ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ..
-ರಶ್ಮಿ ಕಾಸರಗೋಡು
ಹೌದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ…ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು.
ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ…ಮೀನು…ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ…ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳು…ನಾವು ಮಾತನಾಡುವ ಮಲಯಾಳಂಗೂ ಮೀನುಗಾರರು ಮಾತನಾಡುವ ಮಲಯಾಳಂಗೂವ್ಯತ್ಯಾಸವಿರುವುದರಿಂದ ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಚಿತ್ರ ನೋಡುತ್ತಿರುವಾಗ ಅವಳು ಆಗಿನ ಕಾಲದ ‘ಸೆಕ್ಸೀ ನಟಿ’ಎಂದು ಅಪ್ಪ ಹೇಳುತ್ತಿದ್ದರೆ, ಮಕ್ಕಳ ಮುಂದೆ ಹಾಗೆಲ್ಲಾ ಹೇಳ್ಬೇಡ್ರಿ ಎಂದು ಅಮ್ಮ ಗುರ್ ಅಂತಿದ್ರು 🙂
ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?
-ಸಂತೋಶ್ ತಮ್ಮಯ್ಯ
ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.
ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.





