೂಹಿಕ ಆತ್ಮಹತ್ಯೆ: ಮಲೆಕುಡಿಯರ ಬೆದರಿಕೆ, ನಿಲ್ಲದ ಮಲೆಕುಡಿಯರ ಮೇಲಿನ ದೌರ್ಜನ್ಯ,

ಬಲಾತ್ಕಾರದಿಂದ ಎಬ್ಬಿಸಿದರೆ ಪ್ರಾಣತ್ಯಾಗ, ಸತ್ತರೂ-ಬದುಕಿದರೂ ಇಲ್ಲಿಯೇ: ಮಲೆಕುಡಿಯರ ಶಪಥ

ಪ್ರಜಾವಾಣಿ ಪತ್ರಿಕೆಯಲ್ಲಿ ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಬಂದ ಪ್ರಮುಖ ಸುದ್ದಿಗಳು. ಇವೆಲ್ಲಾ ‘ಕಾನೂನು ಪ್ರಕಾರವಾಗಿ ಎತ್ತಂಗಡಿ ಮಾಡಿಸಿದ್ದೇವೆ’ ಎಂದು ಹೇಳುತ್ತಿರುವ ಅಧಿಕಾರಿಗಳ ವಿರುದ್ಧವಾಗಿ ಮನೆ ಕಳೆದುಕೊಂಡ ಸುಲ್ಕೇರಿಯ ಮಲೆಕುಡಿಯರು ದು:ಖಭರಿತ ಅಸಹಾಯಕತೆಯ ದನಿ. ಇಷ್ಟಾದರೂ ಅಲ್ಲಿನ ಕಾಂಗ್ರೆಸ್ ಶಾಸಕರು ‘ಸುಲ್ಕೇರಿ ನಾಯ್ದಿಗುರಿಯಲ್ಲಿ ಒಕ್ಕಲೆಬ್ಬಿಸಿರುವ ಪ್ರಕರಣ ಕಾನೂನು ಪ್ರಕಾರವೇ ನಡೆದಿದೆ. ಸಂಸದರು, ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಿಂದ ನಾನು ಪಾಠ ಕಲಿಯಬೇಕಾಗಿಲ್ಲ. ನಾನು ಘಟನಾ ಸ್ಥಳಕ್ಕೆ ಕಾಲಿಡುವುದಿಲ್ಲ. ತಾಕತ್ತಿದ್ದರೆ ಅವರು ನನ್ನನ್ನು ಅಲ್ಲಿಗೆ ಬರುವಂತೆ ಮಾಡಲಿ’ಎಂದು ಘೋಷಿಸಿದ್ದಾರೆ. (ಪ್ರ.ವಾ) ಮತ್ತಷ್ಟು ಓದು »

8
ಫೆಬ್ರ

ಜೇನುಗೂಡಿಗೆ ಕಲ್ಲು ಹೊಡೆದ್ರೆ ಏನಾಗುತ್ತೆ ಅಂತ ಗೊತ್ತಾಯ್ತಾ!?

(ಇದೆ ಲೇಖನಗಳನ್ನ ನೋಡಿ ಬೋರ್ ಅನಿಸಬಹುದು,ಆದರೆ ಈ ಮನುಷ್ಯ ಮಾಡಿದ ಕೆಲಸ ಮೈ ಉರಿಯುವಂತದ್ದು,ನಾನು ಬರೆಯಬಾರದು ಅಂದುಕೊಂಡರು ಬರೆಯದಿರಲಾಗಲಿಲ್ಲ.ಇದನ್ನ ಬರೆಯುವ ಹೊತ್ತಿಗೆ ಚಿಮೂ ಅವರಿಗೆ ಗೌರವ ಸಲ್ಲಲ್ಲಿದೆ ಅನ್ನುವ ಸಮಾಧಾನಕರ ಸುದ್ದಿ ಬಂದರೂ,ಅಂತ ಹಿರಿಯ ಜೀವದ ಮನ ನೋಯಿಸಿದವರ ಬಗ್ಗೆ ಬರೆಯದಿರಲು ಹೇಗೆ ಸಾಧ್ಯ? )

ಮರವಂಜಿ ಅನ್ನೋದು ಈ ರಾಜ್ಯದ ಒಂದು ಪುಟ್ಟಹಳ್ಳಿ.ಆ ಹಳ್ಳಿಯ ಬಯಲಲ್ಲಿ ಆಟವಾಡುತಿದ್ದ ಮಕ್ಕಳ ಬಳಿ ಒಬ್ಬ ಪೇಲವ ಶರೀರದ,ಮೃದು ಮಾತಿನ ವ್ಯಕ್ತಿ ಬಂದು ಕೇಳಿದರು ’ಮಕ್ಕಳೇ,ಈ ಹಳ್ಳಿಯಲ್ಲಿ ದೊಡ್ಡ ಮನೆ ಯಾರದಪ್ಪ?’ಅಲ್ಲಿ ಆಟವಾಡುತಿದ್ದ ದೊಡ್ಡ ಮನೆಯ ಮಕ್ಕಳು ಆ ವ್ಯಕ್ತಿಯನ್ನ ಮನೆಗೆ ಕರೆದುಕೊಂಡು ಹೋದರು.ಮನೆಯ ಹಿರಿಯರೊಂದಿಗೆ ಆ ವ್ಯಕ್ತಿ ’ತಾನು, ಕರ್ನಾಟಕ-ಕನ್ನಡದ ಬಗ್ಗೆ ಸಂಶೋಧನೆ ಮಾಡುತ್ತಾ ಇರುವುದಾಗಿಯೂ,ಅದಕ್ಕಾಗಿ ಹೀಗೆ ಹಳ್ಳಿ ಹಳ್ಳಿಗಳಿಗೊ ಭೇಟಿ ನೀಡುತ್ತಿರುವುದಾಗಿಯು ಮತ್ತು ಹೋದೆಡೆ ಹೀಗೆ ಉಳ್ಳವರ ಮನೆಯಲ್ಲಿ ವಿಶ್ರಾಂತಿ ಪಡೆದು ಸಾಗುತ್ತಿರುವುದಾಗಿ’ ಹೇಳಿದ್ದರು.ಹಾಗೆ ಮುಂದುವರೆದು ’ಉಚಿತವಾಗಿ ಈ ರೀತಿ ಉಳಿದುಕೊಳ್ಳುವುದು ನನಗೆ ಕಷ್ಟವಾಗುತ್ತದೆ, ನಿಮ್ಮ ಮನೆಯ ಮಕ್ಕಳನ್ನೆಲ್ಲ ಕರೆಯಿರಿ ನಾನವರಿಗೆ ಕಥೆಯನ್ನಾದರು ಹೇಳುತ್ತೇನೆ’ ಅಂದರಂತೆ.ಆ ವ್ಯಕ್ತಿ ಹಾಗೆ ಮನೆಗೆ ಬಂದು ಹೋದ ೪-೫ ವರ್ಷದ ಮೇಲೆ ಯಾವುದೋ ಪತ್ರಿಕೆಯಲ್ಲಿ ಅವರ ಫೋಟೊ ನೋಡಿದಾಗಲೆ ಆ ಮನೆಯವರಿಗೆ ಗೊತ್ತಾಗಿದ್ದು ಅಂದು ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದ ವ್ಯಕ್ತಿ, ಕನ್ನಡದ ಹಿರಿಮೆಯ ಸಂಶೋಧಕ,ವಿದ್ವಾಂಸರು ಅಂತ.

ಮತ್ತಷ್ಟು ಓದು »

7
ಫೆಬ್ರ

ಸಂಶೋಧನೆಯ ಸತ್ಯಕ್ಕೆ ಸಂದ ಜಯ: ಚಿಮೂ.ಗೆ ಗೌರವ ಡಾಕ್ಟರೇಟ್ ನೀಡಲು ಒಪ್ಪಿಗೆ

ಕೃಷ್ಣವೇಣಿ ಜಿ ಎಸ್ ಮಡಿಕೇರಿ

ಕನ್ನಡದ ಹಿರಿಯ ಸಂಶೋಧಕರಾದ ಡಾ.ಎಂ. ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ್ದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೊನೆಗೂ ಗೌರವ ಡಾಕ್ಟರೇಟ್ ನೀಡಲು ಸಮ್ಮತಿಸಿದ್ದಾರೆ. ಕನ್ನಡಿಗರ, ಸಾಹಿತಿಗಳ, ಸಂಘಟನೆಗಳ ಒತ್ತಾಯಕ್ಕೆ ಒಪ್ಪಿಗೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಚರ್ಚ್ ಮೇಲಿನ ದಾಳಿಯ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ನೀಡಿದ ವರದಿಯನ್ನು ಚಿದಾನಂದಮೂರ್ತಿಯವರು ಸಮರ್ಥಿಸಿದ್ದಾರೆ. ಅಲ್ಲದೇ ಡಾಕ್ಟರೇಟ್ ನೀಡಲು ಸಾಹಿತ್ಯಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕಾಳಜಿಯೂ ಮಾನದಂಡ ಎಂದು ಹೇಳುವ ಮೂಲಕ ಗೌರವ   ಡಾಕ್ಟರೇಟ್ ಗೆ ಹೊಸ ಮಾನದಂಡವೊಂದನ್ನು ಸೇರ್ಪಡೆಗೊಳಿಸಿದ್ದರು.

ರಾಜ್ಯಪಾಲರ ಈ ನಿರ್ಧಾರವನ್ನು  ಸಾಹಿತಿಗಳು, ಹಲವು ಕನ್ನಡಪರ ಸಂಘಟನೆಗಳು, ಕನ್ನಡ ಪ್ರೇಮಿಗಳು ವಿರೋಧಿಸಿದ್ದರು. ಚಿದಾನಂದಮೂರ್ತಿಯವರನ್ನು  ಕೋಮುವಾದಿಯೆಂದು ಸಹ ಹೇಳುವಲ್ಲಿ ರಾಜ್ಯಪಾಲರು ಹಿಂದೆ ಬಿದ್ದಿರಲಿಲ್ಲ. ಇದನ್ನು ತೀವ್ರವಾಗಿ ವಿರೋಧಿಸಿದ್ದ ಸಾಹಿತ್ಯ ಪ್ರೇಮಿಗಳು, ಸಂಶೋಧನಾ ಆಸಕ್ತರು ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.

ನಿನ್ನೆ ಮುಕ್ತಾಯಗೊಂಡ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ತಮ್ಮ ನಡುವಿನ ವೈಚಾರಿಕ ಭಿನ್ನತೆಗಳನ್ನು ಮರೆತು ಕನ್ನಡ ಸಂಶೋಧಕನಿಗೆ ಸಲ್ಲಬೇಕಿದ್ದ ಸ್ಥಾನಮಾನಗಳನ್ನು ಕೊಡಿಸುವಲ್ಲಿ ಎಲ್ಲ ಕನ್ನಡ ಸಾಹಿತಿಗಳು ಒಂದಾದದ್ದು ಮತ್ತು ಒಕ್ಕೊರಲಿನಲ್ಲಿ ಆಗ್ರಹಪಡಿಸಿದ್ದು ವಿಶೇಷವಾಗಿತ್ತು. ಮತ್ತಷ್ಟು ಓದು »

7
ಫೆಬ್ರ

ಗಝಲ್ ಗುಂಗಿನಲ್ಲಿ…

ಒಪ್ಪಿದೆ ನಿನ್ನ ಕಣ್ಣಲಿ ನನ್ನೆಡೆಗೆ ಪ್ರೀತಿಯಿಲ್ಲ,
ನಿನ್ನ ದೃಷ್ಟಿಯಲ್ಲಿ ನಾನಿರೋದು ಆ ರೀತಿಯಲ್ಲ/
ಆದರೂ ಹೇಗೆ ಮುಚ್ಚಿಡಲಿ ಈ ವ್ಯಸನ?….ಆಗಿರೋವಾಗ ನಿನ್ನೋಲವಲ್ಲಿ ತಲ್ಲೀನ,
ಚಿಂತೆಯಿಲ್ಲ…ಯಾರು ನನ್ನನಂದರೇನು ಮತಿಹೀನ!//

ಈ ಇರುಳು ಜಾರುವ ಮೊದಲು ಬಾ…ಕ್ಷಣ ಕಾಲ ನನ್ನನಪ್ಪು,
ಯಾರಿಗೆ ಗೊತ್ತು ಹೇಳು? ಇನ್ನೆಂದೋ ನಮ್ಮ ಭೇಟಿ/
ನೋವ ಮಡುವಿನ ಸುಳಿಗೆ ಸಿಲುಕಿ ಬಾಳುವ ಹಾಳು ಹಣೆಬರಹ,
ಅದೊಂದು ಬೆಚ್ಚನ್ನೇ ಆಲಿಂಗನದ ಆಸರೆ ಸಾಕು ಸಹಿಸೋಕೆ ಇನ್ನೆಲ್ಲ ವಿಷಾದದೀಟಿ//

ನೀ ಜೊತೆಗಿದ್ದರೆ ಗುರಿಗಳಿಗೆಲ್ಲಿ ಬರ?,
ಹುಮ್ಮಸ್ಸಿನ ಗಣಿಗೆ ನಾನೊಡೆಯ ಬೀಳುತಿರೆ ಕಿವಿಮೇಲೆ ನಿನ್ನ ಸ್ವರ/
ನಿನ್ನುಸಿರು ನನ್ನೆದೆಯ ಸೋಕುತಿರೊ ತನಕ ನೋವೆ ನನಗಿಲ್ಲ,
ನಿನ್ನೊಂದು ಮೆಚ್ಚುಗೆ ನಗುವಿಗಾಗಿ ತಹತಹಿಸಲು ತಯಾರ್ ನಾನು ಬಾಳೆಲ್ಲ//

– ಅಂಗನ ಕಿರಣ

7
ಫೆಬ್ರ

ಮತ್ತೊಮ್ಮೆ ನಿಷ್ಠೆ ತೋರಿಸಿದ ರಾಜ್ಯಪಾಲರು

ಜಗನ್ನಾಥ್ ಶಿರ್ಲಾಲ್

ಈ ನಾಡಿನ ಹೆಸರಾಂತ, ಸಾಹಿತಿ, ಸಂಶೋಧಕ ಡಾ.ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ತನ್ನ ವಿಶ್ವವಿದ್ಯಾನಿಲಯದ ಸೆನೆಟ್ ಸಭೆಯಲ್ಲಿ ಚರ್ಚಿಸಿ ಶಿಪಾರಸ್ಸು ಮಾಡಲಾಗಿದ್ದ ಹೆಸರನ್ನು ರಾಜ್ಯಪಾಲರು ತೆಗೆದು ಹಾಕುವ ಮುಖಾಂತರ ದೊಡ್ಡ ಅಪಮಾನ ಮಾಡಿದ್ದಾರೆ.ಸದಾ ಸುದ್ದಿಯಲ್ಲಿರುವ ನಮ್ಮ ರಾಜ್ಯಪಾಲರಾದ ಹೆಚ್. ಆರ್. ಭಾರಧ್ವಾಜ್ ತನ್ನ ಹಳೆ ಚಾಳಿಯನ್ನು ಮತ್ತೊಮ್ಮೆ ತನ್ನ ಅಧಿಕಾರದ ಮೂಲಕ ತೋರಿಸಿ ಪಕ್ಷನಿಷ್ಠೆ ಎಂಬ ಮುಖವಾಡವನ್ನು ಇಡಿ ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ.ಆ ಮೂಲಕ ತನ್ನ ಪಕ್ಷಕಾಗದವರು, ತನ್ನ ಸಿದ್ಧಾಂತ ವಿರೋಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಮುಂದುವರೆಸುತ್ತಾ ರಾಜ್ಯಪಾಲ ಎಂಬ ಉನ್ನತ ಸ್ಥಾನದ ಮರ‍್ಯಾದೆಯನ್ನು ಕಳಚಿ ಬಿಟ್ಟಿದ್ದಾರೆ.ರಾಜ್ಯಪಾಲ ಎಂಬ ಪದವಿ ನಾಮಕವಸ್ಥೆಯಾದರೂ ವಿಶ್ವವಿದ್ಯಾನಿಲಯಗಳ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ಅಧಿಕಾರವನ್ನು ಇಂತಹ ನೀತಿಗೆಟ್ಟ ರಾಜಕೀಕರಣಕ್ಕೆ ತಂದುದು ವಿಪರ‍್ಯಾಸವಾದುದು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ವಿಚಾರದಲ್ಲೂ ನಿರಂಕುಶ ಅಧಿಕಾರವನ್ನು ತೋರ್ಪಡಿಸಿ ಆ ಮೂಲಕ ಉಪಕುಲಪತಿ ಸ್ಥಾನಕ್ಕೆ ಅಗೌರವ ತೋರಿಸಿ ಬೀದಿ ಬದಿಯಲ್ಲಿ ನೀತಿ ಪಾಠ ಮಾಡಲು ಹೊರಟಿದ್ದ ರಾಜ್ಯಪಾಲರು ತನ್ನ ಪಕ್ಷವಾತ್ಸಲ್ಯಕ್ಕೆ ಚಿದಾನಂದ ಮೂರ್ತಿಯಂತವರೂ ಸಿಕ್ಕಿದ್ದು, ಹೆಚ್. ಆರ್. ಭಾರಧ್ವಾಜ್ ‘ರಾಜ್ಯಪಾಲ’ ಸ್ಥಾನಕ್ಕೆ ಅನರ್ಹವೆಂಬುದನ್ನು ಈ ರಾಜ್ಯದ ಜನರು ಸಾಹಿತಿ, ಸಂಶೋಧಕರು ಮತ್ತೊಮ್ಮೆ ಸಾರಿ ಹೇಳುವಂತಾಗಿದೆ.

ಅಂದ ಹಾಗೆ, ಇತರ ವಿಶ್ವವಿದ್ಯಾನಿಲಯಗಳಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ ರಾಜ್ಯಪಾಲರಿಗೆ ಇಂತಹ ಸೈದಾಂತಿಕತೆ ಯಾಕೆ ಕಂಡಿಲ್ಲ. ಅಷ್ಟಕ್ಕೂ ಚಿದಾನಂದ ಮೂರ್ತಿಯವರು ಗೌರವ ಡಾಕ್ಟರೇಟ್‌ಗೆ ಯಾಕೆ ಅನರ್ಹರು ? ಯಡಿಯೂರಪ್ಪರವರ ವಿರುದ್ಧ ಮಾತಾಡಿಲ್ಲವೆಂದ ! ಅಥವಾ ಕಾಂಗ್ರೇಸ್ ಪಕ್ಷದ ಸದಸ್ಯ ಅಲ್ಲವೆಂದ ? ಇತಿಹಾಸದ ಸತ್ಯ ವಿಚಾರಗಳನ್ನು ಹೇಳ ಹೊರಟರೆ ಆತ ಬಲಪಂಥೀಯನಾಗಿ ಬಿಡುತ್ತಾನೆ. ಅಲ್ಪಸಂಖ್ಯಾತರ ಪರ ಮಾತಾಡಿದರೆ ಆತ ಜಾತ್ಯಾತೀತ ? ಈ ರೀತಿಯ ಮಾನಸಿಕತೆ ಎಲ್ಲಿಯವರೆಗೆ ಈ ವರ್ಗದ ಜನರಲ್ಲಿ, ರಾಜಕಾರಣಿ, ಸಾಹಿತಿಗಳಲ್ಲಿ ಇರುತ್ತದೊ ಅಲ್ಲಿಯವರೆಗೆ ಅವರು ಉದ್ಧಾರವಾಗೋದಿಲ್ಲ. ಮತ್ತಷ್ಟು ಓದು »