ಎರಡು ಹೇಳಿಕೆಗಳು ಮತ್ತು ಇಬ್ಬಗೆ ನೀತಿಗಳು
– ರಾಕೇಶ್ ಶೆಟ್ಟಿ
* ಹೇ ಹಿಂದುಸ್ಥಾನ್,ನೀವು 100 ಕೋಟಿ ಜನಗಳು ಇದ್ದೀರಿ ಅಲ್ವಾ? ನಾವು 25 ಕೋಟಿ ಇದ್ದೀವಿ ಅಲ್ವಾ? ಹದಿನೈದು ನಿಮಿಷಗಳ ಕಾಲ ಪೋಲಿಸರನ್ನು ಪಕ್ಕಕ್ಕೆ ಕೂರಿಸಿ ನಮ್ಮ ತಾಕತ್ತು ತೋರಿಸುತ್ತೇವೆ.
* ಅರೆ,ಯಾವ ಮೋದಿ?ಎಲ್ಲಿಯ ಮೋದಿ? ಅವನಿಗೆ ಧೈರ್ಯವಿದ್ದರೆ ಹೈದರಾಬಾದ್ ಗೆ ಒಂದು ಬಾರಿ ಬಂದು ಹೋಗಲು ಹೇಳಿ.
* ನಾವು ಇಲ್ಲಿಂದ ಹೋಗುವುದಾದರೆ ತಾಜ್ ಮಹಲ್,ಚಾರ್ಮಿನಾರ್ ಎಲ್ಲವನ್ನೂ ಜೊತೆಗೆ ಕೊಂಡೊಯ್ಯುತ್ತೇವೆ,ಕಡೆಗೆ ಉಳಿಯುವುದು ಮುರುಕಲು ರಾಮ ಮಂದಿರವೊಂದೆ.
ಹೇಗಿದೆ ಮೇಲಿನ ವಾಕ್ಯಗಳು? ಓದಿದರೆ ಮೈ ಉರಿಯುವಂತೆ ಇದೆಯಲ್ಲವೇ? ಇದೆಲ್ಲ ವಾರದ ಹಿಂದೆ ಹೈದರಾಬಾದ್ ನಲ್ಲಿ MIM ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಮಾಡಿದ ಕೋಮು ದ್ವೇಷದ ಕಿಡಿ ಹಚ್ಚುವ ಭಾಷಣದ ಕೆಲವೇ ಕೆಲವು ವಾಕ್ಯಗಳಷ್ಟೇ. ಸುಮಾರು 45 ನಿಮಿಷಗಳಷ್ಟಿರುವ ಆ ಇಡಿ ಭಾಷಣದ ತುಂಬಾ ಇರುವುದು ದ್ವೇಷ ಹುಟ್ಟಿಸುವ,ಬೆಂಕಿ ಹಚ್ಚುವಂತ ಇಂತ ಮಾತುಗಳೇ.ಈ ಮೇಲಿನ ವಾಕ್ಯಗಳಲ್ಲಿ ನಿಮಗೆ ಬೆಂಕಿ ಹಚ್ಚುವಂತದ್ದು ಏನು ಕಾಣದಿದ್ದರೆ,ಬಹುಷಃ ಒವೈಸಿಯ ಉರ್ದು ಮಿಶ್ರಿತ ಹಿಂದಿ ಭಾಷಣವನ್ನು ಅನುವಾದ ಮಾಡುವಲ್ಲಿ ನಾನು ಸೋತಿದ್ದೇನೆ ಅಷ್ಟೇ ಹೊರತು ಅವನ ಭಾಷಣ ತಂಪಾಗಿರಲಿಲ್ಲ.ಒವೈಸಿಯ ಭಾಷಣವನ್ನು ಕೇಳಿ ಉನ್ಮತ್ತರಾದವರು ಏನೆಲ್ಲಾ ಮಾಡಬಹುದು ಅನ್ನುವ ಸ್ಯಾಂಪಲ್ ಬೇಕು ಅನ್ನಿಸಿದರೆ 2012ರ ಆಗಸ್ಟ್ ತಿಂಗಳಲ್ಲಿ ,ಮುಂಬೈನ ಆಜಾದ್ ಮೈದಾನದಲ್ಲಿ ಏನಾಗಿತ್ತು ಅನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ.ಅಂದ ಹಾಗೆ ಈ ಅಕ್ಬರ್ ಒವೈಸಿ ಯಾರು ಗೊತ್ತಾ,ಈ ದೇಶದ ಸಂಸತ್ತಿನಲ್ಲಿ ನಿಂತು “ಕೇಂದ್ರ ಸರ್ಕಾರಕ್ಕೆ,ಇಲ್ಲಿರುವ ಸಂಸದರಿಗೆ ನಾನು ಎಚ್ಚರಿಕೆ ಕೊಡುತಿದ್ದೇನೆ,ಒಂದು ವೇಳೆ ಅಸ್ಸಾಂ ಗಲಭೆಯ ಮುಸ್ಲಿಂ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗಲಿಲ್ಲವಾದರೆ, ಮುಸ್ಲಿಂ ಯುವಕರು ಮುಲಭೂತವಾದಿಗಳಾಗುವುದನ್ನು ನೋಡಬೇಕಾಗುತ್ತದೆ’ ಅಂತ ಬೆದರಿಕೆ ಹಾಕುವಂತ ಭಾಷಣ ಮಾಡಿದ್ದ ಅಸಾದುದ್ದೀನ್ ಒವೈಸಿಯ ತಮ್ಮ.





