ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ
– ಡಾ. ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.
ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.