ಕಾನೂನಿನಂಗಳ ೮ : ಕಿರುಕುಳ, ಹಿಂಸೆ, ದೌರ್ಜನ್ಯ, ಅತ್ಯಾಚಾರ!
ಉಷಾ ಐನಕೈ ಶಿರಸಿ
ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನಾಗಿ ನಡೆಯುತ್ತಿರುವುದು ಕಣ್ಣಿಗೆ ಕಾಣುವ ವಾಸ್ತವ, ಮಹಿಳೆಯರು ಸಬಲರಾಗಿದ್ದಾರೆ. ಸ್ವಾಭಿಮಾನಿಗಳಾಗಿದ್ದಾರೆ. ಆರ್ಥಿಕ ಹಾಗೂ ವೈಚಾರಿಕ ಸ್ವಾತಂತ್ರ್ಯವನ್ನು ಹೊಂದುತ್ತಿದ್ದಾರೆ. ಹೀಗಿದ್ದರೂ ಕಾನೂನು ಹಲವು ದೃಷ್ಟಿಯಲ್ಲಿ ಮಹಿಳೆಯರನ್ನು ಅಬಲೆಯರೆಂದೇ ಪರಿಗಣಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಮಹಿಳೆಯರ ಪ್ರಾಕೃತಿಕ ಲಕ್ಷಣ. ಮಹಿಳೆಯ ದೈಹಿಕ ರಚನೆ ಹಾಗೂ ಮಾನಸಿಕ ಸ್ಥರಗಳು ಪುರುಷರಿಗಿಂತ ಭಿನ್ನವಾಗೇ ಇವೆ. ಆದ್ದರಿಂದ ಕುಟುಂಬದಲ್ಲಿರಲಿ, ಸಮಾಜದಲ್ಲಿರಲಿ ಅಥವಾ ಅವಳು ಕೆಲಸ ಮಾಡುವ ಕಾರ್ಯಕ್ಷೇತ್ರಗಳಲ್ಲಿರಲಿ ಪ್ರತಿಯೊಂದು ರಂಗದಲ್ಲೂ ಮಹಿಳೆಗೆ ಪುರುಷರಿಗಿಂತ ಬೇರೆಯದೇ ರೀತಿಯ ರಕ್ಷಣೆಯ ಅಗತ್ಯವಿದೆ. ಇವನ್ನೆಲ್ಲ ಮನಗಂಡು ಮಹಿಳೆಯರಿ ಗಾಗಿಯೇ ಒಂದಿಷ್ಟು ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ.
ಮಹಿಳಾ ದೌರ್ಜನ್ಯ
ಮಹಿಳಾ ದೌರ್ಜನ್ಯ ಎಂದರೆ ಮಹಿಳೆಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡೂ ರೀತಿಯಿಂದ ವಿನಾಕಾರಣ ಒತ್ತಡ ಹೇರುವುದು. ಹಾಗಾದರೆ ಈ ದೌರ್ಜನ್ಯಗಳ ಸಮರ್ಥನೆಗೆ ಮಾನ ದಂಡಗಳಾವವು? ದೈಹಿಕ ದೌರ್ಜನ್ಯಕ್ಕೆ ಕುರುಹುಗಳು ಸಿಗಬಹುದು. ಮಾನಸಿಕ ದೌರ್ಜನ್ಯಕ್ಕೆ ಸಾಕ್ಷಿ ಎಲ್ಲಿ? ಹಾಗಾಗಿ ಬಹುತೇಕ ಸಂದರ್ಭಗಳಲ್ಲಿ ಮಾನಸಿಕ ದೌರ್ಜನ್ಯಗಳಿಗೆ ಸಾಕ್ಷಾಧಾರಗಳಿಲ್ಲದೇ ಕೇವಲ ಆರೋಪ ಪ್ರತ್ಯಾರೋಪಗಳ ಹಂತದಲ್ಲೇ ನಿಂತುಬಿಡುತ್ತದೆ. ಮಹಿಳೆಯ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಹಿಂಸೆ, ಕೌಟುಂಬಿಕ ಹಿಂಸೆಗಳನ್ನೆಲ್ಲ ಕಾನೂನಿನ ಪರಿಭಾಷೆಯಲ್ಲಿ ‘ದೌರ್ಜನ್ಯ’ ಎಂದು ಪರಿಗಣಿಸಲಾಗುತ್ತದೆ. ಮೇಲಿನ ಎಲ್ಲವನ್ನೂ ಕಾನೂನು ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ.
ಲೈಂಗಿಕ ಕುರುಕುಳ
ಮಹಿಳೆಯರು ಇಂದು ಪುರುಷರಿಗೆ ಸರಿಸಾಟಿಯಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯಮ ಕ್ಷೇತ್ರ ಇರಬಹುದು, ಕೆಲಸ ಮಾಡುವ ಕಚೇರಿಗಳಿರಬಹುದು, ಸಾಮಾಜಿಕ ಕ್ಷೇತ್ರಗಳಿರಬಹುದು, ಎಲ್ಲ ಕಡೆಯಲ್ಲೂ ಮಹಿಳೆಯರು ಮಾನಸಿಕವಾಗಿ ಕಂಗೆಡುವ ಸಂದರ್ಭ ಎದುರಾಗುತ್ತದೆ. ಅಂದರೆ ಪುರುಷರ ಕೆಂಗಣ್ಣುಗಳಿಗೆ ಆಕೆ ತುತ್ತಾಗಬೇಕಾಗುತ್ತದೆ. ಇದನ್ನೇ ‘ಲೈಂಗಿಕ ಕಿರುಕುಳ’ ಎನ್ನಲಾಗುತ್ತದೆ. ಹೆಚ್ಚಿನದಾಗಿ ಉದ್ಯೋಗಸ್ತ ಮಹಿಳೆಯರು ಹಾಗೂ ಸಾರ್ವಜನಿಕವಾಗಿ ತೊಡಗಿಸಿಕೊಂಡ ಮಹಿಳೆಯರು ಈ ಅಪಾಯವನ್ನು ಎದುರಿಸುತ್ತಾರೆ. ಅಪ್ರಾಪ್ತ ಬಾಲಕಿಯರು, ಕಾಲೇಜು ವಿದ್ಯಾರ್ಥಿನಿಯರು ದುಡಿಯುವ ಮಹಿಳೆಯರು ಎಲ್ಲರೂ ತೀವ್ರವಾಗಿ ಅನು ಭವಿಸಬಹುದಾದ ದೌರ್ಜನ್ಯ ಇದು.
ಲೈಂಗಿಕ ಕುರುಕುಳ ಅಂದರೆ ಏನು?
ಸಾಮಾನ್ಯವಾಗಿ ಈ ಕುರಿತು ಎಲ್ಲರಿಗೂ ಒಂದು ಸಾಮಾನ್ಯ ತಿಳುವಳಿಕೆ ಇದ್ದೇ ಇದೆ. ಆದರೂ ನಿರ್ಧಿಷ್ಟವಾಗಿ ಉದಾಹರಿಸಬಹುದಾದರೆ ಬಸ್ಸಿನಲ್ಲಿ ಅಥವಾ ವಾಹನಗಳಲ್ಲಿ ಓಡಾಡುವಾಗ ಅಥವಾ ಜನ ಸಂದಣಿಯಲ್ಲಿ ಉದ್ದೇಶಪೂರ್ವಕವಾಗಿ ದೈಹಿಕ ಸ್ಪರ್ಶ ಮಾಡುವುದು, ಲೈಂಗಿಕ ಒಲವು -ಒತ್ತಡ ಹೇರುವುದು, ಅಶ್ಲೀಲ ಶಬ್ದಗಳಿಂದ ಮಾತ ನಾಡುವುದು, ಅಶ್ಲೀಲ ಹಾಸ್ಯ ಚಟಾಕಿ ಹಾರಿಸುವುದು, ಅಶ್ಲೀಲ ಸನ್ನೆ ಮಾಡುವುದು ಮುಂತಾದವುಗಳೆಲ್ಲ ಲೈಂಗಿಕ ಕಿರುಕುಳಗಳು. ದುಡಿಯುವ ಮಹಿಳೆಯರಿಗಂತೂ ಪುರುಷ ಸಹೋದ್ಯೋಗಿಗಳ ಜೊತೆ ಕೆಲಸ ಮಾಡುವುದು ಅನಿವಾರ್ಯ. ಹೀಗಾದಾಗ ಇಂಥ ಲೈಂಗಿಕ ಕಿರುಕುಳಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗೆ ಇಂತಹ ಕಿರುಕುಳದಿಂದ ರಕ್ಷಣೆ ಪಡೆಯಲು ಮಹಿಳೆಗೆ ಕಾನೂನಿನ ಬೆಂಬಲ ಇದೆ. ಆದರೆ ಇಂತಹ ಲೈಂಗಿಕ ಕಿರುಕುಳವನ್ನು ತಡೆಯಲು ಯಾವುದೇ ನಿರ್ಧಿಷ್ಟ ಕಾನೂನುಗಳು ರಚನೆಯಾಗಿಲ್ಲ. ಇಂಥ ಸಂದರ್ಭದಲ್ಲಿ ದುಡಿಯುವ ಮಹಿಳೆಯರಿಗೆ ಕಿರುಕುಳವಾಗದಂತೆ ಆಯಾ ಸಂಸ್ಥೆಯ ಮಾಲಿಕರೇ ಕೆಲವು ನಿರ್ಧಿಷ್ಟ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರಿಂ ಕೋರ್ಟ್ ಆದೇಶಿಸಿದೆ.
ಅತ್ಯಾಚಾರ
ಸಾಮಾನ್ಯವಾಗಿ ಮಹಿಳೆಯರು ಎದುರಿಸುತ್ತಿರುವ ಅತ್ಯಂತ ಹೀನಾಯ ಹಾಗೂ ಅಮಾನುಷ ದೌರ್ಜನ್ಯ ಎಂದರೆ ಅತ್ಯಾಚಾರ. ಈ ಕುರಿತು ಹೆಚ್ಚು ವಿವರಿಸುವ ಅಗತ್ಯವಿಲ್ಲ. ಆದರೂ ಕೂಡ ಕಾನೂನಿನ ಪರಿಭಾಷೆಯಲ್ಲಿ ಕೆಲವನ್ನು ತಿಳಿದುಕೊಳ್ಳುವ ಅಗತ್ಯ ಇದೆ. ಕಾನೂನಿನ ಪ್ರಕಾರ ಅತ್ಯಾಚಾರ ಅಂದರೆ ಬಲಾತ್ಕಾರದ ಸಂಭೋಗ, ಪುರುಷನೊಬ್ಬನು ಮಹಿಳೆಯ ಮೇಲೆ ಆಕೆಯ ಇಚ್ಛೆಗೆ ವಿರೋಧವಾಗಿ ಅಥವಾ ಆಕೆಗೆ ಜೀವಭಯವೊಡ್ಡಿ ಅಥವಾ ಆಕೆಗೆ ಮತ್ತುಬರುವ ಪದಾರ್ಥವನ್ನು ಕೊಟ್ಟು ಅಥವಾ ಆಕೆಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಗ ಸಂಭೋಗಿಸಿದರೆ ಅದು ಅತ್ಯಾಚಾರ ಅನಿಸಿಕೊಳ್ಳುತ್ತದೆ. 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹೆಂಡತಿಯೇ ಇದ್ದರೂ ಕೂಡ ಆಕೆಯ ಇಚ್ಚೆಗೆ ವಿರುದ್ಧವಾಗಿ ಅಥವಾ 16 ವರ್ಷದೊಳಗಿನ ಹುಡುಗಿಯೊಂದಿಗೆ ಆಕೆಯ ಸಮ್ಮತಿಯಿಂದ ಸಂಭೋಗಿಸಿದರೂ ಕೂಡ ಅದು ಅತ್ಯಾಚಾರವಾಗುತ್ತದೆ. ಆದರೆ ಈ ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಗೆ ಸಂಬಂಧಪಟ್ಟವರು ಸಮಾಜಕ್ಕಂಜಿಕೊಂಡು ಪ್ರತಿಭಟನೆಗೆ ಮುಂದಾಗಲಾರರು. ಹಾಗಾಗಿ ಅಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರಲಾರವು.
ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ಇದೆ. ಆದರೆ ಸಮಾಜಕ್ಕೆ ಹೆದರಿ ಅನೇಕ ಮಹಿಳೆಯರು ಕಾನೂನಿನ ಮೊರೆ ಹೋಗಲಾರರು. ಇಂಥ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಹೆಚ್ಚು ಹೆಚ್ಚು ತಂದಾಗ ಮಾತ್ರ ಅತ್ಯಾಚಾರದಂತಹ ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯ. ಅದಕ್ಕೆ ಮಹಿಳೆಯರು ಮುಂದಾಗಬೇಕು. ನ್ಯಾಯಾಲಯದ ಬಗ್ಗೆ ಮಹಿಳೆಯರಿಗೆ ತಪ್ಪು ಕಲ್ಪನೆಯಿದ್ದರೆ ಹೋಗಲಾಡಿಸಿ ಕೊಳ್ಳಬೇಕು. ಇಂಥ ಪ್ರಕರಣಗಳನ್ನು ಸಾರ್ವಜನಿಕವಾಗಿ ತನಿಖೆ ಮಾಡದೇ ಇರದಂತಹ ವ್ಯವಸ್ಥೆ ಇದೆ. ಖಾಸಗಿಯಾಗೇ ವಿಚಾರಣೆ ಮಾಡಲಾಗುತ್ತದೆ. ಅದಕ್ಕೆ ‘ಇನ್ ಕ್ಯಾಮರಾ ಪ್ರೊಸಿಡಿಂಗ್ಸ್’ ಎನ್ನುತ್ತಾರೆ. ದೌರ್ಜನ್ಯಕ್ಕೊಳಗಾದ ಮಹಿಳೆ ಯಾವುದೇ ಭಯವಿಲ್ಲದೇ ನಿಸ್ಸಂಕೋಚವಾಗಿ ತನ್ನ ವೇದನೆಯನ್ನು ಹೇಳಿಕೊಳ್ಳ ಬಹುದು.
ಹೆಂಡತಿಯಲ್ಲದೇ ಬೇರೊಬ್ಬಳ ಮೇಲೆ ಅತ್ಯಾಚಾರವೆಸಗಿದರೆ ಆತನಿಗೆ ಏಳು ವರ್ಷ ಅಥವಾ ಹತ್ತು ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಹೆಂಡತಿಯಾಗಿದ್ದು ಆಕೆಗೆ 12 ವರ್ಷಗಳಿಗಿಂತ ಹೆಚ್ಚಾಗಿದ್ದರೆ ಆಗ ಎರಡು ವರ್ಷಗಳ ಜೈಲು ಮತ್ತು ದಂಡ ವಿಧಿಸಬಹುದು. ಉನ್ನತ ಅಧಿಕಾರದ ಸ್ಥಾನದಲ್ಲಿರುವವರು ಅಥವಾ ಸಮಾಜದ ಪ್ರಭಾವಶಾಲೀ ವ್ಯಕ್ತಿಗಳಿಂದ ಅತ್ಯಾಚಾರವೆಸಗಲ್ಪಟ್ಟಿದರೆ ಅಂಥವರಿಗೂ ಕಾನೂನು ಹೆಚ್ಚಿನ ಶಿಕ್ಷೆಯನ್ನು ವಿಧಿಸಬಹುದು.
ಕೌಟುಂಬಿಕ ಹಿಂಸೆ
ಸಂಸಾರ ಅಂದಮೇಲೆ ಸರಸ-ವಿರಸ ಸಾಮಾನ್ಯ. ಕೌಟುಂಬಿಕ ಜಗಳಗಳಲ್ಲಿ ಹೆಚ್ಚು ಹಿಂಸೆ ಅನುಭವಿಸುವವಳೇ ಮಹಿಳೆ. ಅವಿಭಕ್ತ ಕುಟುಂಬಗಳಲ್ಲಂತೂ ಕೆಲವು ಮಹಿಳೆಯರು ಅನೇಕ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ಅತ್ತೆ, ಮಾವ, ನಾದಿನಿ, ಮೈದುನ, ಗಂಡ ಹೀಗೆ ಕುಟುಂಬದ ಯಾವುದೇ ಸದಸ್ಯರಿಂದ ಮಹಿಳೆಯೊಬ್ಬಳು ನೋವು ಅನುಭವಸಿದರೆ ಅದನ್ನು ದೌರ್ಜನ್ಯ ಅನ್ನಲಾಗುತ್ತದೆ. ದುಡಿಯುವ ಮಹಿಳೆಯರು ಪರಪರುಷರ ಜೊತೆ ಕೆಲಸ ಮಾಡುವ ಸಂದರ್ಭದಲ್ಲಿ ಗಂಡ ಹೆಂಡತಿಯನ್ನು ಸಂಶಯಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದರೆ ಅದು ಕೌಟುಂಬಿಕ ದೌರ್ಜನ್ಯವಾಗುತ್ತದೆ. ನಮ್ಮದು ಪುರುಷ ಪ್ರಧಾನ ವ್ಯವಸ್ಥೆ. ಹಾಗಾಗೇ ಗಂಡು ಸಂತಾನ ಶ್ರೇಷ್ಠ ಎಂಬ ಭಾವನೆಯಿದೆ. ಹೆಣ್ಣೊಬ್ಬಳಿಗೆ ಗಂಡು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅತ್ತೆ, ನಾದಿನಿಯರು ಅಥವಾ ಕುಟುಂಬದ ಸದಸ್ಯರು ಆಕೆಯನ್ನು ಹೀಗಳೆದರೆ ಅದು ಕೌಟುಂಬಿಕ ಹಿಂಸೆಯಾಗುತ್ತದೆ. ವರದಕ್ಷಿಣೆಗಾಗಿ ಪೀಡಿಸಿದರೆ, ಉದ್ಯೋಗಸ್ಥ ಮಹಿಳೆಯಾಗಿದ್ದರೆ ಆಕೆಯನ್ನು ಸಂಶಯಿಸಿ ಉದ್ಯೋಗ ಬಿಡುವಂತೆ ಒತ್ತಾಯಿಸಿದರೆ, ಹೆಂಡತಿಯನ್ನು ಅನೈತಿಕ ಸಂಬಂಧಕ್ಕೆ ಪ್ರಚೋದಿಸಿದರೆ ಈ ಎಲ್ಲ ಸಂದರ್ಭದಲ್ಲಿ ಅದು ಕೌಟುಂಬಿಕ ಹಿಂಸೆ ಅಥವಾ ದೌರ್ಜನ್ಯ ಅನಿಸಿಕೊಳ್ಳುತ್ತದೆ.
ಇಂತಹ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ಕೌಟುಂಬಿಕ ಹಿಂಸೆಯಿಂದ ರಕ್ಷಿಸುವ ಕಾಯ್ದೆ ಜಾರಿಗೆ ಬಂದಿದೆ. ಯಾವುದೇ ನೊಂದ ಮಹಿಳೆ ಈ ಕಾಯ್ದೆಯಡಿಯಲ್ಲಿ ತನಗಾದ ಅವಮಾನ, ಹಿಂಸೆ ಅಥವಾ ಮಾನಸಿಕ ಯಾತನೆಗೆ ಪರಿಹಾರವನ್ನು ಪಡೆಯಬಹುದು. ಇಲ್ಲಿ ಮಹಿಳೆಗೆ ಕುಟುಂಬದ ಯಾವುದೇ ಸದಸ್ಯರಿಂದ ಮೇಲೆ ಹೇಳಿದ ಘಟನೆ ನಡೆದಲ್ಲಿ ಅಂತಹ ದೌರ್ಜನ್ಯವನ್ನು ಎಸಗದಂತೆ ತಡೆಯುವುದೇ ಕಾನೂನಿನ ಮುಖ್ಯ ಪರಿಹಾರವಾಗಿದೆ. ಸಂರಕ್ಷಣಾ ಆದೇಶವು ನೊಂದ ಹೆಣ್ಣಿನ ಮೇಲೆ ಪುನಃ ಆ ಕೃತ್ಯಗಳು ನಡೆಯದಂತೆ ತಡೆಗಟ್ಟುವುದಾಗಿದೆ. ಒಂದೊಮ್ಮೆ ಇಂತಹ ದೌರ್ಜನ್ಯಗಳಿಂದ ಮಹಿಳೆಗೆ ಆರ್ಥಿಕ ಹಾನಿಯಾದರೆ ಆ ನಷ್ಟವನ್ನು ಆಕೆಯ ಕುಟುಂಬದವರು ತುಂಬಿಕೊಡಬೇಕಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆ ತಾನೇ ಸ್ವತಃ ನೇರವಾಗಿ ನ್ಯಾಯಿಕ ದಂಡಾಧಿಕಾರಿಗಳಿಗೆ ದೂರನ್ನು ಸಲ್ಲಿಸಬಹುದು.
ಹೀಗೆ ಮಹಿಳೆಯರನ್ನು ಸರ್ವತೋಮುಖ ವಾಗಿ ರಕ್ಷಿಸುವ ಸಲುವಾಗಿ ಹಲವಾರು ಕಾನೂನುಗಳು ಜಾರಿಯಲ್ಲಿವೆ. ಆದರೂ ಕೂಡ ನಾವು ದಿನನಿತ್ಯ ಹಲವಾರು ದೌರ್ಜನ್ಯಗಳನ್ನು ನೋಡುತ್ತಲೇ ಇದ್ದೇವೆ. ಇದಕ್ಕೆ ಮುಖ್ಯ ಕಾರಣ ಕಾನೂನಿನ ಅಜ್ಞಾನ ಒಂದೆಡೆಯಾದರೆ ಕಾನೂನಿನ ದುರುಪಯೋಗ ಇನ್ನೊಂದೆಡೆಗೆ ನಡೆಯುತ್ತಲಿದೆ. ಇದನ್ನು ಹೋಗಲಾಡಿಸಲು ಪ್ರತಿಯೊಬ್ಬ ಮಹಿಳೆಯರೂ ಕಾನೂನಿನ ಕನಿಷ್ಟ ಜ್ಞಾನವನು ಹೊಂದಿರಬೇಕಾದ ಅನಿವಾರ್ಯತೆ ಇದೆ.
* * * * * * *
ಚಿತ್ರಕೃಪೆ : egagah.blogspot.com





ಮಾನ್ಯ ಉಷಾ ಐನಕೈ ರವರೆ, ನಿಲುಮೆ ಓದುಗರಿಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ವಂದನೆಗಳು. ಆದರೆ ಸಾಮಾನ್ಯವಾಗಿ ನಮ್ಮ ದೇಶದ ಕಾನೂನುಗಳು, ಸಜ್ಜನರಿಗೆ, ಮಹಿಳೆಯರಿಗೆ. ಮಕ್ಕಳಿಗೆ ದುರ್ಬಲರಿಗೆ. ಅನುಕೂಲವಾಗುವಂತಹವು. ಆದರೆ ಅದನ್ನು ಪಾಲಿಸುವಂತ ವಿಚಾರಣ ಅಧಿಕಾರಿಗಳು ಪ್ರಮಾಣಿಕವಾಗಿ ನಡೆದುಕೊಂಡರೆ, ಅನುಕೂಲವಾಗುತ್ತದೆ. ಅವರು ತಾತ್ಸಾರ, ಬ್ರಷ್ಟರಾದರೆ ಎಲ್ಲವೂ ಹಾಳಾಗುತ್ತದೆ ಕಾನೂನಿನ ಅರಿವಿಲ್ಲದಿದ್ದರೂ ಪರವಾಗಿಲ್ಲ ಯಾರಾದರು ಅರಿವು ಮೂಡಿಸುತ್ತಾರೆ. ದುರುಪಯೋಗ ಮಾತ್ರ ಆಗಬಾರದು ಅಷ್ಟೇ. ಇಲ್ಲಿ ವಿಚಾರಣಾ ಅಧಿಕಾರಿಗಳದೆ ಮುಖ್ಯ ಪಾತ್ರವಾಗಿರುತ್ತದೆ. ಅವರು ದೂರನ್ನು ಕೈ ಬಿಟ್ಟರೆ,ಅಥವಾ ತಿರುಚಿದರೆ, ಸಂತ್ರಸ್ತರು ದೂರು ಕೊಟ್ಟರೆಷ್ಟು? ಬಿಟ್ಟರೆಷ್ಟು?