ದೀಪಾವಳಿ – ಬಚ್ಚಿಟ್ಟ ಬುತ್ತಿಯಿಂದ…. ೧
–ಅರವಿಂದ್
ದೀಪದಿಂದ ದೀಪವ ಹಚ್ಚಬೇಕು ಮಾನವ………….
ಪ್ರೀತಿಯಿಂದ ಪ್ರೀತಿ ಹಂಚಲು…..
ಮನಸಿನಿಂದ ಮನಸನು ಬೆಳಗಬೇಕು ಮಾನವ…..
ಇದ್ಯಾವ ಸಿನಿಮಾದ ಹಾಡಿನ ಸಾಲೋ ನೆನಪಿಲ್ಲ… ಆದರೆ ಪ್ರತಿ ದೀಪಾವಳಿಗೂ ಈ ಹಾಡು, ಉಕ್ಕುಕ್ಕಿ ಬರುವ ಕಡಲಿನಂತೆ……. ಸಾಗುತ್ತಲೇ ಇರುತ್ತದೆ ಮನದ ಮೂಲೆಯಲ್ಲಿ,ಬಹುಶಃ ದೀಪಾವಳಿಯ ದೀಪದ ಸಾಲು ಪ್ರತಿ ಮನೆಯಲ್ಲಿ ಬೆಳಗುತಿರುವಾಗಲೇ, ಹೌದು ಆ ದಿನ, ಅಷ್ಟು ಗಾಢ ಮೌನ ಮನದಲ್ಲಿ, ಮನೆಯಲ್ಲೂ ಸಹ, ಬದುಕಿ ಬಾಳನ್ನೇ ಬಂಗಾರವಾಗಿಸಿಕೊಳ್ಳಬೇಕಾದ ತಂಗಿ…. ಮರ ಹತ್ತಿ ಉರಿದಂತೆ ಕಣ್ಣೆದುರೇ ಉರಿದು ಹೋದಾಗಲಂತು ನನ್ನಿಡಿ ಜಂಘಾಬಲವೇ ಹುದುಗಿ ಹೋಗಿತ್ತು.
ಸಹನಾ…….. ಅವತ್ತೊಂದಿಷ್ಟು ಸಹನೆಯೊಂದಿಗಿದ್ದಿದ್ದರೆ, ಅವಳಿಡೀ ಜೀವನವೂ ಸೌಗಂಧಿಕದಂತೆ ಸುಂದರವಾಗುತ್ತಿತ್ತೇನೋ, ಹುಚ್ಚು ಕೊಡಿ ಮನಸು ಅದು, ಹಠಕ್ಕೆ ಮತ್ತೊಂದು ಹೆಸರಷ್ಟೇ ಸಹನಾ,
ಮನೆಯಲ್ಲಿ ದೆವ್ವದಂತೆ ಗರಬಡೆದು ಕೂತಿದೆ ಬಡತನ, ಉಡಲಿಕ್ಕೆನು ತಿನ್ನಲಿಕ್ಕೂ ಒಂದಗಳು…., ತಾಸುಗಟ್ಟಲೆ ಹುಡುಕುವಷ್ಟು ವ್ಯವಧಾನವಿಲ್ಲದಷ್ಟು ದರಿದ್ರ….
ಅಪ್ಪ-ಅಮ್ಮನನ್ನು ಹೀಗಳಿಯಲಿಕ್ಕೇ ಸಾಧ್ಯವೇ ಇಲ್ಲ ? ಅವರೇನು ಮಾಡಲಿಕ್ಕೆ ಸಾಧ್ಯ……., ಅವರಿಗೊಂದು ಓದಾ ಮೋದಾ……?? ಕಾಲಕ್ಕೂ ಅವರದು ಅದೇ ತತ್ವಾರ….. ಬದುಕಬೇಕು ಅಷ್ಟೆ…….. ಅವತ್ತಿಗೊಂದಿಷ್ಟು ಬೆಳ್ಳಂ ಬೆಳಿಗ್ಗೆಯೋ, ರಾತ್ರಿಯೋ ಹುಡುಕಿ ತಂದ ಹಳಸಲು ಅನ್ನವೋ…… ಬೀದಿಯ ಕೊನೆಯಲ್ಲಿನ ಕಲ್ಯಾಣ ಮಂಟಪದಲ್ಲಿ ದರ್ಪದಿಂದ ನೆಕ್ಕು ಬಿಸಾಡಿದ ಎಲೆಗಳ ರಾಶಿಯಲ್ಲಿ ಕಾಣುವ ಅನ್ನದಗಳೋ…. ಮಾರನೇ ದಿನಕ್ಕೆ ಅದೇ ಪರಮಾನ್ನ………….
ಅಪ್ಪ ಬೇಜವಾಬ್ದಾರನಲ್ಲ, ಕುಡುಕನಲ್ಲ….. ಅಮ್ಮ ಅದೆಂಥದೋ ಊರಿನಲ್ಲಿ ಮಧ್ಯಮ ಸ್ತರದ ಸಂಸಾರದಿಂದ ಬಂದವಳು, ಅಪ್ಪ ಎಂದೋ ಮನೆಬಿಟ್ಟು ಓಡಿ ಬಂದವನು, ಅವನಿಗೆ ಜಾತಿಯ ಹಂಗಿಲ್ಲ, ಇವಳಿಗೆ ಪ್ರೀತಿಯ ಬರವಿಲ್ಲ. ಅದೇನು ಪ್ರೀತಿಯೋ……… ಕಾಳಜಿಯೋ……… ಮಮತೆಯೋ….ನಾನು ನನ್ನ ತಂಗಿ ಧರೆಗಿಳಿಯಲು ಸಾಧ್ಯವಾದದ್ದಂತೆ…ಅಪ್ಪ ಮಾರ್ಕೆಟ್ಟಿನ ಮೂಲೆಯಂಗಡಿಗೆ ಮೂಟೆ ಹೊತ್ತು ಹಾಕುವ ಕೆಲಸ ಮಾಡ್ತಿದ್ದ. ಅಮ್ಮ ಧವಸ ಧಾನ್ಯದ ಹುಳು ಕಲ್ಲುಗಳ ತೆಗೆಯೋ ಕೆಲಸ, ಈಗೊಂದಿಷ್ಟು ತಿಂಗಳಿಂದ ಸಂಸಾರ ಸುಧಾರಿಸಿದೆ,ದಿನಕ್ಕೆ ಹತ್ತಿಪ್ಪತ್ತಕ್ಕೆ ತೊಂದರೆಯಿಲ್ಲ. ಆದರೇ ಶೆಟ್ಟಿ ಅಂಗಡಿ ಸಾಲ. ಆ ದಿನದ ಇಪ್ಪತ್ತು ಕೊಡೋದು,ನಾಳೆಗೆ ಒಂದಷ್ಟು ಬೇಳೆಕಾಳುಗಳನ್ನು ಹೊಸ ಸಾಲಕ್ಕೆ ಬರೆಸೋದು… ಆರಕ್ಕೇರದ ಮೂರಕ್ಕಿಳಿಯದ ಬಾಳು…..
ನಾನೀಗ ೫ ವರ್ಷ ತುಂಬಿದ ಉತ್ಸಾಹಿ ಹುಡುಗ, ಎಲ್ಲೆಂದರಲ್ಲಿ ಹೇಗಂದರಲ್ಲಿ ಓಡಿ ಹೇಳಿದ ಕೆಲಸವನ್ನು ಚಾಚು ತಪ್ಪದೆ ಮುಗಿಸಿ ಬರುವ ಹುಮ್ಮಸ್ಸು….
ಚೂಟಿತನಕ್ಕೇನು ಕಮ್ಮಿಯಿಲ್ಲ…. ಹಸಿದ ಹೊಟ್ಟೆಯಲ್ಲವೇ….ಅನ್ನದಗಳಿಗೆ ಎಂಟತ್ತು ದಾವುದ ದೂರ ಓಡಿ ಬರುವಷ್ಟು ತಾಕತ್ತು. ಬಹುಶಃ ಆ ಶೆಟ್ಟ್ರಿಗೂ ಅದೇ ಬೇಕಿತ್ತೋ ಏನೋ… ? ಯಾರಿಗ್ಗೊತ್ತು. ದಿನ ಅಂಗಡಿ ಮುಂದೆ ಬಂದು ನಿಂತರೆ, ನನಗೊಂದು.. ತಂಗಿಗೊಂದು ಬಣ್ಣದ ಮಿಠಾಯಿ ಕೊಟ್ಟು. ಲೇ ಬಾಬು.. ಇಕ್ಕಡ್ ರಾರ…. ನಾ ಬಿಡ್ಲು ಚಾಲ ದೂರಂಗ ವಸ್ತುನ್ನಾರು ವಾಲ್ ದೆಗ್ರ ಉಂದಾ ಅನ್ನಿ ಸಾಮಾನು ತೀಸ್ಕೊಂಡು ವಾಳ್ನ ಪಿಳ್ಕೊಂಡ್ ರಾ… ಅಂತ ಹೇಳೋದು……… ದಿನಕ್ಕೊಂದು ನೆವ ಅಷ್ಟೆ.. ಅವನ ಮನೆಯ ಕಕ್ಕಸು ಗುಂಡಿಯಿಂದ ಹಿಡಿದು… ಅವನ ಅಂಗಡಿಗೆ ಸಾಮಾನು ಕಳುಹಿಸೋ ತಾಲ್ಲೂಕು ರೇಷನ್ ಅಂಗಡಿಯ ಬಾಬ್ತು ಕೊಟ್ಟು ಬರೋದು ನನ್ನದೇ ಕೆಲಸ…….. ಎಲ್ಲ ನನಗೆ ನನ್ನ ತಂಗಿಗೆ ಕೊಡುವ ಬಣ್ಣದ ಮಿಠಾಯಿಗಾಗಿ….
ಅಪ್ಪ-ಅಮ್ಮ ನಿತ್ಯ ಕೆಲ್ಸ ಮುಗಿಸಿ ಬರೋದರೊಳಗೆ ನನ್ನ ತಾಲೂಕು ತಂತಿ ಓಡಾಟ ಎಲ್ಲ ಮುಗಿದಿರ್ತಿತ್ತು. ತಂಗಿಗೆ ಕೂತು ಎಂದೋ ಸರಸಮ್ಮ ಟೀಚರ್ ಹೇಳ್ಕೊಟ್ಟ ಅ ಆ ಇ ಈ ಮನೆ ಮುಂದಿನ ಮಣ್ಣಲ್ಲಿ ತಿದ್ದಿಸೋದೆ ಕೆಲ್ಸ, ಅವಳು ಚೆನ್ನಾಗೇ ಕಲಿತಿದ್ಲು ಬಿಡಿ, ನಿಜ ಹೇಳ್ತೇನೆ……… ಓದೋಕ್ಕಿಂತ ನನಗೆ ಶೆಟ್ಟಿಯಂಗಡಿಯ ಓಡಾಟ ಬಹಳ ಖುಷಿಕೊಡ್ತಿತ್ತು. ಆದ್ರೆ ತಂಗಿ, ಶೆಟ್ಟರ ಮಕ್ಕಳಂತೆ ಬಣ್ಣ ಬಣ್ಣದ ಅಂಗಿ ತೊಟ್ಟು ಶಾಲೆಗೋಗಿ ಶೆಟ್ಟಿಯಂಗಡಿಯ ಮುಂದೆ ಅಂಗಡಿ ಹಾಕ್ಬೇಕು, ಅವನ್ನ ನನ್ನ ತಂಗಿ ಕೆಲ್ಸಕ್ಕಿಟ್ಕೋ ಬೇಕು ಅಂತ ಆಸೆ…..
ಅಪ್ಪ ಅವತ್ತೊಂದಿನ ಭಾರಿ ಸಿಟ್ಟ್ನಾಗಿದ್ರು, ಬಂದದ್ದೇ ನಂಗೆ ಅಮ್ಮಂಗೆ ಬೆತ್ತ ಮುರ್ದೋಗಂಗೆ ಹೊಡ್ಡಿದ್ರು. ಆದ್ರೆ ಕೋಲು ಮುರಿಯೋಕು ಮುನ್ನ ಅಲ್ಲಿಂದ ಕಾಲ್ಕಿತ್ತ ನಾನು ಅದೇ ರಭಸದಾಗೆ ಹಿಂದಿಂದ ಓಡಿ ಬಂದು ಹೊಡಿತಿದ್ದ ಅಪ್ಪನ್ನ ತಳ್ಳಿ, ಹಣೆಗೆ ಗಾಯ ಮಾಡಿಸಿದ್ದ ಧೀರೋತ್ತಮ ನಾನು…
ಅವತ್ತಿಂದ ನಂಗೂ ಅಪ್ಪಂಗೂ ಮಾತಿಲ್ಲ ಕಥೆಯಿಲ್ಲ….. ಅದೇನೋ ಭಾಷೆಲಿ ಬ್ಯೆಯ್ತಿದ್ರು… ಅದೆಂತಕ್ಕೋ ಹುಟ್ಟಿದವ್ನು ಅಂತ.. ಮೊನ್ನೆ ಮೊನ್ನೆಯವರೆಗೂ ಹಂಗಂದ್ರೇನು ಅಂತಾನೇ ಗೊತ್ತಿರಲಿಲ್ಲ. ಮಂಜಣ್ಣ….. ಅವನ ಹೆಂಡತಿಗೆ ದಿನ ಕುಡ್ಕೊಂಡು ಬಂದು ಅದೇ ಪದ ಶುರುವಾಗೋ ಹಂಗೆ ಬಯ್ತಿದ್ದ. ಆಗೆಲ್ಲಾ,, ನಾನು ಚಿಕ್ಕ್ ತಾಯಿನೂ ಒಂದೇ ಇರಬೇಕು ಅಂತ ಅನಿಸಿದ್ದು ಮಾತ್ರ ಸತ್ಯ…..
ಶ್ರೀನಿವಾಸ, ಚಿಕ್ಕಮಾದ, ಸುರೇಶ ಇವ್ರು ನನ್ ಗೆಳೆಯರಾದ್ರು….. ಅವ್ರು ದಿನ ಶ್ಯಾಮಗೌಡರ ತೋಟದಾಗೆ ಮಾವಿನಕಾಯಿ ಕದ್ಯೋಕೆ ಹೋಗ್ತಿದ್ರು…… ಮಾರ್ಕೆಟ್ಟು ಹುಸೇನನಿಗೆ ಕದ್ದ ಮಾವಿನಕಾಯಿ ತಂದ್ಕೊಟ್ರೆ…ಒಬ್ಬರಿಗೆ ೧ ರೂಪಾಯಿ ಕೊಡೋವ್ನು… ಅದನ್ನ ತೊಗೊಂಡು ಊರಾಚೆಯಿರೋ ಅರಳಿಮರದತ್ರ, ಸಿಟಿ ಜನ ಅರ್ಧ ಬಳಸಿ ಬಿಸಾಕಿರೋ ಬಾಟ್ಲಿಗಳು…. ಸಿಗರೇಟು ತುಂಡುಗಳನ್ನು ಹುಡುಕಿ ತಂದು ಗುಡ್ಡೆ ಹಾಕಿ ಒಬ್ಬೊಬ್ಬ್ರೆ…. ಮಹದೇವಣ್ಣ ಸೇದಂಗೆ ನಾನು ಸೇದ್ತೀನಿ…. ನೋಡೋ…. ಅಂತ ಒಬ್ನು…. ಇನ್ನೊಬ್ಬ ಹಂಗಲ್ಲ ಕಣಲೇ ಹಿಂಗೇ…. ಅಂತ ಸುರಳಿ ಸುರಳಿ ಹೊಗೆ ಬಿಡೋರು…….. ಸ್ಪರ್ಧೆ ದಿನಕ್ಕೊಂದು ನಾಲ್ಕು ತಾಸು ನಡೀತಿತ್ತು….
ಇತ್ತ ತಂಗಿ ಅಮ್ಮನ್ನ ನೋಡೊಕೆ ರಾತ್ರಿ ಒಂಬತ್ತಕ್ಕೋ ಹತ್ತಕ್ಕೋ ಬರೋದು………. ಅಮ್ಮ ಊಟ ಮಾಡದೇ ನಂಗೋಸ್ಕರ ದಿನ ಕಾಯೋದು ನಡೀತನೇ ಇರ್ತಿತ್ತು. ಯಾಕೋ ಅಪ್ಪಂಗೆ ನನ್ನ ಮೇಲೆ ಪ್ರೀತಿಯೇ ಇಲ್ಲದೇ ಹೋಗಿತ್ತು. ನನ್ನ ಬಗ್ಗೆ ಎಂದು ಒಂದು ಮಾತು ಕೇಳಿದವರಲ್ಲವಂತೆ. ತಂಗಿನೇ ಅವ್ರಿಗೆ ಎಲ್ಲಾ ಪ್ರಪಂಚ……… ಈಗ ನನ್ನ ತಂಗಿ ಸ್ಕೂಲಿಗೆ ಹೋಗ್ತಾ ಇದ್ದಾಳಂತೆ, ನೀನು ಸ್ಕೂಲಿಗೆ ಸೇರ್ಕೊಂಡು ಒಳ್ಳೆ ಮನುಷ್ಯ ಆಗ್ಲಾ…ಅಂತ ಒಂದೇ ವರಾತ ನನ್ನಮ್ಮನದು…
ಏನಂತ ಹೇಳಲಿ ಆ ಮಮತಾಮಯಿಗೆ………………




