ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 27, 2011

1

ಸಂಸ್ಕೃತಿ ಸಂಕಥನ – ೮

‍ನಿಲುಮೆ ಮೂಲಕ

– ರಮಾನಂದ ಐನಕೈ

ಮೂರ್ತಿ ಪೂಜೆಗೆ ಕಾರಣಗಳು ಬೇಕಾಗಿಲ್ಲ 

ಯಾವ ಸಂಸ್ಕೃತಿಯಲ್ಲಿ ರಿಲಿಜನ್ ಇದೆಯೋ ಆ ಸಂಸ್ಕೃತಿ ವಿಗ್ರಹ ಆರಾಧನೆ ಅಥವಾ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಏಕೆಂದರೆ ರಿಲಿಜನ್ನಿನಲ್ಲಿ ಗಾಡ್ ಹಾಗೆ ಆಜ್ಞಾಪಿಸಿದ್ದಾನೆ. ಗಾಡ್ ಮಾತ್ರ ನಿಜವಾದ ದೇವರು. ಉಳಿದ ದೇವರುಗಳೆಲ್ಲ ಗಾಡ್ನ ವೈರಿ ಸೈತಾನನ ಪ್ರತಿರೂಪಗಳು. ಹಾಗಾಗಿ ಸೈತಾನನ ಪ್ರತಿರೂಪವಾದ ನೂರಾರು ಮೂರ್ತಿಗಳನ್ನು ಪೂಜಿಸುವುದು ಅನೈತಿಕ. ಪಾಶ್ಚಾತ್ಯರು ಅದೇ ದೃಷ್ಟಿಯಲ್ಲಿ ನಮ್ಮ ಮೂರ್ತಿಪೂಜೆಗಳನ್ನು ನೋಡಿ ಟೀಕೆ ಮಾಡಿದರು. ಆದರೆ ಅದು ನಮಗ ಅರ್ಥವೇ ಆಗಲಾರದು. ಏಕೆಂದರೆ ನಮ್ಮದು ರಿಲಿಜನ್ನೇ ಇಲ್ಲದ ಬಹುಸಂಸ್ಕೃತಿಗಳ ನಾಡು.

 

ಪಾಶ್ಚಾತ್ಯರು ಭಾರತೀಯರ ಮೂರ್ತಿ ಪೂಜೆ ಯನ್ನು ಅನೈತಿಕ ಎಂದು ವ್ಯಾಖ್ಯಾನಿಸಿದರು. ಏಕಿರ ಬಹುದು? ಅದರ ಹಿಂದಿನ ನಿಜ ಏನಿರಬಹುದು?

ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆ ಒಂದು ಪ್ರಮುಖ ಧಾರ್ಮಿಕ ಕ್ರಿಯಾವಿಧಾನ. ಅದು ಸಾಂಪ್ರದಾಯಿಕವಾಗಿ ತಲೆಮಾರುಗಳನ್ನು ದಾಟುತ್ತ ಬಂದಿದೆ. ಇವರು ಮೂರ್ತಿಗಳನ್ನು ದೇವರು ಎಂದು ಪೂಜಿಸಿ ನೆಮ್ಮದಿ ಕಾಣುತ್ತಾರೆ. ಇದರಿಂದ ಯಾರಿಗೂ ಕೆಡುಕಾದ ಉದಾಹರಣೆ ಗಳಿಲ್ಲ. ಹಾಗಂತ ಮೂರ್ತಿ ಪೂಜೆಯನ್ನು ಯಾವುದೋ ಗಹನವಾದ ಅರ್ಥ ಅಥವಾ ಉದ್ದೇಶ ಇಟ್ಟುಕೊಂಡು ಮಾಡುತ್ತಾರೆಂದು ಅರ್ಥವಲ್ಲ. ಇವರಿಗೆ ಇದೊಂದು ಸಂಪ್ರದಾಯ. ನಮ್ಮಲ್ಲಿ ಮೂರ್ತಿಪೂಜೆ ಮಾಡುವವರು ಅಂದರೆ ಶ್ರದ್ಧಾವಂತರು ಹಾಗೂ ಸಮಾಜದಲ್ಲಿನ ಮೌಲ್ಯ ಗಳನ್ನು ಗೌರವಿಸುವವರು. ಅನೇಕ ಸಾರಿ ಸಂಪ್ರ ದಾಯಗಳ ಬಗ್ಗೆ ಮಾರ್ಗದರ್ಶನ ಮಾಡುವವರೂ ಇವರೆ. ಮೂರ್ತಿ ಪೂಜೆ ಮಾಡುವುದರ ಹಿಂದೆ ಪರಿಶುದ್ಧತೆ ಹಾಗೂ ನೈತಿಕತೆ ಇರಬೇಕೆಂದು ನಂಬಿ ಕೊಂಡವರು ನಾವು. ನಮ್ಮ ಸಂಪ್ರದಾಯ ಆದಷ್ಟು ಇದನ್ನು ಉಳಿಸಿ ಬೆಳೆಸಿಕೊಂಡು ಬರಲು ಪ್ರಯತ್ನಿ ಸಿದೆ.

ಹೀಗಿದ್ದಾಗ ಮೂರ್ತಿ ಪೂಜೆ ಅನೈತಿಕ ಎಂಬ ಪ್ರಶ್ನೆ ಉದ್ಭವಿಸಲು ಕಾರಣವೇನು? ಸರಳವಾಗಿ ಹೇಳಬೇಕಾದರೆ ಐರೋಪ್ಯರು ಭಾರತವನ್ನು ಆಳಲು ಪ್ರಾರಂಭಿಸಿದಾಗ ಹುಟ್ಟಿಕೊಂಡ ದೃಷ್ಟಿ ಕೋನ ಇದು. ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಸೆಮಿಟಕ್ ರಿಲಿಜನ್ ಆದ್ದರಿಂದ ಅವರಿಗೆ ಮೂರ್ತಿ ಪೂಜೆ ಅನೈತಿಕ ಎಂದು ಕಂಡಿದ್ದರಲ್ಲಿ  ಆಶ್ಚರ್ಯ ವಿಲ್ಲ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಆಳ್ವಿಕೆಯಲ್ಲಿ ನಮ್ಮ ಮೂರ್ತಿಪೂಜೆಯನ್ನು ತುಂಬಾ ಕೀಳಾಗಿ ನೋಡಿದರು. ಅಷ್ಟೇಅಲ್ಲ, ಒಬ್ಬರು ದೇವಾಲಯ ಗಳನ್ನು, ಮೂರ್ತಿಗಳನ್ನು ಛಿದ್ರಮಾಡಲು ಪ್ರಯತ್ನಿಸಿದರೆ ಇನ್ನೊಬ್ಬರು ಮೂರ್ತಿ ಪೂಜಕರ ಮನಸ್ಸನ್ನೇ ಬದಲಿಸಲು ಪ್ರಯತ್ನಿಸಿದರು. ಇವೆಲ್ಲ ಅವರು ಭಾರತೀಯ ಸಂಸ್ಕೃತಿಯನ್ನು ಒಂದು ರಿಲಿಜನ್ ಎಂದು ಗ್ರಹಿಸಿದ್ದರಿಂದ ಆದ ತೊಂದರೆಯೇ ವಿನಾ ದ್ವೇಷದ ಪ್ರಕ್ರಿಯೆ ಎಂದು ಭಾವಿಸುವುದು ಸಮಂಜಸವಲ್ಲ. ಹೀಗೆ ಯೋಚಿಸುವಾಗ ಎದುರಾಗುವ ಮತ್ತೊಂದು ಪ್ರಶ್ನೆ ಅಂದರೆ ಅವರಿಗೇಕೆ ಈ ತೊಂದರೆ ಉದ್ಭವವಾ ಯಿತು ಎಂಬುದು.

ಸೆಮೆಟಿಕ್ ರಿಲಿಜನ್ಗಳು ಮೂರ್ತಿ ಪೂಜೆ ಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತವೆ. ರಿಲಿಜನ್ನುಗಳ ಪ್ರಕಾರ ಗಾಡ್ ಐಡೋಲೇಟ್ರಿ ಯನ್ನು ನಿಷೇಧಿಸಿದ್ದಾನೆ ಹಾಗೂ ಅದನ್ನು ಆಚರಿಸುವವರಿಗೆ ನರಕದಲ್ಲಿ ಕ್ರೂರವಾದ ಶಿಕ್ಷೆ ವಿಧಿಸುತ್ತಾನೆ. ಹಾಗಾಗಿ ಇದೊಂದು ಮಹಾಪಾಪ. ಈ ನಂಬಿಕೆಯ ಹಿಂದೆ ರಿಲಿಜನ್ನಿನ ಥಿಯಾಲಜಿಯ ಪ್ರಭಾವ ಇದೆ.

ಸೆಮೆಟಿಕ್ ರಿಲಿಜನ್ನಿನ ಪ್ರಕಾರ ಗಾಡ್ ಒಬ್ಬನೇ ನಿಜವಾದ ದೇವರು. ಅವನನ್ನು ಮಾತ್ರ ಆರಾಧಿಸ ಬೇಕು. ಈ ಗಾಡ್ನ ವೈರಿ ಒಬ್ಬ ಇದ್ದಾನೆ. ಅಥವಾ ಆತನನ್ನು ದುಷ್ಟಶಕ್ತಿ ಅಂತಲೂ ಅನ್ನಬಹುದು. ಅವನೇ ಡೆವಿಲ್ ಅಥವಾ ಸೈತಾನ. ಈ ಸೈತಾನನಿಗೂ ಒಂದು ಕಥೆ ಇದೆ. ಅವನು ಮೂಲತಃ ಒಬ್ಬ ಏಂಜಲ್ ಆಗಿದ್ದನಂತೆ. ಗಾಡ್ನ ವಿರುದ್ಧ ದಂಗೆ ಯೆದ್ದು ಭ್ರಷ್ಟನಾಗುತ್ತಾನೆ. ಈ ಕಾರಣಕ್ಕಾಗಿ ಆತ ಮನುಷ್ಯರನ್ನು ನಿಜವಾದ ರಿಲಿಜನ್ನಿನಿಂದ ದಾರಿ ತಪ್ಪಿಸಿ ಭ್ರಷ್ಟರನ್ನಾಗಿ ಮಾಡಿ ತನ್ನದೇ ವಿವಿಧ ರೂಪ ಗಳನ್ನು ಪೂಜಿಸುವಂತೆ ಮಾಡಿ ಅವರನ್ನು ನರಕಕ್ಕೆ ಸೆಳೆಯುತ್ತಾನೆ. ಈ ಕೆಲಸಕ್ಕಾಗಿ ಆತನ ಜೊತೆ ಕೆಲವು ಬಂಟರು ಇದ್ದಾರೆ. ಈ ಬಂಟರನ್ನು ಡೆಮನ್ಗಳೆಂಬುದಾಗಿ (Demon) ಕರೆಯಲಾಗಿದೆ. ಹೀಗಾಗಿ ಪಾಶ್ಚಾತ್ಯರ ನಂಬಿಕೆ ಪ್ರಕಾರ ಗಾಡ್ ಮಾತ್ರ ನಿಜವಾದ ದೇವರು. ಉಳಿದವುಗಳೆಲ್ಲ ಸುಳ್ಳು ದೇವರು ಅರ್ಥಾತ್ ಸೈತಾನ ಪ್ರತಿರೂಪಗಳು. ಈ ಸುಳ್ಳು ದೇವರುಗಳನ್ನು ಪೂಜಿಸುವವರು ಭ್ರಷ್ಟರಾಗುವುದರಿಂದ ಅದೊಂದು ಅನೈತಿಕ ಕ್ರಿಯೆಯಾಗುತ್ತದೆ. ಸುಳ್ಳು ದೇವರುಗಳನ್ನು ನಾಶ ಮಾಡಿ ನಿಜವಾದ ಗಾಡ್ನ ಆರಾಧಿಸುವುದೇ ರಿಲಿಜನ್ ಹೊಂದಿದವರ ಗುರಿ ಮತ್ತು ಲಕ್ಷಣ. ಹಾಗಾಗಿ ಭಾರತೀಯ ದೇವರುಗಳೂ ಸೈತಾನನ ಪ್ರತಿರೂಪ ಎಂದು ನಂಬಿದ್ದು ಅವರ ತೊಂದರೆಯೇ ವಿನಾ ನಮ್ಮ ನಿಜ ಅಲ್ಲ.

ರಿಲಿಜನ್ನಲ್ಲಿ ಗಾಡ್ ಒಬ್ಬನನ್ನೇ ಏಕೆ ಪೂಜಿಸ ಬೇಕು ಹಾಗೂ ಉಳಿದ ದೇವರುಗಳನ್ನು ಯಾಕೆ ಪೂಜಿಸಬಾರದೆಂಬ ಬಗ್ಗೆ ಕಾರಣಗಳಿವೆ. ಆದರೆ ನಮ್ಮ ಸಂಪ್ರದಾಯ ಹಾಗಲ್ಲ. ಸಂಪ್ರದಾಯಗಳನ್ನು ಕಡ್ಡಾಯವಾಗಿ ಏಕೆ ಪಾಲಿಸಬೇಕೆಂಬುದಕ್ಕೆ ಕಾರಣ ಗಳಿಲ್ಲ. ಹಾಗೆಯೇ ಅವುಗಳನ್ನು ಪಾಲಿಸಲೇಬಾರ ದೆಂಬುದಕ್ಕೂ ಯಾವ ಕಾರಣಗಳಿಲ್ಲ. ಆಚರಣೆಗಳು ಅಸ್ತಿತ್ವದಲ್ಲಿರಲಿಕ್ಕೆ ಪ್ರತ್ಯೇಕ ಕಾರಣ ಅಥವಾ ಸಮರ್ಥ ನೆಗಳು ಬೇಕಿಲ್ಲ. ಒಬ್ಬನಿಗೆ ಬದುಕಲಿಕ್ಕೆ ಕಾರಣಗಳು ಇಲ್ಲವೆಂದ ಮಾತ್ರಕ್ಕೆ ಅವನಿಗೆ ಸಾಯಲು ಕಾರಣ ವಿದೆ ಎಂಬುದು ಸಮಂಜಸ ಅಲ್ಲ. ಸಾಯಲು ಕಾರಣ ಸಿಗುವವರೆಗೆ ಬದುಕಲೇಬೇಕಾದದ್ದು ಸಹಜ. ಸಂಪ್ರದಾಯದ ನೆಲೆಯಲ್ಲಿ ನೋಡಿದಾಗ ಮೂರ್ತಿ ಪೂಜೆ ಮಾಡಬಾರದು ಎಂಬುದಕ್ಕೆ ನಮಗೆ ಕಾರಣಗಳೇ ಇಲ್ಲ. ಪಾಶ್ಚಾತ್ಯರು ನೀಡುವ ಕಾರಣ ನಮಗೆ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮಲ್ಲಿ ರಿಲಿಜನ್ ಇಲ್ಲ.

ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ನೇ ಇಲ್ಲ ವಾದ್ದರಿಂದ ಇಲ್ಲಿ ಸತ್ಯದೇವರು, ಸುಳ್ಳು ದೇವರು ಗಳೆಂಬ ಕಲ್ಪನೆಯೇ ಇಲ್ಲ. ಅವರವರಿಗೆ ಅವರವರ ದೇವರೇ ಸತ್ಯ. ಇಲ್ಲಿ ಮೂರ್ತಿ ಪೂಜೆ ಒಂದು ಸಂಪ್ರ ದಾಯ. ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಆದ್ದರಿಂದ ನಾವು ನಡೆಸುತ್ತಿದ್ದೇವೆ ಎಂಬು ದಷ್ಟೇ ವಾಸ್ತವವಾಗುತ್ತದೆ. ಹಾಗಾಗಿ ಮೂರ್ತಿ ಪೂಜೆ ಅನೈತಿಕ ಅದನ್ನು ಬಿಟ್ಟು ಬಿಡಿ ಎಂದರೆ ರಿಲಿಜನ್ ಇಲ್ಲದ ಸಂಸ್ಕೃತಿಯವರಿಗೆ ನಗು ಬರುತ್ತದೆ. ಆದರೆ ಭಾರತೀಯರಿಗೆ ನಗು ಬರುವ ಬದಲು ಗೊಂದಲ ಶುರುವಾಗುತ್ತದೆ. ಏಕೆಂದರೆ ಇವರು ಓದುವ ಸಮಾಜ ವಿಜ್ಞಾನವೂ ಇದನ್ನೇ ಹೇಳುತ್ತದೆ. ಸಮಾಜ ವಿಜ್ಞಾನ ಸುಳ್ಳು ಹೇಳುವುದಿಲ್ಲವೆಂಬುದು ಇವರ ಅರಿವಿನ ಮಿತಿ. ಇದು ಭಾರತೀಯರ ಮಿತಿ ಅಲ್ಲ, ಭಾರತೀಯ ಸಮಾಜವಿಜ್ಞಾನದ ಮಿತಿ ಎಂಬುದನ್ನು ದರ್ಶನ ಮಾಡಿಸುತ್ತಿದ್ದಾರೆ ಪ್ರೊ. ಬಾಲ ಗಂಗಾಧರರು.

ಭಾರತೀಯ ಮೂರ್ತಿ ಪೂಜೆಯನ್ನು ಅನೈತಿಕ ಎಂದು ವ್ಯಾಖ್ಯಾನ ಮಾಡಿದವರು ಪ್ರೊಟೆಸ್ಟಾಂಟ್ ಕ್ರಿಶ್ಚಿಯನ್ನರು. ಏಕೆಂದರೆ ಅವರು ಇದೇ ಕಾರಣಕ್ಕೆ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ಯನ್ನು ವಿರೋಧಿಸಿದವರು. ರೋಮ್ನಲ್ಲಿ ಕ್ರಿಶ್ಚಿಯನ್ ರಿಲಿಜನ್ ಸ್ಥಾಪಿಸಲ್ಪಟ್ಟರೂ ಅದು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಹಳ್ಳಿ ಗಳಲ್ಲಿ ಪ್ರಾಚೀನ ರೋಮಿನ ಸಂಪ್ರದಾಯಗಳೂ ಮಿಶ್ರವಾಗಿದ್ದವು. ಹಾಗಾಗಿ ಅವರಿಗೆ ಪೇಗನ್ನರು, ಹೀದನ್ನರು ಎಂಬುದಾಗಿ ಕರೆಯಲಾಗುತ್ತಿತ್ತು. ಹಾಗಾಗಿ 16ನೇ ಶತಮಾನದಲ್ಲಿ ಐರೋಪ್ಯರು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಅವರ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಿನಿಂದ ಇಲ್ಲಿನ ಆಚರಣೆಗಳನ್ನು ವೀಕ್ಷಿಸಿದರು. ಇಲ್ಲಿ ನೂರಾರು ರೀತಿಯ ನೂರಾರು ಆಕಾರದ ಮೂರ್ತಿಗಳನ್ನು ಪೂಜಿಸುತ್ತಾರೆ. ಹೀಗಾಗಿ ಭಾರತೀಯ ಮೂರ್ತಿ ಪೂಜೆಯು ಪ್ರಾಚೀನ ಪೇಗನ್ನರ ಮೂರ್ತಿ ಪೂಜೆಯಂತೆ ಪಾಪವಾಗಿ ದೋಷಪೂರ್ಣವಾಗಿ ಕಂಡಿತು. ಇದಕ್ಕೆ ಪೂರಕ ವಾಗಿ ಪ್ರೊಟೆಸ್ಟಾಂಟರು ಕೆಥೋಲಿಕ್ ಪ್ರೀಸ್ಟ್ಗಳ ಮೇಲೆ ದಾಳಿ ನಡೆಸುವಾಗ ಕ್ಯಾಥೋಲಿಕರ ಪ್ರೀಸ್ಟ್ ಕಸುಬು ಹಾಗೂ ಹೀದನ್ನರ ಪೂಜಾರಿ ಕಸುಬು ಒಂದೇ ಎಂದು ವರ್ಣಿಸತೊಡಗಿದರು. ಇದಕ್ಕೆ ಪ್ರತಿಯಾಗಿ ಕ್ಯಾಥೋಲಿಕರು ಹೀದನ್ನರ ಪೂಜಾರಿಕೆಯನ್ನು ಹೀಗಳೆದು ತಮಗೂ ಹೀದನ್ನ ರಿಗೂ ವ್ಯತ್ಯಾಸವಿದೆಯೆಂದು ದೃಷ್ಟಾಂತಪಡಿಸುತ್ತ ತಮ್ಮ ಸಂಸ್ಥೆಯನ್ನು ಸಮರ್ಥಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಏಕಕಾಲದಲ್ಲಿ ಪ್ರೊಟೆಸ್ಟಾಂಟ್ರು ಹಾಗೂ ಕೆಥೋಲಿಕ್ರು ಇಬ್ಬರೂ ಸೇರಿ ಹೀದನ್ನರ ಪೂಜಾರಿಗಳ ಅನೈತಿಕವಾದ ವ್ಯಕ್ತಿತ್ವ ಹಾಗೂ ಪೈಶಾಚಿಕ ಆಚರಣೆಯನ್ನು ತೀವ್ರವಾಗಿ ಖಂಡಿಸ ತೊಡಗಿದರು. ಇದೇ ಟೀಕೆ ಭಾರತೀಯ ಮೂರ್ತಿ ಪೂಜೆಯ ಕುರಿತಾಗಿಯೂ ಬೆಳೆಯುತ್ತ ಬಂತು. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಿತು ಅಂದರೆ ಭಾರತೀಯ ಸುಧಾರಣಾವಾದಿ ಗಳೂ ಕೂಡ ತಮ್ಮ ನಿಲುವುಗಳನ್ನು ಬದಲಿಸಿ ಕೊಂಡು ಮೂರ್ತಿ ಪೂಜೆಯನ್ನು ವಿರೋಧಿಸ ತೊಡಗಿದರು. ಇದರಿಂದ ಭಾರತೀಯರ ಮನಸ್ಸು ಕದಡಿತೇ ವಿನಾ ಮೂರ್ತಿಪೂಜೆಯನ್ನು ನಾಶ ಮಾಡಲಿಕ್ಕಾಗಲಿಲ್ಲ. ಕೊನೆಯ ಪಕ್ಷ ಇದನ್ನು ಅರ್ಥ ಮಾಡಿಕೊಂಡಲ್ಲಿ ನಮ್ಮಲ್ಲಿನ ಗೊಂದಲವ ನ್ನಾದರೂ ನಿವಾರಿಸಿಕೊಳ್ಳಲು ಸಾಧ್ಯ.

*

ಲುಡೋವಿಕೊ ವಾರ್ಥೆಮಾ ಎಂಬ ಇಟಲಿಯ ಪ್ರವಾಸಿಯೊಬ್ಬನು 1505ರಲ್ಲಿ  ಭಾರತಕ್ಕೆ ಬಂದಿದ್ದು ಕ್ಯಾಲಿಕಟ್ನ ರಾಜನ ಅರಮನೆಯ ಪೂಜಾ ಮಂದಿರದಲ್ಲಿ  ನೋಡಿದ ವಿಗ್ರಹವೊಂದನ್ನು ಡೆವಿಲ್ ಎಂದು ಗುರುತಿಸುತ್ತಾನೆ. ಈ ಡೇವಿಲ್ಗೆ ಪೋಪರ ರಾಜ್ಯದಲ್ಲಿ ಇರುವಂತೇ ಮೂರು ಎಸಳುಗಳುಳ್ಳ ಒಂದು ಕಿರೀಟವಿದೆ. ಅದಕ್ಕೆ ನಾಲ್ಕು ಕೈಗಳು ಹಾಗೂ ನಾಲ್ಕು ಕೋರೆಗಳಿವೆ. ಒಂದು ದೊಡ್ಡದಾದ ಬಾಯಿ, ಮೂಗು ಹಾಗೂ ಭಯಾನಕವಾದ ಕಣ್ಣುಗಳಿವೆ. ಕೈಗಳು ಮಾಂಸದ ಕೊಂಡಿಗಳಂತೆ ಹಾಗೂ ಕಾಲುಗಳನ್ನು ಹುಂಜದ ಕಾಲುಗಳಂತೆ ರೂಪಿಸಲಾಗಿದೆ ಎಂದು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಮೂಲತಃ ಅದು ನರಸಿಂಹನ ಮೂರ್ತಿ. ಇದನ್ನು ಆಧರಿಸಿ ಐರೋಪ್ಯರು ಕೆಲವು ಕಾಲ್ಪನಿಕ ರೇಖಾಚಿತ್ರಗಳನ್ನು ರಚಿಸಿಕೊಂಡರು. ಇದು ಜರ್ಗ ಬ್ರ್ಯೂ ಎಂಬ ಜರ್ಮನ್ ಚಿತ್ರಕಾರನೊಬ್ಬನು ರಚಿಸಿದ ಚಿತ್ರ. ಈ ಚಿತ್ರವನ್ನು ನೋಡಿದಾಗ ಪಶ್ಚಿಮದ ಗ್ರಹಿಕೆಯಲ್ಲಿ ನರಸಿಂಹನ ಮೂರ್ತಿಯು ಎಷ್ಟು ಅಪರಿಚಿತವಾಗಿ ಐರೋಪ್ಯವಾಗಿ ಮಾರ್ಪಟ್ಟಿದೆ ಎಂಬುದು ಗಮನ ಸೆಳೆಯುತ್ತದೆ. ಈ ಮೂರ್ತಿಯ ಕಿರೀಟವನ್ನು ಕ್ಯಾಥೋಲಿಕ್ ಪೋಪನ ಕಿರೀಟಕ್ಕೆ ಹೋಲಿಸಿರುವುದೂ ಗಮನಾರ್ಹ. ಪ್ರೊಟೆಸ್ಟಾಂಟ್ರು ಕೆಥೋಲಿಕ್ರನ್ನು ಐಡೋಲೇಟರ್ಸ್ ಎಂಬುದಾಗಿ ಕಟುಟೀಕೆ ಮಾಡಿದರು. ಹಾಗೂ ಕೆಥೋಲಿಕ್ ಪಂಥವು ಪೇಗನ್ ಅನೈತಿಕ ಆಚರಣೆಗಳನ್ನು ಅಳವಡಿಸಿಕೊಂಡು ಹಾಳಾಗಿಹೋಗಿದೆ ಎಂಬುದಾಗಿ ಜರಿದರು. ಐರೋಪ್ಯರಿಗೆ ಯಾವ್ಯಾವುದು ಭ್ರಷ್ಟತೆಯೆಂಬುದಾಗಿ ಕಾಣಿಸಿತೋ ಅದೆಲ್ಲವನ್ನೂ ಪೇಗನ್ನರಿಗೆ ಹಾಗೂ ಕ್ಯಾಥೋಲಿಕ್ರಿಗೆ ಸಮೀಕರಿಸಿದರು. ಭಾರತಕ್ಕೆ ಬಂದ ಪ್ರವಾಸಿಗರು ಅನೈತಿಕತೆ, ಭ್ರಷ್ಟ ಆಚರಣೆ ಹಾಗೂ ಪಾಪ ಕಾರ್ಯಗಳ ಕುರಿತು ತಾವು ಇಟ್ಟುಕೊಂಡಿದ್ದ ಚಿತ್ರಣಕ್ಕೆ ಹೊಂದುವಂತೆ ಭಾರತೀಯ ದೇವತೆಗಳನ್ನು ಹಾಗೂ ಪೂಜಾಚರಣೆಗಳನ್ನು ಚಿತ್ರಿಸಿದರು. ಇದಕ್ಕೆ ಒಂದು ಜೀವಂತ ನಿದರ್ಶನ ಈ ಚಿತ್ರ.

1 ಟಿಪ್ಪಣಿ Post a comment
  1. nanjundaraju's avatar
    ಆಕ್ಟೋ 28 2011

    ಮಾನ್ಯರೇ, ಮೂರ್ತಿ ಪೂಜೆ ಬಗ್ಗೆ ಪರ ಮತದವರಲ್ಲಿ ಮತ್ತು ಪಶ್ಚತ್ಯರಲ್ಲಿ ಸಾಕಷ್ಟು ಗೊಂದಲಗಳಿವೆ. ಪರಕೀಯರು ಹೇಳುವುದರೊಂದಿಗೆ ಭಾರತೀಯರಿಗೂ ಗೊಂದಲ ಉಂಟಾಗುವಂತೆ ಮಾಡಿ. ದೇವರೆಂದರೆ ದೆವ್ವ ಎಂಬುವ ಭಾವನೆ ಮೂಡುವಂತೆ ಮಾಡಿದರು ಎಂಬುದಕ್ಕೆ ಈ ಲೇಖನ ಹೆಚ್ಚಿನ ಒತ್ತುಕೊಡುತ್ತದೆ. ಮೂರ್ತಿ ಪೂಜೆ ಬಗ್ಗೆ ನಡೆದು ಬಂದ ದಾರಿ ಬಗ್ಗೆ ಒಳ್ಳೆಯ ವಿವರೆಣೆ ಇದೆ. ಒಟ್ಟಿನಲ್ಲಿ ಒಳ್ಳೆಯ ಲೇಖನ. ಇದಕ್ಕಾಗಿ ಧನ್ಯವಾದಗಳು, ವಂದನೆಗಲೊಡನೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments