ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 14, 2012

1

ಎಷ್ಟು ಕಷ್ಟ ಒಂದ್ ಮದ್ವೆ ಅಂದ್ರೆ

‍ನಿಲುಮೆ ಮೂಲಕ

-ಪರೇಶ್ ಸರಾಫ್

ಡಾಕ್ಟರ್ ಮಾಮನ ಆಸ್ಪತ್ರೆಯ ಹಿಂದಿನ ಹಾಲ್ನಲ್ಲಿ ಆಗಾಗ ಚಿಕ್ಕ ಪುಟ್ಟ ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಅದರಲ್ಲಿ ಪ್ರತಿ ರವಿವಾರ ನಡೆಯುವ ಮ್ಯಾರೇಜ್ ಬ್ಯುರೋ ಸಹ ಒಂದು. ನಮ್ಮ ಸಮುದಾಯದ ಹುಡುಗ, ಹುಡುಗಿಯರ ಮಾಹಿತಿ ಸಂಗ್ರಹ, ಜಾತಕ ಮೇಳಾಮೇಳಿ, ಮಾತುಕತೆಯಿಂದ ಹಿಡಿದು, ಬಡವರಿದ್ದರೆ ಮದುವೆಗೆ ಸಹಾಯ ಮಾಡುವಷ್ಟರವರೆಗೆ ಸಮಾಜಸೇವೆ ನಡೆಯುತ್ತಿತ್ತು. ಪ್ರಭು ಮಾಸ್ತರರು, ಮಹಾಲೆ ಮಾಮನ ಸಾರಥ್ಯದಲ್ಲಿ ಈ ಕಾರ್ಯ ಬಹಳ ಸಮರ್ಥವಾಗಿ ಮುಂದುವರೆದುಕೊಂಡು ಹೋಯಿತು. ಬರೀ ವಧು ವರರ ಮಾಹಿತಿ ನೀಡುವುದಷ್ಟೇ ಅಲ್ಲದೇ ಹುಡುಗನ, ಹುಡುಗಿಯ ಹಿನ್ನೆಲೆಗಳನ್ನು ನೋಡಿ, ಜೋಡಿ ಸರಿ ಹೊಂದುತ್ತದೆಯೋ, ಹುಡುಗನಿಗೆ ವ್ಯಸನಗಳಿವೆಯೋ ಎಂಬುದನ್ನೆಲ್ಲ ಪರೀಕ್ಷಿಸಿ ತಮ್ಮ

ಕೈಲಾದ ಮಟ್ಟಿಗೆ ಉತ್ತಮ ಸೇವೆ ನೀಡಿ, ಮದುವೆಯ ನೈತಿಕ ಹೊಣೆಯನ್ನು ಸಹ ಹೊತ್ತು  ಮನೆ ಮಾತಾದರು. ಹೀಗೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತ ಹೋಯಿತು. ಸಂಖ್ಯೆಗಳು ಜಾಸ್ತಿಯಾದಂತೆ ಹಲವು ಸಿಹಿ ಕಹಿ ಅನುಭವಗಳು ಸಹ ಆಗುತ್ತಾ ಹೋಯಿತು. ಪ್ರತಿ ಅನುಭವವೂ ಈಗಿನ ಸಾಮಾಜಿಕ ಜೀವನ,

ಮಕ್ಕಳ ಸಂಸ್ಕಾರ, ಮದುವೆಯ ಸೂಕ್ಷ್ಮತೆ ಇತ್ಯಾದಿ ವಿಚಾರಗಳಿಗೆ ಹಿಡಿದ ಕೈಗನ್ನಡಿ. ಆ ಕೆಲ ಅನುಭವಗಳು ಇಲ್ಲಿವೆ.

ಪರೋಬ್ ಮಾಮ ಚಿಕ್ಕ ವ್ಯಾಪಾರಸ್ಥ. ಚಿಕ್ಕ ಕಿರಾಣಿ ಅಂಗಡಿ ಇಟ್ಟುಕೊಂಡು ಗೌರವಯುತವಾಗಿ ಜೀವನ ನಡೆಸುತ್ತಿದ್ದವರು. ಒಬ್ಬನೇ ಮಗ. ಓದಿ ಇಂಜಿನಿಯರಿಂಗ್ ಮಾಡಿಸಿ ಆಯಿತು. ಓದು ಮುಗಿದ ಕೂಡಲೇ ಮಗನಿಗೆ ನೌಕರಿ ಸಿಕ್ಕಿತು. ಒಳ್ಳೆಯ ಪಗಾರು ಸಹ ಬರುತ್ತಿತ್ತು. ಹಾಗೆ ಮಗನಿಗೆ ಮದುವೆ ವಯಸ್ಸಾಯಿತು. ಪ್ರತಿ

ರವಿವಾರ ಈ ಮದುವೆ ಮಾಹಿತಿ ಕೇಂದ್ರಕ್ಕೆ ಬಂದು ಹಲವು ನೆಂಟಸ್ತನಗಳನ್ನು ನೋಡುತ್ತಿದ್ದರು. ಕೊನೆಗೂ ಒಂದು ಹಿಡಿಸಿತು. ಜಾತಕವೂ ಮೇಳಾಮೇಳಿಯಾಯಿತು.ಹೆಣ್ಣು ನೋಡುವ ಕಾರ್ಯಕ್ರಮ ನಿಶ್ಚಯವಾಯಿತು. ಹೆಣ್ಣು ನೋಡಲು ಬಹಳ ಚೆನ್ನಾಗಿದ್ದಳು. ಎಲ್ಲರಿಗೂ ಇಷ್ಟವಾಯಿತು. ನಿಶ್ಚಯ ಮಾಡುವ ಮೊದಲು ಗಂಡು ಹೆಣ್ಣು

ಮಾತಾಡಲಿ ಎಂದು ಹಿರಿಯರು ಹೇಳಿದರು. ಇಬ್ಬರೂ ಹೊರಗೆ ತೋಟಕ್ಕೆ ಹೋದರು. ಹುಡುಗಿ ಮೊದಲು ಕೇಳಿದ ಪ್ರಶ್ನೆ- “ನಿಮ್ಮ ಅಪ್ಪ ಅಮ್ಮನಿಗೆ ನೀನು ತಿಂಗಳು ತಿಂಗಳು ದುಡ್ಡು ಕಳಿಸುತ್ತೀಯೋ?”. ಅವನು ಯಾಕವಳು ಹಾಗೆ ಕೇಳಿದಳೆಂದು ತಿಳಿಯದೆ ದಿಗಿಲಿನಿಂದ “ಹ್ಮ್ಮ್” ಎಂದ. ಹಾಗಂದ ಕೂಡಲೇ “ಇಷ್ಟು ದಿನ ಕಳಿಸಿದ್ದು ಆಗಿ ಹೋಯಿತು. ನನ್ನನ್ನು ಮದುವೆಯಾದ ಮೇಲೆ ಒಂದು ಪೈಸೆ ಕಳಿಸುವಂತಿಲ್ಲ” ಎಂದಳು. ಅಲ್ಲಿಗೆ ಆ ಕಥೆಯ ಮುಕ್ತಾಯ.

ಚಿಕ್ಕ ವ್ಯಾಪಾರಸ್ಥನೊಬ್ಬನ ಮಗ. ಮೂವತ್ತು ವರ್ಷ ವಯಸ್ಸಾಗಿತ್ತೇನೋ. ಅವನೂ ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದ. ಅಪ್ಪ ಅಮ್ಮ ಎಷ್ಟು ಅಲೆದರೂ ಹುಡುಗಿ ಸಿಗಲಿಲ್ಲ. ಎರಡು ಮೂರು ತಿಂಗಳು ಪ್ರತಿವಾರ ಮಾಹಿತಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದರು. ಕೊನೆಗೂ ಅತಿ ಬಡ ಕುಟುಂಬದ ಒಬ್ಬ ಹುಡುಗಿ ಸಿಕ್ಕಳು. ಮಾತುಕತೆಯಾಗಿ ಸಂಬಂಧ ನಿಶ್ಚಯವಾಯಿತು. ಅದರ ಮುಂದಿನ ರವಿವಾರವೇ ಊರಿನ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡುವ ನಿರ್ಧಾರವಾಯಿತು. ಮಹಾಲೆ ಮಾಮನೇ ಈ ಸಮಾರಂಭದ  ಜವಾಬ್ದಾರಿ ವಹಿಸಿಕೊಂಡರು. ರವಿವಾರದ ದಿನ ಸಂಜೆ ನಿಶ್ಚಿತಾರ್ಥ. ಬೆಳಿಗ್ಗೆ ಗಂಡು ಹೆಣ್ಣಿನ ಕಡೆಯವರು ಬಂದಿದ್ದರು. ಡಾಕ್ಟರ್ಮಾಮ, ಮಹಾಲೆ ಮಾಮ, ಪ್ರಭು ಮಾಸ್ತರರು ಎಲ್ಲರೂ ಬಂದವರನ್ನು ಸುಧಾರಿಸಲು ದೇವಸ್ಥಾನಕ್ಕೆ ಹೋಗಿದ್ದರು. ಡಾಕ್ಟರ್ ಮಾಮ ಸೂಕ್ಷ್ಮವಾಗಿ ಹುಡುಗನ ವರ್ತನೆಯನ್ನು ಗಮನಿಸಿದಾಗ ಅವನು ಕುಡುಕ ಎಂದು ಅನುಮಾನ ಬಂತು. ಹುಡುಗಿಯನ್ನು ಕರೆದು ಅವಳಿಗೆ ವಿಷಯ ಹೇಳಿ-” ಏನೇ ಆಗಲಿ, ಒಮ್ಮೆ ಅವನೊಡನೆ ಮಾತಾಡು. ನೇರವಾಗಿ ಕೇಳು” ಎಂದರು. ಹುಡುಗಿ ಅವನ ಬಳಿ ಹೋಗಿ- “ನಿನಗೆ ಕುಡಿಯುವ ಅಭ್ಯಾಸವಿದೆಯೇ?”. ಎಂದು ಕೇಳಿದಳು. ಅವನು-“ಹೌದು. ನನ್ನ ಹಳೇ ಪ್ರೇಯಸಿ ನನ್ನನ್ನು ಬಿಟ್ಟು ಹೋದ ದುಃಖವನ್ನು ಕುಡಿದು ಮರೆಯುತ್ತೇನೆ. ದಿನಾ ಕುಡಿಯುತ್ತೇನೆ” ಎಂದ. ಆ ಸಮಯದಲ್ಲಿ ಅವನು ಕುಡಿದ ಅಮಲಿನಲ್ಲೇ ಇದ್ದಿದ್ದರಿಂದ ಸತ್ಯವನ್ನೇ ಹೇಳಿದ್ದ. ಅಲ್ಲಿಗೆ ಆ ಸಂಬಂಧ ಮುರಿದು ಬಿದ್ದಿತ್ತು. ಹುಡುಗಿ ಈ ಸಂಬಂಧ ಬೇಡ ಎಂದಳು. ಮಾತಿನ ಚಕಮಕಿ ನಡೆದು ಎಲ್ಲರೂ ಹೊರಟು ಹೋದರು. ನಿಶ್ಚಿತಾರ್ಥದ ಎಲ್ಲ ಖರ್ಚನ್ನು ಪಾಪ ಮಹಾಲೆ ಮಾಮನೇ ಭರಿಸಿದರು.

ಮಾತುಕತೆ ನಿಗದಿಯಾಗಿತ್ತು. ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರೂ ಬಂದಿದ್ದರು. ಇಬ್ಬರೂ ತಾವು ನಂಬುವ ಜ್ಯೋತಿಷಿಗಳನ್ನು ಕರೆದುಕೊಂಡು ಬಂದಿದ್ದರು. ಜಾತಕ ಮೇಳಾಮೇಳಿ ನೋಡಿದಾಗ ಗಂಡಿನ ಕಡೆ ಜ್ಯೋತಿಷಿ ಸಂಪೂರ್ಣ ಮೇಳಾಮೇಳಿ ಇದೆ ಎಂದರೆ, ಹೆಣ್ಣಿನ ಕಡೆಯವರು ಏನೂ ಮೇಳಾಮೇಳಿ ಇಲ್ಲ, ಈ ಮದುವೆ ಸಾಧ್ಯವಿಲ್ಲ ಎಂದರು. ಇಬ್ಬರು ಜ್ಯೋತಿಷಿಗಳ ನಡುವೆ ಮಾತಿನ ಚಕಮಕಿ ಶುರುವಾಯಿತು. ಹತೋಟಿಗೆ ಬರದಷ್ಟು ಜಾಸ್ತಿಯಾಯಿತು. ಡಾಕ್ಟರ್ ಮಾಮ , ಮಹಾಲೆ ಮಾಮ ಮಧ್ಯೆ ಪ್ರವೇಶಿಸಿ ಜಗಳ ತಡೆದು ಜ್ಯೋತಿಷಿಗಳನ್ನು ಹೊರಗೆ ಕಳಿಸಿದರು. ಹೇಗೋ ಗಂಡು ಹೆಣ್ಣಿನ ಕುಟುಂಬದವರಿಗೆ ಮನದಟ್ಟು ಮಾಡಿ, ದೇವರಲ್ಲಿ ಪ್ರಸಾದ ಕೇಳಿ, ಪ್ರಸಾದವಾದರೆ ಮದುವೆ ಎಂದು ತೀರ್ಮಾನ ಮಾಡಿದರು.ಎಲ್ಲ ಸಾಂಘವಾಗಿ ನಡೆದು ಅವರ ಮದುವೆ ಮುಗಿಯಿತು. ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ. ಬೇವೂ ಇದೆ, ಬೆಲ್ಲವೂ ಇದೆ. ಜೀವನವೆಂದರೆ ಎರಡೂ ಇರಲೇಬೇಕಲ್ಲವೇ. ಅಂದು ಜಗಳವಾಡಿದ ಜ್ಯೋತಿಷಿಗಳು ಇನ್ನೂ ಜಗಳವಾಡುತ್ತಲೇ ಇದ್ದಾರೆ.

ಮದುವೆ ಎಲ್ಲ ನಿಶ್ಚಯವಾಗಿ ಮದುವೆಯ ದಿನಾಂಕವೂ ನಿಗದಿಯಾಗಿತ್ತು. ಹುಡುಗನ ಅಕ್ಕ ಹುಡುಗಿಯ ಮನೆಗೆ ಬಂದಿದ್ದರು. ಬಂದವರೇ, ಮೈ ಮೇಲೆ ಬಂದಂತೆ ಮಾತನಾಡತೊಡಗಿದರು.”ನಾವು ಹೀಗೆ, ನಾವು ಹೀಗೆ. ಊರಿನಲ್ಲೇ ಶ್ರೀಮಂತರು ನಾವು. ನಮ್ಮ ಮನೆಯ ಹುಡುಗ ಸಿಗುವುದೆಂದರೆ ನಿಮ್ಮ ಪುಣ್ಯ. ಈ ಮದುವೆ ಆಗಬೇಕೆಂದರೆ ನೀವು ಒಂದು ಕೆ.ಜಿ. ಬಂಗಾರ ವರದಕ್ಷಿಣೆಯಲ್ಲಿ  ಕೊಡಬೇಕು” ಎಂದು ಕೂಗತೊಡಗಿದರು. ಎಲ್ಲರೂ ಕಕ್ಕಾಬಿಕ್ಕಿಯಾದರು. ಬಡ ಗೌರವಸ್ಥ ಕುಟುಂಬದವಳು ಹುಡುಗಿ. ಸ್ಫುರದ್ರೂಪಿ. ಗಂಡಿನ ಅಕ್ಕನ ಅಹಂಕಾರದಿಂದ ಮದುವೆಯೇ ಮುಳುಗಿ ಹೋಯಿತು.

ಹೀಗೆ ಈ ಹಲವು ಎಳೆಗಳನ್ನು ನೋಡಿದರೆ ಇದು ಎಷ್ಟು ಸೂಕ್ಷ್ಮವಿಚಾರ ಎಂದು ಅರ್ಥೈಸಿಕೊಳ್ಳಬಹುದು. ಮೊದಲ ಕಥೆಯಲ್ಲಿ ಹುಡುಗಿಯ ಅಹಂಕಾರ, ಎರಡನೆಯದರಲ್ಲಿ ವ್ಯಸನಿ ಹುಡುಗ, ಮೂರನೆಯದರಲ್ಲಿ ಜಾತಕದ ಮೂಢನಂಬಿಕೆ, ನಾಲ್ಕನೆಯದರಲ್ಲಿ ಮನೆಯವರ ಅಹಂಕಾರೀ ವರ್ತನೆ ಮತ್ತು ಹಣದಾಸೆ ಹೀಗೆ ಸಂಬಂಧಕ್ಕೆ ಮಾರಕವಾಗುವ ಹಲವು ಆಯಾಮಗಳನ್ನು ಕಾಣಬಹುದು. ಮದುವೆ ಎಂಬುದು ಬರೀ ಎರಡು ಮನಸ್ಸುಗಳ ಮಿಲನವಲ್ಲ. ಅದು ಎರಡು ಕುಟುಂಬಗಳ ಮಿಲನ. ಎರಡು ನಾಗರೀಕತೆಗಳ ಮಿಲನ. ಈ ಎಲ್ಲ ಸೂಕ್ಷ್ಮಗಳನ್ನು ಅರ್ಥೈಸಿಕೊಂಡು ಮುಂದುವರಿಯುವುದು ಒಳಿತು. ಇಲ್ಲದಿರೆ ಕೆಲವು ಸಂಸಾರದ ದೋಣಿಗಳು ಬಿರುಗಾಳಿಗೆ ಸಿಲುಕಿದರೆ, ಕೆಲವು ಮುಳುಗಿ ಹೋಗುವವು.  ಎಲ್ಲರೂ ಮದುವೆಯ ಉದ್ದೇಶ ಅರಿತು, ಅದರಲ್ಲೂ ವ್ಯಾಪಾರೀ ಮನೋಭಾವ ತೋರಿಸದೆ, ಹುಡುಗಿ ಸಂಸಾರ ಬೆಳಗುವ ಜ್ಯೋತಿಯಾಗಿ, ಹುಡುಗ ಸಂಸಾರದ ಸ್ತಂಭವಾದರೆ ವಿವಾಹ ಬಂಧ ಶಾಶ್ವತವಾಗಿರುವುದರಲ್ಲಿ ಸಂಶಯವಿಲ್ಲ. ಅಂತಹ ಸಂಸ್ಕಾರ ಎಲ್ಲರಲ್ಲೂ ಬೆಳೆಯುವಂತಾಗಲಿ.

* * * * * * * *

ಚಿತ್ರಕೃಪೆ : ಅಂತರ್ಜಾಲ

1 ಟಿಪ್ಪಣಿ Post a comment
  1. satya hanasoge's avatar
    ಸೆಪ್ಟೆಂ 14 2012

    suuuuuuuuuuuuuuuper lekhana

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments