ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 26, 2011

7

ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

‍ನಿಲುಮೆ ಮೂಲಕ

-ಇಂದುಶ್ರೀ ಬೆಂಗಳೂರು

 “ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ”

“ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?”
“ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು.”
ಹೌದಲ್ಲ… ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?

ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ “ಇಲ್ಲ”. ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ…


ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ ಶಕ್ತಿಶಾಲಿ ಆಂಟೆನಾದ ಮೂಲಕ ಸುಮಾರು ೫೦ ಕಿ.ಮೀ. ದೂರದವರೆಗೆ ಸಂದೇಶಗಳನ್ನು ಬ್ರಾಡ್ ಕಾಸ್ಟ್ ಮಾಡಲಾಗುತ್ತಿತ್ತು. ಆದರೆ ಸೆಲ್ಯುಲಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಒಂದು ಶಕ್ತಿಶಾಲಿ ಆಂಟೆನಾದ ಬದಲಿಗೆ ಅನೇಕ ಕಡಿಮೆ ಶಕ್ತಿಯ ಆಂಟೆನಾಗಳಿಂದ ವ್ಯಾಪ್ತಿ ಪ್ರದೇಶದೊಳಗಿನ ಗ್ರಾಹಕರನ್ನು ತಲುಪುವ ವ್ಯವಸ್ಥೆ ಆರಂಭವಾಯಿತು. ಇಂಥ ಒಂದು ಕಡಿಮೆ ಶಕ್ತಿಯ ಆಂಟೆನಾದಿಂದ ಸಂಪರ್ಕ ಸೇವೆ ಪಡೆಯುವ ಒಂದು ಭೌಗೋಳಿಕ ಪ್ರದೇಶಕ್ಕೆ “ಸೆಲ್” ಎಂದು ಹೆಸರು. ಹಾಗೆ ಈ ಆಂಟೆನಾ ಹಾಗೂ ಅದಕ್ಕೆ ಸಂಬಂಧಿಸಿದ ಸಿಗ್ನಲ್ ಪ್ರೊಸೆಸಿಂಗ್ ಹಾರ್ಡ್ ವೇರ್ ಗೆ ಬೇಸ್ ಟ್ರಾನ್ಸೀವರ್ ಸ್ಟೇಷನ್(BTS) ಎಂಬ ಹೆಸರು.ಒಂದು ಅಥವಾ ಅದಕ್ಕಿಂತ ಹೆಚ್ಚು BTS ಗಳನ್ನು ನಿಯಂತ್ರಿಸುವುದು ಬೇಸ್ ಸ್ಟೇಷನ್ ಕಂಟ್ರೋಲರ್ (BSC) . ಹಲವಾರು BSCಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಕರೆ ಪೂರ್ಣಗೊಳಿಸುವುದು ಮೊಬೈಲ್ ಸ್ವಿಚಿಂಗ್ ಸೆಂಟರ್ (MSC). ಇಲ್ಲಿ ಕೇವಲ BTS ಮತ್ತು ಮೊಬೈಲ್ ನಡುವೆ ಮಾತ್ರ ಗಾಳಿಯಲ್ಲಿ ತರಂಗಗಳ ಮೂಲಕ ಸಂದೇಶ ರವಾನೆಯಾಗುತ್ತದೆ.

ಗ್ರಾಹಕರಿಗೆ ಮೊಬೈಲ್ ಸೇವೆ ಒದಗಿಸುವ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ BTS, BSC ಹಾಗೂ MSCಗಳನ್ನು ಹೊಂದಿರುತ್ತದೆ. ಒಂದು ನೆಟ್ ವರ್ಕ್ ನ MSC ತನ್ನ ನೆಟ್ ವರ್ಕಿನ ಇತರೆ MSCಗಳೊಂದಿಗೆ ಹಾಗೂ ಇತರೆ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳ ಎಕ್ಸ್ ಚೇಂಜ್ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.ಇದಲ್ಲದೇ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ ಕೆಲವು ಮಾಹಿತಿಗಳನ್ನು ಹೋಂ ಲೊಕೇಶನ್ ರೆಜಿಸ್ಟರ್(HLR) ಹಾಗೂ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR) ನಲ್ಲಿ ಹೊಂದಿರುತ್ತವೆ.ಅನೇಕ MSCಗಳು ಕಾರ್ಯ ನಿರ್ವಹಿಸುತ್ತಿರುವ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಎಲ್ಲಾ ಗ್ರಾಹಕರ ಮಾಹಿತಿಯನ್ನು  HLR ಹೊಂದಿದ್ದರೆ, ಒಂದು MSCಯ ವ್ಯಾಪ್ತಿಗೊಳಪಡುವ ಭೌಗೋಳಿಕ ಪ್ರದೇಶದಲ್ಲಿ ಆ ಸಮಯದಲ್ಲಿರುವ ಗ್ರಾಹಕರ ಮಾಹಿತಿಯನ್ನು VLR ಹೊಂದಿರುತ್ತದೆ.ಪ್ರತಿಯೊಂದು MSCಯೊಂದಿಗೆ ಒಂದು VLR ಇರುತ್ತದೆ.ಯಾವ ಗ್ರಾಹಕ ಯಾವ MSC-VLR ಗೆ ಸೇರಿದ ಪ್ರದೇಶದಲ್ಲಿದ್ದಾನೆ ಎಂಬುದು HLR ಗೆ ತಿಳಿದಿರುತ್ತದೆ. ಗ್ರಾಹಕರಿಗೆ ಸೇವೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು HLRನಿಂದ VLR ಪಡೆಯುತ್ತದೆ.

ಪ್ರತಿಯೊಂದು ಅಧಿಕೃತ ಮೊಬೈಲ್ ಹ್ಯಾಂಡ್ ಸೆಟ್ ೧೫ ಅಂಕಿಗಳ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. (ನಿಮ್ಮ ಮೊಬೈಲಿನ IMEI ನಂಬರ್ ತಿಳಿಯಲು *#೦೬# ಡಯಲ್ ಮಾಡಿ) . ಎಲ್ಲಾ ಅಧಿಕೃತ ಮೊಬೈಲ್ ಹ್ಯಾಂಡ್ಸೆಟ್ ಗಳ IMEI ನಂಬರ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್ ರೆಜಿಸ್ಟರಿನಲ್ಲಿ( EIR) ದಾಖಲಾಗಿರುತ್ತದೆ. ಮೊಬೈಲ್ ಗ್ರಾಹಕರನ್ನು ಗುರುತಿಸಲು ಪ್ರತಿ ಸಿಮ್ ಕಾರ್ಡ್ ೧೫ ಅಂಕಿಗಳ IMSI(ಇಂಟರ್ನ್ಯಾಷನಲ್ ಮೊಬೈಲ್ ಸುಬ್ಸ್ ಕ್ರೈಬರ್ ಐಡೇಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. ಇದೇ ನಂಬರ್ ಅಥೆಂಟಿಕೇಶನ್ ಸೆಂಟರ್( AUC) ನಲ್ಲಿಯೂ ದಾಖಲಾಗಿರುತ್ತದೆ.

ನಾವು ಒಂದು ನೆಟ್ ವರ್ಕ್ ಇಂದ ಸೇವೆ ಪಡೆಯಲು ಅರ್ಜಿ ಸಲ್ಲಿಸಿ ಸಿಮ್ ಕಾರ್ಡ್ ಪಡೆದಾಗ ನಮ್ಮ ವಿವರಗಳು,ನಾವು ಪಡೆದಿರುವ ಸರ್ವೀಸಸ್ ನ ವಿವರಗಳು ಹಾಗೂ ನಾವು ಸಬ್ಸ್ ಕ್ರೈಬ್ ಮಾಡಿರುವ ಪ್ಲಾನ್ ಎಲ್ಲಾ ಆ ನೆಟ್ ವರ್ಕಿನ ಹೋಂ ಲೊಕೇಶನ್ ರೆಜಿಸ್ಟರಿನಲ್ಲಿ(HLR) ದಾಖಲಾಗುತ್ತದೆ. ನಮ್ಮ ಮೊಬೈಲ್ ಉಪಕರಣದೊಳಗೆ ನಾವು ಸಿಮ್ ಅಳವಡಿಸಿದಾಗ ಅದು ಎಲ್ಲಾ ನೆಟ್ ವರ್ಕ್ ಗಳಿಗೆ ಸೇರಿರುವ BTSಗಳಿಗೆ ಸಂದೇಶ ರವಾನಿಸುತ್ತದೆ.ಸಂದೇಶ ರವಾನಿಸುತ್ತಿರುವ ಸಿಮ್ ನಲ್ಲಿರುವ IMSI ನಂಬರನ್ನೂ ತನ್ನ HLR ಅಲ್ಲಿರುವ ಮಾಹಿತಿಯನ್ನೂ ಪರಿಶೀಲಿಸಿ ಅಧಿಕೃತ ನೆಟ್ ವರ್ಕ್ ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತದೆ. ಗ್ರಾಹಕರ ಮಾಹಿತಿಯನ್ನು ಗೌಪ್ಯವಾಗಿಡಲು ಟೆಂಪೊರರಿ ಮೊಬೈಲ್ ಸಬ್ಸ್ ಕ್ರೈಬರ್ ಐಡೆಂಟಿಫಿಕೇಶನ್(TMSI) ನಂಬರ್ ಗಳನ್ನು ನೀಡಲಾಗುತ್ತದೆ.

ನಾವು ಮೊಬೈಲನ್ನು ಬಳಸದಿದ್ದಾಗಲೂ ಅದು ಆನ್ ಆಗಿದ್ದಲ್ಲಿ ಮೊಬೈಲ್ ನಿಯಮಿತವಾಗಿ BTSಗಳಿಗೆ ಸಂದೇಶ ರವಾನಿಸುತ್ತಿರುತ್ತದೆ. ನಮ್ಮ ಮೊಬೈಲ್ ತನ್ನ ಸುತ್ತಲಿನ ಗರಿಷ್ಟ ೬ BTSಗಳಿಂದ ಸಂದೇಶಗಳನ್ನು ಸ್ವೀಕರಿಸಲು ಶಕ್ತವಾಗಿರುತ್ತದೆ. ಸ್ವೀಕರಿಸಿದ ಸಿಗ್ನಲ್ ಗಳ ವಿವರವನ್ನು ಪುನಃ BTSಗಳ ಮುಖಾಂತರ BSC ಪಡೆಯುತ್ತದೆ. ಹಾಗೂ ಗರಿಷ್ಟ ಶಕ್ತಿ ಹೊಂದಿರುವ ಸಿಗ್ನಲ್ ಯಾವ BTSನಿಂದ ಮೊಬೈಲನ್ನು ತಲುಪುತ್ತಿರುತ್ತದೆಯೋ ಅದರ ಮೂಲಕ ಸೇವೆ ಒದಗಿಸುತ್ತದೆ.ನಾವು ಯಾವ BTSನಿಂದ ಸೇವೆ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR)ನಲ್ಲಿ ನಾವೀಗಿರುವ ಸ್ಥಳದ ಮಾಹಿತಿ ಅಪ್ಡೇಟ್ ಆಗುತ್ತದೆ. ಒಂದು BTS ಮುಖೇನ ಸೇವೆ ಪಡೆಯುತ್ತಿದ್ದರೂ ಮೊಬೈಲ್ ತನ್ನ ಸುತ್ತಲಿನ ಇತರೆ BTSಗಳಿಂದ ಪಡೆಯುತ್ತಿರುವ ಸಿಗ್ನಲ್ ಬಗೆಗಿನ ಮಾಹಿತಿಯನ್ನು ನಿಯಮಿತವಾಗಿ BSCಗಳಿಗೆ ರವಾನಿಸುತ್ತಿರುತ್ತದೆ. ಇದು Idle state.

ನಾವು ಕರೆ ಮಾಡಲು ಡಯಲ್ ಮಾಡಿದಾಗ ನಮ್ಮ ಮೊಬೈಲ್ ಇಂದ BSCಗೆ ಹಾಗೂ ಅಲ್ಲಿಂದ MSCಗೆ ಸಂದೇಶ ಹೋಗುತ್ತದೆ. ನಮ್ಮ ಕರೆ MSCಗೆ ತಲುಪಿದಾಗ ಕರೆ ಪೂರ್ಣಗೊಳಿಸುವ ಮೊದಲು EIR ನಲ್ಲಿ ನಮ್ಮ ಮೊಬೈಲ್ ಸೆಟ್ ನ IMEI ದಾಖಲಾಗಿದೆಯೇ ಎಂದು ಪರಿಶೀಲಿಸುತ್ತದೆ. AUCಯಲ್ಲಿರುವ ಕೆಲವು ರಾಂಡಮ್ ಸಂಕೇತಗಳನ್ನು ನಮ್ಮ ಮೊಬೈಲ್ ಗೆ ಕಳುಹಿಸುತ್ತದೆ. ಅದಕ್ಕುತ್ತರವಾಗಿ ನಮ್ಮ ಮೊಬೈಲ್ ಕಳುಹಿಸಿದ ಸಂಕೇತಗಳ ಆಧಾರದ ಮೇಲೆ ನಾವು ಅಧಿಕೃತ ಗ್ರಾಹಕರೆಂಬುದನ್ನು ದೃಢೀಕರಿಸುತ್ತದೆ.(ಗ್ರಾಹಕರ ಕರೆಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ. ಈ ಸಂಕೇತಗಳು ಒಂದು ಕರೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ ಒಂದು ಕರೆಯ ಸಂಕೇತಗಳು ತಿಳಿದರೂ ಪ್ರಯೋಜನವಿಲ್ಲ.) HLR ನಲ್ಲಿರುವ ಡಾಟಾಬೇಸ್ ನ ಮಾಹಿತಿಯನ್ನನುಸರಿಸಿ ನಾವು ಮಾಡುತ್ತಿರುವ ಕರೆ ನಾವು ಪಡೆದಿರುವ ಸೇವೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಈ ಎಲ್ಲಾ ದೃಢೀಕರಣದ ನಂತರ MSC ಕರೆ ಸ್ವೀಕರಿಸಬೇಕಾದ ವ್ಯಕ್ತಿಗೆ ಸೇವೆ ಒದಗಿಸುತ್ತಿರುವ MSCಯ ಆಧಾರದ ಮೇಲೆ ಮುಂದಿನ ಕೆಲಸವನ್ನು ನಿಭಾಯಿಸುತ್ತದೆ. ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಅದೇ MSC VLR ಪ್ರದೇಶಕ್ಕೆ ಸೇರಿದವನಾದರೆ ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವಿಸ್ ನ ದೃಢೀಕರಣವನ್ನು ತನ್ನ AUC ,EIR, HLR VLR ನ ಮೂಲಕ ಮುಗಿಸಿ ನಂತರ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವನ್ನೇರ್ಪಡಿಸುತ್ತದೆ. ಬೇರೆ MSC ಗೆ ಸೇರಿದವನಾದರೆ ಗೇಟ್ ವೇ MSCಗೆ ಸಂದೇಶ ಹೋಗುತ್ತದೆ. ಗೇಟ್ ವೇ MSC ತನ್ನಲ್ಲಿರುವ  ಮಾಹಿತಿಗನುಗುಣವಾಗಿ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ MSCಗೆ ಸಂದೇಶ ರವಾನಿಸುತ್ತದೆ. ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವೀಸ್ ದೃಢೀಕರಣದ ನಂತರ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವೇರ್ಪಡುತ್ತದೆ.  ಒಮ್ಮೆ ನಮ್ಮ ಕರೆಗೆ ಒಂದು ಸಂಪರ್ಕ ಕೊಂಡಿ ಏರ್ಪಟ್ಟ ಮೇಲೆ ಕರೆ ಸ್ವೀಕರಿಸುತ್ತಿರುವ ಮೊಬೈಲ್ ರಿಂಗಣಿಸುತ್ತದೆ. ಕರೆ ಸ್ವೀಕರಿಸಿದರೆ  MSC ಕರೆಯ ಸಮಯ, ಕಾಲಾವಧಿ ಹಾಗೂ ನಮ್ಮ ಪ್ಲಾನ್ ನ ಆಧಾರದ ಮೇಲೆ ನಮ್ಮ ಕರೆಗೆ ಚಾರ್ಜ್ ಗಳನ್ನು ವಿಧಿಸುತ್ತದೆ. ಕರೆ ಸ್ವೀಕರಿಸದಿದ್ದರೆ ಅದು ಮಿಸ್ಡ್ ಕಾಲ್.

ನೋಡಿ ನಾವು ಕರೆ ಮಾಡಿದ್ರೂ ಮಿಸ್ಡ್ ಕಾಲ್ ಕೊಟ್ರೂ ಈ ಎಲ್ಲಾ ಸಿಗ್ನಲ್ಲಿಂಗ್ ನಡೆಯಲೇಬೇಕು. ಹಾಗಾಗಿ ಮುಂದೆ ನೀವು ಮಿಸ್ಡ್ ಕಾಲ್ ಕೊಡುವ ಮುನ್ನ ಒಂದು ಮಿಸ್ಡ್ ಕಾಲ್ ಗೆ ಎಷ್ಟೆಲ್ಲಾ ಸಿಗ್ನಲ್ಲಿಂಗ್ ವ್ಯರ್ಥವಾಗುತ್ತದೆಂಬುದನ್ನು ಯೋಚಿಸಿ.

ಮುಗಿಸುವ ಮುನ್ನ: ನಿಮ್ಮ  ಮೊಬೈಲಿನ IMEI ನಂಬರನ್ನು ತಿಳಿದುಕೊಂಡು ಅದನ್ನು ಒಂದೆಡೆ ಜೋಪಾನವಾಗಿಟ್ಟುಕೊಳ್ಳಿ. ಅಕಸ್ಮಾತ್ ದುರದೃಷ್ಟವಶಾತ್ ನಿಮ್ಮ ಮೊಬೈಲ್ ಕಳೆದುಹೋದರೆ ಆ ನಂಬರನ್ನು ಬಳಸಿ EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡಬಹುದು. ಆಗ ಕದ್ದವರೂ ನಿಮ್ಮ ಮೊಬೈಲನ್ನು ಬಳಸಲಾರರು.

 

**************

chitrakrupe : telecomtalk.info

7 ಟಿಪ್ಪಣಿಗಳು Post a comment
  1. abhinandan's avatar
    ಆಕ್ಟೋ 26 2011

    Very informative and exhaustive. ಚೆನ್ನಾಗಿದೆ 🙂

    ಉತ್ತರ
  2. P.Ramachandra, Ras Laffan-Qatar's avatar
    P.Ramachandra, Ras Laffan-Qatar
    ಆಕ್ಟೋ 26 2011

    ಉಪಯುಕ್ತ ಮಾಹಿತಿಗಳನ್ನು ಒಳಗೊಂಡ ‘ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ’ ಶೀರ್ಷಿಕೆಯ ಉತ್ತಮ ಲೇಖನವನ್ನು ನಾಡಿನ ಮತ್ತು ವಿದೇಶದ ಕನ್ನಡಿಗರ ಮುಂದಿಟ್ಟ ಇಂದುಶ್ರೀ ಬೆಂಗಳೂರು ಅವರಿಗೆ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ಉತ್ತರ
  3. Vamana Nandavara's avatar
    ಆಕ್ಟೋ 26 2011

    ತಿಳಿದಿರಬೇಕಾದ ಅನೇಕ ಉಪಯುಕ್ತ ಮಾಹಿತಿಗಳ ಲೇಖನಕ್ಕಾಗಿ ಅಭಿನಂದನೆಗಳು.
    -ವಾಮನ ನಂದಾವರ, ಮಂಗಳೂರು.

    ಉತ್ತರ
  4. ಮನಮೋಹನ's avatar
    ಮನಮೋಹನ
    ಆಕ್ಟೋ 26 2011

    ಯಾಕೆ ಯೋಚಿಸ್ಬೇಕು ಅಂತ ಅರ್ಥ ಆಗ್ಲಿಲ್ಲ? ಇಷ್ಟೆಲ್ಲ ಆಗುತ್ತೆ ಸರಿ ಅದು ತಂತ್ರಜ್ಞಾನ ಅದಕ್ಕೇ ನಾವೇನ್ ಮಾಡಬೇಕು. ಕರೆಗೆ ಎಕ್ಕಚಕ್ಕ ದುಬಾರಿ ದುಡ್ಡು ತೆಗೆದುಕೊಳ್ಳುವ ಸಂಸ್ಥೆಗಳು ಅವರು ಯೋಚಿಸ್ಬೇಕು ಅಲ್ವ? ಅವರಿಗೂ ತಿಳಿದಿರಬೇಲು IDLE ಸಮಯದಲ್ಲಿ ಕಳಿಸುವ sms ಗಳಿಗೆ ದುಬಾರಿ ದರ ವಿದಿಸುತ್ತಾರಲ್ಲ ಅದು ಪರ್ವಾಗಿಲ್ವ? ಈಗಂತೂ ಅರ್ದ ಪೈಸ ಪ್ರತಿ ಕ್ಷಣಕೆ ದರ ವಿದಿಸುವ ಸಂಸ್ಥೆಗಳಿವೆ ಆದರೆ ಇನ್ನೂ ಕೂಡ ೬೦ ಪೈಸೆ ಪ್ರತಿ ನಿಮಿಶದ ಲೆಕ್ಕದಲ್ಲಿ ದರ ವಿದಿಸುವ ಸಂಸ್ಥೆಗಳೂ ಇವೆ. ಇವೆಲ್ಲ ಮೋಸ ಅಲ್ವ?

    ಉತ್ತರ
  5. ಸತೀಶ ಬೆಂಗಳೂರು's avatar
    ಆಕ್ಟೋ 26 2011

    Sooooooper… Dhanyavadagalu…

    ಉತ್ತರ
  6. prashasti's avatar
    ಆಕ್ಟೋ 28 2011

    ಉತ್ತಮ ಮಾಹಿತಿಗೆ ವಂದನೆಗಳು.. ಆದರೆ ಸಿಗ್ನಲಿಂಗ್ ವ್ಯರ್ಥವಾಗುತ್ತದೆ ಅನ್ನೋ ಮಾತು ನನಗೆ ಇಷ್ಟವಾಗಲಿಲ್ಲ.. ನಾವು ಮಾಡೋ ಪ್ರತೀ ಕರೆಯ ಹಿಂದೆ ಅವರು ಸ್ಥಾಪಿಸಿದ ಎಲ್ಲಾ hardware ಗಳ ಸ್ಥಾಪನಾ ಮತ್ತು ನಿರ್ವಹಣಾ ವೆಚ್ಚದ ಜೊತೆಗೆ ಲಾಭವೂ ಒದಗಿರುತ್ತದೆ. ನೆಟ್ವಕ್ರೊಂದು ಉಳಿದ ನೆಟ್ವರ್ಕಿಗೆ ಮಾಡೋ ಕರೆಗಳಿಗೆ ೬೦ಪೈಸೆ/ನಿಮಿಷಕ್ಕೆ ಅಥವಾ ೧ಪೈ/ಸೆಕೆಂಡಿನಂತೆ ದರ ವಿಧಿಸುತ್ತದೆ.ಆದರೆ ತನ್ನ ನೆಟ್ವರ್ಕಿನ ಕರೆಗಳಿಗೆ ೧೦ ಪೈಸೆ/ನಿಮಿಷಕ್ಕೆ ಎಂಬಂತೆ ಒದಗಿಸುತ್ತದೆ. ..ಅವರೇನು ಧರ್ಮಾರ್ಥ ನಡೆಸುತ್ತಿಲ್ಲ ಅಲ್ಲವೇ?ಏನೇ ಮಾಡಿದರೂ ನಷ್ಟವೆಂತೂ ಮಾಡಿಕೊಳ್ಳುವುದಿಲ್ಲ. ಅಂದರೆ ಕರೆಗಾಗುವ ವೆಚ್ಚ ೧೦ ಪೈಸೆ/ನಿಮಿಷಕ್ಕಿಂತಲೂ ಕಡಿಮೆಯೇ ಇರಬೇಕು.. ಹೀಗೆ ಪ್ರತೀ ಕರೆ ವೆಚ್ಚದಲ್ಲೂ ನಮ್ಮಿಂದ ಹೆಚ್ಚು ಪಡೆಯುವ ಕಂಪನಿಯವರಿಗೆ ಕೆಲ ಮಿಸ್ ಕಾಲ್ಗಳಿಂದ ಏನೇನೂ ನಷ್ಟವಾಗುವುದಿಲ್ಲ.. ಮತ್ತೆ ಈ ಸಿಗ್ನಲಿಂಗ್ ಎನ್ನುವುದು ನಮಗಾಗಿ ಮಾತ್ರ ನಡೆಯುವ ಕ್ರಿಯೆ ಅಲ್ಲ.. ಅದು ನಿರಂತರವಾಗಿ ನಡೆಯುತ್ತಿರಬೇಕು.. ಅದಕ್ಕಾಗಿ ನಾವು ಪ್ರತೀ ಕರೆಯಲ್ಲೂ ದರ ತೆತ್ತುತ್ತನೇ ಇರುತ್ತೇವೆ..

    ಉತ್ತರ
  7. Divyadhara Shetty's avatar
    ಆಕ್ಟೋ 29 2011

    tumba artha purna lekana

    ಉತ್ತರ

Leave a reply to Divyadhara Shetty ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments