ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2011

10

ಪರಮಾತ್ಮ

‍ನಿಲುಮೆ ಮೂಲಕ

– ಇಂಚರ

ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು.  ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ ಹಣವೇ ಮುಖ್ಯ ಅಲ್ಲವೆಂದು ಒಂದಷ್ಟು ಮಕ್ಕಳನ್ನು ಸಾಕಿಕೊಂಡು, ನೆಮ್ಮದಿಯಿಂದ ಬದುಕುತ್ತಿರುವ ಈತನಿಗೆ ಮಗನ ಹೃದಯದ ಬಗ್ಗೆ ಪರಮ ಹೆಮ್ಮೆ. ಈತ ಮಗ ಏನೂ ಮಾಡಿದರೂ ಪ್ರಶ್ನಿಸಲಾರ.  ಮಗನ ಮೇಲೆ ಅದಮ್ಯ ವಿಶ್ವಾಸ.  ಈಗಿನ ಅಪ್ಪಂದಿಗಿರುವ ಆತಂಕ, ನಿರೀಕ್ಷೆ ಈ ಅಪ್ಪನಿಗಿಲ್ಲ. ಹಾಗೆಯೇ ಅಪ್ಪ ನೀಡಿರುವ ಸ್ವಾತಂತ್ರದ ಇನಿತೂ ದುರುಪಯೋಗ ಪಡೆಯದ ಮಗ ಕಾಲೇಜಿನ ಪರೀಕ್ಷೆಯೊಂದನ್ನು ಬಿಟ್ಟು ಜೀವನದ ಎಲ್ಲಾ ಪರೀಕ್ಷೆಗಳಲ್ಲೂ ಫಸ್ಟ್ ಕ್ಲಾಸ್ ಪಾಸ್. ಮಗ ಪರೀಕ್ಷೆ  ಪಾಸಾಗಲಿಲ್ಲವೆಂಬ ಕೊರಗು ಅಥವಾ ಮಗ ತನ್ನಂತೆಯೇ ವೈದ್ಯನಾಗಬೇಕೆಂಬ ಹಂಬಲವೂ ಕೂಡ ಈ ಅಪ್ಪನಿಗಿಲ್ಲ. ಆತನಿಗಿರುವ ಕಾಳಜಿಯೊಂದೇ, ತನ್ನ ಮಗನ ಹೃದಯಕ್ಕೆ ನೋವಾಗಬಾರದು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲರೂ ಎದುರಿಸುತ್ತಿರುವ ಆತಂಕ, ಒತ್ತಡ, ಸೋಲು, ಕಿರಿಕಿರಿ, ನಿರಾಶೆ ಇವುಗಳೆಲ್ಲವನ್ನೂ ಬಿಟ್ಟು ನಿರಾಳವಾಗಿ ಬದುಕುವುದು ಹೇಗೆ ಎಂಬುದನ್ನು ತೋರಿಸುವ ಮಾದರಿ ಈ ಅಪ್ಪ, ಮಗ!

ನಾಯಕನಿಗೆ ಇಬ್ಬರೂ ನಾಯಕಿಯರು. ನಾಯಕನಿಗೆ ಸಿನೆಮಾ ಥಿಯೇಟರ್ ನಲ್ಲಿ ದಿಢೀರನೆ ಪರಿಚಯವಾಗುವ ಹುಡುಗಿಯೊಂದಿಗೆ ಉಂಟಾಗುವ ಪ್ರೀತಿ! ಆಕೆ ಸುಂದರಿಯಲ್ಲ, ಆಕೆಗೆ ಇವನು ನುಸಿಪೀಡೆ!, ಮದುವೆಗೂ, ಮಸಣಕ್ಕೂ ನುಡಿಸುವ ಶಹನಾಯಿ ಸಂಗೀತವೆಂದರೆ ಈತನಿಗೆ ಅಷ್ಟಕಷ್ಟೆ. ಆಕೆ ಈತನಿಗಿಷ್ಟವಿಲ್ಲದಿರುವ ಶಹನಾಯಿ ನುಡಿಸುವುದರಲ್ಲಿ ಪರಿಣಿತೆ!  ಆದರೂ ಅವಳನ್ನು ಬೆಂಬಿಡದಂತೆ ಒಲಿಸಿಕೊಳ್ಳುವ ಪರಿ, ಮೊದಮೊದಲು ಒಲ್ಲೆ ಎನ್ನುತ್ತಲೇ ಆಕೆ ಈತನನ್ನು ಪ್ರೇಮಿಸುವುದು, ರಾಜಮನೆತನದ ಈಕೆಯ ಹಿರಿಯರು ಕೂಡ ನಾಯಕ, ನಾಯಕನ ತಂದೆಯ ಹೃದಯ ಶ್ರೀಮಂತಿಕೆಗೆ ಮಾರು ಹೋಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ.  ಮತ್ತೊಬ್ಬಳು ಕಾಲೇಜಿನ ಸಹಪಾಠಿ, ಅನಾಥೆ, ಸುಂದರಿ, ನಾಯಕನ ಪ್ರತಿಯೊಂದು ವಿಷಯವೂ ಈಕೆಗೆ ಗೊತ್ತಿದೆ, ಆತ ಮತ್ತೊಬ್ಬಳನ್ನು ಪ್ರೀತಿಸುತ್ತಿರುವುದು ಕೂಡ!  ಈಕೆ ನಾಯಕನಲ್ಲಿ ಅನುರಕ್ತೆ. ಪ್ರತಿ ಬಾರಿಯೂ ಆಕೆ ತನ್ನ ಪ್ರೀತಿಯನ್ನು ಇನ್ನಿಲ್ಲದಂತೆ ವ್ಯಕ್ತ ಪಡಿಸುತ್ತಾಳೆ, ನಾಯಕ ಮತ್ತೊಬ್ಬಳೊಂದಿಗೆ ಮದುವೆಯಾಗಬಾರದೆಂದು ಬಹಳಷ್ಟು ಪ್ರಯತ್ನಿಸಿದರೂ ಸೋಲುತ್ತಾಳೆ.  ಆತನ ಮದುವೆಯಾದ ನಂತರವೂ ಕೂಡ ಆಕೆ ತನ್ನ ಪ್ರಯತ್ನವನ್ನು ಬಿಡುವುದಿಲ್ಲ.  ಈ ಎಲ್ಲಾ ವಿಷಯಗಳು ತಿಳಿದಿದ್ದರೂ ನಾಯಕ ಮಾತ್ರ ನಿರ್ಲಿಪ್ತ.  ಆದರೆ ಆತ  ಈಕೆಯೊಂದಿಗಿನ ತೋರುವ  ಸ್ನೇಹದಲ್ಲಿ ಮಾತ್ರ ಇನಿತೂ ಕಪಟವಿಲ್ಲ. ಮದುವೆ ಆಯಿತು, ಮಗುವಾಯಿತು, ಜೀವನ ಅತ್ಯಂತ ಸುಖಮಯವಾಗಿ ಸಾಗುತ್ತಿದೆ, ಸಂತೃಪ್ತ ಜೀವನ ಎಂದನ್ನಿಸುವಾಗ, ಕಥೆಗೊಂದು ತಿರುವು, ಈ ಸಂತಸದ ಭಾರ ತಾಳಲಾರದೇ ಹೆಂಡತಿಯ ಹೃದಯ ಸೋಲುವುದು, ಆಕೆಯ ಸಾವಿನ ನಂತರ ಮುಂದೇನು? ಗೆಳತಿಯೇ ಪತ್ನಿಯಾಗುವಳೇ? ಆತನ ಸ್ನೇಹ ಗೆಲ್ಲುತ್ತದೆಯೋ? ಈಕೆಯ ಪ್ರೀತಿ ಗೆಲ್ಲುತ್ತದೆಯೋ? ಇದು ಚಿತ್ರದ ಕ್ಲೈಮಾಕ್ಸ್.

ಇಡೀ ಚಿತ್ರದುದ್ದಕ್ಕೂ ಯಾವುದೇ ಇಮೇಜಿನ ಹಂಗಿಲ್ಲದೆ, ಪಾತ್ರವೇ ತಾನೆಂಬಂತೆ ನಟಿಸಿರುವ ಪುನೀತ್ ಹಾಗೂ ಗೆಳತಿಯ ಪಾತ್ರದಲ್ಲಿ, ಚೆಲ್ಲುಚೆಲ್ಲಾಗಿ, ಮಗುವಿನಂತೆ ಮುದ್ದಾಗಿ ನಟಿಸಿರುವ ಐಂದ್ರೀತಾ  ಚಿತ್ರದ ಹೈಲೈಟ್. ಗ್ರಾಫಿಕ್ಸ್ ಸ್ವಲ್ಪ ಹೆಚ್ಚೆನಿಸಿ, ಕಿರಿಕಿರಿ ಉಂಟು ಮಾಡಿದರೂ ಪುನೀತ್ ರ ನೃತ್ಯ, ಇದೆಲ್ಲವನ್ನೂ ಮರೆಸಿಬಿಡುತ್ತದೆ.  ಪ್ರತಿ ಚಿತ್ರದಲ್ಲೂ ತಮ್ಮ ಪ್ರಾಣಿಪ್ರೀತಿಯನ್ನು ತೋರಿಸುವ ಭಟ್ಟರು ಇದ್ರಲ್ಲಿ ತೋರಿಸಿರುವ ಗ್ರಾಫಿಕ್ಸ್ ಅಳಿಲು! ಅವರ ಹಿಂದಿನ ಚಿತ್ರಗಳಲ್ಲಿ ಪ್ರಾಣಿಗಳು ಮೋಡಿ ಮಾಡಿದಂತೆ ಮಾಡುವುದಿಲ್ಲ.  ಬಲವಂತವಾಗಿ ಆ ಪಾತ್ರವನ್ನು ತುರುಕಿದಂತೆ ಅನಿಸುತ್ತದೆ.  ಇನ್ನೂ ಮತ್ತೊಬ್ಬ ನಾಯಕಿ ದೀಪ ಸನ್ನಿಧಿಯ ನಟನೆ ಕೆಲವೊಂದು ಸನ್ನಿವೇಶಗಳಲ್ಲಿ ನಾಟಕೀಯ ಎಂದೆನಿಸಿಬಿಡುತ್ತದೆ. ಅಳುವಿನ ಸಂದರ್ಭಗಳಲ್ಲಂತೂ ಆಕೆಯನ್ನು ನೋಡಲಸಾಧ್ಯ.  ಇನ್ನುಳಿದಂತೆ ಇನ್ನಿತರರ ನಟನೆಯ ಬಗ್ಗೆ ಎರಡು ಮಾತಿಲ್ಲ.

ಮಧ್ಯಂತರದ ನಂತರ ಚಿತ್ರ ದೀರ್ಘವೆಂದೆನಿಸಿ ಸ್ವಲ್ಪ ಮಟ್ಟಿಗೆ ಬೋರ್ ಆಗುತ್ತದೆಯಾದರೂ, ಪ್ರೀತಿ, ಪ್ರೇಮ ಎಲ್ಲಾ ಸುಳ್ಳು, ಟೈಮ್ ಪಾಸ್ ಗಾಗಿ ಮಾತ್ರ ಎಂದೆನ್ನುವ ಈಗಿನ ಯುವಜನಾಂಗದ ನಡುವೆಯೂ, ಈ ತರಹದ ಪ್ರೀತಿ, ಸ್ನೇಹ ಕೂಡ ಇರುತ್ತದೆಯೆಂಬ ಆಶಾಕಿರಣವನ್ನು ಈ ಚಿತ್ರ ಹಾಗೂ ಪುನೀತ್ ರ ನಟನೆ ಹುಟ್ಟು ಹಾಕುವುದರಲ್ಲಿ ಯಶಸ್ವಿಯಾಗುತ್ತದೆ.  ಚಿತ್ರದಿಂದ ಚಿತ್ರಕ್ಕೆ ಭಟ್ಟರು ತತ್ವಜ್ಙಾನಿಯಾಗುತ್ತಿದ್ದಾರೇನೋ ಎಂಬ ಭಾವನೆ ಮೂಡಿಸುತ್ತದೆ. ಯಾವುದೇ ಅತಿಯಾದ ನಿರೀಕ್ಷೆಗಳಿಲ್ಲದೆ ಈ ಚಿತ್ರವನ್ನು ನೋಡಿದರೆ, ೭೦, ೮೦ ರ ದಶಕಗಳ ರಾಜ್ ರ ಸಾಮಾಜಿಕ / ಕೌಟುಂಬಿಕ ಚಿತ್ರವೊಂದನ್ನು ನೋಡಿದಂತಾಗುವುದು. ಒಮ್ಮೆ ನೋಡಲಡ್ಡಿಯಿಲ್ಲ

10 ಟಿಪ್ಪಣಿಗಳು Post a comment
  1. abhi082941@gmail.com's avatar
    ಆಕ್ಟೋ 10 2011

    ಸಾ೦ಪ್ರಾದಾಯಿಕ ಚಿತ್ರಗಳಿಗಿ೦ತ ಇದು ಬಿನ್ನ ಮತ್ತು ನಿರೂಪಣೆ ವಿಬಿನ್ನವಾಗಿ ಮೂಡಿ ಬ೦ದಿದೆ
    ಹಾಡುಗಳ೦ತು ಅತೀ ಅದ್ಬುತ. ಲೈಫು ಇಷ್ತೆನೆ ಮತ್ತು ಪರಮಾತ್ಮ ಎರಡು ಚಿತ್ರಗಳನ್ನು ನೋಡಲು ಮರೆಯದಿರಿ
    ಯಾಕೆ೦ದರೆ ಈ ರೀತಿಯ ಚಿತ್ರ ಮು೦ದೆ ಬರುವುದು ಅತೀ ವಿರಳ!

    Reply
  2. ಸತ್ಯಚರಣ ಎಸ್. ಎಮ್. (Sathya Charana S.M.)'s avatar
    ಆಕ್ಟೋ 10 2011

    ಹೌದು ಇಂಚರ.. ನಿಮ್ಮ ಬಹಳ ಮಾತುಗಳು ನಿಜ ಅನ್ನಿಸಿದ್ದು ಇಂದು ನಾ ಚಲನಚಿತ್ರ ನೋಡಿದ ನಂತರ..!
    ಆದರೆ, ಅಲ್ಲಿ ಕೂತವರ ಹಲವರ ನಿರೀಕ್ಷೆ ಹುಸಿಯಾಗುವಂತೆ ಮಾಡಿದ್ದನ್ನ ಯೋಗರಾಜ್ ಭಟ್ ಗಮನಿಸಬೇಕಿದೆ..!
    “ಹೇ.. ಫ್ಲಾಪ್ ಕಣಲೇ..!”, “ಒಳ್ಳೆ ಸೀರಿಯಲ್ ನೋಡಿದಂತಾಗುತ್ತಿದೆ..!”, ನಾಯಕಿ (ಮದುವೆಯಾದವಳು – ದೀಪ ಹೆಸರಿನವಳು) ನಟನೆ, ತುಂಬಾ ನಾಟಕೀಯ ಅನ್ನಿಸೋದು, ಹಲವು ಬಾರಿ ಅಸಹನೀಯ ಅನ್ನಿಸಿದ್ದು ನನಗೂ ಆದ ಅನುಭವ. ಒಟ್ಟಿನಲ್ಲಿ, ಹಲವರ ಅಂಬೋಣ, ಸಿನಿಮಾ ಅಂತಾ ಗೆಲುವಿನದ್ದಲ್ಲಾ.. 😦

    ನಿಮ್ಮೊಲವಿನ,
    ಸತ್ಯ.. 🙂

    Reply
  3. education's avatar
    education
    ಆಕ್ಟೋ 12 2011

    ಹೌದು ಮೊದ ಮೊದಲು ಲವಲವಿಕೆಯಿಂದ ಕೂಡಿದ್ದ ಚಿತ್ರ ಬೋರಾಗುವುದು ಅತಿ ಎನಿಸುವ ಕೊನೆ ಕೊನೆಯ ಫ್ಲಾಶ್ ಬ್ಯಾಕಿನ ಪಾತ್ರಗಳಿಂದ ತೀರಾ ನಾಟಕೀಯ ಎನಿಸುತ್ತದೆ
    ನಿಧಾನವಾಗಿ ವಿಷಾಧದತ್ತ ಎಳೆದೊಯ್ಯುವ ಭಟ್ಟರ ಗಿಮಿಕ್ ಇಲ್ಲಿ ಫ್ಲಾಪ್ ಆಗಿದೆ ಎನಿಸುತ್ತದೆ

    Reply
  4. ROOPA's avatar
    ಆಕ್ಟೋ 12 2011

    ಹೌದು ಮೊದ ಮೊದಲು ಲವಲವಿಕೆಯಿಂದ ಕೂಡಿದ್ದ ಚಿತ್ರ ಬೋರಾಗುವುದು ಅತಿ ಎನಿಸುವ ಕೊನೆ ಕೊನೆಯ ಫ್ಲಾಶ್ ಬ್ಯಾಕಿನ ಪಾತ್ರಗಳಿಂದ ತೀರಾ ನಾಟಕೀಯ ಎನಿಸುತ್ತದೆ
    ನಿಧಾನವಾಗಿ ವಿಷಾಧದತ್ತ ಎಳೆದೊಯ್ಯುವ ಭಟ್ಟರ ಗಿಮಿಕ್ ಇಲ್ಲಿ ಫ್ಲಾಪ್ ಆಗಿದೆ ಎನಿಸುತ್ತದೆ

    Reply
  5. prashasti.p's avatar
    ಆಕ್ಟೋ 13 2011

    ಹಾಡು ನೋಡಿ ಮರುಳಾಗಿದ್ವಿ.. ಲೈಫು ಇಷ್ಟೇನೆ ನಲ್ಲೂ ಇದೇ ಕಥೆ.ಕೊನೆಗೆ ಇಷ್ಟೇನಾ ಸಿನಿಮಾ ಅಂತನನಿಸೋಕೆ ಶುರು ಆಯ್ತು. ಗಟ್ಟಿ ಕಥೆ ಇಲ್ಲದೇ ಬರೀ ಸಂಭಾಷಣೆಯಿಂದನೇ, ದೃಶ್ಯಗಳಿಂದಲೇ ಪ್ರೇಕ್ಷಕರನ್ನು ಸಮಾಧಾನ ಪಡಿಸೋಕೆ ಸಾಧ್ಯ ಇಲ್ಲ ಅನ್ಸತ್ತೆ. ಆದರೆ ಇದಕ್ಕಾಗಿ ಭಟ್ಟರನ್ನು ದೂರಬೇಕಾಗಿಲ್ಲ.. ಅವರ ಶೈಲಿಯೇ ಅಂತದ್ದು.. “ಖಾಲಿ ಡಬ್ಬ ಬಡೀತಾ ಇದೀನಿ. ಅದು ಎಲ್ಲಿಯವರೆಗೆ ಶಬ್ದ ಬರುತ್ತೋ ಗೊತ್ತಿಲ್ಲ..” ಅಂತ ಅವರೇ ಹಿಂದೆ ಹೇಳಿದ್ದರಲ್ಲ..

    Reply
  6. prakash's avatar
    prakash
    ಆಕ್ಟೋ 13 2011

    Bhattara route , Amith route bere bere… they never meet… I can withstand PJ’s from Punith’s mouth …
    Yogaraj bhat should seriously think of narrating good stories.. not the inciedent/events around a PJ – fellow.
    Heroine presentation will be very poor, she will be so characterless in the movies (Pancharangi,Paramathma)…yaav huDuganna noDidre..aa hudugage love shuru aagutthe…no genuine impression/reasons

    Reply
    • prakash's avatar
      prakash
      ಆಕ್ಟೋ 13 2011

      its not amith ..pls correct it as Punith 🙂

      Reply
      • prakash's avatar
        prakash
        ಆಕ್ಟೋ 13 2011

        also..”I can withstand PJ’s from Punith’s mouth … ” should have been “I can not withstand PJ’s from Punith’s mouth …”

        Reply
  7. abhi082941@gmail.com's avatar
    ಆಕ್ಟೋ 15 2011

    ಅದು ನಿಜನೆ ನಮ್ಮವರಿಗೆ ಯಾವಗಲು ಈ ರೀತಿಯ ಚಿತ್ರಗಳು ಇಷ್ತವಾಗುವುದಿಲ್ಲ, ಅವರಿಗೆ ಎನಿದ್ದರೂ ಲಾ೦ಗ್ ಮಚ್ಚು, ತಾಯಿ ಸೆ೦ಟಿಮೆ೦ಟ್, ಅದೇ ಮಾಮುಲಿ ಚಿತ್ರಗಳೆ ಸರಿ, ಇ ರೀತಿಯ ಉತ್ತಮ ನಿರೂಪಣೆಯ ಚಿತ್ರ ಇಷ್ತವಾಗುವುದೆ ಕಷ್ತವೆ! ಇಲ್ಲಿ ಚಿತ್ರಕತೆಯಿಲ್ಲ ನಿಜ ಆದರೆ ಪಾತ್ರವೆ ನಿಜವಾದ ಚಿತ್ರಕಥೆ ಹಿರೊಯಿನ್ ಹೊಸಬಳೆ ಇರಬಹುದು ಮತ್ತು ಇನ್ನು ಕಲಿಯುವುದು ಇನ್ನೂ ಇದೆ ನಿಜ, ಆದರೆ ಆ ಪಾತ್ರದ ವಿಶೇಷವೆ ಬೇರೆ ಅದು ಅದ್ಬುತ
    ಅದು ಯೋಗರಾಜ್ ಭಟ್ರ ಕೈಯಲ್ಲಿ ಮಾತ್ರ ಸಾಧ್ಯ! ಈ ರೀತಿಯ ಚಿತ್ರಗಳು ಪ್ರಬುದ್ಧ ನಿರ್ದೇಶಕರಿ೦ದಲೆ ಬರಬೇಕು ಹಾಗು ವೀಕ್ಶಕರು ಕೂಡ ಪ್ರಬುದ್ದಾರಾಗಿರಬೇಕಷ್ತೆ

    Reply
  8. Prashasti's avatar
    ಆಕ್ಟೋ 19 2011

    ಎಲ್ಲಿಯ ಹಿಮಾಲಯ, ಎಲ್ಲಿ ಮಂಗಳೂರು, ಎಲ್ಲಿ ಬೆಂಗಳೂರು, ಎಲ್ಲಿ ತೀರ್ಥಹಳ್ಳಿ, ಎಲ್ಲಿಯ ಟೇಕ್ವಾಂಡೋ.. ಎಲ್ಲವನ್ನೂ ಬೆಸೆದಿರೋ ರೀತಿ.. ಕಂಪ್ಯೂಟರ್ನಲ್ಲಿ loading ಅಂತ ತೋರಿಸೋ ತರ ಶುರುವಲ್ಲಿ ಕಥೆ ಹೇಳಿ ಪ್ರೇಕ್ಷಕನನ್ನ ಚಿತ್ರಕ್ಕೆ ತಯಾರು ಮಾಡೋ ರೀತಿ, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡೇ ಇರುವ ಹಾಡು, ಪೈಟುಗಳು.. ಎಲ್ಲವೂ ಚೆನ್ನಾಗಿದೆ. ನಿನ್ನೆ ಶಿವಮೊಗ್ಗದಲ್ಲಿ ಚಿತ್ರ ನೋಡಲಿಕ್ಕೆ ಹೋದಾಗ ಹೌಸ್ ಫುಲ್ ಪ್ರದರ್ಶನ.. ಎಲ್ಲೂ ಬೇಸರವಾಗದಂತೆ ನೋಡಿಸಿಕೊಂಡು ಹೋಗ್ತಿತ್ತು ಚಿತ್ರ.. ಮಚ್ಚು, ಲಾಂಗುಗಳನ್ನೇ ಚಿತ್ರ ಅನ್ನೋ ಪರಿಸ್ಥಿತಿಗೆ ಬಂದಿರೋ ಈಗ ಇಂತಹ ವಿಭಿನ್ನ ಪ್ರಯೋಗಗಳನ್ನ ಒಪ್ಕೋಳ್ಳೋದು ಕಷ್ಟ ಆಗ್ಬೋದು ಕೆಲವರಿಗೆ. . ನಾಯಕ ಇಷ್ಟ ಪಟ್ಟವಳನ್ನ ಅವ್ನು ಮದ್ವೆ ಆಗಿ ಮಗೂನು ಆಗಿರುತ್ತೆ. ಅವನನ್ನ ಇಷ್ಟಪಟ್ಟು ಆದರೆ ಅವನು ಇಷ್ಟಪಡ್ದೇ ಇರೋಳು ಅವನನ್ನ ಬಿಟ್ಟು ಹೋಗ್ತಾಳೆ. ಇದ್ದ ಹೆಂಡತಿ ಸಾಯ್ತಾಳೆ.. ಆದರೆ ಇದರಲ್ಲಿ ಅಂತಹ ದುರಂತ ಏನಿದೆ ಅಂತ ಅರ್ಥ ಆಗ್ತಿಲ್ಲ.. ನಾಯಕ ಹುಚ್ಚ ಆಗೋದು, ದೇವದಾಸ ಆಗೋದು, ಏನೂ ಇಲ್ದೇ ಸಾಯೋದು ಇವೆಲ್ಲಾ ದುರಂತ.. ಇಲ್ಲಿ ಅವನದೇ ಆದ ಮಗು ಇದೆ, ಸ್ನೇಹಿತರಿದಾರೆ, ಮಗು ಇದೆ, ಅಪ್ಪ ಇದಾನೆ.. ಅದೆಲ್ಲಾ ಇದ್ದ ಮೇಲೂ ಇದು ದುರಂತನಾ? .. ಒಮ್ಮೆ ನೋಡೋದಕ್ಕೆಂತೂ ಚೆನ್ನಾಗಿಯೇ ಇದೆ ಚಿತ್ರ.

    Reply

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments