ಅಯೋಧ್ಯೆ : ಸೆಕ್ಯುಲರ್ ಮಾರೀಚರಿಗೆ ಸುಪ್ರೀಂ ರಾಮಬಾಣ
– ರಾಕೇಶ್ ಶೆಟ್ಟಿ
ನವೆಂಬರ್ ೯,೨೦೧೯ರ ಶನಿವಾರದ ದಿನಕ್ಕೂ,ಸೆಪ್ಟಂಬರ್ ೩೦,೨೦೧೦ರ ಗುರುವಾರದ ದಿನಕ್ಕೂ ಸಾಮ್ಯತೆಯಿದೆ. ಆ ಎರಡು ದಿನಗಳು ೪೯೧ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿಯ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಕೇಸಿನ ತೀರ್ಪು ಬರುವ ದಿನಗಳಾಗಿದ್ದವು.
“ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ,ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ,ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು” ಎಂದು ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು ಯಾವ ಗುಂಪಿಗೂ ಒಪ್ಪಿಗೆಯಾಗಲಿಲ್ಲ.ಆ ನಂತರ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ,ಸುಪ್ರೀಂ ಕೋರ್ಟು,ಅಲಹಬಾದ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.
ಅದಾದ ನಂತರ ಈ ಕೇಸಿಗೆ ಪೂರಕವಾಗಿ ಬಂದ ಮತ್ತೊಂದು ಬಹುಮುಖ್ಯ ತೀರ್ಪು, 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಹಾಗೂ ಈ ವಿವಾದ ವಿಚಾರಣೆಗೆ ಸಾಂವಿಧಾನಿಕ ಪೀಠದ ಅಗತ್ಯವಿಲ್ಲ ಎನ್ನುವುದಾಗಿತ್ತು.
ಇದಾದ ನಂತರ ಅರ್ಜಿದಾರರು ಹಾಗೂ ಮಧ್ಯಸ್ಥಿಕೆದಾರರ ಜೊತೆಗೂಡಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೂ ಸುಪ್ರೀಂ ಕೋರ್ಟ್ ಮಾರ್ಚ್ ತಿಂಗಳಲ್ಲಿ ಅವಕಾಶ ನೀಡಿತ್ತು. ಅಂತಿಮವಾಗಿ ಸತತ ೪೦ ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿತ್ತು.ಕಡೆಯ ದಿನ ಮತ್ತಷ್ಟು ಸಮಯ ಕೋರಿದ ಅರ್ಜಿದಾರರಿಗೆ,ಮುಖ್ಯನ್ಯಾಯ ಮೂರ್ತಿಗಳಾದ ರಂಜನ್ ಗೋಗೋಯ್ ಅವರು ‘Enough is Enough’ ಎಂದಿದ್ದರು.ಎಲ್ಲರ ಚಿತ್ತ ನವೆಂಬರ್ ತಿಂಗಳಲ್ಲಿ ಬರಲಿರುವ ತೀರ್ಪಿನ ಮೇಲೆಯೇ ಇತ್ತು. ನವೆಂಬರ್ ೯ನೇ ತಾರೀಕು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ವಿವಾದಿತ ೨.೨೭ ಎಕರೆ ಜಾಗವು ರಾಮ್ ಲಲ್ಲಾನಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪಿತ್ತಿದೆ. ಸುನ್ನಿ ವಕ್ಫ್ ಬೋರ್ಡಿಗೆ ಬೇರೆ ಜಾಗದಲ್ಲಿ ೫ ಎಕರೆ ಭೂಮಿಯನ್ನು ಇನ್ನು ೩-೪ ತಿಂಗಳಲ್ಲಿ ನೀಡುವಂತೆಯೂ ಸೂಚಿಸಿದೆ. ಮಂದಿರ ನಿರ್ಮಾಣದ ಹೊಣೆಯನ್ನು ಹಾಗೂ ನಿರ್ವಹಣೆಗಾಗಿ ಟ್ರಸ್ಟ್ ರಚನೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದೆ.ಬಾಬ್ರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಕೋರ್ಟ್ ಒಪ್ಪಿದೆಯಾದರೂ, ಮಂದಿರವನ್ನು ಕೆಡವಿ ಕಟ್ಟಿರುವುದುಕ್ಕೆ ಪುರಾವೆ ಇಲ್ಲವೆಂದಿದೆ.ಹಾಗೆಯೇ ಮಸೀದಿಯ ಕೆಳಗೆ ಎಎಸ್ಐ ಉತ್ಖನನ ನಡೆಸಿ ನೀಡಿದ ವರದಿಯನ್ನು ಪುರಸ್ಕರಿಸಿ ಅಲ್ಲಿ ಇಸ್ಲಾಮೇತರ ಮಂದಿರದ ಅವಶೇಷ ಸಿಕ್ಕಿರುವುದನ್ನು ಒಪ್ಪಿಕೊಂಡಿದೆ. ಜೊತೆಗೆ ವಿವಾದಿತ ಜಾಗವು ರಾಮ ಜನ್ಮಸ್ಥಳ ಎನ್ನುವ ಹಿಂದೂಗಳ ವೈಯುಕ್ತಿಕ ನಂಬಿಕೆಯು ವಿವಾದರಹಿತವಾದದ್ದು ಎಂದಿದೆ.ಇದಿಷ್ಟು ತೀರ್ಪಿನ ಸಾರಾಂಶ.
ಅಥೆನ್ಸ್‌ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ
– ಸಂತೋಷ್ ತಮ್ಮಯ್ಯ
ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.
ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.
ಪರ್ವ-40; ಪತ್ರಿಕೆಗಳಿಗೆ ಮರೆತುಹೋಯಿತೆ?
– ಎಂ.ಎ. ಶ್ರೀರಂಗ
ಸೃಜನಶೀಲ ಪ್ರತಿಭೆಯ ಸಾಹಸ ಎನ್ನಬಹುದಾದ ಭೈರಪ್ಪನವರ ಪರ್ವ ಕಾದಂಬರಿ(ವ್ಯಾಸರು ಸಂಸ್ಕೃತದಲ್ಲಿ ಬರೆದಿದ್ದ ಮಹಾಭಾರತವನ್ನು ಆಧರಿಸಿ ಬರೆದದ್ದು) ಪ್ರಕಟವಾಗಿ ನಲವತ್ತು ವರ್ಷಗಳಾಯಿತು. ನಮ್ಮ ಪತ್ರಿಕೆಗಳಿಗೆ ಇದರ ಜ್ಞಾಪಕ ಬರಲಿಲ್ಲವೆ? ಇನ್ನು ನನ್ನಂತಹ ಹವ್ಯಾಸಿಗಳು ಬರೆದ ಲೇಖನಗಳು ಪತ್ರಿಕೆಗಳ ಸಂಪಾದಕರ ಕಸದ ಬುಟ್ಟಿ ಸೇರಿವೆ. ನನ್ನ ಇನ್ನೊಬ್ಬ ಸ್ನೇಹಿತರು ಬರೆಯುವ ಮುನ್ನ ಮಾಸ ಪತ್ರಿಕೆಯೊಂದರ ಸಂಪಾದಕರಿಗೆ ಸಂದರ್ಭ ವಿವರಿಸಿ ಒಂದು ಲೇಖನ ಬರೆದು ಕಳಿಸಲೆ ಎಂದು ಕೇಳಿದಾಗ ಮುಖಕ್ಕೆ ಹೊಡೆಯುವ ರೀತಿಯಲ್ಲಿ ‘ಬೇಡ’ ಎಂದರಂತೆ. ನಮ್ಮಂಥ ಹೆಸರಿಲ್ಲದವರು ಬರೆದಿದ್ದು ಪ್ರಕಟಣೆಗೆ ಅರ್ಹವಾಗಿಲ್ಲದಿದ್ದರೆ ಬೇಡ. ಕೊನೆಯ ಪಕ್ಷ ನಾವುಗಳು ಒಂದು ಸಂದರ್ಭವನ್ನು ಜ್ಞಾಪಿಸಿದೆವು; ಚೆನ್ನಾಗಿ ಬರೆಯುವವರಿಂದಲೇ ಬರೆಸಬಹುದಾಗಿತ್ತು. ಅದೂ ಮಾಡಲಿಲ್ಲ. ಏಕೆ? ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎಂಬುದೇ ಶಾಪವಾಗಿಹೋಗಿದೆಯೇನೋ? ಅವರ ಕೃತಿಗಳ ಬಗ್ಗೆ ಏನು ಬರೆಸುವುದು ಎಂಬ ಉಢಾಫೆಯ ಧೋರಣೆಯನ್ನು ಇದು ತೋರಿಸುತ್ತದೆ ಅಲ್ಲವೇ? ನಮ್ಮ ಕನ್ನಡ ವಿಮರ್ಶಕರು, ಲೇಖಕರು ಕೇವಲ ಮೂರ್ನಾಲಕ್ಕು ಕಾದಂಬರಿಗಳನ್ನು ‘ಈ ಶತಮಾನದ ಅದ್ಭುತ ಕೃತಿಗಳು’ ಎಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ.
ಭೈರಪ್ಪನವರ ‘ಪರ್ವ’ದ ಬಗ್ಗೆ ಬರೆಯುವುದು ಅವರುಗಳ ಘನತೆಗೆ, ಸಮಾಜಮುಖಿ ಚಿಂತನೆಗಳಿಗೆ ಕೊನೆಗೆ ಅವರ ಲೇಖನಿಗೆ ಕೂಡ ಅವಮಾನ ಎಂದು ಭಾವಿಸಿರಬಹುದು. ‘ಪರ್ವ: ಒಂದು ಸಮೀಕ್ಷೆ’ (ಸಂ|| ವಿಜಯಾ :ಮೊದಲ ಮುದ್ರಣ 1983) ಒಂದೇ ಈಗ ಕನ್ನಡದಲ್ಲಿ ಪರ್ವದ ಬಗ್ಗೆ ಬಂದಿರುವ ಪ್ರಾತಿನಿಧಿಕ ಎನ್ನಬಹುದಾದ ಲೇಖನಗಳ ಸಂಗ್ರಹ. ಪರ್ವ ಪ್ರಕಟವಾದ ನಾಲ್ಕು ವರ್ಷಗಳ ನಂತರ ಪ್ರಕಟವಾಗಿದ್ದು. ಅದರ ಮುನ್ನುಡಿಯಲ್ಲಿ ವಿಜಯಾ ಅವರು ‘ ……’ಪರ್ವ’ ಕುರಿತ ಚರ್ಚೆ ಇನ್ನೂ ವ್ಯಾಪಕವಾಗಬೇಕಿತ್ತು. ಆಗಲಿಲ್ಲ. ಜನ ಮರೆತೂಬಿಟ್ಟರು ಅನ್ನಿಸುತ್ತದೆ. ಅಲ್ಲವೆ?’ ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯಲೋಕದ ನಾಡಿ ಮಿಡಿತವನ್ನು ಅವರು ಆಗಲೇ ಅರಿತಿದ್ದರು ಅನ್ನಿಸುತ್ತದೆ. ಆದರೆ ಒಂದೇ ಸಮಾಧಾನವೆಂದರೆ ಪರ್ವ ಕಾದಂಬರಿ ಇದುವರೆಗೆ 20 ಸಲ ಮರುಮುದ್ರಣವಾಗಿದೆ. ಓದುಗರು ಕೊಂಡು ಓದಿದ್ದಾರೆ. ಅದೇ ಸಮಾಧಾನ.