ಎರಡು ಹೇಳಿಕೆಗಳು ಮತ್ತು ಇಬ್ಬಗೆ ನೀತಿಗಳು
– ರಾಕೇಶ್ ಶೆಟ್ಟಿ
* ಹೇ ಹಿಂದುಸ್ಥಾನ್,ನೀವು 100 ಕೋಟಿ ಜನಗಳು ಇದ್ದೀರಿ ಅಲ್ವಾ? ನಾವು 25 ಕೋಟಿ ಇದ್ದೀವಿ ಅಲ್ವಾ? ಹದಿನೈದು ನಿಮಿಷಗಳ ಕಾಲ ಪೋಲಿಸರನ್ನು ಪಕ್ಕಕ್ಕೆ ಕೂರಿಸಿ ನಮ್ಮ ತಾಕತ್ತು ತೋರಿಸುತ್ತೇವೆ.
* ಅರೆ,ಯಾವ ಮೋದಿ?ಎಲ್ಲಿಯ ಮೋದಿ? ಅವನಿಗೆ ಧೈರ್ಯವಿದ್ದರೆ ಹೈದರಾಬಾದ್ ಗೆ ಒಂದು ಬಾರಿ ಬಂದು ಹೋಗಲು ಹೇಳಿ.
* ನಾವು ಇಲ್ಲಿಂದ ಹೋಗುವುದಾದರೆ ತಾಜ್ ಮಹಲ್,ಚಾರ್ಮಿನಾರ್ ಎಲ್ಲವನ್ನೂ ಜೊತೆಗೆ ಕೊಂಡೊಯ್ಯುತ್ತೇವೆ,ಕಡೆಗೆ ಉಳಿಯುವುದು ಮುರುಕಲು ರಾಮ ಮಂದಿರವೊಂದೆ.
ಹೇಗಿದೆ ಮೇಲಿನ ವಾಕ್ಯಗಳು? ಓದಿದರೆ ಮೈ ಉರಿಯುವಂತೆ ಇದೆಯಲ್ಲವೇ? ಇದೆಲ್ಲ ವಾರದ ಹಿಂದೆ ಹೈದರಾಬಾದ್ ನಲ್ಲಿ MIM ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಮಾಡಿದ ಕೋಮು ದ್ವೇಷದ ಕಿಡಿ ಹಚ್ಚುವ ಭಾಷಣದ ಕೆಲವೇ ಕೆಲವು ವಾಕ್ಯಗಳಷ್ಟೇ. ಸುಮಾರು 45 ನಿಮಿಷಗಳಷ್ಟಿರುವ ಆ ಇಡಿ ಭಾಷಣದ ತುಂಬಾ ಇರುವುದು ದ್ವೇಷ ಹುಟ್ಟಿಸುವ,ಬೆಂಕಿ ಹಚ್ಚುವಂತ ಇಂತ ಮಾತುಗಳೇ.ಈ ಮೇಲಿನ ವಾಕ್ಯಗಳಲ್ಲಿ ನಿಮಗೆ ಬೆಂಕಿ ಹಚ್ಚುವಂತದ್ದು ಏನು ಕಾಣದಿದ್ದರೆ,ಬಹುಷಃ ಒವೈಸಿಯ ಉರ್ದು ಮಿಶ್ರಿತ ಹಿಂದಿ ಭಾಷಣವನ್ನು ಅನುವಾದ ಮಾಡುವಲ್ಲಿ ನಾನು ಸೋತಿದ್ದೇನೆ ಅಷ್ಟೇ ಹೊರತು ಅವನ ಭಾಷಣ ತಂಪಾಗಿರಲಿಲ್ಲ.ಒವೈಸಿಯ ಭಾಷಣವನ್ನು ಕೇಳಿ ಉನ್ಮತ್ತರಾದವರು ಏನೆಲ್ಲಾ ಮಾಡಬಹುದು ಅನ್ನುವ ಸ್ಯಾಂಪಲ್ ಬೇಕು ಅನ್ನಿಸಿದರೆ 2012ರ ಆಗಸ್ಟ್ ತಿಂಗಳಲ್ಲಿ ,ಮುಂಬೈನ ಆಜಾದ್ ಮೈದಾನದಲ್ಲಿ ಏನಾಗಿತ್ತು ಅನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ.ಅಂದ ಹಾಗೆ ಈ ಅಕ್ಬರ್ ಒವೈಸಿ ಯಾರು ಗೊತ್ತಾ,ಈ ದೇಶದ ಸಂಸತ್ತಿನಲ್ಲಿ ನಿಂತು “ಕೇಂದ್ರ ಸರ್ಕಾರಕ್ಕೆ,ಇಲ್ಲಿರುವ ಸಂಸದರಿಗೆ ನಾನು ಎಚ್ಚರಿಕೆ ಕೊಡುತಿದ್ದೇನೆ,ಒಂದು ವೇಳೆ ಅಸ್ಸಾಂ ಗಲಭೆಯ ಮುಸ್ಲಿಂ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗಲಿಲ್ಲವಾದರೆ, ಮುಸ್ಲಿಂ ಯುವಕರು ಮುಲಭೂತವಾದಿಗಳಾಗುವುದನ್ನು ನೋಡಬೇಕಾಗುತ್ತದೆ’ ಅಂತ ಬೆದರಿಕೆ ಹಾಕುವಂತ ಭಾಷಣ ಮಾಡಿದ್ದ ಅಸಾದುದ್ದೀನ್ ಒವೈಸಿಯ ತಮ್ಮ.
ಠಾಕ್ರೆ ಸತ್ತಾಗ ಮುಂಬೈ ಸ್ತಬ್ಧವಾಗಿದ್ದನ್ನು ಪ್ರತಿಭಟಿಸಿ ಸಿಟ್ಟನ್ನು ಫೇಸ್ಬುಕ್ ಮೂಲಕ ಹೊರ ಹಾಕಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯರನ್ನು ನಿಂತ ನಿಲುವಲ್ಲೇ ಬಂಧಿಸುವ ಈ ವ್ಯವಸ್ಥೆಯ ಕಣ್ಣಿಗೆ, ಒವೈಸಿಯನ್ನು ಕಂಬಿಯ ಹಿಂದೆ ಹಾಕಲು ವಾರಗಳೇ ಬೇಕಾಯಿತು.ಅದೂ, ಯಥಾ ಪ್ರಕಾರ ಜೈಲಿಗೆ ಕರೆ ಬಂದಾಗ ರಾಜಕಾರಣಿಗಳಿಗೆ ಬರುವ ದೊಡ್ಡ ರೋಗ ಬಂದಿತ್ತು ಅನ್ನುವ ನಾಟಕವೆಲ್ಲ ಆದಮೇಲೆ! ಇದೆಲ್ಲ ವ್ಯವಸ್ಥೆಯ ವ್ಯಂಗ್ಯವಲ್ಲದೇ ಮತ್ತಿನ್ನೇನು?
ಕಳೆದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ವರುಣ್ ಗಾಂಧೀ ‘ಕೈ ಕತ್ತರಿಸುವ’ ಶಬ್ದ ಬಳಸಿದಾಗ ಆಕಾಶ-ಭೂಮಿ ಒಂದಾಗುವಂತೆ ಅಬ್ಬರಿಸಿ ಬೊಬ್ಬಿರಿದ್ದಿದ್ದ ಸುದ್ದಿ ಮಾಧ್ಯಮಗಳು,ಒವೈಸಿಯ ಭಾಷಣದ ಬಗ್ಗೆ ಮಾತ್ರ ಅಬ್ಬರಿಸಲೂ ಇಲ್ಲ,ಬೊಬ್ಬಿರಿಯಲೂ ಇಲ್ಲ.ಯಾಕೆ? ಮಾತನಾಡಲು ಭಯವೆ? ಅಥವಾ ಇದು ಸಿಕ್ಯುಲರ್ ಮನಸ್ಥಿತಿಯೆ? ತಪ್ಪು ಮಾಡುವುದನ್ನು ಖಂಡಿಸುವುದಾದರೆ ಎರಡು ಬದಿಯ ಅವಿವೇಕಿಗಳನ್ನು,ಅತಿರೇಕಿಗಳನ್ನು ಟೀಕಿಸಬೇಕಲ್ಲವೇ? ಕೇಂದ್ರ ಸರ್ಕಾರದ
‘ಪದ್ಮಶ್ರೀ’ ಪತ್ರಕರ್ತರೆಲ್ಲ ಎಲ್ಲಿ ಹೋಗಿದ್ದಾರೆ? ಹಿಂದೂ ಮೂಲಭೂತವಾದಿಗಳು ಮಾತನಾಡಿದಾಗ ಎದ್ದು ಬರುವ ಸೆಕ್ಯುಲರ್ ಪುಣ್ಯಾತ್ಮರ ಪತ್ತೆಯೇ ಇಲ್ಲ. ಮುಸ್ಲಿಂರನ್ನು ಗುತ್ತಿಗೆ ಪಡೆದಂತೆ ಆಡುವ ಕಾಂಗ್ರೆಸ್ಸೂ,ಸಮಾಜವಾದಿ ಪಕ್ಷಗಳ ಸುದ್ದಿಯೂ ಇಲ್ಲ.ಎಲ್ಲಾ ಹೋಗಿ ಬಿಟ್ಟರೇನು ಅಂದುಕೊಳ್ಳುವಷ್ಟರಲ್ಲಿ “ಅತ್ಯಾಚಾರಗಳು ಇಂಡಿಯಾದಲ್ಲಿ ಆಗುತ್ತವೆ ಭಾರತದಲ್ಲಲ್ಲ” ಅನ್ನುವ ಆರ್.ಎಸ್.ಎಸ್ ನಾಯಕ ಮೋಹನ್ ಭಾಗವತ್ ಅವರ ಹೇಳಿಕೆಯ ಚುಂಗು ಹಿಡಿದುಕೊಂಡು,ಎಲ್ಲರೂ ಪ್ರತ್ಯಕ್ಷರಾಗಿ ಬಿಟ್ಟರಲ್ಲ!
ನಮ್ಮೆಲ್ಲ ವಿಕೃತಿಗಳ ಸಮರ್ಥನೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ದೂಷಿಸುವ ಅಂಶದ ಮುಂದುವರೆದ ಭಾಗದಂತೆ ಕಂಡ ಭಾಗವತ್ ಅವರ ಹೇಳಿಕೆಯನ್ನು ಒಪ್ಪಲಾಗದೂ ಅನ್ನುವುದರಲ್ಲಿ ಎರಡು ಮಾತಿಲ್ಲ. ಬೇರೆ ಬೇರೆ ವಿಷಯಗಳಿಗೆ ಸಂಬಂಧ ಪಟ್ಟ ಈ ಹೇಳಿಕೆಗಳನ್ನು,ವ್ಯಕ್ತಿಗಳನ್ನು ಸಮೀಕರಿಸುವುದು ನನ್ನ ಉದ್ದೇಶವಲ್ಲ.ಆದರೆ,ಈ ಎರಡು ವ್ಯಕ್ತಿಗಳ ಹೇಳಿಕೆ ಮತ್ತು ಮಾಧ್ಯಮಗಳ ಮತ್ತು ಸಿಕ್ಯುಲರ್ ಮನಸ್ಥಿತಿಗಳ ಇಬ್ಬಗೆ ನೀತಿಯ ಅನಾವರಣಕ್ಕೆ ಇದಕ್ಕಿಂತ ಬಹುಷಃ ಒಳ್ಳೆ ಉದಾಹರಣೆ ಸಿಗಲಿಕ್ಕಿಲ್ಲವೇನೋ.ಒವೈಸಿಯ ಮಾತಿಗೆ ಕಮಕ್-ಕಿಮಕ್ ಅನ್ನದಿದ್ದ ಜನರೆಲ್ಲ ಭಾಗವತ್ ಅವರು ಮಾತನಾಡಿದ ತಕ್ಷಣ ಎದ್ದು ಬಂದು ಬಿಟ್ಟರು.ಬೃಂದಾ ಕಾರಟ್ ಅವರಿಗೆ ಮನುಸ್ಮೃತಿಯ ನೆನಪಾಯಿತು.
ಸಿಕ್ಯುಲರ್ ಜನಗಳೇನೋ ಬರಲಿಲ್ಲ.ಅದು ಅವರ ಜಾಯಮಾನ ಅಂದುಕೊಳ್ಳೋಣ.ಆದರೆ, ಮೋದಿಗೆ ’ಮೌತ್ ಕಾ ಸೌದಾಗರ್’ ಅನ್ನುವ ಬಿರುದು-ಬಾವಲಿ ನೀಡಿದ್ದ ಮುಸ್ಲಿಂ ಬುದ್ದಿ ಜೀವಿ ಜಾವೇದ್ ಅಕ್ತರ್,ಭಾಗವತ್ ಭಾಷಣದ ಬಗ್ಗೆ ಪ್ರತಿಕ್ರಿಯಿಸುತ್ತಾ,”ಹೆಂಗಸರನ್ನು ದ್ವೇಷಿಸುವ ಮತ್ತು ಅವರನ್ನು ಅಡಿಯಾಳುಗಳಾನ್ನಗಿಸ ಬಯಸುವ ಬಲಪಂಥೀಯರ ಮನಸ್ಥಿತಿ ಬಯಲಾಗಿದೆ” ಅಂತೇಳಿ ತಾನು ಮಾತ್ರ ಒವೈಸಿಯ ಬಗ್ಗೆ ಮಾತನಾಡದೇ ಬೆತ್ತಲಾದೆ ಅನ್ನುವುದನ್ನು ಮರೆತಿದ್ದಾರೆ.
ಒವೈಸಿಯ ತಲೆ ಕೆಟ್ಟ ಭಾಷಣವನ್ನು ಮೊದಲು ವಿರೋಧಿಸಬೇಕಾದ ಹೊಣೆ ಶಾಂತಿ-ಸೌಹಾರ್ದತೆ ಬಯಸುವ ಮುಸ್ಲಿಂ ನಾಯಕರಾದರಾಗಿರಬೇಕಾಗಿತ್ತು.ದುರದೃಷ್ಟವಶಾತ್ ಅಂತ ಒಬ್ಬೇ ಒಬ್ಬ ನಾಯಕನೂ ಇದುವರೆಗೂ ಕಾಣಿಸಿಕೊಂಡೂ ಇಲ್ಲ ಮಾತನಾಡಿಯೂ ಇಲ್ಲ.
ಈ ದೇಶದ ಜಾತ್ಯಾತೀತರ ಲೆಕ್ಕಾಚಾರಗಳೇ ಅರ್ಥವಾಗುವುದಿಲ್ಲ ನೋಡಿ. ಹೆಸರಿನಲ್ಲೇ “ಮುಸ್ಲಿಂ” ಅಂತ ಇಟ್ಟುಕೊಳ್ಳುವ ಪಕ್ಷಗಳು ಇವರಿಗೆ ಕೋಮುವಾದಿಗಳಾಗಿ ಕಾಣುವುದಿಲ್ಲ.ಅಂತವರ ಸಖ್ಯ ಬೆಳೆಸಿಯೂ ಕೂಡ ಕಾಂಗ್ರೆಸ್ಸ್ ಮತ್ತು ಅದರಂತ ಪಕ್ಷಗಳು ಜಾತ್ಯಾತೀತರಾಗಿ ಬಿಡುತ್ತವೆ.ಆದರೆ ಹೆಸರಿನಲ್ಲಿ “ಭಾರತ” ಇರುವ ಬಿಜೆಪಿಯೊಂದಿಗಿನ ಸಖ್ಯ ಕೋಮುವಾದಿಗಳನ್ನಾಗಿಸುತ್ತದೆ…! ಇವತ್ತಿಗೆ ಆಂಧ್ರದಲ್ಲಿ ಪಡೆದುಕೊಂಡಿರುವ ಒಂದಂಕಿಯ ಸಂಖ್ಯಾಬಲದಿಂದಲೇ ಈ ಪರಿ ಹಾರಾಡುತ್ತಿರುವ ಈ ಪಕ್ಷ ಮುಂದೆ ಸಮ್ಮಿಶ್ರ ಸರ್ಕಾರದ ಈ ಯುಗದಲ್ಲಿ ಎರಂಡಂಕಿಯ ಸ್ಥಾನ ಪಡೆದರೆ ಈ ದೇಶದ ಶಾಂತಿಗೆ ಯಾವ ಪರಿ ಭಂಗ ತಂದಿತೂ ಊಹಿಸಿ.ಅಸ್ಸಾಂ ಗಲಭೆಯ ಸಂದರ್ಭವನ್ನು ಬಳಸಿಕೊಂಡು ಮುಸ್ಲಿಂ ಮತಗಟ್ಟೆಯನ್ನು ಸೆಕ್ಯುಲರ್ ಪಕ್ಷಗಳಿಂದ ಕಸಿಯಲು ಹೊರಟು ನಿಂತಿರುವ ಒವೈಸಿಗಳಿಗೆ ಮುಸ್ಲಿಂ ಮತದಾರರು ವೋಟಿಂಗ್ ಮಷೀನುಗಳಂತೆ ಕಾಣುತಿದ್ದಾರಷ್ಟೆ.ತಮ್ಮನ್ನು ವೋಟ್ ಬ್ಯಾಂಕ್ ಗಳಾಗಿ ಬಳಸಿಕೊಂಡ ಕಾಂಗ್ರೆಸ್ಸ್ ಮುಸ್ಲಿಂರಿಗಾಗಿ ಏನು ಮಾಡಿದೆ ಅನ್ನುವುದನ್ನು ಸಾಚಾರ್ ಆಯೋಗ ವರದಿ ಬಯಲು ಮಾಡುತ್ತದೆ.ಬಹುಷಃ ಒವೈಸಿಯಂತವರ ಪಕ್ಷವನ್ನು ನಂಬಿದರೂ ಅದೇ ಗತಿಯೇ ಆದೀತು.
ಮುಂಬೈ ಸರಣಿ ಬಾಂಬ್ ಸ್ಪೋಟವನ್ನು ಸಮರ್ಥಿಸಿಕೊಳ್ಳುತ್ತಾ,ಅಲ್ಲಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುತ್ತಾ ಒವೈಸಿಯೇನೋ ಬೆಂಕಿ ಉಗುಳುವ ಭಾಷಣ ಮಾಡಿ ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ತಾನು ಎಸಿ ರೂಮಿನಲ್ಲಿ ಕುಳಿತು ಬಿಡುತ್ತಾನೆ.ಅವನ ಭಾಷಣ ಕೇಳುತಿದ್ದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ದ್ವೇಷ ಅನ್ನುವುದು ಮಡುಗಟ್ಟಿ ಹೋಗುತ್ತದೆ.ಮತ್ತೆ ಅದೊಂದು ದಿನ ಗಲಭೆಯಾಗಿ ಸ್ಫೋಟವಾಗುತ್ತದೆ.ಆದರೆ ಈ ಗಲಭೆಯಲ್ಲಿ ಬಲಿಯಾಗುವ ಬಹುತೇಕರು ಒಪ್ಪೊತ್ತಿನ ಊಟಕ್ಕೆ ಪರದಾಡುವವರೇ. ಅವರಿಗೆ ಈ ಅಕ್ಬರುದ್ದಿನ್ ಒವೈಸಿ ಯಾರು? ತನ್ನನ್ನು ಹೊಡೆಯಲು ಬಂದವರು ಯಾರು? ಬಾಬರಿ ಮಸೀದಿ ಎಲ್ಲಿತ್ತು? ತಸ್ಲೀಮಾ ನಸ್ರೀನ್ ಅಂದರೇನು? ಊಹೂಂ,ಇದ್ಯಾವುದರ ಅರಿವೆ ಇರುವುದಿಲ್ಲ ಆದರೂ ಕೈಲಾಗದ ವೋಟ್ ಬ್ಯಾಂಕ್ ದುರಾಸೆಗೆ ಬಿದ್ದ ಸರ್ಕಾರ ಆಡಳಿತದಲ್ಲಿ ಪಾಪದವರ ಪಾಡು ಕೇಳುವವರು ಯಾರು?
ಅಂತೂ-ಇಂತೂ ಒವೈಸಿ ಅನ್ನುವ ಕಮ್ಯುನಲ್ ಕ್ಯಾನ್ಸರ್ ಜೈಲಿಗೆ ಹೋಗಿಯಾಗಿದೆ.Taken for Granted ಅನ್ನುವಂತೆ ಮಾತನಾಡಿರುವ ಅವನಿಗೆ ಮತ್ತು ಅವನಂತ ಇತರರಿಗೆ ಒಂದು ಪಾಠವಾಗುವಂತ ಶಿಕ್ಷೆಯಾಗಬೇಕಿದೆ. ಬಹುಷಃ ಹಾಗೇ ಆದಾಗ ಮಾತ್ರ,ನೆಮ್ಮದಿಯಿಂದ ಬದುಕಿನ ಬಂಡಿ ಎಳೆಯುತ್ತಿರುವ ಭಿನ್ನ ಧರ್ಮದ ಜನರ ನಡುವೆ ದ್ವೇಷ ಹುಟ್ಟಿಸುವಂತ ಎಲ್ಲಾ ರೀತಿಯ ವಿಕೃತ ಮನಸ್ಸುಗಳಲ್ಲಿ ಒಂದು ಬಗೆಯ ಭಯ ಮೂಡಬಹುದು.
ಕಡೆಯದಾಗಿ ಹೇಳುವುದಾದರೆ,ಮೋಹನ್ ಭಾಗವತ್ ಭಾಷಣದ ಆಯ್ದ ಭಾಗವನ್ನು ತೆಗೆದುಕೊಂಡು ತಿರುಚಿ ಈ ಮಾಧ್ಯಮಗಳು ಏನೇ ತಿಪ್ಪರಾಲಾಗ ಹಾಕಿ ಆರ್.ಎಸ್.ಎಸ್ ಅನ್ನು ವಿರೋಧಿಸಬಹುದು.ಆದರೆ, ಆರ್.ಎಸ್.ಎಸ್ ನ ಸೈದ್ಧಾಂತಿಕ ನಿಲುವನ್ನು ವಿರೋಧಿಸುವ ನನ್ನಂತ ಹಲವರು ಸಹ ಸಂಘದ ನಿಸ್ವಾರ್ಥ ಕಾರ್ಯಕರ್ತರ ಕಮಿಂಟ್ಮೆಂಟ್ ಬಗ್ಗೆ ಮಾತನಾಡಲಾರರು.ಹಾಗೆಯೇ, ಒವೈಸಿ ಭಾಷಣದ ಪೂರ್ಣ ಪಾಠವನ್ನು ಕೇಳಿದ ಮೇಲೆಯೂ ಬಾಯಿ ಬಿಡದ ಸಿಕ್ಯುಲರ್ ಜನಗಳನ್ನು ಜನ ನಂಬಲಾರರು.





ನಿಮ್ಮ ವಿಚಾರ ಸರಣಿಗೆ ನನ್ನ ಮೆಚ್ಚಗೆಯ ನೆನಕೆಗಳನ್ನು ಸಲ್ಲಿಸುತ್ತೆನೆ. ದೊಡ್ಡವರೆನಿಸಿಕೊಂಡವರೆಲ್ಲಾ ಬಾಯಿಬಿಡುವುದು ತಮ್ಮ ಸ್ವಾರ್ಥ ಸಾಧನೆಗೆ ಚ್ಯುತಿ ಬಂದಾಗಲೇ, ಅದರ ಫಲವನ್ನು ಅನುಭವಿಸುವ ಜನರು ಸಾಮಾನ್ಯರು. ತೀರಾ ಸಾಮಾನ್ಯರು.
ಎಲ್ಲರೂ ಸಂವಿಧಾನದ ಮಿತಿಯಲ್ಲಿ ನಡೆದುಕೊಳ್ಳಬೇಕು. ಇದು ದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯ. ಎಲ್ಲಾ ಧರ್ಮದ ವ್ಯಕ್ತಿಗಳಿಗೂ ಅನ್ವಯ ಆಗಬೇಕು. ಯಾರೂ ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ತಿಳಿದುಕೊಳ್ಳಬಾರದು. ಪ್ರಚೋದನಕಾರಿ ಭಾಷಣ ಮಾಡುವ ತೊಗಾಡಿಯಾ, ಮುತಾಲಿಕ್, ಕಲ್ಲಡ್ಕ ಪ್ರಭಾಕರ ಭಟ್ , ಜಗದೀಶ್ ಕಾರಂತ್ ಮೊದಲಾದವರನ್ನೂ ಕೂಡ ಬಂಧಿಸಬೇಕಾದ ಅಗತ್ಯ ಸಂವಿಧಾನದ ಪ್ರಕಾರ ಇದೆ. ಈ ಬಗ್ಗೆಯೂ ಮಾಧ್ಯಮಗಳು ಧ್ವನಿ ಎತ್ತಬೇಕಾದ ಅಗತ್ಯ ಇದೆ.
ರಾಕೇಶ್ ಅವರೇ ಒವೈಸಿ ಕೋಮುವಾದದ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ಸಹಮತವಿದೆ . ಇದೊಂದು ರಾಜಕೀಯ ದಾಳ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ .
ಆದರೆ ಈ ಲೇಖನ ಏಕಮುಖವಾಗಿ ಬರೆದುದರ ಬಗ್ಗೆ ವಿರೋಧವಿದೆ . ಕೆಲವೊಂದು ವಿಷಯಗಳನ್ನು ಬೇಕಂತಲೇ ಮುಚ್ಚಿದ್ದೀರ ಅಥವಾ ಅದರ ಬಗ್ಗೆ ಜಾಣ ಕುರುಡು ತೋರಿಸಿದ್ದೀರ ಎಂದು ನನಗೆ ಗೊತ್ತಿಲ್ಲ . ದೇಶದ ಜಾತ್ಯಾತೀತವಾದಿಗಳ (ತಮ್ಮ ಶಬ್ದಗಳಲ್ಲಿ ಸಿಕ್ಕ್ಯುಲರ್ ವಾದಿಗಳು ) ಬಗ್ಗೆ ತಮ್ಮ ಅಭಿಪ್ರಾಯ ಏಕೋ ಪೂರ್ವಾಗ್ರಹಪೀಡಿತವಾದಂತೆ ಕಾಣುತ್ತದೆ. ಒವೈಸಿ ಭಾಷಣದ ಬಗ್ಗೆ ಎಲ್ಲಾ ವರ್ಗದ ಜನರ ವಿರೋಧ ತಮ್ಮ ಕಣ್ಣಿಗೆ ಏಕೆ ಕಂಡಿಲ್ಲಾವೋ ನಾ ಕಾಣೆ ! ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಚಾರವೇ ಒವೈಸಿಯನ್ನು ಕಂಬಿ ಎಣಿಸೋ ಹಾಗೆ ಮಾಡಿದ್ದ್ದು . ಇಲ್ಲದಿದ್ದರೆ ದ್ವೇಷ ಬಾಷಣ ಮಾಡಿದ ಪ್ರಭಾಕರ್ ಭಟ್ಟ್ ಆಗಲಿ , ಮುತಾಲಿಕ್ , ಕಾರಂತ್ ಆಗಲಿ ಜೈಲು ಸೇರಿದ ದಾಖಲೆ ಇಲ್ಲ . ಅಷ್ಟಕ್ಕೂ ವರುಣ್ ಗಾಂಧೀ ಭಾಷಣ ವಿರೋಧಿಸಿದ ಮಾಧ್ಯಮನ್ನು ವಿರೋಧಿಸಿದ ನೀವು , ವರುಣ್ ಗಾಂಧೀ ಜೈಲು ಸೇರದ ಬಗ್ಗೆ ಚಿಂತೆ ವ್ಯಕ್ತಪಡಿಸದ್ದು ಮತ್ತು ಅರೆಸ್ಸೆಸ್ ಬಗ್ಗೆ ನಿಮಗೆ ಒಳ್ಳೆ ಅಭಿಪ್ರಾಯವಿದೆ (ನೀವೆ ಹೇಳಿದ್ದು) ಎಂದದ್ದು ಸರಿಯಾಗಿಯೇ ಇದೆ .
ಮೋಹನ್ ಭಾಗವತ್ ಮಾತನ್ನು ಜಾವೇದ್ ಅಕ್ತರ್ ವಿರೋಧಿಸಿದ್ದು (ವಿರೋಧಿಸಲೇ ಬೇಕಾದ ಮಾತು ಎನ್ನುವುದರಲ್ಲಿ ಎರಡು ಮಾತಿಲ್ಲ) ನಿಮ್ಮ ಕಣ್ಣಿಗೆ ಕಂಡರೆ , ಒವೈಸಿ ಮಾತನ್ನು ವಿರೋಧಿಸಿದ್ದು ನಿಮಗೆ ಕಾಣಲಿಲ್ಲವೋ ಅಥವಾ ಜಾಣ ಕುರುಡೋ ಅದರ ಬಗ್ಗೆ . ನಿಮ್ಮ ತಿಳುವಳಿಕೆಗಾಗಿ ಜಾವೇದ್ ಅಕ್ತರ್ ಅವರ ಕೆಲವೊಂದು ಟ್ವೀಟ್ ಗಳನ್ನೂ ಇಲ್ಲಿ ಉಲ್ಲೇಖಿಸ ಬಯಸುತ್ತೇನೆ.
“Mr AU Owaisi , you are the worst enemy of Indian Muslims.your poisonous words and evil thoughts don’t represent the Muslims of India .”
“The hate speeches Modi Tagodia and Varun have made are terrible but that does not justify Mr Owaisi’s hate speech.i condemn him”
“Govt should take action against Owaisi without any delay and establish that our nation will not tolerate hate speeches from any one .”
“Rss and Jamaat -e-Islami, Bhagwat and Abu Asim in total agreement for RESTRAINING women”.
ಇದು ಜಾವೇದ್ ಅಕ್ತರ್ ಅಭಿಪ್ರಾಯವಾಗಿತ್ತು ಒವೈಸಿ ಬಗ್ಗೆ , ಇದು ನಿಮಗೆ ಕಾಣಲಿಲ್ಲವೋ ಅಥವಾ ಇದರ ಬಗ್ಗೆ ಜಾಣ ಕುರುಡು ತೋರಿಸಿದಿರೋ ? ಅಥವಾ ಮೋದಿ ಬಗ್ಗೆ ಅವರ ವಿರೋಧ ನಿಮ್ಮ ಕಣ್ಣನ್ನು ಕುರುಡಾಗಿಸಿತೋ ??
ಮತ್ತೆ ಮೋಹನ್ ಭಾಗವತ್ ಹೇಳಿಕೆ ಬಗ್ಗೆ ಪ್ರಕಟವಾದ ವಿರೋಧ ನಿಮಗೆ ಏಕೆ ಹಿಡಿಸಲಿಲ್ಲವೋ ? ಅಷ್ಟಕ್ಕೂ ಒವೈಸಿ ಹೈದರಬಾದ್ಗೆ ಅಷ್ಟೇ ನೀಮಿತವಾದ ನಾಯಕ (?) ಆದರೆ ಭಾಗವತ್ ಇಡೀ ಭಾರತವನ್ನು ಪ್ರತಿನಿಧಿಸುವ ಅರೆಸ್ಸೆಸ್ ಎಂಬ ಸಂಘಟನೆಯ ನಾಯಕ . ಅಂತರದಲ್ಲಿ ಭಾಗವತ್ ಹೇಳಿಕೆಗೆ ಜಾಸ್ತಿ ವಿರೋಧ (ನೀವು ಹೇಳುವಂತೆ) ವ್ಯಕ್ತವಾದರೆ ಅದರಲ್ಲಿ ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇದೆಯಾ ? ಭಾಗವತ್ ಹೇಳಿಕೆ ತಿರುಚಲಾಗಿದೆ ಎಂದು ಅವರ ಪರ ವಕಾಲತ್ತು ವಹಿಸೋ ಅವಶ್ಯಕತೆ ಏನಿತ್ತೋ ? (ಯಾವ ಹೇಳಿಕೆ ಹೇಗೆ ತಿರುಚಲಾಗಿದೆ ಎಂಬ ವಿವರಣೆ ಕೂಡ ಇಲ್ಲದೇ) ವಿರೋಧ ಮಾಡುವುದಾರೆ ಎಲ್ಲಾ ತಪ್ಪನ್ನು ಒಂದೇ ರೀತಿ ವಿರೋಧಿಸಿ . ಅದು ಬಿಟ್ಟು ಒಂದು ತಪ್ಪನ್ನು ವಿರೋಧಿಸಿ , ಇನ್ನೊಂದನ್ನು ಸಮರ್ಥಿಸುತ್ತಾ ಮಾಧ್ಯಮಗಳ ಗೂಬೆ ಕೂರಿಸೋ ಕೆಲಸ ಮಾಡಬೇಡಿ .
“”ಒವೈಸಿಯ ತಲೆ ಕೆಟ್ಟ ಭಾಷಣವನ್ನು ಮೊದಲು ವಿರೋಧಿಸಬೇಕಾದ ಹೊಣೆ ಶಾಂತಿ-ಸೌಹಾರ್ದತೆ ಬಯಸುವ ಮುಸ್ಲಿಂ ನಾಯಕರಾದರಾಗಿರಬೇಕಾಗಿತ್ತು.ದುರದೃಷ್ಟವಶಾತ್ ಅಂತ ಒಬ್ಬೇ ಒಬ್ಬ ನಾಯಕನೂ ಇದುವರೆಗೂ ಕಾಣಿಸಿಕೊಂಡೂ ಇಲ್ಲ ಮಾತನಾಡಿಯೂ ಇಲ್ಲ.””
ಈ ಮೇಲಿನ ಹೇಳಿಕೆಗೆ ಫ಼ರ್ಹಾನ್ ಅಕ್ತರ್ ಟ್ವೀಟ್ ನಿಮ್ಮ ಜ್ಞಾನಕ್ಕೆ ತರಬಯಸುತ್ತೇನೆ .
“How can 2 girls be arrested in less than 24 hrs for a harmless FB post but Owaisi roams free after his blatantly communal rant?”
ಸುಧೀರ್ಘ ಪ್ರತಿಕ್ರಿಯೆಗೆ ಧನ್ಯವಾದಗಳು ಇಮ್ತಿಯಾಜ್ ಅವರೆ.
ಲೇಖನ ಏಕ ಮುಖವಾಗಿದೆ ಅಂತ ನಿಮಗನ್ನಿಸಿದ್ದು ಪ್ರಭಾಕರ್ ಭಟ್,ಮುತಾಲಿ,ಕಾರಂತರನ್ನ ಉಲ್ಲೇಖಿಸಿಲ್ಲ ಅನ್ನುವ ಕಾರಣಕ್ಕಗಿ ಇರಬಹುದು ಅಂದುಕೊಳ್ಳುತ್ತೇನೆ.ಭಾಗವತ್-ಒವೈಸಿ ಪ್ರಕರಣದ ಸುತ್ತವೇ ಬರೆದುದರಿಂದ ಇವರೆಲ್ಲರ ಹೆಸರು ಪ್ರಸ್ತಾಪಿಸಿಲ್ಲವಷ್ಟೆ.ನನ್ನ ದೃಷ್ಟಿಯಲ್ಲಿ ಮನುಷ್ಯರ ಕಂಡರೆ ದ್ವೇಷ ಕಾರುವ ಎಲ್ಲರನ್ನು ವಿರೋಧಿಸುತ್ತೇನೆ.ಅದು ಒವೈಸಿಯಾದರೂ ಸರಿ,ಪ್ರಭಾಕರ್ ಭಟ್ ಆದರೂ ಸರಿ.ವರುಣ್ ಗಾಂಧಿ ಜೈಲು ಸೇರಿಲ್ಲ ಅನ್ನುವುದರ ಬಗ್ಗೆ ನನಗೆ ಖುಷಿಯಿದೆ ಅನ್ನುವುದು ನಿಮ್ಮ ಅಭಿಪ್ರಾಯವಷ್ಟೆ.ಇನ್ನು ಆರೆಸ್ಸೆಸ್ ಮೇಲೆ ಒಳ್ಳೆ ಅಭಿಪ್ರಾಯ ಇರುವುದರ ಬಗ್ಗೆ, ಖಂಡಿತ ಅವರ ಸಮಾಜ ಸೇವಾ ಕೆಲಸಗಳ ಬಗ್ಗೆ, ದೇಶಕ್ಕಾಗಿ ಮನೆ-ಮಠವನ್ನು ಬಿಟ್ಟ ಪೂರ್ಣಾವಧಿ ಕಾರ್ಯಕರ್ತರನ್ನು ಗೌರವಿಸುತ್ತೇನೆ.ಪುಡಿ ವೋಟಿಗಾಗಿ “ಸಿಮಿ”ಯಂತ ನಿಷೇಧಿತ ಸಂಘಟನೆಯನ್ನು ಬೆಂಬಲಿಸುವ ಲಾಲು-ಮುಲಾಯಂರಂತವರಿಗೆ ಇವೆಲ್ಲ ಕಾಣದಿರಬಹುದಷ್ಟೆ.
ವರುಣ್ ಗಾಂಧಿಯ ಭಾಷಣವನ್ನು ವಿರೋಧಿಸಿದ ಮಾಧ್ಯಮಗಳನ್ನು ನಾನೆಲ್ಲಿ ವಿರೋಧಿಸಿದ್ದೇನೆ? ಎರಡೂ ಕಡೆಯ ಅತಿರೇಕಿಗಳನ್ನು ಖಂಡಿಸಬೇಕು ಅಂತಲೇ ಹೇಳಿದ್ದೇನಲ್ಲವೇ?ಒವೈಸಿಯೇನೋ ಸಾಕ್ಷಾಧಾರಗಳ ಸಮೇತ ಸಿಕ್ಕಿ ಬಿದ್ದು ಜೈಲಿಗೆ ಹೋಗಿದ್ದಾನೆ.ಹಾಗೆ ಮಾಡಿರುವ ಉಳಿದೆಲ್ಲರಿಗೂ ಜೈಲೇ ಸೂಕ್ತ ಸ್ಥಳ ಅನ್ನುವುದರಲ್ಲಿ ಅನುಮಾನವೇ ಇಲ್ಲ.ಇನ್ನು ಒವೈಸಿಯ ವಿಚಾರದಲ್ಲಿ ಮೊದಲು ಸುದ್ದಿ ಮಾಡಿದ್ದೇ ಫ಼ೇಸ್ಬುಕ್,ಟ್ವಿಟರ್ ಗಳಲ್ಲಿ.ಭಾಷಣದ ವಿಡಿಯೋ ತುಣುಕುಗಳನ್ನು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತಿದ್ದಂತೆಯೇ ಅದನ್ನ ಅಳಿಸಿ ಹಾಕುತಿದ್ದರು ಅವನ ಬೆಂಬಲಿಗರು.ಆಮೇಲಷ್ಟೆ ಮಾಧ್ಯಮಗಳು ಎದ್ದು ನಿಂತಿದ್ದು. ಒವೈಸಿ ಹೈದರಾಬಾದ್ ಗೆ ಮಾತ್ರ ಸೀಮಿತ ಮತ್ತು ಭಾಗವತ್ ಭಾರತಕ್ಕೇ ಗೊತ್ತು ಅನ್ನುವ ಕಾರಣಕ್ಕಾಗಿ ತಾರತಮ್ಯವಿದ್ದರೂ ನಡೆದೀತು ಅನ್ನುವುದು ನಿಮ್ಮ ಅಭಿಪ್ರಾಯವೇನು?
ಜಾವೇದ್ ಅಕ್ತರ್ ಅವರ ಟ್ವಿಟರ್ ನಲ್ಲಿನ ಈ ಮಾತುಗಳನ್ನು ನಾನು ಗಮನಿಸಿಲ್ಲ ಒಪ್ಪಿಕೊಳ್ಳುತ್ತೇನೆ.ಆದರೆ ಬೇರೆ ಸಮಯದಲ್ಲಿ (ಎದುರಾಳಿಯನ್ನು ನೋಡಿ) ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವವರು ಸಣ್ಣಗೆ ನರಳುವುದು ಸರಿಯೇನು? ಪಾಶ್ಚಾತ್ಯ ಸಂಸ್ಕೃತಿಯನ್ನು ನಮ್ಮೆಲ್ಲ ವಿಕೃತಿಗಳಿಗೆ ದೂಷಿಸುವ ಫ಼್ಯಾಷನ್ ನ ಮುಂದಿನ ಭಾಗದಂತಿರುವ ಭಾಗವತ್ ಅವರ ಹೇಳಿಕೆಯನ್ನು ಒಪ್ಪಲಾಗದು ಅಂತಲೇ ಬರೆದಿದ್ದೇನೆ ಹೊರತು ನಾನು ಅವರನ್ನು ಸಮರ್ಥಿಸಿಕೊಂಡಿಲ್ಲ,ಸಮರ್ಥಿಸಿಕೊಳ್ಳಲೂ ಈ ಲೇಖನ ಬರೆದಿಲ್ಲ.ಎರಡು ವ್ಯಕ್ತಿಗಳ ನಡುವಿನ ಹೇಳಿಕೆಗೆ ಸಿಗುವ ಪ್ರಚಾರದ ಬಗ್ಗೆ ನಾನು ಮಾತನಾಡಿದ್ದೇನೆ.
ಫ಼ರ್ಹಾನ್ ಅಕ್ತರ್ ಟ್ವೀಟ್ ಮಾಡಿದ್ದು ಗೊತ್ತಿದೆ.ಆದರೆ ’ಫ಼ರ್ಹಾನ್ ಅಕ್ತರ್’ ಮುಸ್ಲಿಂ ನಾಯಕನಲ್ಲ ಅನ್ನುವುದನ್ನು ನೀವು ಮರೆತಂತಿದೆ.ಕೇಂದ್ರ ಸರ್ಕಾರದ,ಜಾತ್ಯಾತೀತ ಪಕ್ಷದ(?) ಮುಸ್ಲಿಂ ನಾಯಕರೆಲ್ಲಿ ಹೋಗಿದ್ದಾರೆ? ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟ ಬಯಸಿದ ನಮ್ಮ ರಾಜ್ಯದ ಹಿರಿಯ ರಾಜಕಾರಣಿಗಳು ಮುಗುಮ್ಮಾಗಿಲ್ಲವೇ? ಒಬ್ಬ ತಲೆ ಕೆಟ್ಟ ಮನುಷ್ಯ ತನ್ನ ರಾಜಕೀಯದ ತೆವಲುಗಳಿಗಾಗಿ ಮುಗ್ದರನ್ನು ಮುಂದೆ ನಿಲ್ಲಿಸಿಕೊಂಡು ಅವರನ್ನು ಕೆರಳಿಸಿ ಬಾವಿಗೆ ತಳ್ಳುತಿದ್ದಾನೆ ಅನ್ನುವಾಗ, ಅಂತ ಯುವಕರು ಹಾದಿ ತಪ್ಪದಂತೆ ಕಾಯಬೇಕಾಗಿರುವುದು ಸಮುದಾಯದ ನಾಯಕರ ಜವಾಬ್ದಾರಿ ಅಂತ ಅನ್ನಿಸುವುದಿಲ್ಲವೇ? ಮಯನ್ಮಾರ್ ನಲ್ಲಿ ಗಲಭೆಯಾದರೆ,ಸದ್ದಾಂ ನೇಣಿಗೇರಿದರೆ ಇಲ್ಲಿ ಬೀದಿಗಳಲ್ಲಿ ಬೆಂಕಿ ಹಚ್ಚುವ ಹುಡುಗರನ್ನು ಸರಿ ದಾರಿಗೆ ತರಬೇಕಾದವರು ಯಾರು?ಮಾತನಾಡಬೇಕಾದ ಸಮಯದಲ್ಲಿ ಮೌನವಾಗಿರುವುದು ಸಮ್ಮತಿಯ ಲಕ್ಷಣ ಅನ್ನುವ ತಪ್ಪು ಸಂದೇಶವನ್ನೇಕೆ ಮುಸ್ಲಿಂ ನಾಯಕರು ಕೊಡಬಯಸುತ್ತಾರೆ? ಪಬ್,ಹೋ-ಸ್ಟೇ ದಾಳಿಯಾದಾಗ ನಮ್ಮವರೆಲ್ಲ ಎದ್ದು ನಿಂತು ಕಿವಿಹಿಂಡಿದ್ದರಲ್ಲವೇ? ಅದನ್ಯಾಕೆ ಮುಸ್ಲಿಂ ನಾಯಕರು ಮಾಡುತ್ತಿಲ್ಲ? ಸಂಸತ್ತಿನಲ್ಲಿ ನಿಂತು ಮುಸ್ಲಿಂ ಯುವಕರು ಮೂಲಭೂತವಾದಿಗಳಾಗುತ್ತಾರೆ ಅಂತ ಬೆದರಿಸಿದಾಗ ಅದನ್ನು ವಿರೋಧಿಸಿದ ನಾಯಕ ಯಾರದರೂ ಇದ್ದರೆ ಹೆಸರೇಳಿ ನೋಡೋಣ?
“I have decided to stick to love…Hate is too great a burden to bear.”
― Martin Luther King Jr.,
“two wrongs dont make a right”
ಎರಡು ಪ್ರಮಾದಗಳು ಕೂಡಿದಾಗ ಒಂದನ್ನು ಸರಿಯಾಗಿಸೋಲ್ಲ. ಮೋದಿ, ತೊಗಾಡಿಯಾ, ವರುಣ್ ಗಾಂಧಿ, ಠಾಕ್ರೆ, ಉಮಾಭಾರತಿ, ಸಾಧ್ವಿ ರಿತಾಂಬರಿ………..ಮತ್ತು ಇವರಂಥ ಅಸಂಖ್ಯ hate monger ಗಳಿಗೆ ಚಲಾವಣೆ ಸಿಕ್ಕಿದ್ದು ಅವರನ್ನು ಆಲಿಸಲು, ಓಲೈಸಲು ಜನರಿರುವಾಗ. ಆ ಆಲಿಕೆ, ಓಲೈಕೆ ಒವೈಸಿಗೆ ಮುಸ್ಲಿಂ ಸಮಾಜದಿಂದ ಸಿಗದು.
ಒವೈಸಿ ಯಂಥವರು ಮೇಲೆ ಹೇಳಿದ ಜನರ ಜೊತೆ ಪೈಪೋಟಿಗೆ ಇಳಿದು ಸಮಾಜದಲ್ಲಿ ಬಿರುಕನ್ನು ಏರ್ಪಡಿಸಬಾರದು. ಮುಸ್ಲಿಂ ಸಮುದಾಯ ಒವೈಸಿ ಯಂಥವರನ್ನು ಸಹಿಸಿಕೊಳ್ಳಬಾರದು. ನಮ್ಮ ಸಂಸ್ಕಾರಕ್ಕೆ ಹೇಳಿಸಿದ ನಡವಳಿಕೆಯಲ್ಲ ಅದು.
ಒವೈಸಿ ಗೆ ನನ್ನದೂ ಒಂದು ಧಿಕ್ಕಾರ.
ಭದ್ರಾವತಿಯವರೆ..
ಮಾರ್ಟಿನ್ ಲೂಥರ್ ಕಿಂಗನ ಹೇಳಿಕೆ ಉದ್ಧರಿಸಿ ತಾವು ತಿಳುವಳಿಕೆ ಉಳ್ಳವರು ಎಂದು ತೋರಿಸಿಕೊಳ್ಳಲು ತಾವು ಹೋರಟಿದ್ದು, “ಒವೈಸಿ ಯಂಥವರು ಮೇಲೆ ಹೇಳಿದ ಜನರ ಜೊತೆ ಪೈಪೋಟಿಗೆ ಇಳಿದು ಸಮಾಜದಲ್ಲಿ ಬಿರುಕನ್ನು ಏರ್ಪಡಿಸಬಾರದು” ಎಂಬ ವಾಕ್ಯದಿಂದ ತಮ್ಮ ಒರಿಜನಾಲಿಟಿ ತೋರಿಸದ್ದೀರ!. ತಮ್ಮ ತಿಳುವಳಿಕೆಯ ಪ್ರಕಾರ ಒವೈಸಿಯಂಥವರು ಇಂತಹ ಭಾಷಣ ಹೊಡೆಯುವುದು ಕೇವಲ ತಾವು ‘ಉದಾಹರಣೆ ಕೊಟ್ಟಂತವರನ್ನು ‘ ಎದುರಿಸಲು, ಹೊರತಾಗಿ ಬೇರೇನೂ ಕಾರಣಗಳಿಲ್ಲ..ಭೇಷ್!.
ಪರವಾಗಿಲ್ಲ..ನಿಮಗಷ್ಟೇ ಅಲ್ಲ..ಮುಸ್ಲಿಮ್ ಪಾಲಿಟಿಕಲ್ ಕೌನ್ಸಿಲ್ ನ ಅಧ್ಯಕ್ಷ ಡಾ.ತಸ್ಲೀಮ್ ಅಹ್ಮದ ರೆಹಮಾನಿ ಯವರಿಗೆ ಕೂಡ, ಒವೈಸಿಯ ಭಾಷಣ ಕೇವಲ ಹೋಲಿಕೆಗಳನ್ನು ಹೊಂದಿರುವ, ಫೈರ್ ಬ್ರಾಂಡ್ ಭಾಷಣವಾಗಿ ಕಂಡುಬಂದಿದೆ.
ಹೌದಾ? ಒವೈಸಿ ಕುಟುಂಬ ಹಳೆ ಹೈದರಾಬಾದನ್ನ ಎಷ್ಟು ಕಾಲದಿಂದ ರಾಜಕೀಯವಾಗಿ ಆಕ್ರಮಿಸಿಕೊಂಡಿದೆಯಂತ ಸ್ವಲ್ಪ ಗೂಗಲಿಸಿ ನೋಡಿ. ಅದೇ ಸಮಯಕ್ಕೆ ವಿ.ಎಚ್.ಪಿ ಯ ಮುಖಂಡ ವಿನಯ್ ಕಟಿಯಾರ ಲೋಕಸಭಾ ಚುನಾವಣೆಗೆ ನಿಂತು ಲಾಟರಿ ಹೊಡೆದಿದ್ದು, ಪ್ರಮೋದ್ ಮುತಾಲಿಕ್ ಸ್ಥಿತಿ ಇವೆಲ್ಲವನ್ನೂ ಹೋಲಿಸಿ. ಯಾವ ಕಡೆ ಎಷ್ಟು ಧರ್ಮಾಂಧರು, ಬುದ್ಧಿಹೀನರು ಇದ್ದಾರೆ ಎನ್ನುವುದು ತಿಳಿಯುತ್ತದೆ.
ಒವೈಸಿಯ ಭಾಷಣ ಪೂರ್ತಿ ನೋಡಿದ್ದೀರಾ? ಕೇಳಿದ್ದೀರ? ಇಲ್ಲಿದೆ ಕೇಳಿ..ಪೂರ್ತಿ 1 ಗಂಟೆ 15 ನಿಮಿಷವನ್ನು ಬಿಡದೆ.
ಈತ ತಮ್ಮ ಜನರೇ ಸೇರಿರುವ ಮೊಹಲ್ಲದಲ್ಲಿ , ಪ್ರತಿ ಶುಕ್ರವಾರ ಯುದ್ಧಕ್ಕೆ ಹೊರಟವರಂತೆ ಪ್ರವಚನ ಮಾಡುವ ಮುಲ್ಲಾಗಳು ಕೂಡ ನಾಚುವಂತೆ ಮಾತನಾಡಬಲ್ಲ ಮತ್ತು ಹೊರಗಡೆ ಸಹಜವಾಗಿ ಮಾತನಾಡಬಲ್ಲ..
ಈತನ ವೈರುಧ್ಯಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ. ಮೊಹಲ್ಲಾ ಭಾಷಣದಲ್ಲಿ ಪೋಲೀಸರನ್ನು ನಾಮರ್ಧಗಳು, ತಮ್ಮ ರಕ್ಷಣೆ ಮಾಡಲ್ಲ ಎಂದೆಲ್ಲ ದೂಷಿಸುವ, ನೆರೆದ ಜನ(?)ರನ್ನು ಖುಷಿಪಡಿಸಲು ಎಲ್ಲರನ್ನೂ ಏಕವಚನದಲ್ಲೆ ಜರಿಯುವ ಈ ಮಹಾನುಭಾವ ಇಲ್ಲಿ ಏನು ಹೇಳ್ತಾನೆ ಕೇಳಿ
http://www.youtube.com/watch?feature=fvwp&NR=1&v=YclHgCDdB4U
ಹೌದಾ? ಈತ ಬೆಂಕಿ ಹಚ್ಚಿ ಆಮೇಲೆ ಆರಿಸಲು ಪೋಲಿಸರನ್ನು ಕರೆಯಬಲ್ಲ ಕೂಡ!
ಬಿಟ್ಟು ಹೋಗಿದ್ದು >
“ಇವರಂಥ ಅಸಂಖ್ಯ hate monger ಗಳಿಗೆ ಚಲಾವಣೆ ಸಿಕ್ಕಿದ್ದು ಅವರನ್ನು ಆಲಿಸಲು, ಓಲೈಸಲು ಜನರಿರುವಾಗ. ಆ ಆಲಿಕೆ, ಓಲೈಕೆ ಒವೈಸಿಗೆ ಮುಸ್ಲಿಂ ಸಮಾಜದಿಂದ ಸಿಗದು.” (ಇದರ ನಂತರ ಓದಿಕೊಳ್ಳಿ) >>
ಹೌದಾ? ಒವೈಸಿ ಕುಟುಂಬ ಹಳೆ ಹೈದರಾಬಾದನ್ನ ಎಷ್ಟು ಕಾಲದಿಂದ ರಾಜಕೀಯವಾಗಿ ಆಕ್ರಮಿಸಿಕೊಂಡಿದೆಯಂತ…………………………….
ಮೋಹನ ಭಾಗ್ವತರ ‘ವಿವಾದಿತ’ ಭಾಷಣ ಪೂರ್ತಿ ಕೇಳಿದ್ದೀರಾ? ಮೊದಲು ಕೇಳಿ, ಸತ್ಯ ತಿಳಿಯಿರಿ.ಆಮೇಲೆ ಚರ್ಚೆ ಮಾಡಿ. ಒಂದು ಭಾಷನವನ್ನು ತಮಗೆ ಬೇಕಾದಂತೆ ತಿರುಚಿ, ವಿವಾದ ಮಾಡಿ ಬೇಳೆ ಬೇಯಿಸಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಈ ಭಾಷಣ. ಯೂಟ್ಯುಬ್ ಇಲ್ಲದಿದ್ದರೆ ಎಷ್ಟೊ ಸತ್ಯಸಂಗತಿಗಳು ತಿಳಿಯುತ್ತಲೇ ಇರಲಿಲ್ಲ. ಮೀಡಿಯಾ ಮತ್ತು ರಾಜಕೀಯದವರು ಆಡಿದ್ದೇ ಆಟವಾಗಿರುತ್ತಿತ್ತು.
youtube.com/watch?v=DuFUsdTVHY4
ಅಂದರೇನು ನಿಮ್ಮ ಮಾತಿನ ಅರ್ಥ? ಉಳಿದವರು ಮಾತನಾಡಿದರೆ ಓಕೆ, ಒವೈಸಿ ಮಾತನಾಡಿದ್ದು ಮಾತ್ರ ಯಾಕೆ ಅಂತಲೋ?
ಯಾಕೆ ಅಂತೀರಾ? ಕೇಳಿ..ಅಕ್ಬರುದ್ದೀನ್ ಒವೈಸಿ ಮಾತನಾಡಿದ..ಅಕ್ಬರುದ್ದೀನ್ ಒವೈಸಿ ಅನುಭವಿಸಲಿ. ಯಾಕೆಂದರೆ ಆತನಿಗೆ ಭಾಷಣ ಮಾಡುವಾಗಲೇ ಗೊತ್ತಿತ್ತು, ಇದು ದ್ವೇಶಪೂರಿತ ..ಇನ್ನೊಂದು ಧರ್ಮದ ವಿರುದ್ಧ, ದೇಶದ ವಿರುದ್ಧ ,ಸಂವಿಧಾನದ ವಿರುದ್ಧ ಎಂದು. ಭಾಷಣದಲ್ಲಿ ತನಗೆ ಬಂಧನಕ್ಕೊಳಗಾಗುವುದರ ಬಗ್ಗೆ ಭಯವಿಲ್ಲ ಎಂದು ಕೊಚ್ಚಿಕೊಂಡು, ಚಪ್ಪಾಳೆ ಹೊಡೆಸಿಕೊಳ್ಳುವ ಈತ..ನಂತರ ಹೊಟ್ಟೆನೋವು,ಹರ್ನಿಯ ಎಂದೆಲ್ಲ ನಾಟಕ ಸುರು ಹಚ್ಚಿಕೊಂಡಿದ್ದು ಏಕೆ? ತನ್ನನ್ನು ತಾನು ‘ಶೇರ್ ಕಾ ಬಚ್ಚಾ’ ಅಂದುಕೊಳ್ಳುವ ಈತ ಬಿಲ ಸೇರಿಕೊಂಡಿದ್ದು ಏಕೆ? ಸ್ವಾಮಿ..ಈತ ಈ ತರಹದ ಭಾಷಣ ಹೊಡೆಯಲು ನಮ್ಮ-ನಿಮ್ಮಂತ ಸಾಮಾನ್ಯನಲ್ಲ, ಆಂದ್ರ ಶಾಸನ ಸಭೆಯ ಸದಸ್ಯ ತನಗೆ ಸಂವಿಧಾನಿಕ ಜವಾಬ್ದಾರಿ ಇದೆ ಎಂಬ ಎಚ್ಚರ ಈತನಲ್ಲಿ ಇರಬೇಕಾಗಿತ್ತು.
ಸರಿಯನ್ನು ಸರಿ, ತಪ್ಪನ್ನು ತಪ್ಪು ಎನ್ನೋಣ..ಅದಕ್ಕೆ ಜಾತಿ,ಧರ್ಮದ ಬಣ್ಣ ಕೊಡುವುದು ಬೇಕಾಗಿಲ್ಲ. ಸರಿಯಾದದದ್ದನ್ನು ತಿರುಚಲು ಯಾರಾದರೂ ಯತ್ನಿಸಿದರೆ ಪ್ರಶ್ನಿಸಲೇಬೇಕಾಗುತ್ತದೆ. ಮೋಹನ ಭಾಗ್ವತರ ‘ವಿವಾದಿತ’ ಭಾಷಣದ ಬಗ್ಗೆ ನನ್ನ ನಿಲುವು ಅಷ್ಟೆ. ಭಾಷಣ ಕೇಳಿ, ಅವರು ಹೇಳಿದ್ದಕ್ಕೂ, ಮಾಡಿದ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ. ಅವರು ಹೇಳಿದ್ದರಲ್ಲಿ ತಪ್ಪಿದ್ದರೆ ಪ್ರಶ್ನೆ ಕೇಳಿ. ಚರ್ಚಿಸೋಣ.
ಅಂತೆಯೇ, ಮೇಲೆ ಭದ್ರಾವತಿಯವರು ಕೊಟ್ಟ ಲಿಸ್ಟನಲ್ಲಿ ನನಗೆ ನರೇಂದ್ರ ಮೋದಿ ಬಿಟ್ಟು ಉಳಿದ ಯಾರ ಬಗ್ಗೆಯೂ ಯಾವುದೇ ಪ್ರೀತಿ ಇಲ್ಲ. ನಾನು ಮೋದಿ ಪರ. ಏಕೆಂದರೆ ಮೋದಿ ಅಭಿವೃದ್ಧಿ ಪರ. ಪ್ರಸ್ತುತದಲ್ಲಿ ದೇಶದ ಉಳಿದೆಡೆಯ ಮುಸ್ಲಿಂರನ್ನು ಮತ್ತು ಗುಜರಾತಿ ಮುಸ್ಲಿಂರನ್ನು ತುಲನೆಮಾಡಿ ನೋಡಿ. ಅಹ್ಮದಾಬಾದಿಗೆ ಹೋದರೆ ಮುಸ್ಲಿಂ ಗಲ್ಲಿಗಳಲ್ಲಿ ಸುತ್ತಾಡಿ. ವ್ಯತ್ಯಾಸ ನಿಮ್ಮ ಕಣ್ಣಿಗೆ ಕಾಣುತ್ತೆ.