ದನಗಾಹಿ ಬಾಲಕ ರಾಷ್ಟ್ರರಥ ಚಾಲಕನಾದಲ್ಲಿ ಇದರಲ್ಲೇನಿದೆ ಅಚ್ಚರಿ?
– ಸಂತೋಷ್ ತಮ್ಮಯ್ಯ
ಆಚಾರ್ಯ ಚಾಣಕ್ಯರಿಗೆ ಚಂದ್ರಗುಪ್ತ ಮೌರ್ಯ ಸಿಗುವವರೆಗೂ ಆತ ಯಕಶ್ಚಿತ್ ಒಬ್ಬ ದನಗಾಹಿ ಬಾಲಕ. ವಿದ್ಯಾರಣ್ಯರು ಭೇಟಿಯಾಗುವವರೆಗೂ ಹಕ್ಕ-ಬುಕ್ಕರು ಗುರಿ ಇಲ್ಲದೆ ಕಾಡುಮೇಡುಗಳನ್ನು ಅಲೆಯುತ್ತಿದ್ದ ವೀರರು. ಅಷ್ಟೇ ಏಕೆ? ಸುದತ್ತ ಮುನಿಗಳು “ಪೊಯ್ ಸಳ” ಎನ್ನುವವರೆಗೂ ಸಳನೆಂಬವನು ಇನ್ನೂ ಹಾಲುಗಲ್ಲದ ಬಾಲಕ. ಗುರುಗೋವಿಂದ ಸಿಂಹರು ಬಲಿದಾನಕ್ಕೆ ಕರೆ ನೀಡದೇ ಇರುತ್ತಿದ್ದರೆ ‘ಪಂಚಪ್ಯಾರೇ’ಗಳೂ ಹುಟ್ಟುತ್ತಿರಲಿಲ್ಲ, ವೀರ ಖಾಲ್ಸಾ ಪರಂಪರೆಯೂ ಮುಂದುವರಿತ್ತಿರಲಿಲ್ಲ. ಹೀಗೆ ಭಾರತದ ಪ್ರತೀಯೊಂದು ಪರಂಪರೆಯ, ಪ್ರತೀಯೊಂದು ಸಂಸ್ಥಾನಗಳ, ಪ್ರತೀಯೊಂದು ರಾಜ ಮನೆತನಗಳ, ಪ್ರತೀಯೊಂದು ಚರಿತ್ರೆಯ ಹಿಂದೆ ಇಂಥದ್ದೊಂದು ವಿಶೇಷತೆ ಇದ್ದೇ ಇರುತ್ತದೆ. ಹಾಗಾಗಿ ನಮಗೆ ಕೃಷ್ಣದೇವರಾಯನಂತೆ ಆತನ ತಂದೆಯ ಹೆಸರು ಗೊತ್ತಿಲ್ಲ, ವಿಕ್ರಮಾತ್ಯನ ಅಪ್ಪನ ಹೆಸರೂ ತಿಳಿದಿಲ್ಲ! ಚರಿತ್ರೆಯೂ ಅವರ ಹೆಸರನ್ನು ಒಡಲಲ್ಲಿಟ್ಟುಕೊಂಡಿಲ್ಲ. ಅದಕ್ಕೆ ಅದನ್ನು ನೆನಪಿಟ್ಟುಕೊಳ್ಳುವ ಆವಶ್ಯಕತೆಯೇ ಬಂದಿಲ್ಲ. ಏಕೆಂದರೆ ಭಾರತವೆಂಬ ಈ ನೆಲ ದನಗಾಹಿ ಬಾಲಕರನ್ನೇ ರಾಷ್ಟ್ರರಥ ಚಾಲಕರನ್ನಾಗಿ ಮಾಡಿದ್ದೇ ಹೆಚ್ಚು. ಮತ್ತು ಹಾಗೆ ಮಾಡಿದ ಜಗತ್ತಿನ ಮೊದಲ ಹಾಗೂ ಅಪರೂಪದ ನೆಲ ಈ ಭಾರತ. ಇಂಥ ಪರಂಪರೆ ಕಾಲಕಾಲಕ್ಕೆ ಮುಂದುವರಿಯುತ್ತಾ ಅವಿಚ್ಛಿನ್ನವಾಗಿ ಬಂದಿದೆ ಎನ್ನುವುದೂ ಈ ನೆಲದ ಇನ್ನೊಂದು ವಿಶೇಷತೆ. ಭಾರತವನ್ನು ಭಾರತವನ್ನಾಗಿ ಉಳಿಸಿದ್ದು ಕೂಡಾ ನೆಲದ ಈ ಗುಣವೇ ಎಂಬುದಕ್ಕೆ ಇಲ್ಲಿ ಸಾಕ್ಷಿಗಳು ಕೂಡಾ ಹಲವು.
ಆಧುನಿಕ ರಾಜಕಾರಣದಲ್ಲಿ ಮೊನ್ನೆ ನಡೆದ ವಿದ್ಯಮಾನವೊಂದು ಅಂಥ ಪರಂಪರೆ ಮುಂದುವರಿಯುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ಮಾತ್ರ. ಅಂಥಲ್ಲಿ ಭಾರತೀಯ ಜನತಾ ಪಕ್ಷ ತನ್ನ ಇಬ್ಬರು ಅನಾಮಿಕ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ ಎಂದಾಗ ಅದರಲ್ಲಿ ಮಹದಾಶ್ಚರ್ಯ ಪಡುವಂಥಾದ್ದೇನಿದೆ? ಭಾರತದ ಪರಂಪರೆ ಇರುವುದೇ ಹಾಗೆ ಮತ್ತು ಅಂಥದ್ದೇ ಪರಂಪರೆಯ ಮುಂದುವರಿಕೆಗಾಗಿ ಸ್ಥಾಪನೆಯಾದ ಪಕ್ಷವೊಂದು ತನ್ನ ಸಿದ್ಧಾಂತದ ಆಧಾರದಲ್ಲಿ ಅಂಥದ್ದೊಂದು ನಿರ್ಣಯವನ್ನು ಕೈಗೊಂಡಾಗ ಅಪಾರ್ಥವನ್ನೂ, ಗೊಂದಲವನ್ನೂ ಕಲ್ಪಿಸುವ ಅಗತ್ಯವೇನಿದೆ? ಬಿಜೆಪಿಯಂಥಾ ಪಕ್ಷ ತನ್ನ ಅನಾಮಿಕ-ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುವುದು ಯಾವ ಕೋನದಲ್ಲಿ ಒಬ್ಬ ನಾಯಕ, ಮತ್ತೊಬ್ಬ ನಾಯಕನ ಮೇಲೆ ಹೂಡಿದ ವಿಷ ಬಾಣವಾಗುತ್ತದೆ? ಯಾವ ರೀತಿಯಲ್ಲಿ ಅದು ಸೇಡು ತೀರಿಸಿಕೊಂಡಂತಾಗುತ್ತದೆ? ಬಹುಶಃ ಆಧುನಿಕ ರಾಜಕಾರಣವನ್ನು ಕಾಂಗ್ರೆಸ್ ಕಣ್ಣಿನಿಂದ ನೋಡುವವರಿಗೆ ಹೀಗನ್ನಿಸಬಹುದೇನೋ! ಆದರೆ ವಾಸ್ತವದಲ್ಲಿ ಈ ನಿರ್ಣಯ ಭಾರತೀಯ ಪರಂಪರೆಯ ಮೂಲ ಪಾಠವನ್ನು ಕೊಂಚವಾದರೂ ಅರಿತವರಿಗೆ ಅಚ್ಚರಿಯೆನಿಸುವುದಿಲ್ಲ. ಯಾರಿಗೆ ಯಾರೂ ಬಾಣ ಹೂಡಿದಂತೆಯೂ ಅನಿಸುವುದಿಲ್ಲ. ಅಸಲಿಗೆ ಭಾರತೀಯ ಜನತಾ ಪಕ್ಷದ ಹುಟ್ಟೇ ಹಾಗಿಲ್ಲ. ಆ ಮೂಲ ‘ಆನಂದ ಭವನ’ವನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ್ದರೆಂಬ ಒಂದೇ ಕಾರಣಕ್ಕೆ ಮಗನನ್ನು, ಮೊಮ್ಮಗಳನ್ನು, ಮರಿಮಕ್ಕಳನ್ನು ಪ್ರಧಾನಮಂತ್ರಿಗಳಾಗಿ ಮಾಡುವ ಉದ್ದೇಶದಂತಲ್ಲ ಎಂಬುದನ್ನು ರಾಜಕೀಯ ವಿಶ್ಲೇಷಕರು ಅರ್ಥೈಸಿಕೊಳ್ಳಬೇಕಿತ್ತು. ಆದರೆ ಮಹಾ ಭಯಂಕರವೆಂದುಕೊಳ್ಳುವ ವಿಶ್ಲೇಷಕರುಗಳು ಅದನ್ನರಿಯುವಲ್ಲೇ ಎಡವಿದರು. ವಿಶ್ಲೇಷಕರ ಅರಿವಿನ ಕೊರತೆಯನ್ನು ನೀಗಿಸಲು ಆಧುನಿಕ ರಾಜಕೀಯ ಚರಿತ್ರೆಯಲ್ಲೇ ಹಲವು ಸಾಕ್ಷಿಗಳಿವೆ.
ಇದು ಅಂಥಾ ಸಾಕ್ಷಿಗಳಲ್ಲೊಂದು.
1950ರಲ್ಲಿ ಕಟ್ಟರ್ ಕಾಂಗ್ರೆಸಿಗ, ಹಿರಿಯ ನಾಯಕ ಪುರುಷೋತ್ತಮದಾಸ್ ಟಂಡನ್ ಕಾಂಗ್ರೆಸಿನ ಅಧ್ಯಕ್ಷರಾದರು. ನೆಹರೂ ಜನಪ್ರೀಯತೆ, ಕಾಂಗ್ರೆಸಿನ ಅಸಾಧಾರಣವಾದ ಅಬ್ಬರದ ಅಲೆ ಇದ್ದರೂ ಟಂಡನ್ ಅವರು ರಾಜಕಾರಣದಲ್ಲಿ ಭಾರತೀಯತೆಯನ್ನು ಪ್ರತಿಪಾದಿಸುವ ಅಪರೂಪದ ನಾಯಕರಾಗಿದ್ದರು. ಗಾಂಧೀವಾದಿಗಳಾಗಿದ್ದ ಟಂಡನ್, ಗಾಂಧೀಜಿಯವರ “ವಿಭಿನ್ನ ವಿಚಾರಧಾರೆಯ ಹಲವು ಪಕ್ಷಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ” ಎಂಬ ವಿಚಾರದಲ್ಲಿ ನಂಬಿಕೆಯನ್ನಿರಿಸಿದ್ದರು. ಈ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಟಂಡನ್ ಆರೆಸ್ಸೆಸ್ ಸ್ವಯಂಸೇವಕರನ್ನು ಕಾಂಗ್ರೆಸಿನೊಳಗೆ ಸೇರಿಸಿಕೊಳ್ಳಬೇಕು ಎಂಬ ಪ್ರಸ್ಥಾವವನ್ನು ಮಂಡಿಸಿದ್ದರು. ಗಾಂಧಿ ಹಂತಕರೆಂಬ ವ್ಯರ್ಥಾರೋಪ ಮತ್ತು ನೆಹರೂ ನರಿಬುದ್ಧಿಯ ಕಾರಣದಿಂದ ಟಂಡನ್ ಅವರ ಪ್ರಸ್ಥಾವಕ್ಕೆ ಕಾಂಗ್ರೆಸಿನಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಸ್ವತಃ ನೆಹರೂ ಅವರೇ ಟಂಡನ್ ಅವರನ್ನು ಕಟುವಾಗಿ ಟೀಕಿಸಿದರು. ಇದರಿಂದ ಟಂಡನ್ ಎಷ್ಟೊಂದು ನೊಂದುಕೊಂಡರೆಂದರೆ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿ ರಾಜಕೀಯ ಸನ್ಯಾಸಕ್ಕೆ ಹೊರಟುಹೋದರು.
ಅಲ್ಲಿಗೆ ರಾಜಕೀಯದಲ್ಲೂ ಭಾರತೀಯತೆ ಇರಬೇಕೆನ್ನುತ್ತಿದ್ದ ಆರೆಸ್ಸೆಸ್ಸಿಗೆ ಕಾಂಗ್ರೆಸಿನ ಬಾಗಿಲು ಶಾಶ್ವತವಾಗಿ ಮುಚ್ಚಿತು.
ಸರಿಯಾಗಿ ಅದೇ ಸಮಯದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರೂ, ಕೇಂದ್ರ ಸಚಿವರೂ ಆಗಿದ್ದ ಡಾ।। ಶಾಮಪ್ರಸಾದ್ ಮುಖರ್ಜಿಯವರಿಗೂ ಕಾಂಗ್ರೆಸಿನಲ್ಲಿ ವಂಶವಾದವೆಂಬುದು ಅಂಟುಜಾಡ್ಯವಾಗಿ ಬಹುವರ್ಷಗಳ ಕಾಲ ಕಾಡಲಿದೆ ಎಂಬ ವಾಸನೆ ಹತ್ತಿತು. ಅವರೂ ಕಾಂಗ್ರೆಸಿಗೆ ರಾಜಿನಾಮೆ ನೀಡಿ ನೇರ ಬಂದಿದ್ದು ನಾಗಪುರದ ಸಂಘದ ಅಂಗಳಕ್ಕೆ. ಎಲ್ಲಾ ಕ್ಷೇತ್ರಗಳಲ್ಲಿ ರಾಷ್ಟ್ರೀಯತೆ ವ್ಯಾಪಿಸಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಸಂಘದ ಅಂದಿನ ಸರಸಂಘಚಾಲಕ್ ಗುರೂಜಿ ಗೋಳ್ವಾಲ್ಕರ್ ರೊಡನೆ ಮಾತುಕತೆ ನಡೆಸಿದ ಮುಖರ್ಜಿಯವರಿಗೆ ದಾರಿಯೇನೋ ಸ್ಪಷ್ಟವಾಯಿತು. ಸಂಘದ ಬೆಂಬಲವೂ ಸಿಕ್ಕಿತು. ಆದರೆ ಅಧಿಕಾರದ ಮದ ಮತ್ತು ಶ್ರೀಮಂತ ರಾಜಕಾರಣದ ಅಬ್ಬರದೆದುರಲ್ಲಿ ಸೆಣಸಬಲ್ಲ ಕಾರ್ಯಕರ್ತರು ಮತ್ತು ನಾಯಕರನ್ನೆಲ್ಲಿ ತರುವುದೆಂಬ ಬೃಹದಾಕಾರದ ಪ್ರಶ್ನೆಯೊಂದು ಎದುರಾಯಿತು. ಅದಕ್ಕೂ ಗುರೂಜಿಯವರ ಬಳಿ ಉತ್ತರವಿತ್ತು. ಅವರು ಕೆಲ ಸ್ವಯಂಸೇವಕರನ್ನು ಮುಖರ್ಜಿಯವರೊಡನೆ ಕೆಲಸ ಮಾಡಲು ಸೂಚಿಸಿದರು. ಆದರೆ ಅವರಾರಿಗೂ ರಾಜಕಾರಣದ ಗಂಧಗಾಳಿಯೇ ತಿಳಿದಿರಲಿಲ್ಲ. ಮುಖರ್ಜಿಯವರಾದರೋ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು, ಅಲ್ಲದೆ ಮಂತ್ರಿಗಳಾಗಿದ್ದವರು! ಆದರೆ ಅವರ ಹಿಂದಿರುವವರು ರಾಜಕಾರಣದ L ಬೋರ್ಡುಗಳು! ಅಂದು ಗುರೂಜಿಯವರು ಹಾಗೆ ಕಳುಹಿಸಿದ ಸ್ವಯಂಸೇವಕರಲ್ಲೊಬ್ಬರು ಪಂ.ದೀನದಯಾಳ ಉಪಾಧ್ಯಾಯರು. ವೈಯಕ್ತಿಕ ಬದುಕೆಂಬುದೇ ಇಲ್ಲದ, ಉಟ್ಟಬಟ್ಟೆಯೊಂದನ್ನು ಬಿಟ್ಟು ಬೇರೇನೂ ಇಲ್ಲದ, ಸಂಘದ ಶಾಖೆಯಲ್ಲಿ ಮಕ್ಕಳೊಡನಾಡುತ್ತಿದ್ದ ದೀನದಯಾಳರು ಮುಖರ್ಜಿಯವರ ಜೊತೆ ಕೆಲಸ ಮಾಡಲು ಹೋದಾಗ ಅಹಂಕಾರಿ ಕಾಂಗ್ರೆಸಿಗರು ಮತ್ತು ಮಾತಿನಲ್ಲಿ ಚತುರರಾಗಿದ್ದ ಕಮ್ಯುನಿಸ್ಟರು ಅಂದು ಹೇಗೆ ಹಂಗಿಸಿದ್ದರೆಂದರೆ ಇಂದು ಗಸ್ತಿ ಮತ್ತು ಕಡಾಡಿಯವರನ್ನು ಬಿಜೆಪಿ ರಾಜ್ಯಸಭೆಗೆ ಕಳುಹಿಸಲಿದೆ ಎಂದಾಗ ಹಂಗಿಸಿದಂತೆ!
ಅಂದು ಗುರೂಜಿಯವರು ಕೈಗೊಂಡ ನಿರ್ಧಾರ ಎಷ್ಟೊಂದು ಕಠೋರವಾಗಿತ್ತೆಂದರೆ, ಸ್ವತಃ ದೀನದಯಾಳರಿಗೇ ಅಳುಕು ಆರಂಭವಾಗತೊಡಗಿತ್ತು. ದೀನದಯಾಳರಿಗೆ ತಮ್ಮ ಮಿತಿಯ ಅರಿವಿತ್ತು. ಅದನ್ನು ನೇರ ಗುರೂಜಿಯವರಲ್ಲೇ ಹೇಳಿಕೊಂಡರು. “ನಾನೊಬ್ಬ ಸಂಘದ ಪ್ರಚಾರಕ, ನನಗೆ ರಾಜಕೀಯದ ಬಗ್ಗೆ ಏನೆಂದರೆ ಏನೂ ತಿಳಿಯದು. ಅಲ್ಲಿ ನಾನೇನನ್ನು ತಾನೇ ಮಾಡಬಲ್ಲೆ?” ಅದಕ್ಕೆ ಗುರೂಜಿಯವರ ಉತ್ತರ ಹೀಗಿತ್ತು, “ನಿನಗೆ ರಾಜಕೀಯದ ಬಗ್ಗೆ ಏನೂ ತಿಳಿಯದೆಂದೇ ನಿನ್ನನ್ನು ಅಲ್ಲಿಗೆ ಕಳುಹಿಸುತ್ತಿರುವೆ!”
ಪರಿವ್ರಾಜಕನಿಗೆ ಯಾವ ಕ್ಷೇತ್ರವಾದರೇನು? ರಾಜಕೀಯದ ಬಗ್ಗೆ ಏನನ್ನೂ ತಿಳಿಯದಿದ್ದ ದೀನದಯಾಳರು ಒಂದೂವರೆ ವರ್ಷದಲ್ಲಿ ಹೇಗೆ ಬೆಳೆದರೆಂದರೆ 1952ರಲ್ಲಿ ಜನಸಂಘದ ಪ್ರಧಾನ ಕಾರ್ಯದರ್ಶಿಯಾದರು, ಇತಿಹಾಸಕಾರರಾದರು, ಶಿಕ್ಷಣ ತಜ್ಞರಾದರು, ವಿದೇಶಾಂಗ ನೀತಿನಿಪುಣರಾದರು, ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡುವಂಥಾದರು, ಸಂಘಟನಾ ಕುಶಲರಾದರು. ಸ್ವತಃ ಮುಖರ್ಜಿಯವರೇ “ನನಗೇನಾದರೂ ಇಬ್ಬರು ದೀನದಯಾಳರು ಸಿಗುವುದಾದರೆ ನಾನು ಭಾರತದ ನಕಾಶೆಯನ್ನೇ ಬದಲಿಸುತ್ತೇನೆ” ಎಂದರು.
ದೀನದಯಾಳರು ರಾಜಕಾರಣದಲ್ಲಿ ಸಾಂಸ್ಕೃತಿಕ ರಾಯಭಾರಿಯಾದರು. ಎಲ್ಲಾ ಕಾಲಕ್ಕೂ ರಾಜಕಾರಣದಲ್ಲಿರಲೇಬೇಕಾದ ಒಂದು ಸ್ಥಾನವನ್ನು ಅವರು ಅಂದು ತುಂಬಿದ್ದರು. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜೌನ್ ಪುರದಲ್ಲಿ ಸ್ಪರ್ಧಿಸಿದಾಗ ರಜಪೂತರ ವಿರುದ್ಧ ಬ್ರಾಹ್ಮಣರನ್ನು ಎತ್ತಿಕಟ್ಟಿ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರವನ್ನು ಸೋತು ಸಿದ್ಧಾಂತವನ್ನು ಗೆಲ್ಲಿಸಿದ್ದರು. ಜನಸಂಘ ಉಳಿದ ಪಕ್ಷಗಳ ರಾಜಕಾರಣಕ್ಕಿಂತ ಸಂಪೂರ್ಣ ವಿಭಿನ್ನ ಎಂಬುದನ್ನು ನಿರೂಪಿಸಿದರು. ಅಂಥಾ ಹಿನ್ನೆಲೆಯ ಸಿದ್ಧಾಂತ ಭಾರತೀಯ ಜನತಾ ಪಕ್ಷದಲ್ಲಿ ಗುಪ್ತಗಾಮಿಯಂತೆ ಹರಿಯುತ್ತದೆ ಎಂಬುದಕ್ಕೆ ರಾಜ್ಯಸಭೆಗೆ ಆರಿಸಿದ ಅಭ್ಯರ್ಥಿಗಳ ಪ್ರಕರಣ ಉದಾಹರಣೆ ಎನಿಸುವುದಿಲ್ಲವೇ? ಎನಿಸಿದರೂ ಕೆಲವರಿಗೆ ಅದನ್ನು ಒಪ್ಪಿಕೊಳ್ಳಲೇಕೆ ಕಷ್ಟವಾಗುತ್ತಿದೆ? ಗಸ್ತಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ, ಕರ್ನಾಟಕದಲ್ಲಿ ಸವಿತಾ ಸಮಾಜ ಯಾವುದೇ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಲ್ಲ. ಬಿಜೆಪಿಗೆ ಸವಿತಾ ಸಮಾಜವನ್ನು ಓಲೈಸುವ ಅನಿವಾರ್ಯತೆಯೇ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಗಸ್ತಿಯವರನ್ನು ಯಾವುದೋ ಪ್ರಾಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೈತೊಳೆದುಕೊಳ್ಳಬಹುದಿತ್ತು. ಆದರೆ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿ ದೀನದಯಾಳರು ರೂಪಿಸಿದ ಸಂಹಿತೆಯನ್ನು ಪಾಲಿಸಿತು.
ನಿಜ, ದೀನದಯಾಳರ ಕಾಲಾನಂತರ ಭಾರತೀಯ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. ಕಾಂಗ್ರೆಸ್ ನಿರ್ಮಿಸಿದ ರಾಜಕಾರಣದ ನೆಲೆಗಟ್ಟು ರಾಜಕಾರಣದ ಮೇಲೆ ಅದೆಷ್ಟು ಪ್ರಭಾವವನ್ನು ಬೀರಿದೆಯೆಂದರೆ ಕ್ರಮೇಣ ಉಳಿದ ಪಕ್ಷಗಳೂ ಕಾಂಗ್ರೆಸಿನಂತೆಯೇ ಯೋಚಿಸಲಾರಂಭಿಸಿದವು. ಕುದುರೆ ರೇಸಿನಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬಾಜಿ ಕಟ್ಟುವಂತೆ ಎಲ್ಲಾ ಪಕ್ಷಗಳೂ ಗೆಲ್ಲುವ ಕುದುರೆಯ ಹಿಂದೋಡಿದವು. ರಾಜಕಾರಣದಲ್ಲಿ ಸಾಂಸ್ಕೃತಿಕತೆಗಿಂತ ಸಂಖ್ಯಾಬಲವೇ ಮುಖ್ಯ ಎಂಬುದು ಬಲವಾಯಿತೋ ಅದರೊಂದಿಗೆ ವ್ಯಕ್ತಿಪೂಜೆಯೂ ಪುಕ್ಕಟೆಯಾಗಿ ಬಂದವು. ಅಂದು ಜೌನ್‌ಪುರದಲ್ಲಿ ಗೆದ್ದ ಸಿದ್ಧಾಂತ ಜಾತಿ-ಪ್ರಾದೇಶಿಕತೆ-ವಂಶವಾದದೆದುರಲ್ಲಿ ಮಕಾಡೆ ಮಲಗಿತೋ ಎಂದು ಕಾರ್ಯಕರ್ತರು ಮರುಕಪಟ್ಟರು. ಪುಣ್ಯವಶಾತ್ ಬಿಜೆಪಿಯಂಥಾ ಪಕ್ಷ ಇತರರಂತೆ ಸಂಪೂರ್ಣ ಕೆಟ್ಟುಹೋಗುವ ಪಕ್ಷವಲ್ಲ ಎಂಬುದನ್ನು ರಾಜ್ಯಸಭಾ ಅಭ್ಯರ್ಥಿ ಪ್ರಕರಣ ತೋರಿಸಿಕೊಟ್ಟಿದೆ. ಮತ್ತು ರಾಜಕಾರಣದ ಸಿದ್ಧ ಚೌಕಟ್ಟನ್ನು ಮುರಿಯಲು ಬಿಜೆಪಿಯಂಥಾ ಪಕ್ಷಕ್ಕೆ ಮಾತ್ರ ಸಾಧ್ಯ ಎಂಬ ಸಂದೇಶವನ್ನೂ ಈ ಘಟನೆ ನಿರೂಪಿಸಿದೆ. ನಾಯಕನಾದವನೊಬ್ಬನಲ್ಲಿ ನೈತಿಕತೆ, ನಿಸ್ವಾರ್ಥ ಗುಣಗಳಿದ್ದರೆ ಇಂಥವು ರಾಜಕಾರಣದಲ್ಲಿ ತನ್ನಿಂದ ತಾನೇ ಆರಂಭವಾಗುತ್ತವೆ. ಅಂಥಾ ನೈತಿಕತೆಯನ್ನು ವ್ಯಕ್ತಿ ನಿರ್ಮಾಣದ ಮೂಲಕ ಸೃಷ್ಟಿ ಮಾಡುವ ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ. ಹಾಗಾಗಿ ಈ ರಾಜ್ಯಸಭಾ ಸೀಟುಗಳು ಕೇವಲ ಲೆಕ್ಕಾಚಾರದ ಸಂಗತಿಯಾಗಿ ಮಾತ್ರ ಕಾಣುವುದಿಲ್ಲ. ಅದನ್ನು ಭಾರತೀಯ ಪರಂಪರೆಯ ಅವಿಚ್ಛಿನ್ನ ಪರಂಪರೆಯ ಗುಪ್ತಗಾಮಿ ರೂಪವೆನ್ನದೆ ಇರಲಾಗುವುದಿಲ್ಲ.
ಇವೆಲ್ಲವೂ ಸಂಖ್ಯಾಬಲದಿಂದ ರಾಜಕಾರಣವನ್ನು ವಿಶ್ಲೇಷಿಸುವವರಿಗೆ ಪೇಲವ ವಾದಗಳಾಗಿ ಕಾಣಿಸಬಹುದು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟು ಕೊಟ್ಟರೆ ಅಭಿವೃದ್ಧಿಯಾಗುವುದೇ ಎಂಬ ಪ್ರಶ್ನೆಯೂ ಬರಬಹುದು, ರಾಜ್ಯದ ಪರವಾದ ಸಮರ್ಥ ಮಂಡನೆ ಇಂಥವರಿಂದ ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಬಹುದು. ಆದರೆ ಏನೂ ನಡೆಯದಿದ್ದರೂ ಚಿಂತೆಯಿಲ್ಲ. ಈ ಎರಡು ಅಭ್ಯರ್ಥಿಗಳ ಘೋಷಣೆ ಜಾತಿಯನ್ನು ಮೀರಿದೆ, ಪ್ರಾದೇಶಿಕತೆಯನ್ನು ಲೆಕ್ಕಿಸದೆ ಮುನ್ನಡೆದಿದೆ, ವಂಶವಾದಕ್ಕೆ ಸೆಡ್ಡುಹೊಡೆದಿದೆ. ದರ್ಪ-ದೌಲತ್ತುಗಳಿಗೆತಪರಾಕಿ ಕೊಟ್ಟಿದೆ. ವ್ಯಕ್ತಿಪೂಜೆ ನಡೆಯದು ಎಂಬುದನ್ನು ಸಾರಿದೆ, ಸಿದ್ಧಾಂತದೆದುರು ಯಾರೂ ದೊಡ್ಡವರಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪರಂಪರೆ ಗುಪ್ತಗಾಮಿನಿಯಾಗಿ ಹರಿದಿದೆ ಎಂಬ ಸಂದೇಶವನ್ನು ನೀಡಿದೆ. ಏಕೆಂದರೆ ಬಾಳಾಸಾಬ್ ದೇವರಸರು ಕರೆತಂದ ಯುವಕ ವಾಜಪೇಯಿಯಾಗುತ್ತಾನೆಂದು ಅಂದು ಯಾರೂ ಭಾವಿಸಿರಲಿಲ್ಲ, ಲಕ್ಷ್ಮಣರಾವ್ ಇನಾಂದಾರ್(ವಕೀಲ್ ಸಾಬ್)ಅವರ ಹುಡುಗ ಮೋದಿಯಾಗುವನು ಎಂದು ಯಾರೂ ಭಾವಿಸಿರಲಿಲ್ಲ. ಶಾಖೆಯಲ್ಲಿ ಕಬಡ್ಡಿಯಾಡುತ್ತಿದ್ದ ಹುಡುಗ ಸಿ.ಟಿ ರವಿಯಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಂಕಣ ಬರೆಯುತ್ತಿದ್ದ ಪತ್ರಕರ್ತನೊಬ್ಬ ಸಂಸದನಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಷ್ಟೇ ಏಕೆ ನಮ್ಮ ಕರ್ನಾಟಕದಲ್ಲೇ ಅರಕಲಿ ನಾರಾಯಣ, ಬೆನಕ ಭಟ್, ಪ್ರಭಾಕರ ಭಟ್ಟರಂಥ ವ್ಯಕ್ತಿ ನಿರ್ಮಾಣದ ಅದ್ವೈರ್ಯುಗಳಿಲ್ಲದಿರುತ್ತಿದ್ದರೆ ಇಂದಿನ ಹಲವು ನಾಯಕರುಗಳೇ ಹುಟ್ಟುತ್ತಿರಲಿಲ್ಲ ಎಂಬ ಉದಾಹರಣೆಯೂ ನಮ್ಮ ಮುಂದಿದೆ. “ನಡೆಯಲಾರದೆ ತೆವಳುತ್ತಿದ್ದೆನು ನಡಿಗೆ ಕಲಿಸಿತು ಸಂಘವು, ನುಡಿಯಲಾರದೆ ತೊದಲುತ್ತಿದ್ದೆನು ಮಾತು ಕಲಿಸಿತು ಸಂಘವು” ಎಂಬ ಗೀತೆಯೇ ಎಲ್ಲವನ್ನೂ ಹೇಳುತ್ತದೆ. ಹಾಗಾಗಿ ಇದರಲ್ಲೇನೂ ಅಚ್ಚರಿಯಲ್ಲ! ಇದೇನು ಮೊದಲಲ್ಲ, ಕೊನೆಯೂ ಅಲ್ಲ.