ಅತಿರೇಕದ ಅವೆರಡರ ನಡುವೆ ಒಂದು ಮಧ್ಯ ಮಾರ್ಗವಿದ್ದೇ ಇದೆ!
ಬೇರೆ ಬೇರೆ ಕಾರಣಗಳಿಗೆ ಅವರನ್ನು ವಿರೋಧಿಸುವವರು ಕೂಡ ತಮ್ಮೊಳಗೆ ಒಮ್ಮೆ ‘ಎಷ್ಟು ಚಂದ ಬರಿತಾನ್ರಿ’ ಅನ್ನುವಂತೆ ಬರೆದು ಸೈ ಅನ್ನಿಸಿಕೊಳ್ಳುವುದು ರವಿ ಬೆಳಗೆರೆ ಅವರ ಬರವಣಿಗೆಯ ಶೈಲಿ ಮತ್ತು ಶಕ್ತಿ.
“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ” ಅನ್ನುವ ನಿಲುಮೆಯ ನಿಲುವಿಗೆ ಪೂರಕವಾಗಿರುವಂತ ಬೆಳಗೆರೆ ಅವರ ಈ ಬರಹ ನಿಲುಮೆಯ ಓದುಗರಿಗಾಗಿ – ನಿಲುಮೆ
=================================================================================
– ರವಿ ಬೆಳಗೆರೆ
ಆಟ ಗೆದ್ದಿತಾ?
ನಾವು ಆಡೋಕೆ ಬಂದಿದ್ವಿ ಅನ್ನುತ್ತಾರೆ.
ಆಟ ಸೋತಿತಾ?
ಏಹ್, ಸುಮ್ನೆ ನಾವು ನೋಡೋಕೆ ಬಂದಿದ್ವಿ ಅಂತಾರೆ ಚನ್ನವೀರ ಕಣವಿ ಮತ್ತು ಶಿವರುದ್ರಪ್ಪ ಎಂದು ತಮಾಷೆ ಮಾಡುತ್ತಿದ್ದರು ಚಂದ್ರಶೇಖರ ಪಾಟೀಲರು. ಅವತ್ತಿಗೆ ಕಣವಿ ಮತ್ತು ಶಿವರುದ್ರಪ್ಪನವರನ್ನು ಸಮನ್ವಯ ಕವಿಗಳು ಎಂದೇ ಕರೆಯುತ್ತಿದ್ದರು. ಒಂದು ಕಡೆ ಸಂಪ್ರದಾಯಬದ್ಧವಾದ ನವೋದಯ, ರಮ್ಯ, ನವ್ಯ ಕಾವ್ಯಗಳಿದ್ದವು. ಇನ್ನೊಂದು ಕಡೆ ಕೈಯಲ್ಲಿ ಕಲ್ಲು ಹಿಡಿದು ನಿಂತ ದಲಿತ-ಬಂಡಾಯ ಕಾವ್ಯವಿತ್ತು. ಸಹಜವಾಗಿಯೇ ಎರಡರ ಮಧ್ಯೆ ಹಾಕ್ಯಾಟ. ಈ ಹಂತದಲ್ಲಿ “ಸಮನ್ವಯ”ವೆಂಬ ಮಾತಾಡಿದವರು ಕಣವಿ ಮತ್ತು ಶಿವರುದ್ರಪ್ಪ.
ಈ ಕೆಲಸ ಕೇವಲ ಇತ್ತೀಚಿನದಲ್ಲ. ಕಾಲಾಂತರದಿಂದ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತ ಬಂದಿದೆ. ಬಹುಶಃ ಇದಕ್ಕೆ ‘ಮಧ್ಯಪಥ‘ ಎಂಬ ಅಧಿಕೃತ ಹೆಸರಿಟ್ಟವನು ಬುದ್ಧ.
ನಿಮ್ಮ ಪಕ್ಕದ ಮನೆಯವರು ನಿಮ್ಮ ಮನೆಯ ಅಂಗಳದೊಳಕ್ಕೆ ದಿನನಿತ್ಯ ಕಸ ಹಾಕುತ್ತಿರುತ್ತಾರೆ. ನೀವು ಕಂಪೋಂಡಿನ ಆಚೀಚೆಗೆ ನಿಂತು ಶರಂಪರ ಜಗಳವಾಡುತ್ತೀರಿ. ನಿಮಗೂ ಅವರಿಗೂ ಬೇರೆ ತಕರಾರುಗಳೇ ಇಲ್ಲ. ಅವರ ಮಕ್ಕಳು ಸಂಭಾವಿತರು. ಗೃಹಿಣಿ ಸಭ್ಯೆ. ಬೇರೆ ಯಾವ ತಕರಾರೂ ಇಲ್ಲ. ಆದರೂ ಕಸ ಹಾಕುತ್ತಾರೆ. ನೀವು ಸಿಟ್ಟಿಗೇಳುತ್ತೀರಿ.





