ಆಜಬ್ಬ
– ಅಬ್ದುಲ್ ಸತ್ತಾರ್ ಕೊಡಗು
ಅದು ರಸ್ತೆ ಬದಿ. ಹೇಳ್ಕೊಳ್ಳೋಕೆ ಜಿಲ್ಲಾ ಹೆದ್ದಾರಿ ಆಗಿದ್ರೂ ಯಾರು ಈ ಸ್ಥಾನ ಕೊಟ್ರೋ ಗೊತ್ತಿಲ್ಲ. ದಿನಕ್ಕೆ ಮೂವತ್ತು ಗಾಡಿ ಓಡಾಡೋದೇ ಹೆಚ್ಚು. ಬರೀ ಗುಂಡಿಗಳಲ್ದೆ ರಸ್ತೆ ಏನೂ ಕಾನ್ತಿರ್ಲಿಲ್ಲ. ಒಂದು ಮಳೆಗಾಲಕ್ಕೆ ರಸ್ತೆ ಬದೀಲಿದ್ದ ಮರಗಳೆಲ್ಲಾ ಕೆಯೀಬಿಯೋರ ಇದ್ದ ಬದ್ದ ಕರೆಂಟು ಕಂಬದ ಮೇಲೆ ಬಿದ್ದಿದ್ದ್ರಿಂದ ಅವ್ರು ಆ ಮರಕ್ಕೆಲ್ಲಾ ಮೋಕ್ಷಾ ಕೊಟ್ಟಿದ್ರು. ವರ್ಷದ ಹಿಂದೆ ಕಡ್ದು ಹಾಕಿದ್ದ ಆ ಮರಗಳ ಬುಡ ಹಾಗೆ ಇದ್ದು ಈಗ ಸಂಪೂರ್ಣ ಒಣಗಿ ಹೋಗಿತ್ತು. ಮಾಗೊಡಪ್ಪನ ಅಂಗ್ಡಿಯಿಂದ ಹತ್ತಿಪ್ಪತ್ತು ಮೀಟರು ದೂರದಲ್ಲಿರೋ, ಕೆಯೀಬಿಯೋರ ಗರಗಸಾಕ್ಕೆ ಪ್ರಾಣ ಕೊಟ್ಟಿದ್ದ ಆ ಮರಗಳ ಬುಡ ನೆಲದಿಂದ ಎರಡಡಿ ಮೇಲೆ ನಿಂತಿದ್ವು. ಅವಕ್ಕೂ ಈಗ ಮೋಕ್ಷ ಸಿಕ್ಕಿತ್ತು.
ಆಜಬ್ಬನ ವಯ್ಸು ಸುಮಾರು ಅರವತ್ತು ದಾಟಿದೆ. ಬರೀ ಮೂಳೆ ಸ್ತಿತೀಗೆ ತಲುಪಿರೋ ಆಜಬ್ಬ ಹೊಟ್ಟೆ ಪಾಡಿಗೆ ರಸ್ತೆ ಬದೀಲಿದ್ದ, ಇಲ್ಲಾ ಇನ್ನೆಲ್ಲೇ ಸೌದೆ, ಕುಂಟೆ ಕಂಡರೆ ಅವನ್ನೆಲ್ಲಾ ಅವನ ಸೈಕಲ್ ಚಕ್ರದ ತಳ್ಳೋ ಗಾಡೀಲಿ ತುಂಬಿಸ್ಕೊಂಡು ಅಡ್ವಾನ್ಸಾಗಿ ಹೇಳಿದ್ದವ್ರ ಮನೆಗೆ ಸಾಗಿಸ್ತಿದ್ದ. ಒಂದು ಹೊರೆಗೆ ಹತ್ತಿಪ್ಪತ್ತು ರೂಪಾಯಿ ಜೊತೆಗೆ ಆಯಾ ಹೊತ್ತಿನೂಟ ಕೂಡ ಸಿಗ್ತಿತ್ತು. ಇತ್ತೀಚಿಗೆ ಸೌದೆ ಅಭಾವ ಉಂಟಾಗ್ತಾ ಬಂದಿದ್ರಿಂದ ರಸ್ತೆ ಬದೀಲಿದ್ದ ಒಂದೊಂದೇ ಬೊಡ್ಡೆ ಆಜಬ್ಬಂಗೆ ಸ್ವಾಹ ಆಗಿತ್ತು. ಮಾಗೊಡಪ್ಪನ ಅಂಗ್ಡಿ ಸಮೀಪ ಇರೋ ಆ ಬುಡಾನ ಕಡಿಯೋಕೆ ಆವತ್ತು ಗಾಡೀಲಿ ಗುದ್ಲಿ ಕೊಡಲಿ ಹಾಕ್ಕೊಂಡು ಬಂದಿದ್ದ ಆಜಬ್ಬ.
ಜಯಶಂಕ್ರ ಬಸ್ಸು ಆ ರಸ್ತೇಲಿ ಅದರ ಚಕ್ರಾನ ಪ್ರಾಯಾಸ ಪಟ್ಕೊಂಡು ಇಳಿಸ್ತಾ ಯೇರಿಸ್ತಾ ಬರ್ತಿದ್ದನ್ನ ಕಂಡ ಆಜಬ್ಬ ಸೌದೆ ಒಡಿಯೋದನ್ನ ನಿಲ್ಸಿ ಕೊಡಲೀನ ಗಾಡಿಗೆ ಆನಿಸಿ ಮದ್ಯಾನ ಆಗ್ತಿದೆ ಅಂತಾ ಅಂದಾಜು ಮಾಡ್ದ. ಹಟಾ ಹಿಡ್ದು ಸೌದೆ ಹೊಡಿತಿದ್ರಿಂದ ಆಜಬ್ಬಂಗೆ ಸುಸ್ತಾಗಿ ಉಸ್ರಾಟ ಹೆಚ್ಚಾಗಿತ್ತು. ಗಾಡೀಲಿ ಹಕ್ಕೊಂದ್ಬಂದಿದ್ದ ಬಾಟಲಿ ತೆರದು ನೀರು ಕುಡ್ದು ಸ್ವಲ್ಪ ಮುಖಕ್ಕೂ ಯೆರಚ್ಕೊಂಡ. ಹೊಟ್ಟೆ ಚುರುಗುಟ್ತಾ ಬೆನ್ನಿಗೆ ಅಂಟಿತ್ತು. ಉದ್ದುದ್ದ ಕೈ ಕಾಲು ಸುಕ್ಕು ಹಿಡ್ದು ಕೆನ್ನೆ, ಕಣ್ಣು ಗುಳೀ ಸೇರಿ ಸುಮಾರು ವರ್ಷ ಆದಂಗಿತ್ತು. ಸುಸ್ತು ಸ್ವಲ್ಪ ಕಡಮೆ ಆದ್ರಿಂದ ಪಂಚೆನ ಬಿಚ್ಚಿ ಮೇಲಕ್ಕೆ ಕಟ್ಕೊಂಡು ಅಮರು ಬೀಡಿ ಹಚ್ಚಿ ಕೊಡ್ಲೀನ ಕೈಗೆ ತಗೊಂಡ. ಗಾಡೀಲಿ ಈಗಾಗ್ಲೆ ಎರಡು ಹೊರೆಷ್ಟು ಸೌದೆ ತುಂಬಿತ್ತು. ಎರಡಡಿ ಇದ್ದ ಆ ಬುಡ ಈಗ ನೆಲಾ ಮಟ್ಟವಾಗಿತ್ತು. ಕೊಡ್ಲಿಯಿಂದಿನ್ನು ಆಗೋದಿಲ್ಲ ಅಂತ ಗಾಡೀಲಿದ್ದ ಗುದ್ಲಿ ತಗೊಂಡು ಬೇರ ಮಣ್ಣ ಬಿದ್ಸೋಕೆ ಶುರುವಾದ. ಮಣ್ಣ ಕೆಬರೀ ಕೆಬರೀ ಅವರ ಸುತ್ತ ಹೊಂಡಾನೇ ಸೃಷ್ಟಿ ಮಾಡ್ದ. ಇನ್ನೊಂದು ಹೊರೆ ಸೌದೆ ಆಗುತ್ತೆ ಅಂತ ಅಂದಾಜು ಮಾಡ್ತಿರೋವಾಗ ಹೊಟ್ಟೆ ಏನಾದ್ರೂ ಬೇಕು ಅಂತಿತ್ತು. ಕೊಡ್ಲಿ ಗುದ್ಲೀನ ಅಲ್ಲಿತ್ತು ಸೀದಾ ಮಾಗೊಡಪ್ಪನ ಅಂಗ್ಡಿ ಕಡೆ ಹೋದ.
ಅವತ್ತಿನ ಪತ್ರಿಕೇಲಿ ಓದಿದ್ದನ್ನೇ ತಿರುಗ್ಸಿ ಮರುಗ್ಸಿ ಓದ್ತಾ ಅಂಗಡೀಲಿ ಕೂತಿದ್ದ ಮಾಗೊಡಪ್ಪಂಗೆ ಆಜಬ್ಬ ಟೀ ಬನ್ನು ಕೇಳಿದ್ದನ್ನ ಕೇಳಿ ರೇಗಿ ಹೋಯ್ತು. ಆ ಕ್ಷಣ ಸುಮ್ನಿದ್ದು ಬುಕ್ಕಿನಲ್ಲಿ ಆಜಬ್ಬನ ಲೆಕ್ಕಾ ನೋಡ್ದ. ಮೂರು ವಾರದಿಂದ ಆಜಬ್ಬ ಅಕೌಂಟಿನ ದುಡ್ಡು ಕೊಟ್ಟಿತ್ತಿಲ್ಲ. ತೆರೆದ ಬಾಯ್ಗೆ ಮೂವತ್ತೇಳು ರೂಪಾಯಿ ಮೊದ್ಲು ಮಡಗು ಆಜಬ್ಬಾಕ ಅಂದ. ಕೋಪ ಮಾಡ್ಕೋಬೇಡ ಮೋನೆ, ಮತ್ತೆ ಬಂದು ಅರ್ದ ಕಾಸು ಕೊಡ್ತೀನಿ, ಈಗೊಂದು ಟೀ ಬನ್ನು ಕೊಡು ಮೋನೆ ಅಂದ. ಮತ್ತೂ ಕುದ್ದು ಹೋದ ಮಾಗೊಡಪ್ಪ ಮರ್ಯಾದೆಯಿಂದ ಹೇಳ್ತಿದ್ದೆನಿ, ಕಾಸು ಈಗ ಮಡ್ಗಬೇಕು, ಆಮೇಲೆ ಏನಿದ್ರೂ ಅಂದ. ಮಾಗೊಡಪ್ಪನ ಮುಖ ಕಂಡು ಇಲ್ಲೇನೂ ಗೀಟೋದಿಲ್ಲ ಅಂತ ಗೊತ್ತಾಗಿ ಹೋಗ್ಲಿ, ಒಂದು ಚೆಂಬು ನೀರು ಕೊಡು ಅಂದಾಗ ಏನೂ ಉತ್ರ ಬರ್ಲಿಲ್ಲ. ಗಾಡೀಲಿರೋ ನೀರು ಕುಡ್ದರಾಯಿತೆಂದು ಅಂದಾಜು ಮಾಡಿ ಅಂಗ್ಡಿ ಕಟ್ಟೇಲಿ ಕೂತ. ಹೊಟ್ಟೆ ವೇದನೆ ಈಗ ಕೈಕಾಲಿಗೂ ಬಂದು ನಿಷ್ಯಕ್ತವಾಗಿದ್ದ. ಪಂಚೆ ಅಡೀಂದ ಕೈ ಹಾಕಿ ದೊಗಲೆ ಚದ್ದೀಲಿರೋ ಬೀಡಿ ಕಟ್ಟು ತೆಗದು ಬೀಡಿ ಹಚ್ಕೊಂಡ. ಕಿಟಕೀ ಸಂದೀಲಿ ಆಜಬ್ಬನ್ನೊಮ್ಮೆ ನೋಡ್ದ ಮಗೊದಪ್ಪಂಗೆ ಕೋಪ ಜರ್ರನೆ ಇಳೀತು. ಮಣ್ಣ ಬಣ್ಣವಾಗಿ ಕೆದರ್ಕೊಂಡಿದ್ದ ತಲೀಂದ ಬೆವರು ಇಳೀತಿತ್ತು. ಆಜಬ್ಬ ಪೂರ್ತಿ ಸುಸ್ತಾಗಿರೋದು ನೋಡ್ದ ಮಾಗೊಡಪ್ಪ ಅಂಗಡೀಂದ ಸೀದಾ ಮನೆಯೋಳಗೋಗಿ ಚೆಂಬು ನೀರು ಅದ್ರ ಜೊತೆ ಬೆಳಗ್ಗೆ ಮಡಿ ಜಾಸ್ತಿ ಆಗಿದ್ದ ನೀರ್ದೊಸೇನ ತಂದು ಆಜಬ್ಬಂಗೆ ಕೊಟ್ಟ. ನೀರ್ದೊಸೇನ ಗಬಗಬಾಂತ ತಿಂದು ನೀರು ಕುಡ್ದು ಮತ್ತೊಂದು ಬೀಡಿ ಹಚ್ಕೊಂಡು ಚೆಂಬನ್ನ ಮಿಟಾಯಿ ಡಬ್ಬದ ಮೇಲಿತ್ತು ಗಾಡಿ ಕಡೆ ನಡೆದ. ಆಜಬ್ಬ ಅಂಗಡೀಂದ ಇಳ್ದು ಹೋದರೂ ಅವ್ನ ರೂಪ ಮಗೊದಪ್ಪನ ಮನಸ್ಸಿಂದ ಹೋಗದೆ ಕುಣದು ಆಡೋಕೆ ಶುರುವಾಯ್ತು.
ಹೌದು, ಹಿಂಗಿದ್ದ ಆಜಬ್ಬ ಹಿಂಗಿರ್ಲಿಲ್ಲ. ಅವ್ನ ನಿಜಾ ಹೆಸರು ಹಾಜ್ ಅಬ್ಬಾಸ್ ಅಂತ. ಅದು ಬರ್ತಾ ಬರ್ತಾ ಹಾಜಬ್ಬ ಆಗಿ ನಂತರ ಆಜಬ್ಬ ಆಯ್ತು. ‘ಹಾಜ್’ ಅಂತ ಇವಂಗೆ ಹೆಸರು ಇತ್ತೊರನ್ನ ಬಯ್ದು ಪ್ರಯೋಜನ ಇಲ್ಲ. ಇವನ ಚಾರಿತ್ರ್ಯ ಹೆಸರ್ಗೂ ಕಳಂಕ ಆಯ್ತೇನೋ ಅನ್ನೊಂಗಿತ್ತು. ಆ ಊರಿಗೆ ಕೇಡಿಯಾಗೆ ಬೆಳದ ಈತ ಅವ್ನ ಜಾತಿಯೋರಿಗೆ ಹೇಸಿಗೆ ಆದ. ತಪ್ಪು ಅವನದೋ ಅಲ್ಲಾ ಅವ್ನು ಬೆಳದ ರೀತಿದೋ ಇರಬಹುದು. ಅವ್ನ ತಂದೆ ತಾಯಿ ಯಾರು, ಹೆಸರ ಇಟೋಯ್ರಾರು ಅಂತ ಗೊತ್ತಿಲ್ದೆ ಇವ ಎಲ್ಲೆಲ್ಲೋ ಹೇಗೇಗೋ ಬೆಳದು ನಲವತ್ತೆಯ್ದು ವಯಸ್ಸಾಗೋ ವರೆಗೂ ಕಳ್ಳಭಟ್ಟಿ ದಂಧೆ ನಡೆಸ್ತಿದ್ದ. ಅವ್ನ ಜಾತೀಲಿ ಸಾರಾಯಿ ಕುಡಿಯೋದು ನಿಷೇಧ ಅಂತ ಅನ್ನೋರಿಗೆ ನಾಚಿಕೆ ಆಗೊವಂತೆ ಕುಡ್ದು ಸದಾ ಅಮಲ್ನಲ್ಲಿ ಇರ್ತಿದ್ದನಾದ್ರೂ ಸದಾ ಎಚ್ಚರವಾಗೆ ವ್ಯವಹರಿಸ್ತಾ ಇದ್ದ. ಜೊತೆಗೆ ಒಂದಷ್ಟು ಚೇಲಾಗಳೂ ಇವನ್ಗಿದ್ರು. ಭಟ್ಟೀನ ಸಾಲವಾಗಿ ಕುಡ್ದು ತಲೆ ಮರುಸ್ಕೊಂಡ ಅನ್ವರ್ ಸಾಬೀನ ಹುಡ್ಕೀ ಹುಡ್ಕಿ ಸಿಗದೆ ಇದ್ದಾಗ ಅವನಕ್ಕ ಬೀಪಾತೂನ ಎಳ್ಕೊಂಡು ಬಂದು ಅವಳ ಸೌಂದರ್ಯಕ್ಕೆ ಸೋತು ಮಸೀದಿ ಜಮಾತಿನಲ್ಲಿ ಗಲಾಟೆ ಮಾಡ್ಕೊಂಡು ನಿಕಾಹ ಆದ. ದೈರ್ಯವಾಗೆ ವಿರೋದ ಮಾಡಿದ್ರೂ ಒಳಗೊಳ್ಗೆ ಭಯ ಇದ್ದಿದ್ರಿಂದ ಜಮಾತಿನಿಂದ ನಿಕಾಹ ಮಾಡಿದ್ರು. ಕುಡುಕ ತಮ್ಮಂಗೆ ಹೊಂದ್ಕೊಂಡು ಅಭ್ಯಾಸ ಆಗಿದ್ದ ಬೀಪಾತುಗೆ ಇವನಲ್ಲಿ ಏನು ಕಾನ್ತೋ ಏನೋ, ಯಾವದೇ ವಿರೋದಾ ಇಲ್ದೆ ಇವನೊಂದಿಗಿದ್ಲು.
ಊರ ತಾಯನ್ದಿರ್ಗೆಲ್ಲಾ ಮುದ್ದು ಮಕ್ಕಳನ್ನ ರಮಿಸೋಕೆ ಹೆದರ್ಸೋಕೆ ಯಾವದೇ ಜೋಯಿ ದೆವ್ವದ ಕಥೇನ ಹೇಳ್ಬೇಕು ಅಂತೆನಿರ್ಲಿಲ್ಲ. ಆಜಬ್ಬ ಬಂದ ಎನ್ನೋದಕ್ಕಿಂತ ಮುಂಚೆನೇ ಪುಡಿ ಮಕ್ಕಳು ಬೋಬ್ಬಿಡ್ತಾ ತಾಯಂದಿರ ತಬ್ಬಿಕೊಳ್ಲೋಷ್ಟು ಕೆಟ್ಟವನು. ದಿನಾಲು ಅವ್ನೂ ಅವ್ನ ಚೇಲಾಗಳೂ ಅಮಲ್ನಲ್ಲಿ ಬೋಬ್ಬಿಡ್ತಾ ಒಂದಲ್ಲಾ ಒಂದು ರಂಪಾಟ ಕಾದ್ಕೊಂಡು ರಸ್ತೆ ಸರ್ವೇ ಮಾಡ್ತಿದ್ರು. ಅವ್ನ ಜಾತಿಯೋರು ಜಮಾತಿನಲ್ಲಿ ಕಂಪ್ಲೇಂಟು ಕೊಟ್ರೂ ಪ್ರಯೋಜನವಾಗದೆ ಸುಮ್ನೆ ಆಗಬೇಕಾಗಿ ಬಂತು. ಒಟ್ನಲ್ಲಿ ಊರೋರ್ಗೆಲ್ಲಾ ದೊಡ್ಡ ತಲೆ ನೋವಾಗಿದ್ದ. ವಿಪರೀತ ಕುಡ್ದಾಗ ಬಟ್ಟೆ ಪಂಚೆನೆಲ್ಲಾ ಬಿಚ್ಕೊಂಡು ಬರೀ ಚಡ್ಡೀಲಿ ಊರಿಡೀ ಓಡಾಡ್ತಿದ್ದ. ಒಂದೊಂದ್ಸಲ ಯಾವಾನಾದ್ರೂ ದೈರ್ಯ ಮಾಡಿ ಒಂದೆರಡೇಟು ಕೊಟ್ರೆ ಮಾರನೆ ದಿನ ಅವ್ರ ಕೈಕಾಲು ಮುರೀತಿದ್ದ. ಅದ್ಕೆ ಅವ್ನ ಸುದ್ದಿಗೆ ಯಾರೂ ಹೋಗ್ತಿರ್ಲಿಲ್ಲ.
ಒಂದ್ಸಲ ಗುಳ್ಳೆ ರಫೀಕು ಅವ್ನ ಹೆಂಡ್ತಿ ಜೊತೆ ಎಲ್ಲೊ ಮದ್ವೆ ಮುಗ್ಸಿ ಬರ್ತಿದ್ದಾಗ ಆಜಬ್ಬ ಅಡ್ಡ ಹಾಕ್ಕೊಂಡು ಅವ್ನ ಹೆಂಡ್ತಿಗೆ ಕೀಟ್ಲೆ ಮಾಡ್ಬಿಟ್ಟಿದ್ದ. ರಫೀಕಲ್ಲಿದ್ದ ಸ್ವಾಭಿಮಾನ ಎಲ್ಲ ಸೆಡೆ ಎತ್ಕೊಂಡು ಆಜಬ್ಬಂಗೆ ಸರೀ ಕೊಟ್ಟಿದ್ದ. ಆಜಬ್ಬ ಸುಮ್ನಿರ್ತಾನ, ಅವ್ನೂ ಇವನನ್ನ ಸರಿಯಾಗೇ ದಬ್ಬಾಕ್ಕೊಂಡ. ಇಲ್ಲಿದ್ರೋ ಏನೋ ಗೊತ್ತಿಲ್ಲ, ಆಜಬ್ಬನ ಇಬ್ರು ಚೇಲಾಗಳು ಬಂದು ಸೇರ್ಕೊಂಡ್ರು. ಇದನ್ನೆಲ್ಲಾ ದೂರದಲ್ಲಿ ನೋಡ್ತಿದ್ದ ಅಂಗಡಿ ಸೋಮಣ್ಣ ಮತ್ತೆ ಉಸ್ಮಾನು ಬಂದು ರಫೀಕಿನ ಕಡೆಗೆ ನಿಂತುಕೊಂಡ್ರು. ಸ್ವಲ್ಪ ಹೊತ್ತು ಅಲ್ಲಿ ದೊಡ್ಡ ಕಾಳಗ ನಡೀತು. ಆ ಜಾಗ ನೋಡ್ದೊರಿಗೆ ಸುಮಾರು ಹತ್ತದಿನೈದು ಅಡಿ ಧೂಳು ಎದ್ದಂಗೆ ಕಾಣ್ತಿತ್ತು. ಕಡೆಗೆ ಯಾರೂ ಗೆಲ್ದೆ ಸೋಲ್ದೆ ಬರೀ ಸುಸ್ತಾಗಿ ವಾಪಾಸ್ ಹೋಗಿದ್ರು. ಈ ರೀತಿ ಆಗಿರೋದು ಒಂದ್ಸಲಾ ಎರಡ್ಸಲಾ ಅಲ್ಲ. ಆಜಬ್ಬನ ಜೀವನಾನೆ ಹಿಂಗಾಗಿ ಹೋಯ್ತು. ಕುದ್ದು ಜಾಸ್ತಿ ಆದಾಗ ಸುಮ್ಸುಮ್ನೆ ಜಗಳಾ ಕಾಯ್ತಿದ್ದ, ಹೊಡದಾಟ ಮಾಡ್ತಿದ್ದ. ಕೆಲವರನ್ನ ಹೆದರಿಸ್ತಿದ್ದ. ಸಾರಾಯಿ ಬಾಕಿ ದುಡ್ಡು ಕೊಡ್ದೆ ಇರೋರನ್ನ ಅಟ್ಟಾಡಿಸ್ತಿದ್ದ. ಊರ ಮಕ್ಳಿಗೆ ಹೆಂಗಸರಿಗೆ ಇವನ ಕಂಡ್ರೆ ಮೈಮೇಲೆ ಹಾವು ಬಿದ್ದಂಗೆ ಆಗ್ತಿತ್ತು.
ಬರ್ತಾ ಬರ್ತಾ ಬೀಪಾತುಗೂ ಆಜಬ್ಬನ್ನ ತಡ್ಕೊಲ್ಳೋದು ವಿಪರೀತ ಕಷ್ಟ ಆಯ್ತಾ ಬಂತು. ದಿನಾ ಹೊಡ್ತ ತಿಂದೂ ತಿಂದೂ ಅವಳ ಮಯ್ಯಿ ಜಡ್ಡುಗಟ್ಟಿ ಹೋಗಿತ್ತು. ಅವತ್ತು ಮುಂಭಾಗದ ಹಲ್ಲು ಮುರಿಸ್ಕೊಂಡ ಬೀಪಾತು ಮಸೀದಿ ಜಮಾತಿಗೆ ಕಂಪ್ಲೇಂಟು ಕೊಟ್ಟಾಗ ಇದನ್ನ ಗಂಭೀರ ಅಂತ ತೀರ್ಮಾನಿಸಿದ ಕಮೀಟಿಯೋರು ಅಜಬ್ಬಂಗೆ ಬುದ್ದಿ ಹೇಳೋ ಕೆಲಸವನ್ನ ಉಸ್ತಾದರಾದ ಮುಸ್ಲಿಯಾರರಿಗೆ ವಹಿಸ್ಕೊಟ್ರು. ಮಾರನೆ ದಿನ ಬೆಳಿಗ್ಗೆ ಇಮಾಂ ಉಸ್ತಾದು ಏನನ್ನೋ ಗುಡ್ಡೆ ಹಾಕ್ತೀನಿ ಅಂತ ಆಜಬ್ಬನ ಮನೆ ಬಾಗಿಲು ತಟ್ಟಿದ್ರು. ಅವಂಗೆ ಇಮಾಮನ್ನ ಕಂಡು ಮುಜುಗರ, ಹೆದರ್ಕೆ ಆದ್ರೂ ಕರ್ದು ಕೂರ್ಸಿ ಸತ್ಕಾರ ಮಾಡ್ದ. ನಂತರ ಸ್ವಲ್ಪ ಹೊತ್ತು ಬಿಟ್ಟು ಇಮಾಂ ಉಸ್ತಾದು ಉಪ್ದೇಶ ಕೊಡೋಕೆ ಶುರುವಾದ್ರು. ತನ್ನ ವಿಭಿನ್ನ ಹಾವಭಾವದಿಂದ ಇಸ್ಲಾಮು ಶಾಂತಿ ಧರ್ಮ, ಅದ್ರಲ್ಲಿ ಕುಡಿಯೋದು ತಪ್ಪು, ಶಾಂತಿ ಕಾಪಾಡ್ಬೇಕು, ಯಾರ್ಗೂ ತೊಂದ್ರೆ ಕೊಡ್ಬಾರ್ದೂ ಅಂತ ಚರಿತ್ರೆನೆಲ್ಲಾ ಸೇರಿಸ್ಕೊಂಡು ಬರೋಬ್ಬರಿ ಒಂದೂಕಾಲು ಗಂಟೆ ಕೊರದ್ರು. ಇಮಾಂ ಉಸ್ತಾದು ಉಪ್ದೇಶ ಹೇಳೋವಾಗ ಯಾವ ರೀತಿ ಕೈ ಕಾಲು ಆಡಿಸ್ತಿರ್ದು ಅನ್ನೋದು ಮಾತ್ರ ಆಜಬ್ಬಂಗೆ ಗೊತ್ತಯ್ತೆ ವಿನಾ ಬೇರೇನೂ ಗೊತ್ತಾಗ್ಲಿಲ್ಲ. ಉಸ್ತಾದು ದುವಾಮಾಡಿ ಮನಿಂದ ಹೋದ ಐದುನಿಮಿಷ ಕಳ್ದು ಒಳಗೊಳ್ಗೆ ಖುಷಿ ಪಡ್ತಿದ್ದ ಬೀಪಾತು ಮುಖಕ್ಕೆ ಪಟಾರನೆ ಏಟು ಬಿದ್ದಿತ್ತು. ಅದ್ಯಾಕೆ ಅಂತ ಅವಳ್ಗೂ ಗೊತ್ತಾಗಿತ್ತು.
ಅವತ್ತೇ ಮದ್ಯಾನ ಎಲ್ಲೊ ಹೋಗಿ ಬರ್ತಿದ್ದ ಇಮಾಂ ಉಸ್ತಾದನ್ನ ಗದ್ದೆ ಮೇಲೆ ಆಜಬ್ಬ ಕತ್ತಿ ಹಿಡ್ಕೊಂಡು ಬೇರ್ಸಾಡಿದ್ದನ್ನ ಕೆಲವ್ರು ನೋಡಿದ್ರು. ಜೀವ ಉಳಿಸ್ಕೊಂಡಿದ್ದ ಇಮಾಂ ಮಾರನೆ ಶುಕ್ರವಾರ ಜುಮಾ ದಿವ್ಸ ನಮಾಜು ಆದ್ಮೇಲೆ ಇದನ್ನೆಲ್ಲಾ ಹೇಳ್ಕೊಂಡು ಕಮೀಟಿ ಮುಂದೆ, ಅಲ್ಲಿದ್ದವ್ರ ಮುಂದೆ ಕುದ್ದು ಹೋದ್ರು. ಹಿಂಗಾಗಿರೋದ್ರಿಂದ ನಾನೀ ಮಸೀದಿಬಿಟ್ಟು ಹೊಗೊದಾಗಿ ಬೆದರಿಸಿದ್ರು. ಕಮೀಟಿಯವ್ರು ಅವತ್ತೇ ಮೀಟಿಂಗು ಸೇರಿ ಆಜಬ್ಬನ್ನ ಮಸೀದಿ ಲೆಕ್ಕದಿಂದ ತೆಗ್ದು ಹಾಕೋ ತೀರ್ಮಾನ ಕೈಗೊಂಡು ಅವ್ನ ಇನ್ಯಾವ್ದೆ ಮದ್ವೆ ಮುಂಜಿ, ಸಾವು ಕಾರ್ಯಕ್ಕೂ ಜಮಾತಿನಿಂದ ಸಪೋರ್ಟು ಕೊಡಬಾರ್ದು ಅಂತ ತೀರ್ಮಾನಿಸಿದ್ರು.
ಹೀಗಾಗಿ ಸ್ವಲ್ಪ ದಿನ ಕಳ್ದು ಬೀಪಾತು ಸದ್ದಿಲ್ದೆ ಮಾಯಾ ಆಗ್ಬಿಟ್ಲು. ಇದರ ಬಗ್ಗೆ ಸ್ವಲ್ಪಾನೂ ತಲೆ ಕೆಡಿಸ್ಕೊಲ್ಲಿಲ್ಲ ಆಜಬ್ಬ. ಈ ವಿಚಾರ ತಡವಾಗಿ ಊರವರ ಬಾಯಿಗೆ ಬಂದು ತಲೆಗೊಂದರ ಹಾಗೆ ಮಾತಾಡೋಕೆ ಶುರುವಾದ್ರು. ಕೆಲವ್ರು ಬೀಪಾತು ಯರೊಂದ್ಗೋ ಓಡಿಹೋದ್ಲು ಅಂತ ಹೇಳ್ಕೊಂಡು ತಿರ್ಗುದ್ರೆ ಕೆಲವ್ರು ಬೀಪಾತುನ ಆಜಬ್ಬ ಮುಗ್ಸಿಬಿಟ್ಟ, ಅವ್ಳ ಕಳೆಬರಾನ ಮನೆ ಹಿಂದುಗಡೆ ಹೂತಾಕಿದ್ದಾನೆ ಅಂತೆಲ್ಲಾ ಮತಾಡ್ಕೊಂದ್ರು. ಈ ವಿಷ್ಯ ಹೆಂಗೋ ಅನ್ವರ್ ಸಾಬಿಗೆ ತಿಳ್ದು ತನ್ನಕ್ಕನ್ನ ಆಜಬ್ಬ ಕೊಂದ ಅಂತ ಊರಿಡೀ ಬೊಬ್ಬೆ ಹೊಡ್ದು ಮಾಯಾ ಆಗ್ಬಿಟ್ಟಿದ್ದ. ಅವ್ನು ಕೊಟ್ಟ ಕೇಸ ಮೇಲೆ ಪೋಲಿಸಿನೋರು ಆಜಬ್ಬನ್ನ ಅಟ್ಟಾಡಿಸಿ ಕೊಳ ಹಾಕಿ ಅವ್ನ ಭಟ್ಟಿ ಅಡ್ದೆನೆಲ್ಲಾ ಉಡಾಯಿಸಿದ್ರು. ಏನೆ ಜಾಲಾಡಿದರೂ ಯಾವದೇ ಆದಾರ ಇಲ್ದೆ ಸುಮಾರು ಐದಾರು ತಿಂಗಳು ಕಳ್ದು ಅವನನ್ನ ಬಿಟ್ಬಿಟ್ರು.
ಇಷ್ಟೊತ್ತಿಗಾಗಲೇ ಪೋಲೀಸರ ರೂಲು ದೊಣ್ಣೆಗೆ ಮೆತ್ತಗಾಗಿದ್ದ ಆಜಬ್ಬ ಊರಿಗೆ ಬಂದಾಗ ಒಂಟಿ ಅನ್ನಿಸೋಕೆ ಶುರುವಾಯ್ತು. ಅವ್ನ ಚೇಲಾಗಳೂ, ಸ್ನೇಹಿತ್ರ್ರೋ ಊರಲ್ಲಿ ಕಾಣದಾಗಿ ಹಣ ಕಾಸಿಗೂ ತುಂಬಾ ತೊಂದ್ರೆ ಆಯ್ರು. ಆದ್ರೂ ಏನಾದ್ರೂ ಮಾಡಿ ಕುಡ್ದು ಬಂದು ಹಳೆ ಚಾಳಿ ಹಂಗೆ ಗಲಾಟೆ ಮಾಡ್ತಿದ್ದ. ಒಂದ್ಸಲದ ಗಲಾಟೇಲಿ ಯಾರೋ ಮೂವರು ಸೇರ್ಕೊಂಡು ಆಜಬ್ಬನ ಕಾಲು ಮುರ್ದು ಹಾಕಿದ್ರು. ಅವತ್ತು ರಸ್ತೆ ಬದೀಲಿ ಬಿದ್ದು ತನ್ನನ್ನ ಆಸ್ಪತ್ರೆಗೆ ಕರ್ಕೊಂದೊಗಿ ಅಂತ ಕಂಡ ಕಂಡವ್ರನ್ನೆಲ್ಲ ಗೊಗರೀತಿದ್ದ ಅವನನ್ನ ಯಾವ ನಾಯಿ ಕೂಡ ಮೂಸಿ ನೋಡ್ಲಿಲ್ಲ, ಅವ್ನ ಬಗ್ಗೆ ಕನಿಕರ ತೋರಿಸ್ಲಿಲ್ಲ.
ಮೂರು ಹೊರೆಯಷ್ಟು ಸೌದೆನ ಗಾಡೀಲಿ ತುಂಬಿಸ್ಕೊಂಡು ಬಂದು ಅಂಗ್ಡಿ ಕಟ್ಟೇಲಿ ಕೂತು ಬೀಡಿ ಸೇದ್ತಿದ್ದ ಆಜಬ್ಬನ ಕಂಡು ಮಾಗೊಡಪ್ಪಂಗೆ ಏನು ಅನ್ನಿಸ್ತೋ ಏನೋ, ಪ್ಲಾಸ್ಕಿನಿಂದ ಒಂದು ಲೋಟ ಟೀ ಬಗ್ಸಿ ಬನ್ನು ಕೊಟ್ಟು ಲೆಕ್ಕಾನೆಲ್ಲಾ ಬೇಗ ಚುಕ್ತಾ ಮಡ್ಬೇಕ್ಕು ಆಜಬ್ಬಾಕ ಅಂದ.





ತುಂಬಾ ಚೆನ್ನಾಗಿದೆ. ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ 🙂
ಓದುತ್ತಾ ಇದ್ದಂತೆ ನನಗನ್ನಿಸಿದ್ದು, ಅನುಭವದ ಬರಹಗಳು ಮಾತ್ರ ಜೀವದಿಂದ ಇರುವಂತಹದ್ದು. ಅದಕ್ಕೆ ಕಲ್ಪನೆ ಮತ್ತು ವಿಚಾರದ ಒಗ್ಗರಣೆ ಇದ್ದರೆ ಅತ್ಯಂತ ಸ್ವಾಧ ಅನ್ನಿಸುತ್ತದೆ.ಯಾಕೆ ಮಾನ್ಯ ಅಬ್ದುಲ್ ರಷೀದರ ಕಥೆ,ಕುವೆಂಪು,ಕಾರಂತಜ್ಜ,ದ.ರಾ.ಬೇಂದ್ರೆಯವರ ಕವಿತೆಗಳು ಮನೆ-ಮನಗಳಲ್ಲಿ ಇವತ್ತಿಗೂ ಸಂಗೀತ ಮೊಳಗಿಸುತ್ತಿದೆ ಅನ್ನೋದಕ್ಕೆ ಇದು ಉತ್ತರ.ಕಣ್ಣಿಂದ ನೋಡಿದ್ದನ್ನು, ಅನುಭವಿಸಿದ್ದನ್ನು , ಅದರಂತೆಯೇ ಪದಗಳಲ್ಲಿ ಓದುವಾಗ ಅದು ಬದುಕಿನ ನಂತರವೂ ಬದುಕುತ್ತದೆ.
ಸತ್ತಾರ‍್ ನಿಮ್ಮ ಈ ಕಥೆ ಅದಕ್ಕೆ ಸಾಕ್ಷಿ.ನೀವು ಹಲವು ದಿನಗಳಿಂದ ಕಾಡಿದ ಪಾತ್ರ ಅಂತ ಹೇಳುವ ಅಗತ್ಯವೇ ಇಲ್ಲ. ಓದುವಾಗಲೇ ಅದು ನಿಜ ಅಂತ ಮಾತಾಡುತ್ತದೆ. ಅನುಭದ ಕಥಾ ಪಾತ್ರ ನಿಮ್ಮ ಕಥೆಯಲ್ಲಿ ಜೀವಂತವಾಗಿ ಮಾತಾಡುತ್ತಿದೆ. ಚೆನ್ನಾಗಿದೆ ಪದಗಳೊಂದಿಗೆ ಮಿಳಿತಗೊಂಡ ಅನುಭವ ಮಾತುಗಳು. ಅಭಿನಂದನೆಗಳು.
ಅಬ್ದುಲ್ ಸತ್ತಾರ್.. ಈ ಪಾತ್ರ, ಸುಮ್ಮನೆ ಕಲ್ಪನೆಯ ಕೂಸಿನ ಹಾಗೇ ಕಾಣುತ್ತಿಲ್ಲ.. ರವಿ ಹೇಳಿದಂತೆ, ಅನುಭವದಿಂದ ಕಂಡದ್ದಾಗಿರಲೇ ಬೇಕು ಅಂತ ನನಗೂ ಅನ್ನಿಸುತ್ತೆ. ಹಾಗೇ, ಒಂದು ಬರಹ ಸಫಲತೆ ಪಡೆಯೋದು, ಅದನ್ನ ಓದಿ ಮುಗಿದ ನಂತರವೂ ಎಷ್ಟು ಕಾಡುತ್ತೆ ಅನ್ನೋದರ ಮೇಲೂ ಅಂತ ನನ್ನ ಅನಿಸಿಕೆ. ನಿಮ್ಮ ಸೃಷ್ಟಿಯ ಈ ಪಾತ್ರ ನಿಜಕ್ಕೂ ಕಾಡುತ್ತೆ.. 🙂