ಪರ್ವ-40; ಪತ್ರಿಕೆಗಳಿಗೆ ಮರೆತುಹೋಯಿತೆ?
– ಎಂ.ಎ. ಶ್ರೀರಂಗ
ಸೃಜನಶೀಲ ಪ್ರತಿಭೆಯ ಸಾಹಸ ಎನ್ನಬಹುದಾದ ಭೈರಪ್ಪನವರ ಪರ್ವ ಕಾದಂಬರಿ(ವ್ಯಾಸರು ಸಂಸ್ಕೃತದಲ್ಲಿ ಬರೆದಿದ್ದ ಮಹಾಭಾರತವನ್ನು ಆಧರಿಸಿ ಬರೆದದ್ದು) ಪ್ರಕಟವಾಗಿ ನಲವತ್ತು ವರ್ಷಗಳಾಯಿತು. ನಮ್ಮ ಪತ್ರಿಕೆಗಳಿಗೆ ಇದರ ಜ್ಞಾಪಕ ಬರಲಿಲ್ಲವೆ? ಇನ್ನು ನನ್ನಂತಹ ಹವ್ಯಾಸಿಗಳು ಬರೆದ ಲೇಖನಗಳು ಪತ್ರಿಕೆಗಳ ಸಂಪಾದಕರ ಕಸದ ಬುಟ್ಟಿ ಸೇರಿವೆ. ನನ್ನ ಇನ್ನೊಬ್ಬ ಸ್ನೇಹಿತರು ಬರೆಯುವ ಮುನ್ನ ಮಾಸ ಪತ್ರಿಕೆಯೊಂದರ ಸಂಪಾದಕರಿಗೆ ಸಂದರ್ಭ ವಿವರಿಸಿ ಒಂದು ಲೇಖನ ಬರೆದು ಕಳಿಸಲೆ ಎಂದು ಕೇಳಿದಾಗ ಮುಖಕ್ಕೆ ಹೊಡೆಯುವ ರೀತಿಯಲ್ಲಿ ‘ಬೇಡ’ ಎಂದರಂತೆ. ನಮ್ಮಂಥ ಹೆಸರಿಲ್ಲದವರು ಬರೆದಿದ್ದು ಪ್ರಕಟಣೆಗೆ ಅರ್ಹವಾಗಿಲ್ಲದಿದ್ದರೆ ಬೇಡ. ಕೊನೆಯ ಪಕ್ಷ ನಾವುಗಳು ಒಂದು ಸಂದರ್ಭವನ್ನು ಜ್ಞಾಪಿಸಿದೆವು; ಚೆನ್ನಾಗಿ ಬರೆಯುವವರಿಂದಲೇ ಬರೆಸಬಹುದಾಗಿತ್ತು. ಅದೂ ಮಾಡಲಿಲ್ಲ. ಏಕೆ? ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎಂಬುದೇ ಶಾಪವಾಗಿಹೋಗಿದೆಯೇನೋ? ಅವರ ಕೃತಿಗಳ ಬಗ್ಗೆ ಏನು ಬರೆಸುವುದು ಎಂಬ ಉಢಾಫೆಯ ಧೋರಣೆಯನ್ನು ಇದು ತೋರಿಸುತ್ತದೆ ಅಲ್ಲವೇ? ನಮ್ಮ ಕನ್ನಡ ವಿಮರ್ಶಕರು, ಲೇಖಕರು ಕೇವಲ ಮೂರ್ನಾಲಕ್ಕು ಕಾದಂಬರಿಗಳನ್ನು ‘ಈ ಶತಮಾನದ ಅದ್ಭುತ ಕೃತಿಗಳು’ ಎಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ.
ಭೈರಪ್ಪನವರ ‘ಪರ್ವ’ದ ಬಗ್ಗೆ ಬರೆಯುವುದು ಅವರುಗಳ ಘನತೆಗೆ, ಸಮಾಜಮುಖಿ ಚಿಂತನೆಗಳಿಗೆ ಕೊನೆಗೆ ಅವರ ಲೇಖನಿಗೆ ಕೂಡ ಅವಮಾನ ಎಂದು ಭಾವಿಸಿರಬಹುದು. ‘ಪರ್ವ: ಒಂದು ಸಮೀಕ್ಷೆ’ (ಸಂ|| ವಿಜಯಾ :ಮೊದಲ ಮುದ್ರಣ 1983) ಒಂದೇ ಈಗ ಕನ್ನಡದಲ್ಲಿ ಪರ್ವದ ಬಗ್ಗೆ ಬಂದಿರುವ ಪ್ರಾತಿನಿಧಿಕ ಎನ್ನಬಹುದಾದ ಲೇಖನಗಳ ಸಂಗ್ರಹ. ಪರ್ವ ಪ್ರಕಟವಾದ ನಾಲ್ಕು ವರ್ಷಗಳ ನಂತರ ಪ್ರಕಟವಾಗಿದ್ದು. ಅದರ ಮುನ್ನುಡಿಯಲ್ಲಿ ವಿಜಯಾ ಅವರು ‘ ……’ಪರ್ವ’ ಕುರಿತ ಚರ್ಚೆ ಇನ್ನೂ ವ್ಯಾಪಕವಾಗಬೇಕಿತ್ತು. ಆಗಲಿಲ್ಲ. ಜನ ಮರೆತೂಬಿಟ್ಟರು ಅನ್ನಿಸುತ್ತದೆ. ಅಲ್ಲವೆ?’ ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯಲೋಕದ ನಾಡಿ ಮಿಡಿತವನ್ನು ಅವರು ಆಗಲೇ ಅರಿತಿದ್ದರು ಅನ್ನಿಸುತ್ತದೆ. ಆದರೆ ಒಂದೇ ಸಮಾಧಾನವೆಂದರೆ ಪರ್ವ ಕಾದಂಬರಿ ಇದುವರೆಗೆ 20 ಸಲ ಮರುಮುದ್ರಣವಾಗಿದೆ. ಓದುಗರು ಕೊಂಡು ಓದಿದ್ದಾರೆ. ಅದೇ ಸಮಾಧಾನ.